-->

Gowri festival significance ಗೌರಿ ಹಬ್ಬ ಮಹತ್ವ

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅಂತಹ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬವೂ ಅತ್ಯಂತ ಮುಖ್ಯವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಈ ಗೌರಿ ಹಬ್ಬದ ಆಚರಣೆಗೆ ಕಥೆಗಳಿವೆ.


ಬಂಧು ಬಾಂಧವರನ್ನು ಭಾವೈಕ್ಯತೆಯನ್ನು ಗಟ್ಟಿಗೊಳಿಸುವುದು ಈ ಹಬ್ಬದ ವಿಶೇಷ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ಉಡುಗೊರೆಯನ್ನು ಪಡೆದುಕೊಳ್ಳುವುದು. ಹೆತ್ತವರು ಒಡ ಹುಟ್ಟಿದವರು ಚೆನ್ನಾಗಿರಲಿ ಎಂದು ಹಾರೈಸುವುದು ಗೌರಿ ಹಬ್ಬದ ಮಹತ್ವವಾಗಿದೆ. ಗೌರಿಗೆ ಸ್ವರ್ಣಗೌರಿ ಎಂಬ ಹೆಸರು ಬಂದಿದ್ದು , ಶಿವನಿಂದ...

ಒಮ್ಮೆ ಶಿವ ಕೈಲಾಸದಲ್ಲಿ ಕುಳಿತಿರುವಾಗ ಪಾರ್ವತಿ ಬಂದು ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ. ನಂತರ ಶಿವ ಕಣ್ಣು ತೆರೆದು ನೋಡಿದಾಗ ಪಾರ್ವತಿಯು ಕಪ್ಪಾಗಿ ಕಾಣುತ್ತಾಳೆ. ಆಗ ಶಿವನು ಪಾರ್ವತಿಯನ್ನು ಗೌರಿ ಎಂದು ಕರೆಯುತ್ತಾನೆ. ಸಂಸ್ಕೃತದಲ್ಲಿ ಗೌರಿ ಎಂದರೆ ಕಪ್ಪು ಎಂಬರ್ಥ. ಶಿವ ಗೌರಿ ಎಂದು ಕರೆದಿದ್ದರಿಂದ ಪಾರ್ವತಿ ಮುನಿಸಿಕೊಂಡು ಹೋಗುತ್ತಾಳೆ.
ಮುನಿಸಿಕೊಂಡ ಪಾರ್ವತಿಯನ್ನು ಓಲೈಸುವುದಕ್ಕಾಗಿ ಪರಮೇಶ್ವರನು ಗೌರಿಗೆ ಹೇಳುತ್ತಾನೆ. ನೀನು ಗೌರಿ ಅಲ್ಲ. ಸ್ವರ್ಣಗೌರಿ ಎಂದು ಕರೆದ. ಸ್ವರ್ಣ ಎಂದರೆ ಚಿನ್ನ ಎಂದರ್ಥ. ಆದ್ದರಿಂದ ಶಿವನು ಸ್ವರ್ಣಗೌರಿ ಎಂದು ಪಾರ್ವತಿಯನ್ನು ಓಲೈಸುತ್ತಾನೆ.

ಗೌರಿ ಹಬ್ಬವೆಂದರೆ ಹೆಣ್ಣು ಮಕ್ಕಳಿಗೆ ಬಹಳ ಸಂತಸ. ಅದರಲ್ಲೂ ಮದುವೆಯಾಗಿರುವ ಹೆಣ್ಣು ಮಕ್ಕಳಿಗೆ ಖುಷಿ ಸ್ವರ್ಗಕ್ಕೆ ಮೂರೇ ಗೇಣು. ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ ವಿಶೇಷವಾದುದು. ವರ್ಷಕ್ಕೊಮ್ಮೆ ತವರಿಗೆ ಹೋಗಿ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮಂದಿರೊಡನೆ ಹಬ್ಬವನ್ನು ಆಚರಿಸಿ ಬಾಗಿನ ತರುವುದೇ ಅವರಿಗೆ ಸಂಭ್ರಮ.

ಗೌರಿಹಬ್ಬ ಹೆಣ್ಣು ಮಕ್ಕಳು ಹುಟ್ಟಿದ ಮನೆ ಮತ್ತು ಕೊಟ್ಟ ಮನೆಯ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ಎಷ್ಟೇ ಬಡ ಕುಟುಂಬದವರಾದರೂ ಸಹ ಈ ಗೌರಿ ಹಬ್ಬವನ್ನು ಆಚರಿಸುವ ಮೂಲಕ ತಮ್ಮ ಹೆಣ್ಣು ಮಕ್ಕಳನ್ನು ತವರಿಗೆ ಕರೆದು ಬಾಗಿನ ಕೊಡುವ ಸಂಪ್ರದಾಯವಿದೆ. ಇನ್ನೂ ಕೆಲವೆಡೆ ಗೌರಿ ಹಬ್ಬದಲ್ಲಿ ನಮ್ಮ ಜೀವನಾಡಿಯಾಗಿರುವ ತುಂಬಿದ ಕೆರೆ, ಕಟ್ಟೆ, ನದಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗಂಗಾಮಾತೆಗೆ ಬಾಗಿನ ಅರ್ಪಿಸುವ ವಾಡಿಕೆ ಇದೆ.


ನಂತರ ಕೆರೆಯ ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸಿ ಮೆರವಣಿಗೆಯಲ್ಲಿ ತಂದು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಕ್ರಮವೂ ಇದೆ. ಗೌರಿ ಹಬ್ಬದಂದು ಹೆಣ್ಣು ಮಕ್ಕಳು ಸಡಗರದಿಂದ ಗೌರಿಗೆ ಪೂಜೆ ಸಲ್ಲಿಸಿ, ಗೌರಿದಾರ ಕಟ್ಟಿಸಿಕೊಂಡು ತಾಯಿಯ ಕಾಲಿಗೆ ನಮಸ್ಕರಿಸಿ ಮುತ್ತೈದೆಯರಿಗೆ ಬಾಗಿನವನ್ನು ನೀಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಗೌರಿಹಬ್ಬದ ಮರುದಿನ ಗಂಡು ಮಕ್ಕಳು ಗಣೇಶನ ಹಬ್ಬಕ್ಕೆ ಸಜ್ಜಾಗುತ್ತಾರೆ.


ಸ್ವರ್ಣಗೌರಿ ವ್ರತವನ್ನು ಮಾಡುವುದರಿಂದ ವ್ರತ ಮಾಡುವವರಿಗೆ ಗೌರಿಯು ಸಂಪತ್ತನ್ನು ಅನುಗ್ರಹಿಸುತ್ತಾಳೆ. ಸದಾ ಅವರ ಮನೆಯಲ್ಲಿ ಸಂಪತ್ತು ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಗೌರಿ-ಗಣೇಶ ಹಬ್ಬ ಎಂದಾಕ್ಷಣ ಚಿಕ್ಕ ಮಕ್ಕಳಿಂದ ದೊಡ್ಡವರಿಗೂ ಏನೋ ಸಂತೋಷ, ಸಡಗರ. ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಒಗ್ಗೂಡಿ ಸಂಭ್ರಮ, ಸಡಗರದಿಂದ ಗೌರಿ-ಗಣೇಶ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡುತ್ತಾರೆ. ಇದು ಯಾವುದೇ ಭಾಷೆ, ಧರ್ಮ, ಜಾತಿ, ಪ್ರದೇಶ ಎಂಬ ಬೇಧವಿಲ್ಲದೆ ಎಲ್ಲರೂ ಜೊತೆಗೂಡಿ ಆಚರಿಸುವ ಹಬ್ಬವಾಗಿದೆ.

Gowri festival significance ಗೌರಿ ಹಬ್ಬ ಮಹತ್ವ

 

ಗೌರಿ ಹಬ್ಬದ ಪೂಜಾ ವಿಧಾನ:


* ಗೌರಿ ದೇವಿಯ ಮೂರ್ತಿಯನ್ನು ಗಣೇಶ ಚತುರ್ಥಿ ಹಿಂದಿನ ದಿನ ಮನೆಗೆ ತರಲಾಗುತ್ತದೆ. ಗೌರಿಯನ್ನು ಮನೆಗೆ ಆಹ್ವಾನಿಸುವ ಮುನ್ನ ಆ ಮನೆಯ ಮಹಿಳೆಯರು ಸ್ನಾನ ಮಾಡಿ, ಶುದ್ಧರಾಗಿ ಮನೆಯನ್ನು ಅಲಂಕರಿಸಿ ಮನೆ ಮುಂದೆ ರಂಗೋಲಿಯನ್ನು ಹಾಕುತ್ತಾರೆ.


* ಸ್ವರ್ಣ ಗೌರಿ ಹಬ್ಬವೆಂದು ಕರೆಯಲಾಗುವ ಗೌರಿ ಹಬ್ಬದಂದು ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ, ನಂತರ ಅರಿಶಿಣದಿಂದ ಗೌರಿ ವಿಗ್ರಹವನ್ನು ರಚಿಸಬೇಕು. ಹಾಗೂ ಮಂತ್ರದ ಮೂಲಕ ಗೌರಿಯನ್ನು ಆಹ್ವಾನಿಸಬೇಕು.

ಮಂತ್ರ: "ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ".

ಈ ಮಂತ್ರವನ್ನು ಸ್ವರ್ಣಗೌರಿ ಹಬ್ಬದ ದಿನ 108 ಬಾರಿ ಶ್ರದ್ಧಾ ಹಾಗೂ ಭಕ್ತಿಯಿಂದ ಪೂಜಿಸಬೇಕು.
* ನಂತರ ಅರಶಿಣದಿಂದ ತಯಾರಿಸಿದ ಗೌರಿ ವಿಗ್ರಹವನ್ನು ಅಕ್ಕಿ ಮತ್ತು ಧಾನ್ಯಗಳನ್ನು ಹಾಕಿರುವ ಬಟ್ಟಲಿನಲ್ಲಿ ಇಡಬೇಕು.
* ನಂತರ ಗೌರಿಗೆ ಸ್ವಚ್ಛತೆ ಮತ್ತು ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ.
 

ಗೌರಿಯನ್ನು ಆಹ್ವಾನಿಸುವ ವಿಧಾನ ಹೀಗಿದೆ :
ಗೌರಿಯ ಆಹ್ವಾನದ ವಿಧಿ
ಸುಖ, ಸಮೃದ್ಧಿ ಮತ್ತು ಶಕ್ತಿ ದೇವತೆಯೆಂದು ಪರಿಗಣಿಸಲಾಗುವ ಗೌರಿ ದೇವಿಯನ್ನು ಗಣೇಶ ಚತುರ್ಥಿಗೂ ಮೊದಲೇ ಮನೆಗೆ ಸ್ವಾಗತಿಸಲಾಗುತ್ತದೆ. ಗೌರಿ ಪೂಜೆಯ ವಿಧಿ - ವಿಧಾನಗಳು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ. ಗಣೇಶನನ್ನು ಮನೆಗೆ ಆಹ್ವಾನಿಸುವ ಮುನ್ನ ಆತನ ತಾಯಿ ಗೌರಿ ಅಂದರೆ ಪಾರ್ವತಿಯನ್ನು ಮನೆಗೆ ಸ್ವಾಗತಿಸಲಾಗುತ್ತದೆ. ಗೌರಿಯನ್ನು ಮನೆಯಲ್ಲಿ ಕೂರಿಸುವುದರಿಂದ ಆ ಮನೆಯ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ಸುಮಂಗಲಿಯರು ಮನೆ ಮುಂದೆ ರಂಗೋಲಿಯನ್ನು ಹಾಕಿ, ಮನೆಯನ್ನು ಶುದ್ಧಗೊಳಿಸಿ, ಅಲಂಕಾರವನ್ನು ಮಾಡಿ ಗೌರಿಯನ್ನು ಆಹ್ವಾನಿಸಬೇಕು. ‌
ಶಕ್ತಿ, ಧೈರ್ಯ, ಸ್ಥೈರ್ಯಕ್ಕೆ ಹೆಸರುವಾಗಿಯಾದ ಗೌರಿ ಮಾತೆ ಶಕ್ತಿಯನ್ನು ನಮಗೆ ದಯಪಾಲಿಸಲಿ ಎಂದು ಮಹಿಳೆಯರು ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ.
 
ಗೌರಿ ವ್ರತದ ಮಹತ್ವ

ಭಗವಾನ್ ಶಿವನ ಪತ್ನಿ ಮತ್ತು ಗಣೇಶ ಮತ್ತು ಕಾರ್ತಿಕೇಯರ ತಾಯಿ ಗೌರಿ ದೇವಿಯನ್ನು ಅತ್ಯಂತ ಶಕ್ತಿಶಾಲಿ ದೇವಿಯಾಗಿ ಪೂಜಿಸಲಾಗುತ್ತದೆ. ಅವಳು ಶಕ್ತಿ, ದೈವಿಕತೆ, ಸೃಜನಶೀಲ ಶಕ್ತಿಯ ಪರಿಕಲ್ಪನೆಯಾಗಿದ್ದಾಳೆ. ಗೌರಿ ಹಬ್ಬದ ಸಮಯದಲ್ಲಿ, ಭಾದ್ರಪದ ಮಾಸದ ಮೂರನೇ ದಿನ ತದಿಗೆಯ ದಿನ ಮಾತಾ ಗೌರಿಯು ತನ್ನ ತವರು ಮನೆಗೆ ಬಂದು ಬಾಗಿನ ಪಡೆಯುತ್ತಾಳೆ, ಮರುದಿನ ಚತುರ್ಥಿಯಂದು ಅವಳ ಮಗ ಗಣೇಶನು ಗೌರಿಯನ್ನು ಕೈಲಾಸ ಪರ್ವತಕ್ಕೆ ಕರೆದೊಯ್ಯುವಂತೆ ಬರುತ್ತಾನೆ. ಅಂತೆಯೇ ಗೌರಿ ವ್ರತದ ದಿನ ವಿವಾಹಿತ ಮಹಿಳೆಯರು ತಮ್ಮ ತವರು ಮನೆಗೆ ಬಂದು ಬಾಗಿನ ಪಡೆಯುವ ಸಂಪ್ರದಾಯ ಈಗಲೂ ಮುಂದುವರೆದಿದೆ.

ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಜೀವನ ಉತ್ತಮವಾಗಿರಲು, ಪತಿಯ ದೀರ್ಘಾಯುಷ್ಯ ಹಾಗೂ ಕೌಟುಂಬಿಕ ಜೀವನದ ಶ್ರೇಯೋಭಿವೃದ್ಧಿಗಾಗಿ ಗೌರಿ ದೇವಿಯ ಆಶೀರ್ವಾದ ಪಡೆಯಲು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಅವಿವಾಹಿತ ಹೆಣ್ಣು ಮಕ್ಕಳು ಉತ್ತಮ ಜೀವನ ಸಂಗಾತಿ ಸಿಗಲಿ ಎಂದು ಕೋರಿ ದೇವಿ ವ್ರತವನ್ನು ಮಾಡುತ್ತಾರೆ. ವ್ರತದ ದಿನ ಉಪವಾಸ ಆಚರಿಸುತ್ತಾರೆ, ಗೌರಿಯ ಆಶೀರ್ವಾದ ಎಂದು ಭಾವಿಸಿ 16 ಗಂಟುಗಳ ಗೌರಿ ದಾರವನ್ನು ಧರಿಸುತ್ತಾರೆ.

- ನಮ್ಮ ಓದುಗರು ನೀಡಿದ ಲೇಖನ

–>