-->

ನೃಗರಾಜ ಚರಿತೆ , ಮಹಾಭಾರತಸಾರ S.Kulkarni


ವೇದಾಂತ ನಿಷ್ಠನಾದ, ಶಾಸ್ತ್ರಪಾರಂಗತನಾದ, ಅಧ್ಯಾತ್ಮಿಕ ಜ್ಞಾನ ದಿಂದ  ತೃಪ್ತನಾಗಿರುವ  ಇಂದ್ರಿಯಗಳನ್ನು ನಿಗ್ರಹಿಸುವ, ಪ್ರಯತ್ನ ಶೀಲನಾದ, ಮನೋನಿಗ್ರಹಿಯಾದ , ಎಲ್ಲರೊಡನೆಯು ಪ್ರಿಯವಾದ ಮಾತುಗಳನ್ನಾಡಿವ, ಹಸಿವಿನ ಭಯದಿಂದಲಾದರೂ ದುಷ್ಕಾರ್ಯ ಮಾಡದಿರುವ, ಪತ್ನಿ, ಪುತ್ರಯುಕ್ತನಾಗಿರುವ ಬ್ರಾಹ್ಮಣನಿಗೆ  ಸಂಸಾರ ನಿರ್ವಹಣೆಗಾಗಿ ರಾಜನು ವೃತ್ತಿಯನ್ನು ಕಲ್ಪಿಸಿಕೊಡಬೇಕು.


ಸತ್ಪಾತ್ರನಾದ ಬ್ರಾಹ್ಮಣನಿಗೆ  ಗೋದಾನ ಮಾಡಿವುದರಿಂದ  ಎಷ್ಟು ಪುಣ್ಯ ಪ್ರಾಪ್ತವಾಗುತ್ತದೆಯೋ  ಅಷ್ಟೇ ಪಾಪವನ್ನ ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವುದರಿಂದ ಪ್ರಾಪ್ತವಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಬ್ರಾಹ್ಮಣರ ಸ್ವತ್ತನ್ನು  ಅಪಹರಿಸಬಾರದು. ಬ್ರಾಹ್ಮಣನ ಸ್ವತ್ತು ಅಪಹರಿಸಿದ್ದರಿಂದ  ನೃಗರಾಜನಿಗೆ ಒದಗಿದ ಮಹಾಸಂಕಟದ ಬಗ್ಗೆ ಭೀಷ್ಮಾಚಾರ್ಯತು ಧರ್ಮ ರಾಜನಿಗೆ ಹೇಳುತ್ತಾರೆ.


ಒಂದು ದಿನ ಶ್ರೀ ಕೃಷ್ಣನು ಸುಧರ್ಮ ಸಭೆಯಲ್ಲಿ ಆಸೀನನಾಗಿದ್ದಾಗ ಇಂದ್ರಪ್ರಸ್ಥ ದಿಂದ ಬ್ರಾಹ್ಮಣನೊಬ್ಬನು ಬಂದನು. ಧರ್ಮ ರಾಜನು ಕಪಟ ಜೂಜಾಟದಲ್ಲಿ  ಸರ್ವಸ್ವವನ್ನು ಸೋತು ಪರಿವಾರ ಸಮೇತ ವನಕ್ಕೆ  ಹೋದನೆಂಬ ವಾರ್ತೆಯನ್ನು ತಿಳಿಸಿದನು.
ಇದನ್ನು ಕೇಳಿದ ಕೃಷ್ಣನು  ಸತ್ಯಭಾಮೆ ಸಹಿತ ರಥವನ್ನೇರಿ ದ್ವೈತ ವನ್ನು ತಲುಪಿದನು.
ಖಿನ್ನರಾಗಿ ಕುಳಿತಿದ್ದ ಪಾಂಡವರಿಗೆ ಸಮಾಧಾನ ಹೇಳಿ ಒಂದು‌ದಿನ‌ ಅಲ್ಲಿಯೇ ಇದ್ದು ದ್ವಾರಕಾಕ್ಕೆ ಮರಳಿದನು.


ಒಮ್ಮೆ ಯಾದವ ಕುಮಾರರು ವಿಹರಿಸಬೇಕೆಂದು ಉಪವನಕ್ಕೆ ತೆರಳಿ ಅಲ್ಲಿ  ಬಹಳ ಹೊತ್ತು  ಕ್ರೀಡಿಸಿದರು. ನೀರಡಿಕೆ ಆಯಿತು. ನೀರು ಕುಡಿಯಬೇಕೆಂದು ಬಾವಿಗೆ ತೆರಳಿದರು. ಅಲ್ಲಿ  ನೀರು ಇರಲಿಲ್ಲ.ಆದರೆ ಪರ್ವತಾಕಾರದ ಒಂದು ಕೃಕಲಾಸ (ಓತಿಕೇತ) ಅಲ್ಲಿ ಬಿದ್ದಿತ್ತು. ಅದನ್ನು ನೋಡಿ‌ ಎಲ್ಲರೂ ಆಶ್ಚರ್ಯ ಪಟ್ಟು, ದಯೆ ಹುಟ್ಟಿ ಹಗ್ಗ ಕಟ್ಟಿ ಅದನ್ನು ಹೊರಗೆಳೆಯಲು ಪ್ರಯತ್ನಿಸಹತ್ತಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. ಅದೇ ಕಾಲಕ್ಕೆ  ದ್ವೈತ ವನದಿಂದ‌ ಬರುತ್ತಿದ್ದ  ಕೃಷ್ಣನಿಗೆ ಈ ಸಂಗತಿಯನ್ನು  ಹೇಳಲು,ಅವನು ಅಲ್ಲಿಗೆ ಬಂದು ಲೀಲಾ ಜಾಲವಾಗಿ ಎಡಗೈಯಿಂದ ಎತ್ತಿ ಅದನ್ನು  ಹೊರಗೆ ಎಸೆದನು.


ಕೃಷ್ಣನ ಕರ ಸ್ಪರ್ಶದಿಂದ ಆ ಓತಿಕೇತವು ಮುಕ್ತವಾಗಿ  ದೇವತೆಯಂತೆ ರೂಪ ಧರಿಸಿತು. ಎಲ್ಲರಿಗೂ ಗೊತ್ತಾಗಲಿ ಎಂದು ಕೃಷ್ಣನು ಕೇಳಿದನು ನೀನಾರು? ಯಾವ ಕರ್ಮದಿಂದ ನಿನಗೆ ಈ ನೀಚ ಯೋನಿಯು‌ ಪ್ರಾಪ್ತವಾಯಿತು. ಆ ದಿವ್ಯ ಪುರುಷನು ಹೇಳುತ್ತಾನೆ, ದಾನಿಗಳಲ್ಲಿ ಪ್ರಸಿದ್ಧನಾದ ನೃಗರಾಜನು ನಾನು. ನನ್ನ ಕಥೆ ಹೇಳುವೆ ಕೇಳು ಎನ್ನುತ್ತಾನೆ. ಭೂಮಿಯಲ್ಲಿರುವ ಉಸುಕಿನ ಕಣಗಳೆಷ್ಟೊ, ಆಕಾಶದಲ್ಲಿ ನಕ್ಷತ್ರಗಳೆಷ್ಟೊ, ಭೂಮಿಯ ಮೇಲೆ ಬೀಳುವ ಮಳೆ ಹನಿಗಳೆಷ್ಟೊ  ಅಷ್ಟು ಆಕಳುಗಳನ್ನು ದಾನ ಮಾಡಿದೆ.


ಅವೆಲ್ಲವೂ ಆಚಾರ ಸಂಪನ್ನರಿಗೆ, ಬಡ ಕುಟುಂಬಗಳಿಗೆ, ವಿಪ್ರರಿಗೆ ದಾನ ಮಾಡಿದ್ದೇನೆ.
ಆದರೆ ದುರ್ದೈವದಿಂದ  ಒಂದು ದಿನ ದಾನ ಕೊಟ್ಟ ಆಕಳು ಅವನಿಂದ ತಪ್ಪಿಸಿಕೊಂಡು  ನನ್ನ ಆಕಳ ಹಿಂಡಿನಲ್ಲಿ ಬಂದು ಸೇರಿತು.  ಅದು ನನಗೆ ಗೊತ್ತಾಗದೇ ಆ ಗೋವು ನನ್ನದೇ ಎಂದು ತಿಳಿದು ಮತ್ತೊಬ್ಬನಿಗೆ ಅದೇ ಆಕಳು ದಾನ ಕೊಟ್ಟೆ. ಅದನ್ನು ತೆಗೆದುಕೊಂಡು ಹೋಗುವಾಗ    ಮೊದಲು ದಾನ‌ಪಡೆದ ವ್ಯಕ್ತಿ ಆಕಳನ್ನು ಹುಡಕುತ್ತ ಬಂದ. ಇದು ನನ್ನ ಆಕಳು‌ ಎಂದು ಹೇಳಿದ. ಇಲ್ಲ ಈಗ ತಾನೆ‌ ನೃಗರಾಜ ನನಗೆ ಈ ಆಕಳು ದಾನಕೊಟ್ಟಿದ್ದಾನೆ ಎಂದ ಇನ್ನೊಬ್ಬ ವ್ಯಕ್ತಿ. ಇಬ್ಬರ ನಡುವೆ ವಾದ ವಿವಾದ ನಡೆಯಿತು.


ಆಗ ನಾನು ಹೇಳಿದೆ ಇಬ್ಬರಿಗೂ ಒಂದೊಂದು ಲಕ್ಷ ಆಕಳುಗಳನ್ನು ಕೊಡುವೆ ಎಂದರೂ ಒಪ್ಪದೇ ಅವರಿಬ್ಬರು ಆ ಗೋವನ್ನು ಅಲ್ಲಿಯೇ ಬಿಟ್ಟು ಹೋದರು.
ಮುಂದೆ ದೈವ ವಶಾತ್ ನನಗೆ ಮರಣ ಬಂದಿತು. ನಾನು ಯಮಲೋಕಕ್ಕೆ ಹೋದೆ. ಅಲ್ಲಿ ಯಮಧರ್ಮನು ನನಗೆ ಕೇಳಿದ. ನಿನ್ನ ದಾನ ಮತ್ತು ಧರ್ಮಕ್ಕೆ ಕೊನೆಯೇ ಇಲ್ಲ. ಪಾಪವು ಸ್ವಲ್ಪವೇ ಇರುತ್ತದೆ. ನೀನು ಮೊದಲು ಯಾವುದನ್ನು ಅನುಭವಿಸುವಿ  ಎಂದು ಕೇಳಿದಾಗ ನಾನು ಹೇಳಿದೆ, ಮೊದಲು ಪಾಪವನ್ನು‌ಅನುಭವಿಸುವೆ ಎಂದು ಹೇಳಿದ ತಕ್ಷಣವೇ ನಾನು ಓತಿಕೇತವಾಗಿ ಬಿದ್ದು ಬಿಟ್ಟೆ. ನಿನ್ನ ಕೃಪೆಯಿಂದ ಪಾಪ ನಷ್ಟವಾಯಿತು ಎಂದು ಹೇಳಿ ಕೃಷ್ಣನಿಗೆ ಸ್ತುತಿಸಿ ವಿಮಾನ ಹತ್ತಿ ಭಗವದ್ಧಾಮಕ್ಕೆ ತೆರಳಿದನು ಎಂದು ಭೀಷ್ಮರು ಹೇಳಿದರು.

ನೃಗರಾಜ ಚರಿತೆ , ಮಹಾಭಾರತಸಾರ S.Kulkarni


- ಶಾಮಸುಂದರ ಕುಲಕರ್ಣಿ, ಕಲಬುರ್ಗಿ (9886465925)

–>