-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

ಆಚಾರ ವಿಚಾರ - ಕನ್ಯಾಧಾನ - What is KanyaDhaana . How to get a righteous child

ಸತ್ಪ್ರಜಾ ಪ್ರಾಪ್ತಿ ಹೇಗೆ? ಕನ್ಯಾದಾನ ಮಾಡುವುದು ಪುಣ್ಯದ ಕೆಲಸವೆಂದು ಹೇಳುತ್ತಾರೆ. ಅದು ನಿಜವೇ ?
 
ಅದು ಯಾವ ಕಾರಣದಿಂದ ಬಂತು ಎನ್ನುವುದೇ ಆಶ್ಚರ್ಯ! ಕನ್ಯೆಯು ದಾನ ಕೊಡುವ ವಸ್ತುವಲ್ಲ. ಅಲ್ಲಿ ಆಧಾನ ಎಂದಿದೆ. ಅಂದರೆ ವರನಲ್ಲಿ ರಕ್ಷಣೆಗಾಗಿ ಇಡುವುದು ಎಂದು ಅರ್ಥವಾಗುತ್ತದೆಯೇ ವಿನಃ ದಾನವಾಗುವುದಿಲ್ಲ. ಅದು ಯಾವುದೋ ಕಾರಣದಿಂದ ದಾನ ಎಂದು ಅಪಾರ್ಥವಾಗಿ ಬಳಕೆಯಲ್ಲಿ ಬಂದಿದೆ. ಕನ್ಯಾಧಾನವು ಪುಣ್ಯದ ಕೆಲಸ ಹೌದು. ಅವಳು ಮತ್ತೊಂದು ವಂಶವನ್ನು ಬೆಳೆಸುವುದರಿಂದ ಅವಳು ಸಂಪಾದಿಸುವ ಪುಣ್ಯವು ಕೊಟ್ಟ ತಂದೆಗೆ ಸಿಕ್ಕೇ ಸಿಗುತ್ತದೆ. ಅದು ದಾನಕೊಟ್ಟ ಪುಣ್ಯವಲ್ಲ. ಕನ್ಯಾ ಆಧಾನ ಎಂದು ಹೇಳಿದೆಯೇ ಹೊರತು ಕನ್ಯಾದಾನವಲ್ಲ!
 

 
 
 ಕನ್ಯೆಯು ಪ್ರೌಢಳಾಗುವವರೆಗೆ ಪೋಷಿಸುವುದು ತಂದೆಗೆ ಸಾಧ್ಯವಾಗುತ್ತದೆ. ನಂತರ ಪ್ರೌಢತ್ವ ಬಂದ ಮೇಲೆ ಮಗಳನ್ನು ಪೋಷಿಸುವುದು ತಂದೆಗೆ ಸಾಧ್ಯವಿಲ್ಲ. ಹಾಗಾಗಿ ಅವಳನ್ನು ವರನ ಕೈಗೆ ಕೊಡುವಂತಾದ್ದು. ಇವಳನ್ನು ಇನ್ನು ನೀನು ಪೋಷಿಸಬೇಕು ಎಂದು. ಆವಾಗಲೂ ಅವರ ಮುಂದುವರೆದ ವಾಗ್ದಾನವೆಂದರೆ ಇವರಲ್ಲಿ ಉತ್ತಮನಾಗತಕ್ಕಂತಹ ಸತ್ಪ್ರಜೆಯನ್ನು ಪಡೆದು (ನನ್ನ) ಮಗನ ಸ್ವಾಧೀನಕ್ಕೆ (ತಮ್ಮ) ಮಗಳನ್ನು ಕೊಡುತ್ತೇನೆ ಎಂದು ಹೇಳುವಂತಾದ್ದು ಆಗಿರುತ್ತದೆ. ಹಾಗಾಗಿ ಮೊದಲು ತಂದೆಯಿಂದ ಪೋಷಣೆ, ನಂತರ ಗಂಡನಿಂದ ಪೋಷಣೆ, ಕೊನೆಯಲ್ಲಿ ವೃದ್ಧಾಪ್ಯದಲ್ಲಿ ಮಕ್ಕಳಿಂದ ಪೋಷಿಸಬೇಕು ಎಂದು ಹೇಳಿದೆ. ಅದಲ್ಲದೆ ಕನ್ಯೆಯು ದಾನ ಕೊಡುವ ವಸ್ತುವಲ್ಲ, ದಾನ ಕೊಡುವಂತಹದ್ದಲ್ಲವೆಂದು ಹೇಳಿರುತ್ತದೆ.
    ಚಾಲ್ತಿಯಲ್ಲಿ "ಕನ್ಯಾ ಆಧಾನ" ಹೋಗಿ "ಕನ್ಯಾದಾನ"ವು ಆಯ್ತು. ಮೊದಲು ಹೇಳುವಾಗ ಕನ್ಯಾಧಾನವೆಂದೇ ಸ್ಪಷ್ಟವಾಗಿಯೇ ಹೇಳುತ್ತಿದ್ದರು. ಶಬ್ದವನ್ನು ದೀರ್ಘ ಮಾಡಿರುವ ಕಾರಣ ‘ಆ’ಕಾರವು  ಅದರಲ್ಲಿಯೇ ಸೇರಿಹೋಗುತ್ತದೆ, ಹಾಗಾಗಿ ಕನ್ಯಾಧಾನವಾಯ್ತು. ಕೊನೆಗೆ ‘ಧಾ’ಕಾರವು ಶಬ್ದದ ಮಹಾಪ್ರಾಣ ಅಕ್ಷರ ಉಚ್ಛಾರ ಬಿಟ್ಟು ‘ದಾ’ಕಾರ ಎಂದು ಅಲ್ಪಪ್ರಾಣವಾಗಿ ಕನ್ಯಾದಾನವಾಗಿ ಚಾಲ್ತಿಯಲ್ಲಿ ಬಂದಿತು. ಅಲ್ಲಿ ಆಧಾನವೆಂದರೆ ವರನ ವಶಕ್ಕೆ ಕನ್ಯೆಯನ್ನು ಒಪ್ಪಿಸುವುದು ಎಂದರ್ಥ. 
ಅಂದರೆ ನ್ಯಾಸರೂಪವಾಗಿ ಇಡುವುದು ಎಂದೇ ಅರ್ಥ ಬರುವುದು. ವಿವಾಹ ಸಂಸ್ಕಾರದಲ್ಲಿ ಕನ್ಯೆಯನ್ನು ಧಾರೆಯೆರೆದು ವರನಿಗೆ ಕೊಡುವಾಗ ಕೆಲವು ಮಂತ್ರಗಳನ್ನು ಹೇಳುತ್ತಾರೆ. ಆ ಮಂತ್ರಗಳು ಹೇಳುವುದು ಇದನ್ನೇ. ಅಂದರೆ ನೀನು ಇವಳನ್ನು ಹೇಗೆ ಪೋಷಿಸಬೇಕು? ನಾನು ಹೇಗೆ ಪೋಷಿಸಿದ್ದೇನೆ? ಇವಳಿಗೆ ಯಾವುದರಲ್ಲಿ ಆಸಕ್ತಿಯಿದೆ? ಏನೇನು ರುಚಿಗಳಿವೆ? ಏನೇನು ಅಪೇಕ್ಷೆಗಳಿವೆ? ಎಂದು ಎಲ್ಲವನ್ನೂ ಹೇಳುತ್ತಾನೆ ವಧುವಿನ ತಂದೆ. 
ಇಂತಹ ಆಸಕ್ತಿಗೆ ತೊಂದರೆಯಾಗದಂತೆ ಅವಳ ಮನಸ್ಸಿಗೆ ಅನುರೂಪನಾಗಿ ಸ್ವೀಕರಿಸಬೇಕು. ಅಂದರೆ ಈ ಕನ್ಯೆಯನ್ನು ನಿನ್ನಲ್ಲಿ ಇಡುವುದು ಮಾತ್ರ, ಇದು ನನ್ನದಲ್ಲ ಎಂದು ಹೇಳಿರುವುದಿಲ್ಲ! ಆದ್ದರಿಂದ ಇವಳು ನನ್ನ ಮಗಳೇ ಆಗಿದ್ದಾಳೆ. ನಿನ್ನ ಹೆಂಡತಿಯಾಗಿರುತ್ತಾಳೆ, ನೆನಪಿರಲಿ ಎಂದು ಎಚ್ಚರಿಸುತ್ತಾನೆ.
 
ಈ ರೀತಿ ಹೇಳುತ್ತಾ ಕೊನೆಯಲ್ಲಿ ನಾಲ್ಕು ಕಾಲು ರೂಪಾಯಿ ದಕ್ಷಿಣೆಯನ್ನು ಕೊಡುತ್ತಾನೆ. ಅದನ್ನೇ ಈಗ ಜನ ನಾಲ್ಕಾರು ಲಕ್ಷ, ಕೋಟಿ ಎಂದೆಲ್ಲ ಮನಬಂದಂತೆ ಬಳಸುತ್ತಾರೆ. ಆದರೆ ಒಂದು ಪೈಸೆಯನ್ನೂ ಹೆಚ್ಚು ಕೊಡಬಾರದೆಂದು ಹೇಳಿದ್ದಾರೆ!! ಅಷ್ಟು ಮಾತ್ರ. ಅದಕ್ಕೊಂದು ಮಿತಿಯಿದೆ. ಏಕೆಂದರೆ ಅದು ವರಹ ರೂಪ. ನಾಲ್ಕು ಕಾಲು ಎಂದರೆ ಒಂದು ವರಹ ಎಂದು ಲೆಕ್ಕ. ಸಮಸ್ತ ಪ್ರಕೃತಿ ಒಟ್ಟು ಸೇರಿದರೆ ವರಾಹ ಸ್ವರೂಪ. ಈ ಭೂಮಿಯನ್ನು ವರಾಹ ಎಂದು ಹೇಳುವುದು ಅದರಿಂದಾಗಿಯೇ. ಅಂದರೆ ಈ ಭೂಮಿ ಸಮಾನವಾಗಿ ದಕ್ಷಿಣೆಯನ್ನು ನಿನಗೆ ಕೊಟ್ಟಿದ್ದೇನೆ. 
ಭೂಮಿಯೆಲ್ಲವನ್ನೂ ದಕ್ಷಿಣಾರೂಪದಲ್ಲಿ ನಿನಗೆ ಕೊಟ್ಟಿದ್ದೇನೆ. ಇನ್ನು ಕೊಡಲಿಕ್ಕೆ ಏನೂ ಉಳಿದಿಲ್ಲ. ಪುರಾಣದಲ್ಲಿ ಉದಾಹರಣೆ ಬರುತ್ತದೆ. ಪರಶುರಾಮನು ಇಡೀ ಭೂಮಿಯನ್ನು ಗೆದ್ದು ಕಶ್ಯಪನಿಗೆ ಧಾರೆಯೆರೆದು ಕೊಡುತ್ತಾನೆ ಎಂದು. ಅಂದರೆ ವರಾಹವನ್ನು ಕೊಟ್ಟ ಅಷ್ಟೆ. ವರಾಹ ಸ್ವರೂಪದಲ್ಲಿ ದಕ್ಷಿಣೆಯನ್ನು ಕೊಟ್ಟ. ಏಕೆಂದರೆ ಅದಕ್ಕಿಂತ ಹೆಚ್ಚು ಭೂಮಿಯಲ್ಲಿ ಇಲ್ಲ. ಹೆಚ್ಚು ಕೊಟ್ಟಿದ್ದೆ ಎಂದರೆ ಅದು ಸುಳ್ಳು, ಮೋಸ ಎಂದಾಯ್ತು. ಈ ಭೂಮಿಗಿಂತ ಹೆಚ್ಚು ಕೊಡಲು ಸಾಧ್ಯವಿಲ್ಲ. 
ಆ ದಕ್ಷಿಣೆ ಕೊಡುವಾಗ ಇವಳಿಗೆ ಗಂಡು ಮಗುವಾದರೆ ಆತನಿಗೆ ದೌಹಿತ್ರ ಹಕ್ಕು – ಅಂದರೆ ನನ್ನ ಕಡೆಯ ಹಕ್ಕಿನ ಪ್ರಾಪ್ತಿಯಾಗುತ್ತದೆ. ಆ ಪ್ರಾಪ್ತಿಯು ಇಲ್ಲಿ ನಿಸ್ಸಂತತಿಯಾದರೆ ಮಾತ್ರ. ಅದಕ್ಕಾಗಿ ಈಗಲೇ ಕೊಟ್ಟುಬಿಟ್ಟಿದ್ದೇನೆ. ಅಜ್ಜನ ಮನೆಯ ಆಸ್ತಿ ದೌಹಿತ್ರ ಹಕ್ಕು. ನನ್ನ ಮನೆಯಲ್ಲಿ ನಿಸ್ಸಂತತಿಯಾದರೆ ಮಾತ್ರ ನಿನಗೆ ಆಸ್ತಿಯ ಹಕ್ಕು ಬರುತ್ತದೆ. ಇಲ್ಲದಿದ್ದರೆ ಈಗಲೇ ಕೊಟ್ಟಿದ್ದರಲ್ಲಿ ತೀರ್ಮಾನ. ಮುಂದೆ ಆಸ್ತಿಯನ್ನು ಕೇಳುವ ಹಕ್ಕಿರುವುದಿಲ್ಲ.
ಹಾಗಾಗಿ ಎರಡೂ ಚಿಂತನೆಯನ್ನು ಮಾಡುತ್ತಾ ದೌಹಿತ್ರ ಹಕ್ಕನ್ನು ನ್ಯಾಸರೂಪವಾಗಿ ಮೊದಲೇ ವರನ ಕೈಯಲ್ಲಿ ದಕ್ಷಿಣಾರೂಪದಲ್ಲಿ ಕೊಡುವಂತಾದ್ದು ವರಹ ದಕ್ಷಿಣೆ ಎಂದು. ಅದು ಅಪಭ್ರಂಶವಾಗಿ ಈಗ ವರದಕ್ಷಿಣೆ ಆಗಿಬಿಟ್ಟಿದೆ. ಅದು ಮುಂದೆ ಚಿಂತಿಸುವ ವಿಚಾರವಾದ್ದರಿಂದ ತತ್ಕಾಲದ ಅಂದರೆ ಕನ್ಯೆಯನ್ನು ಆಧಾನ ಮಾಡುವ ಸಮಯದ ಸಮಸ್ಯೆಯಲ್ಲ, ಮುಂದೆ ಚಿಂತನೆಗೆ ಬರತಕ್ಕ ಸಮಸ್ಯೆ. ಹಾಗಾಗಿ ಅದು ಕ್ಷೀಣವಿಚಾರ. 
 
ಆದರೆ ಸತ್ಯ. ಏಣ ವಿಚಾರವೂ ಹೌದು, ಸುಳ್ಳು ವಿಚಾರವಲ್ಲ. ಮುಂದೊಂದು ದಿನ ನಿಸ್ಸಂತತಿಯಾಗಿ ಅಜ್ಜ ಅಜ್ಜಿಗೆ ಈ ಮೊಮ್ಮಗನೇ ದಾತಾರನಾಗಬಹುದು ಅನಿವಾರ್ಯ. ಹಾಗಾಗಿ ಈಗಲೇ ಕೊಡಲ್ಪಡತಕ್ಕದ್ದು ದದಾತಿ. ಹಾಗಾಗಿ “ಕ್ಷೀಣ ಏಣ ವಿಚಾರೈಃ ದದಾತಿ ಇತಿ ದಕ್ಷಿಣಾಃ” ಎಂದು ಬ್ರಾಹ್ಮಿಯಲ್ಲಿ ಪ್ರಸಕ್ತ ವಿಚಾರದ ದಕ್ಷಿಣಾ ಎಂಬ ಶಬ್ದೋತ್ಪತ್ತಿ. ಅದು ಕ್ಷೀಣ ವಿಚಾರವೂ ಹೌದು, ಏಣ ವಿಚಾರವೂ ಹೌದು, ಅದನ್ನು ನಿನಗೆ ದತ್ತವಾಗಿ ಕೊಡುತ್ತಾ ಇದ್ದೇನೆ; ಇದು ದಕ್ಷಿಣಾ ಎನ್ನಿಸಿಕೊಳ್ಳುತ್ತದೆ. ಯಾವುದೆಂದರೆ ಅದು ವರಹ. ಅಂದರೆ ಸಮಸ್ತ ಪ್ರಕೃತಿ ಎಂದರ್ಥ.
 
 ಯಾವೊಬ್ಬ ಮನುಷ್ಯನು ತ್ಯಾಗ ಮಾಡುವುದಿದ್ದರೆ ಎಷ್ಟನ್ನು ಮಾಡಬಹುದು?
 ಯಾವುದು ಯಾವುದೋ ಕಾರಣಕ್ಕೆ ಏನೇನೋ ತ್ಯಾಗ ಮಾಡಬಹುದು. ಆದರೆ "ಆತ್ಮಾರ್ಥೇ ಪೃಥಿವೀಂ ತ್ಯಜೇತ್" ಎಂದು ಹೇಳುತ್ತಾರೆ. ಆತ್ಮೋನ್ನತಿಗಾಗಿ ಸಾಧನೆ ಮಾಡುವುದಿದ್ದರೆ ಈ ಪೃಥ್ವಿಯನ್ನು ತ್ಯಾಗ ಮಾಡಲಿಕ್ಕೆ ಸಿದ್ಧ ಎಂದು ಅಲ್ಲಿಯವರೆಗೂ ಈ ಭೂಮಿಯನ್ನು ಬಿಡುವುದಕ್ಕೆ ಆಗುವುದಿಲ್ಲ. ಆತ್ಮೋನ್ನತಿ ಸಾಧನೆಗಾಗಿ ಪೃಥ್ವಿಯನ್ನೇ ತ್ಯಾಗ ಮಾಡಬಹುದು. 
ಅದಕ್ಕಾಗಿ ಈ ಪೃಥ್ವೀ ಸ್ವರೂಪದ ವರಹವನ್ನು ನನ್ನ ಆತ್ಮೋನ್ನತಿಗಾಗಿ ಸಾಧನೆಯಾಗುವ ಕಾಲದಲ್ಲಿ ನಿನ್ನಲ್ಲಿ ನ್ಯಾಸರೂಪವಾಗಿ ಕೊಡುತ್ತಿದ್ದೇನೆ. ವರಹ ದಕ್ಷಿಣೆಯು ವರದಕ್ಷಿಣೆಯಾಗಿ ಏನೇನೋ ಅನಾಹುತಕ್ಕೆ ಕಾರಣವಾಗುತ್ತಿದೆ ಈಗ. ಆಧಾನವಾಗಿ ಇಡುವಂತಾದ್ದು, ನ್ಯಾಸರೂಪವಾಗಿಯೇ ಇಡುವಂತಾದ್ದು.
 
 ಏಕೆಂದರೆ ಮುಂದೆ ಆತ್ಮೋನ್ನತಿಗಾಗಿ ಈಗ ನಾನು ಪ್ರಾಪಂಚಿಕ, ಮುಂದೆ ಸಾಧನೆಯ ಮುಂದೆ ಅಕಸ್ಮಾತ್ ಆತ್ಮೋನ್ನತಿ ಸಾಧನೆಯಾಗುವುದಾದರೆ ಪೂರಕವಾಗಿ ಈ ನನ್ನ ಮಗಳಲ್ಲಿ ಹುಟ್ಟತಕ್ಕಂತಹ ಮಗನಿಂದ ಸಹಾಯವಾಗುವುದಿದ್ದರೆ ಇದು ದಕ್ಷಿಣಾ ಆಗುತ್ತದೆ ಎಂದು ಹೇಳುತ್ತದೆ. ಹಾಗಾಗಿ ಆ ನಾಲ್ಕು ಕಾಲು ರೂಪಾಯಿಗೆ ಅಷ್ಟು ಜವಾಬ್ದಾರಿಯಿದೆ. ಅಷ್ಟು ವಿಶಾಲ ಅರ್ಥದ ಕೆಲಸವಿದೆ. ಆ ವಿಶಾಲಾರ್ಥಕ ವಿಚಾರವನ್ನು ಸೂಕ್ಷ್ಮವಾಗಿ ಅಲ್ಲಿ ಹೇಳಿ ಕೊಡುವಂತಹ ವಿಧಿಯು “ದತ್ತಂ ನ ಮಮ” ಎಂದು ಮಾತ್ರ ಹೇಳುತ್ತದೆ.
ಈ ದುಡ್ಡನ್ನು ನಾನು ಪುನಃ ಹಿಂದಕ್ಕೆ ಕೇಳುವುದಿಲ್ಲ. ಆದರೆ ಕನ್ಯೆ ನಿನ್ನದ್ದಲ್ಲ. ಅಲ್ಲಿ ಕೊಡತಕ್ಕಂತಹ ದಕ್ಷಿಣೆ ನನ್ನದ್ದಲ್ಲ ಎಂದು ಹೇಳಿದ್ದು ಬಿಟ್ಟರೆ ಕನ್ಯೆ ನನ್ನದ್ದಲ್ಲ ಎಂದು ಹೇಳಲಿಲ್ಲ. ಬೇರೆ ಯಾವುದೇ ದಾನ ಕೊಟ್ಟರೂ “ನ ಮಮ ನ ಮಮ” ಎಂದು ೨ ಸಾರಿ ಹೇಳಬೇಕು. ಅಲ್ಲಿ ಕೊಡುವ ವಸ್ತುವು ಮತ್ತು ದಕ್ಷಿಣೆ ಈ ಎರಡೂ ನನ್ನದಲ್ಲ ಎಂದು ಹೇಳುವುದಕ್ಕಾಗಿ ಆ ರೀತಿ ೨ ಸಾರಿ ಹೇಳುವುದು. ಆದರೆ ಇಲ್ಲಿ ಕನ್ಯಾಧಾನ ಮಾಡುವ ಪ್ರಕ್ರಿಯೆಯಲ್ಲಿ ಮಾತ್ರ ದತ್ತಂ ನ ಮಮ ಎಂದು ಒಂದು ಸಾರಿ ಮಾತ್ರ ಹೇಳುವುದು. 
ಅಂದರೆ ಈ ದಕ್ಷಿಣೆ ಮಾತ್ರ ನಿನ್ನದ್ದು, ನನ್ನದ್ದಲ್ಲ ಎಂದು. ಆದರೆ ಕನ್ಯೆ ಮಾತ್ರ ನನ್ನದ್ದು, ನಿನ್ನದ್ದಲ್ಲ ಎಂದು ಅದರ ಅರ್ಥವಾಗಿರುತ್ತದೆ. ಅವಳ ಪೋಷಣೆಯ ಜವಾಬ್ದಾರಿ ನಿನ್ನದು. ನಿನಗೆ ಹೆಂಡತಿಯಾಗಿರುತ್ತಾಳೆ ಅಷ್ಟೆ. ಹಾಗಾಗಿ ಅಲ್ಲಿ ಆಧಾನವೇ ಬಿಟ್ಟರೆ ಕನ್ಯಾದಾನವಲ್ಲ. ದಾನ ಇಲ್ಲ, ಕೊಡಲ್ಪಡುವುದೂ ಇಲ್ಲ, ನ್ಯಾಸರೂಪದಲ್ಲಿ ಇಡಲ್ಪಡುವುದು ಎಂದೆನಿಸಿಕೊಳ್ಳುತ್ತದೆ. ಹಾಗಾಗಿ ಮುಂದೆ ಹುಟ್ಟತಕ್ಕಂತಹ ಮಗುವಿಗೆ ದೌಹಿತ್ರ ಹಕ್ಕಿನ ಅಂಶ ಎಷ್ಟು ರೀತಿಯಲ್ಲಿ ಪ್ರಾಪ್ತವಾಗುತ್ತದೆ? ಎಂದರೆ-
·         ತಂದೆ,
·         ತಂದೆಯ ತಂದೆ,
·         ಅಜ್ಜ ಮುತ್ತಜ್ಜ ಇವರ ವಂಶವಾಹಿ ವ್ಯವಸ್ಥೆಗಳು, ಹಾಗೆ ದ್ವಾದಶ ಪಿತೃಗಣ ವಿಭಾಗಿಸಲ್ಪಟ್ಟಂತಹ
·         ತಾಯಿ,
·         ತಾಯಿಯ ತಾಯಿ,
·         ತಾಯಿಯ ತಂದೆ,
·         ತಂದೆಯ ತಾಯಿ,
ಹೀಗೆ ಈ ವಿಭಾಗದಲ್ಲಿ. ಇಷ್ಟು ಭಾಗದಲ್ಲೂ ಮಗುವಿಗೆ ಪ್ರಾಪ್ತವಾಗುತ್ತದೆ ದೌಹಿತ್ರ ಹಕ್ಕು. ಇಲ್ಲಿ ಹಕ್ಕು ಎಂದರೇನು? ಹಕ್ಕು ಎಂದರೆ ಆಸ್ತಿಯ ಹಕ್ಕಲ್ಲ. ನಿಜವಾಗಿ ಹಕ್ಕೆಂದರೆ –
ಅಧ್ವರ್ಯವೋ ದುಗ್ಧಮಂಶುಂ ಜುಹೋತನ ವೃಷಭಾಯ ಕ್ಷಿತೀನಾಮ್ |
ಗೌರಾದ್ ವೇದೀಯಾಙ್ ಅವಪಾನಮಿಂದ್ರೋ ವಿಶ್ವಾಹೇದ್ ಯಾತಿ ಸುತಸೋಮಮಿಚ್ಛನ್ ||
 
 ಈ ದೌಹಿತ್ರ ಹಕ್ಕು ಇಷ್ಟು ವ್ಯಾಪ್ತಿಯನ್ನು ಹೊಂದುತ್ತದೆ. ಅಂದರೆ ಹಿಂದೆ ಒಬ್ಬ ಸಹಜವಾಗಿ ಮನುಷ್ಯನಾಗಿ ಹುಟ್ಟಿದವನು ತನ್ನ ಬಾಲ್ಯಾದಿ ವಿಧ್ಯಾಭ್ಯಾಸ, ಪ್ರೌಢಾವಸ್ಥೆಯಲ್ಲಿ ಸಾಂಸಾರಿಕ ಜೀವನ, ನಂತರ ಗೃಹಸ್ಥಾಶ್ರಮ ಧರ್ಮದಂತೆ ಆಚಾರ ವಿಚಾರಗಳು, ಜೊತೆಯಲ್ಲಿ ಯಜ್ಞ-ಯಾಗಾದಿಗಳು ಇವುಗಳನ್ನು ಮಾಡುತ್ತಾ ಇದ್ದಂತಹ ಕಾಲವದು. ಹಾಗೆ ಅಕಸ್ಮಾತ್ ಆ ಹುಟ್ಟುವ ಮಗು ಮುಂದೆ ಅಧ್ವರ್ಯು ಆದಂತಹ ಯಾವುದಾದರೂ ಯಾಗ-ಯಜ್ಞ ನಡೆಸಿದರೆ ಇಷ್ಟೂ ಜನರಿಗೆ ಅಲ್ಲಿ ಅವಕಾಶ ಕೊಡು. ಈ ೧೨ ವರ್ಗದ ಎಷ್ಟು ಪಿತೃಗಣವಾಗುತ್ತಾರೆ, ಅಷ್ಟೂ ಜನಕ್ಕೂ ಯಾಗದಲ್ಲಿ ಅವಕಾಶವನ್ನು ಕೊಡು. ಆಗ ನಾವು ಆತ್ಮೋನ್ನತಿಯನ್ನು ಸಾಧಿಸಿಕೊಳ್ಳುತ್ತೇವೆ.
ಜಜ್ಞಾನಃ ಸೋಮಂ ಸಹಸೇ ಪಪಾಥ ಪ್ರತೇ ಮಾತಾ ಮಹಿಮಾನಮುವಾಚ |
ಏಂದ್ರ ಪಪ್ರಾಥೋರ್ವಂತರಿಕ್ಷಂ ಯುಧಾ ದೇವೇಭ್ಯೋ ವರಿವಶ್ಚಕರ್ಥ ||
ಹಾಗೆ ತಾಯಿಗೆ ಇರತಕ್ಕಂತಹ ಸ್ಥಾನ, ಪ್ರಪಂಚದಲ್ಲಿ ಅತೀ ಮಹತ್ತರವಾದದ್ದು. ಹಾಗಾಗಿ ಮಗುವಿಗೆ ತಾಯಿ ಎಂದು ಹೇಳುವಂತಹ ಮಹಾನ್ ಶಕ್ತಿಯನ್ನು ಕೊಟ್ಟದ್ದು ಈ ಅಜ್ಜ. ಹಾಗಾಗಿ ಆ ಒಂದು ನೆನಪನ್ನು ನೀನು ಮರೆಯಬಾರದು. ಹಾಗಾಗಿ ಮುಂದೆ ನನ್ನ ವಂಶವನ್ನೂ ಉನ್ನತಿ ಮಾಡುವಂತಹ ಲಭ್ಯತೆ ಬಂದಾಗ ನಿನ್ನ ಮಾತೃವರ್ಗ ಎಂದು ಹೇಳತಕ್ಕಂತಹ ಅಂಶವನ್ನು ಯಾವುದೇ ಕಾರಣಕ್ಕೂ ಮರೆಯದಿರು.
 
 ಅದಕ್ಕಾಗಿ ನಿನಗೆ ಈ ರೀತಿಯ ಭೂಮಿ ಸ್ವರೂಪದ, ಇದಕ್ಕಿಂತ ಹೆಚ್ಚಿನದ್ದು ಇಲ್ಲದ; ಅಂದರೆ ತಾಯಿಯನ್ನೂ ಭೂಮಿ ಎಂದು ಹೇಳುತ್ತದೆ. ಭೂಮಿಗಿಂತ ದೊಡ್ಡದು ಯಾವುದು ಎಂದಾಗ ತಾಯಿ ಎಂದನಂತೆ ಧರ್ಮರಾಯ. ಹಾಗೆ ಭೂಮಿಯೂ ತಾಯಿಯೂ ಸಮಾನವಾದ್ದರಿಂದ ಆ ತಾಯಿಯ ರೂಪದಲ್ಲಿ ನಿನಗೆ ಕೊಟ್ಟಿದ್ದೇನೆ. ನೀನು ಮಾಡತಕ್ಕಂತಹ ಸತ್ಕಾರ್ಯಗಳಲ್ಲಿ, ಸತ್ಫಲಗಳನ್ನು ಉಂಟುಮಾಡುವ ಎಲ್ಲವೂ ನನ್ನ ವಂಶದ ಅಂದರೆ ಈ ಮಗುವಿನ ತಾಯಿ ವಂಶದ ಎಲ್ಲರಿಗೂ ಪ್ರಾಪ್ತವಾಗುವಂತೆ ನಿನ್ನ ಪ್ರಕ್ರಿಯೆ ಇರಲಿ ಎಂದು ಹೇಳುತ್ತಾನೆ.  ಹಾಗಾಗಿ ಅದು ಆಧಾನವಾಗುತ್ತದೆಯೇ ವಿನಃ ದಾನ ಆಗುವುದಿಲ್ಲ ಎಂದು ಹೇಳುತ್ತೇವೆ. ಇಷ್ಟಲ್ಲದೆ ವಿಮರ್ಷಿಸುತ್ತಾ ಹೋದರೆ ಇನ್ನೂ ತುಂಬಾ ವಿಚಾರವಿದೆ. ಆಚರಣೆಯಲ್ಲಿ ಬರದೆ ಬರೇ ಕೇಳ್ವಿಕೆಯಿಂದ ಅಥವಾ ಓದುವಿಕೆಯಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳುತ್ತಾ ಇಲ್ಲಿಗೆ ಈ ವಿವರಣೆಯನ್ನು ಮುಗಿಸುತ್ತಿದ್ದೇವೆ.
 
 ಪತಿಪತ್ನಿಯರು ಸತ್ಪ್ರಜೆಯನ್ನು ಪಡೆಯುವುದು ಹೇಗೆ?
ಸತ್ಪ್ರಜಾ ಸೃಷ್ಟಿಯು ಅಂದರೆ ಪತಿಪತ್ನಿಯರು ಉತ್ತಮ ಮಗುವನ್ನು ಪಡೆಯುವುದು. ಅಂದರೆ ಪಡೆಯುವಾಗಲೇ ಉತ್ತಮ ಸಂಸ್ಕಾರಗಳನ್ನು ಕೊಟ್ಟು ಮಗುವನ್ನು ಪಡೆದು ಅದನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವಾಗ ತಂದೆಯಾದವನು ಆದರ್ಶನಾಗಿ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು.
 
ಮಹೋ ನೋ ಅದ್ಯ ಸುವಿತಾಯ ಬೋಧ್ಯುಷೋ ಮಹೇ ಸೌಭಗಾಯ ಪ್ರಯಂಧಿ |
ಚಿತ್ರಂ ರಯಿಂ ಯಶಸಂ ಧೇಹ್ಯಸ್ಮೇ ದೇವಿ ಮರ್ತೇಷು ಮಾನುಷಿ ಶ್ರವಸ್ಯುಮ್ ||
ಮಾನುಷ ಕರ್ತವ್ಯಗಳಾದಂತಹ ಜೀವನ ಪ್ರವೃತ್ತಿಯು ಹೇಗಿರಬೇಕೆಂದರೆ ತಂದೆಯ ಆದರ್ಶವನ್ನು ಅನುಕರಿಸಿ ಮಗುವು ಬದುಕುವಂತೆ ಮಾಡಬೇಕು. ಇದು ಬಹಳ ಮುಖ್ಯ. ಒಳ್ಳೆಯ ಪ್ರಜೆಯಾಗುವಂತೆ ತಂದೆಯು ಏನು ಮಾಡಬೇಕೊ ಅದನ್ನು ಮಾಡುವುದು, ಮಗು ಮಾತ್ರ ತಪ್ಪು ಮಾಡಿದ್ದಕ್ಕೆ ಶಿಕ್ಷೆಯನ್ನು ಕೊಡುವುದು. ಅದರಿಂದ ಮಗುವು ಸತ್ಪ್ರಜೆಯಾಗಲಿಕ್ಕೆ ಸಾಧ್ಯವಿಲ್ಲ. ಹಾಗೆ ತನ್ನ ಜೀವನದ ಎಲ್ಲಾ ಭಾಗವೂ ತಂದೆಯು ಮಗುವು ಅನುಕರಿಸುವ ರೀತಿಯಲ್ಲಿ ಇರಬೇಕು. ಅದರಂತೆ ಜೀವನ ವ್ಯವಸ್ಥೆಯನ್ನು ರೂಪಿಸಿಕೊಂಡರೆ ಆಗ ಮಾತ್ರ ಸತ್ಪ್ರಜಾವೃದ್ಧಿ ಆಗಲಿಕ್ಕೆ ಸಾಧ್ಯ ಎಂದು ಹೇಳುತ್ತದೆ.
 
 ಏತೇ ತ್ಯೇ ಭಾನವೋ ದರ್ಶತಾಯಾಶ್ಚಿತ್ರಾ ಉಷಸೋ ಅಮೃತಾಸ ಆಗುಃ |
ಜನಯಂತೋ ದೈವ್ಯಾನಿ ವ್ರತಾನ್ಯಾಪೃಣಂತೋ ಅಂತರಿಕ್ಷಾ ವ್ಯಸ್ಥುಃ ||
ತನ್ನ ಜೀವನವೇ ವ್ರತ. ಮಗುವಾಗುವಲ್ಲಿಯವರೆಗೆ ಮಾತ್ರ ಅವರು ಗಂಧರ್ವರು. ಹೋಮ ಪ್ರಕ್ರಿಯೆಯಲ್ಲಿ ಕೊನೆಯಲ್ಲಿ ನಾವು ಗಂಧರ್ವರಂತೆ ಸುಖಸಂತೋಷವಾಗಿ ಕಳೆಯುತ್ತೇವೆ ಎಂದು ಇಂದ್ರ ಅಗ್ನಿ ವರುಣ ಸೋಮರಿಂದ ಈ ಕನ್ಯೆಯನ್ನು ಬಿಡಿಸಿಕೊಂಡು ಗಂಧರ್ವ ಅಂಶವನ್ನು ಸ್ವೀಕರಿಸಿ, ಜೀವನದಲ್ಲಿ ಗಂಧರ್ವರಂತೆ ವಿಹರಿಸುತ್ತಾ ಇರುತ್ತೇವೆ ಎಂದು ಸಂಕಲ್ಪವನ್ನು ನಾಕಬಲಿಯಲ್ಲಿ (ನಾಗೋಲಿ ಶಾಸ್ತ್ರ) ಮಾಡಿರುತ್ತಾರೆ.
 
 ಆ ಜೀವನವು ಒಂದು ಮಗುವಾಗುವಲ್ಲಿಯವರೆಗೆ ಮಾತ್ರ. ಒಂದು ಮಗುವಾದ ಮೇಲೆ ನೈಷ್ಠಿಕ ವ್ರತವನ್ನು ತಂದೆಯಾದವನು ಹಿಡಿಯಬೇಕು ಎಂದು ಹೇಳುತ್ತದೆ. ಹೇಗೆಂದರೆ ಯಾವುದೇ ರೀತಿಯ ದುರ್ಭಾಷೆಯನ್ನು ಆಡದೇನೇ, ಯಾವುದೇ ವಿಷಯದ ತಸ್ಕರಾಂಶವನ್ನು ಮನೆಗೆ ತರದೇನೇ, ಅಂದರೆ ಒಂದು ವಸ್ತುವನ್ನೂ ಕಳ್ಳತನದಿಂದ ತರದೇನೇ ಮನೆಗೆ ಬರಬೇಕು. ಏಕೆಂದರೆ ಅದರಲ್ಲಿ ದೋಷ ಬರುತ್ತದೆ. ಎಲ್ಲಿಯೂ ಅಪ್ರಾಮಾಣಿಕತೆಯ ಲೇಶವೂ ಸೋಕದಂತೆ ಜೀವನವನ್ನು ತಾನು ರೂಪಿಸಿಕೊಳ್ಳಬೇಕು. ಆಗ ಆ ಮಗು ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತದೆ ಎಂದು ಹೇಳುತ್ತದೆ. ಈಗ ಹೆಚ್ಚಾಗಿ ಮದುವೆಯಾಗಿ ಒಂದು ಮಗುವಾಗುತ್ತಲೇ ತಂದೆಯು ಎಷ್ಟು ಅಪ್ರಾಮಾಣಿಕನಾಗಿ ವ್ಯವಹರಿಸುತ್ತಾನೆ ಎಂದರೆ ಎಷ್ಟು ಸಾಧ್ಯವೋ ಅಷ್ಟು! ಏಕೆಂದರೆ ಮಗನಿಗೆ ಒಂದಿಷ್ಟು ಆಸ್ತಿ ಮಾಡಬೇಕೆಂದು. 
 
 ಅದರಿಂದ ಏನೂ ಸಮಸ್ಯೆಯಿಲ್ಲವೆಂದು ತಿಳಿಯುತ್ತಾನೆ. ಆದರೆ ಆ ಮಗುವು ಈ ಆಸ್ತಿಯನ್ನು ಉಳಿಸುವುದಿಲ್ಲ. ತಂದೆಯ ಪರಿಣಾಮ ಮಗುವಿನ ಮೇಲೆ ಎಷ್ಟಿರುತ್ತದೆಯೆಂದರೆ ಕೊನೆಯಲ್ಲಿ ತಂದೆಯನ್ನೇ ಮಾರುವ ಪರಿಸ್ಥಿತಿಗೆ ಬರುತ್ತಾನೆ. ಆದರೆ ತಂದೆಯು ಅಪ್ರಾಮಾಣಿಕತೆಯ ಲೇಶವೂ ಸೋಕದಂತೆ ಬದುಕುವ ಪ್ರಯತ್ನವನ್ನು ಮಾಡಿಕೊಂಡರೆ ತಂದೆಯು ಮಗುವಿಗೆ ಆಸ್ತಿಯನ್ನು ಮಾಡಬೇಕಾದುದಿಲ್ಲ, ಏಕೆಂದರೆ ತಂದೆಗೆ ಯಾವ ಅರ್ಹತೆಯು ಇದೆಯೊ ಅವನೇ ಹುಟ್ಟಿಸಿದ ಮಗುವೆಂದಾದರೆ ಆ ಮಗುವಿಗೆ ಖಂಡಿತವಾಗಿಯೂ ಆ ಅರ್ಹತೆ ಇರುತ್ತದೆ. ಹಾಗಾಗಿ ಆ ಮಗುವೂ ಬದುಕುತ್ತದೆ. ಆ ಮಗುವಿಗಾಗಿ ಆಸ್ತಿಯನ್ನು ಮಾಡಿಡಬೇಕಾದ್ದು ಮೂರ್ಖತನ. ಹಾಗಾಗಿ ತಂದೆಯು ಅಪ್ರಾಮಾಣಿಕತೆಯ ಲೇಶವನ್ನೂ   ಸೋಕದಂತೆ ಜೀವನವನ್ನು ತಾನು ರೂಪಿಸಿಕೊಂಡರೆ ಆಗ ಮಗುವು ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ಹಾಗೆ ಜೀವನ ವಿಧಾನವಿರಲಿ ಎಂದು ಹೇಳುತ್ತೇವೆ.
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ 
–>