-->

ಗಣಪತಿ - ಬಲಮುರಿ , ಎಡಮುರಿ , ಗರಿಕೆ ಆಧ್ಯಾತ್ಮಿಕ ಕಾರಣ - Ganesha Trunk Significance

ಬಲಮುರಿ-ಎಡಮುರಿ ಗಣಪತಿಗಿರುವ ವ್ಯತ್ಯಾಸ ಗಣೇಶ ಹಿಂದೂ ಆರಾಧ್ಯ ದೈವಗಳಲ್ಲಿ ಪ್ರಮುಖ ಅಧೀಪತಿ.

ಎಲ್ಲಾ ಪೂಜೆಗಳಲ್ಲೂ ಪ್ರಥಮ ವಂದ್ಯನೆಂದೇ ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿಯನ್ನೂ ನಾನಾ ರೀತಿಯಲ್ಲಿ ಪೂಜಿಸುವುದುಂಟು ಗಣಪನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ. 



ಗಣಪತಿಯನ್ನು ಸಾಮಾನ್ಯವಾಗಿ ಎಡಮುರಿ ಗಣಪತಿ ಹಾಗೂ ಬಲಮುರಿ ಗಣಪತಿ ಎಂದು ಕರೆಯುವುದುಂಟು. ಆದರೆ, ಅದೆಷ್ಟೋ ಮಂದಿಗೆ ಬಲಮುರಿ-ಎಡಮುರಿ ಗಣಪತಿಗಿರುವ ವಿಶೇಷತೆ ಎನು ಎಂಬುದು ತಿಳಿದೇ ಇರುವುದಿಲ್ಲ.

ಭಾರತದಲ್ಲಿ ಬಲಮುರಿ ಹಾಗೂ ಎಡಮುರಿ ಗಣಪತಿಗೆ ಸಾಕಷ್ಟು ವಿಶೇಷತೆಯಿದ್ದು ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಪೂಜೆ ಮಾಡುತ್ತಾರೆ.

 ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪತಿಯೆಂದು, ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ ಹಾಗೂ ಮಧ್ಯದಲ್ಲಿದ್ದರೆ ಊರ್ಧ್ವ ಮೂಲ ಗಣಪತಿಯೆಂದು ಕರೆಯುವುದುಂಟು.

ಬಲಮುರಿ ಗಣಪತಿ ಎಡಮುರಿ ಗಣಪತಿಗಿಂತ ಬಲಮುರಿ ಗಣಪತಿಯೇ ವಿಶೇಷವೆಂದು ಹೇಳುವುದುಂಟು. ಇದಕ್ಕೆ ಕಾರಣ. ಬಲಮುರಿ ಗಣಪತಿ ನಮ್ಮ ಜ್ಞಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗಿಸುತ್ತಾನೆಂಬ ನಂಬಿಕೆಯಿದೆ.

 ಸೊಂಡಿಲು ಬಲಗಡೆಗೆ ತಿರುಗಿದ್ದರೆ ದಕ್ಷಿಣಮೂರ್ತಿ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕು ಅಥವಾ ಬಲಬದಿಯು ಸೂರ್ಯನಾಗಡಿಗೆ ಸಂಬಂಧಪಟ್ಟಿದ್ದು, ಈ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ.

ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಬಹಳ ಶಕ್ತಿಶಾಲಿಯಾಗಿರುತ್ತಾರೆ. ಸೂರ್ಯನಾಡಿಯ ಚಲನೆಯಲ್ಲಿರುವವನು ತೇಜಸ್ವಿಯಾಗಿರುತ್ತಾರೆ.

 ಸಾತ್ವಿಕತೆ ಹೆಚ್ಚುತ್ತದೆ. ದಕ್ಷಿಣ ದಿಕ್ಕಿನಿಂದ ಬರುವ ಯಾವುದೇ ಕೆಲಸಗಳಿಗೂ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆ. ಮತ್ತೊಂದೆಡೆ ಬಲಮುರಿ ಗಣೇಶನಿಂದ ಎಷ್ಟು ಒಳ್ಳೆಯದೋ ಅದೇ ರೀತಿಯಲ್ಲಿ ಕೆಲವರಿಗೆ ತೊಡಕಾಗುವುದೂ ಉಂಟು ಎಂದು ಹೇಳುತ್ತಾರೆ.

ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ಕಾರಣವಾಗಬಹುದೆನ್ನುತ್ತಾರೆ.

ಬಲಮುರಿ ಗಣಪತಿಯು ದಕ್ಷಿಣದ ದಿಕ್ಕನ್ನ ಸೂಚಿಸುವುದರಿಂದ ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳು ಪರೀಕ್ಷೆಯಾಗುವುದರಿಂದ ಮೃತ್ಯುವಿನ ನಂತರ ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಆದೇ ರೀತಿಯ ಪರೀಕ್ಷೆಗಳು ಮೃತ್ಯುವಿಗೂ ಮೊದಲು ಆಗುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಳ್ಳಬಾರದು, ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಯೋಗ್ಯವಲ್ಲ ಎಂದು ಹೇಳುತ್ತದೆ.

ಎಡಮುರಿ ಗಣಪತಿ ಸೊಂಡಿಲಿನ ಪ್ರಾರಂಭದ ತಿರುವು ಎಡಗಡೆಗೆ ಇರುವ ಮೂರ್ತಿ ಎಂದರೆ ವಾಮಮುಖಿ ಮೂರ್ತಿಯನ್ನು ಎಡಮುರಿ ಗಣಪತಿಯೆಂದು ಕರೆಯಲಾಗುತ್ತದೆ. ವಾಮ ಎಂದರೆ ಎಡಬದಿ ಅಥವಾ ಉತ್ತರ ದಿಕ್ಕು.

 ಎಡಬದಿಯಲ್ಲಿ ಚಂದ್ರನಾಡಿಯಿರುತ್ತದೆ ಇದು ಶೀತಲತೆಯನ್ನು ಕೊಡುತ್ತದೆ. ಹಾಗೆಯೇ ಉತ್ತರ ದಿಕ್ಕು ಆಧ್ಯಾತ್ಮಕ್ಕೆ ಪೂರಕವಾಗುತ್ತದೆ ಎಂದು ಹೇಳಲಾಗುತ್ತದೆ. ಎಡಮುರಿ ಗಣಪತಿಯು ಶಾಂತ ಹಾಗೂ ಆನಂದತೆಯನ್ನು ಸೂಚಿಸುವುದರಿಂದ ಎಡಮುರಿ ಗಣಪತಿಯು ದಿನನಿತ್ಯ ಪೂಜೆಗೆ ಯೋಗ್ಯವಾಗಿದೆ ಎಂದು ಹೇಳಲಾಗುತ್ತದೆ.

ಗಣೇಶನಿಗೆ ಗರಿಕೆ ಅರ್ಪಿಸುವುದು ಯಾಕೆ? ಗಣೇಶನ ಪೂಜೆಯಲ್ಲಿ ಗರಿಕೆಗೆ ( ದೂರ್ವೆ) ವಿಶೇಷ ಮಹತ್ವವಿದೆ. ಸೂರ್ಯನು ನಮಸ್ಕಾರ ಪ್ರಿಯ, ವಿಷ್ಣುವು ಅಲಂಕಾರ ಪ್ರಿಯ, ಗಣಪತಿ ತರ್ಪಣ ಪ್ರಿಯ, ಮಹಾಗಣಪತಿಗೆ ಪ್ರಿಯವಾದ ಚತುರಾವೃತ್ತಿ ತರ್ಪಣ ಅರ್ಪಿಸುವುದರಿಂದ ಬುದ್ಧಿ, ಯಶಸ್ಸು, ಐಶ್ವರ್ಯ, ಶಕ್ತಿ, ಭಕ್ತಿ, ಯುಕ್ತಿ, ಮುಕ್ತಿ ದೊರೆಯುತ್ತದೆ ಎನ್ನುವುದು ನಂಬಿಕೆ. ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಗಣಪತಿಯನ್ನು ಏಕವಿಶಂತಿ (21) ಸಲ ಪೂಜಿಸಿದರೆ ಗಣೇಶನು ನಮ್ಮನ್ನು ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆಯೂ ಇದೆ.

ಓಂ ಔಷಧಿತಂತು ನಮಃ ಎನ್ನುವುದು ವಿಘ್ನೇಶ್ವರನ ಸಹಸ್ರ ನಾಮಗಳಲ್ಲಿ ಒಂದು. ಗಣೇಶ ಪೂಜೆಗೆ ಗರಿಕೆ ಅಥವಾ ದೂರ್ವೆ ಯಾಕೆ ಬೇಕು? ವ್ಯುತ್ಪತ್ತಿ ಮತ್ತು ಅರ್ಥ: ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ.

 ಗರಿಕೆಯನ್ನು ಅರ್ಪಿಸುವುದರ ಕಾರಣಗಳು ಆಧ್ಯಾತ್ಮಿಕ ಕಾರಣ: ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ.

ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ. ಪೌರಾಣಿಕ ಕಾರಣ: ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗತೊಡಗಿತು. ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.’

ಆಯುರ್ವೇದಕ್ಕನುಸಾರ ಕಾರಣ: ಆಯುರ್ವೇದವು ಸಹ ‘ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ’ ಎಂದು ಹೇಳುತ್ತದೆ. ದೂರ್ವೆ ಹೇಗಿರಬೇಕು?: ಗಣಪತಿಗೆ ಎಳೆಯ ದೂರ್ವೆಗಳನ್ನು ಅರ್ಪಿಸಬೇಕು. ಎಳೆಯ ದೂರ್ವೆಗೆ ‘ಬಾಲತೃಣಮ್’ ಎನ್ನುತ್ತಾರೆ. ಬಲಿತಿರುವ ದೂರ್ವೆಯು ಒಂದು ರೀತಿಯ ಹುಲ್ಲಿನಂತೆಯೇ ಇರುತ್ತದೆ. ದೂರ್ವೆಗಳಿಗೆ ೩, ೫, ೭ ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು. ದೂರ್ವೆಯು ಎಷ್ಟು ಉದ್ದವಾಗಿರಬೇಕು?: ಮೊದಲು ಗಣಪತಿಯ ಮೂರ್ತಿಯು ಸುಮಾರು ಒಂದು ಮೀಟರಿನಷ್ಟು ಎತ್ತರವಾಗಿರುತ್ತಿತ್ತು. ಆದುದರಿಂದ ಸಮಿತ್ತಿನಷ್ಟು ಉದ್ದದ ದೂರ್ವೆಗಳನ್ನು ಅರ್ಪಿಸುತ್ತಿದ್ದರು.

ಮೂರ್ತಿಯೇ ಸಮಿತ್ತುಗಳ ಆಕಾರದಷ್ಟು ಇದ್ದರೆ ಚಿಕ್ಕ ಆಕಾರದ ದೂರ್ವೆಗಳನ್ನು ಅರ್ಪಿಸಬೇಕು; ಮತ್ತು ಮೂರ್ತಿಯು ತುಂಬಾ ದೊಡ್ಡದಾಗಿದ್ದರೂ ಸಮಿತ್ತಿನ ಆಕಾರದ ದೂರ್ವೆಗಳನ್ನೇ ಅರ್ಪಿಸಬೇಕು. ಸಮಿತ್ತುಗಳನ್ನು ಒಟ್ಟಿಗೆ ಕಟ್ಟುವಂತೆ ದೂರ್ವೆಗಳನ್ನೂ ಒಟ್ಟಿಗೆ ಕಟ್ಟುತ್ತಾರೆ. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಅವುಗಳ ಸುಗಂಧವು ಹೆಚ್ಚು ಸಮಯ ಉಳಿಯುತ್ತದೆ. ಅವು ಹೆಚ್ಚು ಸಮಯ ತಾಜಾ ಆಗಿರಬೇಕೆಂದು ಅವುಗಳನ್ನು ನೀರಿನಲ್ಲಿ ಅದ್ದಿ ಅರ್ಪಿಸುತ್ತಾರೆ.

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
–>