-->

ಆಚಾರ ವಿಚಾರ - ಶ್ರೀ ಚಕ್ರ ಉಗಮವಾದ ಕಥೆ - Story of Sri Chakra

ಸಾಮಾನ್ಯವಾಗಿ ಶ್ರೀಚಕ್ರದ ಹೆಸರು ಕೇಳಿರುತ್ತೀವಿ, ದೇವಿ ದೇವಾಲಯಗಳಲ್ಲಿ ಹೆಚ್ಚಾಗಿ ಶ್ರೀಚಕ್ರ ಸ್ಥಾಪಿಸಿರುತ್ತಾರೆ. ಕೆಲವಾರು ಮನೆಗಳಲ್ಲಿಯೂ ಸಹ ಶ್ರೀಚಕ್ರವನ್ನು ಇಟ್ಟು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಇಂತಹ ಮನೆಗಳಲ್ಲಿ ದೇವಿ ನೆಲೆಸಿರುತ್ತಾಳೆ, ಇದರಿಂದ ದಾರಿದ್ರ್ಯ ನಾಶವಾಗಿ, ಸುಖ ,ಸಮೃದ್ಧಿ, ಶಾಂತಿ ನೆಲಸುತ್ತದೆ. ಅಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಅಸ್ಪದವಿರುವುದಿಲ್ಲ.ಈ ಯಂತ್ರವು ಸ್ತ್ರೀ ಹಾಗೂ ಪುರುಷ ಶಕ್ತಿ (ಶಿವಶಕ್ತಿ)ಗಳೆರಡರ ಪ್ರತೀಕ. ಇದರ ಬಗ್ಗೆ ಉಪನಿಷತ್ಗಳ ಕಾಲದಿಂದಲೂ ಉಲ್ಲೇಖವಿದೆ. ಇದರ ಪೂಜೆ ಸಂಪತ್ತಿನ ಜೊತೆಗೆ ಇಹಪರಗಳೆರಡರ ಉನ್ನತಿಗೆ ಸಾಧನವಾಗಿದೆ. ಇದನ್ನು ಪೂರ್ವಾಭಿಮುಖವಾಗಿ ಇಟ್ಟು, ಪೂಜಿಸುವವರು ಉತ್ತರಾಭಿಮುಖವಾಗಿ ಕುಳಿತು ಪೂಜಿಸಬೇಕು.

 
ಆಚಾರ ವಿಚಾರ - ಶ್ರೀ ಚಕ್ರ ಉಗಮವಾದ ಕಥೆ - Story of Sri Chakra

 
 ಶ್ರೀ ಚಕ್ರ ಯಂತ್ರ ಒಂದು ಶಕ್ತಿಯುತವಾದ ಯಂತ್ರವೆನ್ನುವುದು ನಮಗೆಲ್ಲ ತಿಳಿದ ಸಂಗತಿ. ಇದು ಜಗನ್ಮಾತೆಯಾದ ದೇವಿಯನ್ನು ಪ್ರತಿನಿಧಿಸಿವ ಒಂದು ಯಂತ್ರ. ಒಂಬತ್ತು ತ್ರಿಕೋನಗಳು ಒಂದಕ್ಕೊಂದು ಬೆಸೆದುಕೊಂಡಂತೆ ಇರುವ ಈ ಯಂತ್ರವನ್ನು ನವಚಕ್ರವೆಂದೂ ಕರೆಯುತ್ತಾರೆ. ಈ ಎಲ್ಲ ತ್ರಿಕೋನಗಳೂ ಸೇರುವ ಮಧ್ಯದ ಬಿಂದುವಿನಲ್ಲಿ ನವಶಕ್ತಿ ಸ್ವರೂಪಳಾದ ದೇವಿ ನೆಲಸಿರುತ್ತಾಳೆ. ಅದರಿಂದಾಗಿಯೇ "ಚಕ್ರಾಂತರ ವಾಸಿನಿ" ಎಂದೂ ದೇವಿಯನ್ನು ವರ್ಣಿಸುತ್ತಾರೆ. ಶ್ರೀಚಕ್ರ ಯಂತ್ರದ  ಮೇಲ್ಮುಖ ಅಗ್ನಿತತ್ವವನ್ನು, ಇದರ ಸುತ್ತಲೂ ಇರುವ ವೃತ್ತ ವಾಯುತತ್ವವನ್ನು ಹೊಂದಿದ್ದರೆ  ಮಧ್ಯದ ಬಿಂದು ಜಲತತ್ವ ಮತ್ತು ಅದರ ತಳ ಭೂತತ್ವವನ್ನು ಪ್ರತಿಪಾದಿಸುತ್ತದೆ.

ಶ್ರೀಚಕ್ರಾಕಾರದ ಮೇಲೆಯೇ ಕಟ್ಟಿರುವ ಹಲವಾರು ದೇವಾಲಯಗಳಲ್ಲಿ ತುಮಕೂರು ತಾಲೂಕಿನ ಹೆಬ್ಬುರಿನ ಕಾಮಾಕ್ಷಿ  ಶಾರದಾ ದೇವಾಲಯ ಹಾಗೂ ಇಂಡೋನೇಷಿಯಾದ  ಬೊರೋಬುದುರ್ ನಲ್ಲಿ ಇರುವ ಬೌದ್ಧ ದೇವಾಲಯಗಳೂ ಸೇರಿವೆ.

ಶ್ರೀಚಕ್ರವನ್ನು ಶಂಕರಾಚಾರ್ಯರು ಭಾರತದ ಹಲವಾರು ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾದವುಗಳೆಂದರೆ ವಿಜಯವಾಡ- ಕನಕಾದುರ್ಗಾ , ಶೃಂಗೇರಿ-ಶಾರದಾಂಬ, ಕೊಲ್ಲಾಪುರ-ಮಹಾಲಕ್ಷ್ಮಿ, ಕಂಚಿ-ಕಾಮಾಕ್ಷಿ, ನೆಲ್ಲೂರು-ಅಂದ್ರ, ಚೆನ್ನೈ -ಕಾಮಾಕ್ಷಿ, ಶ್ರೀರಂಗಪಟ್ಟಣ-ನಿಮಿಶಾಂಭ, ಶಿವನಸಮುದ್ರ-ಮೀನಾಕ್ಷಿ, ಕೊಲ್ಲೂರು -ಮೂಕಾಂಬಿಕಾ, ಶ್ರೀಶೈಲ-ಭ್ರಮರಾಂಬ, ತಿರುವತ್ತಿಯೂರ್-ಕಾಳಿ, ಕಟೀಲು-ದುರ್ಗಾಪರಮೇಶ್ವರಿ, ಗೌಹತಿಯ ಕಾಮಾಕ್ಯ , ಕಾಶ್ಮೀರದ
-ಜಗದಂಬ ಶಾರಿಕಾಭಾಗವತಿ  ದೇವಾಲಯಗಳು ಮಖ್ಯವಾದವು. ಇದಲ್ಲದೆ ಭಾರತದಲ್ಲಿ ಬೇರೆ ಬೇರೆ ಕಡೆಗಳಲ್ಲಿಯೂ ಹಾಗೂ ನೇಪಾಳದ ಪಶುಪತಿನಾಥ ದೇವಾಲಯದಲ್ಲಿಯೂ ಶ್ರೀಚಕ್ರ ಸ್ಥಾಪನೆಯಾಗಿದೆ. 

ಉತ್ತರಕಾಂಡದ  ಆಲ್ಮೊರ ಜಿಲ್ಲೆಯ ಲಾಮಗಡದಲ್ಲಿ  ಶ್ರೀ ಕಲ್ಯಾಣಿಕಾ ಡೋಲಾಶ್ರಮದಲ್ಲಿ 1600 ಕಿಲೋ ತೂಕದ ಶ್ರೀಚಕ್ರ ಯಂತ್ರವಿದೆ. ಇದು ಅತಿ ದೊಡ್ಡ ಶ್ರೀಚಕ್ರ ಯಂತ್ರವೆಂದು ಪರಿಗಣಿಸಲಾಗಿದೆ.
ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. 

🕉️⚛️🔯ಇನ್ನು ಶ್ರೀ ಚಕ್ರ ಉಗಮವಾದ ಕಥೆ🕉️⚛️🔯🙏

ಉಗ್ರ ಸ್ವರೂಪಳಾಗಿದ್ದು, ಮಾಂಸಾಹಾರ ಭಕ್ಷಕಳಾಗಿದ್ದ ಮಾಧುರೈ ಮೀನಾಕ್ಷಿ ದೇವಿಯನ್ನು ಪಗಡೆ ಆಟದ ನೆಪದಲ್ಲಿ ಶಂಕರಚಾರ್ಯರು ಶ್ರೀ ಚಕ್ರ ಯಂತ್ರದ ಮಧ್ಯೆ ಬಂದಿಸಿದ್ದು ನಂತರ ದೇವಿ ಬಿಡುಗಡೆ ಕೇಳಿದಾಗ ಮಾಂಸಾಹಾರ ಬಿಟ್ಟು ಶಾಖಾಹಾರಿ ಆಗುವಂತೆ ಬೇಡಿಕೊಂಡು ನಂತರ ದೇವಿ ಸೌಮ್ಯ ರೂಪಳಾಗಿ ಮೀನಾಕ್ಷಿಯಾಗಿ ನೆಲಸಿದ ನಂತರ ಶಂಕರಾಚಾರ್ಯರಿಂದ ಶ್ರೀ ಚಕ್ರ ಮೊದಲು ಸ್ಥಾಪನೆಗೊಂಡದ್ದು ಮಧುರೈನಲ್ಲೇ. ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿ ದೇವತೆಯ ಸಾತ್ವಿಕರೂಪವು ಉಗಮಿಸುವಂತೆ ಮಾಡಿದರು.

#ಶ್ರೀ_ಚಕ್ರದ_ಉದಯ.🕉️⚛️🔯🙏

ಪಗಡೆಯಾಟ (ಮಗುವಿನ ಗೆಲುವು ತಾಯಿಗೆ ಸಂತೋಷ)
 ಆಟ ಪ್ರಾರಂಭವಾಯಿತು. 

ದೇವಸ್ಥಾನದ ಅರಿಸಿನ, ಕುಂಕುಮ, ಗಂಧದ ಪುಡಿಗಳನ್ನು ಉಪಯೋಗಿಸಿ ಪಗಡೆ ಆಟದ ನಕ್ಷೆಯನ್ನು ಶ್ರೀಗಳವರು ಬರೆದರು. 

ದೇವಿ ತನ್ನ ಶಕ್ತಿಯಿಂದ ದಿವ್ಯ ದಾಳಿಗಳನ್ನು ಸೃಷ್ಟಿಸಿದಳು! ಶಂಕರರು ಪೂಜೆಗಾಗಿ ದೇವಿಗೆ ಬಳಸಿದ್ದ ಹೂವುಗಳನ್ನು ಆಟದಲ್ಲಿ ತಮ್ಮ ನಡಿಗೆಯ ಕಾಯಿಗಳನ್ನಾಗಿಯೂ, ಅವಳ ಆಭರಣದ ಮುತ್ತು ರತ್ನಗಳನ್ನು ಬಳಸಿ ಅವಳ ನಡಿಗೆಯ ಕಾಯಿಗಳನ್ನಾಗಿಯೂ ಸಿದ್ಧಪಡಿಸಿದರು. 

ದೇವಿ ಆಟವಾಡಲೆಂದು ಗರ್ಭಗುಡಿಯ ಪೀಠದ ಮೇಲೆ ಕುಳಿತಳು. 

ಶ್ರೀಗಳವರು ಅವಳೆದುರು ಪದ್ಮಾಸನ ಹಾಕಿ ಗರ್ಭಗುಡಿಯ ಹೊಸ್ತಿಲ ಹೊರಗೆ ಕುಳಿತು ಆಟ ಪ್ರಾರಂಭಿಸಿದರು. 

ಹಾಗೆಯೇ ಪ್ರಶಸ್ತವಾದ ಆ ಕಾಲ ವ್ಯರ್ಥವಾಗದಂತೆ ಲಲಿತಾ ಸಹಸ್ರನಾಮದ ಬೇರೆ ಬೇರೆ ನಾಮಗಳನ್ನು ಜಪಿಸುತ್ತಾ ಆಟ ಮುಂದುವರೆಸಲು ದೇವಿಯ ಅಪ್ಪಣೆ ಬೇಡಿದರು. 

ಅಷ್ಟೇ ಅಲ್ಲ ದೇವಿ ತನಗೆ ಬೇಕಾದ ಗರ ಬೀಳುವಂತೆ ಹೊಂದಿದ್ದ ಶಕ್ತಿಯನ್ನು ತಮಗೂ ಅನುಗ್ರಹಿಸಿ ತಮಗೆ ಬೇಕಾದ ಗರ ಬೀಳಿಸಿಕೊಳ್ಳಲು ಸಹಾಯ ಮಾಡಬೇಕೆಂದು ಕೇಳಿಕೊಂಡರು. 

ದೇವಿ ಉದಾರತೆಯಿಂದ ಅನುಗ್ರಹಿಸಿದಳು. ಆಟ ಪ್ರಾರಂಭವಾಯಿತು. 

 ಮೊದಲು ದಾಳಿ ಉರುಳಿಸಿದವರು ಶ್ರೀಗಳೇ, ಬಿದ್ದ ಗರ ಒಂಬತ್ತು! ಅವರು 'ಶ್ರೀ ಚಕ್ರರಾಜ ನಿಲಯಾ' ಎಂದು ದೇವಿಯ ನಾಮ ಹೇಳಿ, ತಮ್ಮ ಕಾಯಿ ನಡೆಸುವ ಮುನ್ನ ಶ್ರೀಚಕ್ರ ನಿಲಯಳಾಗಿರುವ ದೇವಿಯ ಶ್ರೀಚಕ್ರಕ್ಕೆ ಒಂಬತ್ತು ಆವರಣಗಳಿರುವುದರನ್ನು ಹೇಳಿ ಅದರ ಸಂಕೇತವಾಗಿ ಒಂಬತ್ತು ಅವರಣಗಳ ಗೆರೆಗಳನ್ನು ಪಕ್ಕದಲ್ಲಿ ಬರೆದರು.

 ಆಟ ಮುಂದೆ ಸಾಗಿತು, ಹೀಗೆ ಒಂದೊಂದು ಗರ ಬಿದ್ದಾಗಲೂ ಅದಕ್ಕೆ ಸರಿಹೊಂದುವ ಅಕ್ಷರ ಸಂಖ್ಯೆಗಳಿದ್ದ ದೇವಿಯ ನಾಮಗಳನ್ನು ಹೇಳಿ ಆ ಸಂಖ್ಯೆಗೆ ಅನುಸಾರವಾಗಿ ಬೀಜಾಕ್ಷರಗಳನ್ನು ಬಳಸಿ ಗೆರೆಗಳಿಂದ ನಿರ್ಮಿತವಾದ ರೇಖಾಕೃತಿಗಳನ್ನು ರಚಿಸತೊಡಗಿದರು.

 ಹಾಗೆ ರಚಿಸಿದ ಶ್ರೀಚಕ್ರದ ರೇಖಾಕೃತಿಯಲ್ಲಿ ಹಿಂದಿನ ಶ್ರೀಚಕ್ರದಲ್ಲಿದ್ದ ಉಗ್ರ ಬೀಜಾಕ್ಷರಗಳನ್ನು ತೆಗೆದುಹಾಕಿ ಅವುಗಳ ಸ್ಥಾನದಲ್ಲಿ ಅದೇ ಸಂಖ್ಯೆಗೆ ಅನುಗುಣವಾಗಿ ಹೊಂದಿಕೊಳ್ಳಬಹುದಾದ ಸಾತ್ವಿಕ ಬೀಜಾಕ್ಷರಗಳನ್ನು ತುಂಬಿ ಸಮೀಕರಣ ಸರಿಹೊಂದಿಸಿದರು. 

ಅಕ್ಷರಗಳು ಬದಲಾದುದರಿಂದ ಮಂತ್ರವೇ ತಿರುವು ಮುರುವು ಆಗುವಂತೆ ಮಾಡಿ ತಾವು ಹೊಸದಾಗಿ ರಚಿಸಿದ ರೇಖಾ ವಿನ್ಯಾಸದಲ್ಲಿ ಬಿಂದು, ತ್ರಿಕೋಣ, ವಸುಕೋಣ ದಶಾರ ಯುಗ್ಮ ಮನ್ವಸ್ತ್ರ ನಾಗದಳ ಷೋಡಶಾ ಪತ್ರ ವೃತ್ತ ತ್ರಯ ಹಾಗೂ ಭೂಪುರಗಳನ್ನೊಳಗೊಂಡ ಮಂಗಳದಾಯಕ ಶ್ರೀಚಕ್ರವನ್ನು ಪ್ರತಿಷ್ಟಿಸಿದರು. 

ಈ ವೇಳೆಗೆ ಮೂರು ಯಾಮಗಳು ಕಳೆದುವೆಂದು (ಸೂಚಿಸುವ) ತಿಳಿಸುವ ನಗರದ ಬೆಳಗಿನ ಝಾವದ ಕಹಳೆ ಶಬ್ದವಾಯಿತು. ದೇವಿ ಥಟ್ಟನೆ ಎಚ್ಚೆತ್ತಳು. 

ಆಟದಲ್ಲಿ ತಾನು ಮಗ್ನಳಾಗಿ ತನ್ನ ನಿತ್ಯ ಅಭ್ಯಾಸವನ್ನು ಮರೆತು ಅಂದು ಸಂಹಾರ ಕ್ರಿಯೆ ನಡೆಸಲಿಲ್ಲವೆಂದು ಅವಳಿಗೆ ಖೇದವಾಯಿತು! ಈ ವೇಳೆಗಾಗಲೇ ಆಟವು ಅಂತ್ಯದ ಘಟ್ಟಕ್ಕೆ ತಲುಪಿತು.

 ಶಂಕರರು ಹಣ್ಣಿಗೆ ಬರುವ ದ್ವಾರದ ಬಳಿಯಲ್ಲಿ ತಮ್ಮ ಕೊನೆಯ ಕಾಯಿಗಳನ್ನು ತಂದು ನಿಲ್ಲಿಸಿದ್ದರು ಆದರೆ ದೇವಿ ತನ್ನ ಕಾಯಿಯನ್ನು ಹಣ್ಣಿನ ಮನೆಯ ಒಳಗೆ ತಂದಿದ್ದಳು. 

ಅಷ್ಟೇ ಅಲ್ಲ ಆಟದ ಕೊನೆ ಗರ ಹಾಕುವ ಸರದಿಯೂ ಅವಳದಾಗಿತ್ತು ಎರಡು ಸಂಖ್ಯೆಯ ಗರ ಹಕಿ 'ದುಗ' ಎಂದು ಹೇಳುತ್ತಾ ಕಾಯಿಯನ್ನು ಹಣ್ಣು ಮಾಡಿಯೇ ಬಿಟ್ಟಳು. 

 ಶ್ರೀಗಳವರು ಆಟದಲ್ಲಿ ಸೋತಿದ್ದರು! 

ಆದರೆ ಅವರು ತಮ್ಮ ಉದ್ದೇಶದಲ್ಲಿ ಗೆದ್ದಿದ್ದರು. ಪಂದ್ಯದ ನಿಯಮದಂತೆ ದೇವಿ ಅವರನ್ನು ಕಬಳಿಸಿ ಮರುದಿನದಿಂದ ತನ್ನ ಸಂಹಾರ ಕ್ರಿಯೆ ಮುಂದುವರೆಸಬಹುದಾಗಿತ್ತು! 

ಆದರೆ ಶಂಕರರ ಬುದ್ಧಿವಂತಿಕೆಯಿಂದ ಅವಳ ಆವಾಸಸ್ಥಾನವಾದ ಶ್ರೀಚಕ್ರದ ಬೀಜ ಮಂತ್ರಗಳೆಲ್ಲ ತಿರುವು ಮುರುವಾಗಿ, ಕ್ಷುದ್ರ ಸಿದ್ಧಿಗಾಗಿ ನೀಚ ಜನರು ಅವಳನ್ನು ಆಹ್ವಾನಿಸಿದರೆ, ಶ್ರೀಚಕ್ರ ಬಿಟ್ಟು ಹೋಗದಂತೆ ನಿಯೋಜಿಸಿದ ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಅಕ್ಷರ ಸಂಖ್ಯಾಶಾಸ್ತ್ರದ ಮೇರೆಗೆ ಅವಳು ಬಂಧಿತಳಾಗಿದ್ದಳು! 

 ದೇವಿ ಪಂದ್ಯದ ನಿಯಮವನ್ನು ಶಂಕರರಿಗೆ ಜ್ಞಾಪಿಸಿ ತನ್ನ ಸಂಹಾರ ಕಾರ್ಯ ಮುಂದುವರೆಸುವೆನೆಂದಾಗ ಶಂಕರರು ತುಂಟು ನಗೆ ಬೀರಿರಬೇಕು! 

ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಶಂಕರರಿಂದ ಬಂಧಿತಳಾಗಿದ್ದ ದೇವಿ ಮತ್ತೆ ಎಂದೂ ಉಗ್ರ ಬೀಜಾಕ್ಷರಗಳ ಮಂತ್ರಕ್ಕೆ ಮಣಿದು ಉಗ್ರರೂಪ ತಾಳಿ ಪೀಠ ಬಿಡುವಂತಿರಲಿಲ್ಲ ಮಗುವಿನ ಗೆಲುವು ತಾಯಿಗೆ ಸಂತೋಷ ತರುವಂತೆ ದೇವಿ ಶಂಕರರ ಮೇಲೆ ಪ್ರಸನ್ನಳಾಗಿ ತನ್ನ ಬಂಧನವನ್ನು ಸಂತೋಷದಿಂದ ಒಪ್ಪಿದಳು. 

ಶ್ರೀಚಕ್ರದಲ್ಲಿ ಅಲ್ಲಿಯವರೆಗೆ ಉಗ್ರ ಬೀಜಾಕ್ಷರಗಳ ಸ್ಥಾಪನೆಯಿಂದ ಇಂತಹುದೇ ಅನರ್ಥವಾಗಿತ್ತು. 

 ಆಟದ ನಡುವೆ ಸ್ತೋತ್ರ ಮಂತ್ರವನ್ನು ಬಾಯಿಯಲ್ಲಿ ಹೇಳುತ್ತಿದ್ದ ಶಂಕರರು ತಮಗೆ ಬಿದ್ದ ಗರಗಳ ಸಂಖ್ಯೆಗೆ ಹೊಂದಿಸಿ ಶ್ರೀಚಕ್ರದ ಬಿಂದು ತ್ರಿಕೋಣ, ಅಷ್ಟಕೋಣ, ಅಂತರ್ದಶಾರ, ಬಹಿರ್ದಶಾರ, ಚತುರಸ್ತರ, ಇತ್ಯಾದಿ ರೇಖಾಕೃತಿಗಳನ್ನು ನಿರ್ಮಿಸಿ ಅದರಲ್ಲಿ ತಮ್ಮ ಉದ್ದೇಶಪೂರಕವಾದ ಮಂತ್ರಾಕ್ಷರಗಳನ್ನು ತುಂಬಿದ್ದರು! 

 ಸಂಖ್ಯಾಶಾಸ್ತ್ರದ ಸಂಕೇತ ನಿಯಮವನ್ನು ಅನುಸರಿಸಿ ಅಲ್ಲಿಯವರೆಗೆ ಕ್ಷುದ್ರ ಸಾಧಕರು ತಮ್ಮ ಸ್ವಾರ್ಥ ಸಿದ್ಧಿಗಾಗಿ ಶ್ರೀಚಕ್ರದಲ್ಲಿ ಉಗ್ರ ಬೀಜಾಕ್ಷರಗಳನ್ನು ತುಂಬಿ ದೇವಿಯ ಶಕ್ತಿಯನ್ನು ದುರುಪಯೋಗಪಡಿಸಿಕೊಂಡು ತಾಮಸೀ ಗುಣವಾಗಿ ಪರಿವರ್ತಿಸಿ ಅವಳು ಉಗ್ರರೂಪ ತಾಳಿ ಬಲಿ ತೆಗೆದುಕೊಳ್ಳುವಂತೆ ಅವಳನ್ನು ಅಗ್ರಹಿಸುತ್ತಿದ್ದರು.

 ಅಂತಹ ನೀಚರು ಶ್ರೀಚಕ್ರದಲ್ಲಿ ಅಳವಡಿಸಿದ್ದ ಉಗ್ರ ಬೀಜಾಕ್ಷರಗಳನ್ನು ಒಂದೊಂದಾಗಿ ಅಳಿಸಿಹಾಕುತ್ತಾ ಅವುಗಳ ಸ್ಥಳದಲ್ಲಿ ತಮಗೆ ಬಿದ್ದ ಗರದ ಸಂಖ್ಯೆಯನ್ನು ತಾವು ಬಾಯಿಯಲ್ಲಿ ನುಡಿಯುತ್ತಲೇ, ಮಂತ್ರಾಕ್ಷರಗಳ ಸಂಖ್ಯೆಗೆ ಅದನ್ನು ಹೊಂದಿಸಿ ಅವುಗಳನ್ನು ಸಾತ್ವಿಕ ಬೀಜಾಕ್ಷರಗಳನ್ನಾಗಿ ಪರಿವರ್ತಿಸಿ ಹಿಂದಿನ ಉಗ್ರ ಬೀಜಾಕ್ಷರಗಳ ಸಂಖ್ಯೆಗೆ ಬದಲಾಗಿ ತಾವು ಸೇರಿಸುವ ಸಾತ್ವಿಕ ಬೀಜಾಕ್ಷರಗಳ ಸಂಖ್ಯೆ ಸರಿಹೊಂದುವಂತೆ ಸಮೀಕರಣ ಮಾಡಿ, ಹೊಸ ಬೀಜಾಕ್ಷರಗಳನ್ನು ಶ್ರೀಚಕ್ರದಲ್ಲಿ ಅಳವಡಿಸಿಬಿಟ್ಟಿದ್ದರು! 

ಆಟದಲ್ಲಿ ಮಗ್ನಳಾಗಿದ್ದ ದೇವಿ ಇದನ್ನು ಗಮನಿಸಿರಲಿಲ್ಲ ಈಗ ಅವಳಿಗೆ ತಾಮಸೀ ಬೀಜಾಕ್ಷರಗಳ ಪ್ರಭಾವದಿಂದ ಉಗ್ರರೂಪ ತಾಳುವುದು ಸಾಧ್ಯವೇ ಇರಲಿಲ್ಲ! ಏಕೆಂದರೆ ಹಾಗಾಗದಂತೆ ಶ್ರೀ ಶಂಕರರು ಸಾತ್ವಿಕ ಬೀಜಾಕ್ಷರಗಳಿಂದ ಕೂಡಿ ಹೊಸದಾಗಿ ತಾವು ನಿರ್ಮಿಸಿದ್ದ ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಅವಳನ್ನು ಸ್ತಿರವಾಗಿ ನಿಲ್ಲಿಸಿಬಿಟ್ಟಿದ್ದರು. 

(ತಾಮಸೀ ಆಹಾರಕ್ಕೆ ಒಗ್ಗಿದ ಮನುಷ್ಯನ ಪ್ರವೃತ್ತಿ ತಾಮಸಿಕವಾಗಿರುವಾಗ ಅವನಿಗೆ ಸಾತ್ವಿಕ ಆಹಾರವಿತ್ತು ಪರಿವರ್ತಿಸುವಂತೆ ಶ್ರೀ ಶಂಕರರು ದೇವಿಯ ತಾಮಸಿಕ ಉಗ್ರರೂಪವನ್ನು ನಿಗ್ರಹಗೊಳಿಸಿದ್ದರು. 

ಹೊಸದಾಗಿ ಅವರಿಂದ ಪರಿಷ್ಕರಿಸಲ್ಪಟ್ಟ ಶ್ರೀಚಕ್ರ ಈಗ ಎಲ್ಲ ಸಾಮಾನ್ಯ ಜನರಿಗೆ, ಸಾತ್ವಿಕರಿಗೆ, ಗೃಹಸ್ಥರಿಗೆ ಎಲ್ಲರಿಗೂ ಶುಭವನ್ನು ತರುವ ಮಂಗಳ ಯಂತ್ರವಾಗಿ ಹೋಗಿತ್ತು! ಹೀಗೆ ಸರ್ವ ಮಂಗಳೆಯಾದ ದೇವಿ ಆಟದ ನಿಯಮವನ್ನು ಪಾಲಿಸಿ ಶಂಕರರನ್ನು ಬಲಿ ತೆಗೆದುಕೊಳ್ಳುವುದು ಸಾಧ್ಯವೇ ಇರಲಿಲ್ಲ! 

ಅವಳು ಬಾಲಕ ಶಂಕರರ ತೀಕ್ಷ್ಣ ಬುದ್ದಿಗೆ ಹಾಗೂ ಅವರ ಸದುದ್ದೇಶಕ್ಕೆ ಮಣಿದಳು. ಅವರಿಬ್ಬರೂ ಸೇರಿಯೇ ಸುಂದರೇಶನನ್ನು ಪ್ರಾರ್ಥಿಸಿದರು. 

ಆಗ ಸುಂದರೇಶನು ಅಂದರೆ ಶಿವನು ಪ್ರತ್ಯಕ್ಷನಾಗಿ ಆದಿಶಂಕರರು ತನ್ನ ಅಂಶದಿಂದ ಜನಿಸಿದವರೆಂದು ಹೇಳಿ ಅವನನ್ನು ಹರಸಿ, ದೇವಿಗೆ ಆ ಬಾಲಕನಿಂದ ಮಾನವ ಕುಲಕ್ಕೆ ಆದ ಉಪಕಾರವನ್ನು ವಿವರಿಸಿದ. 

ಆದರೆ ಶ್ರೀ ಶಂಕರಾಚಾರ್ಯರು ಯುಕ್ತಿಯಿಂದ ಆ ಉಗ್ರ ಬೀಜಾಕ್ಷರಗಳನ್ನು ಬದಲಿಸಿ ಅವುಗಳ ಸ್ಥಾನದಲ್ಲಿ ಸಾತ್ವಿಕ ಬೀಜಾಕ್ಷರಗಳನ್ನು ಜೋಡಿಸಿ ದೇವಿಯನ್ನು ಬಿಂದು ಸ್ಥಾನದಲ್ಲಿ ನಿಲ್ಲಿಸಿ ಅವಳು ಉಗ್ರಶಕ್ತಿಗಳಿಗೆ ಮಣಿಯುವ ಬದಲಾಗಿ ಬೇಡಿ ಬಂದ ಭಕ್ತರಿಗೆ ಭಕ್ತಿಗೆ  ಸಂತುಷ್ಟಳಾಗಿ, ಶ್ರದ್ಧೆಗಳಿಂದ ಆರಾಧಿಸುವವರ ಮನೋಕಾಮನೆಗಳನ್ನು ಕರುಣಿಸುವ ಕಾಮಧೇನು, ಕಲ್ಪವೃಕ್ಷವಾಗಿ ಮಹಾಮಾತೆ  ಯನ್ನು ಶ್ರೀಚಕ್ರದಲ್ಲಿ ನೆಲೆಯಾಗುವಂತೆ ಮಾಡಿದ್ದರು.
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ  
–>