-->

ಕೇಳಿಸಿಕೊಂಡು ಸಮಾಧಾನ ಹೇಳಿ ಸಾಂತ್ವನ

ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ನನ್ನ ಹುಟ್ಟೂರು. ನಮ್ಮ ಅಜ್ಜಿ (ಪಿತಾಮಹಿ)  ಜಾನಮ್ಮವ್ವ, ನಮ್ಮ ತಾಯಿ ಸಾವಿತ್ರಮ್ಮ, ನಮ್ಮ ತಂದೆ ಮಾನಕರಿ ಹುಲಿಕುಂಟಾಚಾರ್. ಅಪ್ಪ ಪ್ರಾಥಮಿಕ ಶಾಲಾ ಶಿಕ್ಷಕರು, ಹೋಮಿಯೋಪತಿ ವೈದ್ಯರು ಮತ್ತು ಹಳ್ಳಿಯ ಹತ್ತು ಸಮಸ್ತರ  ಹಿತಚಿಂತಕರು.
 
ನಮ್ಮ ಹಳ್ಳಿಯ ಕೆಲವು ರೈತಮಹಿಳೆಯರು  ತಮ್ಮ ಹೊಲಗಳಲ್ಲಿ ಬೆಳೆದ ಹೀರೆಕಾಯಿ ಸೌತೆಕಾಯಿ ಸೊಪ್ಪು ಅಥವಾ ಹಸಿಮೆಣಸಿನಕಾಯಿಯನ್ನು  ತಮ್ಮ ಸೆರಗಿನಲ್ಲಿ ಕಟ್ಟಿಕೊಂಡು  "ಮೇಷ್ಟ್ರ ಮನೆಗೆ ಕೊಡುವ ನೆಪ" ಮಾಡಿಕೊಂಡು  ನಮ್ಮ ಅಜ್ಜಿ ಅಥವಾ ನಮ್ಮ ಅಮ್ಮನ ಬಳಿ ತಮ್ಮ ಸಾಂಸಾರಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು  ಆಗಾಗ ಬರುತ್ತಿದ್ದರು.

ಅಮ್ಮ ಅಥವಾ ಅಜ್ಜಿ  ನಮ್ಮ ಮನೆಯ ವರಾಂಡದಲ್ಲೋ ಪಡಸಾಲೆಯ ಮೂಲೆಯಲ್ಲೋ ಅಥವಾ ದನದ ಕೊಟ್ಟಿಗೆಯಲ್ಲೋ    ಅವರನ್ನು ಕರೆದು ಪ್ರೀತಿಯಿಂದ ಕೂಡಿಸಿಕೊಂಡು ಗಂಟೆಗಟ್ಟಲೆ ಅವರಿಗಾಗಿ ಸಮಯ ಮೀಸಲಿಟ್ಟು ಅವರ ಕಷ್ಟ ಕಾರ್ಪಣ್ಯಗಳಿಗೆ  ಕಿವಿಯಾಗುತ್ತಿದ್ದರು.

 ಅವರು ತಮ್ಮ ಗಂಡನ ದುರ್ನಡತೆಯ ಬಗ್ಗೆಯೋ ಅತ್ತೆ ಮಾವ ಭಾವ ಮೈದುನ ವಾರಗಿತ್ತಿ ಅಥವಾ ಮಕ್ಕಳು ಕೊಡುವ ದುಃಖದ ಬಗ್ಗೆಯೋ ತಮ್ಮ ಅಳಲನ್ನು ತೋಡಿಕೊಂಡು ಅತ್ತು ಕರೆದು ನಿಟ್ಟುಸಿರು ಬಿಟ್ಟು ಸಮಾಧಾನ ತಾಳುತ್ತಿದ್ದರು.  ಕೆಲವರಂತೂ  ಬಾವಿಯಲ್ಲಿ ಹಾರುತ್ತೇವೆ ಬೆಂಕಿ ಹಚ್ಚಿಕೊಳ್ಳುತ್ತೇವೆ ಉರುಲು ಹಾಕಿಕೊಳ್ಳುತ್ತೇವೆ ಎಂದೆಲ್ಲಾ  ಹೇಳಿದ್ದುಂಟು. ಅದೆಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡು ನಡುನಡುವೆ ಸಾಂತ್ವನದ ಮಾತನ್ನಾಡುತ್ತಾ ಅವರ ಕಷ್ಟಕ್ಕೆ ಸ್ಪಂದಿಸಿ ಇವರು ಸಹ ಒಮ್ಮೊಮ್ಮೆ ಕಣ್ಣೀರು ಮಿಡಿಯುತ್ತಾ ನಿಟ್ಟುಸಿರು ಬಿಡುತ್ತಾ ಕೊನೆಗೆ ಧೈರ್ಯವನ್ನು ಹೇಳಿ  "ಸಾಯುವುದಿಲ್ಲವೆಂದು ಆಣೆ ಪ್ರಮಾಣ" ಮಾಡಿಸಿಕೊಂಡು ಒಂದಿಷ್ಟು ಅವಲಕ್ಕಿಯನ್ನೋ ಮಂಡಾಳನ್ನೋ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳನ್ನೋ ಕೊಟ್ಟು ಕಳುಹಿಸುತ್ತಿದ್ದರು.

ಕೇಳಿಸಿಕೊಂಡು ಸಮಾಧಾನ ಹೇಳಿ ಸಾಂತ್ವನ


ಬಿಗಿದ ಮುಖದಿಂದಲೂ ಗಂಟು ಹಾಕಿದ ಹುಬ್ಬಿನಿಂದಲೂ ಬಂದಿದ್ದ ಆ ತಾಯಂದಿರು ನೆಮ್ಮದಿಯ ನಸುನಗೆಯ ಮುಖವನ್ನು  ಹೊತ್ತು ಹೊಸ ಜೀವನೋತ್ಸಾಹದ ಗಟ್ಟಿ ಹೆಜ್ಜೆಗಳನ್ನಿಡುತ್ತಾ  ಹೊರಡುವ ದೃಶ್ಯವನ್ನು ಕಂಡು ನಮಗೆ ಅದೇನೋ ಸಮಾಧಾನ.

ಸಮಸ್ಯೆ ತೀವ್ರ ಮಟ್ಟಕ್ಕೆ ಹೋಗಿದ್ದರೆ  ಅದನ್ನು  ನಮ್ಮ ತಂದೆಯವರಿಗೆ ತಿಳಿಸಿ ಆ ಮನೆಯ ಗಂಡಸರನ್ನು ಕರೆಯಿಸಿ ಅವರಿಗೆ  ನಮ್ಮತಂದೆಯವರೇ ಗದರಿಸಿ ಹಿತವನ್ನು ಹೇಳುವಂತೆ ಅಜ್ಜಿ ಅಮ್ಮ ವ್ಯವಸ್ಥೆ ಮಾಡುತ್ತಿದ್ದುದೂ ಉಂಟು.

ಹೀಗೆ ಮತ್ತೆ ಮತ್ತೆ ನಮ್ಮ ಮನೆಗೆ ಭೇಟಿ ನೀಡುತ್ತಿದ್ದ  ಇಪ್ಪತ್ತು ಮೂವತ್ತು ಮಹಿಳೆಯರ ಹೆಸರು ಮುಖಗಳು ನನಗಿನ್ನೂ ನೆನಪಿವೆ. ಅವರು ಹೇಳುತ್ತಿದ್ದ ಸುದ್ದಿಯ ಕೆಲ ಕೆಲಭಾಗಗಳು ನನಗೂ ಗೊತ್ತಿವೆ ಆದರೆ ಆ ವಿವರಗಳನ್ನು ನಾನು  ಅಂದು ಯಾರಿಗೂ ಹೇಳಿರಲಿಲ್ಲ. ಈಗಲೂ ಹೇಳುವುದಿಲ್ಲ.   ಅದರಲ್ಲಿ ಬಹುಪಾಲು ಜನ ಈಗ ಬದುಕಿಲ್ಲ ಆದರೂ ಅವರ ಹೆಸರನ್ನು ನಾನು ಹೇಳಲಾರೆ ಹೇಳಿದರೆ ಅವರ ಮಕ್ಕಳಿಗೆ ಮೊಮ್ಮಕ್ಕಳಿಗೆ ನೋವಾದೀತು.

ಹೀಗೆ ಇತರರ ನೋವನ್ನು ದುಗುಡ ದುಮ್ಮಾನವನ್ನು ಕೇಳಿಸಿಕೊಂಡು ಸಮಾಧಾನ ಹೇಳಿ ಸಾಂತ್ವನ ನೀಡಿದರೂ ಆ ಗುಟ್ಟನ್ನು ಮತ್ತೊಂದು ಕಿವಿಗೆ ತಲುಪಿಸದಂತೆ ಗುಟ್ಟನ್ನಾಗಿಯೇ ಉಳಿಸಿಕೊಂಡು ಬಾಳಿದ ಅಮ್ಮ ಮತ್ತು ಅಜ್ಜಿಯ ನೆನಪಾದಾಗ ಅವರ ವ್ಯಕ್ತಿತ್ವದ ಬಗ್ಗೆ ಗೌರವ ಮೂಡುತ್ತದೆ.

ಇಂದು ಆಪ್ತಸಲಹೆ  (ಕೌನ್ಸಿಲಿಂಗ್) ಒಂದು ಲಾಭದಾಯಕ ವೃತ್ತಿಯಾಗಿ ವಿಕಾಸಗೊಂಡಿದೆ ಆದರೆ ಯಾವುದೇ ಲಾಭದ ಅಪೇಕ್ಷೆಯಿಲ್ಲದೆ  ಅದನ್ನು ನಮ್ಮ ಮನೆಯ ಮಕ್ಕಳ ಸಮಸ್ಯೆಯೋ ಎನ್ನುವಂತೆ ಪ್ರೀತಿಯಿಂದ ಕೇಳಿಸಿಕೊಂಡು ಸಾಂತ್ವನ ನೀಡುತ್ತಿದ್ದ ಅವರ ನೆನಪು ಇಂದು ನನ್ನನ್ನು ಬಹು ಕಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ  ಅಂತಹ ಸೇವೆಯನ್ನು ಮಾಡಬಯಸಿದರೂ  "ಬೇರೊಬ್ಬರಿಗೆ  ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವವ"ರ ಸಂಖ್ಯೆ ಕಡಿಮೆಯಾಗುತ್ತಿದೆ.   ನಮ್ಮಿಂದ ಒಬ್ಬಿಬ್ಬರಿಗೆ ನಿರ್ವ್ಯಾಜ  ನೆಮ್ಮದಿ ನೀಡಲು ಸಹ ಪುಣ್ಯ ಮಾಡಿರಬೇಕು!

–>