-->

ನಮಸ್ಕಾರ - Namaskara - A Respect

 ನಮಸ್ಕಾರ ಮಾಡುವುದು ವ್ಯಕ್ತಿಗಲ್ಲ. ಅವರಲ್ಲಿ ನೆಲೆಸಿರುವ ಭಗವಂತನಿಗೆ. ಹೀಗಿದ್ದರೂ ನಾನು ದೊಡ್ಡವನು ಅವನಿಗೇಕೆ ನಮಸ್ಕಾರ ಮಾಡಬೇಕು ಎಂಬ ಭಾವನೆ ನಮ್ಮಲ್ಲಿ ಬರುತ್ತದೆ. ವ್ಯಕ್ತಿಗಳು ಚಿಕ್ಕವರು, ದೊಡ್ಡವರು ಇರಬಹುದು ಆದರೆ ಎಲ್ಲರಲ್ಲಿ ನೆಲೆಸಿರುವ ಭಗವಂತ ಚಿಕ್ಕವನು, ದೊಡ್ಡವನಲ್ಲ. ನಾವು ನಮಸ್ಕಾರ ಮಾಡುವುದು ವ್ಯಕ್ತಿಯಲ್ಲಿರುವ ಪರಮಾತ್ಮನಿಗೆ ಹೊರತು ವ್ಯಕ್ತಿಗಳಿಗಲ್ಲ.

 


 

 ಹಾಗಂತ ತಂದೆ ತಾಯಿಗೆ ನಾನೇಕೆ ನಮಸ್ಕಾರ ಮಾಡಲಿ ಅನಕೋಬೇಡಿ. ಗುರು ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಚಿಕ್ಕವರಲ್ಲೂ ಪರಮಾತ್ಮ ಇರುತ್ತಾನೆ. ನಮಸ್ಕಾರ ಮಾಡಿದರೆ ಪ್ರತಿಯಾಗಿ ನಮಸ್ಕಾರ ಮಾಡಬೇಕು.
 ಚಿಕ್ಕವರಿದ್ದಾರೆ ನಾನೇಕೆ ಮೊದಲು ಮಾತನಾಡಿಸಬೇಕು ಎಂಬ ವಾದ ಕೆಲವರದ್ದಿರುತ್ತದೆ. ಯಾರೆ ಎದುರಿಗೆ ಸಿಕ್ಕಾಗ ಒಂದು ಮುಗುಳುನಗೆ ಬೀರಿ ಸಾಕು. ಎಷ್ಟು ಖುಷಿಯಾಗುತ್ತದೆ. ಅದರಿಂದ ನಮ್ಮ ಮರ್ಯಾದೆ ಹೋಗುವುದಿಲ್ಲ. ಗೌರವ ಕೇವಲ ಪಡೆದುಕೊಳ್ಳುವುದಲ್ಲ. ಮೊದಲು ನಾವು ಕೊಡಬೇಕು ನಂತರ ಪಡೆದುಕೊಳ್ಳಬೇಕು. ನಮಗೆ ಗೌರವ ಸಿಗಲಿ ಎಂದು ಬಯಸುತ್ತೇವೆ ಆದರೆ ಕೊಡುವುದನ್ನು ಮರೆಯುತ್ತಿದ್ದೇವೆ. ಇನ್ನೊಬ್ಬರಿಗೆ ಗೌರವ ಕೊಟ್ಟರೆ ನಾವು ಸಣ್ಣವರಾಗುವುದಿಲ್ಲ. ಬದಲಿಗೆ ದೊಡ್ಡವರಾಗುತ್ತೇವೆ. ಬದುಕಿನಲ್ಲಿ ಆಯುಷ್ಯ ಮುಖ್ಯವಲ್ಲ. ವ್ಯಕ್ತಿತ್ವ ಮುಖ್ಯವಾಗುತ್ತದೆ. ಜೀವನದಲ್ಲಿ ಏನನ್ನ್ನಾದರೂ ಸಾಧಿಸಬೇಕಾದರೆ ಮೊದಲು ಇನ್ನೊಬ್ಬರಿಗೆ ಗೌರವ ಕೊಡುವುದನ್ನು ಕಲಿಯಬೇಕು. ವ್ಯಕ್ತಿಗಳು ಚಿಕ್ಕವರು ದೊಡ್ಡವರು ಇರಬಹುದು, ಅಧಿಕಾರದಲ್ಲಿ ಕೆವರು ದೊಡ್ಡವರಿರಬಹುದು ಚಿಕ್ಕವರಿರಬಹುದು, ಸಂಪಾದನೆಯಲ್ಲಿ ದೊಡ್ಡವರು ಚಿಕ್ಕವರು ಇರಬಹುದು ಆದರೆ ಎಲ್ಲರಲ್ಲೂ ಇರುವ ಮರ್ಯಾದೆ ಒಂದೆ. ಮರ್ಯಾದೆ ಚಿಕ್ಕದು ದೊಡ್ಡದು ಇರುವುದಿಲ್ಲ. ಇವನು ನನಗಿಂತ ಚಿಕ್ಕ ಕೆಲಸ ಮಾಡುತ್ತಾನೆ ಎಂದು ಅವಮರ್ಯಾದೆ ಮಾಡಬಾರದು. ಒಂದಿಲ್ಲೊಂದು ದಿನ ಆ ವ್ಯಕ್ತಿ ಕೂಡ ನಮ್ಮ ಜೀವನದಲ್ಲಿ ಅಗತ್ಯ ಬೀಳುತ್ತಾನೆ.
ಯಾರನ್ನೂ ಅಸಾಯಕನೆಂದು ಭಾವಿಸಬಾರದು. ವಯಸ್ಸಿನಿಂದ ದೊಡ್ಡವರಾದರೇ ಸಾಲದು ವ್ಯಕ್ತಿತ್ವದಿಂದ ದೊಡ್ಡವರಾಗಬೇಕು. ಅಂದಾಗ ಮಾತ್ರ ನಮ್ಮ ದೊಡ್ಡತನ ಇನ್ನೊಬ್ಬರಿಗೆ ಮಾದರಿಯಾಬಲ್ಲದು. ಎಲ್ಲರಲ್ಲೂ ಪರಮಾತ್ಮನಿದ್ದಾನೆ. ನಾನು ಅವರಲ್ಲಿರುವ ಪರಮಾತ್ಮ ನಿಗೆ ನಮಸ್ಕಾರ ಮಾಡುತ್ತೇನೆ ಎಂದು ಭಾವಿಸಿದರೆ ದೊಡ್ಡವರು, ಚಿಕ್ಕವರು ಎಂಬ ತಾರತಮ್ಯ ಬರುವುದೇ ಇಲ್ಲ.
ನಮ್ಮದು ಗೌರವಯುತ ಬದುಕಾಗಾಬೇಕು. ಇನ್ನೊಬ್ಬರನ್ನು ಗೌರಿಸುವುದನ್ನು ಕಲಿಯಬೇಕು. ಗೌರವ ಎಂಬುದು ನಾವು ಕೊಟ್ಟರೆ ಎರಡು ಪಟ್ಟು ನಮಗೆ ಮರಳಿ ಸಿಗುತ್ತದೆ. ಚಿಕ್ಕವರಿಗೆ ಒಂದು ಸಲ ಗೌರವಿಸಿ ನೋಡಿ, ಅವರು ಪ್ರತಿ ಸಲ ಸಿಕ್ಕಾಗ ನಿಮ್ಮನ್ನು ಗೌರವದಿಂದ ಕಾಣುತ್ತಾರೆ. ಗೌರವ ಕೊಡಬೇಕಾದರೆ ಮೊದಲು ನಮ್ಮಲ್ಲಿನ ಅಹಂಕಾರ ಬಿಡಬೇಕಾಗುತ್ತದೆ. ಅಹಂಕಾರ ಇದ್ದಲ್ಲಿ ಮಾನವೀಯತೆ ಇರುವುದಿಲ್ಲ.  ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಅಹಂಕಾರ ಖಂಡನೆ ಅಗತ್ಯ. ಅಹಂಕಾರ ನಮ್ಮಿಂದ ದೂರವಾದಾಗ ಇನ್ನೊಬ್ಬರನ್ನು ಗೌರವಿಸುವ ಭಾವನೆ ಬರುತ್ತದೆ. ಗೌರವಿಸುವ ಮನೋಭಾವನೆ ಸಾಧನೆಗೆ ಪೂರಕವಾಗಬಲ್ಲದು. ನಮ್ಮನ್ನು ನಿಂದಿಸುವವರನ್ನೂ ಗೌರವಿಸಬೇಕು. ಅಂದಾಗ ನಿಂದಿಸುವವರೂ ಕೂಡ ನಮ್ಮನ್ನೂ ಗೌರವಿಸಲು ಶುರುಮಾಡುತ್ತಾರೆ. ನಾವು ಗೌರವ ಕೊಡುವ ಮೂಲಕ ಪಡೆಯುವುದನ್ನೂ ಕಲಿಯೋಣ, ಸುಂದರ ಬದುಕು ಸಾಗಿಸೋಣ. ಗೌರವಯುತವಾದ ಜೀವನ ನಮ್ಮದಾಗಬೇಕು.

- ಶಾಮಸುಂದರ ಕುಲಕರ್ಣಿ, ಕಲಬುರಗಿ
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
–>