"ಅಮ್ಮಾ, ನನಗೊಂದಿಷ್ಟು ವಿಶ್ರಾಂತಿ ತಗೋಬೇಕು"
ಶಾಲೆ, ಕ್ಲಾಸು, ಓದುಗಳಿಂದ ದಣಿದ ಮಗಳು ಅಮ್ಮನಿಗೆ ಹೇಳಿದಳು.
"ಮಗಳೇ, ಮೊದಲು ಚೆನ್ನಾಗಿ ಓದು, ವಿದ್ಯಾಭ್ಯಾಸ ಮಾಡು. ನಂತರ ವಿಶ್ರಾಂತಿಯೇ ಅಲ್ಲವೇ?"
ಮಗಳು ಎದ್ದು ಓದಲು ಕುಳಿತಳು. *ವಿಶ್ರಾಂತಿ ತಗೊಳೋದು ಹಾಗೇ ಉಳಿಯಿತು...*
"ಅಮ್ಮಾ, ಸ್ವಲ್ಪ ಟೈಮ್ ಕೊಡು... ಸ್ವಲ್ಪ ವಿಶ್ರಾಂತಿ ತಗೋತೇನೆ" ಆಫೀಸಿಂದ ಮನೆಗೆ ಬಂದ ಮಗಳು ಹೇಳಿದಳು ... " ನಾನು ಸುಸ್ತಾಗಿದೀನಮ್ಮ ..."
"ಅರೇ! ಮೊದಲು ಮದುವೆ ಮಾಡ್ಕೊಂಡು ಸೆಟಲ್ ಆಗು. ಮತ್ತೆ ಆರಾಮನೇ ಅಲ್ವ?..." ಅಮ್ಮನ ಮಾತು.
"ಅರೇ! ಈಗಲೇ ಏನವಸರ ಅಮ್ಮಾ? ಒಂದೆರಡು ವರ್ಷ ಕಳೀಲಿ..."
"ಅರೇ! ಸರಿಯಾದ ಸಮಯಕ್ಕೆ ಮದುವೆ, ಮಕ್ಕಳು ಆದರೆ ಟೆನ್ಷನ್ ಇರಲ್ಲಮ್ಮ, ಮತ್ತೆ ಆರಾಮನೇ ಅಲ್ವ..."
ಮಗಳು ಮದುವೆ ಮಾಡಿಕೊಳ್ಳಲು ತಯಾರಾದಳು... *ವಿಶ್ರಾಂತಿ ತಗೊಳೋದು ಹಾಗೇ ಉಳಿಯಿತು...*
ಮದುವೆ ಆಯ್ತು. ಮಗಳು ಎರಡು ಮಕ್ಕಳ ತಾಯೀನೂ ಆದಳು. *ವಿಶ್ರಾಂತಿ ತಗೊಳೋದು ಹಾಗೇ ಉಳಿಯಿತು...*
"ನೀನು ಅಮ್ಮ.. ಮಕ್ಕಳನ್ನು ನೋಡಿಕೊಳ್ಳಲು ನೀನು ಎಚ್ಚರವಿರಬೇಕಲ್ಲ.. ನನಗೆ ಬೆಳಿಗ್ಗೆ ಆಫೀಸಿಗೆ ಹೋಗ್ಬೇಕು ತಾನೇ? ಇನ್ನೊಂದು ಸ್ವಲ್ಪ ದಿನ ಅಷ್ಟೆ... ಮಕ್ಕಳು ದೊಡ್ಡವರಾದರೆ ಆಮೇಲೆ ನಿನಗೆ ವಿಶ್ರಾಂತಿನೇ ಅಲ್ವ..."
ಎರಡು ಮಕ್ಕಳಿಗಾಗಿ ಎಷ್ಟೋ ರಾತ್ರಿ ಸರಿಯಾದ ನಿದ್ರೆಯಿಲ್ಲದೆ ಕಳೆದಳು. ಮತ್ತೆ *ವಿಶ್ರಾಂತಿ ತಗೊಳೋದು ಹಾಗೇ ಉಳಿಯಿತು...*
"ರೀ.. ಮಕ್ಕಳು ಸ್ಕೂಲಿಗೆ ಹೋಗಲು ಶುರು ಮಾಡಿದಾರೆ. ಈಗ ಮನೆಲೊಂದೆರಡು ಘಂಟೆ ಹಾಯಾಗಿರ್ತೀನಿ..."
"ಮಕ್ಕಳ ಕಡೆ ಗಮನ ಕೊಡು. ಅವರಿಗೆ ಓದಿಸು. ಮತ್ತೆ ಆರಾಮನೇ ಅಲ್ವ..."
ಮಕ್ಕಳ ಹೋಮ್ ವರ್ಕ್, ಪ್ರಾಜೆಕ್ಟ್ ಮಾಡಿಸಲು ಕುಳಿತುಕೊಂಡಳು. *ವಿಶ್ರಾಂತಿ ತಗೊಳೋದು ಹಾಗೇ ಉಳಿಯಿತು...*
"ಮಕ್ಕಳು ಓದಿ ಬರೆದು ತಮ್ಮ ಕಾಲ ಮೇಲೆ ತಾವು ನಿಂತ್ಕೊಂಡಿದಾರೆ. ಈಗಲಾದರೂ ಸ್ವಲ್ಪ ಆರಾಮಾಗಿರ್ತೀನಿ..."
"ಇನ್ನು ಮಕ್ಕಳ ಮದುವೆ ಮಾಡ್ಬೇಕು. ಈ ಜವಾಬ್ದಾರಿ ಕಳ್ಕೊಂಡ್ರೆ ಮತ್ತೆ ಆರಾಮನೇ ಅಲ್ವ.."
ಅವಳು ಧೈರ್ಯ ತಂದ್ಕೊಂಡಳು. ಮದುವೆಗಳನ್ನೂ ಸುಧಾರಿಸಿ ಆಯ್ತು. ಮತ್ತೆ *ವಿಶ್ರಾಂತಿ ತಗೊಳೋದು ಹಾಗೇ ಉಳಿಯಿತು...*
"ಮಕ್ಕಳ ಸಂಸಾರ ನಡೀತಾ ಇದೆ. ಈಗ ನಾನು ಸ್ವಲ್ಪ ವಿಶ್ರಾಂತಿ ತಗೋತೇನೆ.."
"ಅರೇ! ನಮ್ಮ ಮಗಳು ತಾಯಿಯಾಗ್ತಾ ಇದಾಳೆ. ಚೊಚ್ಚಲ ಹೆರಿಗೆ, ಬಾಣಂತನ ತವರಲ್ಲೇ ಅಲ್ವ?.. ತಯಾರಿ ಮಾಡೋಣ.."
ನಮ್ಮ ಮಗಳ ಹೆರಿಗೆ ಬಾಣಂತನ ಮುಗೀತಿದೆ...
"ಅಬ್ಬ, ಈ ಜವಾಬ್ದಾರಿ ಮುಗೀತು." ಆದರೆ *ವಿಶ್ರಾಂತಿ ತಗೊಳೋದು ಹಾಗೇ ಉಳಿಯಿತು...*
"ಅಮ್ಮಾ ನಾನು ಮತ್ತೆ ಕೆಲಸಕ್ಕೆ ಹೋಗ್ಬೇಕು. ನೀನು ಆಕಾಶ್'ನ್ನ ನೋಡ್ಕೊಂಡಿರ್ತೀಯಲ್ಲ?"
ಮೊಮ್ಮಗನ ಹಿಂದೆ ಓಡ್ತಾ ಆಡ್ತಾ ಸುಸ್ತಾದಳು. ಮತ್ತೆ *ವಿಶ್ರಾಂತಿ ತಗೊಳೋದು ಹಾಗೇ ಉಳಿಯಿತು...*
"ಮೊಮ್ಮಗನೂ ದೊಡ್ಡವನಾದ. ಎಲ್ಲ ಜವಾಬ್ದಾರಿಗಳೂ ಮುಗೀತು. ಇನ್ನಾದರೂ ವಿಶ್ರಾಂತಿ ತಗೋತೀನಿ..."
"ಲೇ.. ಕೇಳಿಸ್ತಾ ಇದೆಯಾ? ನನ್ನ ಮಂಡಿ ನೋಡಿದೀಯ? ಏಳಕೂ ಕಷ್ಟ ಆಗ್ತಾ ಇದೆ ಕಣೇ.. ಬಹುಶಃ ಬಿ ಪಿ ನೂ ಹೆಚ್ಚಾಗಿದೆ. ಡಯಾಬಿಟೀಸ್ ಬೇರೆ ಇದೆ. ಡಾಕ್ಟರು ಹುಷಾರಾಗಿರೋಕೆ ಹೇಳಿದಾರೆ ಕಣೇ."
ಪತಿಸೇವೆ ಮಾಡ್ತಾ ಮಾಡ್ತಾ ಉಳಿದ ಅಷ್ಟಿಷ್ಟು ಜೀವನಾನೂ ಕಳೀತು. *ವಿಶ್ರಾಂತಿ ತಗೊಳೋದು ಹಾಗೇನೇ ಉಳಿಯಿತು...*
ಒಂದಿನ ಭಗವಂತ ಸ್ವತಃ ಭೂಮಿಗೆ ಬಂದು "ವಿಶ್ರಾಂತಿ ತಗೋಬೇಕಲ್ಲ ನಿನಗೆ.. ಬಾ" ಅಂತ ಕರೆದ. ಅವಳು ಎರಡೂ ಕೈ ಜೋಡಿಸಿ ಕಣ್ಣು ತುಂಬಿಕೊಂಡಳು. ಭಗವಂತ ಅವಳನ್ನು ಕರಕೊಂಡು ಹೋದ.
*ಕೊನೆಗೂ ಅವಳಿಗೆ ವಿಶ್ರಾಂತಿ ಸಿಕ್ತು... ಎಂದೆಂದಿಗೂ...*
ಎಲ್ಲ ಮಹಿಳೆಯರಿಗೆ ಸಮರ್ಪಿತ.
Subscribe , Follow on
Facebook Instagram YouTube Twitter WhatsApp