-->

ಜಿಎಸ್ ಶಿವರುದ್ರಪ್ಪ ಅವರ ಸುಂದರ ಕವಿತೆ ಸ್ತ್ರೀ

ಪುರಾಣ ಕಾಲದ 'ಆದಿಶಕ್ತಿ' ದುಷ್ಟಶಿಕ್ಷಕಿಯಾಗಿ, ಶಿಷ್ಟರಕ್ಷಕಿಯಾಗಿ, ಸರ್ವಶಕ್ತಿಯನ್ನು ಮೆರೆದಿರುವುದನ್ನು ಕಾಣಬಹುದಾಗಿದೆ. ಹಿಂದೂ ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತ ಕೃತಿಗಳ ರಚನೆಗೆ ಸ್ತ್ರೀ ಕಾರಣೀಭೂತಳಾಗಿದ್ದಾಳೆ. ಹಲವು ಶಾಸ್ತ್ರಗಳಲ್ಲಿ ಈಕೆಯನ್ನು ಜಗಜನನಿಯೆಂದು ಹೇಳಲಾಗುತ್ತದೆ. ಹಾಗಾಗಿ ಹಿರಿಯರು - "ಕಾರ್ಯೇಷು ದಾಸಿ, ಸಲಹೇಷು ಮಂತ್ರಿ, ಭೋಜೇಷು ಮಾತ, ಶಯನೇಷು ರಂಭಾ ನಾರಿ ಕ್ಷಮಯಾಧರಿತ್ರಿ" ಎಂದಿದ್ದಾರೆ. ಮನು ತನ್ನ ಮನುಸ್ಪೃತಿಯಲ್ಲಿ' ಯತ್ರನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ' ಎಂದಿದ್ದಾನೆ. ವೇದಕಾಲದಲ್ಲಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿತ್ತು. ಸ್ತ್ರೀಯರು ಬ್ರಹ್ಮವಾದಿನಿಯರಾಗಿ ಬ್ರಹ್ಮ ಸಭೆಗಳಲ್ಲಿ ಪುರುಷರ ಸಮಾನವಾಗಿ ವಾದ ಮಾಡಬಲ್ಲವರಾಗಿದ್ದರು ಎಂದು ಹೇಳಿ ಅಪಾಲಾ, ಲೋಪಾಮುದ್ರೆ, ಮೈತ್ರೇಯಿ,ಗಾರ್ಗಿ, ಉಭಯಭಾರತಿ ಇತ್ಯಾದಿ ಬೆರಳಣಿಕೆ ಸ್ತ್ರೀಯರನ್ನು ಉದಾಹರಣೆಯಾಗಿ ನೀಡುತ್ತಾರೆ. ಆದರೆ ಇವರ್ಯಾರು ಸಾಮಾನ್ಯ ಮಹಿಳೆಯರು ಆಗಿರಲಿಲ್ಲ. ಇವರೆಲ್ಲ ಉನ್ನತವರ್ಗದ ಉಚ್ಹ ವರ್ಣದ ಋಷಿ ಪತ್ನಿಯರಾಗಿದ್ದರು ಅಷ್ಟಕ್ಕೂ ಅವರಲ್ಲಿ ಗಾರ್ಗಿ ಮೈತ್ರೆಯರು ತಮಗೇಕೆ ಬ್ರಹ್ಮ ವಿದ್ಯೆ ನೀಡುತ್ತಿಲ್ಲವೆಂದು ಋಷಿ ಪತಿಯೊಂದಿಗೆ ವಾದವೇ ಹೂಡಿದ್ದರು. ವೇದಕಾಲದಲ್ಲಿ ಸಾಮಾನ್ಯ ವರ್ಗ, ವರ್ಣದ ಮಹಿಳೆಯರ ಸ್ಥಿತಿಗತಿ ಏನಾಗಿತ್ತು ಎಂಬುವುದಕ್ಕೆ ಮಾಹಿತಿಗಳು ಇಲ್ಲ. ನಮ್ಮ ಪರಂಪರೆಯಲ್ಲಿಯೂ ಸಹ ಮುಖ್ಯ ದೇವತೆಗಳು 'ಸ್ತ್ರೀ' ದೇವತೆಗಳೇ. ಶಕ್ತಿಗೆ ಅದಿದೇವತೆ 'ಪಾರ್ವತಿ' ಧನಕ್ಕೆ ಅದಿದೇವತೆ 'ಲಕ್ಷ್ಮಿ' ಮತ್ತು ವಿದ್ಯೆಗೆ ಅದಿದೇವತೆ 'ಸರಸ್ವತಿ' . ನಮ್ಮ ದೇಶದಲ್ಲಿ ಹರಿಯುವ ಒಂದೇ ಒಂದು ನದಿಯನ್ನು ಹೊರತು ಎಲ್ಲಾ ನದಿಗಳೂ ' ಸ್ತ್ರೀ' ನದಿಗಳೇ. ಗಂಗಾ, ಕಾವೇರಿ, ಕೃಷ್ಣಾ, ನರ್ಮದಾ, ಅಲಕನಂದಾ, ಗೋದಾವರಿ, ತುಂಗಾ, ಭದ್ರಾ ಹೀಗೆ ಎಲ್ಲಾ ನದಿಗಳೂ 'ಸ್ತ್ರೀ'ಗಳೇ! ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಅಭಿಪ್ರಾಯಕ್ಕೆ ಭಾರತೀಯ ಸಂಸ್ಕೃತಿ ಬದ್ದವಾಗಿದೆ....

ಜಿಎಸ್ ಶಿವರುದ್ರಪ್ಪ ಅವರ ಸುಂದರ ಕವಿತೆ ಸ್ತ್ರೀ
ಜಿಎಸ್ ಶಿವರುದ್ರಪ್ಪ ಅವರ ಸುಂದರ ಕವಿತೆ

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
---
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ

ಅವಳ ಹೆಸರ ಹೇಳಬೇಡ
ಊರನರಸಿ ದಣಿಯಬೇಡ
ಹೆಣ್ಣೇ ಅವಳ ಹೊತ್ತ ಹೆಸರು
ಹೆಣ್ಣೇ ಅವಳ ಹೆತ್ತುಸಿರು

–>