-->

ಸುಬ್ರಹ್ಮಣ್ಯನಿಗೆ ಕಾರ್ತಿಕೇಯ ಎಂಬ ಹೆಸರು ಬಂದ ಕಥೆ

ಎಲ್ಲರಿಗೂ ತಿಳಿದಂತೆ ಶಿವ-ಪಾರ್ವತಿಯರ ಪುತ್ರ ಸುಬ್ರಹ್ಮಣ್ಯ, ಇವನು ದೇವಾನುದೇವತೆಗಳಿಗೆ ಸೈನ್ಯಾಧಿಪತಿ. ಕಾಳಿದಾಸನಂಥ ಮೇಧಾವಿ ತನ್ನ 'ಕುಮಾರಸಂಭವ' ಕಾವ್ಯದಲ್ಲಿ ಸುಬ್ರಹ್ಮಣ್ಯನ ಕುರಿತಾಗಿ ಬರೆದಿದ್ದಾನೆ. ಸುಬ್ರಹ್ಮಣ್ಯನಿಗೆ  ಅನೇಕ ಹೆಸರುಗಳಿವೆ. ಅದರಲ್ಲಿ ಕಾರ್ತಿಕೇಯ ಒಂದು. ಈ ಕಾರ್ತಿಕೇಯ ಜನ್ಮತಾಳಲು  ಕಾರಣವಿದೆ. ಪಾರ್ವತಿ-ಪರಮೇಶ್ವರರ ವಿವಾಹದ ನಂತರ ಸುಮಾರು ಸಾವಿರ ವರ್ಷಗಳ ಕಾಲ ಕೈಲಾಸ ಪರ್ವತದಲ್ಲಿ ಶೃಂಗಾರದಲ್ಲಿ ಮುಳುಗಿ, ಆದಿ ದಂಪತಿಗಳ ಕೈಲಾಸನಿಲಯ ವೆಂದೇ ಲೋಕಕ್ಕೆ ಆದರ್ಶವಾಗಿತ್ತು.

ಆ ಸಂದರ್ಭದಲ್ಲಿ ಅತುಲ ಪರಾಕ್ರಮಿ ರಾಕ್ಷಸ ತಾರಕಾಸುರ, ಇವನು ಕಶ್ಯಪ ಬ್ರಹ್ಮನ ಮೊಮ್ಮಗ,  ವಜ್ರಾಂಗ, ವರಾಂಗ ಎಂಬ ಋಷಿ ದಂಪತಿಗಳ ಮಗನಾಗಿದ್ದು, ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡಿ ಶಿವಪುತ್ರ ನಿಂದ ಮಾತ್ರ ತನ್ನ ಸಾವು ಬರಲಿ ಎಂದು ವರ ಪಡೆದಿದ್ದನು. ಬ್ರಹ್ಮನು ತಥಾಸ್ತು ಎಂದು ವರ ಕೊಟ್ಟ ನಂತರ, ಇವನು ತನ್ನ ಉಪಟಳವನ್ನು ಜಾಸ್ತಿ ಮಾಡಿದ, ಕ್ರಮೇಣ ತಾರಕಾಸುರನು ದೊಡ್ಡ ಲೋಕಕಂಟಕನಾದ. ದೇವಲೋಕದ ಇಂದ್ರ ಹಾಗೂ ದೇವಾನುದೇವತೆಗಳಿಂದಲೂ ಇವನನ್ನು ಸೋಲಿಸಲಾಗಲಿಲ್ಲ. ದೇವತೆಗಳ ಸಹಾಯಕ್ಕೆ ಬಂದ ಮುಚುಕುಂದನು  ಈ ರಾಕ್ಷಸನ ಮುಂದೆ ಸೋತು ಮಂಡಿಯೂರಿ ಕುಳಿತ.

ಇಂತಹ ಸಮಯದಲ್ಲಿ ದಿಕ್ಕುತೋಚದ ದೇವತೆಗಳು, ಶಿವನಿಗೆ ಮದುವೆ ಮಾಡಲು ಹೊರಟರು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಪರಮೇಶ್ವರನು, ದಕ್ಷಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಎಲ್ಲವನ್ನೂ ತೊರೆದು ಹಿಮಾಲಯದಲ್ಲಿ ಧ್ಯಾನಸ್ಥನಾಗಿದ್ದನು. ಈಗ ಶಿವನ ತಪೋಭಂಗವಾಗಿ, ಪಾರ್ವತಿಯೊಡನೆ ವಿವಾಹವಾಗಬೇಕು, ನಂತರ ಪುತ್ರ ಜನಿಸಬೇಕು ಇದು ಅಸಾಧ್ಯ. ಎಂದು ತಿಳಿದು, ದೇವತೆಗಳೆಲ್ಲ ಒಂದಾಗಿ ಸತ್ಯಲೋಕಕ್ಕೆ ಹೋಗಿ  ವಾಣೀನಾಥ ಚತುರ್ಮುಖ ಬ್ರಹ್ಮನನ್ನು ದರ್ಶನ ಮಾಡಿ ತಾರಕಾಸುರನ  ರಾಕ್ಷಸೀ ಕೃತ್ಯವನ್ನು ಹೇಳಿದರು. ಬ್ರಹ್ಮನ ಮುಂದಾಳತ್ವದಲ್ಲಿ ದೇವತೆಗಳು ವೈಕುಂಠಕ್ಕೆ ಬಂದು,  ಕ್ಷೀರ  ಸಾಗರದಲ್ಲಿ ಆದಿಶೇಷನ ಮೇಲೆ  ಶಯನನಾದ ಮಹಾವಿಷ್ಣುವಿನ ದರ್ಶನ ಪಡೆದರು. ನಂತರ ತಾವು ಬಂದ ಕುರಿತು ಎಲ್ಲವನ್ನು  ತಿಳಿಸಿ, ಶಿವಶಕ್ತಿ ಯರು ಸಂಯೋಗ ಗೊಳ್ಳುವಂತೆ ನೀವು ಪ್ರಯತ್ನಿಸಬೇಕು ಎಂದು ಮೊರೆಹೋದರು. ಆಗ ಸ್ಥಿತಿ ಕಾರಕನಾದ ವಿಷ್ಣುವು ದೇವತೆಗಳೇ ಹೆದರಬೇಡಿ ಶೀಘ್ರದಲ್ಲಿಯೇ ನಿಮ್ಮ ಕಷ್ಟ ಪರಿಹಾರವಾಗುತ್ತದೆ ಎಂದು ಸಮಾಧಾನ ಪಡಿಸಿದನು.

ದೇವತೆಗಳು  ಇನ್ನು ತಡ ಮಾಡಬಾರದೆಂದು, ಶಿವನ ಧ್ಯಾನಕ್ಕೆ ಭಂಗ ತರಲು ರತಿ-ಮನ್ಮಥ ರನ್ನು ಕಳಿಸುತ್ತಾರೆ. ಮನ್ಮಥನು ಹೂಬಾಣದಿಂದ  ಶಿವನ ಶೃಂಗಾರ ಭಾವವನ್ನು ಬಡಿದೆಬ್ಬಿಸಲು ಅವನ ಎದೆಗೆ ಸರಿಯಾಗಿ ಪಂಚ ಬಾಣಗಳನ್ನು ಬಿಟ್ಟು, ಶಿವನ ಧ್ಯಾನವನ್ನು ಬಂಗ ಪಡಿಸಿದನು. ಇದರಿಂದ ಕೋಪಗೊಂಡ ಶಿವನು ತನ್ನ  ಹಣೆಗಣ್ಣನ್ನು ತೆರೆದು ಕಾಮನನ್ನು ಬಸ್ಮ ಮಾಡಿದನು. ಆಮೇಲೆ ದೇವತೆಗಳಿಂದ ವಿಷಯ ತಿಳಿದು, ರತಿ-ಮನ್ಮಥರಿಗೆ ವರವನ್ನು ಕೊಟ್ಟನು. ಪರಮೇಶ್ವರನನ್ನು ಪಡೆಯುವ ಸಲುವಾಗಿ ಘೋರ ತಪಸ್ಸನ್ನು ಮಾಡುತ್ತಿದ್ದ ಪಾರ್ವತಿಯಲ್ಲಿ ,ಪರಮೇಶ್ವರನು  ಮೋಹಿತನಾದನು. ಆಮೇಲೆ ಅವರಿಬ್ಬರ ಮದುವೆಯಾಗಿ ಶಿವಪಾರ್ವತಿಯರು ಕೈಲಾಸಕ್ಕೆ ಬಂದು  ಶೃಂಗಾರದಲ್ಲಿ ವಿಹರಿಸುತ್ತಾರೆ.

ದೇವತೆಗಳ ಮನಸ್ಸಿನಲ್ಲಿ ಒಂದು ಅನುಮಾನ ಮೂಡಿತು. ಒಂದು ವೇಳೆ  ಶಿವನ 'ತೇಜಸ್ಸು' ಪಾರ್ವತಿ ದೇವಿಯಲ್ಲಿ ಸೇರಿದರೆ, ಅವರಿಂದ ಹೊರಬರುವ ಮಹಾಶಕ್ತಿಯನ್ನು ನಮ್ಮಿಂದ ಸಹಿಸಲು ಸಾಧ್ಯವೇ ಎಂದು ಮೂರ್ಖತನದಿಂದ ಚಿಂತಿಸಿದರು. ನಂತರ ವೈಕುಂಠದಿಂದ ಕೈಲಾಸಕ್ಕೆ ಪ್ರಯಾಣ ಬೆಳೆಸಿ ಕೈಲಾಸ ದ್ವಾರದಲ್ಲಿ  ನಿಂತು ಆದಿದೇವಾ, ದೇವಾದಿದೇವ ,ಕರುಣಾಕರ, ಶಂಕರ, ಪರಮೇಶ್ವರ, ನಮ್ಮನ್ನು ತಾರಕಾಸುರನಿಂದ ರಕ್ಷಿಸಿ. ಆದರೆ ನಿಮ್ಮ ತೇಜಸ್ಸನ್ನು ಪಾರ್ವತಿ ದೇಹದೊಳಗೆ 'ನಿಕ್ಷಿಪ್ತ' ಮಾಡಬೇಡಿ ಎಂದು ಪ್ರಾರ್ಥಿಸಿದರು. ಆ ಹೊತ್ತಿಗೆ  ಶಿವ ಪಾರ್ವತಿಯರು  ಸಂತೋಷದಿಂದ ಕಾಲ ಕಳೆಯುತ್ತಿದ್ದರು. ದೇವತೆಗಳ ಪ್ರಾರ್ಥನೆಯಂತೆ ಶಿವನು ಹೊರಗೆ ಬಂದನು. ದೇವತೆಗಳನ್ನು ಕುರಿತು, ಆಗಲೇ ನನ್ನ ತೇಜಸ್ಸು ಹೃದಯ ಸ್ಥಾನದಿಂದ ಹೊರಗೆ ಬಂದಿದೆ ನಿಮ್ಮಲ್ಲಿ ನನ್ನ ತೇಜಸ್ಸನ್ನು ತಡೆಯುವ ಶಕ್ತಿ ಇದ್ದವರು ಸ್ವೀಕರಿಸಿ ಎಂದನು.

ಆದರೆ ಪಾರ್ವತಿ ದೇವಿ, ಬಹಳದಿನಗಳಿಂದಲೂ ಪರಮೇಶ್ವರನ ತೇಜಸ್ಸನ್ನು ತಾನು ಸ್ವೀಕರಿಸಿ ತಾಯಿ ಯಾಗಬೇಕೆಂದು ಹಂಬಲಿಸಿದ್ದಳು. ದೇವತೆಗಳ ಮಂದಬುದ್ಧಿಗೆ,  ಕೋಪಗೊಂಡು, "ನನಗೆ ಸಂತಾನ ವಾಗದಂತೆ ನೀವು  ತಡೆದಿದ್ದ ಕಾರಣ ಇನ್ನು ಮುಂದೆ ನಿಮಗೆ ಯಾರಿಗೂ ಸಂತಾನ ವಾಗದಿರಲಿ" ಎಂದು ಶಾಪ ಕೊಟ್ಟಳು. ಆದ್ದರಿಂದ ಅಂದಿನಿಂದಲೂ  ದೇವತೆಗಳ ಸಂಖ್ಯೆ 33ಕೋಟಿ ಸಾವಿರ ಮಾತ್ರ ಇದೆ.

ಆಗ ಅಲ್ಲೊಂದು ವಿಚಿತ್ರ ಘಟನೆ ನಡೆಯಿತು. ಕೈಲಾಸಕ್ಕೆ ಬಂದ   ಮಹಾವಿಷ್ಣು
ಹಾಗೂ ದೇವತೆಗಳನ್ನು ಸ್ವಾಗತಿಸಲು  ಎದ್ದುನಿಂತ ಶಿವನಿಗೆ ಅಗ್ನಿತತ್ವ ದಿಂದಾಗಿ ಶಿವನ ವೀರ್ಯ  ಖ್ಕಲಿಸಿ ಕೆಳಗೆ ಬೀಳುವುದರಲ್ಲಿತ್ತು. ಆಗ ದೇವತೆಗಳ ಮಾತಿನಂತೆ  ಅಗ್ನಿದೇವನು  ಶಿವನ ತೇಜಸ್ಸನ್ನು ಸ್ವೀಕರಿಸಿದನು.ಆದರೆ ಶಿವನ ತೇಜಸ್ಸಿನ ತಾಪವನ್ನು ಅಗ್ನಿಯು ಸಹಿಸಲಾರದೆ ಒದ್ದಾಡಿದಾಗ,  ಶಿವನ ಆದೇಶದ ಮೇರೆಗೆ ಅಗ್ನಿಯು  ಶಿವನ ತೇಜಸ್ಸನ್ನು  ಭೂದೇವಿಯ ಒಡಲಿಗೆ ಹಾಕಿದನು. ಆದರೆ ಭೂದೇವಿಯು ತಾಪ ಸಹಿಸಲಾರದೆ ಗಂಗಾದೇವಿಗೆ ಪ್ರಾರ್ಥಿಸಿದಳು. ಗಂಗಾದೇವಿಯು  ಶಿವನ ತೇಜಸ್ಸನ್ನು ಸಂತೋಷದಿಂದ ಸ್ವೀಕರಿಸಿದಳು. ಆದರೆ ಅವಳಿಗೆ ಆ ತೇಜಸ್ಸನ್ನು ತಡೆಯಲು ಸಾಧ್ಯವಾಗದೆ ಕೈಲಾಸಪರ್ವತದಲ್ಲಿರುವ 'ಶರವಣ' ಎಂಬ ಸರೋವರದಲ್ಲಿ ಬಿಟ್ಟಳು. ಆ ಶರವಣ ಸರೋವರದಲ್ಲಿ 'ಆರು ತಲೆಗಳು ಹನ್ನೆರಡು ಕೈಗಳು ಇರುವ ದಿವ್ಯ ಸ್ವರೂಪನಾದ  ತೇಜಸ್ಸು ಉದ್ಭವಿಸಿತು. ಅವನೇ ಬಾಲಕ ಸುಬ್ರಹ್ಮಣ್ಯ. ಇವನು ಹುಟ್ಟಿದ ಕೂಡಲೆ , ಆರು ಜನ ಕೃತಿಕೇಯರು  ಮಗುವನ್ನು ಎತ್ತಿಕೊಂಡು ಪ್ರೀತಿಯಿಂದ ಹಾಲುಣಿಸಿದರು. ಹೀಗಾಗಿ ಸುಬ್ರಹ್ಮಣ್ಯನಿಗೆ ಆರು ತಲೆಗಳಾಯಿತು. ಇದರಿಂದ ಇವನನ್ನು ಆರ್ಮುಗ,ಷಣ್ಮುಖ. ಎಂದು ಕರೆದರು. ಆರು ಜನ  ಕೃತ್ತಿಕೆಯರು  ಹಾಲು ಕುಡಿಸಿ ಬೆಳೆಸಿದ್ದರಿಂದ ಕಾರ್ತಿಕೇಯನಾದನು.

ಸುಬ್ರಹ್ಮಣ್ಯನಿಗೆ ಕಾರ್ತಿಕೇಯ ಎಂಬ ಹೆಸರು ಬಂದ ಕಥೆಸುಬ್ರಹ್ಮಣ್ಯನು ಸನತ್ಕುಮಾರನ ಅಂಶ.  ಒಮ್ಮೆ ತಪಸ್ಸಿನಲ್ಲಿ ನಿರತನಾಗಿದ್ದ ಸನತ್ಕುಮಾರನಿಗೆ ಪಾರ್ವತಿ ಸಮೇತ ಪರಮೇಶ್ವರನು ಪ್ರತ್ಯಕ್ಷರಾಗಿ ವರ ಕೇಳುವಂತೆ ಹೇಳಿದನು. ಆದರೆ ಸನತ್ಕುಮಾರ 'ವರ ಕೊಡಲು ನೀನ್ಯಾರು ತೆಗೆದುಕೊಳ್ಳಲು ನಾನ್ಯಾರು'  ಕುಪಿತಗೊಂಡ ಶಿವನು ಶಾಪ ಕೊಡುತ್ತೇನೆ ಎಂದನು. ಸನತ್ಕುಮಾರನು, ವರ ಎಂದರೆ ಸುಖ, ಶಾಪ ಎಂದರೆ ದುಃಖ, ಸುಖ-ದುಃಖಗಳು ಇಲ್ಲದ ನನಗೆ ಕೊಡಲು ಏನೂ ಇಲ್ಲ ನಿನ್ನ ಹತ್ತಿರ. ಪ್ರಸನ್ನನಾದ ಶಿವನು ನೀನೆ ನನಗೆ ವರವಾಗಿ ನನ್ನ ಪುತ್ರನಾಗು ಎಂದನು ಆಯಿತು ನಾನು ನಿಮಗೊಬ್ಬರಿಗೆ ಪುತ್ರ ನಾಗುವೆ ಎಂದನು. ಬೆಚ್ಚಿಬಿದ್ದ ಪಾರ್ವತಿ ಹಾಗಂದರೇನು ನಾನು ತಾಯಿಯಲ್ಲವೆ ಎಂದಳು. ಅದಕ್ಕೆ ಸನತ್ಕುಮಾರನು ಅಮ್ಮ ಪರಮೇಶ್ವರನ ಮಗನಾಗು ಎಂದಿದ್ದಕ್ಕೆ ನಾನು ಒಪ್ಪಿದೆ. ಆದರೆ ಗರ್ಭವಾಸ ಅನುಭವಿಸಿ ಯೋನಿಯಿಂದ ಹೊರಬರಲಾರೆ ನನ್ನನ್ನು ಕ್ಷಮಿಸಿ.ಆದರೆ ನೀವು ಮೋಹಿನಿ ರೂಪದಲ್ಲಿದ್ದಾಗ  ಕೈಲಾಸ ಪರ್ವತದಲ್ಲಿ ಜಲ ರೂಪವಾಗಿ ನಿಮ್ಮ ಅವತಾರ ಮುಗಿಸಿದ್ದೀರಿ ಆ ಸರೋವರ ಎಲ್ಲಿದೆಯೋ ಅಲ್ಲಿಯೇ ನಾನು ಉದ್ಭವಿಸುತ್ತೇನೆ. ಆದ್ದರಿಂದ ನಿಮಗೂ ನಾನು ಪುತ್ರನಾಗುತ್ತೇನೆ ಎಂದು ನಮಸ್ಕರಿಸಿದನು. ಕೈಲಾಸಪರ್ವತದಲ್ಲಿ 'ಶರವಣ' ಎಂಬ ಸರೋವರ ಇದೆ. ಇಲ್ಲಿ ಸುಬ್ರಹ್ಮಣ್ಯ ಉದ್ಭವವಾಗುತ್ತಾನೆ.

ತನಗೆ ಸಾವೇ ಇಲ್ಲ ಎಂದು ಮೆರೆಯುತ್ತಿದ್ದ ತಾರಕಾಸುರನ ಸಂಹಾರಕ್ಕೆ ಕಾರ್ತಿಕೇಯ ಸಿದ್ಧಗೊಂಡನು ದೇವತೆಗಳನ್ನು , ಘಟಾನುಘಟಿ ರಾಜರುಗಳನ್ನು ಮಣಿಸಿದ್ದ ತಾರಕಾಸುರನು, ಈ ಪುಟ್ಟ  ಬಾಲಕ ಸುಬ್ರಹ್ಮಣ್ಯ ನನ್ನನ್ನೇನು ಮಾಡುತ್ತಾನೆ ಎಂದು ತಿಳಿದಿದ್ದ. ಆದರೆ ಕಾರ್ತಿಕೇಯ ದೇವಾನುದೇವತೆಗಳನ್ನು ಸೇರಿಸಿ, ಅವರಿಗೆಲ್ಲಾ ಸೇನಾಧಿಪತಿಯಾಗಿ ತಾರಕಾಸುರ ನೊಂದಿಗೆ  ಹತ್ತು ಸಾವಿರ ವರ್ಷಗಳ ಕಾಲ ಯುದ್ಧಮಾಡಿದನು . ನಂತರ ತಾರಕಾಸುರನನ್ನು ತನ್ನ ಶಕ್ತಿಯುತವಾದ 'ವೇಲಾಯುಧ' ದಿಂದ ಸಂಹರಿಸಿದನು. ಬ್ರಹ್ಮನ ವರದಂತೆ ಶಿವನ ಪುತ್ರನಾದ ಕಾರ್ತಿಕೇಯನಿಂದಲೇ 'ತಾರಕಾಸುರನ' ಸಂಹಾರವಾಯಿತು.

" ಷಡಾನನಂ ಕುಂಕುಮ ರಕ್ತವರ್ಣಂ ಮಹಾಮತಿಂ ದಿವ್ಯ ಮಯೂರ ವಾಹನಂ ರುದ್ರಸ್ಯ ಸೂನುಂ ಸುರ  ಸೈನ್ಯನಾಥಂ  ಗುಹಂ ಸದಾ ಶರಣಂ. ಮಹಂ ಪ್ರಪದ್ಯೇ"

"ಆರು ತಲೆಯ ಕುಂಕುಮದಂತೆ ಕೆಂಪಗಿರುವ ಮೈಬಣ್ಣದವನು, ಚುರುಕು ಬುದ್ಧಿಯವನು, ದೇವಲೋಕದ ನವಿಲು  ಇವನ ವಾಹನ, ರುದ್ರದೇವನ ಮಗ, ಸಗ್ಗೀಗರ ಸೇನೆಯ ಮುಂದಾಳು, ಇಂತಹ ತಿಳಿದಷ್ಟು ಗುಟ್ಟೆನಿಸುವ  ಗುಹವನ್ನು ಯಾವಾಗಲೂ ನನ್ನ ಆಸರೆ ಎಂದು ನಂಬಿ ತಲೆಬಾಗುತ್ತೇನೆ"

–>