-->

ತಲೆಸುತ್ತು ಬರಲು ಕಾರಣಗಳು Reasons for giddiness

ತಲೆಸುತ್ತು ಅನೇಕ ಕಾರಣಗಳಿಂದ ಬರಬಹುದು. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚು ಇಲ್ಲವೇ ಕಡಿಮೆ ಆಗುವುದರಿಂದ, ರಕ್ತದ ಒತ್ತಡ (ಬಿಪಿ) ಕಡಿಮೆ ಆಗುವುದರಿಂದ, ಮೈಗ್ರೇನ್‌ ಇದ್ದಲ್ಲಿ, ಬಿಸಿಲಿನಲ್ಲಿ ಹೆಚ್ಚು ತಿರುಗಾಡಿದಾಗ, ಉಪವಾಸವಿದ್ದಾಗ, ಮೆದುಳಿನಲ್ಲಿ ಗಡ್ಡೆ ಇದ್ದಲ್ಲಿ, ದೇಹದಲ್ಲಿ ನಿರ್ಜಲೀಕರಣವಾದಾಗ, ಕಿವಿಯಲ್ಲಿ ತೊಂದರೆಯಿದ್ದಲ್ಲಿ ಹೀಗೆ ಹಲವಾರು ಕಾರಣಗಳಿಂದ ʼತಲೆಸುತ್ತುʼ ಬರುತ್ತದೆ. ತಲೆಸುತ್ತು ಸ್ವತಃ ಒಂದು ರೋಗವಾಗಿರದೆ ಇತರ ರೋಗಸ್ಥಿತಿಗಳಲ್ಲಿ ಅನುಷಂಗಿಕವಾಗಿಯೋ ಪ್ರಾಸಂಗಿಕವಾಗಿಯೋ ಕಂಡುಬರುವ ಒಂದು ಲಕ್ಷಣವಾಗಿರುವುದೇ ಸಾಮಾನ್ಯ.

ಕಿವಿ ರೋಗಗಳಲ್ಲಿ ತಲೆಸುತ್ತು:  
ಒಳಕಿವಿಯ ಉರಿಯೂತ ತಲೆಸುತ್ತಿನ ಒಂದು ಸಾಮಾನ್ಯ ಕಾರಣ. ಕೆಲವು  ಔಷಧಗಳ ಸೇವನೆಯಿಂದ ಮತ್ತು ನಡುಕಿವಿಯ ಹಾಗೂ ದೀರ್ಘಕಾಲಿಕ ಉರಿಯೂತಗಳಿಂದ ಒಳಕಿವಿಯ ಉರಿಯೂತ ಉಂಟಾಗಬಹುದು. ತಲೆಗೆ ತೀವ್ರ ಪೆಟ್ಟು ಬಿದ್ದರೆ ಒಳಕಿವಿಯೊಳಗೆ ರಕ್ತಸ್ರಾವ ಕಡಿಮೆಯಾಗಿಯೊ ಹೆಚ್ಚಾಗಿಯೋ ಉಂಟಾಗಿ ಅದರಿಂದ ತಲೆಸುತ್ತು ಕಂಡುಬರಬಹುದು. ಯೂಸ್ಟೇಚಿಯನ್ ನಾಳ  ಅಥವಾ ಹೊರಗಿವಿನಾಳ ಇವುಗಳಲ್ಲಿ ಏನಾದರೂ ಅಡಚಣೆ ಉಂಟಾಗಿದ್ದರೂ ತಲೆಸುತ್ತಬಹುದು. ಹಾಗೆಯೇ ಮೂಗಿಗೆ ಸಂಬಂಧಿಸಿದ (ನೇಸಲ್ ಸೈನಸಸ್) ಮತ್ತು ಮೂಗಿನ ಧಮನಿಗಳ ರೋಗ ಸ್ಥಿತಿಗಳೂ ತಲೆಸುತ್ತಿಗೆ ಕಾರಣವಾಗಬಹುದು. ಮೆನಿಯೆರನ ರೋಗ ಎಂಬುದು ಒಳಕಿವಿಗೆ ಸಂಬಂಧಿಸಿದಂತೆ ತಲೆಸುತ್ತನ್ನು  ಉಂಟುಮಾಡುವ ಒಂದು ವಿಶೇಷ ಪರಿಸ್ಥಿತಿ. ಇದರಲ್ಲಿ ಪದೇ ಪದೇ ತಲೆಸುತ್ತು ಕಿವಿ ಗುಂಯ್‌ಗುಡುವುದು ಮತ್ತು ಕಿವಿ ಕೇಳಿಸದೆ ಇರುವುದು ವಿಶಿಷ್ಟ ಲಕ್ಷಣಗಳು.

ಕಣ್ಣಿನ ರೋಗಗಳಲ್ಲಿ ತಲೆಸುತ್ತು  :
ಕಣ್ಣಿನ ರೋಗಗಳಲ್ಲಿ ತಲೆಸುತ್ತು ಸ್ವಲ್ಪ ತೊಂದರೆಯನ್ನು ಉಂಟುಮಾಡುತ್ತದೆ. ಕನ್ನಡಕವನ್ನು ಅದರಲ್ಲಿಯೂ ಪ್ರಬಲ ಪೀನಮಸೂರವಿರುವ ಕನ್ನಡಕವನ್ನು ಮೊದಲ ಬಾರಿಗೆ ಉಪಯೋಗಿಸುವವರಲ್ಲಿ ತಲೆಸುತ್ತು ಬರುವುದು ಸಾಮಾನ್ಯ. ರೈಲು ಬಸ್ಸುಗಳಲ್ಲಿ ಸಂಚಾರ ಮಾಡುವಾಗ ಅನೇಕರಿಗೆ ತಲೆಸುತ್ತುವುದು ತಿಳಿದ ವಿಷಯವೇ.

ಮಿದುಳಿನ ಅನಾರೋಗ್ಯ ಸ್ಥಿತಿಗಳಲ್ಲಿ ತಲೆಸುತ್ತು :
 ಧಮನಿಗಳ ಅನಾರೋಗ್ಯ, ಅಪಸ್ಮಾರದ ಮುನ್ಸೂಚನೆಯಾಗಿ ಇಲ್ಲವೇ ಮೈಗ್ರೇನ್  ಎಂದು ಒಂದು ವಿಶಿಷ್ಟ ತಲೆನೋವಿನಲ್ಲಿ ಹಿರಿಮಸ್ತಿಷ್ಕಕ್ಕೆ ಸಂಬಂಧಪಟ್ಟಂತೆ ತಲೆಸುತ್ತು ಕಂಡುಬರುತ್ತದೆ. ಕಿರಿಮಸ್ತಿಷ್ಕ (ಸೆರಿಬೆಲ್ಲಮ್)ಕ್ಕೆ ಪೂರೈಕೆ ಆಗುವ ಅಪಧಮನಿಯಲ್ಲಿ ಅಡಚಣೆ ಉಂಟಾದಾಗ ತಲೆಸುತ್ತು ಉಂಟಾಗಬಹುದು. ಸಿಫಿಲಿಸ್ ಮುಂತಾದವುಗಳಿಂದ ಶಿರೋನರದ ಬಾಧೆಯಾದಾಗಲೂ ಮಿದುಳಿನಲ್ಲಿ  ಅದರ ಉಗಮಸ್ಥಾನದಲ್ಲಿ ಹಾಗೂ ಅದರ ನೆರೆಯಲ್ಲಿ ಧಮನಿಗಳು ಅನಾರೋಗ್ಯವಾಗಿದ್ದಾಗಲೂ ತಲೆಸುತ್ತು ಸಾಮಾನ್ಯ.

ನಿರ್ಜಲೀಕರಣ :
ನಿರ್ಜಲೀಕರಣ ಸಹ ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಅಂದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವುದು. ನಮ್ಮ ದೇಹದಲ್ಲಿ ಬಹುಪಾಲು ನೀರಿದೆ. ನೀರಿನ ಪ್ರಮಾಣ ಕಡಿಮೆ ಆದರೆ ತೊಂದರೆ. ಆದ್ದರಿಂದ ಬಿಸಿಲಿನಲ್ಲಿ ಎಲ್ಲೇ ಹೋಗುವುದಿದ್ದರೂ ಒಂದು ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗುವುದು ಒಳಿತು. ಯಾವಾಗಲೂ ಅಗತ್ಯ ಪ್ರಮಾಣದಷ್ಟು ನೀರನ್ನು ಸೇವಿಸುತ್ತಾ ಇರಬೇಕು. ಕೆಲಸ ಮಾಡುವಾಗ ಬಿಡುವು ಮಾಡಿಕೊಂಡು ನೀರು ಕುಡಿಯಿರಿ. ಜೊತೆಗೆ ಆರೋಗ್ಯಕರವಾದ ಜೀವನ ಶೈಲಿಯನ್ನು ಅನುಸರಿಸಿ.

ತಲೆಸುತ್ತು ಬರಲು ನಿಖರವಾದ ಕಾರಣಗಳು ಏನು ಎಂಬುದನ್ನು ತಿಳಿದುಕೊಳ್ಳಲು ವೈದ್ಯರನ್ನು ಕಾಣುವುದು ಮುಖ್ಯ. ಅದು ಸಾಮಾನ್ಯ ತಲೆಸುತ್ತೇ ಇರಲಿ ಅಥವಾ ಇನ್ಯಾವುದೇ ಇರಲಿ ಸ್ವಂತ ಔಷಧೋಪಚಾರ ಸಲ್ಲದು. 

ತಲೆಸುತ್ತು ಬರಲು ಕಾರಣಗಳು Reasons for giddinessಆರೈಕೆ

⦁ತಲೆಸುತ್ತು ಬಂದಾಗ ವಿಶ್ರಾಂತಿ ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕ.

⦁ಸಕ್ಕಲೆ ಕಾಯಿಲೆ ಇದ್ದವರಿಗೆ ತಲೆಸುತ್ತು ಬಂದರೆ ಬೆಲ್ಲದ ಒಂದು ತುಂಡು, ಕಲ್ಲುಸಕ್ಕರೆ ಇಲ್ಲವೇ ಚಾಕೋಲೇಟ್‌ ಕೊಟ್ಟಲ್ಲಿ ಸರಿಯಾಗುತ್ತದೆ.

⦁ ರಕ್ತದ ಒತ್ತಡ (ಬಿಪಿ) ಕಡಿಮೆ ಇರುವವರಲ್ಲಿ ತಲೆಸುತ್ತು ಬಂದರೆ ಚಿಟಕಿ ಉಪ್ಪನ್ನು ನೀರಿನೊಡನೆ ಬೆರೆಸಿ ಸೇವಿಸಬೇಕು.

⦁ ಕಿವಿಯ ತೊಂದರೆಯಿದ್ದು, ತಲೆಸುತ್ತು ಬಂದಲ್ಲಿ ಕವಿ, ಮೂಗು, ಗಂಡಲು ತಜ್ಞರ ಬಳಿ ಹೋಗಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು.

⦁ವಾಂತಿ ಬೇಧಿಯಾಗಿ ನಿರ್ಜಲೀಕರಣದಂದ ತಲೆಸುತ್ತು ಬಂದಲ್ಲಿ ಓಆರ್‌ಎಸ್‌, ಎಳನೀರು, ಹಣ್ಣಿನ ರಸ ಮತ್ತು ಗಂಜಿ ಕೊಟ್ಟರೆ ಸರಿಹೋಗುತ್ತದೆ. ಆದರೆ ತಲೆಸುತ್ತು ಮತ್ತು ತಲೆನೋವು ಇದ್ದು ವಾಂತಿಯಾಗುತ್ತಿದ್ದರೆ ನಿರ್ಲಕ್ಷ್ಯ ಮಾಡದೇ ಸ್ಕ್ಯಾನ್‌ ಮಾಡಿಸಿ ಗಡ್ಡೆ ಇದೆಯೇ ಎಂಬುದನ್ನು ಅರಿತುಕೊಳ್ಳುವುದು ಸೂಕ್ತ. ನರರೋಗತಜ್ಞರನ್ನು (ನ್ಯೂರಾಲಜಿಸ್ಟ್)‌ಕಂಡು ತಪಾಸಣೆ ಮಾಡಿಸಿಕೊಳ್ಳಬೇಕು.

⦁ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸದೇ ಇರುವುದು, ನೀರನ್ನು ಸರಿಯಾಗಿ ಕುಡಿಯದೇ ಇರುವುದು ಮತ್ತು ಊಟದ ಸಮಯದಲ್ಲಿ ಊಟವನ್ನು ಏನೇನೋ ಕಾರಣಗಳಿಗಾಗಿ ಮಾಡದೇ ಹಾಗೆಯೇ ಇರುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ. ಜೊತೆಗೆ ರಕ್ತ ಪರಿಚಲನೆ ನಿಧಾನವಾಗುತ್ತದೆ. ಇದರಿಂದಲೂ ತಲೆಸುತ್ತು ಬರಬಹುದು.

⦁ಮದ್ಯಸೇವನೆ, ಉಪ್ಪು, ಕಾಫಿ ಮತ್ತು ತಂಬಾಕು ಸೇವನೆ ಆದಷ್ಟು ಕಡಿಮೆ ಮಾಡುವುದು. ತಾಪಮಾನದ ವೈಪರೀತ್ಯದಿಂದ ಅಥವಾ ನೀರು ಕಡಿಮೆಯಾದ ಕಾರಣದಿಂದ ಈ ಲಕ್ಷಣ ಉಂಟಾಗಿದ್ದರೆ ಸೂಕ್ತವಾಗಿ ನೀರು ಸೇವನೆ ಅಥವಾ ದ್ರವ ಸೇವನೆ ಮಾಡಬೇಕು. ಚಲಿಸುತ್ತಿರುವ ಬಸ್‌ಅಥವಾ ರೈಲಿನಲ್ಲಿ ಪುಸ್ತಕಗಳನ್ನು ಓದುವುದು ಅಥವಾ ಕಂಪ್ಯೂಟರ್ (ಲ್ಯಾಪ್‌ಟಾಪ್)‌ಬಳಸುವುದನ್ನು ಮಾಡಬಾರದು. ಕೆಲವು ರೀತಿಯ ವ್ಯಾಯಾಮ ಮಾಡುವುದರಿಂದ ದೈಹಿಕ ಸಮತೋಲನ ಕಾಪಾಡಿಕೊಳ್ಳಬಹುದು ಮತ್ತು ತಲೆನೋವು ಬರದಂತೆ ನೋಡಿಕೊಳ್ಳಬಹುದು.

ಡಾ. ಪ್ರವೀಣರಡ್ಡಿ.ಮುಳ್ಳೂರ  -  ಮಾಗಡಿ / ಲಕ್ಷ್ಮೇಶ್ವರ - 8884784457

–>