-->

ಸಮಸ್ಯೆ , ದಾರಿ ಕಾಣದಾಗಿದೆ ರಾಘವೇಂದ್ರನೇ ?

ನೀವೆಷ್ಟೇ ಓದಿದವರಾಗಿರಬಹುದು, ಅಸಾಧಾರಣ ಬುದ್ದಿವಂತರಾಗಿರಬಹುದು, ಸಿಕ್ಕಾಪಟ್ಟೆ ಹಣವಂತರಾಗಿರಬಹುದು, ಉನ್ನತ ಅಧಿಕಾರದಲ್ಲಿರಬಹುದು ಇಲ್ಲವೇ ಪ್ರಕಾಂಡ ಪಂಡಿತರೇ ಆಗಿದ್ದಿರಬಹುದು.  ಕೆಲವೊಂದು ಸಂಧರ್ಭಗಳಲ್ಲಿ  ಸೂಕ್ತವಾದ, ಸಂಧರ್ಭಕ್ಕೆ ತಕ್ಕ ನಿರ್ಧಾರವನ್ನು ತೆಗೆದುಕೊಳ್ಳಲು ಸಿಕ್ಕಾಪಟ್ಟೆ ಪರದಾಡುತ್ತೇವೆ ಅಥವಾ ನೀವು ಸರಿ ಎಂದು ತೆಗೆದುಕೊಂಡ ನಿರ್ಧಾರ ನಂತರ ತಪ್ಪು ಎಂದು ಅನಿಸುವುದಕ್ಕೆ ಹೆಚ್ಚು ಕಾಲವೇನೂ ಬೇಕಾಗಲಾರದಲ್ಲವೇ....?

 ಅಸಲಿಗೆ  ನಿಮ್ಮ ಜಾಣತನಕ್ಕೆ ಹೋಲಿಸಿದರೆ  ಅಂತಹಾ ಒಂದು ಸಂಧರ್ಭ ತುಂಬಾ ಕಾಂಪ್ಲಿಕೇಟೇಡ್ ಆಗೇನೂ ಇರೋಲ್ಲ ಅಥವಾ  ನಿಮ್ಮೆಲ್ಲಾ ಅನುಭವದ ಮುಂದೆ  ಅದು ತುಂಬಾ ಸರಳ ಹಾಗೂ ಸಕತ್  ಸಿಲ್ಲಿಯಾದ ಸನ್ನಿವೇಶವೇ ಇರುತ್ತದೆ. ಆದರೂ ಆ ತರಹದ ಸಂಧರ್ಭಗಳು ಎಷ್ಟೆಲ್ಲಾ  ಕಿರಿಕ್ ಕೊಟ್ಟು ನಿಮ್ಮ ಜ಼ಿಂದಗಿಯಲ್ಲಿ ಜರ್ಕ್ ಹೊಡೆಸುತ್ತವೆಂದರೆ ನಿಮ್ಮ ಅಂದಿನ ಆ ನಿರ್ಧಾರ ಅಥವಾ ಆ ಸಂಧರ್ಭಕ್ಕೆ ನಿಮ್ಮ ವರ್ತನೆ - ಸ್ಪಂದನೆಯೆನ್ನುವುದು  ಅಕ್ಷರ ಜ್ಞಾನ ವಿಲ್ಲದವನಿಂದಲೂ ಸಹಾ  ನಿರೀಕ್ಷಿಸಲಾರದು ಎನ್ನುವಷ್ಟರ ಮಟ್ಟಿಗೆ  ಎನಿಸಿ ಕಾಲಾಂತರದಲ್ಲಿ ನಿಮ್ಮ‌ ಬಗ್ಗೆ ನಿಮಗೇ ಜುಗುಪ್ಸೆ ಹುಟ್ಟಿಸಿ ಮನದೊಳಗೆ  ಚಿಟ್ಟೆಯೊಂದು ಅಲ್ಲಲ್ಲಿ ಲಾಸ್ಯವಾಡಿದಂತಾಗಿ ಗೊಂದಲದ ಗೂಡಾಗಿ ಬಿಡುತ್ತದೆ.

ಆ ಒಂದು ಸಂಧರ್ಭವೆನ್ನುವುದು ಹಣಕಾಸಿನ ವ್ಯವಹಾರ, ಕೌಟುಂಬಿಕ ವಿಚಾರ, ವೈಯಕ್ತಿಕ ತೊಂದರೆ, ಸ್ನೇಹ ,ಪ್ರೀತಿ, ಪ್ರೇಮ ,ನಂಬಿಕೆ, ಮಕ್ಕಳ ವಿಧ್ಯಾಭ್ಯಾಸ, ಮದುವೆ, ಉದ್ಯೋಗ, ಪ್ರಯಾಣ ಪ್ರವಾಸ...ಇತ್ಯಾದಿ ಯಾವುದೇ ವಿಚಾರಕ್ಕೆ ಸಂಬಂಧಿಸಿದ್ದಾಗಿರಬಹುದು. ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯದಲ್ಲಿ  ನಿಮ್ಮ  ತಲೆಯೊಳಗೆ ಎಲ್ಲವೂ ಖಾಲಿ ಖಾಲಿ ಎನಿಸಿ ವಿವೇಚನೆಯೆನ್ನುವುದು ಸೈಲೆಂಟಾಗಿ ಸೈಡಿಗೆ ಮಲಗಿ ಮೈಂಡ್ ಬ್ಲಾಂಕ್ ಆಗಿಬಿಡುತ್ತೆ. ಮನದಲ್ಲಿ  ವಿಚಿತ್ರವಾದ ಚಡಪಡಿಕೆಯುಂಟಾಗಿ ಮನಸ್ಸು ವಿಲವಿಲನೇ ಒದ್ದಾಡಿಬಿಡುತ್ತದೆ.  ಎದೆಯೊಳಗಿನ ವೇದನೆಯನ್ನು ಯಾರಲ್ಲಿ ಹಂಚಿಕೊಳ್ಳುವುದೆಂಬ ಆತಂಕದಿಂದ ಕ್ಷಣಕ್ಷಣವೂ ಯೋಚನೆಗಳ ದಿಕ್ಕು ದೆಸೆ ಅತಂತ್ರವಾಗಿಬಿಡುತ್ತದೆ.  ಆಗ ನಿಮ್ಮ ಸಹಾಯಕ್ಕೆ ನಿಮ್ಮ ಬೆನ್ನ ಹಿಂದಿನ ಯಾವ ಡಿಗ್ರಿಗಳೂ,  ಪದವಿಗಳೂ, ಕೀರ್ತಿ ಪತಾಕೆಗಳೂ ಬಿರುದು ಬಾವಲಿಗಳೂ ಪ್ರಯೋಜನಕ್ಕೆ ಬರುವುದಿಲ್ಲ.  ಎಲ್ಲವೂ ಕೆಲಕಾಲ ಶೂನ್ಯವೆನಿಸಿ  ದಾರಿ ಕಾಣದಾಗಿದೆ ಎನ್ನುವಂತಾಗಿಬಿಡುತ್ತದೆ.

ಸಮಸ್ಯೆ , ದಾರಿ ಕಾಣದಾಗಿದೆ ರಾಘವೇಂದ್ರನೇ ?ಇಂತಹಾ ಒಂದು ದಿಕ್ಕೆಟ್ಟ ಅಥವಾ ಗೊಂದಲದ ಪರಿಸ್ಥಿತಿ ನಿಮ್ಮನ್ನು ಕಾಡಿದ್ದುಂಟಾ..??

ಬಹುಶಃ   ಹತ್ತರಲ್ಲಿ ಎಂಟು ಮಂದಿಗಾದರೂ ಈ ಅನುಭವ  ಅವರ ಜೀವನದಲ್ಲಿ ಒಮ್ಮೆಯಾದರೂ ಘಟಿಸಿದ್ದಿರಬಹುದು. ಬದುಕಿನಲ್ಲಿ ಧುತ್ತನೇ ಎದುರಾಗುವ ಇಂತಹಾ ಆಕಸ್ಮಿಕ ಪರಿಸ್ಥಿತಿಯ ಗೋಜಲು ಪ್ರಶ್ನೆಗಳು  ಪದವಿ ಪ್ರಶ್ನೆಪತ್ರಿಕೆಗಳಂತೆ   ಸಿಲಬಸ್ ಆಧಾರಿತವಾಗಿ, ಅದರ ಪ್ರಕಾರವೇ ನಮ್ಮೆದುರು ಬರುವುದಿಲ್ಲ.  ಅದಕ್ಕಾಗಿ ನಿಮಗೆ ಯಾವ ಕೋಚಿಂಗು, ಟ್ರೈನಿಂಗು ಅಂತ  ಇರಲು ಸಾಧ್ಯವಿಲ್ಲ, ನೀವು ಮಾಡಿರಲೂ ಆಗಿರೋಲ್ಲ.  ಯಾವ ಸಂಧರ್ಭಕ್ಕೆ ಎಂತಹಾ ನಿರ್ಧಾರ ತೆಗೆದುಕೊಳ್ಳಬೇಕೆಂಬ ಬಗೆಗೆ ನಿಮ್ಮದೇ ಆದ, ನಿಮ್ಮ ಯೋಚನೆಗಳಿಂದ ರೂಪಿತವಾದ ಒಂದು ಲೆವೆಲ್ಲಿನ ಐಡಿಯಾಗಳಿದ್ದರೂ ಅವು ಆ ಸಮಯಕ್ಕೆ   ಸರಿ‌ಹೊಂದಬಹುದು,  ಹೊಂದದೆಯೂ ಇರಬಹುದು . ಹೀಗಾಗಿಯೇ  ಎಷ್ಟೇ ಜಾಣರಿದ್ದರೂ ಬದುಕಿನ  ಮಹತ್ವದ ಹಂತದಲ್ಲಿ ತಮ್ಮ ಕೆಲವು ನಿರ್ಧಾರಗಳಿಗಾಗಿ ಸಾಕಷ್ಟು ಪಶ್ಚಾತ್ತಾಪ ಪಟ್ಟಿರುವವರನ್ನು  ಇಂದಿಗೂ ಕಾಣುತ್ತೇವೆ. ಅದರಲ್ಲಿ ನಾನೂ ಇರಬಹುದು ,  ನಿಮ್ಮಲ್ಲೂ ಒಬ್ಬರಿರಬಹುದು ..!  ಲೈಫ಼ು  ಅಂದ್ರೇನೇ ಹಾಗೆ.

ಹಾಗಾದರೆ  ಅಂತಹಾ ಕಠಿಣ  ಸನ್ನಿವೇಶಗಳಿಗೆ ನಮ್ಮ ಸ್ಪಂದನೆ-  ಪ್ರತಿಕ್ರಿಯೆ ಹೇಗಿರಬೇಕು ?

ಈ‌ ಬದುಕಿನ ಯಾವುದೇ ಘಟನೆ‌ ಇರಬಹುದು ಅದಕ್ಕೆ ನಾವು ಎಷ್ಟು ಮಹತ್ವ ಕೊಡುತ್ತೇವೆ, ನಾವು ಹೇಗೆ ಸ್ಪಂದಿಸುತ್ತೇವೆ ಮತ್ತದರ ರಿಸಲ್ಟನ್ನು ನಾವು ಹೇಗೆ ಸ್ವೀಕರಿಸುತ್ತೇವೆ   ಎನ್ನುವುದರ ಮೇಲೆ ನಮ್ಮ ನಿರ್ಧಾರ ಸರಿಯೋ ತಪ್ಪೋ ಎಂಬುದು ಗೊತ್ತಾಗಿ ಬಿಡುತ್ತೆ.  ಜೀವನವನ್ನು  ತುಂಬಾ ಸರಳವಾಗಿ, ಆದಷ್ಟೂ  ಪಾರದರ್ಶಕವಾಗಿ,  ಪ್ರಾಮಾಣಿಕವಾಗಿ , ನೇರವಾಗಿ ಹಾಗೂ ಪಾಸಿಟಿವ್ ಆಗಿ ಅದು ಬಂದಂತೆಯೇ  ತೆಗೆದುಕೊಂಡು ಇಲ್ಲಿ ಎದುರಾಗುವ ಎಲ್ಲಾ ಸಂಧರ್ಭ ಸನ್ನಿವೇಶಗಳನ್ನೂ ಎದುರಿಸುವ ಮನಸ್ಥಿತಿ ಬೆಳೆಸಿಕೊಳ್ಳುವುದರ ಜೊತೆಗೆ ನಮ್ಮ ನಮ್ಮ ಇತಿ- ಮಿತಿಗಳನ್ನರಿತು ಬೇರೆ ಯಾರೊಂದಿಗೂ ಹೋಲಿಸಿಕೊಳ್ಳದೇ ಮುಂದುವರೆದಲ್ಲಿ,  I think  ಬದುಕಿನ ಸನ್ನಿವೇಶ ಎಂಥಾದ್ದೇ ಆಗಿರಲಿ, ಫಲಿತಾಂಶ ಹೇಗೇ ಇರಲಿ ಅದನ್ನು ಹೇಗಿದೆಯೋ ಹಾಗೆ  ಸ್ವೀಕರಿಸುವ ಗುಣ ಬೈ ಡಿಫ಼ಾಲ್ಟ್ ನಮ್ಮದಾಗಿ  ಸಮಾಧಾನ‌ದ ಚಿತ್ತ ನಮ್ಮತ್ತ ಸದಾ ಇರುತ್ತದೆ.

ಸಮಸ್ಯೆ ನಮ್ಮದಾದಾಗ‌ ನಿರ್ಧಾರವೂ ನಮ್ಮದೇ ಅಲ್ಲವೇ ?  ಅದರಿಂದ ಉಂಟಾಗುವ ಸರಿ ತಪ್ಪುಗಳ ಪೂರ್ಣ ಭಾದ್ಯತೆಯೂ ನಮ್ಮದೇ , ಅನುಭವಿಸುವವರೂ ನಾವೇ. ಹೀಗಾಗಿಯೇ ಯಾವುದೇ ನಿರ್ಧಾರವನ್ನು ಚೆನ್ನಾಗಿ ಯೋಚಿಸಿಯೇ ತೆಗೆದುಕೊಳ್ಳಿ ಎನ್ನುವ ಮಾತು ಆಗಾಗ್ಗೆ ಕೇಳಿಬರುವುದು.

ನೆನಪಿರಲಿ, ನಮ್ಮೆಲ್ಲಾ ನಿರ್ಧಾರಗಳೂ ಸರಿ ಅಥವಾ ಮುಂದೆ ಸರಿಯಾಗಿರುತ್ತವೆ ಎಂಬ ಗ್ಯಾರಂಟೀಯೇನೂ ಇರೋಲ್ಲ. ಒಳ್ಳೆಯದೆಂದುಕೊಂಡದ್ದು ಕೆಟ್ಟದ್ದೂ ಆಗಬಹುದು ಹಾಗೆಯೇ ಅನುಮಾನ ಪಟ್ಟು ತೆಗೆದುಕೊಂಡ ನಿರ್ಧಾರ ಮುಂದೆ ಅನುಕೂಲಕರವೂ ಆಗಬಹುದು. ಆದರೆ ಒಳ್ಳೆಯದಾಗುವುದೆಂಬ  ಆಶಾಭಾವನೆಯಿಂದ ಮಾತ್ರವೇ ನಾವು ಎಲ್ಲವನ್ನೂ  ಡಿಸೈಡ್ ಮಾಡುತ್ತೇವೆ.  ಈ ಹಂತದಲ್ಲಿ " ಇದರ ಫಲಿತಾಂಶ ಏನೇ ಆದರೂ ಅದರ ಸಂಪೂರ್ಣ ಹೊಣೆ ನನ್ನದೇ ಅದನ್ನು ನಾನು‌ ಅನುಭವಿಸಲು ರೆಡಿಯಾಗಿರಬೇಕು " ಎಂಬ   ಧೃಡ ನಿರ್ಧಾರ ಮನದಲ್ಲೇ ಮಾಡಿ ಸನ್ನಿವೇಶಗಳನ್ನು ಎದುರಿಸಲು ಪೂರ್ವಭಾವಿಯಾಗಿಯೇ ಮಾನಸಿಕವಾಗಿ  ಸಿದ್ದರಾದಲ್ಲಿ ಒಂದೊಮ್ಮೆ ಅದರ ಫಲಿತಾಂಶ ಸಕಾರಾತ್ಮಕವಾಗಿಯೇ ಇರಲಿ ಅಥವಾ ನಕಾರಾತ್ಮಕವಾಗಿಯೇ ಇರಲಿ  ಅದರಿಂದ ನಮ್ಮ‌ವ್ಯಕ್ತಿತ್ವದ ಮೇಲೆ ಅಂತಹಾ ಅಡ್ಡ ಪರಿಣಾಮ ಬೀರದು ಹಾಗೂ ಪಶ್ಚಾತ್ತಾಪದ ಸಂಧರ್ಭ ಕಡಿಮೆಯಾಗಬಹುದು.

ಮುಖ್ಯವಾಗಿ... ಜೀವನದ ಅನೇಕ‌ ಘಟ್ಟಗಳಲ್ಲಿ ನಾವು ಅಂದಿನ  ಸಂಧರ್ಭಕ್ಕೆ ಸರಿ ಹೊಂದಬಹುದು ಎಂಬ ಆತ್ಮವಿಶ್ವಾಸದಿಂದಲೇ ನಾವು ನಿರ್ಧಾರಗಳನ್ನು‌ ಮಾಡಿರುತ್ತೇವೆ. ಅಂತಹಾ ನಿರ್ಧಾರ  ಕೆಲ ಕಾಲದ ನಂತರ ತಪ್ಪು ಎನಿಸಿದಲ್ಲಿ ಅದು ನಿಮ್ಮ ತಪ್ಪಲ್ಲ. ಒಂದು ಸಮಸ್ಯೆಯ  ಅಂದಿನ ಹಾಗೂ ಇಂದಿನ ಸಮಯ- ಸಂಧರ್ಭಗಳ ವ್ಯತ್ಯಾಸಗಳ ಸೂಕ್ಷ್ಮ ಮನ್ವಂತರ ನಿಮಗೆ ಮನನವಾದಲ್ಲಿ  ಅಥವಾ ಧೈರ್ಯ ಮತ್ತು ಆತ್ಮವಿಶ್ವಾಸಗಳು ನಿಮ್ಮ ನಿರ್ಧಾರದ ಹಿಂದಿದ್ದಲ್ಲಿ ನಿಮ್ಮ ಯಾವುದೇ ನಿರ್ಧಾರದಿಂದ ನಿಮಗೆ ಮುಂದೆ ನಿರಾಶೆಯಾಗದು.

ಹೀಗಾಗಿ ತೆಗೆದುಕೊಳ್ಳುವ ಪ್ರತೀ ನಿರ್ಧಾರದ ಹಿಂದೆ ಒಂದು ಸದುದ್ದೇಶವಿದ್ದಲ್ಲಿ ಹಾಗೂ ಮುಂದೆ ಅದರ ಪರಿಣಾಮ ಏನೇ ಆದರೂ ಅನುಭವಿಸಲು ಮಾನಸಿಕವಾಗಿ ಸಿದ್ದರಾದಲ್ಲಿ, ಅದರ ಫಲಿತಾಂಶದಿಂದಿಗೆ ಅಡ್ಜಸ್ಟ್ ಆದಲ್ಲಿ .... " ಅಯ್ಯೋ ಅಂದು ನನ್ನ ಬುದ್ದಿಗೆ  ಮಂಕು ಕವಿದಿತ್ತು ..." ಎಂದು ಅವಲತ್ತುಕೊಳ್ಳುವ ಸೀನ್ ಗಳು ಇರಲಾರದು.

** ಮರೆಯುವ ಮುನ್ನ **

ಬದುಕಿನಲ್ಲಿ ಎಲ್ಲರಿಗೂ ಎದುರಾಗುವ  ಸಮಸ್ಯೆ, ಸಂಧರ್ಭ, ಸನ್ನಿವೇಶಗಳು ಹೆಚ್ಚುಕಡಿಮೆ ಒಂದೇ ತೆರನಾಗಿದ್ದರೂ‌‌‌  ಅವುಗಳನ್ನು ಎದುರಿಸುವ ಹಾಗೂ ಸ್ವೀಕರಿಸುವವರ ಮನಸ್ಥಿತಿ , ಭಿನ್ನ ರೀತಿಯಿಂದಾಗಿ ಅವರವರ ಸಂತಸ -ದುಃಖ ನಿರ್ಧಾರವಾಗುತ್ತದೆ. ಹೀಗಾಗಿಯೇ  ನಿಮ್ಮ ಜೀವನದಲ್ಲಿ ಒಳ್ಳೆಯ ನಿರ್ಧಾರ ಅಥವಾ ಆಯ್ಕೆ ಎನ್ನುವುದು ಯಾವುದೂ ಇರೋಲ್ಲ. ಆದರೆ ನಿಮ್ಮ ಆಯ್ಕೆ ಅಥವಾ ನೀವು ತೆಗೆದುಕೊಂಡ  ನಿರ್ಧಾರವನ್ನು‌ ಒಳ್ಳೆಯದನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕಷ್ಟೇ !

ಬದುಕಿನ ಪ್ರಮುಖ ಹಂತದಲ್ಲಿ  ಅಥವಾ ಮುಖ್ಯ ತಿರುವಿನಲ್ಲಿ ಹೆಜ್ಜೆ ಇಡುವಾಗ  ಎಲ್ಲಾ ಕೋನಗಳಿಂದಲೂ ಯೋಚಿಸಿ ನಿರ್ಧಾರಕ್ಕೆ ಬನ್ನಿ.  ಒಮ್ಮೆ ನೀವೇ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿ ಸುಖವೋ ದುಃಖವೋ ಅದನ್ನು ಒಪ್ಪಿ ಅಪ್ಪಿ  ಅದರಂತೆಯೇ ‌ನೆಡೆಯುವುದರಲ್ಲಿ ಕೊಂಚ ನೆಮ್ಮದಿಯ ಸಿಂಚನ ಕಾಣಬಹುದು .

ಏನಂತೀರಾ......??

# ಲಾಸ್ಟ್ ಪಂಚ್ #

ನಿಮ್ಮ ತಾತ್ಕಾಲಿಕ ಭಾವನೆಗಳ ಆಧಾರದ ಮೇಲೆ ಶಾಶ್ವತವಾದ ನಿರ್ಧಾರವನ್ನು ಎಂದಿಗೂ ತೆಗೆದುಕೊಳ್ಳಬೇಡಿ.

- ಹಿರಿಯೂರು ಪ್ರಕಾಶ್

–>