-->

ಯುಗಾದಿ ಸೃಷ್ಟಿಯ ಆರಂಭಕಾಲ. ಯುಗ ಮತ್ತು ಆದಿ ಶಬ್ದಗಳೇ 'ಯುಗಾದಿ'

ದಕ್ಷಿಣ ಭಾರತದಲ್ಲಿ  ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಯುಗಾದಿ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುತ್ತಾರೆ ಇದನ್ನು  ಉಡುಪಿ ಮಂಗಳೂರು ಕಡೆ  ಉತ್ತರ ಭಾರತದ  ಹಲವು ಕಡೆಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.
ಈ ವರ್ಷ ಸಂವತ್ಸರ, ಚೈತ್ರ ಮಾಸ, ಶುಕ್ಲ ಪಕ್ಷ, ಪಾಡ್ಯ ದಿನ,ಇಂದು  ಯುಗಾದಿ ಹಬ್ಬವನ್ನು ವಸಂತ ಋತುವಿನ ಆರಂಭ ದೊಂದಿಗೆ ಆಚರಿಸುತ್ತಾರೆ. ಪ್ರತಿ ಹಬ್ಬ ಹುಣ್ಣಿಮೆಗಳನ್ನು 'ಪ್ರಕೃತಿ' ಯನ್ನು ಮೂಲವಾಗಿಟ್ಟುಕೊಂಡು ಆಚರಿಸುವುದರಿಂದ  ಹಬ್ಬಗಳು ವಿಶೇಷವಾಗುತ್ತದೆ.

ಯುಗಾದಿ ಹಬ್ಬದ ಪೌರಾಣಿಕ ಹಿನ್ನೆಲೆಯು ಈ ರೀತಿ ಇದೆ. ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡಿದ ದಿನವೆಂದು, ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿ, ಕಷ್ಟದ ದಿನಗಳನ್ನೆಲ್ಲ ಕಳೆದು ಸೀತಾಮಾತೆ, ಲಕ್ಷ್ಮಣನೂಂದಿಗೆ  ಸಂತೋಷದಿಂದ  ಅಯೋಧ್ಯೆಗೆ ಬಂದ ದಿನವೆಂದು, ಹಾಗೂ ಸೋಮಕಾಸುರ ಎಂಬ ರಾಕ್ಷಸನು  ವೇದಗಳನ್ನು ಚಾಪೆಯಂತೆ ಸುತ್ತಿ ಕದ್ದೊಯ್ದು ಸಾಗರದ ಆಳದಲ್ಲಿ ಮುಚ್ಚಿಟ್ಟಿದ್ದರಿಂದ, ಮಹಾ ವಿಷ್ಣು ತನ್ನ ಮೊದಲ ಅವತಾರವಾದ ಮತ್ಸ್ಯಾ ವತಾರದಲ್ಲಿ ಹೋಗಿ ಆ ವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೆಂದು,ಆನಂತರ ಬ್ರಹ್ಮನು ಸೃಷ್ಟಿ ಕಾರ್ಯ ಆರಂಭ ಮಾಡಿದನೆಂದು, ಇಂಥ ಹಲವು ಶುಭಾರಂಭಗಳಿಂದ  'ಯುಗಾದಿ' ಆಚರಣೆ ಬಂದಿದೆ ಎಂದು ತಿಳಿಸಲಾಗಿದೆ.

ಹಿಂದೂಗಳಿಗೆ  ವರ್ಷದಲ್ಲಿ ಬರುವ ಮೂರುವರೆ ದಿನಗಳು ಬಹಳ ಮುಖ್ಯವಾದವು ಯುಗಾದಿ, ದೀಪಾವಳಿ, ವಿಜಯದಶಮಿ, ಮತ್ತು ಅಕ್ಷಯ ತದಿಗೆಯ ಅರ್ಧ ದಿನ ಈ ಮೂರುವರೆ ದಿನಗಳು. ಮೂರು ವರೆ ವಜ್ರದಷ್ಟೇ ಪವಿತ್ರವಾದ ದಿನ. ನಾವು ಉತ್ಸವ ಪ್ರಿಯರು, ನಾವು ಸಂತೋಷವಾಗಿರಲು ಶ್ರಮಿಸುತ್ತೇವೆ. ಅದಕ್ಕಾಗಿ ಹಬ್ಬ ಹರಿ ದಿನಗಳು, ಹೊಸ ಉಡುಗೆ ತೊಡುಗೆ ಆಭರಣ, ಸಿಹಿ ಭಕ್ಷ ಭೋಜ್ಯಗಳ ಭೋಜನ ಸವಿಯಲು ಸಿದ್ದರಾಗಿರುತ್ತೇವೆ. ನಮಗೆ ನಮ್ಮ ಪೂರ್ವಿಕರಿಂದ ಬಂದಂಥ  ಕೊಡುಗೆಯಾಗಿದೆ. ಪೂರ್ವ ಕಾಲದಲ್ಲಿದ್ದ ಋಷಿ ಮುನಿಗಳೆಲ್ಲ, ಭಾರತದಲ್ಲಿ ಪರ್ವತ ತಪ್ಪಲುಗಳಲ್ಲಿ, ನದಿ ತೀರಗಳಲ್ಲಿ, ಕುಟೀರ ಗಳನ್ನು ಕಟ್ಟಿಕೊಂಡು ತಪಸ್ಸನ್ನು ಆಚರಿಸುತ್ತಿದ್ದರು. ಅಂಥ ಮಹಾಮಹಿಮರ ಋಷಿಮುನಿಗಳ ಆಶೀರ್ವಾದ ಪಡೆಯಲು ದೇವಲೋಕ ದಿಂದ ಇಂದ್ರಾದಿ ದೇವತೆಗಳು, ನವಗ್ರಹಗಳು, ಅಷ್ಟದಿಕ್ಪಾಲಕರು, ಬರುತ್ತಿದ್ದರು, ಭೂಮಿಯ  ಜೊತೆ ಅವರು ಸಂಪರ್ಕ ಇಟ್ಟುಕೊಂಡಿದ್ದರು. ಆದುದರಿಂದ ನಮ್ಮ ಭಾರತ ಕರ್ಮಭೂಮಿ, ದೇವಭೂಮಿ, ಇಂದ್ರಾದಿ ದೇವತೆಗಳು, ಗಂಧರ್ವರು ಯಕ್ಷರು, ನಾಗರು, ಕಿನ್ನರು, ಹಾಗೂ ದೇವ ಲೋಕದ ಸ್ತ್ರೀಯರಿಗೆ  ವಿಹಾರ ಭೂಮಿ ಆಗಿದೆ.
Ugadi wishes
ಯುಗಾದಿ ಪವಿತ್ರವಾದ ದಿನ, ನಮಗೆ ಎರಡು ಶಕೆಗಳಿವೆ, ಶಾಲಿವಾಹನ ಶಕೆ ವಿಕ್ರಮ ನಾಮಶಕೆ, ಎರಡು ರೀತಿಯ ಶಕೆಗಳನ್ನು ಉಪಾಸನೆ ಮಾಡುತ್ತೇವೆ. ನಮ್ಮ ದಕ್ಷಿಣ ಭಾರತದಲ್ಲಿ ಶಾಲಿವಾಹನ ಶಕೆ ಆಚರಣೆ ಇದ್ದರೆ ಉತ್ತರ ಭಾರತದ ಕಡೆ ವಿಕ್ರಮನಾಮಶಕೆ ಆಚರಿಸುತ್ತಾರೆ. ನಾವು ಸಂಕಲ್ಪ ಮಾಡು ವಾಗ, ಪ್ರವರದಲ್ಲಿ, ' ಶುಭೆ -ಶೋಭನೇ- ಮುಹೂರ್ತೇ ಆದ್ಯ ಬ್ರಹ್ಮಣ ದ್ವಿತೀಯ ಪರಾರ್ಧೇ- ಶ್ವೇತ ವರಾಹ ಕಲ್ಪೇ -ವೈವಸ್ವತ  ಮನ್ಮಂತರೇ- ಕಲಿಯು ಗೇ, ಪ್ರಥಮಪಾದೇ, ಜಂಬೂದ್ವೀಪೇ, ಭಾರತವರ್ಷೇ, ಭರತಖಂಡೇ, ದಂಡ ಕಾರಣ್ಯೇ, ಗೋದಾವರ್ಯಾ: ದಕ್ಷಿಣ ತೀರೇ, ಶಾಲಿವಾಹನಶಕೇ, ಬೌದ್ಧಾವತಾರೇ, ರಾಮ ಕ್ಷೇತ್ರೇ ಅಸ್ಮಿನ್  ವರ್ತಮಾನೇ  ವ್ಯವಹಾರಿಕೇ ಚಾಂದ್ರಮಾನೇನ  ಪ್ರಭವಾದಿ  ಷಷ್ಠಿಸಂವತ್ಸರೇ, ಈ ರೀತಿ ಸಂಕಲ್ಪ ಪ್ರವರಗಳಲ್ಲಿ, ಪೂಜೆ ಶುಭ ಕಾರ್ಯಗಳಲ್ಲಿ ಹೇಳಿಕೊಂಡೇ ಮಾಡುತ್ತೇವೆ.  ಮೊದಲ ಐತಿಹಾಸಿಕ ಸಾಮ್ರಾಜ್ಯದ ಅರಸ 'ಶಾಲಿವಾಹನ' ತನ್ನ ಆಡಳಿತಾವಧಿಯಲ್ಲಿ ಧರ್ಮವನ್ನು ರಕ್ಷಣೆ ಮಾಡಿ ಸನಾತನ ಧರ್ಮವನ್ನು ಸ್ಥಾಪನೆ ಮಾಡಿದಂಥ ಮಹಾಪುರುಷ. ಶಾತ ಎಂದರೆ ಕುದುರೆ ಎಂದು ಕುದುರೆಯನ್ನು ವಾಹನವಾಗಿ ಉಳ್ಳವರೆಂದು ಹೇಳುತ್ತಾರೆ. ಶಾತವಾಹನರು ಬ್ರಾಹ್ಮಣ ಜಾತಿಗೆ ಸೇರಿದ್ದು, ವಿಷ್ಣು ಮತ್ತು ಮತ್ಸ್ಯ ಪುರಾಣಗಳಲ್ಲಿ ಮಾಹಿತಿ ದೊರೆಯುತ್ತದೆ.

ಕಾಲಮಾನ ತಿಳಿಯಲು ಬ್ರಹ್ಮನು ನಮಗೆ ಪಂಚಾಂಗ ಮಾಡಿಕೊಟ್ಟ ದಿನವೇ ಯುಗಾದಿಯಾಗಿದೆ.  ಮಹಾಭಾರತದ ಕಾಲದಲ್ಲೂ ಶ್ರೀ ಕೃಷ್ಣ ಯುಗಾದಿ ಹಬ್ಬದ ಆಚರಣೆ ಮಾಡಿದ್ದನು. ಜೀವನದಲ್ಲಿ  ಬರುವ ಕಷ್ಟ ಸುಖಗಳನ್ನು ಸಮಪ್ರಮಾಣದಲ್ಲಿ ಸ್ವೀಕರಿಸಬೇಕೆಂದು ಬೇವು ಬೆಲ್ಲವನ್ನು ಭಗವಂತನಿಗೆ ಅರ್ಪಿಸಿ ಸೇವನೆ ಮಾಡಿ ಸಂತೋಷದಿಂದ ಹಬ್ಬವನ್ನು ಆಚರಿಸಿದರೆ ಆ ವರ್ಷವೆಲ್ಲ ಎಂತಹದೇ ಕಷ್ಟ ಬರಲಿ ಧೃತಿಗೆಡದೆ ಎದುರಿಸಿ ಸಂತೋಷದಿಂದ
ಇರುತ್ತಾರೆ ಎಂಬುದು 'ಯುಗಾದಿ' ಆಚರಣೆಯ ಪ್ರಮುಖ ಉದ್ದೇಶವಾಗಿದೆ.ಹಬ್ಬದ ದಿನ ಮುಂಜಾನೆ ಎಣ್ಣೆ ಹಚ್ಚಿಕೊಂಡು ಅಭ್ಯಂಗನ ಸ್ನಾನ ಮಾಡಬೇಕು.ಎಣ್ಣೆ ಲಕ್ಷ್ಮಿಯಾದರೆ, ನೀರು ಗಂಗೆ,  ಹೊಸ ಬಟ್ಟೆ ಧರಿಸಿ ಮನೆಯಲ್ಲಿ ಹಿರಿಯರು ಮಾಡುವ ಪೂಜೆಗಳಲ್ಲಿ ಭಾಗಿಯಾಗಿ ತೀರ್ಥ ಪ್ರಸಾದ ಸೇವನೆ ಮಾಡಿ, ಸುಗ್ರಾಸ ಭೋಜನವನ್ನು ಸವಿದು ಆನಂದದಿಂದ ಕಳೆಯುತ್ತಾರೆ.ಪಂಚಾಂಗ ಶ್ರವಣ ಕೇಳುವುದು  ಪ್ರಮುಖ ಉದ್ದೇಶ. ಈ ರೀತಿ ಹಬ್ಬದ ಆಚರಣೆಯನ್ನು ಮಾಡುತ್ತಾರೆ.

ಯುಗಾದಿಯಂದು ಬೇವು ಬೆಲ್ಲ ಕೊಡುವಾಗ ಸ್ತೋತ್ರವನ್ನು ಹೇಳುತ್ತಾರೆ.

ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯ ಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಲ ಭಕ್ಷಣಮ್ !!


ನೂರು ವರ್ಷಗಳ ಕಾಲ ವಜ್ರದೇಹಿಯಾಗಿರಲು,
ಸರ್ವ ಸಂಪತ್ತುಗಳನ್ನು ಪಡೆಯಲು ಮತ್ತು ಸಕಲ ಅನಿಷ್ಠ ನಿವಾರಣೆಗಾಗಿಯೂ
ಬೇವಿನ ಹೊಸ ಚಿಗುರನ್ನು ತಿನ್ನಬೇಕು!!

- ಆಶಾ ನಾಗಭೂಷಣ

–>