ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗೆಯು ತವರು ಮನೆಗೆ ಬರುವ ಶುಭ ದಿನವೇ ದುರ್ಗಾಷ್ಟಮಿ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಅತ್ಯಂತ ಮಹತ್ವವಾದ ದಿನವಿದು. ಆದಿಶಕ್ತಿ ಮಹಿಷಾಸುರನನ್ನು ಸಂಹರಿಸಿ ದುರ್ಗಾಪರಮೇಶ್ವರಿ ಯಾದ ಪವಿತ್ರ ದಿನ. ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ನವರಾತ್ರಿಯಲ್ಲಿ ದುರ್ಗಾಷ್ಟಮಿಗೆ ಹೆಚ್ಚಿನ ಮಹತ್ವವಿದೆ. ತ್ರಿಮೂರ್ತಿಗಳ ಶಕ್ತಿಯಿಂದ ಸೃಷ್ಟಿಯಾದ ದುರ್ಗಾ ದೇವಿ. ಪಶ್ಚಿಮ ಬಂಗಾಳದ ಬೆಂಗಾಲಿಗಳಿಗೆ ದುರ್ಗಾ ಪೂಜೆ ದೊಡ್ಡ ಹಬ್ಬ. ನಾಲ್ಕು ದಿನಗಳ ಕಾಲ ದುರ್ಗೆಗೆ ಅದ್ದೂರಿ ಪೂಜೆ. ಬೆಂಗಾಲಿಗಳಿಗೆ ದುರ್ಗಾಷ್ಟಮಿ ಅತ್ಯಂತ ವಿಶೇಷ. ನವರಾತ್ರಿಯಲ್ಲಿ ದುರ್ಗೆ ಗಂಡನ ಮನೆಯಿಂದ ಭೂಲೋಕದಲ್ಲಿರುವ ತವರು ಮನೆಗೆ ಬರುತ್ತಾಳೆ ಎನ್ನುವ ನಂಬಿಕೆ ಬೆಂಗಾಳಿಗಳಲ್ಲಿ ಇದೆ. ಹೀಗೆ ತವರು ಮನೆಗೆ ಬರುವ ದುರ್ಗೆಯನ್ನು ಬೆಂಗಾಲಿಗಳು ವಿಶೇಷವಾಗಿ ಅಲಂಕರಿಸಿ ಭಕ್ತಿಯಿಂದ ಆರಾಧಿಸುತ್ತಾರೆ.
ದುರ್ಗಾಷ್ಟಮಿಯಂದು ದುರ್ಗೆಗೆ ನಡೆಯುವ ಸಂಧ್ಯಾ ಆರತಿ ಅತ್ಯಂತ ವಿಶೇಷವಾಗಿರುತ್ತದೆ. ವಾದ್ಯ, ಡೋಲು, ಜಾಗಟೆ, ಶಂಖನಾದದ ಜೊತೆಗೆ ಉಲೂಲು ಸದ್ದು ಮಾಡುತ್ತಾ ದುರ್ಗೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದುರ್ಗಾಷ್ಟಮಿ 4 ದಿನ ಅನೇಕ ಬಗೆಯ ಪೂಜೆಗಳು ನಡೆಯುತ್ತವೆ. ಶ್ರೀಚಕ್ರ ಪೂಜೆ ಮತ್ತು ದೇವಿಗೆ ತ್ರಿಕಾಲ ಪೂಜೆ ನಡೆಯುತ್ತದೆ. ದುರ್ಗಾ ಮಹಾತ್ಮೆ ಮತ್ತು ದುರ್ಗೆಗೆ ಸಂಬಂಧಿಸಿದ ಸ್ತೋತ್ರಗಳಿಂದ ಮಹಾತಾಯಿಯನ್ನು ಭಕ್ತಿಯಿಂದ ಆರಾಧಿಸಲಾಗುತ್ತದೆ.
ದುರ್ಗೆಯ ಎಂಟು ರೂಪಗಳ ಆರಾಧನೆ ವಿಶೇಷ
ಅಷ್ಟಮಿಯ ದಿನ ದುರ್ಗೆಯ ಎಂಟು ರೂಪಗಳನ್ನು ಆರಾಧಿಸುವ ಪದ್ಧತಿ ಇದೆ. ಬ್ರಹ್ಮಚಾರಿಣಿ, ಇಂದ್ರಾಣಿ, ವೈಷ್ಣವಿ, ವಾರಾಹಿ, ನಾರಸಿಂಹಿ, ಮಹೇಶ್ವರಿ, ಚಾಮುಂಡಿ, ಕೌಮಾರಿ, ರೂಪದಲ್ಲಿ ದುರ್ಗೆಯನ್ನು ಪೂಜಿಸಲಾಗುತ್ತದೆ.
ದುರ್ಗಾಷ್ಟಮಿಯಂದು ದೀಪಾರಾಧನೆ ಅತ್ಯಂತ ಶ್ರೇಯಸ್ಕರ. ದುರ್ಗಾಷ್ಟಮಿಯ ದಿನ ಪಂಚ ದುರ್ಗೆಯರಾದ ಮೂಲದುರ್ಗಾ, ಜಲದುರ್ಗ, ಅಗ್ನಿದುರ್ಗಾ, ವನದುರ್ಗ, ಅಗ್ರದುರ್ಗರನ್ನು ಐದು ದೀಪಗಳಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ. ಕೊನೆಯಲ್ಲಿ ಕುಂಕುಮಾರ್ಚನೆ ಮಾಡಿ ದುರ್ಗೆಯನ್ನು ತೃಪ್ತಿ ಪಡಿಸಲಾಗುತ್ತದೆ. ಅಷ್ಟಮಿಯ ದಿನ ಸುಮಂಗಲಿಯರಿಗೆ ಶ್ರೇಷ್ಠ ದಿನ. ಈ ದಿನ ದುರ್ಗೆಯನ್ನು ಮಹಾಗೌರಿಯಾಗಿ ಆರಾಧನೆ ಮಾಡಲಾಗುತ್ತದೆ .ಶ್ರದ್ಧಾ ಭಕ್ತಿಯಿಂದ ದುರ್ಗೆಯನ್ನು ಪೂಜಿಸಿ ಬಾಗಿನ ಅರ್ಪಿಸಿ ಮಂಗಳಕರವಾದ ವಸ್ತುಗಳನ್ನು ನೀಡಲಾಗುತ್ತದೆ. ಸಂಧ್ಯಾ ಕಾಲದಲ್ಲಿ ನಡೆಯುವ ಪೂಜೆಯ ಬಳಿಕ ದುರ್ಗಾಷ್ಟಮಿ ಅಂತ್ಯವಾಗುತ್ತದೆ. ದುರ್ಗಾ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸುವ ಅದ್ಭುತ ಶಕ್ತಿ ದುರ್ಗೆ ನಮ್ಮೊಳಗಿನ ಪಾಪವನ್ನು ಕಳೆಯುವವಳಾಗಿ ಮನಸ್ಸಿಗೆ ನೆಮ್ಮದಿ ನೀಡುವ ಮಹಾತಾಯಿ. ಇಂತಹ ದುರ್ಗೆಯನ್ನು ಭಕ್ತಿಯಿಂದ ಪೂಜಿಸಿದರೆ ಬದುಕು ಸುಂದರವಾಗುತ್ತದೆ.
ದುರ್ಗಾಷ್ಟಮಿಯ ದಿನ ಕುಮಾರಿ ಪೂಜೆಯನ್ನು ಹೇಗೆ ಮಾಡಬೇಕು ?
ಪುಟ್ಟ ಮಕ್ಕಳನ್ನು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ರೂಪದಲ್ಲಿ ಪೂಜಿಸುವುದೇ ಕುಮಾರಿ ಪೂಜೆ.ದೇವಿ ಭಾಗವತದಲ್ಲಿ ಕುಮಾರಿ ಪೂಜೆಗೆ ಇದೇ ವಿಶೇಷ ಮಹತ್ವ. ಕುಮಾರಿ ಪೂಜೆಯಿಂದ ಜಗನ್ಮಾತೆಯ ಸಂಪೂರ್ಣ ಅನುಗ್ರಹ ದೊರೆಯುತ್ತದೆ . ಹೆಣ್ಣು ಮಕ್ಕಳಿಗೆ ಅಂದ ಚಂದದ ಅಲಂಕಾರ ಮಾಡಿ ಸಾಕ್ಷಾತ್ ದೇವಿಯ ಸ್ವರೂಪದಂತೆ ಇರುವ ಕಂದಮ್ಮಗಳು ಮತ್ತು ಪುಟ್ಟ ಮಕ್ಕಳಿಗೆ ಪಾದಪೂಜೆ ಮೃಷ್ಟಾನ್ನ ಭೋಜನ ಮತ್ತು ಉಡುಗೊರೆಯನ್ನು ನೀಡಲಾಗುತ್ತದೆ . ಇದು ನವರಾತ್ರಿಯ ಕುಮಾರಿ ಪೂಜೆಯ ವಿಶೇಷ. ನವರಾತ್ರಿಯಲ್ಲಿ ಕನ್ಯಾ ಪೂಜೆಗೆ ವಿಶೇಷ ಸ್ಥಾನವಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಯಾವ ದಿನವಾದರೂ ಕನ್ಯಾ ಪೂಜೆ ಮಾಡಬಹುದು. ಅದರಲ್ಲೂ ಅಷ್ಟಮಿ ಮತ್ತು ನವಮಿಯ ದಿನ ಮಾಡುವ ಕನ್ಯಾ ಪೂಜೆಗೆ ವಿಶೇಷ ಪ್ರಾಮುಖ್ಯತೆ ಇದೆ.
ದುರ್ಗಾಷ್ಟಮಿಯಂದೇ ಕುಮಾರಿ ಪೂಜೆಯ ಮಹತ್ವ ಏನು ?
ನವರಾತ್ರಿಯಲ್ಲಿ ಮಾಡುವ ಕುಮಾರಿ ಪೂಜೆ ಅತ್ಯಂತ ಶ್ರೇಷ್ಠ ಅದರಲ್ಲೂ ದುರ್ಗಾಷ್ಟಮಿಯ ದಿನ ಕುಮಾರಿ ಪೂಜೆಗೆ ಪ್ರಶಸ್ತವಾದ ದಿನ. ಈ ದಿನ ಎರಡು ವರ್ಷದಿಂದ ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಕುಮಾರಿ ಪೂಜೆಯನ್ನು ಮಾಡಲಾಗುತ್ತದೆ. ಈ ಪುಟ್ಟ ಹೆಣ್ಣು ಮಕ್ಕಳನ್ನು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ರೂಪದಲ್ಲಿ ಪೂಜಿಸಲಾಗುತ್ತದೆ. ಭವಿಷ್ಯ ಪುರಾಣ ಮತ್ತು ದೇವೀ ಭಾಗವತದಲ್ಲಿ ಕುಮಾರಿ ಪೂಜೆಗೆ ವಿಶೇಷ ಮಹತ್ವ ಇದೆ. ಕನ್ಯಾ ಪೂಜೆಯ ಹೊರತು ನವರಾತ್ರಿ ಪೂರ್ಣವಾಗುವುದಿಲ್ಲ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಪುರಾಣಗಳಲ್ಲೂ ಕುಮಾರಿ ಪೂಜೆಯ ಬಗ್ಗೆ ಉಲ್ಲೇಖವಿದೆ. ಮಹಾಭಾರತದಲ್ಲಿ ಅರ್ಜುನ ಕೂಡ ಕುಮಾರಿ ಪೂಜೆಯನ್ನು ಮಾಡಿದ್ದನಂತೆ. ರಾಮಕೃಷ್ಣ ಪರಮಹಂಸರು ಪುಟ್ಟ ಶಾರದಾ ಮಾತೆಯನ್ನು ಸಾಕ್ಷಾತ್ ಕಾಳಿಯ ಅವತಾರ ಎಂದಿದ್ದರು. ಸ್ವಾಮಿ ವಿವೇಕಾನಂದರು 1902ರಲ್ಲಿ ಕೊಲ್ಕತ್ತಾದ ಬೇಲೂರು ಮಠದಲ್ಲಿ ಪೂಜೆ ನೆರವೇರಿಸಿದ್ದರು. ಶಾರದಾ ಮಾತೆಯ ಸಮ್ಮುಖದಲ್ಲಿ 9 ಮಾತೆಯ ಪೂಜೆ ನೆರವೇರಿಸಿದ್ದರು. ಕುಮಾರಿಯರಿಗೆ ಪೂಜೆ ಸಲ್ಲಿಸಿದರು ಮತ್ತು ಅವರ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದರು. ಪುಟ್ಟ ಹೆಣ್ಣು ಮಕ್ಕಳನ್ನು ವಯಸ್ಸಿಗೆ ತಕ್ಕಂತೆ ಬೇರೆ ಬೇರೆ ಹೆಸರುಗಳಿಂದ ಪೂಜಿಸಲಾಗುತ್ತದೆ.ಈ ಪುಟ್ಟ ಹೆಣ್ಣು ಮಕ್ಕಳು ಸಾಕ್ಷಾತ್ ದೇವಿಯರ ಪ್ರತಿರೂಪ.
ಪುಟ್ಟ ಹೆಣ್ಣು ಮಕ್ಕಳ ವಯಸ್ಸಿಗೆ ತಕ್ಕಂತೆ ವಿವಿಧ ರೂಪಗಳಿಂದ ಪೂಜಿಸಲಾಗುತ್ತದೆ. ಎರಡು ವರ್ಷದ ಹೆಣ್ಣು ಬಾಲಕಿಗೆ ಕುಮಾರಿ ಎಂದು ಪೂಜಿಸಲಾಗುತ್ತದೆ, ಮೂರು ವರ್ಷದ ಬಾಲಕಿ ತ್ರಿಮೂರ್ತಿ, ನಾಲ್ಕು ವರ್ಷದ ಬಾಲಕಿ ಕಲ್ಯಾಣಿ, ಐದು ವರ್ಷದ ಬಾಲಕಿ ರೋಹಿಣಿ, ಆರು ವರ್ಷದ ಬಾಲಕಿ ಕಾಳಿಕಾ, 7 ವರ್ಷದ ಬಾಲಕಿ ಚಂಡಿಕಾ, 8 ವರ್ಷದ ಬಾಲಕಿ ಶಾಂಭವಿ, 9 ವರ್ಷದ ಬಾಲಕಿ ದುರ್ಗಾ, 10 ವರ್ಷದ ಬಾಲಕಿಯನ್ನು ಸುಭದ್ರ ಎಂದು ಪೂಜಿಸಲಾಗುತ್ತದೆ.ಕುಮಾರಿ ಪೂಜೆಯ ಸಂದರ್ಭದಲ್ಲಿ ಪುಟ್ಟ ಹೆಣ್ಣು ಮಕ್ಕಳನ್ನು ಮಹಾ ದುರ್ಗೆಯ ರೂಪದಲ್ಲಿ ಅಲಂಕರಿಸಲಾಗುತ್ತದೆ. ಅಂದ ಚೆಂದವಾಗಿ ತಯಾರಾದ ಪುಟ್ಟ ಪುಟ್ಟ ಹೆಣ್ಣು ಮಕ್ಕಳು ಮುದ್ದು ದುರ್ಗೆಯ ರೂಪದಲ್ಲಿ ಸಾಕ್ಷಾತ್ ದೇವಿಯ ಹಾಗೆ ಕಾಣುತ್ತಾರೆ. ಕುಮಾರಿಯರ ಅಲಂಕಾರ ಅತ್ಯಂತ ಸುಂದರ. ಪ್ರಾತಃಕಾಲದಲ್ಲಿ ಗಂಗಾಪೂಜೆಯನ್ನು ಮಾಡಬೇಕು, ಗಂಗೆಯನ್ನು ಪೂಜಿಸಿದ ನೀರಿನಲ್ಲಿ ಪುಟ್ಟ ಹೆಣ್ಣು ಮಕ್ಕಳಿಗೆ ಅಭ್ಯಂಜನ ಸ್ನಾನ ಮಾಡಿಸಬೇಕು. ಮಕ್ಕಳಿಗೆ ಕೆಂಪು ಬಣ್ಣದ ಸೀರೆ ಉಡಿಸಿ ಅಥವಾ ವಸ್ತ್ರ ತೊಡಿಸಬೇಕು. ಹಣೆಗೆ ಕುಂಕುಮವನ್ನು ಇಡಬೇಕು. ಒಡವೆಗಳಿಂದ ಅಲಂಕರಿಸಬೇಕು, ಬಳೆಯನ್ನು ತೊಡಿಸಿ ಹೂವನ್ನು ಮುಡಿಸಬೇಕು, ಕುಮಾರಿ ಪೂಜೆ ಎನ್ನುವುದು ಒಂದು ಧಾರ್ಮಿಕ ಆಚರಣೆ ಕುಮಾರಿ ಪೂಜೆ. ನವರಾತ್ರಿಯ ಎರಡು ದಿನಗಳಲ್ಲಿ ಮಾಡುವ ಕುಮಾರಿ ಪೂಜೆಗೆ ವಿಶೇಷ ಮಹತ್ವ ಇದೆ.ಈ ದಿನಗಳಲ್ಲಿ ಕುಮಾರಿ ಪೂಜೆ ಮಾಡಿದರೆ ದುರ್ಗೆಯ ಸಂಪೂರ್ಣ ಅನುಗ್ರಹವಾಗುತ್ತದೆ.
ದುರ್ಗಾಷ್ಟಮಿಯ ದಿನ ಸಾಕ್ಷಾತ್ ದುರ್ಗೆಯೇ ಮಕ್ಕಳ ರೂಪದಲ್ಲಿ ಮನೆಗೆ ಬರುತ್ತಾಳೆ .ಕುಮಾರಿ ಪೂಜೆಗೆ ಸಂತೃಪ್ತರಾಗುವ ಜಗನ್ಮಾತೆ ಯಾವ್ಯಾವ ಫಲಗಳನ್ನು ನೀಡುತ್ತಾಳೆ ?
ನವರಾತ್ರಿಯ ಅಷ್ಟಮಿ ದಿನದ ಕನ್ಯಾ ಪೂಜೆಗೆ ವಿಶೇಷ ಮಹತ್ವವಿದೆ .ಈ ದಿನ ಕನ್ಯೆಯರನ್ನು ದೇವಿ ಸ್ವರೂಪವೆಂದು ಭಾವಿಸಿ ಪೂಜೆ ಮಾಡುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ. ಕುಮಾರಿ ಪೂಜೆ ಮಾಡುವವರು ಮನೆಯಲ್ಲಿ ಪುಟ್ಟ ಮಕ್ಕಳು ಇಲ್ಲದಿದ್ದಲ್ಲಿ ನೆರೆಹೊರೆಯ ಅಥವಾ ಪರಿಚಯಸ್ಥರ ಮನೆಯ ಪುಟ್ಟ ಹೆಣ್ಣು ಮಕ್ಕಳಿಗೆ ಪೂಜೆ ಸಲ್ಲಿಸಬಹುದು. ತಮ್ಮ ಶಕ್ತಿಯ ಅನುಸಾರ ಎಷ್ಟು ಹೆಣ್ಣು ಮಕ್ಕಳನ್ನು ಬೇಕಾದರೂ ಆಹ್ವಾನಿಸಿ ಪೂಜೆ ಸಲ್ಲಿಸಬಹುದು. ಕುಮಾರಿ ಪೂಜೆ ಮಾಡುವವರು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಪೂಜೆ ಸಲ್ಲಿಸಬೇಕು. ಮನೆಗೆ ಬರುವ ಕುಮಾರಿಯರನ್ನು ದುರ್ಗೆಯ ಸ್ವರೂಪ ಎಂದು ಭಾವಿಸಬೇಕು. ಶ್ರದ್ಧಾಭಕ್ತಿ ಮತ್ತು ಪ್ರೀತಿಯಿಂದ ಕುಮಾರಿ ಪೂಜೆ ಮಾಡಿದರೆ ಒಳಿತಾಗುತ್ತದೆ. ಕುಮಾರಿ ಪೂಜೆ ಮಾಡುವ ವಿಧಾನ ಅತ್ಯಂತ ವಿಶಿಷ್ಟ . ಕುಮಾರಿ ಪೂಜಾ ವಿಧಾನ, ಕುಮಾರಿಯರನ್ನು ಮನೆಗೆ ಪ್ರೀತಿಯಿಂದ ಬರಮಾಡಿಕೊಳ್ಳಬೇಕು, ಕುಮಾರಿಯರನ್ನು ಕುಳಿತುಕೊಳ್ಳುವ ಪೀಠದ ಮುಂಭಾಗದಲ್ಲಿ ದೀಪವನ್ನು ಇಡಬೇಕು, ಅಲಂಕರಿಸಿದ ಪೀಠದ ಮೇಲೆ ಮಕ್ಕಳನ್ನು ಕೂರಿಸಿ ಮಕ್ಕಳ ಪಾದ ತೊಳೆಯಬೇಕು, ಪುಟ್ಟ ಪಾದಗಳಿಗೆ ಅರಿಶಿನ-ಕುಂಕುಮವನ್ನು ಇಡಬೇಕು. ಆರತಿ ಬೆಳಗಬೇಕು, ಮಕ್ಕಳನ್ನು ಪೂಜಿಸುವಾಗ ಮನೋಕಾಮನೆಗಳನ್ನು ಮನಸ್ಸಿನಲ್ಲಿ ಹೇಳಿಕೊಂಡು ಮಕ್ಕಳ ಪಾದಗಳಿಗೆ ಭಕ್ತಿಯಿಂದ ನಮಸ್ಕರಿಸಿ, ಆಶೀರ್ವಾದ ಪಡೆಯಬೇಕು.
ಕುಮಾರಿ ಪೂಜೆಗೆ ನೈವೇದ್ಯ
ಕುಮಾರಿ ಪೂಜೆಯಲ್ಲಿ ನೈವೇದ್ಯಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಮಕ್ಕಳಿಗೆ ಇಷ್ಟವಾದ ಭೋಜನವನ್ನು ತಯಾರಿಸಿ ಊಟ ಮಾಡಿಸಬೇಕು. ಮಕ್ಕಳಿಗೆ ಸಿಹಿ ತಿಂಡಿ ಮತ್ತು ಆಹಾರವನ್ನು ಕೊಡಬೇಕು, ಮಕ್ಕಳಿಗೆ ಭೋಜನ ಆಗುವವರೆಗೂ ಮನೆಯವರು ಊಟ ಮಾಡುವಂತಿಲ್ಲ, ಕುಮಾರಿ ಪೂಜೆಯಲ್ಲಿ ಉಡುಗೊರೆಯ ಪ್ರಾಮುಖ್ಯತೆ, ತಮ್ಮ ಯೋಗ್ಯತೆಯ ಅನುಸಾರ ಪುಟ್ಟ ಮಕ್ಕಳಿಗೆ ಉಡುಗೊರೆ ಕೊಡಬೇಕು. ಆಟಿಕೆಗಳು, ಪುಸ್ತಕ, ಪೆನ್ನು, ಅಲಂಕಾರದ ವಸ್ತುಗಳು, ಬಟ್ಟೆ, ಸಿಹಿ ತಿಂಡಿ, ಚಾಕ್ಲೇಟ್ ಕೊಡಬಹುದು. ಉಡುಗೊರೆಯ ಜೊತೆಗೆ ಕಾಣಿಕೆಯನ್ನು ನೀಡಬೇಕು. ಕುಮಾರಿ ಪೂಜಾ ಫಲಗಳು ಅನೇಕ. ಆದರೆ ನವರಾತ್ರಿಯಲ್ಲಿ ಕುಮಾರಿ ಪೂಜೆ ಮಾಡುವುದರಿಂದ ನವ ದುರ್ಗೆಯರ ಕೃಪೆ ಪ್ರಾಪ್ತಿಯಾಗುತ್ತದೆ. ಇಷ್ಟಾರ್ಥ ಸಿದ್ಧಿಯಾಗುತ್ತದೆ, ಶೀಘ್ರ ವಿವಾಹ ಮತ್ತು ಸಂತಾನ ಪ್ರಾಪ್ತಿಯಾಗುತ್ತದೆ, ಕುಮಾರಿ ಪೂಜೆಯಿಂದ ಸಕಲ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ, ದೇವಿಯ ಆಶೀರ್ವಾದದಿಂದ ವಿಪತ್ತುಗಳು ದೂರವಾಗುತ್ತವೆ, ಧನ, ಧಾನ್ಯ ಸಂಪತ್ತು ವೃದ್ಧಿಯಾಗುತ್ತದೆ. ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ, ಪುಟ್ಟ ಮಕ್ಕಳು ದೇವರ ಸಮಾನ ,ಮುಗ್ದ ಮನಸ್ಸಿನ ಮಕ್ಕಳನ್ನು ಪೂಜಿಸಿದರೆ ದುರ್ಗೆಯನ್ನು ಪೂಜಿಸುವ ದುರ್ಗಾಷ್ಟಮಿಯಂದು ಕುಮಾರಿ ಪೂಜೆ ಮಾಡಿದರೆ ಸಾಕ್ಷಾತ್ ದುರ್ಗೆ ಮಕ್ಕಳ ರೂಪದಲ್ಲಿ ಮನೆಗೆ ಬಂದು ಆಶೀರ್ವದಿಸುತ್ತಾಳೆ. ನಿಮ್ಮ ಕಷ್ಟಗಳನ್ನು ದೂರ ಮಾಡುತ್ತಾಳೆ.
- ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter WhatsApp