-->

ಗೋದಾನದ ಮಹತ್ವ , ಬ್ರಹ್ಮಚರ್ಯದ ಮಹತ್ವ ಹೇಳಿದ ಬೀಷ್ಮ

ಯಾರು ಹುಟ್ಟಿದಾಗಿನಿಂದ ಸಾಯುವ ವರೆಗೂ ಬ್ರಹ್ಮಚಾರಿಯಾಗಿಯೇ ಇರುವರೋ ಅವರಿಗೆ ದೊರಕದೇ ಇರುವ ವಸ್ತುಗಳೇ ಯಾವುದೂ ಇಲ್ಲ ಎಂದು ಬೀಷ್ಮಾಚಾರ್ಯರು ಧರ್ಮರಾಜನಿಗೆ ಬ್ರಹ್ಮಚರ್ಯ ಪಾಲನೆ ಮಹತ್ವ ಕುರಿತು ಹೇಳುತ್ತಾರೆ.

ಈ ಲೋಕದಲ್ಲಿ ಸತ್ಯನಿಷ್ಠರಾಗಿದ್ದ, ಜಿತೇಂದ್ರಿಯರಾಗಿದ್ದ ಮತ್ತು ಊರ್ಧರೇತಸ್ಯರಾಗಿದ್ದ ಅನೇಕ ಕೋಟಿ ಕೋಟಿ ಋಷಿಗಳು ಈಗ ಬ್ರಹ್ಮ ಲೋಕದಲ್ಲಿ ವಾಸಮಾಡುತ್ತಿದ್ದಾರೆ.

ಯಾರಾದರೂ ವಿಶೇಷವಾದ ರೀತಿಯಲ್ಲಿ ಬ್ರಹ್ಮಚರ್ಯವ್ರತವನ್ನು ಪರಿಪಾಲಿಸಿದ್ದೇ ಆದರೆ ಅವರು ಆಬ್ರಹ್ಮಚರ್ಯ ದಿಂದಲೇ ತನ್ನಲ್ಲಿರುವ ಸಕಲ ಪಾಪಗಳನ್ನೂ ಭಸ್ಮಮಾಡಿಬಿಡುತ್ತಾನೆ. ಈ ನಿಯಮವು ಬ್ರಾಹ್ಮಣರಿಗೆ ವಿಶೇಷವಾಗಿ ಅನ್ವಯಿಸುತ್ತದೆ. ನೈಷ್ಟಿಕ ಬ್ರಹ್ಮಚರ್ಯವನ್ನು ಪಾಲಿಸುತ್ತಿರುವ ಬ್ರಾಹ್ಮಣರನ್ನು ಅಗ್ನಿಯೆಂದೇ ಹೇಳುತ್ತಾರೆ. ತಪಸ್ವಿಗಳಾದ ಬ್ರಾಹ್ಮಣರಲ್ಲಿ ಈ ಅಗ್ನಿತ್ವವು ಪ್ರತ್ಯಕ್ಷನಾಗಿಯೇ ಕಾಣುತ್ತದೆ, ಬ್ರಹ್ಮಚಾರಿಯ ಎದುರಾಗಿ ನಿಲ್ಲಲು ಇಂದ್ರನೂ ಹೆದರುತ್ತಾನೆ.  ಬ್ರಹ್ಮ ಚರ್ಯದ ಫಲವು ಋಷಿಗಳಲ್ಲಿಯೂ‌ ಕಂಡುಬರುತ್ತದೆ.ಯಾರು ತಂದೆ ತಾಯಿ, ಗುರುಗಳನ್ನು, ಆಚಾರ್ಯರನ್ನು, ಹಿರಿಯಣ್ಣನನ್ನುನಿರಂತರವಾಗಿ ಸೇವಿಸುವರೋ ಅವರ ಗುಣಗಳಲ್ಲಿ ದೇಹಗಳನ್ನೆಣಿಸುವುದಿಲ್ಲ. ಅಂತಹವರು ಸ್ವರ್ಗಲೋಕ ದಲ್ಲಿ ಸರ್ವಸಮ್ಮತವಾದ ಸ್ಥಾನವನ್ನು ಪಡೆಯುವತ್ತಾರೆ.  

ತಂದೆ-ತಾಯಿಗಳ, ಗುರುಗಳ, ಆಚಾರ್ಯರ ಸೇವೆಯಿಂದ ಸ್ವರ್ಗಲೋಕ ಪ್ರಾಪ್ತವಾಗುತ್ತದೆ ಗುರು ಶುಶ್ರೂಷೆಯಲ್ಲಿ ನಿರತರಾದ , ಜಿತೇಂದ್ರಿಯರಾದ ಮನುಷ್ಯರು ಯಾವ ಕಾರಣದಿಂದಲೂ ನರಕ ವನ್ನು ನೋಡಬೇಕಾಗುವುದಿಲ್ಲ ಎಂದು ಭೀಷ್ಮರು ಹೇಳಿದರು. ಗೋದಾನದ ಯಾವ ವಿಧಿಯಿಂದ ಶಾಶ್ವತವಾದ ಪುಣ್ಯ ಲೋಕ ಗಳು‌ ಸಿಗುತ್ತವೆ. ಅಂಥ ಗೋದಾನದ ಮಹಿಮೆ ಹೇಳು ಎಂದು ಧರ್ಮರಾಜನು ಕೇಳುತ್ತಾನೆ.
ಭೀಷ್ಮರು ಗೋದಾನದ ಬಗ್ಗೆ ಏನು ಹೇಳಿದರು ಎಂಬುದನ್ನು ತಿಳಿಯೋಣ.

ಗೋದಾನಕ್ಕಿಂತಲೂ ಶ್ರೇಷ್ಠವಾದ ಬೇರೆ ಯಾವ ದಾನವೂ ಇಲ್ಲ. ನ್ಯಾಯವಾದ ಮಾರ್ಗಗಳಿಂದ ಪ್ರಾಪ್ತವಾಗಿ ಸಾಕಲ್ಪಟ್ಟ ಗೋವು ಒಡನೆಯ ದಾತೃವಿನ ಕುಲವನ್ನು ಪಾವನಗೊಳಿಸುತ್ತದೆ. ಸತ್ಪುರುಷರಿಗೋಸ್ಕರ ಗೋದಾನದ ವಿಧಿಯನ್ನು ಉತ್ತಮ ವಾಗಿ ರಚಿಸಿ ಅದನ್ನು ಈ ಪ್ರಜೆಗಳಿಗೆ ವಿಶೇಷವಾಗಿ ಅನುಗ್ರಹಿಸಿಕೊಟ್ಡಿ ದ್ದಾರೆ ನಮ್ಮ ಋಷಿಗಳು. 

ಗೋದಾನದ ಮಹತ್ವ , ಬ್ರಹ್ಮಚರ್ಯದ ಮಹತ್ವ ಹೇಳಿದ ಬೀಷ್ಮ , ಮಹಾಭಾರತ ಸಾರ

ಬಹಳ ಹಿಂದಿನಿಂದಲೂ ಪ್ರಚಲಿತವಾಗಿರುವ ಶ್ರೇಷ್ಠವಾದ, ಗೋದಾನದ ಸಲುವಾಗಿ ರಚಿತವಾಗಿರುವ ಆ ವಿಧಿಯನ್ನು ಭೀಷ್ಮರು ಯುಧಿಷ್ಠಿರನಿಗೆ ಹೇಳುತ್ತಾರೆ. ಹಿಂದೊಮ್ಮೆ ಗೋದಾನದ ಸಲುವಾಗಿ ಮಾಂಧಾತೃ ಚಕ್ರವರ್ತಿಯು ಅನೇಕ ಹಸುಗಳು ಸಾಕಿದ್ದನು. ಆ ಸಮಯದಲ್ಲಿ ಮಾಂಧಾತೃ ವಿಗೆ ಆ ಗೋವುಗಳನ್ನು ಹೇಗೆ ದಾನಕೊಡಬೇಕು ಎಂಬ ಜಿಜ್ಞಾಸೆಯುಂಟಾಯಿತು.


ಆಗ  ಮಾಂಧಾತೃವೂ ಬೃಹಸ್ಪತಿ ಯನ್ನು ಗೋದಾನದ ಬಗ್ಗೆ ಕೇಳುತ್ತಾನೆ. ಗೋದಾನವನ್ನು ಮಾಡಲು ಇಚ್ಛಿಸಿರುವ ಮನುಷ್ಯನು ನಿಯಮ ಪೂರ್ವಕವಾಗಿ ವ್ರತಾನುಷ್ಠಾನ ಮಾಡಬೇಕು. ಸತ್ಪಾತ್ರನಾದ ಬ್ರಾಹ್ಮಣನನ್ನು ಆಹ್ವಾನಿಸಿ ಅವನನ್ನು ಯಥಾಯೋಗ್ಯವಾಗಿ ಸತ್ಕ ರಿಸಬೇಕು. ನಾಳೆ ಈ ಹಸುವನ್ನು ತಮಗೆ ದಾನ ಕೊಡುವೆ ಎಂದು ಸಂಕಲ್ಪ ಮಾಡಬೇಕು. ಅನಂತರ ರೋಹಿಣೀ ( ಕೆಂಪು ಬಣ್ಣದ ) ಹಸುವನ್ನು ತಂದು ಅದನ್ನು ಮುಟ್ಟಿ ನಮಸ್ಕರಿಸನೇಕು. ಅನಂತರ ಗೋವುಗಳ ಮಧ್ಯದಲ್ಲಿ ನಿಂತುಕೊಂಡು ಹಸುವು ನನ್ನ ತಾಯಿಯಾಗಿದೆ. ಗೂಳಿಯು ನನ್ನ ತಂದೆಯಾಗಿದೆ, ಗೋ - ವೃಷಭಗಳೆರಡೂ ನನಗೆ ಸ್ವರ್ಗವನ್ನು, ಐಹಿಕ ಸುಖವನ್ನೂ ದಯಪಾಸಲಿ, ಹಸುವೇ ನನ್ನ ಜೀವಿಕೆಗೆ ಆಧಾರಭೂತವಾಗಿದೆ.‌ಹೀಗೆ ಹೇಳಿ ಗೋವನ್ನು ಶರಣುಹೊಂದಿ ಆ ಗೋವುಗಳ ಮಧ್ಯದಲ್ಲಿಯೇ ಆ ರಾತ್ರಿಯನ್ನು ಕಳೆದರೆ  ಸಕಲಶಾಪಗಳಿಂದಲೂ ವಿಮುಕ್ತನಾಗುತ್ತಾನೆ.

ಮರು ದಿನ ಸೂರ್ಯೋದಯದ ಸಮಯದಲ್ಲಿ ಗಂಡು ಕರುವಿನೊಡನೆ ಗೋವನ್ನುಬ್ರಾಹ್ಮಣನಿಗೆ ದಾನ ಮಾಡಿ ಸ್ವರ್ಗವನ್ನು ಹೊಂದಬೇಕು ಎಂದು ಬೀಷ್ಮರು ಗೋ ದಾನ ಮಾಡುವ ವಿಧಾನದ ಬಗ್ಗೆ ಧರ್ಮರಾಜನಿಗೆ ವಿವರಿಸಿದರು.


- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)

ನಾರದರಿಂದ ಧ(ರ್ಮ) ಉಪದೇಶ , ಮಹಾಭಾರತ ಸಾರ

ಯುಧಿಷ್ಠಿರನಲ್ಲಿ ದೇವರ ಬಗ್ಗೆ ಸಂಶಯ ವ್ಯಕ್ತವಾಯಿತು. ಆಗ ತಕ್ಷಣ ನಾರದರು ಅಲ್ಲಿಗೆ  ಆಗಮಿಸಿದ್ದಾರೆ. ರಾಜಸೂಯ ಯಾಗದಲ್ಲಿ ಕೃಷ್ಣನಿಗೆ ಅಗ್ರಪೂಜೆ ಎಂದು ಭೀಷ್ಮಾಚಾರ್ಯರು ನಿರ್ಣಯಿಸಿದ್ದರು. ಶ್ರೀ ಕೃಷ್ಣನಿಗೆ ಅಗ್ರಪೂಜೆ ನಡೆಯುತ್ತಿತ್ತು. ಶಿಶುಪಾಲ ಕೃಷ್ಣನನ್ನು ನಿಂದಿಸಹತ್ತಿದ. ನೂರು ಬೈಗುಳವರೆಗೂ ಸಹಿಸಿಕೊಳ್ಳುವೆ ಎಂದು ಕೃಷ್ಣ ಶಿಶುಪಾಲನ ತಾಯಿಗೆ ವಚನ ಕೊಟ್ಟಿದ್ದ. ನೂರು ಬೈಗುಳ ಮುಗಿದವು. ತಕ್ಷಣ ಸುದರ್ಶನ ಚಕ್ರದಿಂದ ಶಿಶುಪಾಲನನ್ನು ಕೃಷ್ಣ  ಸಂಹರಿಸಿದ. ಆಗ ಶಿಶುಪಾಲನ  ಹೃದಯದಿಂದ ದೀಪವು  ಕೃಷ್ಣನಲ್ಲಿ ಲೀನ ವಾಯಿತು.ಅಷ್ಟು ಕೆಟ್ಟದಾಗಿ ನಿಂದಿಸಿದರೂ ಶಿಶುಪಾಲನಿಗೆ ಕೃಷ್ಣ ಸದ್ಗತಿ ಯಾಕೆ ನೀಡಿದ ಎಂಬ ಸಂಶಯವನ್ನು ಧರ್ಮರಾಜ ನಾರದರಲ್ಲಿ ಕೇಳುತ್ತಾರೆ.


ಆಗ ನಾರದರು ಉತ್ತರಿಸುವರು, ನೀನು ಶಿಶುಪಾಲನ ಕೇವಲ ನಿಂದನೆ ಮಾತ್ರ ಕೇಳಿರುವಿ. ಅನಾದಿಕಾಲದಿಂದಲೂ ಭಗವಂತನ ಸೇವೆ ಮಾಡಿದ್ದಾನೆ. ನಾರಾಯಣನ ದ್ವಾರಪಾಲಕನಾಗಿದ್ದ ಜಯ ಬ್ರಹ್ಮದೇವರ ಮಾನಸ ಪುತ್ರರಾದ ಸನಕಾದಿಗಳನ್ನು ಒಳಗಡೆ ಬಿಡದಕ್ಕೆ ಶಾಪಕ್ಕೆ ಗುರಿಯಾಗಿ ಅಸುರನಾಗಿ ಜನಿಸಿದ್ದಾನೆ. ತಪ್ಪು ಮಾಡಿದ್ದಕ್ಕಿಂತ ಭಗವಂತನ ಸೇವೆ ಹೆಚ್ಚು ಮಾಡಿದ್ದಾನೆ. ಭಗವಂತ ತಾರತಮ್ಯ ಮಾಡುವುದಿಲ್ಲ. ಎಲ್ಲವನ್ನೂ ತುಲನೆ ಮಾಡಿಯೇ ಶಿಶುಪಾಲನಿಗೆ ಸದ್ಗತಿ ನೀಡಿದ್ದಾನೆ. ಶಿಶುಪಾಲನಲ್ಲಿನ ದೈತ್ಯನಿಗೆ ದುರ್ಗತಿಯೇ ನೀಡಿದ್ದಾನೆ ಎಂದು ನಾರದರು ಯುಧಿಷ್ಠಿರನಲ್ಲಿದ್ದ ಸಂಶಯಕ್ಕೆ ಪರಿಹಾರ ನೀಡಿದರು.


ನಾರದರಿಂದ ಧ(ರ್ಮ) ಉಪದೇಶ   , ಮಹಾಭಾರತ ಸಾರ
ಧಾರ್ಮಿಕವಾಗಿರುವುದು ಬೇರೆ, ಧರ್ಮದ ಮೇಲಿನ ವಿಶ್ವಾಸ ಬೇರೆ. ನಮ್ಮ ಪೂರ್ವಜರು ಧರ್ಮ ಆಚರಿಸುತ್ತಿದ್ದಾರೆ ಎಂದು ಆಚರಿಸುವುದು ಬೇರೆ. ಧರ್ಮದ ಮರ್ಮವ ತಿಳಿದು ಆಚರಿಸುವುದು ಬೇರೆ. ಕೇವಲ ಧಾರ್ಮಿಕನಾಗಿದ್ದರೆ ಸಾಲದು. ಧರ್ಮದ ಬಗ್ಗೆ ಚನ್ನಾಗಿ ತಿಳಿದು ಆಚರಿಸಿದಾಗ ಫಲ ಸಿಗುತ್ತದೆ. ಅಭಿಷೇಕ ಮಾಡುವುದೇ ಪೂಜೆಯಲ್ಲ. ಭಗವಂತನ ಅಸ್ತಿತ್ವದ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡುವದೇ ನಿಜವಾದ ಪೂಜೆ.


ಭಗವಂತನ ಆಜ್ಞೆ ಪರಿಪಾಲಿಸುವದೇ ಧರ್ಮ. ಧರ್ಮ ಆಚರಿಸಿದ ವ್ಯಕ್ತಿ ಜೀವನದಲ್ಲಿ ದುಃಖ ಪಡುತ್ತಾರೆ, ಧರ್ಮವೇ ತಿಳಿಯದವರು ಸುಖವಾಗಿದ್ದಾರೆ ಎಂದು ಭಾವಿಸಬಾರದು. ಪೂರ್ವಜನ್ಮದಜಲ್ಲಿ ಸಂಪಾದಿಸಿದ ಪುಣ್ಯದ ಪ್ರತಿಫಲವಾಗಿ. ಈ ಜನ್ಮದಲ್ಲಿ ಅಧರ್ಮಿಯಾಗಿದ್ದರೂ ಸುಖ ಪಡುವರು. ಹಿಂದಿ‌ನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ   ಈ ಜನ್ಮದಲ್ಲಿ ಧಾರ್ಮಿಕನಾಗಿದ್ದರೂ ಕಷ್ಟ ಅನುಭವಿಸುವರು.  ಅದನ್ನು ಅರಿತು ಈ ಜನ್ಮದಲ್ಲಾದರೂ ನಾವು ಪುಣ್ಯ ಸಂಪಾದಿಸಿಕೊಳ್ಳಬೇಕು. ಸಂಸಾರದಲ್ಲಿ ತಪ್ತರಾದ  ನಾವು ಭಗವಂತನ ಸ್ಮರಣೆ ಮಾಡದೆ ದುಃಖದಲ್ಲಿ ಮುಳಗುತ್ತಿದ್ದೇವೆ. ಎಲ್ಲರೂ ಸನ್ಯಾಸಿಗಳಾಗಿಯೇ ಸಾಧನೆ ಮಾಡಬೇಕೆಂದೆನಿಲ್ಲ. ಸಂಸಾರದ ಜತೆಯಲ್ಲೆ ಸಾಧನೆ ಮಾಡುವ ಮೂಲಕ ಮೋಕ್ಷದ ಮಾರ್ಗ ಕಂಡುಕೊಳ್ಳಬೇಕು.


ಮೊದಲು ನಾವು ಜ್ಞಾನ ಪಡೆಯಬೇಕು. ಪಡೆದ ಜ್ಞಾನ ನಾಲ್ಕು ಜನರಲ್ಲಿ ಹಂಚಿಕೊಳ್ಳಬೇಕು. ಲೌಖಿಕ ಸಂಪತ್ತು ಬಳಸಿದಷ್ಟು ಖರ್ಚಾಗುತ್ತದೆ. ಆದರೆ ಜ್ಞಾನ ಸಂಪತ್ತು ಖರ್ಚು ಮಾಡಿದಷ್ಟು  ವೃದ್ಧಿಸುತ್ತದೆ. ಗಳಿಸಿದ ಜ್ಞಾನ ವಿನಿಮಯ ಮಾಡಿಕೊಳ್ಳುವ ಮೂಲಕ ವೃದ್ಧಿಸಿಕೊಳ್ಳಬೇಕು.
ಎಂದು ನಾರದರು ಧರ್ಮ ರಾಜನಿಗೆ ಧರ್ಮೋಪದೇಶ ನೀಡಿದರು


- ಶಾಮಸುಂದರ ಕುಲಕರ್ಣಿ,  ಕಲ್ಬುರ್ಗಿ (9886465925)

ಸತ್ಯ ನಿಷ್ಠೆಯೇ ಶ್ರೇಷ್ಠ ಧರ್ಮ , ಮಹಾಭಾರತ ಸಾರ

ಶೂರರಲ್ಲಿನ‌ ಹಲವಾರು ವಿಧಗಳ ಬಗ್ಗೆ  ಭೀಷ್ಮರು ಉಪದೇಶ ಮುಂದುವರೆಸಿದ್ದಾರೆ. ಕೆಲವರು ಸರಳತೆ ಹಾಗೂ ನೇರ ನಡತೆಯಲ್ಲಿ ಶೂರರೆನಿಸಿರುತ್ತಾರೆ. ಕೆಲವರು ಮನೋನಿಗ್ರಹದಲ್ಲಿ ಶೂರರೆನಿಸಿಕೊಂಡಿರುತ್ತಾರೆ. ವೇದ ಅಧ್ಯಯನದಲ್ಲಿ ನಿಷ್ಣಾತರಾದವರು  ಅಧ್ಯಯನ ಶೂರರೆನಿಸಿಕೊಳ್ಳುತ್ತಾರೆ. ಇನ್ನು ಕೆಲವರು ವೇದಾಧ್ಯನ ಮಾಡಿಸುವುದರಲ್ಲಿ ಶೂರರಾಗಿರುತ್ತಾರೆ. ಗುರು ಶುಶ್ರುಷೆಯಲ್ಲಿ ಶೂರರಾಗಿರುತ್ತಾರೆ. ಮಾತಾ ಪಿತೃಗಳ ಸೇವೆಯೇ ಪರಮ ಧ್ಯೇಯವೆಂದು ಅರಿತು ನಿರಂತರ ತಂದೆ ತಾಯಿ ಸೇವೆ ಮಾಡುವವರು ಮಾತಾ ಪಿತೃ ಶುಶ್ರೂಷಾ ಶೂರರಾಗಿರುತ್ತಾರೆ.


ಭಿಕ್ಷಾಟನೆಯಿಂದಲೇ ಜೀವನ ನಡೆಸಲು ನಿಶ್ಚಯಿಸಿ ಜೀವನ ಪರ್ಯಂತರವಾಗಿ ಭಿಕ್ಷಾಟನೆ ಮಾಡುವರು ಭೈಕ್ಷಶೂರರೆನಿಸಿಕೊಳ್ಳುತ್ತಾರೆ. ಹೀಗೆ ಆಯಾ ನಿಯಮಗಳನ್ನು ಪರಮ ಲಕ್ಷ್ಯವನ್ನಾಗಿಟ್ಟುಕೊಂಡು ಸದಾ ಆಚರಿಸುವ ಶೂರರು ಅನೇಕರಿದ್ದಾರೆ ಎಂದು ಭೀಷ್ಮರು ಹೇಳಿದರು.


ಸಾವಿರ ಅಶ್ವಮೇಧಗಳನ್ನು ಮಾಡಿದ ಪುಣ್ಯ ವನ್ನು ಮತ್ತು ಸತ್ಯನಿಷ್ಠೆಯಿಂದ ಪ್ರಾಪ್ತವಾಗುವ ಪುಣ್ಯಯನ್ನು ತಕ್ಕಡಿಯಲ್ಲಿಟ್ಟು ತೋಗಿದರೆ ಸತ್ಯ ನಿಷ್ಠೆಯಿಂದ ಪ್ರಾಪ್ತವಾಗುವ ಪುಣ್ಯವೇ  ಹೆಚ್ಚಾಗುತ್ತದೆ. ಸತ್ಯ ನಿಷ್ಠೆಯಿಂದ ಬಾಳುವ ಮೂಲಕ ಸಾವಿರ ಅಶ್ವಮೇಧ ಯಾಗ ಮಾಡಿದ ಪುಣ್ಯವನ್ನು ಪಡೆದುಕೊಳ್ಳಬೇಕು.

ಸತ್ಯ ನಿಷ್ಠೆಯೇ ಶ್ರೇಷ್ಠ ಧರ್ಮ  , ಮಹಾಭಾರತ ಸಾರ
ಸತ್ಯದ ಪ್ರಭಾವದಿಂದಲೇ ಸೂರ್ಯನು ಶಾಖವನ್ನುಂಟುಮಾಡುವನು.ಸತ್ಯ ನಿಷ್ಟೆಯಿಂದಲೇ ಅಗ್ನಿಯು ಪ್ರಜ್ವಲಿಸುವನು, ವಾಯುವು ಗಾಳಿಯನ್ನು ಬೀಸುವನು ಎಲ್ಲ ಶಕ್ತಿಯೂ ಸತ್ಯದಲ್ಲಿಯೇ ಪ್ರತಿಷ್ಠಾಪಿತವಾಗಿದೆ.


ಸತ್ಯನಿಷ್ಠೆಯಿಂದಲೇ ದೇವ, ಪಿತೃ, ಬ್ರಾಹ್ಮಣರು ಪ್ರಸನ್ನರಾಗುತ್ತಾರೆ.
ಸತ್ಯನಿಷ್ಠೆ ಶ್ರೇಷ್ಠವಾದ ಧರ್ಮ. ಯಾರೂ ಸತ್ಯವನ್ನು ಉಲ್ಲಂಘಿಸಬಾರದು ಎಂದು ಮಹಾಭಾರತ ನಿರೂಪಿಸಿದೆ‌. ಅಂಥ ಸತ್ಯದಿಂದ ಲಭಿಸುವ ಪ್ರಾಪ್ತಿಗೆ ದಮವೇ ಮೂಲ ಕಾರಣವಾಗಿದೆ ಎಂದು ಭೀಷ್ಮರು ಉಪದೇಶ ನೀಡಿದರು. ಬ್ರಹ್ಮಚರ್ಯದ ಬಗ್ಗೆ‌ ತಿಳಿದುಕೊಳ್ಖುವ ಬಯಕೆಯಾಗಿದೆ ಎಂದು ಧರ್ಮರಾಜನು ಕೇಳುತ್ತಾನೆ. ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮಾಚಾರ್ಯರು ಕೊಟ್ಟ ಉತ್ತರವನ್ನು ನಾಳೆ ತಿಳಿಯೋಣ.


- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)

ಕಾಡು ಸೇರಿದ ನಳ ದಮಯಂತಿ , ಮಹಾಭಾರತ ಸಾರ

 ಒಂದು ದಿನ ರಾತ್ರಿ ನಳ ಮೂತ್ರ ವಿಸರ್ಜಿಸಿ ಕೈ ಕಾಲು ತೊಳೆಯದೇ ಹಾಗೆ ಮಲಗಿದ. ನಳನಲ್ಲಿ‌ ದೋಷಕ್ಕಾಗಿ ಬಹುದಿನದಿಂದ ಕಾಯುತ್ತಿದ್ದ ಕಲಿ ನಳನ ದೇಹದಲ್ಲಿ ಪ್ರವೇಶಿಸುತ್ತಾನೆ. ಅಲ್ಲಿಂದಲೇ ಶುರುವಾಯಿತು ಕಲಿ ಪ್ರಭಾವ.
ಒಂದು ದಿನ ನಳನ ಸಹೋದರ ಪುಷ್ಕರ ಅಣ್ಣನನ್ನು ಜೂಜಾಟಕ್ಕೆ ಕರೆದಿದ್ದಾನೆ. ಕಲಿ ಪ್ರಭಾವದಿಂದ ನಳ ಜೂಜಾಟಕ್ಕೆ ಸಿದ್ದ ನಾದ. ಪುಷ್ಕರನಲ್ಲಿ ದ್ವಾಪರ ಪ್ರವೇಶಿಸಿದ್ದರಿಂದ ಮೋಸದಿಂದ ಎಲ್ಲವನ್ನು ಗೆಲ್ಲುತ್ತಿದ್ದಾನೆ. ದಮಯಂತಿ ನಳನಿಗೆ ಎಚ್ಚರಿಕೆ ಕೊಟ್ಟಿದ್ದಾಳೆ. ಆದರೂ ನಳ ಜೂಜಾಟ ಮುಂದು ವರಿಸಿದ. ದಮಯಂತಿಯಲ್ಲಿ ಕರ್ತವ್ಯ ಪ್ರಜ್ಞೆ ಮೂಡಿದೆ. ಸಾರಥಿಯನ್ನು ಕರೆದು ಮಕ್ಕಳಿಬ್ಬರನ್ನೂ ತವರು ಮನೆಗೆ ಕಳಿಸಿದ್ದಾಳೆ. ಇತ್ತ ನಳ ಎಲ್ಲವನ್ನೂ ಸೋತಿದ್ದಾನೆ. ದಮಯಂತಿಯನ್ನು ಪಣಕ್ಕಿಡು ಎಂದು ತಮ್ಮ ಕೇಳಿದಾಗ ಮೊದಲು ಗಳಿಸಿದ ಪುಣ್ಯದ ಫಲವಾಗಿ ನಳ ನಿರಾಕರಿಸಿ ರಾಜವನ್ನೇ ತೊರೆದು ಹೆಂಡತಿ ಜತೆ ಕಾಡಿಗೆ ಹೊರಟ. ಮೂರು ದಿನವಾದರೂ ಕಾಡಿನಲ್ಲಿ ಆಹಾರ ಸಿಗಲಿಲ್ಲ. ಅಲ್ಲೊಂದು ಬಂಗಾರದ ಪಕ್ಷಿ ಕಂಡಿತು. ಅದನ್ನು ಹಿಡಿದು ಉಪಜೀವನ ಸಾಗಿಸಬೇಕು ಎಂದು ಮೈ ಮೇಲೆ ಇರುವ ಬಟ್ಟೆಯನ್ನು ಪಕ್ಷಿ ಮೇಲೆ ಹಾಕಿದ್ದಾನೆ. ಬಟ್ಟೆ ಸಮೇತ ಪಕ್ಷಿ ಹಾರಿಹೋಯಿತು. ಬಟ್ಟೆ ಇಲ್ಲದೆ ಹಾಗೆ ಕಾಡಿನಲ್ಲಿ ಅಲೆಯುತ್ತಿದ್ದಾನೆ. ದಮಯಂತಿಗೆ ಹೇಳಿದ ಇದು ವಿದರ್ಭ ದೇಶಕ್ಕೆ ಹೋಗುವ ಮಾರ್ಗ ಎಂದು. ಆಗ ದಮಯಂತಿ ಹೇಳಿದಳು ನಾನು ನಿನ್ನ ಬಿಟ್ಟು ತವರು ಮನೆಗೆ ಹೋಗುವುದಿಲ್ಲ ಎಂದಳು.
ಕಾಡಿನಲ್ಲಿ ಒಂದು ಭವನ ಕಂಡಿತು. ಅಲ್ಲಿ ಮಲಗಿದ್ದಾರೆ. ಗಂಡ ಮಲಗುವ ವರೆಗೂ ಮಲಗದ ದಮಯಂತಿ ಅಂದು ಬೇಗ ಮಲಗಿದ್ದಾಳೆ. ರಾತ್ರಿ ಎದ್ದು ನಳ ಅವಳನ್ನು ಬಿಟ್ಟು ಹೋಗಲು ನಿರ್ಧರಿಸಿದ. ಅವಳು ತವರು ಮನೆಗೆ ಹೋಗಿ ಸುಖವಾಗಿರಲಿ ಎಂದು ನಳ ಅವಳನ್ನು ಬಿಟ್ಟು ಹೋಗಲು ನಿರ್ಧರಿಸಿದ.ದಮಯಂತಿ ಮಲಗಿದ್ದಾಳೆ. ನಳನಿಗೆ ರಾತ್ರಿ‌ಎಚ್ಚರವಾಯಿತು. ದಮಯಂತಿಯನ್ನು ಬಿಟ್ಟು ನಳ ಹೊರಟುಹೋದ.

ಕಾಡು ಸೇರಿದ ನಳ ದಮಯಂತಿ  , ಮಹಾಭಾರತ ಸಾರ


ಸ್ವಲ್ಪ‌ಸಮಯದ ನಂತರ ದಮಯಂತಿಗೆ  ಎಚ್ಚರ ವಾಯಿತು.ಗಂಡ ಇಲ್ಲದ್ದನ್ನು ಕಂಡು ಗಾಬರಿಯಾಗಿದ್ದಾಳೆ. ಗಂಡನನ್ನು ಹುಡಕುತ್ತಿದ್ದಾಳೆ. ಕಾಡಿನಲ್ಲಿ  ಅಜಗರ (ಹೆಬ್ಬಾವು) ಬಾಯಿಗೆ ಸಿಕ್ಕಿದ್ದಾಳೆ. ಈಗಲಾದರೂ ರಕ್ಷಣೆಗೆ ಬಾ ಎಂದು ನಳನನ್ನು ಕರೆದಿದ್ದಾಳೆ. ಒಬ್ಬ ವ್ಯಕ್ತಿ ಬಂದು ರಕ್ಷಿಸಿದ್ದಾನೆ. ಅವಳ ಸೌಂದರ್ಯಕ್ಕೆ ಮಾರು ಹೋಗಿ ತಪ್ಪು ಮಾಡಲು ಮುಂದಾದ. ಬುದ್ದಿ ಮಾತು ಹೇಳಿದರೂ ಕೇಳಲಿಲ್ಲ. ಪಾತಿವ್ರತೆಯ ಶಕ್ತಿಯಿಂದ ಅವನಿಂದ ಪಾರಾಗಿದ್ದಾಳೆ.
 ರಾಜನಾಗಿದ್ದಾಗ ಗಂಡ ಸುಖಕೊಟ್ಟಿದ್ದು ಸತ್ಯವಾದರೆ, ಈಗ ಕಷ್ಟವೂ ಸತ್ಯ ಎಂದು ನಿರ್ಧರಿಸಿದ್ದ ದಮಯಂತಿ ಯ ಔದಾರ್ಯ ಇಂದಿನ ಯುವತಿಯರಿಗೆ ಆದರ್ಶಪ್ರಾಯವಾಗಿದೆ.
ಎಷ್ಟೆಲ್ಲ ಧರ್ಮ ಆಚ ರಿಸಿದರೂ ಸಣ್ಣ ದೋಷ ಮಾಡಿದರೂ ಕಷ್ಟ ಅನುಭವಿಸಬೇಕಾಗುತ್ತದೆ.  ಯಾವ ಸಮಯದಲ್ಲಿ ಕಷ್ಟ ಬರುತ್ತದೆಯೋ ಗೊತ್ತಾಗಲ್ಲ. ಕಷ್ಟ ಎದುರಿಸುವ ಶಕ್ತಿ ಹೊಂದಬೇಕು ಎಂದು ಮಹಾ ಭಾರತ ಸಂದೇಶ ನೀಡಿದೆ.
 ಕೇಳಿದಷ್ಟು ಹಣ, ಬಯಸಿದ ವಾಹನ ಎಲ್ಲವೂ ಕೊಡಿಸಿದರೂ ಸಣ್ಣ ವಸ್ತು ಕೊಡಿಸಿಲ್ಲ ಎಂದು ಗಂಡನ ಮನೆ ತೊರೆಯುವ ಇಂದಿನ ಮಹಿಳೆಯರಿಗೆ ದಮಯಂತಿ  ಆದರ್ಶವಾಗಿದ್ದಾಳೆ. ಮಹಿಳೆಯರಿಗೆ ಪಾತಿವತ್ರೆಯ ಶಕ್ತಿ ರಕ್ಷಣೆ ನೀಡುತ್ತದೆ ಎಂಬುದನ್ನು ದಮಯಂತಿ ಕಥೆಯಿಂದ ತಿಳಿಯಬಹುದಾಗಿದೆ.


- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)

ಧರ್ಮಕ್ಕಿದೆ ಕಲಿ ನಿಗ್ರಹಿಸುವ ಶಕ್ತಿ , ಮಹಾಭಾರತ ಸಾರ

 ದಮಯಂತಿ ಸ್ವಯಂವರ  ಮುಗಿಸಿಕೊಂಡು ಇಂದ್ರಾದಿ ದೇವತೆಗಳು ಹೊರಟಿರುತ್ತಾರೆ. ಎದುರಿಗೆ ಕಲಿಯು ದ್ವಾಪರನೊಂದಿಗೆ ಭೇಟಿಯಾದ. ಎಲ್ಲಿಗೆ ಹೊರಟಿರುವಿ ಎಂದು ಇಂದ್ರನು ಕೇಳುತ್ತಾನೆ. ನಾನು ಬಯಸಿದ ದಮಯಂತಿಯ ಸ್ವಯಂ ವರ ಇದೆ. ಅಲ್ಲಿಗೆ ಹೊರಟಿರುವೆ ಎಂದು ಕಲಿ ಹೇಳುತ್ತಾನೆ. ಇಂದ್ರನು ನಕ್ಕ. ಸ್ವಯಂವರ ಮುಗಿದು ಹೋಗಿದೆ. ನೀನು ಅಲ್ಲಿಗೆ ಹೋಗಿ ಏನು ಮಾಡುವಿ ಎಂದು ಇಂದ್ರ ಕೇಳಿದ.
ಕಲಿಗೆ ಅಚ್ಚರಿ ಆಯಿತು. ನಾನು ಬಯಸಿದ  ದಮಯಂತಿಯನ್ನು ಪಡೆಯಲೇಬೇಕು. ನಳನಿಗೆ ಕಷ್ಟಕೊಟ್ಟು ನನ್ನ ಬಯಕೆ ಈಡೇರಿಸಿಕೊಳ್ಳುವೆ ಎಂದ ಕಲಿ.


ದ್ವಾಪರ ಸಂಶಯವನ್ನು‌ ಪ್ರಚೋದಿಸುವ ಅಸುರ. ಕಲಿ‌ಯು ಜನರನ್ನು ತಪ್ಪುದಾರಿಗೆ ತರುವ ದುಷ್ಟ. ಇಬ್ಬರು ಸೇರಿ ನಳನಲ್ಲಿ‌ ಪ್ರವೇಶಿಸಲು ಮುಂದಾಗಿದ್ದಾರೆ. ಆಗ ಇಂದ್ರನು ಹೇಳುತ್ತಾನೆ, ಧರ್ಮವಂತನಾದ ನಳನಲ್ಲಿ ಪ್ರವೇಶಿಸುವ ಶಕ್ತಿ ನಿನ್ನಲ್ಲಿಲ್ಲ. ನಳ ಮಹಾರಾಜ ನಿಷ್ಠೆಯಿಂದ  ಧರ್ಮ ಅನುಷ್ಠಾನ ಗೊಳಿಸಿದ್ದಾನೆ. ಸುಮ್ಮನೆ ವಾಪಸ್ ಹೋಗು ಎಂದು ಇಂದ್ರನು ಕಲಿಗೆ ಬುದ್ದಿವಾದ ಹೇಳಿದ.
ದುಷ್ಟನಾದ ಕಲಿಗೆ ಬುದ್ದಿಮಾತು ಬೇಕಿರಲಿಲ್ಲ. ಪಕ್ಕದಲ್ಲಿದ್ದ ದ್ವಾಪರನ ಸಹಾಯ ಬೇಡಿದ. ನಾನು ಕರೆದಾಗ ನೀನು ಬರಬೇಕು ಎಂದು ಕಲಿ‌ಯು ದ್ವಾಪರನಿಗೆ ಹೇಳಿದ. ಕಲಿ ಎಷ್ಟೇ ಪ್ರಯತ್ನಿಸಿದರೂ ನಳನಲ್ಲಿ ಪ್ರವೇಶಿಸಲು‌ ಸಾಧ್ಯವಾಗಲಿಲ್ಲ. ಕಲಿಯು ಮಹಾ ಪ್ರಯತ್ನಿಸಿದರೂ ನಳನಯಲ್ಲಿ ದೋಷ ಸಿಗಲಿಲ್ಲ.
ಕಲಿಯನ್ನು ನಿಗ್ರಹಿಸಲು ಧರ್ಮಾಚರಣೆ ಬ್ರಹ್ಮಾಸ್ತ್ರವಾಗಿದೆ ಎಂಬ ದಿವ್ಯ ಸಂದೇಶ ನಳ ಮಹಾರಾಜ ನೀಡಿದ್ದಾನೆ.

ಧರ್ಮಕ್ಕಿದೆ ಕಲಿ ನಿಗ್ರಹಿಸುವ ಶಕ್ತಿ , ಮಹಾಭಾರತ ಸಾರ


ಎಲ್ಲಿ ಧರ್ಮ ಆಚರಿಸುವುದಿಲ್ಲವೋ ಅಲ್ಲಿ ಕಲಿಯವಾಸ. ಇಂದು ನಾವು ಧರ್ಮಾಚರಣೆ ಮರೆತು ಕಲಿಯನ್ನು ಸ್ವಾಗತಿಸುತ್ತಿದ್ದೇವೆ. ಕೇವಲ ಕಲಿಯನ್ನು ಮಾತ್ರವಲ್ಲ ಕಲಿಯ ಜತೆ ದ್ವಾಪರನನ್ನು ಬರಮಾಡಿಕೊಳ್ಳುತ್ತಿದ್ದೇವೆ. ದ್ವಾಪರ ಸಂಶಯ ಹುಟ್ಟಿಸುತ್ತಿದ್ದಾನೆ. ಕಲಿ ತಪ್ಪು ಮಾರ್ಗ ಅನುಸರಿಸಲು ಪ್ರೇರೆಪಿಸುತ್ತಿದ್ದಾನೆ. ಇವರಿಬ್ಬರನ್ನೂ ದೂರ ಇಡಬೇಕಾದರೆ ಧರ್ಮ ಆಚರಿಸುವುದು ಅಗತ್ಯವಾಗಿದೆ. ನಳನಲ್ಲಿನ ಧರ್ಮ ನಿಷ್ಠೆ ಇಂದು ನಾವೆಲ್ಲರೂ ಅನುಸರಿಸಬೇಕಿದೆ. ಮಹಾ ಶಕ್ತಿವಂತ ಕಲಿಗೆ ದಮಯಂತಿಯ ಸ್ವಯಂವರ ನಡೆದಿದ್ದೇ ಗೊತ್ತಾಗದಂತೆ ಧರ್ಮ ಮಾಡಿತು. ಅಂದರೆ ಧರ್ಮದಲ್ಲಿ ಎಂಥ ಶಕ್ತಿ ಇದೆ ಎಂದು ಯೋಚಿಸಬೇಕು.ನಾವೆಲ್ಲರೂ ಧರ್ಮ ವನ್ನು ಆಚರಿಸುವ ಮೂಲಕ  ಕಲಿಗೆ ನಮ್ಮ ಜೀವನದಲ್ಲಿ ಪ್ರವೇಶ ನೀಡದಂತೆ ನೋಡಿಕೊಳ್ಳಬೇಕು.

 - ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ ( 9886465925 )

Terms | Privacy | 2024 🇮🇳
–>