-->

25 practices our elders shared for prosperity and good culture

ಮನೆಯ ಸಮೃದ್ಧಿ ಮತ್ತು ಸಾತ್ವಿಕತೆಗೆ ಮಕ್ಕಳಿಗೆ ಸಂಸ್ಕಾರಕ್ಕಾಗಿ ಕೆಲವು ಹಿರಿಯರ ಸಂಪ್ರದಾಯಗಳು

1) ಓದುತ್ತಿರುವ ಪುಸ್ತಕವನ್ನು ಯಾರಾದರೂ ಕರೆದಾಗ ಹಾಗೆಯೇ ಬಿಟ್ಟು ಹೋಗಬೇಡಿ.ಪುಸ್ತಕಗಳನ್ನು ಮಡಚಿಟ್ಟು ಸರಿಯಾದ ಜಾಗದಲ್ಲಿ ಇರಿಸಿ ಹೋಗಿ. ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರು.

2) ಸಂಧ್ಯಾಕಾಲಗಳಲ್ಲಿ ಯಾರೊಂದಿಗೂ ವೈಮನಸ್ಸು; ಕೆಟ್ಟ ವಿಚಾರ; ಮಾತುಕತೆ ಬೇಡ. ವಾತಾವರಣದಲ್ಲಿ ವಾಸ್ತು ಅಂದರೆ ಅಸ್ತು ದೇವತೆಗಳು ಹಾಗೆಯೇ ಆಗಲಿ ಎಂದು ಅನುಗ್ರಹಿಸುತ್ತವೆ.

3) ಸಾಧ್ಯವಾದಷ್ಟು ದೇವರ ಮನೆಯಲ್ಲಿ ಶುಚಿತ್ವವಿರಲಿ ಅಗತ್ಯಕ್ಕಿಂತ ಇತರೇ ಯಾವುದೇ ವಸ್ತುಗಳನ್ನು ಇಡಬೇಡಿ.

4) ದೇವರ ಉತ್ಸವ ಮತ್ತು ಆರತಿಗಳು ಇದ್ದಲ್ಲಿ ಎದ್ದು ನಿಂತು ಗೌರವವನ್ನು ತೋರಿಸಿ. ಧಾರ್ಮಿಕ ಆಚರಣೆಗಳಲ್ಲಿ ಭಾವನೆಗೆ ಅತ್ಯಂತ ದೊಡ್ಡ ಮಹತ್ವ.

5) ಯಾವುದೇ ಜಾತಿ ಪಂಗಡದವರಾಗಿದ್ದರೂ ಎಲ್ಲಾ ಧರ್ಮಗಳ ದೈವಿಕ ವಿಚಾರವನ್ನು ಗೌರವಿಸಿ.

6 )ಕಿರಿಯರು ಅಥವಾ ಮಕ್ಕಳು ಕೇಳುವ ಯಾವುದೇ ದೈವಿಕ ವಿಚಾರಗಳಿಗೆ ಹಾರಿಕೆಯ ಉತ್ತರ ನೀಡಬೇಡಿ. ಸಂಸ್ಕಾರಗಳನ್ನು ನಮ್ಮಿಂದ ನೋಡಿ ತಿಳಿದು ಕಲಿಯುತ್ತವೆ ಮಕ್ಕಳು.

7) ಸುಮ್ಮಸುಮ್ಮನೆ ಯಾವುದೇ ಗಿಡ-ಮರ ಕ್ರಿಮಿ-ಕೀಟ ಪಶುಪಕ್ಷಿಗಳಿಗೆ ಹಿಂಸಿಸಬೇಡಿ. ಮನುಷ್ಯನಿಗಿಂತ ಮೊದಲೇ ಅವುಗಳು ಭೂಮಿಯಲ್ಲಿ ಇವೆ.

8) ದೀಪ ಹಾರಿ ಹೋಗಿದೆ ಅಕ್ಕಿ ಖಾಲಿಯಾಗಿದೆ ಈ ರೀತಿ ಮಾತುಗಳನ್ನು ಮನೆಯಲ್ಲಿ ಹೇಳಬಾರದು. ದೀಪ ಸಣ್ಣದಾಗಿದೆ. ಅಕ್ಕಿ ತರಬೇಕು ಈ ರೀತಿ ಮಾತುಗಳನ್ನು ಮಕ್ಕಳಲ್ಲಿ ಹೇಳುವಂತೆ ತಿಳಿಸಿ.

9) ರಾತ್ರಿ ಊಟವಾದ ಮೇಲೆ ಊಟದ ಪಾತ್ರೆಗಳನ್ನು ಎಲ್ಲಾ ಖಾಲಿಮಾಡಿ ಸಾರಿಸಿ ಇಡುವುದು ಶುಭವಲ್ಲ. ಕೊನೆಯಪಕ್ಷ ಬೆಲ್ಲ-ಅವಲಕ್ಕಿ ಯನ್ನಾದರೂ ಪಾತ್ರೆಯಲ್ಲಿ ಇರಿಸಿ.

10) ದೇವರ ಬಗೆಗೆ ವಿಶೇಷ ಭಯ-ಭೀತಿಯನ್ನು ಮಕ್ಕಳಲ್ಲಿ ಉಂಟು ಮಾಡಬೇಡಿ. ದೇವರಷ್ಟು ಹತ್ತಿರದವರು ನಮಗೆ ಯಾರು ಇಲ್ಲ.

11) ಪ್ರತಿ ತಿಂಗಳಲ್ಲಿ ಬರುವ ಹಬ್ಬ ಹರಿದಿನಗಳ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆ ಮಕ್ಕಳಲ್ಲಿ ಬೆಳೆಸಿ.

12) ಸಾಧ್ಯವಾದಷ್ಟು ಮುಂಜಾನೆ ಅಥವಾ ಊಟಕ್ಕೆ ಮೊದಲು ಕಾಗೆಗಳಿಗೆ-ಪಕ್ಷಿಗಳಿಗೆ ಆಹಾರ ನೀಡುವ ಕ್ರಮ ಬೆಳೆಸಿಕೊಳ್ಳಿ.13) ಮನೆಯಲ್ಲಿ ಕುಡಿಯುವ ನೀರನ್ನು ಪ್ರತಿನಿತ್ಯ ಬದಲಾವಣೆ ಮಾಡಿ (ಸ್ಟೀಲ್ ಪಾತ್ರೆಯಲ್ಲಿ ಇದ್ದರೆ). ಇಲ್ಲವಾದಲ್ಲಿ ಮಣ್ಣಿನ -ತಾಮ್ರದ ಪಾತ್ರೆಯಲ್ಲಿ ಇರಿಸಿ.

14) ಬೆಳಿಗ್ಗೆ ಸ್ನಾನವಾದ ಮೇಲೆ ಮಕ್ಕಳಿಗೆ ದೇವರಕೋಣೆಯಲ್ಲಿ ನಿಂತು ಪ್ರಾರ್ಥನೆ ಮಾಡುವುದನ್ನು ಹೇಳಿಕೊಡಿ. ಮಕ್ಕಳ ಪ್ರಾರ್ಥನೆಗಳು ಬಹುಬೇಗ ಫಲ ಕೊಡುತ್ತವೆ.

15) ಪೂಜೆ ಪುರಸ್ಕಾರ ಗಳಲ್ಲಿ ಮನೆಯ ಹಿರಿಯರನ್ನು ಮುಂದೆ ನಿಲ್ಲಿಸಿ ಪ್ರಾರ್ಥನೆ ಮಾಡಿಸಿ. ಹಿರಿಯರಿಂದ ಪ್ರಸಾದ ಸ್ವೀಕರಿಸಿ. ಇದು ನಮ್ಮ ಸನಾತನ ಧರ್ಮ.

16) ಕುಟುಂಬದ ಶುಭಕಾರ್ಯಗಳಲ್ಲಿ ಸಾಧ್ಯವಾದಷ್ಟು ಭಾಗವಹಿಸಲು ಪ್ರಯತ್ನ ಮಾಡಿ.( ಭಿನ್ನಾಭಿಪ್ರಾಯಗಳು ಯಾವಾಗಲೂ ಇರಬಹುದು)

17) ಮಕ್ಕಳಿಗೆ ಕುಟುಂಬದ ಸರ್ವ ಸದಸ್ಯರ ಪರಿಚಯ ಮಾಡಿಕೊಡಿ. ಕುಟುಂಬದ ವಂಶವೃಕ್ಷದ ದಾಖಲೆ ಮಾಡಿ ಇಡಿ.

18) ದೇವರಿಗೆ ಪ್ರಾರ್ಥನೆಗೆ ಮತ್ತು ಬೇರೆಯವರಿಗೆ ದಾನಕ್ಕೆ ತೆಂಗಿನಕಾಯಿ ಕೊಡುವಾಗ ಅದರ ಜುಟ್ಟಿನ ಭಾಗ ನಿಮ್ಮ ದಿಕ್ಕಿನಲ್ಲಿ ಇರಲಿ. ಇದೇ ರೀತಿ ಬಾಳೆಹಣ್ಣು ಮತ್ತು ವೀಳ್ಯದಲೆಯ ತುದಿಭಾಗವೂ ಕೂಡ.

19) ತೆಂಗಿನಕಾಯಿ ಒಡೆದ ಭಾಗದಲ್ಲಿ ಕಣ್ಣುಗಳಿರುವ ಭಾಗವನ್ನು ಬೇರೆಯವರಿಗೆ ಕೊಡಬೇಕು. (ಬ್ರಾಹ್ಮಣರಿಗೆ ಕೊಡುವಾಗ)

20) ಪೂರ್ಣ ಕತ್ತಲೆ ಇರುವ ಕೋಣೆಯಲ್ಲಿ ಮಲಗಬಾರದು. ಸಣ್ಣ ಬೆಳಕಾದರೂ ಉರಿಯುತ್ತಿರಬೇಕು.

21) ತಟ್ಟೆಯಲ್ಲಿ ಮೊದಲು ಅನ್ನವನ್ನು ಹಾಕಬಾರದು ಯಾವುದಾದರೂ ಪಲ್ಯ ;ಉಪ್ಪು ಇತರೆ ಖಾದ್ಯವನ್ನಾದರೂ ಬಳಸಿಕೊಂಡು ನಂತರ ಅನ್ನವನ್ನು ಹಾಕಿಕೊಳ್ಳಬೇಕು.

22) ದೇವರ ಕೋಣೆಯ ಎದುರು ಕಾಲು ಬಿಡಿಸಿ ಮಲಗುವುದು ಅಥವಾ ಕಾಲು ಬಿಡಿಸಿ ಕುಳಿತುಕೊಳ್ಳುವುದು ಅಥವಾ ದೇವರಿಗೆ ನೇರವಾಗಿ ಬೆನ್ನುಹಾಕಿ ಕುಳಿತುಕೊಳ್ಳುವುದು ಮಾಡಬೇಡಿ.

23) ಮುತ್ತೈದೆಯರಿಗೆ ಶುಕ್ರವಾರ, ಮಂಗಳವಾರ, ಅತ್ತೆ ಮಾವಂದಿರ ಶ್ರಾದ್ಧದಂದು, ಉತ್ಸವದಂದು, ಅಭ್ಯಂಜನ ದಂದು, (ನದೀ ಸ್ನಾನ, ಸಮುದ್ರಸ್ನಾನ) ಮಾತ್ರ ತಲೆ ಸ್ನಾನ ಮಾಡಬೇಕು. ಉಳಿದ ದಿನಗಳಲ್ಲಿ ಕಂಠಪರ್ಯಂತ ಸ್ನಾನ ಮಾತ್ರ.

24) ಊಟ ಮಾಡಲು ಕುಳಿತುಕೊಂಡ ಮೇಲೆ ಊಟದ ಮಧ್ಯದಲ್ಲಿ ಎದ್ದು ಹೋಗಬೇಡಿ. ಊಟವು ಒಂದು ಯಜ್ಞಕ್ಕೆ ಸಮಾನ.

25) ಮನೆಯಿಂದ ಹೊರಗೆ ಹೊರಟಾಗ ಮನೆಯವರಿಗೆ ಹೋಗಿ ಬರುತ್ತೇನೆ ಎಂದು ಹೇಳಿ, .ಹೋಗುತ್ತೇನೆ ಎಂದು ಹೇಳಬೇಡಿ.
 

ಇದೇ ರೀತಿ ನಿಮ್ಮಲ್ಲಿರುವ ಮತ್ತು ಹಿರಿಯರಿಂದ ಬಂದಿರುವ ಒಳ್ಳೆಯ ಸಂಪ್ರದಾಯಗಳನ್ನು ನಮಗೆ ತಿಳಿಸಿ. ಕಲಿಯೋಣ ಮತ್ತು ಕಲಿಸೋಣ.ಹಾಗೆಯೇ ಪ್ರಯತ್ನ ಮುಂದು ವರೆಸೇೂಣ.
 

- ಸಿ.ಆರ್ .ಸತ್ಯ ಪ್ರಕಾಶ್ ವಕೀಲರು

–>