ಎಲ್ಲರ ಪ್ರಾಣಪೋಷಕ ಅನ್ನವಾದರೂ ಅದು ನೀರಿನಿಂದಲೇ ಬೆಳೆಯುತ್ತದೆ. ನೀರಿಲ್ಲದೇ ಈ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಭೂಲೋಕದಲ್ಲಿ ನೀರು ಅಮೃತವಾಗಿದೆ. ಗೃಹಗಳ ಸಮೂಹಕ್ಕೆ ಅಧಿಪತಿಯಾಗಿರುವ ಸೋಮನು ನೀರಿನಲ್ಲಿಯೇ ಜನಿಸಿದ್ದಾನೆ. ಅಮೃತ,ಸುಧಾ, ಸ್ವಧೆ, ಅನ್ನ, ಔಷಧಿ, ಹುಲ್ಲು ಮತ್ತು ಲತೆಗಳು ನೀರಿನಿಂದಲೇ ಹುಟ್ಟಿವೆ. ಇವುಗಳಿಂದಲೇ ಸಕಲ ಪ್ರಾಣಿಗಳ ಪ್ರಾಣಗಳು ಅವಿರ್ಭವಿಸುತ್ತವೆ.ಮತ್ತು ಪುಷ್ಠಿಯನ್ನು ಹೊಂದುತ್ತವೆ.
ನೀರಿನಿಂದಲೇ ಜನಿಸಿದ ಅಮೃತವೇ ದೇವತೆಗಳಿಗೆ ಆಹಾರವಾಗಿದೆ. ಸುಧೆಯೇ ಸರ್ಪಗಳಿಗೆ ಅನ್ನವಾಗಿದೆ, ಸ್ವಧೆಯೇ ಪಿತೃಗಳಿಗೆ ಅನ್ನವಾಗಿದೆ. ಹುಲ್ಲು ದನಕರುಗಳಿಗೆ ಆಹಾರವಾಗಿದೆ.
ವಿದ್ವಾಂಸರು ಅನ್ನವೇ ಮನುಷ್ಯರಿಗೆ ಪ್ರಾಣವೆಂದು ಹೇಳುತ್ತಾರೆ. ಎಲ್ಲ ವಿಧವಾದ ಅನ್ನಗಳು(ಧಾನ್ಯಗಳು) ನೀರಿನಿಂದಲೇ ಬೆಳೆಯುತ್ತವೆ. ಆದ್ದರಿಂದ ಜಲದಾನಕ್ಕಿಂತ ಶ್ರೇಷ್ಠ ದಾನ ಬೇರೊಂದಿಲ್ಲ.
ಆತ್ಮ ಕಲ್ಯಾಣ ಬಯಸುವ ಪ್ರತಿಯೊಬ್ಬರು ನಿತ್ಯವೂ ಜಲದಾನ ಮಾಡಬೇಕು. ಜಲದಾನವು, ಧನ, ಯಶಸ್ಸು ಮತ್ತು ಆಯುಷ್ಯವನ್ನು ವೃದ್ಧಿಸುತ್ತದೆ. ಜಲದಾನಿಯು ಶತ್ರುಗಳನ್ನು ಮೆಟ್ಟಿ ನಿಲ್ಲುತ್ತಾನೆ. ಎಲ್ಲ ಕಾಮನೆಗಳನ್ನು ಪಡೆದುಕೊಳ್ಳುತ್ತಾನೆ. ಅಕ್ಷಯವಾದ ಕೀರ್ತಿಯನ್ನು ಹೊಂದುತ್ತಾನೆ. ಸಕಲ ಪಾಪಗಳಿಂದಲೂ ಮುಕ್ತನಾಗುತ್ತಾನೆ. ಪರಲೋಕಕ್ಕೆ ಹೋದ ಮೇಲೆ ಅಕ್ಷಯ ಸುಖವನ್ನು ಭೋಗಿಸುತ್ತಾರೆ ಎಂದು ಭೀಷ್ಮರು ಹೇಳುತ್ತಾರೆ.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)
Subscribe , Follow on
Facebook Instagram YouTube Twitter X WhatsApp