-->

ದೇಹಬುದ್ದಿಯ ವಿಸ್ಮರಣೆಗಾಗಿಯೆ ನಾಮ

ನಮಗೆ ನಮ್ಮ ಜ್ಞಾನವನ್ನು ಮಾಡಿಕೊಳ್ಳಲು ನಾಮಸ್ಮರಣೆಯೊಂದೇ ಉಪಾಯವಾಗಿರುತ್ತದೆ . ಭಗವಂತನ ಅಂಶವು ಪ್ರಾಣಿಮಾತ್ರಗಳಲ್ಲಿರುತ್ತದೇನೋ  ನಿಜ , ಆದರೆ ಇದನ್ನು ತಿಳಿದುಕೊಳ್ಳುವ ಬುದ್ದಿಮಾತ್ರ ಮನುಷ್ಯಪ್ರಾಣಿಯಲ್ಲಿಯೇ ಇರುತ್ತದೆ . ಆದರೆ ಆ ಮನುಷ್ಯನ ಅಧೋಗತಿ ಹೇಗೆ ಆಗಿರುತ್ತದೆಂಬುದನ್ನು ನೋಡಿರಿ . ಜೀವವು ಮೂಲದಲ್ಲಿ ಪರಮೇಶ್ವರನ ಸ್ವರೂಪವೇ ಆಗಿರುವದರಿಂದ ಮೊದಲು ಅವನು 'ನಾನು ಅವನು' "ಅಂದರೆ  ಪರಮೇಶ್ವರನೇ ಇರುತ್ತೇನೆ" ಅನ್ನುತ್ತಾನೆ . ಇಲ್ಲಿಂದ ಕೆಳಗೆ ಜಾರುತ್ತ ಎರಡನೇ ಅವಸ್ಥೆಯಲ್ಲಿ ' ನಾನು ಅವನವನಿರುತ್ತೇನೆ ' ಅನ್ನುತ್ತಾನೆ ಹಾಗೂ ಕೊನೆಗೆ  "ನನ್ನ ಅವನ ಸಂಬಂಧವೇ ಇಲ್ಲ" ಅನ್ನುತ್ತಾನೆ . ಇಷ್ಟರಮಟ್ಟಿಗೆ ಅವನು ಕೆಳಗೆ ಬರುತ್ತಾನೆ . ಇದಕ್ಕೆ ಕಾರಣವೇನೆಂದರೆ ದೇಹಬುದ್ದಿಯ ಪ್ರಭಾವವು ಬೆಳೆಯುತ್ತ , ಬೆಳೆಯುತ್ತ , ಕೊನೆಗೆ' ದೇಹವೇ ನಾನು ' ಎಂಬ ದೃಢವಾದ ಭಾವನೆಯಾಗುತ್ತದೆ . ಆದರೆ ಇಂಥ ಅವಸ್ಥೆಯಲ್ಲಿಯೂ ಮನುಷ್ಯನು ತನಗರಿಯದಂತೆ ಸಹಜವಾಗಿ ವಸ್ತುಸ್ಥಿತಿಯನ್ನು ಅರಿತುಕೊಂಡವನಂತೆಯೆ ಮಾತನಾಡುತ್ತಾನೆ . ಹೇಗೆಂದರೆ ಒಬ್ಬ ಮನುಷ್ಯನ ಮಿತ್ರನು ತೀರಿಕೊಂಡನು   ಕೂಡಲೇ ಅವನು , “ ನನ್ನ ಮಿತ್ರನು ಸತ್ತನು ಅನ್ನುತ್ತಾನೆ" . ತಾತ್ಪರ್ಯವೇನೆಂದರೆ , ತನ್ನ ಮುಂದಿರುವ ದೇಹವನ್ನು ಅವನು ತನ್ನ ಮಿತ್ರನೆಂದು ತಿಳಿಯಡದೆ , ಅದರಲ್ಲಿರುವ ಚೈತನ್ಯವನ್ನು , ಈಶ್ವರೀ ಅಂಶವನ್ನೇ ನಿಜವಾದ ಅರ್ಥದಲ್ಲಿ ತನ್ನ ಮಿತ್ರನೆಂದು ತಿಳಿಯುತ್ತಾನೆ . ಅಂದರೆ ಅವನಿಗೆ ಅರಿಯದಂತೆ ಅವನ ಬಾಯಿಂದ ಸತ್ಯವೇ ಹೊರಬರುತ್ತದೆ . ಹೀಗಿದ್ದರೂ ತನ್ನ ಸ್ವಂತದ ವಿಷಯದಲ್ಲಿ ಮಾತ್ರ ಅವನು ಈ ಅರಿವನ್ನು ಸ್ಥಿರವಾಗಿಟ್ಟುಕೊಳ್ಳುವದಿಲ್ಲ ಹಾಗೂ ತಾನು ದೇಹವೇ ಎಂದು ತಿಳಿದು ವ್ಯವಹರಿಸುತ್ತಾನೆ . ಇದಕ್ಕೆ ಕಾರಣವೇನಂದರೆ , ಯಾವುದು ನಿಜವಾದ  " ನಾನು " ಆಗಿರುತ್ತದೆಯೋ ಅದು ಮರತು ದೇಹಬುದ್ದಿಯೆ ದೃಢವಾಗಿಬಿಟ್ಟಿರುತ್ತದೆ . ಈಗ ಅದಕ್ಕೆ ಉಪಾಯವೆಂದರೆ , ಯಾವ ಮಾರ್ಗದಿಂದ ನಾವು ಕೆಳಗೆ ಜಾರುತ್ತ ಬಂದಿರುವೇವೋ ಅದೇ ಮಾರ್ಗದಿಂದ ಮೇಲೆ ಹೋಗಬೇಕು . ಇದಕ್ಕಾಗಿ ಮೊದಲನೇ ಉಪಾಯವೆಂದರೆ , ನಾನು ಈಗ ಯಾವ ಈ ದೇಹವೇ ಆಗಿರುತ್ತೇನೆಯೋ ಅಥವಾ ( ದೇಹದವನೇ ಆಗಿರುತ್ತೇನಯೋ ) ಅಂಥನಾನು ಭಗವಂತನವನಾಗಬೇಕು . ಅಂದರೆ ಭಗವಂತನವನು ಇರುತ್ತೇನೆಂಬ ಅರಿವನ್ನು ಚಾಗ್ರತವಾಗಿಟ್ಟುಕೊಳ್ಳಬೇಕು ಹಾಗೂ ಈ ಅರಿವಿನ ಪರಮಾವಸ್ಥೆ ಯೆಂದರೆ ನಾನು ಅವನೇ ಇರುತ್ತೇನೆಂಬ ಭಾವನೆಯಾಗುವದು . ಇದನ್ನು ಹೇಗೆ ಸಾಧಿಸಬೇಕೆಂದರೆ , ಯಾರ ವಿಸ್ಮರಣೆಯಿಂದ ನನಗೆ ಇಂಥ ಅಧೋಗತಿ ಬಂದಿರುತ್ತದೆಯೋ ಅವನ ಸ್ಮರಣೆ ಮಾಡುವದು ಸ್ಮರಣೆಗೆ ಶ್ರೇಷ್ಟಸಾಧನೆಯೆಂದರೆ ಭಗವಂತನ ನಾಮ . ಅಂದರೆ ನಾಮಸ್ಮರಣೆಯ ಧ್ಯಾನಹತ್ತುವದರಿಂದ ನಾನು ನಿಜವಾಗಿ ಏನು ಇರುತ್ತೇನೆಂಬುದು ತಿಳಿಯುತ್ತದೆ ಹಾಗೂ ಸ್ವತದ ಜ್ಞಾನವಾಗುತ್ತದೆ . ನಿಜವಾದ ಪರಮಾರ್ಥವು ಹಿಗೆ ಅತ್ಯಂತ ಸರಳವಾಗಿರುತ್ತದೆ . ಆದರೆ ಇದನ್ನು ಸರಿಯಾದ ಮಾರ್ಗದಿಂದ ಮಾಡಬೇಕು . ಒಂದು ತೊಡಕನ್ನು ಬಿಡಿಸುವದಕ್ಕಾಗಿ ಯಾವ ದಾರವನ್ನು ಎಳೆಯಬೇಕೆಂಬುದು ತಿಳಿಯಬೇಕು , ಇಲ್ಲದಿದ್ದರೆ ಅದು ಹೆಚ್ಚಿಗೆ ತೊಡಕಾಗುತ್ತಲೇ ಹೋಗುತ್ತದೆ . ಪರಮಾರ್ಥದ ವಿಷಯದಲ್ಲಿಯೂ ಹೀಗೆಯೇ ಇರುತ್ತದೆ .


 
     *''ನಾನು ಯಾರು " ಎಂಬುದನ್ನು ತಿಳಿಯಬೇಕು . ಅಂದರೆ ಭಗವಂತನು ಯಾರೆಂಬುದು ತಾನಾಗಿಯೇ ತಿಳಿಯುತ್ತದೆ . ಇಬ್ಬರ ಸ್ವರೂಪವು ಒಂದೇ ಇರುತ್ತದೆ . ಅಂದರೆ ಇಬ್ಬರೂ ಒಂದೇ ಆಗಿರುತ್ತಾರೆ . ಪರಮಾತ್ಮನು ನಿರ್ಗುಣನಾಗಿರುತ್ತಾನೆ . ಆದ್ದರಿಂದ ಅವನನ್ನು ತಿಳಿದುಕೊಳ್ಳಲು ನಮಗೂ ನಿರ್ಗುಣ ಅಂದರೆ ದೇಹಾತೀತವಾಗಬೇಡವೆ ? ಆದ್ದರಿಂದ ದೇಹಬುದ್ದಿ ಬಿಡಬೇಕು . ಯಾವುದೇ ವಿಷಯವನ್ನು* *ತಿಳಿದುಕೊಳ್ಳಲು ನಾವು ಆ ವಿಷಯ ಸ್ವರೂಪರೇ ಆಗಬೇಕಾಗುತ್ತದೆ . ಅದರ ಹೊರತಾಗಿ ತಿಳಿದುಕೂಳ್ಳುಲು ಬರುವದಿಲ್ಲ . ಆದ್ದರಿಂದ ಪರಮಾತ್ಮನನ್ನು ತಿಳಿದುಕೊಳ್ಳಲು ನಾವು ಪರಮಾತ್ಮಸ್ಮರೂಪರೇ ಆಗಬೇಕಾಗುತ್ತದೆ . ಇದನ್ನೇ  "ಸಾಧು ಆಗಿ ಸಾಧುವನ್ನು ತಿಳಿದುಕೊಳ್ಳಿರಿ ''*
*" ಶಿವೋಭೂತ್ವಾ ಶಿವಂ ಯಜೇತ್ " ಅನ್ನುತ್ತಾರೆ,*

–>