-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 2

 * ಅಣ್ಣ, ತಂದೆ ಮತ್ತು ಯಾರು ವಿದ್ಯೆಯನ್ನು ಕೊಡುತ್ತಾರೋ ಈ ಮೂವರೂ ತಂದೆಯಸಮಾನರೆಂದು ಧರ್ಮದಿಂದ ನಡೆಯುವವರು ಗೌರವಿಸುತ್ತಾರೆ.

* ಅನ್ಯರ ಆಸ್ತಿಯನ್ನು ಅಪಹರಿಸುವದು , ಪರಸ್ತ್ರೀಯರನ್ನು ಕೆಣಕುವದು , ಸ್ನೇಹಿತರನ್ನು ತ್ಯಜಿಸುವದು -- ಇವು ಮೂರೂ ಸರ್ವನಾಶ ಮಾಡತಕ್ಕ ದೋಷಗಳು.


* ಅನ್ನದ ಮೇಲೆ ಸೊಕ್ಕು ತೋರಿಸಿದವ ರೋಗಿಯಾಗುತ್ತಾನೆ.
ದುಡ್ಡಿನ ಮೇಲೆ ಸೊಕ್ಕು ತೋರಿಸಿದವ ದರಿದ್ರನಾಗುತ್ತಾನೆ.
ಕಾಯಕದ ಮೇಲೆ ಸೊಕ್ಕು ತೋರಿಸಿದವ ನಿರುದ್ಯೋಗಿಯಾಗುತ್ತಾನೆ

* ಗುರಿ ಮುಟ್ಟುವದಕ್ಕೆ ಅಂತ ಹೊರಟ ಮೇಲೆ ಹಿಂತಿರುಗಿ ನೋಡಬಾರದು. ಗುರಿ ಮುಟ್ಟುವುದು ನಿದಾನ ಆಗಬಹುದು, ಆದರೆ ಗೆಲ್ಲುವದಂತೂ ಖಚಿತ

* ಒಂದು ಕ್ಷಣ ಮೌನವಹಿಸಿದರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು.

* ಹೂಗಳೂ , ಹಣ್ಣುಗಳೂ ಯಾರ ಪ್ರೇರಣೆಯೂ ಇಲ್ಲದೇ ತಮ್ಮ ತಮ್ಮ ಕಾಲವನ್ನು ಮೀರದೇ ಇರುತ್ತವೆ. ಹಾಗೆಯೇ ಪುರಾಕೃತವಾದ ಕರ್ಮವೂ ಸಹ.

* ಯಾವುದೂ ಶಾಶ್ವತವಲ್ಲ ಎಂಬುದು ಅರಿವಿಗೆ ಬಂದುಬಿಟ್ಟರೆ ನೀವು ಹೆಚ್ಚು ತಾಳ್ಮೆ ಗಳಿಸುವಿರಿ, ಕ್ಷಮಿಸುವಿರಿ ಮತ್ತು ಇತರರ ಕುರಿತು ಆರೋಪ ಮಾಡುವುದು ಬಿಡುವಿರಿ!

* ಚಿಂತೆ ಮಾಡುವುದು ನಿಜಕ್ಕೂ ವ್ಯರ್ಥ.ಅದು ನಾಳಿನ ಸಮಸ್ಯೆಯನ್ನು ಪರಿಹರಿಸುವುದರ ಬದಲಿಗೆ ಇಂದಿನ ಶಕ್ತಿಯನ್ನು ಖಾಲಿ ಮಾಡಿಬಿಡುತ್ತದೆ.

* ವಿಷವಿರುವ ಬಂಗಾರದ ಪಾತ್ರೆಗಿಂತ ಜೇನಿರುವ ಮಣ್ಣಿನ ಮಡಿಕೆಯೇ ಯೋಗ್ಯವಾದದ್ದು...​ ​ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಗುಣಗಳಿಂದ ನಮ್ಮ ಯೋಗ್ಯತೆ ಹೆಚ್ಚುತ್ತದೆ..​

* ದುಷ್ಟನು ಇನ್ನೊಬ್ಬರಲ್ಲಿರುವ ಸಾಸುವೆ ಕಾಳಷ್ಟು ದೋಷವನ್ನು ಕಂಡು ಹಿಡಿಯುತ್ತಾನೆ. ಆದರೆ ತನ್ನಲ್ಲಿರುವ ಬಿಲ್ವಫಲದಷ್ಟು ದೊಡ್ಡ ತಪ್ಪಿದ್ದರೂ ಅವನು ಕಾಣುವುದಿಲ್ಲ.

* ಮುಂದೆ ಅನರ್ಥವು ಸಂಭವಿಸೀತೆಂಬ ಶಂಕೆಯಿದ್ದಾಗ , ಶುಭವನ್ನು ಬಯಸುವ ವಿವೇಕಿಯು ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಚಿಂತಿಸಬೇಕು.

* ಬಲಿಷ್ಠವಾದ ತೋಳುಗಳು ಜಗತ್ತನ್ನು ಎಷ್ಟು ಗೆಲ್ಲಬಹುದೋ, ಅದಕ್ಕಿಂತ ಹೆಚ್ಚನ್ನು ಮಾನವೀಯತೆಯಿಂದ ಕೂಡಿದ, ನಮಸ್ಕಾರ ಮಾಡುವ ಎರಡು ಕೈಗಳು ಗೆಲ್ಲಬಹುದು.

* ಕಾರ್ಯವನ್ನು ಆರಂಭಿಸದಿರುವದು ಮೊದಲನೆಯ ಬುದ್ಧಿ ಲಕ್ಷಣ. ಆರಂಭಿಸಿದ ಮೇಲೆ ಅದನ್ನು ತುದಿಮುಟ್ಟಿಸುವದು ಎರಡನೆಯ ಬುದ್ಧಿಲಕ್ಷಣ

* ಗುಣಶಾಲಿ ಜನರ ( ಸಜ್ಜನರ ) ಸಹವಾಸದಿಂದ ಸಣ್ಣವನೂ  ಗೌರವವನ್ನು ಪಡೆಯುತ್ತಾನೆ.  ಹೂವಿನ ಹಾರದ ಸಂಬಂಧದಿಂದ ನಾರನ್ನು ತಲೆಯಲ್ಲಿ ಮುಡಿಯುತ್ತಾರೆ.

* ಇನ್ನೊಬ್ಬರನ್ನೂ ಗೌರವಿಸುವುದನ್ನು ಕಲಿಯದಿದ್ದರೆ,ನಾವೆಂದು ದೊಡ್ಡವರಾಗುವುದಿಲ್ಲ..

* ದುಂಬಿಯು ಹೂಗಳನ್ನು ಕಾಪಾಡುತ್ತಾ ಹೇಗೆ ಮಕರಂದವನ್ನು ಹೀರಿಕೊಳ್ಳುತ್ತದೆಯೋ ಹಾಗೆಯೇ ಹಿಂಸೆ ಮಾಡದೇ ಮನುಷ್ಯರಿಂದ ಹಣವನ್ನು ಸಂಗ್ರಹಿಸಬೇಕು

* ನಮ್ಮೆಲ್ಲರಲ್ಲಿಯೂ ಅನೇಕ ರೀತಿಯ ದೌರ್ಬಲ್ಯ ಗಳಿರುವುದು ಸಹಜವೇ ಆದರೆ ಅದನ್ನು ಅರಿತು ಆ ದೌರ್ಬಲ್ಯ ವನ್ನು ಮೀರಿ ನಿಲ್ಲುವ ಪ್ರಯತ್ನ ವೇ ಸಾಧನಾ ಮಾರ್ಗದ ಮೊದಲ ಹೆಜ್ಜೆ

*ನಿನ್ನೆ  ಸುಖವಿತ್ತೆಂದು ಇತಿಹಾಸ ಹೇಳುತ್ತದೆ. ನಾಳೆ ಸುಖವಿರುವುದೆಂದು ವಿಜ್ಞಾನ ಹೇಳುತ್ತದೆ. ಆದರೆ, ಧರ್ಮ ಹೇಳುತ್ತದೆ , ಮನದಲ್ಲಿ ಸತ್ಯತೆ, ಹೃದಯದಲ್ಲಿ ಒಳ್ಳೆಯತನವಿದ್ದಲ್ಲಿ ಪ್ರತಿ ದಿನವೂ ಸಹ ಸುಖವೇ ಇರುವುದೆಂದು

* ಸ್ನೇಹ ಪ್ರೀತಿ ಅನ್ನೋದು ದೀಪ ಇದ್ದ ಹಾಗೆ... ಹಚ್ಚೋದು ಸುಲಭ , ಆದರೆ ಅದನ್ನು ಆರದ ಹಾಗೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ 

* ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಭೂಮಿ ನಮ್ಮದಲ್ಲ,ಪ್ರಕೃತಿ ನಮ್ಮದಲ್ಲ, ನಮ್ಮದು ಅಂತ ಉಳಿದಿರುವುದು ಒಂದೇ.. ಅದೇ “ಪ್ರೀತಿ,ಸ್ನೇಹ,ವಿಶ್ವಾಸ,ನಂಬಿಕೆ ಮತ್ತು ಸಂಬಂಧಗಳು”.....ಇವುಗಳು ಎಂದೆಂದಿಗೂ ಶಾಶ್ವತವಾಗಿರಲಿ.....

–>