ಒಂದಾನೊಂದು ಕಾಲದಲ್ಲಿ ಒಂದಾನೊಂದು ದೇಶದಲ್ಲಿ ಕಚೇರಿಗಳು ಬೆಳಿಗ್ಗೆ ಒಂಬತ್ತೂವರೆಗೆ ತೆರೆಯುತ್ತಿದ್ದವು. ಕೆಲಸಗಾರರು ಬಂದು ಮೇಜು, ಕುರ್ಚಿಗಳನ್ನು ಸ್ವಚ್ಛಮಾಡಿ ಕಾಗದ ಪತ್ರಗಳನ್ನು ಓರಣವಾಗಿ ಜೋಡಿಸಿಡುತ್ತಿದ್ದರು. ಹತ್ತೂವರೆಗೆ ಆಫೀಸಿನ ಕೆಲಸ ಪ್ರಾರಂಭವಾಗುತ್ತಿತ್ತು. ಸಿಬ್ಬಂದಿ ವರ್ಗದವರು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಒಂದರ್ಧ ಗಂಟೆ ಊಟ ಮುಗಿಸಿ ಮತ್ತೆ ಕೆಲಸ. ಸಂಜೆ ಐದೂವರೆಯ ವರೆಗೆ ತಮ್ಮ ನಿಗದಿತ ಕೆಲಸವನ್ನು ಮುಗಿಸಿ ಮೇಲೇಳುತ್ತಿದ್ದರು. ತಮ್ಮ ದಿನದ ಕರ್ತವ್ಯವನ್ನು ಮುಗಿಸಿದೆವು ಎಂಬ ತಪ್ತಿ ಅವರಿಗಿರುತ್ತಿತ್ತು. ಅವರ ಮೇಲಿನವರಿಗೂ ಕೆಲಸ ಸರಿಯಾದ ಸಂತೋಷ. ಮನೆಗೆ ಬರುವಾಗ ನವಿಲಿನ ನಡಿಗೆ. ದಾರಿಯಲ್ಲಿ ಹೆಂಡತಿಯ ಮುಡಿಗೊಂದು ಮೊಳ ಮಲ್ಲಿಗೆ ತಂದರೆ ಮತ್ತಷ್ಟು ಸಂತೋಷ. ಕಚೇರಿಯ ಕೆಲಸ ಮನೆಗೆ ಬರುತ್ತಿರಲಿಲ್ಲ. ಅಲ್ಲಿಯದು ಅಲ್ಲಿಗೇ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ನಗು, ವಿಹಾರ. ಸಂಜೆಗೆ ಎಲ್ಲರೂ ಒಂದೆಡೆಗೆ ಕುಳಿತು ಊಟ, ಹರಟೆ, ನಂತರ ಅದು ವಿಶ್ರಾಂತಿಯ ಸಮಯ. ಇದೆಲ್ಲಿಯೋ ಕೇಳಿದ ಕಥೆ ಎಂದೆನಿಸುವುದಿಲ್ಲವೇ? ಮತ್ತೆ ಕಥೆಗೆ ಬರೋಣ. ಪಶ್ಚಿಮದ ದೇಶಗಳಿಂದ ಕೆಲ ಪ್ರವಾಸಿಗಳು ಇಡೀ ಪ್ರಪಂಚವನ್ನು ಒಂದು ಹೊಳೆಹೊಳೆಯುವ ಪೆಟ್ಟಿಗೆಯಲ್ಲಿ ತುಂಬಿಕೊಂಡು ತಂದರು. ಅದನ್ನು ಜನ ಕಂಪ್ಯೂಟರ್ ಎಂದು ಕರೆದರು. ಅದರೊಳಗೆ ಇಂಟರ್‌ನೆಟ್ ಎಂಬ ಹೂರಣವನ್ನು ತುಂಬಿದರು. ಇದರ ಜೊತೆಗೆ ಹೆಂಡತಿಯನ್ನು ಬಿಟ್ಟರೂ ಇದನ್ನು ಬಿಡಲಾರೆನೆಂಬಂಥ ಉಪಕರಣವನ್ನು ತಂದರು. ಜನ ಅದನ್ನು ಮೊಬೈಲ್ ಫೋನ್ ಎಂದು ಗುರುತಿಸಿದರು. ಇವೆಲ್ಲ ನೌಕರಿ ಮಾಡುವವರ ಕೈ ಸೇರಿದವು. ಆಗ ಅವರೆಲ್ಲ ಈ ಉಪಕರಣಗಳನ್ನು ಬಳಸುವಲ್ಲಿ ಉತ್ಸಾಹ ತೋರಿದರು. ಅಕ್ಷರಗಳನ್ನು, ಸಂಖ್ಯೆಗಳನ್ನು ಬಡಿಬಡಿದು ಪೆಟ್ಟಿಗೆಯೊಳಗೆ ತುಂಬಿದರು. ಅವರಿಗೆ ಅದೇನು ಸಂತೋಷ! ಮಾಲೀಕರು, ಮೇಲಧಿಕಾರಿಗಳೂ ಸಂತೋಷಪಟ್ಟರು. ಈಗ ಮೊದಲಿನಗಿಂತ ಹತ್ತು ಪಟ್ಟು ಕೆಲಸ ಹೆಚ್ಚಾಗುತ್ತಿದೆ, ಜಗತ್ತು ತುಂಬ ವೇಗವಾಗಿ ಮುಂದುವರಿಯುತ್ತಿದೆ ಎಂದು ಸಂಭ್ರಮಿಸಿದರು. ನಂತರ ದೊಡ್ಡ ಪೆಟ್ಟಿಗೆ ಮಾಯವಾಗಿ ಚೀಲದಲ್ಲಿ ತುಂಬಿಕೊಂಡು, ಹೆಗಲಿಗೆ ತಗುಲಿಸಿಕೊಂಡು ಹೋಗುವ ಪುಸ್ತಕದಾಕಾರದ ಪೆಟ್ಟಿಗೆಗಳು ಬಂದವು. ಅವುಗಳನ್ನು ಲ್ಯಾಪ್‌ಟಾಪ್ ಎಂದು ಕರೆದರು. ಜನರ, ಮಾಲೀಕರ ಉತ್ಸಾಹ ಹೆಚ್ಚಾಯಿತು. ಆಫೀಸಿನಲ್ಲಿ ಕೆಲಸ ಮುಗಿದೊಡನೆ ಅದನ್ನು ಚೀಲಕ್ಕೆ ಸೇರಿಸಿ ಮನೆಗೆ ನಡೆದು ಮತ್ತೆ ಮನೆಯಲ್ಲಿ ಕೆಲಸ. ಹೆಂಡತಿಯ ಮಲ್ಲಿಗೆಯ ಮಾಲೆ ಮರೆಯಾಯಿತು. ರಾತ್ರಿ ಎಲ್ಲರೊಡನೆ ಮಾಡುತ್ತಿದ್ದ ಊಟ ದೂರವಾಯಿತು. ಪೆಟ್ಟಿಗೆಯ ಮುಂದೆ ಕುಳಿತು ಪರದೆಯನ್ನು ನೊಡುತ್ತ, ನೋಡುತ್ತ ಕಣ್ಣಿನ ಕನ್ನಡಕಗಳು ದಪ್ಪವಾದವು. ಹೊಟ್ಟೆ ಮುಂದೆ ಬಂದಿತು, ಮಾತ್ರೆಗಳ ಸಂಖ್ಯೆ ಹೆಚ್ಚಾಯಿತು. ಬರಬರುತ್ತ ನಿದ್ರೆ ಅಪರೂಪವಾಯಿತು. ಮನಸ್ಸಿನ ಶಾಂತಿ ಕಡಿಮೆಯಾಗಿ ಮನೆಯ ಜನರೊಂದಿಗಿನ ಹೊಂದಾಣಿಕೆ ಹಿಂದೆ ಉಳಿಯಿತು. ವಿವಾಹಗಳು ಮುರಿಯತೊಡಗಿದವು. ಅತ್ಮಹತ್ಯೆಗಳು ಅಪರೂಪವಾಗಿ ಉಳಿಯಲಿಲ್ಲ. ಇದು ಇಂದಿನ ಕೆಲಸದ ಕಥೆ. ಯಾವುದು ಸರಿ? ಕೆಲಸ ಮಾಡದಿರುವುದು ಅಲಸ್ಯತನ. ಅಲಸ್ಯತನ ಮಾನವನ ಸ್ವಭಾವಕ್ಕೇ ನಾಚಿಕೆಯ ವಿಷಯ. ಆದರೆ ಎಷ್ಟು ಕೆಲಸ ಸರಿ? ಎಷ್ಟು ಕಾಲ ಈ ಧಾವಂತ, ಈ ಉಸಿರು ಬಿಗಿಹಿಡಿದು ಓಡುವ ಪರಿ? ಹೀಗೆ ಉಸಿರು ಬಿಗಿ ಹಿಡಿದು ಓಡುತ್ತ ಓಡುತ್ತ ಉಸಿರಾಡುವುದನ್ನೇ ಮರೆತುಬಿಡುತ್ತೇವೇನೋ? ಎಲ್ಲವೂ ಒತ್ತಡದ ಬದುಕು. ಈ ಒತ್ತಡ ನಮ್ಮ ಜೀವನವನ್ನೇ ಒಡೆದೀತು. ಕೊನೆಗೊಂದು ಪ್ರಶ್ನೆ. ನಮ್ಮ ಸಂತೋಷದ ಬದುಕಿಗೆ ಕೆಲಸವೋ? ಕೆಲಸಕ್ಕಾಗಿ ಬದುಕೋ? ತೀರ್ಮಾನ, ಆಯ್ಕೆ ನಮ್ಮವೇ. Source:Dr.Gururaj Karjagi
ಬದಲಾದ ಬದುಕು - ಸಂತೋಷದ ಬದುಕಿಗೆ ಕೆಲಸವೋ? ಕೆಲಸಕ್ಕಾಗಿ ಬದುಕೋ?
Read more on
#Dr.GuruRaja Karjagi
#KBB stories
Write / View Comments ( 1 )
Related you make like
🛒 Shop now
Deals today
New Launches
Best Sellers
Gifts
Books
Home products
Kitchen
Houseware
Grocery Pantry
Beauty
Personal care
Decor Furniture
Outdoors
Latest Fashion
Men
Women
Apparels
Footwear
Watches
Luggage
Kids
Baby care
Kids fashion
Toys
Electronics
Gadgets
Mobile phones
Laptops
Home appliances
Buy Kannada Books
Latest Books
Fictions and Novels
Philosophy
Subscribe , Follow on