ಮೊಸರನ್ನ ತಿನ್ನುವುದರ ಗುಟ್ಟು
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ನ್ಯಾಯ ,ನೀತಿ, ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದನು. ದತ್ತಿ, ದಾನ- ಧರ್ಮ, ಕಲೆಗಳಿಗೆ ಪ್ರೋತ್ಸಾಹ ಕೊಡುವುದರ ಜೊತೆಗೆ ಪ್ರಜೆಗಳ ಕ್ಷೇಮಾಭ್ಯುದಯಕ್ಕೆ ಕುಂದು ಬರದಂತೆ ರಾಜ್ಯಭಾರ ನಡೆಸುತ್ತಾ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗಿದ್ದನು.
ರಾಜ್ಯದ ಹಿತದೃಷ್ಟಿಯಿಂದ, ಕಾಲಕಾಲಕ್ಕೆ ಮಳೆ ,ಬೆಳೆ ಚೆನ್ನಾಗಿ ಆಗಲಿ, ರಾಜ್ಯ ಸುಭೀಕ್ಷವಾಗಿರಲಿ ಎಂಬ ಆಶಯದಿಂದ ಆಗೊಮ್ಮೆ ಈಗೊಮ್ಮೆ ಎಂಬಂತೆ ಅರಮನೆಯಲ್ಲಿ ಯಜ್ಞ ,ಯಾಗ, ಹೋಮ, ಹವನ, ಮಾಡಿಸುತ್ತಿದ್ದನು. ಹಾಗೆ ಈ ಸಲವೂ ಸಹ ಏರ್ಪಡಿಸಿದನು. ರಾಜ್ಯದ ಎಲ್ಲಾ ಮೂಲೆಗಳಿಂದಲೂ ಜನ ಬರತೊಡಗಿದರು . ಯಾರಿಗೂ ಯಾವುದೇ ರೀತಿಯ ಕೊರತೆಯಾಗದಂತೆ ವ್ಯವಸ್ಥೆಯನ್ನು ಮಾಡಿಸಿದನು. ಪೂಜಾ ಕಾರ್ಯಗಳನ್ನು ನೆರವೇರಿಸಲು ಹೆಚ್ಚು ಸಂಖ್ಯೆಯಲ್ಲಿ ವಿಪ್ರೋತ್ತಮರು ಸೇರಿದ್ದರು. ಆಯಾ ದಿನದ ಹೋಮ ಹವನ ಮುಗಿದ ನಂತರ ಸ್ವಾದಿಷ್ಟವಾದ ಭೋಜನ, ಭೂರಿ ದಕ್ಷಿಣೆಗಳು ಸೇರಿದಂತೆ ಯಥೋಚಿತ ಸತ್ಕಾರವು ನಡೆಯುತ್ತಿತ್ತು.
ಪ್ರತಿದಿನ ಊಟದ ಸಮಯಕ್ಕೆ ಸ್ವಯಂ ರಾಜನೇ ಋತ್ವಿಜರುಗಳು ಕುಳಿತ ಪಂಕ್ತಿಯ ಮಧ್ಯೆ ಕೈಮುಗಿದು ನಡೆಯುತ್ತಾ , ನಿಧಾನವಾಗಿ ಊಟ ಮಾಡಿ , ಭೋಜನ ಸ್ವಾದಿಷ್ಟವಾಗಿದೆಯಾ? ಎಂದು ನಮ್ರತೆಯಿಂದ ಉಪಚರಿಸಿ ಎಲ್ಲವೂ ವ್ಯವಸ್ಥಿತವಾಗಿ ನಡೆದಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದನು. ಪ್ರತಿದಿನವೂ ರಾಜನು ಊಟ ಮಾಡುತ್ತಿರುವ ಬ್ರಾಹ್ಮಣರನ್ನು ಗಮನಿಸುವಾಗ ಬೇಕಾದಷ್ಟು ಭಕ್ಷ ಭೋಜ್ಯಗಳನ್ನು ತಿಂದು ತೇಗುತ್ತಿದ್ದರೂ ಕೊನೆಯಲ್ಲಿ ಮಾತ್ರ ಎಲ್ಲಾ ಬ್ರಾಹ್ಮಣರು ಎರಡು ತುತ್ತಾದರೂ ಮೊಸರನ್ನ ತಿನ್ನದೆ ಏಳುತ್ತಿರಲಿಲ್ಲ. ರಾಜನಿಗೆ ತುಂಬಾ ಆಶ್ಚರ್ಯವಾಯಿತು.
ಒಂದೆರಡು ದಿನದ ನಂತರ ರಾಜನೇ ಖುದ್ದಾಗಿ ನಿಂತು. ಎಲೆಯ ಮೇಲೆ ಚೆಲ್ಲುವಷ್ಟು ಸುಗ್ರಾಸ ಭೋಜನವನ್ನು ಬಡಿಸಲು ತಿಳಿಸಿದನು. ಎಂದಿನಂತೆ ರಾಜನು ಬಂದು ನೋಡಿದಾಗ ಎಲೆಯಲ್ಲಿ ಸಾಕಷ್ಟು ಚೆಲ್ಲಿದ್ದರೂ , ಮೊಸರನ್ನ ಮಾತ್ರ ಇಷ್ಟಪಟ್ಟೇ ತಿನ್ನುತ್ತಿರುವುದನ್ನು ಕಂಡು ಅಲ್ಲಿದ್ದ ಬ್ರಾಹ್ಮಣರನ್ನು ಉದ್ದೇಶಿಸಿ, ಬ್ರಾಹ್ಮಣೋತ್ತಮರೇ ನೀವು ಹೊಟ್ಟೆ ಹಿಡಿಯಲಾರದಷ್ಟು ಊಟ ಮಾಡಿದ ಮೇಲೂ ಈ ಮೊಸರು ಅನ್ನ ಹೊಟ್ಟೆಗೆ ಹೇಗೆ ಹಿಡಿಯುತ್ತದೆ. ಎಂದು ಕೇಳಿದನು. ಆಗ ಅಲ್ಲಿದ್ದ ಅನುಭವಿ ಬ್ರಾಹ್ಮಣರು ರಾಜ ನೀನು ಈಗ ಹೋಗು ನಾಳೆ ನಿನಗೆ ಉತ್ತರ ಕೊಡುತ್ತೇವೆ ಎಂದರು.
ಮರುದಿನ ಮತ್ತೆ ಹೋಮ ನಡೆವ ಜಾಗದಲ್ಲಿ ಸಾಕಷ್ಟು ಜನ ಸೇರಿದ್ದಾರೆ. ಹಿರಿಯ ಪುರೋಹಿತರು ರಾಜನು ಇದ್ದಲ್ಲಿಗೆ ಹೋಗಿ "ಮಹಾರಾಜ ನೀನು ಈ ದಿನ ಹೊರಗಡೆ ನಿಂತಿರುವ ಜನಗಳ ಗುಂಪಿನಿಂದಲೇ ಸಾಮಾನ್ಯ ಜನರು ನಡೆದು ಬರುವಂತೆ ಹೋಮ ನಡೆಯುವ ಸ್ಥಳಕ್ಕೆ ಬರಬೇಕು". ಎಂದರು.
ರಾಜನು ಆಯಿತು ಎಂದ. ಹಾಗೆ ಹೊರಗೆ ಬಂದು ನೋಡಿದರೆ ಒಂದು ಇರುವೆಯು ಹೋಗಲಾರದಷ್ಟು ಜನ ತುಂಬಿದ್ದರು. ಎಲ್ಲಾ ಕಡೆ ನೂಕುನುಗ್ಗಲು. ಆದರೂ ಪುರೋಹಿತರು ಹೇಳಿದ ಆದೇಶದ ಮೇಲೆ ರಾಜನು ಜನಗಳ ಗುಂಪು ಎಲ್ಲಿಂದ ಆರಂಭವಾಗುತ್ತದೆಯೋ ಆ ಜಾಗಕ್ಕೆ ಹೋಗಿಅಂತೂ ಹೇಗೋ ನುಗ್ಗಿ, ನುಸುಳಿಕೊಳ್ಳುತ್ತಾ, ಅಂತೂ ಇಂತೂ ಹೋಮ ನಡೆಯುವ ಸ್ಥಳಕ್ಕೆ ಬಂದನು.
ರಾಜನು ಬಂದಮೇಲೆ ಹೋಮಕ್ಕೆ ಪೂರ್ಣಹುತಿಯನ್ನು ಹಾಕಲಾಯಿತು. ವೇದೋಕ್ತ ಮಂತ್ರಗಳ ಘೋಷಣೆ ಮಾಡಿದರು. ರಾಜನಿಗೆ ಯಥೋಚಿತ ಆಶೀರ್ವಾದವನ್ನು ಮಾಡಿದರು. ನಂತರ ಬ್ರಾಹ್ಮಣರು "ರಾಜನ್, ನೀನು ಇಲ್ಲಿಗೆ ಜನಗಳ ಗುಂಪಿನಲ್ಲಿ ನುಗ್ಗಿ ಬಂದೆ ಅಲ್ಲವೇ" ಎಂದರು. ಹೌದು ಹಾಗೆ ಬರಬೇಕು ಎಂದಿದ್ದಕ್ಕೆ , ಬರಬೇಕಾಯಿತು ಎಂದನು. ಬ್ರಾಹ್ಮಣರು ನಗುತ್ತಾ "ರಾಜಾ ನೋಡಿದಿಯಾ? ಬರಬೇಕು ಎಂದರೆ ನೀನು ಹೇಗೆ ಬಂದೆಯೋ ಹಾಗೆ ನಮಗೆ ಎಷ್ಟೇ ಹೊಟ್ಟೆ ತುಂಬಿದ್ದರೂ ಮೊಸರು ಅನ್ನಕ್ಕೂ ಹೀಗೆ ಜಾಗ ಸಿಗುತ್ತದೆ. ಹಾಗೆ ಎರಡೇ ಎರಡು ತುತ್ತು ಮೊಸರು ಅನ್ನ ತಿಂದಮೇಲೆ ನಮ್ಮ ಊಟ ಸಂಪನ್ನವಾಗುವುದು" ಎಂದರು. ಸಾತ್ವಿಕ ಆಹಾರ ಮೊಸರನ್ನವನ್ನು ಊಟದ ಕಡೆಯಲ್ಲಿ ತಿನ್ನುವುದರಿಂದ ಹುಳಿ ತೇಗು, ತಿಂದ ಆಹಾರ ಜಾಸ್ತಿಯಾಗಿ ಉಬ್ಬಳಿಕೆ ಬರುವುದು, ಬಿಕ್ಕಳಿಕೆ, ಖಾರದ ತೇಗು, ಸಿಹಿಯ ವಾಕರಿಕೆಗಳ ತೊಂದರೆ ಬರುವುದಿಲ್ಲ. ತಿಂದ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಹೀಗೆ ರಸಗವಳದ ನಂತರ ತಾಂಬೂಲ ಸೇವನೆ ಮಾಡಿ ವಿಶ್ರಾಂತಿ ತೆಗೆದುಕೊಂಡರೆ, ಇದನ್ನು ಸಂತೃಪ್ತ, ಸಂತುಷ್ಟ, ಸಮೃದ್ಧ , ಸ್ವಾದಿಷ್ಟವಾದ ಭೋಜನ ಎನ್ನುತ್ತಾರೆ. ಇದೇ ಮೊಸರು ಅನ್ನ ತಿನ್ನುವುದರ ಗುಟ್ಟು ಎಂದು ರಾಜನಿಗೆ ತಿಳಿಯಿತು.
ಇದು ನಮ್ಮ ಅಜ್ಜಿ ಹೇಳಿದ ಕಥೆ. ಇಂಥ ತುಂಬಾ ಕಥೆಗಳನ್ನು ಕಣ್ಣು ಬಾಯಿ ಅಗಲಿಸಿಕೊಂಡು ರಾತ್ರಿ-ಹಗಲು ಕೇಳುತ್ತಿದ್ದೆವು.
ಬರಹ : ಆಶಾ ನಾಗಭೂಷಣ.
Subscribe , Follow on