-->

ಆಗಲಿ ಮನೆ ಮನಗಳೂ ನಂದಗೋಕುಲ

ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!

 ಮನೆಸುತ್ತ ಕಾಂಪೌಂಡು, ಗೇಟು ಭದ್ರ, ಒಳಗಿರುವ ಮನಸುಗಳೇ ಏಕೋ ಛಿದ್ರ ಛಿದ್ರ...!

ಬಂಧುಗಳೇ ಬಾರದ, ಸ್ನೇಹಿತರೂ ಸೇರದ ಮನೆಗಳ ಮುಂದೆ ಸದಾ ಕಾವಲುಗಾರ...!

 ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ, ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ...!

 ಅಡುಗೆ ಮನೆ, ಸದಾ ಖಾಲಿ ಖಾಲಿ ಇರುತ್ತೆ. ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ...!

 ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ... ಎತ್ತರ... ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ...ಹತ್ತಿರ...! ಸಂತೋಷ ಏನೆಂಬುದಕ್ಕೆ ಸಿಗುತ್ತಿಲ್ಲ ಉತ್ತರ...!

 ಅಂದು...ಬಿಸಿಲು, ಮಳೆ, ಚಳಿಗೆ ಮೈ ಒಗ್ಗಿತ್ತು, ಮನೆ ತಣ್ಣಗಿತ್ತು. ಒಲೆ ಹೊಗೆಯಾಡುತ್ತಿತ್ತು. ಬಿಸಿನೀರ ಹಂಡೆ ಹಬೆಯಾಡುತ್ತಿತ್ತು...!

 ಕಣಜದ ತುಂಬಾ... ದವಸ ಧಾನ್ಯ ತುಂಬಿತ್ತು. ಬಂಧುಬಳಗದ ನಡುವೆ ಅನುಬಂಧವಿತ್ತು

 ಎಲ್ಲರೊಟ್ಟಿಗೆ ಮನೆಯೂ ನಗೆಯಾಡುತಿತ್ತು...!
 ಮನೆ ಚಿಕ್ಕದಾದ್ರೂ, ಮನಸು ಚೊಕ್ಕವಾಗಿತ್ತು...!

 ಅಂದು ನನ್ನಜ್ಜ ಕಟ್ಟಿದ ಮನೆಯಲ್ಲಿ...ನಲಿವಿತ್ತು, ಒಲವಿತ್ತು, ಸಂತಸದ ಸೆಲೆಯಿತ್ತು...!

 ಮುಖ್ಯ ಬಾಗಿಲು ಚಿಕ್ಕದಿತ್ತು, ತಲೆಬಾಗಬೇಕಿತ್ತು.

ಮಣ್ಣಿನ ಗೋಡೆ, ಸಾರಿಸಿದ ನೆಲವಿತ್ತು

 ಮಾಡು ಚಿಕ್ಕದಿತ್ತು, ಬದುಕು ದೊಡ್ಡದಿತ್ತು. ನೋವುಗಳಿದ್ದರೂ ಬದುಕಿಗೆ ಬೆಲೆಯಿತ್ತು.ಚಾಪೆಯಲಿ ಕಣ್ಣಿಗೆ ಚೆಂದದ ನಿದ್ರೆಯಿತ್ತು...!

 ಅಂದು ಆಸ್ಪತ್ರೆಯ ಹಂಗೇ ಇರಲಿಲ್ಲ. ಎಲ್ಲ ಸಮಸ್ಯೆಗಳಿಗೂ ಮನೆಯಲ್ಲೇ ಮದ್ದಿತ್ತು.ಮಗುವೂ ಕೂಡ ಮನೆಯಲ್ಲೇ ಹುಟ್ಟುತ್ತಿತ್ತು.

ಆಗಲಿ ಮನೆ ಮನಗಳೂ ನಂದಗೋಕುಲ


 ಮದುವೆ ಕೂಡ ಮನೆಯಲ್ಲೇ ನೆಡೆಯುತ್ತಿತ್ತು...ಚಿತ್ರ ವಿಚಿತ್ರದ ಛತ್ರವೇ ಬೇಕಿರಲಿಲ್ಲ...!

 ಕೆಲಸಕ್ಕೆ ಶ್ರದ್ಧೆ, ದೇವರ ಮೇಲೆ ನಂಬಿಕೆಯಿತ್ತು...!
 ಸಾವಿಗೂ ಸಹ ಮನೆಯೇ ಸಾಕ್ಷಿ ಯಾಗುತ್ತಿತ್ತು...!

 ಹಲವು ಮಕ್ಕಳು ಹುಟ್ಟಿದ ಸಂತಸವಿತ್ತು.ಅವರ ಬಾಲ್ಯದ, ಬದುಕಿನ ಸಂಭ್ರಮವಿತ್ತು....!

 ನೆಂಟರು ಬಂದರೆ, ಹಬ್ಬದ ಸಡಗರವಿತ್ತು. ಕೆಲವು ಸಾವುಗಳ ಸೂತಕವೂ ಇತ್ತು. ಸತ್ತ ಹಿರಿಯರ ನೆನಪು ಅಚ್ಚಳಿಯದೇ ಉಳಿದಿತ್ತು...!

 ಕಷ್ಟಗಳ ಗೆದ್ದ ಗೆಲುವಿನ ಧ್ಯೋತಕ ವೂ ಇತ್ತು...! ಬದುಕಿನ ಸಾಧಕ ಭಾದಕ ಗಳೆಲ್ಲವೂ ಇತ್ತು...!

 ಇಂದು...? ಮನೆ ರಾಜನಿಲ್ಲದ ಅರಮನೆಯಂತೆ, ಸಕಲ ಸವಲತ್ತು ಗಳಿರುವ ದರ್ಬಾರಿನಂತೆ,ನೆರೆ ಮನೆಯ ಹಂಗಿಲ್ಲದ ಸೆರೆಮನೆ ಯಂತೆ. ಆದ್ರೂ ಮನೆಮಂದಿಗೆಲ್ಲ ಬಹಳ  ದುಡ್ಡಿನದೇ ಚಿಂತೆ ಚಿಂತೆ..!

 ಬೇಕಾಗಿದ್ದಕ್ಕಿಂತ, ಬೇಕೆನಿಸಿದ್ದೇ ತುಂಬಿದೆ, ದೊಡ್ಡದಿದೆ, ಶ್ರೀಮಂತವಾಗಿದೆ, ಸಜ್ಜಾಗಿದೆ. ಮನಸುಗಳು ಮಾತ್ರ ನಜ್ಜು ಗುಜ್ಜಾಗಿವೆ...!

 ಶುಭ ಕಾರ್ಯಗಳು, ಸಂತೋಷ ಕೂಟಗಳು, ಮನೆಬಿಟ್ಟು, ಹೋಟೆಲ್ಲುಗಳ ಸೇರಿಕೊಂಡಿವೆ. ಬಂಧುತ್ವ ಮಿತೃತ್ವಗಳು ಬಂಧನದಲ್ಲಿವೆ...!

 ನೆಂಟರಿಷ್ಟರು ಮನೆಗೆ ಬಂದರೆ, ಬರೀ ನಕ್ಕೂ ನಗದೇ... ಕೋಣೆ ಸೇರಿಕೊಳ್ಳುತ್ತಿದ್ದಾರೆ ಮನೆ ಮಕ್ಕಳು.

 ಸ್ನೇಹ,ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ...!

 ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ. ಆಗಲಿ ಮನೆ ಮನಗಳೂ ನಂದಗೋಕುಲ...!

ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ...! ಕಲಿಯಲಿ ಎಲ್ಲರು ಸಂತಸದಿ, ಒಟ್ಟಾಗಿ ನಗುವ ಕಲೆ...!

 ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯ ವಂತಿಕೆ ಮೇಲು...!

–>