-->

ಮನೆ ಮದ್ದುಗಳು , Home remedies

ಮನೆ ಮದ್ದುಗಳು , Home remedies ವಸ್ತು : ಸೌತೆಕಾಯಿ
ಉಪಯೋಗ : ಜೀರ್ಣಶಕ್ತಿ ಹೆಚ್ಚಳ ಮತ್ತು ಉತ್ತಮ ನಿದ್ರೆ.
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.

ವಸ್ತು : ಏಲಕ್ಕಿ
ಶಮನ : ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಏಲಕ್ಕಿ ಸೇವಿಸಿದರೆ ಶಮನಗೊಳ್ಳುವುದು. ಏಲಕ್ಕಿ ಯಿಂದ ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟಾಗುತ್ತದೆ. ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಪರಿಣಾಮ ಬೀರುವುದು. ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.

ವಸ್ತು : ಮೆಣಸು
ಶಮನ : ಅಜೀರ್ಣ, ಮೊಡವೆ, ಜಂತುಹುಳು.
ಮೆಣಸನ್ನು ಚೆನ್ನಾಗಿ ಪುಡಿ ಮಾಡಿ ಶುಂಠಿಯ ರಸದೊಡನೆ ಸೇವಿಸುವುದರಿಂದ ಅಜೀರ್ಣವು ನಿವಾರಣೆಯಾಗುತ್ತದೆ. ಕೆಲವು ಮೆಣಸಿನ ಕಾಳುಗಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿರುವ ಜಾಗಕ್ಕೆ ಹಚ್ಚಿದರೆ ವಾಸಿಯಾಗುತ್ತವೆ. ಹೊಟ್ಟೆಯಲ್ಲಿ ಜಂತುಹುಳುಗಳ ಉಪಟಳ ಜಾಸ್ತಿಯಾದಾಗ ಬೆಳಗ್ಗೆ ಮತ್ತು ರಾತ್ರಿ ಮೆಣಸಿನ ಕಷಾಯವನ್ನು ಕುಡಿಯುವುದು ಪರಿಣಾಮಕಾರಿ.

ವಸ್ತು : ಈರುಳ್ಳಿ
ಶಮನ : ರಕ್ತಹೀನತೆ, ಗಾಯದ ನೋವು, ರಕ್ತಸ್ರಾವ.
ಊಟದ ಜತೆ ಹಲವು ದಿನಗಳವರೆಗೆ ಪ್ರತಿನಿತ್ಯ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ರಕ್ತಹೀನತೆ ವಾಸಿಯಾಗುತ್ತದೆ. ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ. ಮೂಗಿನಿಂದ ಆಗಾಗ್ಗೆ ರಕ್ತ ಒಸರುತ್ತಿದ್ದರೆ, ಮೂಗಿಗೆ ಒಂದೆರಡು ತೊಟ್ಟು ಈರುಳ್ಳಿ ರಸವನ್ನು ಹಾಕುವುದರಿಂದ ರಕ್ತ ಒಸರುವುದು ನಿಲ್ಲುವುದು.

ವಸ್ತು : ಕಡಲೆಕಾಳು
ಉಪಯೋಗ : ತೂಕ ಹೆಚ್ಚಳ, ಬಿಕ್ಕಳಿಕೆಗೆ ಕಡಿವಾಣ.
ಕಡಲೇಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿವಸ ತಿಂದರೆ ಶರೀರದ ತೂಕವು ಹೆಚ್ಚಾಗುವುದು. ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ವಸ್ತು : ಹಲಸಿನ ಹಣ್ಣು
ಶಮನ : ತಲೆನೋವು, ನಿತ್ರಾಣ
ಸಾಮಾನ್ಯ ತಲೆನೋವು ಇರುವಾಗ, ಸ್ವಲ್ಪ ತುಪ್ಪದೊಡನೆ ಬೆಲ್ಲ ಸೇರಿಸಿ ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ಮತ್ತು ಇತರರಿಗೆ ಆಗಾಗ್ಗೆ ನಿತ್ರಾಣವೆನಿಸಿದಾಗ ಬಿಸಿ ಹಾಲಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯುವುದರಿಂದ ಚೈತನ್ಯ ಮೂಡುವುದು.

ವಸ್ತು : ಶುಂಠಿ
ಶಮನ : ಗಂಟಲು ಕಟ್ಟುವಿಕೆ, ಬಾಯಿ ವಾಸನೆ
ಶೀತ ಅಥವಾ ಇನ್ನಾವುದೇ ತೊಂದರೆಗಳಿಂದ ಗಂಟಲು ಕಟ್ಟಿ ಸರಿಯಾಗಿ ಮಾತನಾಡಲು ತೊಂದರೆಯಾದರೆ, ಹಸಿಶುಂಠಿ, ಲವಂಗ ಮತ್ತು ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಗಂಟಲು ಕಟ್ಟುವುದು ನಿವಾರಣೆಯಾಗುತ್ತದೆ. ಶುಂಠಿ ಸುಟ್ಟು ಬೂದಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.

ವಸ್ತು : ಮೆಂತ್ಯಸೊಪ್ಪು
ಶಮನ : ಸಕ್ಕರೆ ಕಾಯಿಲೆ
ಸಕ್ಕರೆ ರೋಗ ನಿಯಂತ್ರಣದಲ್ಲಿ ಮೆಂತ್ಯಸೊಪ್ಪು ಸಹಕಾರಿ.
ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಆರಂಭದಲ್ಲಿಯೇ ಪ್ರತಿದಿವಸ ಬೆಳಿಗ್ಗೆ ಮೆಣ್ತ್ಯಸೊಪ್ಪಿನ ರಸವನ್ನು ಕುಡಿಯುತ್ತಾ ಬಂದರೆ ಪರಿಣಾಮ ಬೀರುವುದು. ಮೆಂತ್ಯಸೊಪ್ಪಿನಂತೆಯೇ ಮೆಂತ್ಯ ಕೂಡ ಔಷಧೀಯ ಗುಣಗಳನ್ನು ಹೊಂದಿದೆ.

ವಸ್ತು : ಎಳ್ಳು
ಶಮನ : ಸುಟ್ಟ ಗಾಯ, ಉರಿಮೂತ್ರ
ಸುಟ್ಟಗಾಯಕ್ಕೆ ಎಳ್ಳೆಣ್ಣೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ. ಎಳ್ಳು ಮತ್ತು ಸೌತೆಬೀಜವನ್ನು ಅರೆದು ಹಾಲು, ತುಪ್ಪದೊಡನೆ ಸೇರಿಸಿ ಕುಡಿಯುವುದರಿಂದ ಎಲ್ಲ ರೀತಿಯ ಕಟ್ಟು ಮೂತ್ರ ಮತ್ತು ಉರಿಮೂತ್ರ ಗುಣವಾಗುತ್ತದೆ.

ಸಾಸಿವೆ(ಮಸ್ಟರ್ಡ್)
ಶಮನ : ಹಲ್ಲು ನೋವು, ಉಪ್ಪಿನಕಾಯಿ ಶಿಲೀಂದ್ರ
ಹಲ್ಲು ನೋವಿರುವವರು ಸ್ವಲ್ಪ ಸಾಸಿವೆ ಕಾಳನ್ನು ಅಗಿದು ಸ್ವಲ್ಪ ಹೊತ್ತಿನ ನಂತರ ಉಗಿಯಬೇಕು. ಇದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಜತೆಗೆ ಹಸಿವನ್ನೂ ಹೆಚ್ಚಿಸುತ್ತದೆ. ಉಪ್ಪಿನಕಾಯಿಯಲ್ಲಿ ಸಾಸಿವೆಯನ್ನು ಸ್ವಲ್ಪ ಹೆಚ್ಚು ಬಳಸಿದರೆ, ಬೇಗ ಕೆಡುವುದಿಲ್ಲ. ಸಾಮಾನ್ಯವಾಗಿ ಉಪ್ಪಿನಕಾಯಿ ಹಾಳಾಗಲು ಆಸ್ಟರ್ಜಲಿನ್ ಎಂಬ ಶಿಲೀಂದ್ರ ಕಾರಣವಾಗಿದ್ದು, ಇದು ಬೆಳೆಯುವುದನ್ನು ಸಾಸಿವೆ ತಡೆಯುತ್ತದೆ.

ವಸ್ತು : ಗೋಧಿ
ಶಮನ : ಹೊಟ್ಟೆ ಹುಣ್ಣು, ಕೀಲುನೋವು
ಗೋಧಿ ಹಿಟ್ಟಿನಲ್ಲಿ ಚಪಾತಿ ಮಾಡಿ ತಿನ್ನುವುದರಿಂದ ಹೊಟ್ಟೆಯಹುಣ್ಣು ನಿವಾರಣೆಯಾಗುವುದು. ಜತೆಗೆ ಹಲ್ಲು ಮತ್ತು ವಸಡುಗಳಿಗೆ ಶಕ್ತಿ ಬರುವುದು. ಗೋಧಿ ಹಿಟ್ಟಿನ ತಂಬಿಟ್ಟು ಮಾಡಿಕೊಂಡು ತಿಂದರೆ ಕೀಲು ಮತ್ತು ಎಲುಬು ನೋವು ಶಮನಗೊಳ್ಳುವುದು.

ವಸ್ತು : ಶುಂಠಿ
ಶಮನ : ಅಜೀರ್ಣ, ನೆಗಡಿ, ಹಲ್ಲುನೋವು.
ಊಟ ಮಾಡುವುದಕ್ಕೆ ಮೊದಲು ಅವರೆಕಾಳಿನಷ್ಟು ಹಸಿಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣದ ಸಮಸ್ಯೆ ಇಲ್ಲವಾಗುವುದು. ಹಸಿಶುಂಠಿಯ ಕಷಾಯಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ನೆಗಡಿ ನಿವಾರಣೆಯಾಗುವುದು. ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲು ನೋವು ಶಮನವಾಗುವುದು.

ವಸ್ತು : ಜೇನುತುಪ್ಪ
ಶಮನ : ಸುಟ್ಟ ಗಾಯ, ಚರ್ಮರೋಗ.
ಸುಟ್ಟ ಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಮನವಾಗಿ ಗಾಯ ಶೀಘ್ರ ಮಾಗುತ್ತದೆ. ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುವುದು.

ವಸ್ತು : ಕಡಲೇ ಕಾಳು
ಶಮನ : ನಿಶ್ಯಕ್ತಿ, ನೆಗಡಿ
ನಿಶ್ಯಕ್ತಿಯಿಂದ ಬಳಲುವವರು, ಹೆಚ್ಚು ವ್ಯಾಯಾಮ ಮಾಡುವವರು ಎರಡು ಮೂರು ಚಮಚದಷ್ಟು ಕಡಲೇ ಕಾಳನ್ನು ತಣ್ಣೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ಒಣದ್ರಾಕ್ಷಿಯ ಜತೆ ಅಗಿದು ಸೇವಿಸಿ ನಂತರ ಹಾಲು ಕುಡಿದರೆ ನಿಶ್ಯಕ್ತಿ ಕಡಿಮೆಯಾಗುವುದು. ನೆಗಡಿಯಿರುವವರು ಬಿಸಿಯಾದ ಕಡಲೆಯನ್ನು ತಿನ್ನುವುದರಿಂದ ಶೀತ ಕಡಿಮೆಯಾಗುತ್ತದೆ.

ವಸ್ತು : ಹಲಸಿನ ಹಣ್ಣು
(ಜ್ಯಾಕ್ ಫ್ರೂಟ್)
ಶಮನ : ಪಿತ್ತ ವಿಕಾರ, ನರಗಳ ದೌರ್ಬಲ್ಯ.
ಹಲಸಿನ ಹಣ್ಣನ್ನು ಜೇನುತುಪ್ಪದೊಡನೆ ತಿನ್ನುತ್ತಾ ಬಂದರೆ ಪಿತ್ತವಿಕಾರಗಳು ಶಮನಗೊಳ್ಳುವುದು. ತೊಳೆಗಳನ್ನು ಸಣ್ಣದಾಗಿ ತುಂಡುಮಾಡಿ ಬಾಳೆಹಣ್ಣು, ಜೇನುತುಪ್ಪದೊಡನೆ ಸೇವಿಸಿದರೆ ದೈಹಿಕ ಶಕ್ತಿ ಹೆಚ್ಚುವುದಲ್ಲದೇ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಹಲಸಿನ ಸೇವನೆಯಿಂದ ವೀರ್ಯ್ ವೃದ್ಧಿಯೂ ಆಗುತ್ತದೆ. ಅತಿಯಾಗಿ ತಿಂದರೆ ಹೊಟ್ಟೆನೋವು ಬರುವ ಸಾಧ್ಯತೆ ಇದೆ.

ವಸ್ತು : ಸೀತಾಫಲ (ಕಸ್ಟರ್ಡ್ ಆಪಲ್)
ಉಪಯೋಗ : ಜೀರ್ಣಶಕ್ತಿ ಹೆಚ್ಚಳ, ರಕ್ತವೃದ್ಧಿ.
ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು. ಇದು ತಂಪುಕಾರಕವಾಗಿದ್ದು ಸೇವನೆಯಿಂದ ರಕ್ತವೃದ್ಧಿಯಾಗುವುದರ ಜತೆಗೆ ಸ್ನಾಯುಗಳು ಬಲಗೊಳ್ಳುತ್ತವೆ. ವಾಂತಿ ಹಾಗೂ ಹೊಟ್ಟೆ ಉರಿ ಶಮನವಾಗುತ್ತದೆ. ಕುರುಗಳನ್ನು ಪಕ್ವಗೊಳಿಸಲು ಹಣ್ಣಿನ ತಿರುಳನ್ನು ಉಪ್ಪಿನ ಜತೆ ಬೆರೆಸಿ ಲೇಪಿಸಬೇಕು.

ವಸ್ತು : ಹಾಗಲಕಾಯಿ
(ಬಿಟ್ಟರ್ ಗೌರ್ಡ್)
ಶಮನ : ಮಧುಮೇಹ, ಕರುಳಿನ ಹುಣ್ಣು, ಮೂಲವ್ಯಾಧಿ.
ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು. ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುವುದು.

ವಸ್ತು : ಅಂಜೂರ (ಫಿಗ್)
ಶಮನ : ಒತ್ತಡ, ಮಲಬದ್ಧತೆ, ಮೂಲವ್ಯಾಧಿ.
ಅಂಜೂರದ ಹಣ್ಣುಗಳ ಸೇವನೆಯಿಂದ ಅಧಿಕ ಕೆಲಸದಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಯಾಗುವುದು. ನವ ಚೈತನ್ಯ ಮೂಡುವುದು. ಈ ಹಣ್ಣಿನಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಶಮನವಾಗುವುದು. ಮೂಲವ್ಯಾಧಿಯಿಂದ ಬಳಲುವವರು ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಗುಣವಾಗುವುದು.

ವಸ್ತು ಸೇಬು (ಆಪಲ್)
ಶಮನ : ತಲೆನೋವು, ಮರೆವು, ಮೊಡವೆ.
ಸೇಬಿನ ಹಣ್ಣನ್ನು ತುಂಡುಮಾಡಿಕೊಂಡು ಉಪ್ಪು ಸಹಿತ ನಿರಂತರ ಸೇವಿಸಿದರೆ ತಲೆನೋವು ಕಡಿಮೆಯಾಗುವುದು. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಂಡರೆ ಮೊಡವೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುವುದು. ಊಟವಾದ ಬಳಿಕ ಸೇಬನ್ನು ತಿಂದರೆ ಜ್ನಾಪಕ ಶಕ್ತಿ ಹೆಚ್ಚುವುದು.

ವಸ್ತು : ಪರಂಗಿ ಹಣ್ಣು
(ಪಪಾಯ)
ಶಮನ : ಹೃದಯ ದೌರ್ಬಲ್ಯ
ಪರಂಗಿಹಣ್ಣಿನ ಜತೆ ಹಾಲು ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಹೃದಯ ದೌರ್ಬಲ್ಯ ನಿವಾರಣೆಯಾಗಿ ಹೊಸ ಚೈತನ್ಯ ಮೂಡುವುದು. ಹಾಲುಣಿಸುವ ತಾಯಂದಿರು ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಶಕ್ತಿ ಹೆಚ್ಚುವುದು. ಊಟದ ನಂತರ ಹಣ್ಣನ್ನು ಸೇವಿಸುತ್ತಾ ಬಂದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು.

ವಸ್ತು : ಕಡಲೇಕಾಯಿ
ಉಪಯೋಗ : ಮುಖದ ಕಾಂತಿ ಹೆಚ್ಚಳ, ಮಧುಮೇಹಿಗಳಿಗೆ ಅನುಕೂಲ.
ಒಂದು ಚಮಚ ಕಡಲೇಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರೆಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಗೋಧಿ ಹಿಟ್ಟು ಹಾಗೂ ಶೇಂಗಾ ಹಿಟ್ಟು ಬೆರೆಸಿದ ರೊಟ್ಟಿಯು ಮಧುಮೇಹಿಗಳಿಗೆ ಹಿತ. ಶೇಂಗಾ ಹಿಂಡಿಯಲ್ಲಿ ಉತ್ತಮ ಸಸಾರಜನಕವಿದ್ದು, ದನಕರುಗಳಿಗೆ ಉತ್ತಮ.

ವಸ್ತು : ಮಾವು (ಮ್ಯಾಂಗೊ)
ಶಮನ : ಮೂಲವ್ಯಾಧಿ, ವಾತ-ಪಿತ್ತ, ಮಲಬದ್ಧತೆ, ಅಜೀರ್ಣ.
ಹುಣಸೆ ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು. ಹಣ್ಣನ್ನು ಹಿತಮಿತವಾಗಿ ತಿಂದರೆ ವಾಯು ಶಮನಗೊಳ್ಳುವುದು. ವಾತ-ಪಿತ್ತ ನಾಶಗೊಳಿಸಿ ಹೃದಯಕ್ಕೆ ಹಿತವಾಗುವುದು. ಉಪ್ಪು ಮತ್ತು ಜೇನುತುಪ್ಪವನ್ನು ನಂಚಿಕೊಂಡು ಮಾವಿನಕಾಯಿ ಹೀಚು ತಿಂದರೆ ಮಲಬದ್ಧತೆ ಮತ್ತು ಅಜೀರ್ಣ ನಿವಾರಣೆಯಾಗುವುದು.

ವಸ್ತು : ಅಡುಗೆ ಉಪ್ಪು
ಶಮನ : ಬಾಯಿ ಹುಣ್ನು
ಒಂದು ಬಟ್ಟಲು ಬಿಸಿನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಕರಗಿಸುವುದು. ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಶಮನವಾಗುವುದು.

ವಸ್ತು : ಮೆಣಸು
ಶಮನ : ಹಲ್ಲುನೋವು
ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚುವುದರಿಂದ ಕೆಟ್ಟ ನೀರು ಸುರಿದುಹೋಗಿ ನೋವು ಕಡಿಮೆಯಾಗುವುದು. ವಸಡಿಗೆ ನಿಂಬೆರಸ ಹಚ್ಚುವುದರಿಂದ ಹಲ್ಲುನೋವು ಶಮನವಾಗುವುದು.

ವಸ್ತು : ಕಿತ್ತಳೆ
ಶಮನ : ಮುಖದಲ್ಲಿ ಕಲೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖದಲ್ಲಿ ಕಲೆಯಿರುವ ಭಾಗದಲ್ಲಿ ಮೃದುವಾಗಿ ತಿಕ್ಕಬೇಕು. ಪ್ರತಿದಿನ ಹೀಗೆ ಮಾಡುತ್ತಿದ್ದರೆ ಮುಖದಲ್ಲಿನ ಮೊಡವೆಗಳು ಹಾಗೂ ಕಪ್ಪು ಕಲೆಗಳು ನಿವಾರಣೆಯಗುವುವು.

ವಸ್ತು : ಕೊತ್ತಂಬರಿ
ಶಮನ : ತಲೆನೋವು, ಬಾಯಿಯ ದುರ್ಗಂಧ.
ಕೊತ್ತಂಬರಿ ಸೊಪ್ಪಿನ ರಸವನ್ನು ಹಣೆಗೆ ಲೇಪ ಹಾಕುವುದರಿಂದ ತಲೆನೋವು ನಿವಾರಣೆಯಾಗುವುದು. ಬರೀ ಕೊತ್ತಂಬರಿಸೊಪ್ಪನ್ನು ಬಾಯಿಯಲ್ಲಿ ಜಗಿಯುವುದರಿಂದ ಬಾಯಿಯಿಂದ ದುರ್ಗಂಧ ಬರುವುದಿಲ್ಲ. ಜತೆಗೆ ದಂತ ಕ್ಷಯವೂ ನಿವಾರಣೆಯಾಗುತ್ತದೆ.

ವಸ್ತು : ಉದ್ದು
ಶಮನ : ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ.
ಉದ್ದಿನ ಬೇಳೆಯನ್ನು ಹುರಿದು ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ ಪಾಯಸ ಮಾಡಿ ಸೇವಿಸುವುದರಿಂದ ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ ಹೆಚ್ಚುವುದು. ಉದ್ದಿನ ಬೇಳೆ ತೊವ್ವೆಯನ್ನು ತಯಾರಿಸಿ ಊಟದ ಜತೆ ಸೇವಿಸಿದರೆ ಅಂಗಾಂಗಗಳು ಬಲಗೊಳ್ಳುವುವು.

ವಸ್ತು : ನಿಂಬೆ
ಶಮನ : ಸೊಳ್ಳೆಗಳ ಕಾಟ, ಬಾಯಿಯ ದುರ್ವಾಸನೆ.
ಸೊಳ್ಳೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ವಾಸಿಸುವ ಜನರು ಮೈಕೈಗೆ ನಿಂಬೆರಸ ಸವರಿಕೊಂಡರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ. ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ನಿಂಬೆರಸವನ್ನು ನೀರಿನಲ್ಲಿ ಬೆರೆಸಿ ಆಗಾಗ ಬಾಯಿ ಮುಕ್ಕಳಿಸುವುದರಿಂದ ನಿವಾರಣೆಯಾಗುವುದು.

ವಸ್ತು : ಲವಂಗ
ಶಮನ : ಹಲ್ಲು ನೋವು, ಕೆಮ್ಮು.
ಹಲ್ಲು ನೋವಿಗೆ ಲವಂಗದ ಎಣ್ಣೆ ಅಥವಾ ಲವಂಗದ ಮುಲಾಮನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ. ಸಾಧಾರಣ ಕೆಮ್ಮು ಕಾಣಿಸಿಕೊಂಡಾಗ ಕಲ್ಲುಸಕ್ಕರೆ ಮತ್ತು ಲವಂಗವನ್ನು ಬಾಯಿಗೆ ಹಾಕಿಕೊಂಡು ಜಗಿದು ರಸ ನುಂಗುವುದರಿಂದ ಶಮನವಾಗುವುದು.

ವಸ್ತು : ತುಳಸಿ
ಶಮನ : ಮೈಕೈನೋವು
ಒಂದು ಲೋಟ ನೀರಿನಲ್ಲಿ ಹತ್ತು ತುಲಸಿ ಎಲೆಗಳನ್ನು ಚೆನ್ನಾಗಿ ಕುದಿಸುವುದು. ನೀರು ಚೆನ್ನಾಗಿ ಕುದಿದು ಅರ್ಧ ಲೋಟ ಆದಮೇಲೆ ಸೋಸಿಕೊಳ್ಳುವುದು. ತಣ್ಣಗಾದ ಕಷಾಯಕ್ಕೆ ಉಪ್ಪನ್ನು ಹಾಕಿ ಕುಡಿಯುವುದು. ಮೈಕೈನೋವು ನಿಲ್ಲುವವರೆಗೂ ಪ್ರತಿದಿನ ಈ ಕಷಾಯ ಬಳಸುವುದು. ಜತೆಗೆ, ಅರ್ಧ ಗ್ರಾಂ ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಒಂದು ಟೀ ಚಮಚ ಜೇನುತುಪ್ಪದೊಂದಿಗೆ ಕನಿಷ್ಟ ಪಕ್ಷ ದಿನಕ್ಕೆರಡು ಬಾರಿ ಸೇವಿಸಿದರೆ ನೋವು ಬೇಗ
ಶಮನವಾಗುವುದು.

ವಸ್ತು : ಮಾವಿನ ಎಲೆಗಳು
ಶಮನ : ಕಿವಿ ಸೋಂಕು
ಕೆಲವು ತಾಜಾ ಮಾವಿನ ಎಲೆಗಳನ್ನು ಚೆನ್ನಾಗಿ ಅರೆದು ಅವುಗಳಿಂದ ಒಂದು ಟೀ ಚಮಚ ರಸವನ್ನು ತಯಾರಿಸಿಕೊಳ್ಳುವುದು. ಈ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ಸೋಂಕಿಗೆ ಒಳಗಾಗಿರುವ ಕಿವಿಗೆ ಔಷಧವಾಗಿ ಬಳಸಬಹುದು. ದಿನಕ್ಕೆರಡು ಬಾರಿ ಪ್ರತಿಸಲವೂ ಒಂದೆರಡು ಹನಿ ಬಳಸಿದರೆ ಸೋಂಕು ನಿವಾರಣೆಯಾಗುವುದು.

ವಸ್ತು : ಖರ್ಜೂರ
ಶಮನ : ಜಂತುಹುಳು, ಭೇದಿ.
ಜಂತುಹುಳುಗಳಿಂದ ಬಳಲುತ್ತಿರುವವರು ಐದು ಖರ್ಜೂರ ತಿಂದು ನಿಂಬೆಹಣ್ಣಿನ ಪಾನೀಯ ಕುಡಿದರೆ ಶಮನವಾಗುವುದು. ಪರಿಣಾಮ ಬೀರುವವರೆಗೂ ಮುಂದುವರಿಸುವುದು ಒಳ್ಳೆಯದು. ಭೇದಿಯಾಗುತ್ತಿರುವಾಗ ಖರ್ಜೂರ ಸೇವಿಸಿದರೆ ನಿವಾರಣೆಯಾಗುವುದು.

ವಸ್ತು : ಉದ್ದು
ಶಮನ : ಸ್ತ್ರೀಯರ ಬಿಳುಪು ರೋಗ.
ಉದ್ದಿನ ಹಿಟ್ಟು, ಅತಿಮಧುರ, ಕುಂಬಳದ ಬೇರು ಹಾಗೂ ಅಶ್ವಗಂಧ, ಇವುಗಳನ್ನು ಸಮನಾಗಿ ಕುಟ್ಟಿ ಶೋಧಿಸಿಟ್ಟುಕೊಂಡು ಹಲವು ದಿನಗಳವರೆಗೆ ಬಿಡದೆ ಒಂದೊಂದು ಚಮಚದಂತೆ ಜೇನುತುಪ್ಪದೊಡನೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಸ್ತ್ರೀಯರ ಬಿಳುಪುರೋಗ ವಾಸಿಯಾಗುತ್ತದೆ.

ವಸ್ತು : ಬಿಲ್ವ
ಶಮನ : ಕಫ, ಊತ.
ಕಫ ಕಟ್ಟಿಕೊಂಡು ಎದೆ ನೋವು ಬರುತ್ತಿದ್ದರೆ ಬಿಲ್ವದ ಎಲೆಗಳ ರಸವನ್ನು ಕುಡಿದರೆ ಶಮನವಾಗುವುದು. ಊತವಿರುವಾಗ ಎಲೆಗಳನ್ನು ಬಿಸಿ ಮಾಡಿ ಪಟ್ಟು ಹಾಕಿದರೆ ಪರಿಣಾಮ ಬೀರುವುದು.

ವಸ್ತು : ವೀಳ್ಯದೆಲೆ
ಶಮನ : ಕೆಮ್ಮು, ನೋವು.
ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು. ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಮೂತ್ರ ಸುಲಭವಾಗಿ ಆಗುವುದು.

ವಸ್ತು : ಅರಿಶಿನ
ಶಮನ : ರಕ್ತ ಸ್ರಾವ, ಮೊಡವೆ.
ದೇಹದ ಯಾವುದೇ ಭಾಗ ಕೊಯ್ದುಕೊಂಡು ರಕ್ತ ಒಸರುತ್ತಿದ್ದರೆ, ಆ ಗಾಯದ ಮೇಲೆ ಅರಿಶಿನ ಹುಡಿಯನ್ನು ಉದುರಿಸಿದರೆ ರಕ್ತ ಬರುವುದು ನಿಲ್ಲುವುದು. ಮೊಡವೆಗಳಿಗೆ ಅರಿಶಿನದ ಕೊರಡನ್ನು ತೇಯ್ದು ಲೇಪಿಸುವುದರಿಂದ ಅವುಗಳು ಕ್ರಮೇಣ ಕಡಿಮೆಯಾಗುತ್ತವೆ.

ವಸ್ತು : ತುಳಸಿ
ಶಮನ : ಹುಳುಕಡ್ಡಿ.
ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು, ಅನಂತರ ತುಳಸಿ ಸೊಪ್ಪಿನ ಕಷಾಯದಿಂದ ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಇದಾದ ಮೇಲೆ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದು ಹುಳುಕಡ್ಡಿಯ ಮೇಲೆ ಲೇಪಿಸುವುದರಿಂದ ಶೀಘ್ರ ಗುಣ ಕಂಡುಬರುವುದು.

ವಸ್ತು : ಶ್ರೀಗಂಧ
ಶಮನ : ಚರ್ಮದ ಅಲರ್ಜಿ.
ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಶ್ರ್‍ಈಗಂಧವನ್ನು ಬಳಸಿದರೆ ಪರಿಣಾಮ ಬೀರುವುದು. ಒಂದು ಟೀ ಚಮಚ ನಿಂಬೇಹಣ್ಣಿನ ರಸದೊಂದಿಗೆ ಶ್ರ್‍ಈಗಂಧದ ಪುಡಿಯನ್ನು ಬೆರೆಸಿ ಅಲರ್ಜಿಯಿರುವ ಚರ್ಮದ ಮೇಲೆ ಲೇಪಿಸುತ್ತಾ ಬಂದರೆ ಗುಣವಾಗುವುದು.

ವಸ್ತು : ಪರಂಗಿಹಣ್ಣು
ಉಪಯೋಗ : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆ.
ಪ್ರತಿದಿನ ಪರಂಗಿಹಣ್ಣನ್ನು ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರು ಹಣ್ಣು ಸೇವಿಸಿದರೆ ಪರಿಣಾಮ ಬೀರುವುದು. ಬಾಣಂತಿಯರು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚುವುದು.

** We recommend , please consult your physician to get more details on the above and if it suits to your nature before practicing.
–>