-->

ಮುಂದಿನ ತಲೆಮಾರಿನವರಿಗೂ ಒಳ್ಳೆಯ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಉಳಿಸಿ ಹೋಗೋಣ.

ಮೊನ್ನೆ ರಾತ್ರಿ ವಾಯುವಿಹಾರಕ್ಕೆಂದು ಹೋಗುತ್ತಿದ್ದಾಗ  ದಾರಿಯಲ್ಲಿ ನನ್ನ ಸ್ನೇಹಿತರೊಬ್ಬರು ಸಿಕ್ಕಿ, ಇದೇನು ಇಷ್ಟು ಹೊತ್ತಿನಲ್ಲಿ ಈ ಕಡೆಯಲ್ಲಿ ಎಂದಾಗ, ಏನೂ ಇಲ್ಲಾ ಸಾರ್, ಇಲ್ಲೇ ಪಕ್ಕದ ರಸ್ತೆಯಲ್ಲಿರುವ ನಮ್ಮ ಸ್ನೇಹಿತರೊಬ್ಬರು ಊರಿಗೆ ಹೋಗಿದ್ದಾರೆ. ಅದಕ್ಕಾಗಿ ಅವರ ಮನೆಯಲ್ಲಿ ರಾತ್ರಿ ಹೊತ್ತು ಮಲಗಲು ಹೇಳಿದ್ದಾರೆ. ಅದಕ್ಕಾಗಿ  ಹೋಗುತ್ತಿದ್ದೇನೆ.  ಕಾಲ ಸರಿಯಿಲ್ಲ ನೋಡಿ ಎಂದರು. ಅದಕ್ಕೆ ನಾನು ಹೌದು ಸಾರ್ ಎಂದು ಹೂಂ ಗುಟ್ಟಿ ನನ್ನ ವಾಯುವಿಹಾರ ಮುಂದುವರಿಸಿ ಹಾಗೇ ಯೋಚಿಸುತ್ತಿದ್ದಾಗ, ಅರೇ ಹೌದಲ್ಲಾ, ಈ ಪದ್ದತಿ ಈಗ ಅಪರೂಪವಾಗಿದೆಯಲ್ಲಾ  ಎಂದೆನಿಸಿತು. 




ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ನೆರೆಹೊರೆಯವರು ಅಥವಾ ಸಮೀಪದಲ್ಲೇ ಇರುವ  ಬಂಧು ಮಿತ್ರರು ಅಥವಾ ನಾವೇ ನಮ್ಮ ಮನೆಯವರೆಲ್ಲಾ  ಮೂರ್ನಾಲ್ಕು ದಿನಗಳಿಗೂ ಹೆಚ್ಚಿಗೆ  ಮನೆಯಿಂದ  ಹೊರಗೆ ಹೋಗಬೇಕಾದರೆ, ನಮ್ಮ  ಅಕ್ಕ ಪಕ್ಕದರಿಗೆ ಹಗಲಿನಲ್ಲಿ ಮನೆಯತ್ತ ಗಮನವಿಡಲು ತಿಳಿಸಿ ರಾತ್ರಿಯ ಹೊತ್ತಿನಲ್ಲಿ ಆವರ ಮನೆಯಲ್ಲಿರುವ ಯಾರಾದರೂ ವಯಸ್ಕರು ಆ ಮನೆಗಳಲ್ಲಿ ಮಲಗುವ ಸಂಪ್ರದಾಯವಿರುತ್ತಿತ್ತು.  ನಾನೂ ಕೂಡ  ಹೈಸ್ಕೂಲ್ ಅಥವಾ ಕಾಲೇಜಿನಲ್ಲಿ ಓದುತ್ತಿದ್ದ ಕಾಲದಲ್ಲಿ  ಹಲವಾರು ಬಾರಿ ಈ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಹಾಗೆ ಮಲಗಲು ಹೋಗುವಾಗ, ಅವರಿಗೆ ಪ್ರತ್ಯೇಕವಾಗಿ ಹಾಸಿಗೆ, ಹೊದಿಗೆ, ಕುಡಿಯಲು ನೀರು, ಓದಲು ಕೆಲವು ವಾರ ಪತ್ರಿಕೆಗಳು ಅಥವಾ ಒಳ್ಳೆಯ ಪುಸ್ತಕಗಳು ಇಡುತ್ತಿದ್ದರು (ಕೇಬಲ್ ಟಿವಿ ಬಂದ ನಂತರ ಪುಸ್ತಕಗಳಿಗೆ ಕಲ್ಲು ಬಿತ್ತು).  ಕೆಲವೊಂದು ಬಾರಿ ಹಣ್ಣು ಹಂಪಲುಗಳನ್ನೂ ಮನೆಯವರು ಇಡ್ಡುತ್ತಿದ್ದ ಕಾಲವಿತ್ತು.

 ಅದೇ ರೀತಿ ಯಾರಾದರು ಬಂಧು ಮಿತ್ರರು  ಅಚಾನಕ್ಕಾಗಿ (ಈಗಿನ ಹಾಗೆ ಮೊದಲೇ ಕರೆ ಮಾಡಿ ಅಪ್ಪಣೆ ಕೋರಿ ಮನೆಗೆ ಬರುವ ಸಂಪ್ರದಾಯ ಆಗಿರಲಿಲ್ಲ)   ಮಧ್ಯಾಹ್ನ  ಊಟದ  ಸಮಯದಲ್ಲಿ ಹಸಿವಿನಿಂದ ಮನೆಗೆ ಬಂದರೆ  ನಮ್ಮ ಮನೆಯಲ್ಲಿ  ಅವರಿಗೆ ಸಾಕಾಗುವಷ್ಟು ಆಹಾರ ಇಲ್ಲದಿದ್ದಲ್ಲಿ ಮತ್ತು ಹೊಸದಾಗಿ ಆಹಾರ ತಯಾರು ಮಾಡಲು ಸಮಯ ಹಿಡಿಯುತ್ತಿದ್ದ ಕಾರಣ ನಮ್ಮ ಅಕ್ಕ ಪಕ್ಕದವರ ಮನೆಗೆ ಹೋಗಿ ಅವರ ಮನೆಯಿಂದ ಯಾವುದೇ ರೀತಿಯ ಮುಜುಗರವಿಲ್ಲದೆ ಆಹಾರ ತೆಗೆದು ಕೊಂಡು ಬಂದು, ಬಂದ ನೆಂಟರಿಷ್ಟರನ್ನು ಸತ್ಕರಿಸುವ ಪದ್ದತಿ ಜಾರಿಗೆಯಲ್ಲಿತ್ತು. ಅದೇ ರೀತಿ ಅವರ ಮನೆಗೂ ನಮ್ಮ ಮನೆಯ ಅಹಾರಗಳು ಹೋಗುತ್ತಿದ್ದವು.

ಇನ್ನು ಕೆಲವು ಸಮಯ ಮನೆಗೆ ರಾತ್ರಿ ಹೊತ್ತಿನಲ್ಲಿ ಎಂಟು ಹತ್ತು  ಜನ ಸಂಬಂಧೀಕರು ಬಂದರೆ ಅವರಿಗೆ ನಮ್ಮ ಮನೆಯಲ್ಲಿ ಮಲಗಲು ಅಗತ್ಯವಿದ್ದಷ್ಟು ಜಾಗವಿರದಿದ್ದಲ್ಲಿ , ಅವರ ಊಟೋಪಚಾರಗಳು ಎಲ್ಲವೂ ಮುಗಿದ ಮೇಲೆ ಕೆಲವರಿಗೆ ಅಕ್ಕ ಪಕ್ಕದ ಮನೆಗಳಲ್ಲಿ  ಮಲಗಲು ವ್ಯವಸ್ಥೆ ಮಾಡಲಾಗುತ್ತಿತ್ತು. ಹಾಗೆ ಮಲಗಿದ್ದ  ಮನೆಯವರು  ನಮ್ಮ ಮನೆಯ ಬಂಧುಗಳನ್ನು ಅವರ ಮನೆಯ ಬಂಧುಗಳೆಂದೇ ಭಾವಿಸಿ ಅವರಿಗೆ ತಕ್ಕ ಅನುಕೂಲಗಳನ್ನೆಲ್ಲಾ ಮಾಡಿಕೊಟ್ಟು  ಬೆಳಗ್ಗೆ ಅವರ ಮನೆಯಲ್ಲಿಯೇ ಸ್ನಾನಾನಂತರ ಕಾಫೀ   ಕೆಲವು ಬಾರಿ ತಿಂಡಿಯನ್ನೂ ಮಾಡಿ ಕೊಟ್ಟ ಉದಾಹರಣೆಗಳೆಷ್ಟೋ ಇವೆ.

ಮೊದಲೆಲ್ಲಾ ನಮ್ಮ ಊರಿನಲ್ಲಿ ಯಾರದಾದರೂ ಮನೆಯಲ್ಲಿ ಸತ್ಯನಾರಾಯಣ ಫೂಜೆ, ನಾಮಕರಣ, ಇಲ್ಲವೆ ಮತ್ತಾವುದೇ ಸಣ್ಣ ಪುಟ್ಟ ಸಮಾರಂಭಗಳು ಇದ್ದಲ್ಲಿ ಅಕ್ಕ ಪಕ್ಕದವರೆಲ್ಲಾ ಒಂದಾಗಿಯೇ ಕೂಡಿ ಆಚರಿಸುತ್ತಿದ್ದರು. ಎಲ್ಲ ಮನೆಯ ಹೆಂಗಳೆಯರು ತರಕಾರಿ ಹೆಚ್ಚಿ, ಮನೆಯ ಮುಂದೆ ರಂಗೋಲಿ ಹಾಕುವುದು, ಹೂ ಕಟ್ಟುವುದು, ದೇವರನ್ನು ಅಣಿ ಮಾಡುತ್ತಿದ್ದರೆ, ಗಂಡಸರೆಲ್ಲಾ,  ಚಪ್ಪರ,  ತಳಿರು ತೋರಣಗಳ ವ್ಯವಸ್ಥೆಯ ಜೊತೆಗೆ ತಾವೇ ಅಡುಗೆಯನ್ನೂ ಮಾಡಿದರೆ, ಚಿಕ್ಕ ಮಕ್ಕಳು, ಚಾಪೆ, ಊಟದ ಎಲೆಗಳನ್ನು ಹಾಕುವುದು ನೀರು, ಉಪ್ಪು ಬಡಿಸುವ ವ್ಯವಸ್ಥೆಗಳಲ್ಲಿ ತೊಡಗಿ ಕೊಳ್ಳುತ್ತಿದ್ದರು. ಹೀಗೆ ಒಬ್ಬರ ಮನೆಯ ಸಭೆ ಸಮಾರಂಭಗಳು ಇಡೀ ನೆರೆಹೊರೆಯವರಿಗೆಲ್ಲಾ ಒಟ್ಟಿಗೆ ಬೆರೆತು ಸಂಭ್ರಮಿಸುವ ಸುಮಧುರ ವಾತಾವರಣವಿರುತ್ತಿತ್ತು.

ಇಂದು ಆಧುನಿಕ ಜಗತ್ತಿಗೆ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಂತೆಯೇ ಅಭಿಭಕ್ತ ಕುಟುಂಬಗಳೆಲ್ಲಾ ವಿಭಕ್ತ ಕುಟುಂಬಗಳಾಗಿ,  ಬಹುತೇಕ ಮೇಲೆ ತಿಳಿಸಿದಂತಹ ಎಲ್ಲಾ ಸಂಸ್ಕೃತಿಗಳೂ  ಮಾಯವಾಗಿ ಹೋಗುತ್ತಿರುವುದು ವಿಪರ್ಯಾಸವೇ ಸರಿ. ನೆರೆಹೊರೆಯವರನ್ನು ಬಿಡಿ, ಮುಂಚೆ ಸಮಾರಂಭಗಳಿಗೆ ಎರಡು ದಿನಗಳ ಮುಂಚೆಯೇ ಕುಟುಂಬಸಮೇತರಾಗಿ ಆಗಮಿಸಿ, ಬರುವಾಗ ತಮ್ಮ ಕೈಯಲ್ಲಾದ ಮಟ್ಟಿಗೆ ಅಕ್ಕಿ, ತೆಂಗಿನಕಾಯಿ, ತರಕಾರಿಗಳು ಇಲ್ಲವೇ ಬಾಳೆ ಎಲೆ, ವಿಳ್ಳೇದೆಲೆ ಅಡಿಕೆಗಳ ಸಮೇತ ಬಂದು  ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ  ಕೈ ಜೋಡಿಸಿ ಸಮಾರಂಭ ಮುಗಿದು ಎರಡು ದಿನಗಳಾದ ನಂತರವೇ ಹೋಗುತ್ತಿದ್ದ ಬಂಧುಗಳು ಇಂದು ಸಮಾರಂಭದ ದಿನವೇ ಒಬ್ಬರೂ ಇಲ್ಲವೇ ಇಬ್ಬರು ಆಗಮಿಸಿ ಊಟ ಮುಗಿದು ಕೈತೊಳೆಯುತ್ತಿದ್ದಂತೆಯೇ ಜೈ ಎನ್ನುವ ಪರಿಸ್ಥಿತಿ ಬಂದೊದಗಿದೆ.

ಅಂದು ಎಲ್ಲರ ಮನೆಗಳು ದೂರ ದೂರ ಇದ್ದರೂ ಸಂಬಂಧಗಳು ಮಾತ್ರ ಹತ್ತಿರವೇ ಇರುತ್ತಿದ್ದವು. ಇಂದು ಅದೇ ಮನೆಗಳ ಜಾಗದಲ್ಲಿ ಬಹು ಅಂತಸ್ತಿನ ಕಟ್ಟಡಗಳು ತೆಲೆಯೆತ್ತಿ ಹತ್ತಾರು ಮನೆಗಳು ಅಕ್ಕಪಕ್ಕದಲ್ಲೇ ಜೋಡಿಸಿಕೊಂಡೇ ಇದ್ದರೂ ನೆರೆಹೊರೆಯವರ ಪರಿಚಯವೇ ಹೆಚ್ಚಿನವರಿಗೆ ಇಲ್ಲದಿರುವುದು ಶೋಚನೀಯವಾಗಿದೆ.   ಅಕಸ್ಮಾತ್ ಹಾಗೇನಾದರೂ ಪರಿಚಯವಿದ್ದಲ್ಲಿ ಹಾಯ್! ಬಾಯ್! ಇಲ್ಲವೇ ಹೆಚ್ಚೆಂದರೆ ವ್ಯಾಟ್ಯಾಪ್ ಗುಡ್ ಮಾರ್ನಿಂಗ್ ಅಥವಾ ಗುಡ್ ನೈಟ್ ಗಳಿಗೆ ಮೀಸಲಾಗಿ, ಹೆಚ್ಚೆಂದರೆ ಅವರ ಪ್ರವಾಸವೋ ಇಲ್ಲವೇ ಸಭೆ ಸಮಾರಂಭಗಳನ್ನು ಅವರ ಫೇಸ್ಬುಕ್ ಅಥವಾ ವ್ಯಾಟ್ಯಾಪ್ ಸ್ಟೇಟಸ್ನಿಂದ ತಿಳಿಯಬೇಕಾಗಿ  ಬಂದಿರುವುದು ನಮ್ಮ ದೌರ್ಭಾಗ್ಯವೇ ಸರಿ.

*ಅಂದು ಎಲ್ಲರ  ಮನೆಗಳು ಚಿಕ್ಕದಿರುತ್ತಿದ್ದವು ಆದರೆ ಮನಗಳು ವಿಶಾಲವಾಗಿರುತ್ತಿದ್ದವು. ಇಂದು ಎಲ್ಲರ ಮನೆಗಳೂ ವಿಶಾಲವಾಗಿವೆಯಾದರೂ ಮನಗಳು ಮಾತ್ರ ಸಂಕುಚಿತವಾಗಿವೆ*.  ಇನ್ನೂ ಕಾಲ ಮಿಂಚಿ ಹೋಗುವ ಮೊದಲು ನಮ್ಮ ನೆರೆಹೊರೆಯ ಮತ್ತು ಬಂಧು-ಬಾಂಧವರ ಸಂಬಂಧಗಳನ್ನು  ವೃದ್ದಿಸಿಕೊಳ್ಳುವ ಜೊತೆಗೆ ಬಾಂಧವ್ಯಗಳನ್ನು ಗಟ್ಟಿ ಮಾಡಿಕೊಳ್ಳೋಣ ಮತ್ತು ನೆಮ್ಮದಿಯ ಸಹಬಾಳ್ವೆ ನಡೆಸೋಣ. ಮುಂದಿನ ತಲೆಮಾರಿನವರಿಗೂ ಒಳ್ಳೆಯ  ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಉಳಿಸಿ ಹೋಗೋಣ.

ಏನಂತೀರೀ?

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ


–>