-->

Significance of Ananthapadmanabha festival , ಅನಂತ ಪದ್ಮನಾಭ ವ್ರತ

ಆರೋಗ್ಯ, ಅಭಿವೃದ್ಧಿ ಮತ್ತು ಸಕಲ ಐಶ್ವರ್ಯಗಳನ್ನು ಅನಿಯಮಿತವಾಗಿ ನೀಡುವ ಅನಂತ ಪದ್ಮನಾಭನನ್ನು ಪೂಜಿಸುವ ಹಬ್ಬ ಅನಂತನ ಚತುರ್ದಶಿ. ಯಮುನೆಯ ಪೂಜಿಸಿ ಆಚರಿಸುವ ಈ ವ್ರತದಲ್ಲಿ, ಸಂತಾನ ದೇವತೆಯಾದ ನಾಗದೇವತೆಯನ್ನು ಪೂಜಿಸುವ ಆಶಯವೂ ಇದೆ.


ಅನಂತನ ಹಬ್ಬ, ಅನಂತ ಪದ್ಮನಾಭ ವ್ರತ ಅಥವಾ ಅನಂತನ ಚತುರ್ದಶಿ ಎಂದು ಕರೆಯುವ ಈ ಹಬ್ಬ ರಾಜ್ಯದ ಕರಾವಳಿ ಭಾಗ ಹಾಗೂ ಹಳೇ ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಈ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಹದಿನಾಲ್ಕನೇ ದಿನ (ಚತುರ್ದಶಿ) ಆಚರಿಸಲಾಗುತ್ತದೆ. ಕ್ಷೀರಸಾಗರದಲ್ಲಿ ಏಳು ಹೆಡೆಗಳ ಆದಿಶೇಷನ ಮೇಲೆ ವಿಷ್ಣುವನ್ನು ಆರಾಧಿಸುವ ಹಬ್ಬ. ಅನಂತ ಎಂದರೆ ಅನಿಯಮಿತ, ಪದ್ಮನಾಭ ಎಂದರೆ ನಾಭಿಯಲ್ಲಿ ಕಮಲವನ್ನು ಹೊಂದಿದವನು ನಾರಾಯಣ ಅಥವಾ ವಿಷ್ಣು ಎಂಬ ಅರ್ಥ ಬರುತ್ತದೆ. ಇದು ವಿಷ್ಣುವನ್ನು ಪೂಜಿಸುವ ವ್ರತ.

ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು 'ಅನಂತ ಚತುರ್ದಶಿ' ಎಂದು ಕರೆಯುತ್ತಾರೆ. ಈ ದಿನವು ಶ್ರೀ ಗಣೇಶ ಚತುರ್ಥಿ ಆಚರಣೆಯ ಕೊನೆಯ ದಿನವೂ ಹೌದು. ಈ ದಿನದಂದು ಅನೇಕರು ಅನಂತ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಬಗ್ಗೆ ಪ್ರಚಲಿತವಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂದು ನಂಬಿಕೆಯಿದೆ. ಶ್ರೀ ಅನಂತ ಪದ್ಮನಾಭ ದೇವರು ಭಕ್ತರ ಎಲ್ಲಾ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರಿಸುತ್ತಾರೆ ಮತ್ತು ಸುಖ, ಆರೋಗ್ಯ, ಸಂಪತ್ತನ್ನು ಪ್ರದಾನಿಸುತ್ತಾರೆ ಎಂದು ನಂಬಿಕೆಯಿದೆ.

ಅನಂತ ವ್ರತದ ಬಗ್ಗೆ ಒಂದು ಕಥೆ

Significance of Ananthapadmanabha festival , ಅನಂತ ಪದ್ಮನಾಭ ವ್ರತ


ಕೌಂಡಿಲ್ಯ ಮುನಿಯು ವಿವಾಹದ ನಂತರ ಸಪತ್ನೀಕನಾಗಿ ಮನೆಯಿಂದ ಹೊರಟನು. ದಾರಿಯಲ್ಲಿ ನದಿಯ ತೀರದಲ್ಲಿ ಅವರು ನಿತ್ಯ ಕರ್ಮಗಳಿಗೆ ನಿಂತಾಗ, ಅವರ ಪತ್ನಿಯು ಕೆಲವು ಮಹಿಳೆಯರನ್ನು ಒಂದು ವ್ರತವನ್ನು ಆಚರಿಸುತ್ತಿರುವುದನ್ನು ನೋಡಿದರು. ಆ ಮಹಿಳೆಯರನ್ನು ಕೇಳಿದಾಗ 'ನಾವು ಅನಂತ ವ್ರತವನ್ನು ಆಚರಿಸುತ್ತಿದ್ದೇವೆ' ಎಂದೂ, ಆ ವ್ರತದಿಂದ ಆಗುವ ಲಾಭಗಳೇನು ಎಂದೂ ತಿಳಿಸಿದರು.

ಇದರಿಂದ ಪ್ರಭಾವಿತರಾದ ಕೌಂಡಿಲ್ಯ ಮುನಿಯ ಪತ್ನಿಯೂ ಕೂಡ ಶೇಷಶಯನನಾದ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಲು ಅನಂತ ವ್ರತವನ್ನು ಆಚರಿಸತೊಡಗಿದಳು. ಇದರಿಂದಾಗಿ ಕೌಂಡಿಲ್ಯ ಮುನಿಯ ಧನ ಸಂಪತ್ತು ವೃದ್ಧಿಯಾಯಿತು. ಅನೇಕ ವರ್ಷಗಳ ನಂತರ ಒಂದು ದಿನ ಕೌಂಡಿಲ್ಯ ಮುನಿಯು ತನ್ನ ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿ ಅದೇನೆಂದು ವಿಚಾರಿಸಿದನು. ಪತ್ನಿಯು 'ಇದು ಅನಂತ ವ್ರತದ ದಾರ, ಈ ವ್ರತದಿಂದ ನಮಗೆ ದೇವರು ಸುಖ ಸಂಪತ್ತನ್ನು ಕರುಣಿಸಿದ್ದಾನೆ' ಎಂದು ಹೇಳಿದಳು. ಇದನ್ನು ಕೇಳಿ ಕೌಂಡಿಲ್ಯ ಮುನಿಯು ಕೋಪಗೊಂಡು 'ಈ ಸುಖ ಸಂಪತ್ತು ನನ್ನ ಪಾಂಡಿತ್ಯದಿಂದ ನಾನು ಸಂಪಾದಿಸಿದ್ದೇನೆ' ಎಂದು ಹೇಳಿ, ಪತ್ನಿಯ ಕೈಯಲ್ಲಿರುವ ದಾರವನ್ನು ಕಿತ್ತೆಸೆದನು.

ಕ್ರಮೇಣ ಅವರಲ್ಲಿರುವ ಸಂಪತ್ತು ಕ್ಷೀಣಿಸತೊಡಗಿತು. ಮುಂದೊಂದು ದಿನ ಎಲ್ಲವನ್ನೂ ಕಳೆದುಕೊಂಡ ಕೌಂಡಿಲ್ಯ ಮುನಿಗೆ ತನ್ನ ತಪ್ಪಿನ ಅರಿವಾಯಿತು. ಅಖಂಡ ತಪಸ್ಸನ್ನು ಆಚರಿಸಿ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಿದನು. ಶ್ರೀ ವಿಷ್ಣು ಕೌಂಡಿಲ್ಯ ಮುನಿಗೆ ದರ್ಶನವನ್ನಿತ್ತು, ೧೪ ವರ್ಷಗಳ ಕಾಲ ಅನಂತ ವ್ರತವನ್ನು ಆಚರಿಸಿದರೆ, ಹೋದ ಸುಖ ಸಂಪತ್ತು ಪುನಃ ಗಳಿಸುವುದಾಗಿ ವರವನ್ನು ನೀಡಿದರು.

ಅನಂತ ವ್ರತದ ಬಗ್ಗೆ ಇನ್ನೊಂದು ಕಥೆಯನ್ನು ನೋಡೋಣ : ಪಾಂಡವರು ಕೌರವರ ಕೈಯಲ್ಲಿ ರಾಜ್ಯವನ್ನು ಸೋತು ೧೪ ವರ್ಷಗಳ ಕಾಲ ವನವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ ಶ್ರೀ ಕೃಷ್ಣನು ಪಾಂಡವರಿಂದ ಅನಂತ ವ್ರತವನ್ನು ಆಚರಿಸಿದನು, ಇದರ ಫಲವಾಗಿ ಅವರಿಗೆ ರಾಜ್ಯ ಭಾಗ್ಯ ಮರಳಿ ದೊರೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಅನೇಕರು ಅನಂತ ವ್ರತವನ್ನು ೧೪ ವರ್ಷಗಳ ಕಾಲ ಆಚರಿಸುತ್ತಾರೆ. ಕೆಲವರು ಪರಂಪರಾಗತವಾಗಿ ಅನಂತ ವ್ರತವನ್ನು ಆಚರಿಸುತ್ತಾರೆ. ಇನ್ನು ಕೆಲವರು ಶಕ್ತಿಗನುಸಾರ ಆಚರಿಸುತ್ತಾರೆ. ನಿಷ್ಕಲ್ಮಶ ಮನಸ್ಸಿನಿಂದ, ಭಕ್ತಿಯಿಂದ, ಭಾವದಿಂದ ಅನಂತ ಚತುರ್ದಶಿ ವ್ರತವನ್ನು ಆಚರಿಸಿದವರಿಗೆ ಅನಂತ ದೇವರು ಒಲಿದು ಆರೋಗ್ಯ, ಆಯಸ್ಸು, ಸುಖ, ಸಂಪತ್ತು ಪ್ರದಾನಿಸುತ್ತಾರೆ.


ವಿಶಿಷ್ಟ ವ್ರತ
 

ಭಾದ್ರಪದ ಚತುರ್ದಶಿಯ ಆಚರಿಸುವ ಈ ವ್ರತದ ಆಚರಣೆ ತುಸು ವಿಶಿಷ್ಟ. ಇದರಲ್ಲಿ ನೇಮ ನಿಷ್ಠೆಗಳು ಹೆಚ್ಚು. ಮದುವೆಯಾದ ಮೊದಲ ವರ್ಷ ಈ ವ್ರತವನ್ನು ಗಂಡ ಹೆಂಡತಿ ಪ್ರಾಾರಂಭಿಸುತ್ತಾಾರೆ. ಇದನ್ನು ವ್ರತ ಹಿಡಿಯುವುದು ಎಂದು ಕರೆಯಲಾಗುವುದು. ದಂಪತಿಗಳಿಬ್ಬರೂ ಶ್ರದ್ಧಾ ಭಕ್ತಿಯಿಂದ ನೆರವೇರಿಸುವ ಈ ಪೂಜೆಯಲ್ಲಿ ಮೊದಲಿಗೆ ಯಮುನಾ ಪೂಜೆ ಮಾಡಲಾಗುತ್ತದೆ. ಬೆಳಗ್ಗೆಯೇ ಸ್ನಾನಾದಿ ಕರ್ಮಗಳನ್ನು ಪೂರೈಸಿ ದಂಪತಿಗಳಿಬ್ಬರೂ ಮಡಿಯಲ್ಲಿ ನೀರನ್ನು ತಂದು (ಯಮುನೆ ನೀರು) ಎರಡು ಪಾತ್ರೆಗಳಿಗೆ ಸುಣ್ಣ ಹಚ್ಚಿ ಅದಕ್ಕೆ ಚಂದನದಲ್ಲಿ ಚಕ್ರಗಳನ್ನು ಬರೆದು ತಂದ ಯಮುನೆಯನ್ನು ಆ ಕಳಶದಲ್ಲಿ ಹಾಕಿ ಅದಕ್ಕೆ ನಾಣ್ಯ, ಅರಿಶಿನ, ಕುಂಕುಮ, ಅಕ್ಷತೆ ಮತ್ತು ಮಾವಿನ ಎಲೆಗಳನ್ನು ಹಾಕಿ ಅದರ ಮೇಲೆ ತೆಂಗಿನಕಾಯಿ ಇರಿಸಿ ಕಳಶ ಸ್ಥಾಪಿಸಲಾಗುತ್ತದೆ.

ಹಸಿ ದರ್ಭೆಯನ್ನು ಹೆಣೆದು ಅದನ್ನು ಕಳಶದ ಮೇಲೆ ಇಡಲಾಗುತ್ತದೆ. ಇದನ್ನು ‘ಫಣಿ’ ಎಂದು ಕರೆಯುತ್ತಾಾರೆ. ಫಣಿ ಎಂದರೆ ಸರ್ಪ, ಅನಂತ ಪದ್ಮನಾಭ ಶೇಷಶಯನನಾಗಿರುವ ಕಾರಣ ಈ ಪದ್ಧತಿ ಅನುಸರಿಸಲಾಗುತ್ತದೆ. ಇದನ್ನೇ ಅನಂತ ಪದ್ಮನಾಭನೆಂದು ಆರಾಧಿಸಲಾಗುತ್ತದೆ. ಮೊದಲಿಗೆ ಗಣಪತಿ ಪೂಜೆ ಮಾಡಿ ತದನಂತರ ಕಳಶಕ್ಕೆ ಉಪವೀತವನ್ನು ಹಾಕಿ, ವಿವಿಧ ನಾಮಾವಳಿ ಅರ್ಚನೆಗಳೊಂದಿಗೆ ಹೂವು ಮತ್ತು ಪತ್ರೆಗಳಿಂದ ಅನಂತ ಪದ್ಮನಾಭನನ್ನು ಪೂಜಿಸಲಾಗುವುದು. ಮನೆದೇವರನ್ನು ಪೂಜಿಸಿ ವ್ರತ ಮಾಡುವ ದಂಪತಿಗಳಿಬ್ಬರೂ ಕಳೆದ ವರ್ಷದ ದೋರ ಅಥವಾ ದಾರವನ್ನು ಧರಿಸಿ ಪೂಜೆ ಪ್ರಾರಂಭಿಸುತ್ತಾಾರೆ. ಹೊಸ ದಾರವನ್ನು ಇಟ್ಟು ಪೂಜಿಸುತ್ತಾಾರೆ. ಈ ವ್ರತದಲ್ಲಿ ಕಮಲದ ಹೂವು ಶ್ರೇಷ್ಠ.

ಅನಂತನ ಸಂಖ್ಯೆ 14 ಈ ಕಾರಣದಿಂದಲೇ ಚತುರ್ದಶಿಯ ದಿನದಂದು ಈ ವ್ರತವನ್ನು ಆಚರಿಸಲಾಗುವುದು. ಹದಿನಾಲ್ಕು ಎಳೆ ಮತ್ತು ಹಿಡಿಯ ಹತ್ತಿಯ ಹಾರವನ್ನು ಅನಂತನ ಎಳೆ ಎಂದು ಕಳಶಕ್ಕೆ ಅರ್ಪಿಸಲಾಗುತ್ತದೆ. ಇದೇ ವೇಳೆ ಗೆಜ್ಜೆ ವಸ್ತ್ರ, ಪತ್ರೆಗಳು, ಧೂಪ ಮತ್ತು ದೀಪ, ಹೂವು, ಗಂಧ, ಅಕ್ಷತೆಗಳನ್ನು ಕಳಶಕ್ಕೆ ಪೂಜಿಸುತ್ತಾಾರೆ.

ಈ ದಿನ ಅನಂತನ ಗಂಟು ಎಂದು ವಿಶೇಷವಾದ ಚುಕ್ಕಿ ರಂಗೋಲಿಯನ್ನೂ ಒಂದು ತಟ್ಟೆಯ ಮೇಲೆ, ಚಂದನದಲ್ಲಿ ಬರೆದು ಅದರಲ್ಲಿ ತುಪ್ಪದ ದೀಪವನ್ನಿಟ್ಟು ಮಂಗಳಾರತಿ ಮಾಡಲಾಗುತ್ತದೆ. ಪೂಜಾ ವಿಧಿವಿಧಾನಗಳೆಲ್ಲಾ ಮುಗಿದ ನಂತರ ಅಡುಗೆಗಳನ್ನು ನೈವೇದ್ಯ ಮಾಡಿ ಮಂಗಳಾರತಿ ಮಾಡಲಾಗುತ್ತದೆ.

ಕೊನೆಯಲ್ಲಿ ತೆಂಗಿನಕಾಯಿ ಮತ್ತು ಹಣ್ಣುಗಳನ್ನು ಇಟ್ಟು ಉಪಾಯನದಾನವನ್ನು ಋತ್ವಿಕರಿಗೆ ನೀಡಲಾಗುವುದು. ಈ ಸಂದರ್ಭದಲ್ಲಿ ವ್ರತ ಮಾಡಿದ ದಂಪತಿಗಳು ಧರಿಸಿದ್ದ ಹಳೆಯ ದೋರ ಅಥವಾ ದಾರಗಳನ್ನು ತೆಗೆದು ವ್ರತ ಮಾಡಿಸಿದ ಋತ್ವಿಕರಿಂದ, ಇಟ್ಟು ಪೂಜಿಸಿದ ಹೊಸ ದಾರವನ್ನು ದಂಪತಿಗಳಿಬ್ಬರೂ ಕಟ್ಟಿಸಿಕೊಳ್ಳುತ್ತಾರೆ. ಈ ದಿನ ಹೋಳಿಗೆ ಕಡುಬುಗಳು ಅನಂತನಿಗೆ ವಿಶೇಷ ನೈವೇದ್ಯ.

ಸಂಜೆ ಪುನಃಪೂಜೆ ಮಾಡಿ ಆವಾಹನೆಯಾದ ಅನಂತ ಪದ್ಮನಾಭಸ್ವಾಾಮಿಯನ್ನು ಮಂಗಳಾರತಿ ಮಾಡಿ ವ್ರತದ ಮಹಿಮೆಯ ಕಥೆಯನ್ನು ಓದಿ ವಿಸರ್ಜನೆ ಮಾಡಲಾಗುತ್ತದೆ. ಬಳಿಕ ಧರಿಸಿದ ದಾರವನ್ನು ತೆಗೆಯಬಹುದು. ಕೆಲವೆಡೆ ಮರುದಿನ ಅಂದರೆ ಹುಣ್ಣಿಮೆಯ ದಿನದಂದು ಸತ್ಯನಾರಾಯಣ ಪೂಜೆ ಮಾಡಿ ವಿಸರ್ಜಿಸುವ ಪರಿಪಾಠ ಇದೆ.

ಅನಂತನಿಗೆ ಗೋಧಿ ಇಷ್ಟ

ಈ ವ್ರತದಲ್ಲಿ ಗೋಧಿಯ ಖಾದ್ಯಗಳನ್ನು ಅನಂತನಿಗೆ ನೈವೇದ್ಯ ಮಾಡುವುದು ವಿಶೇಷ. ಗೋಧಿಯ ಹುಗ್ಗಿ, ಪಾಯಸ ಮತ್ತು ಇನ್ನಿತರ ಅಡುಗೆಗಳನ್ನು ಮಾಡಿ ಪೂಜಿಸುತ್ತಾಾರೆ. ವ್ರತ ಪೂರ್ಣವಾದ ನಂತರ ಉಪಾಯನ ದಾನವನ್ನು ಗೋಧಿಯ ಮೂಲಕವೇ ದಾನ ಕೊಡಲಾಗುವುದು. 14 ವರ್ಷಗಳ ಕಾಲ ವ್ರತ ಮಾಡಿದ ನಂತರ ಉದ್ಯಾಪನೆಯನ್ನು ಮಾಡಲಾಗುತ್ತದೆ. ಈ ವೇಳೆ ಹೋಮ ಹವನಗಳನ್ನು ನಡೆಸಿ, ಋತ್ವಿಕರಿಂದ ನಾಲ್ಕು ಜಾವನ ಪೂಜೆ ನಡೆಸಿ, ದಂಪತಿ ಪೂಜೆ, ಕನ್ನಿಕಾ ಪೂಜೆಗಳನ್ನು ನೆರವೇರಿಸಲಾಗುವುದು. ಮುತ್ತೈದೆಯರಿಗೆ ಮೊರದ ಬಾಗಿನವನ್ನು ನೀಡುವ ಪದ್ಧತಿ ಇದೆ. ‌ ‌

ವ್ರತ ಕೈಗೊಂಡವರು ಬೆಳಿಗ್ಗೆ ಹಾಗೂ ಮಧ್ಯಾಹ್ನ ಉಪವಾಸವಿದ್ದು, ರಾತ್ರಿ ದೇವರ ಪ್ರಸಾದವೆಂದು ಭೋಜನ ಸೇವಿಸುತ್ತಾರೆ.
ಅನಂತ ಪದ್ಮನಾಭ ವ್ರತಕ್ಕೆ 14 ಬಗೆಯ ಭಕ್ಷ್ಯಗಳನ್ನು ತಯಾರಿಸುವ ಪದ್ಧತಿಯಿದೆ. ಅನ್ನ, ಕಡುಬು, ಮೋದಕ, ಚಕ್ಕುಲಿ, ಹಾಲು, ಬೆಲ್ಲ ಇತ್ಯಾದಿಗಳನ್ನು ದೇವರ ಮುಂದಿಟ್ಟು ನೈವೇದ್ಯ ಮಾಡುತ್ತಾರೆ. ಪೂಜೆ, ಅನಂತ ಪದ್ಮನಾಭನ ಕಥೆ ಮುಗಿದು ಮಂಗಳಾರತಿ ನಡೆಯುತ್ತದೆ. ಆಗ ಮನೆಯವರು, ಬಂಧುಗಳೆಲ್ಲ ಒಟ್ಟು ಸೇರಿ ಪ್ರಾರ್ಥನೆ ಮಾಡುತ್ತಾರೆ, ತಮ್ಮ ಇಷ್ಟಾರ್ಥ ಸಿದ್ದಿ ನೆರವೇರಿಕೆಗೆ ಸಂಕಲ್ಪ ಮಾಡಿಕೊಳ್ಳುತ್ತಾರೆ. ಮನೆಯವರು ಆ ದಿನ ರಾತ್ರಿಯಿಡೀ ಜಾಗರಣೆ ಕುಳಿತು ದೇವರ ಸ್ಮರಣೆ, ಸ್ತುತಿಯಲ್ಲಿ ನಿರತರಾಗಿರಬೇಕೆಂಬ ನಿಯಮವಿದೆ. ಮಾರನೇ ದಿನ ಪೂಜೆಯ ನೀರನ್ನು ಮತ್ತೆ ಬಾವಿ ಅಥವಾ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸುತ್ತಾರೆ. ಈ ವೃತವನ್ನು ಆಚರಿಸುವ ಮನೆ ಯಾ ದೇವಸ್ಥಾನ ನಮ್ಮ ವಾಸ್ತವ್ಯಕ್ಕೆ ಹತ್ತಿರ ವಿದ್ದಲ್ಲಿ ಭೇಟಿ ನೀಡಿ ಆ ಕಳಸವನ್ನು ನಮ್ಮ ಕಣ್ಮನಗಳಿಂದ ನೋಡುವುದರಿಂದ ನಮ್ಮ ಇಷ್ಟಾರ್ಥ ಗಳು ಫಲಿಸುವುದರೊಂದಿಗೆ, ಕೆಲವರಿಗಂತೂ ಸಂತಾನಪ್ರಾಪ್ತಿ, ಧನಪ್ರಾಪ್ತಿಯಾದ ಇತಿಹಾಸವು ನೋಡಲು ಸಿಗುತ್ತದೆ. ನಮ್ಮ ಪೂರ್ವಜರು ಅಂದಿನ ಕಷ್ಟದ ಅನಿವಾರ್ಯ ಸನ್ನಿವೇಶದಲ್ಲಿ ಈ ವೃತವನ್ನು ಪ್ರತಿವರ್ಷ ಆಚರಿಸುತ್ತಾ ಸಂತಾನಪ್ರಾಪ್ತಿ, ಸರ್ವಾಭೀಷ್ಟ ಸಿದ್ಧಿ ಯೊಂದಿಗೆ ಧನಪ್ರಾಪ್ತಿಯನ್ನು ಪಡೆದುಕೊಂಡ ಬಗ್ಗೆ ಹಲವಾರು ಕುಟುಂಬಗಳನ್ನು ನಾವು ನೋಡಬಹುದಾಗಿದೆ.

ಈ ವ್ರತದ ಅಧಿದೇವತೆ ಶ್ರೀ ಮಹಾವಿಷ್ಣು ! ಇಂದು ಸ್ವಾಮಿಯು ತನ್ನ ಸಕಲ ದೇವತಾ ಪರಿವಾರದೊಡಗೂಡಿ ಪೂಜಿಸಲ್ಪಡುವುದೇ ವಿಶೇಷವಾಗಿದೆ ! ಅನಂತ ದೇವನು ತನ್ನನ್ನು ಭಕ್ತಿಯಿಂದ ಪೂಜಿಸುವವರಿಗೆ ಅನಂತ ಕೀರ್ತಿ ಸಂಪತ್ತು, ಸುಖಶಾಂತಿ ಸೌಭಾಗ್ಯವನ್ನು ಅನಂತಕಾಲದವರೆಗೂ ಕೊಡುತ್ತಾನೆಂದೇ ಪ್ರತೀತಿಯಿದೆ !!

ಈ ವ್ರತವು ಅನೇಕರ ಮನೆಯಲ್ಲಿ ಇರುವುದಿಲ್ಲ, ಇದನ್ನು ತುಂಬಾ ಮಡಿಯಾಗಿ ಭಕ್ತಿಶ್ರದ್ಧೆಯಿಂದ ಮಾಡಬೇಕು ! ಮನೆಯಲ್ಲಿ ಹಿರಿಯರು ವ್ರತವನ್ನು ಮಾಡುವ ಪದ್ಧತಿ ನೆಡೆಸಿಕೊಂಡು ಬಂದಿದ್ದರೇ ಮುಂದಿನವರು ಅದನ್ನು ಆಚರಿಸುತ್ತಾ ಮುನ್ನೆಡಸಬೇಕು.

 - ನಮ್ಮ ಓದುಗರು ನೀಡಿದ ಲೇಖನ

 

–>