-->

Mudras health benefits , ಮುದ್ರೆ ಆರೋಗ್ಯ

ಆರೋಗ್ಯಪೂರ್ಣ ಬದುಕಿಗೆ ಮುದ್ರೆಗಳು ಅಗತ್ಯ. ಆದ್ದರಿಂದ ನಾನಾ ಬಗೆಯ ಮುದ್ರೆಗಳನ್ನು ಮಾಡುವ ಅಭ್ಯಾಸ ನಿತ್ಯದ ಜೀವನಶೈಲಿಯಲ್ಲಿರಲಿ.


ಮುದ್ರೆಗಳನ್ನು ಮಾಡುವುದಾದರೆ ಸುಮಾರು 45 ನಿಮಿಷಗಳ ಕಾಲ ಮಾಡಬೇಕು. ಯಾವುದೇ ಮುದ್ರಾ ಅಭ್ಯಾಸದ ನಂತರ 15 ನಿಮಿಷಗಳ ಕಾಲ ಪ್ರಾಣ ಮುದ್ರೆಯನ್ನು ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗುವುದು. ಮುದ್ರೆಗಳನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಜಾಗದಲ್ಲಾದರೂ ಮಾಡಬಹುದು.

 
ಪೃಥ್ವಿ ಮುದ್ರೆ:
ಉಂಗುರ ಬೆರಳ ತುದಿಯನ್ನು ಹೆಬ್ಬೆರಳ ತುದಿಗೆ ಜೋಡಿಸಿದಾಗ ಪೃಥ್ವಿ ಮುದ್ರೆ ರೂಪುಗೊಳ್ಳುವುದು. ಇದರ ಲಾಭಗಳೆಂದರೆ ಮೂಳೆ, ಮಾಂಸ, ಚರ್ಮ, ನಾಡಿ ರೋಮಗಳ ಸಮತೋಲನ ಕಾಪಾಡುತ್ತದೆ. ಮೂಗಿನ ತೊಂದರೆಗಳನ್ನು ನಿವಾರಿಸುವುದು. ಶರೀರದ ತೂಕ ಎತ್ತರಕ್ಕೆ ಸರಿಹೊಂದುವಂತೆ ಮಾಡುತ್ತದೆ. ಜೀರ್ಣಕ್ರಿಯೆ ಮತ್ತು ವಿಸರ್ಜನಾ ಕ್ರಿಯೆಗಳು ಸುಗಮವಾಗುತ್ತವೆ.

ಜಲನಾಶಕ ಮುದ್ರೆ: 

ಕಿರುಬೆರಳನ್ನು ಹೆಬ್ಬರಳ ಬುಡಕ್ಕೆ ತಾಗಿಸಿ ಹೆಬ್ಬರಳನ್ನು ಕಿರುಬೆರಳ ಮೇಲಿಟ್ಟರೆ ಅದು ಜಲನಾಶಕ ಮುದ್ರೆ. ಇದರಿಂದ ನೀರಿನಿಂದ ಉಂಟಾಗುವ ಅತಿ ಮೂತ್ರ ಪ್ರವೃತ್ತಿ, ಅತಿಯಾಗಿ ಬೆವರುವುದು ಕಡಿಮೆಯಾಗುವುದು. ಕಿರುಬೆರಳ ಬುಡಕ್ಕೆ ಹೆಬ್ಬೆರಳ ತುದಿಯನ್ನು ತಾಗಿಸಿದರೆ ಅದು ಜಲವೃದ್ಧಿ ಮುದ್ರೆಯಾಗಿ ರೂಪಗೊಳ್ಳುವುದು.

ಸೂರ್ಯ ಮುದ್ರೆ: 

ಉಂಗುರದ ಬೆರಳನ್ನು ಹೆಬ್ಬೆರಳ ಬುಡಕ್ಕೆ ತಾಗಿಸಿ ಹೆಬ್ಬೆರಳನ್ನು ಉಂಗುರದ ಬೆರಳ ಮೇಲಿರಿಸಿದರೆ ಸೂರ್ಯ ಮುದ್ರೆಯಾಗುವುದು.

ಇದರಿಂದ ದೇಹದ ಉಷ್ಣತೆ ಹೆಚ್ಚಿ ಶರೀರದ ಕೊಬ್ಬು ಕರಗುವುದು, ಕಫ ವಿಕಾರಗಳಾದ ಶೀತ, ಕೆಮ್ಮು, ದಮ್ಮು ಮತ್ತು ಮೂಗಿಗೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ.
 

ವಾಯು ಮುದ್ರೆ :

 ಜಲ, ಪೃಥ್ವಿ ಮತ್ತು ಆಕಾಶ ಮುದ್ರೆಗಳನ್ನು ಮಾಡುವಾಗ ಆಯಾ ತತ್ವಗಳ ಬೆರಳ ತುದಿಗಳಿಗೆ ಹೆಬ್ಬರಳ ತುದಿಯನ್ನು ತಾಗಿಸುವುದು ಕ್ರಮವಾಗಿತ್ತು. ಆದರೆ ವಾಯು ಮುದ್ರೆಯಲ್ಲಿ ತೋರುಬೆರಳ ತುದಿಯನ್ನು ಹೆಬ್ಬೆರಳ ಬುಡಕ್ಕೆ ತಾಗಿಸಿ ಅದರ ಮೇಲೆ ಹೆಬ್ಬೆರಳನ್ನು ಮೇಲಿರಿಸಲಾಗುತ್ತದೆ. ಅತಿಯಾದ ವಾಯುವಿನಿಂದ ಶರೀರದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ವಾಯುಮುದ್ರೆಯಿಂದ ಸೊಂಟನೋವು, ಬೆನ್ನು ನೋವು, ಸಂಧಿವಾತ, ಸಯಾಟಿಕ, ಸ್ಪಾಂಡಿಲೈಟಿಸ್‌, ಅತಿಯಾದ ಆಕಳಿಕೆ, ತೇಗು ಅಧೋವಾಯು ಸಮಸ್ಯೆ ಮತ್ತು ಹೊಟ್ಟೆ ಉಬ್ಬರ ಪರಿಹಾರವಾಗುವವು.
 

ಪ್ರಾಣ ಮುದ್ರೆ :

ಹೆಬ್ಬೆರಳಿನ ತುದಿಗೆ ಉಂಗುರದ ಮತ್ತು ಕಿರುಬೆರಳಿನ ತುದಿಗಳನ್ನು ಸ್ಪರ್ಶಿಸಿದಾಗ ಅದು ಪ್ರಾಣ ಮುದ್ರೆಯಾಗುತ್ತದೆ. ಇದರಿಂದ ಕಣ್ಣಿನ ಸಮಸ್ಯೆಗಳು ದೂರವಾಗುವವು. ರೋಗ ನಿರೋಧಕ ಶಕ್ತಿ ವೃದ್ಧಿಸುವುದು. ದೇಹದಲ್ಲಿ ಚೈತನ್ಯ ಶಕ್ತಿ ಹೆಚ್ಚುವುದು ಮತ್ತು ದಣಿವು ದೂರವಾಗುವುದು
 

ಅಪಾನ ಮುದ್ರೆ:

ಉಂಗುರದ ಬೆರಳು ಮತ್ತು ಮಧ್ಯದ ಬೆರಳ ತುದಿಗಳನ್ನು ಹೆಬ್ಬೆರಳ ತುದಿಗೆ ಸಂಧಿಸಿದಾಗ ಅಪಾನ ಮುದ್ರೆಯಾಗಿ ರೂಪಗೊಳ್ಳುವುದು. ಇದರ ಉಪಯೋಗಗಳೆಂದರೆ ಜೀರ್ಣ ಮತ್ತು ವಿಸರ್ಜನಾ ಕ್ರಿಯೆಗಳು ಸಲೀಸಾಗಿ ನಡೆಯುತ್ತವೆ. ಮಧುಮೇಹ ಮತ್ತು ಶುಕ್ರದೋಷಗಳು ಹತೋಟಿಗೆ ಬರುವವು. ಮೂಲವ್ಯಾಧಿ ಮತ್ತು ಸ್ತ್ರಿಯರ ಮುಟ್ಟಿನ ತೊಂದರೆಗಳು ನಿವಾರಣೆಯಾಗುತ್ತವೆ.
 

ವ್ಯಾನ ಮುದ್ರೆ: 

ಮಧ್ಯದ ಬೆರಳು ಮತ್ತು ತೋರು ಬೆರಳುಗಳ ತುದಿಗಳನ್ನು ಹೆಬ್ಬೆರಳ ತುದಿಗೆ ಸಂಯೋಜಿಸಿದಾಗ ಉಂಟಾಗುವ ಮುದ್ರೆಯೆ ವ್ಯಾನ ಮುದ್ರೆ. ಇದು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಇದರಿಂದ ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ರೋಗಗಳು ನಿವಾರಣೆಯಾಗುವವು.
 

ಸಮಾನ ಮುದ್ರೆ :

ಕಿರುಬೆರಳು, ಉಂಗುರುದ ಬೆರಳು, ನಡುಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ಹೆಬ್ಬೆರಳ ತುದಿಗೆ ಜೋಡಿಸುವುದರಿಂದ ಸಮಾನ ಮುದ್ರೆ ಎನ್ನಿಸುವುದು. ಇದರ ಉಪಯೋಗಗಳೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಅಹಾರವನ್ನು ಜೀರ್ಣಿಸಲು ಸಹಾಯ ಮಾಡಿ ಹಾಗೂ ಮಲ ಮೂತ್ರಾದಿಗಳನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ.

ಜ್ಞಾನಮುದ್ರೆ: 

ತೋರು ಬೆರಳ ತುದಿಯನ್ನು ಹೆಬ್ಬೆರಳ ತುದಿಗೆ ಸಂಧಿಸಿದಾಗ ಜ್ಞಾನ ಮುದ್ರೆಯುಂಟಾಗುವುದು. ಇದರಿಂದ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚುವುದು. ಮಕ್ಕಳ ಹಟಮಾರಿತನ, ದುಶ್ಚಟಗಳು, ಭಯ ಮತ್ತು ಉದ್ವೇಗದಂತಹ ಮಾನಸಿಕ ರೋಗಗಳು ಹತೋಟಿಗೆ ಬರುತ್ತವೆ.

Mudras health benefits , ಮುದ್ರೆ ಆರೋಗ್ಯ



ಯೋನಿ ಮುದ್ರೆ: 

ಎರಡು ಕೈಗಳ ಬೆರಳುಗಳನ್ನು ಒಂದಕ್ಕೊಂದು ಜೋಡಿಸಿಕೊಂಡು ಹೆಬ್ಬೆರಳುಗಳ ತುದಿಗಳನ್ನು ಮತ್ತು ತೋರುಬೆರಳುಗಳ ತುದಿಗಳನ್ನು ಪರಸ್ಪರ ಸ್ಪರ್ಶಿಸಿದಾಗ ಯೋನಿ ಮುದ್ರೆ ವಿನ್ಯಾಸವಾಗುವುದು. ಹೆಬ್ಬೆರುಳುಗಳ ತುದಿಗಳು ಮೇಲೆ ಮುಖ ಮಾಡಿರುವಂತೆ ಮತ್ತು ತೋರುಬೆರಳುಗಳ ತುದಿಗಳು ಕೆಳಮುಖ ಮಾಡಿರುವಂತೆ ಇರಬೇಕು. ಇದರ ಉಪಯೋಗವೆಂದರೆ ಗರ್ಭಾಶಯದ ಮೇಲೆ ಉತ್ತಮ ಪರಿಣಾಮ ಬೀರುವುದು. ಸ್ತ್ರೀಯರ ಮುಟ್ಟಿನ ಸಮಯದಲ್ಲಿನ ನೋವು ನಿವಾರಿಸುವುದು.

ಹೃದಯ ಮುದ್ರೆ : 

ತೋರುಬೆರಳ ತುದಿಯನ್ನು ಹೆಬ್ಬೆರಳ ಬುಡಕ್ಕೆ ತಾಗಿಸಿ ನಡುಬೆರಳು ಮತ್ತು ಉಂಗುರ ಬೆರಳ ತುದಿಗಳಿಗೆ ಹೆಬ್ಬೆರಳ ತುದಿಯನ್ನು ಸಂಧಿಸಿ ಮತ್ತು ಕಿರುಬೆರಳನ್ನು ನೇರವಾಗಿರಿಸಿದರೆ ಅದು ಹೃದಯ ಮುದ್ರೆ ಎನ್ನಿಸುವುದು. ಇದಕ್ಕೆ ಮೃತ ಸಂಜೀವಿನಿ ಮುದ್ರೆ ಎಂದು ಕರೆಯುವರು. ಮಾನಸಿಕ ಒತ್ತಡ, ಹೃದಯದ ತೊಂದರೆಗಳು ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆಗಳನ್ನು ನಿವಾರಣೆ ಮಾಡುವುದು.


ಕುಬೇರ ಮುದ್ರೆ: 

ಹೆಬ್ಬೆರಳ ತುದಿಗೆ ತೋರು ಬೆರಳು ಮತ್ತು ನಡುಬೆರಳ ತುದಿಗಳನ್ನು ಸಂಧಿಸಿ ಉಂಗುರ ಮತ್ತು ಕಿರು ಬೆರಳನ್ನು ಅಂಗೈ ಮಧ್ಯದಲ್ಲಿರಿಸಿದರೆ ಅದು ಕುಬೇರ ಮುದ್ರೆಯಾಗುವುದು. ಇದರಿಂದ ರಕ್ತದ ಒತ್ತಡ ಕಡಿಮೆಯಾಗುವುದು, ಮೂತ್ರಕೋಶದ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿಂದ ದೂರ ಇರಬಹುದು.



–>