-->

ಶ್ರೀ ಮುತ್ತೆತ್ತಿ ಆಂಜನೇಯ

ತೃ ಪರಿಪಾಲಕ ಶ್ರೀರಾಮಚಂದ್ರನು ತಾಯಿ ಕೈಕೆಯ ಆದೇಶದಂತೆ,  ಸೀತಾ ಲಕ್ಷ್ಮಣರ ಸಮೇತ 14 ವರ್ಷಗಳ ಕಾಲ ವನವಾಸ ಮುಗಿಸಿ ಬಂದನು.  ನಂತರ

ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗಿ ರಾಜ್ಯಬಾರದ ಕಡೆ ಗಮನ ಕೊಟ್ಟನು.

ಈ ಸಮಯದಲ್ಲಿ ಆಂಜನೇಯ ಅಯೋಧ್ಯೆಯನ್ನು ಬಿಟ್ಟು, ಹಿಮಾಲಯದ ತಪ್ಪಲಿನಲ್ಲಿ ತಪಸ್ಸು ಮಾಡಲು ಹೊರಡುವ ಮೊದಲು  ಮಂಡ್ಯ ಸಮೀಪ   ಈಗಿನ ಮುತ್ತತ್ತಿ ಗ್ರಾಮದ ಸಮೀಪ 'ಪಾದಧಾರೆ' ಎಂಬಲ್ಲಿ ಸ್ವಲ್ಪ ಕಾಲ ತಪಸ್ಸು ಮಾಡಲು ನಿರ್ಧರಿಸಿ ಧ್ಯಾನ ಮಾಡಲು ಕುಳಿತನು. ಒಂದಷ್ಟು ಕಾಲ ಕಳೆಯಿತು ಇತ್ತ ಅಯೋಧ್ಯೆಯಲ್ಲಿದ್ದ ಸೀತಾ ರಾಮಗೆ ಆಂಜನೇಯನನ್ನು ನೋಡಬೇಕೆಂಬ ಇಚ್ಛೆಯಾಯಿತಂತೆ. 

ಸೀತಾ ರಾಮ ಲಕ್ಷ್ಮಣ ಹಾಗೂ ಅನೇಕ ಸೈನಿಕರ ಜೊತೆ ಈ ಜಾಗಕ್ಕೆ ಬಂದರು.

ಒಂದು ದಿನ ಸೀತಾ ಮಾತೆ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಅವಳ ಮೂಗಿನಲ್ಲಿದ್ದ ಮುತ್ತಿನ ಮೂಗುತಿ ನೀರಿನೊಳಗೆ ಬಿದ್ದಿತು. ಇದರಿಂದ ಅವಳಿಗೆ ಬೇಜಾರಾಯ್ತು ಅವಳಿಗೆ ತುಂಬಾ ಇಷ್ಟವಾದ ಮೂಗು ಬಟ್ಟಾಗಿತ್ತು. ಇನ್ನೂ ಒಂದು ವಿಶೇಷ ಅಂದರೆ ಸೀತೆಯ ತಂದೆ ಜನಕ ಮಹಾರಾಜ ಅವಳಿಗೆ ಪ್ರೀತಿಯಿಂದ ಕೊಟ್ಟ  ಮುತ್ತಿನ ಮೂಗುತಿ  ಅದಾಗಿತ್ತು. ಹೀಗಾಗಿ ಅವಳು ರಾಮನಿಗೆ ಹೇಳಿದಳು. ಶ್ರೀರಾಮನು ಆಂಜನೇಯನಿಗೆ ಹುಡುಕಿ ಕೊಡುವಂತೆ ಹೇಳಿದ. ಆಂಜನೇಯನು ತನ್ನ ಉದ್ದ ಬಾಲವನ್ನು ನೀರಿನೊಳಗೆ ಬಿಟ್ಟು ತಿರುಗಿಸಿದ. ಮೂರನೇ ಸಲ ತಿರುಗಿಸಿದಾಗ ಮುತ್ತಿನ ಮೂಗುತಿ ಸಿಕ್ಕಿತು ಸೀತೆಗೆ ತಂದು ಕೊಟ್ಟನು. ನೀರಿನೊಳಗೆ ಬಿದ್ದ ಮೂಗುತಿ ಹುಡುಕಿ ತಂದುಕೊಟ್ಟ ಹನುಮಂತನ ಮೇಲೆ ಅವಳಿಗೆ ಅತೀವ  ಸಂತೋಷವಾಗಿ ಆ ಖುಷಿಯಲ್ಲಿ.

ಮುತ್ತಿನ ಮೂಗುತಿಯನ್ನು ನೀರಿನಿಂದ ಎತ್ತಿ ತಂದು ಕೊಟ್ಟ ಹನುಮಂತನಿಗೆ ಹೊಸ ಹೆಸರು 'ಮುತ್ತೆತ್ತಿ ರಾಯ' ಎಂದು ಕರೆದು ಮುಂದೆ ನೀನು ಈ ಹೆಸರಿನಿಂದ ಪ್ರಸಿದ್ಧಿ ಆಗು. ನನ್ನ  ಮೂಗುತಿ  ಬಿದ್ದು, ಆ ಮೂಗುತಿಯನ್ನು  ನೀರಿನೊಳಗಿಂದ ನೀನು ಎತ್ತಿ  ತೆಗೆದಿರುವ  ಈ ಜಾಗ ಪುಣ್ಯಕ್ಷೇತ್ರವಾಗಲಿ  ಎಂದು ಆಶೀರ್ವದಿಸಿದಳು. 


ಹನುಮಂತ ಮೂಗುತಿಯನ್ನು ಹುಡುಕುವ ಸಲುವಾಗಿ ನೀರಿನಲ್ಲಿ  ತನ್ನ ಉದ್ದನೆಯ ಬಾಲವನ್ನು  ನೀರಿನೊಳಗೆ ಇಳಿಬಿಟ್ಟು ರಭಸದಿಂದ ತಿರುಗಿಸಿದ ಕಾರಣ ಅದನ್ನು 'ತಿರುಗಣಿ ಮಡು' ಎಂದು ಕರೆಯುತ್ತಾರೆ , ಮಡು ಎಂದರೆ ಆಳ ಎಂದಾಗುತ್ತದೆ ಆದುದರಿಂದ ಆ ಜಾಗ ದಲ್ಲಿನ ನೀರು  'ಮಡು' ವಿನಂತೆ ಆಳವಾಗಿದೆ ಎಂದು ಹೇಳುತ್ತಾರೆ ,  ಅಲ್ಲದೆ  ಹರಿಯುತ್ತಾ ಬರುವ ಕಾವೇರಿ ನದಿಯು ಆ ಜಾಗದಲ್ಲಿ ಒಂದು ಸುತ್ತು ಸುಳಿಯಂತೆ ಸುತ್ತಿ ಬಂದು ಮುಂದೆ ಹರಿಯುತ್ತಾಳೆ. 

ಶ್ರೀ ಮುತ್ತೆತ್ತಿ  ಆಂಜನೇಯ


ಕಾಲ ಸರಿದಂತೆ  ಹನುಮಂತ ತಪಸ್ಸು ಮಾಡಿದ ಜಾಗದ ಹುತ್ತ  ಬೆಳೆದಿತ್ತು.  ಒಮ್ಮೆ ದನ ಕರುಗಳನ್ನು ಕಾಯುವ ಗೋಪಾಲ ಕಾಳಿದಾಸನೆಂಬ ಹುಡುಗನು  ಅದರ ಸಮೀಪದಲ್ಲಿ ದನ ಮೇಯಿಸುತ್ತಿದ್ದಾಗ  ಅಲ್ಲಿದ್ದ ಕಕ್ಕೆ ಮರಕ್ಕೆ (ಬ್ಯಾಟೆ ಮರ)  ಹೊಂದಿಕೊಂಡಂತೆ ಒಂದು ಹುತ್ತ ಬೆಳೆದಿತ್ತು. ದನಗಳ ಹಿಂಡಿನಲ್ಲಿದ್ದ  ಕಾಮಧೇನು ಎಂಬ ಹಸು ಹುತ್ತದ ಮೇಲೆ ಹಾಲು ಸುರಿಸುತ್ತಾ ಇರುವುದನ್ನು 

ನೋಡಿದ. ಆತನಿಗೆ ಇದು ಯಾವುದು ವಿಶೇಷವಾದ ಹುತ್ತ ಇರಬೇಕು ಎಂದು ಅನಿಸಿತು. ಅದೇ ಸಮಯಕ್ಕೆ ಈ ಹುತ್ತದೊಳಗಿರುವ ಆಂಜನೇಯನಿಗೆ ದೇವಸ್ಥಾನ ಆಗಬೇಕು ಎಂದು ಹೇಳಿದಂತೆ ಅಶರೀರ ವಾಣಿ ಕೇಳಿಸಿತು. ಕಕ್ಕೆ ಮರದಲ್ಲಿ 'ಆಂಜನೇಯನ ರೂಪ' ಮೂಡಿತ್ತು. ಆ ಮರದಲ್ಲಿ ಮೂಡಿದ ಆಂಜನೇಯನ ರೂಪದಂತೆ ಶಿಲೆಯಲ್ಲಿ ಕೆತ್ತನೆ ಮಾಡಿ ಪ್ರತಿಷ್ಠಾಪಿಸಲಾಯಿತು ಎನ್ನುತ್ತಾರೆ. 


ಅಂದಿನಿಂದ ಬೆಳೆದು ಬಂದು ಇದೀಗ ಪವಿತ್ರ ಪುಣ್ಯಕ್ಷೇತ್ರ ಎಂದಾಗಿದೆ. ದೂರ ದೂರದಿಂದ ಬರುವ ಜನರು  ಪ್ರಕೃತಿ ಸೌಂದರ್ಯ ಹಾಗೂ  ಮುತ್ತತ್ತಿ ಆಂಜನೇಯನನ್ನು ನೋಡಲು ಪ್ರವಾಸ ಬರುತ್ತಾರೆ. ಹಲವು ಸಮಸ್ಯೆಗಳಿಗೆ ಇಲ್ಲಿ ಪರಿಹಾರ ದೊರೆಯುತ್ತದೆ ರಚ್ಚೆ ಹಿಡಿದು ಅಳುವ ಮಕ್ಕಳು, ಮನೆಯೊಳ ಗಿನ ತೊಂದರೆ ತೊಡಕುಗಳಿಗೆ, ಕೊಟ್ಟಿಗೆಯಲ್ಲಿ ಹಸು ಕರುಗಳಿಗೆ ಬರುವ ತೊಂದರೆ, ಮಕ್ಕಳು ಭಯದಿಂದ ಕುಮುಟಿ ಬೀಳುವುದು, ಅನಾವಶ್ಯಕ ಕಿರಿ ಕಿರಿ, ಆರೋಗ್ಯ-  ಸಂಪತ್ತು- ಉದ್ಯೋಗ- ಹಲವಾರು ಮುಖ್ಯ ಕೆಲಸಗಳಿಗೆ, ಇನ್ನು ಅನೇಕ ಮನದಿಷ್ಟಾರ್ಥಗಳನ್ನು ಬೇಡಿಕೊಂಡು, ಅನೇಕ ಸೇವೆಗಳನ್ನು ಆಂಜನೇಯನಿಗೆ ಮಾಡಿಸುತ್ತಾರೆ ಹರಕೆಗಳನ್ನು ಹೇಳಿಕೊಳ್ಳುತ್ತಾರೆ ಅಲಂಕಾರಗಳಾದ ಬೆಣ್ಣೆ- ಶ್ರೀಗಂಧ - ಕೇಸರಿ ಚಂದನ, ವಿಳ್ಳೇದೆಲೆ, ಉದ್ದಿನ ವಡೆ-  ಅಂಬಡೆ, ಅಭಿಷೇಕ ಅರ್ಚನೆ ಹೇಗೆ ಇನ್ನೂ ಅನೇಕ ಹರಕೆಗಳನ್ನು ಹೇಳಿಕೊಂಡು ಕೇಳಿಕೊಂಡ ಎಲ್ಲಾ ಕೆಲಸಗಳೆಲ್ಲ ಹೂವಿನ ಸರ ಎತ್ತಿದಂತೆ ನೆರವೇರಿದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ. 


ಶನಿವಾರ ಭಾನುವಾರ ಆಂಜನೇಯನಿಗೆ ವಿಶೇಷ ಅಲಂಕಾರ ಮಾಡಿರುತ್ತಾರೆ.

ಶ್ರಾವಣ ಮಾಸದಲ್ಲಿ ರಥೋತ್ಸವ ಜಾತ್ರೆ ನಡೆಯುತ್ತದೆ. ಹನುಮಜ್ಜಯಂತೆ- ಶ್ರೀರಾಮನವಮಿ ಇವುಗಳನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆಂಜನೇಯನ ದರ್ಶನದ ಜೊತೆ ಪ್ರಕೃತಿ ಸೌಂದರ್ಯ ಕಾವೇರಿ ಒಡಲು ಇವುಗಳನ್ನೆಲ್ಲ ವೀಕ್ಷಿಸಲು  ಶನಿವಾರ ,ಭಾನುವಾರ, ರಜಾ ದಿನಗಳಲ್ಲಿ ಭಕ್ತರ ದಂಡೆ ಹರಿದು ಬರುತ್ತದೆ. ಎಲ್ಲರೂ ಒಮ್ಮೆಯಾದ್ರು ನೋಡಬೇಕಾದಂತ ಪುಣ್ಯ ಕರವಾದ ಪ್ರೇಕ್ಷಣೀಯ ಸ್ಥಳ' ಮುತ್ತತ್ತಿ ಆಂಜನೇಯ ಸ್ವಾಮಿ ದೇವಸ್ಥಾನ. 


ಕನ್ನಡದ ವರ ನಟ  ಡಾ ರಾಜಕುಮಾರ್ ರವರು ಮುತ್ತತ್ತಿ ಆಂಜನೇಯ' ನ ವರಪ್ರಸಾದದಿಂದ ಹುಟ್ಟಿದವರಾಗಿದ್ದು  ತಂದೆ ತಾಯಿ ಇವರಿಗೆ ಮುತ್ತುರಾಜ ಎಂದು ಹೆಸರಿಟ್ಟರು.  ಜನಗಳು ಅಭಿಮಾನದಿಂದ ಪ್ರೀತಿಯಿಂದ ಕರೆಯುವ ಹೆಸರು ಡಾಕ್ಟರ್ ರಾಜಕುಮಾರ್. 


ಉದ್ಯದಾದಿತ್ಯ ಸಂಕಾಶಂ ಉದಾರ ಭುಜ ವಿಕ್ರಮಮ್ !

ಕಂದರ್ಪ ಕೋಟಿ ಲಾವಣ್ಯಂ ಸರ್ವ ವಿದ್ಯಾ ವಿಶಾರದಮ್ !! 


ಶ್ರೀರಾಮ ಹೃದಯಾನಂದಂ ಭಕ್ತ ಕಲ್ಪ ಮಹೀರುಹಮ್ !

ಅಭಯಂ ವರದಂ ದೋರ್ಭ್ಯಾಂ ಕಲಯೇ ಮಾರುತಾತ್ಮಜಮ್ !! 


ಅಂಜನಾನಂದನಂ ವೀರಂ ಜಾನಕೀ ಶೋಕನಾಶನಮ್ !

ಕಪೀಶಂ ಅಕ್ಷಹಂತಾರಂ ವಂದೇ ಲಂಕಾ ಭಯಂಕರಮ್ !! 


ವಂದನೆಗಳೊಂದಿಗೆ,

ಬರಹ:- ಆಶಾ ನಾಗಭೂಷಣ

–>