-->

The fake diamond necklace , a beautiful story

ಒಬ್ಬ ಆಭರಣ ವ್ಯಾಪಾರಿಯ ಮರಣದ ನಂತರ, ಅವರ ಕುಟುಂಬವು ತೀವ್ರ ತೊಂದರೆಗೆ ಒಳಗಾಗಿತ್ತು. ಊಟಕ್ಕೂ ಅವರ ಬಳಿ ಹಣವಿರಲಿಲ್ಲ. ಒಂದು ದಿನ ಅವನ ಹೆಂಡತಿ ತನ್ನ ಮಗನಿಗೆ ಒಂದು ವಜ್ರದ ಹಾರವನ್ನು ಕೊಟ್ಟು ಹೇಳಿದಳು - "ಮಗನೇ, ಇದನ್ನು ನಿನ್ನ ಚಿಕ್ಕಪ್ಪನ ಅಂಗಡಿಗೆ ತೆಗೆದುಕೊಂಡು ಹೋಗು, ಅದನ್ನು ಮಾರಿ ನಮಗೆ ಸ್ವಲ್ಪ ಹಣವನ್ನು ಕೊಡಲು ಕೇಳು."

ಮಗ ಆ ಹಾರವನ್ನು ತೆಗೆದುಕೊಂಡು ತನ್ನ ಚಿಕ್ಕಪ್ಪನ ಅಂಗಡಿಯನ್ನು ತಲುಪಿದನು. ಚಿಕ್ಕಪ್ಪ ಹಾರವನ್ನು ಕೂಲಂಕಷವಾಗಿ ನೋಡಿ ಹೇಳಿದರು - "ಮಗನೇ, ಈಗ ಮಾರುಕಟ್ಟೆ ತುಂಬಾ ಮಂದವಾಗಿದೆ ಎಂದು ನಿಮ್ಮ ತಾಯಿಗೆ ಹೇಳು, ಸ್ವಲ್ಪ ಸಮಯದ ನಂತರ ಅದನ್ನು ಮಾರಿದರೆ, ಅವಳಿಗೆ ಒಳ್ಳೆಯ ಬೆಲೆ ಸಿಗುತ್ತದೆ." ಹಾಗೆಯೇ, ಅವನಿಗೆ ಸ್ವಲ್ಪ ಹಣವನ್ನು ಕೊಟ್ಟರು ಮತ್ತು "ನಾಳೆಯಿಂದ ನನ್ನೊಂದಿಗೆ ಅಂಗಡಿಗೆ ಬಂದು ಕುಳಿತುಕೊಳ್ಳು" ಎಂದು ಹೇಳಿದರು.

ಮರುದಿನ ಹುಡುಗನು ಪ್ರತಿದಿನ ಅಂಗಡಿಗೆ ಹೋಗಲು ಪ್ರಾರಂಭಿಸಿದನು ಮತ್ತು ಅಲ್ಲಿ ಅವನು ವಜ್ರ ಮತ್ತು ರತ್ನಗಳನ್ನು ಪರೀಕ್ಷಿಸುವುದನ್ನು ಕಲಿಯಲು ಪ್ರಾರಂಭಿಸಿದನು.
 
ಶೀಘ್ರದಲ್ಲೇ, ಅವನು ವಜ್ರಗಳನ್ನು ಪರಿಶೀಲಿಸುವ ಪ್ರಸಿದ್ಧ ತಜ್ಞನಾದನು. ಜನರು ತಮ್ಮ ವಜ್ರಗಳನ್ನು ಪರೀಕ್ಷಿಸಲು ದೂರ ದೂರದಿಂದ ಬರಲಾರಂಭಿಸಿದರು.

ಒಂದು ದಿನ ಅವನ ಚಿಕ್ಕಪ್ಪ, "ಮಗ, ನಿಮ್ಮ ತಾಯಿಯಿಂದ ಆ ಹಾರವನ್ನು ಈಗಲೇ ತಗೆದುಕೊಂಡು ಬಾ.. ಈಗ ಮಾರುಕಟ್ಟೆಯಲ್ಲಿ ಬೆಲೆ ಚೆನ್ನಾಗಿದೆ, ನಿಮಗೆ ಒಳ್ಳೆಯ ಬೆಲೆ ಸಿಗುತ್ತದೆ" ಎಂದು ಹೇಳಿದರು.
 


ತನ್ನ ತಾಯಿಯಿಂದ ಹಾರವನ್ನು ತೆಗೆದುಕೊಂಡು ಬರಲು ಹೋದ ಯುವಕ ಅದನ್ನು ಸ್ವತಃ ಪರೀಕ್ಷಿಸಿದಾಗ ಅದು ನಕಲಿ ಎಂದು ಕಂಡುಬಂದಿತು. ತನ್ನ ಚಿಕ್ಕಪ್ಪ ಇಷ್ಟು ಮಹಾನ್ ವಿದ್ವಾಂಸ, ಈ ವಿಷಯವನ್ನು ತನಗೇಕೆ ತಿಳಿಸಲಿಲ್ಲ ಎಂದು ಆಶ್ಚರ್ಯ ಪಡತೊಡಗಿದ...

ನೆಕ್ಲೇಸ್ ಅನ್ನು ಮನೆಯಲ್ಲಿಯೇ ಇಟ್ಟು ಅಂಗಡಿಗೆ ಮರಳಿದನು.

ಚಿಕ್ಕಪ್ಪ ಕೇಳಿದರು, "ನೀನು ಹಾರ ತಂದಿಲ್ಲವೇ?" ಅದಕ್ಕೆ ಅವನು ವಿನಮ್ರವಾಗಿ "ಚಿಕ್ಕಪ್ಪ, ಇದು ಕೃತಕವಾಗಿದೆ... ಆದರೆ ನೀವು ಈ ವಿಷಯವನ್ನು ನನ್ನಿಂದ ಏಕೆ ಮರೆಮಾಡಿದ್ದೀರಿ? ನನಗೇಕೆ ಅಂದೇ ಇದನ್ನು ತಿಳಿಸಲಿಲ್ಲ?" ಎಂದು ಕೇಳಿದನು.

ಆಗ ಅವನ ಚಿಕ್ಕಪ್ಪ, “ನೀನು ಮೊದಮೊದಲು ನೆಕ್ಲೇಸ್ ತಂದಾಗ ಅದು ಕೃತಕ ಅಂತ ಹೇಳಿದ್ದರೆ ನೀನು ನನ್ನನ್ನು ನಂಬುತ್ತಿರಲಿಲ್ಲ ಏಕೆಂದರೆ, ಆವತ್ತು ನಿನಗೆ ಇದರ ನಿಜವಾದ ಜ್ಞಾನ ಇರಲಿಲ್ಲ, ಇವತ್ತು ನಿನಗ ವಜ್ರದ ಬಗ್ಗೆ ಸಂಪೂರ್ಣ ಜ್ಞಾನ ಬಂದಿದೆ. ನೆಕ್ಲೇಸ್ ನಿಜವಾಗಿಯೂ ನಕಲಿ ಎಂದು ನಿನಗೆ ಖಚಿತವಾಗಿ ತಿಳಿದಿದೆ. ಅಂದಿನ ಸಮಯದಲ್ಲಿ ನನಗೆ ಸತ್ಯವನ್ನು ಹೇಳುವುದಕ್ಕಿಂತ ಸಂಬಂಧಗಳನ್ನು ನೋಡಿಕೊಳ್ಳುವುದು ಮುಖ್ಯವಾಗಿತ್ತು." ಎಂದು ಹೇಳಿದರು. ಯುವಕನ ಕಣ್ಣುಗಳ ಕೃತಜ್ಞತೆಯಿಂದ ತೇವವಾದವು.

ಈ ಕಥೆಯು ಸಂಭಂಧಗಳನ್ನು ನಿಭಾಯಿಸುವಾಗ, ಸತ್ಯವನ್ನು ಹೇಗೆ ಹೇಳಬೇಕು ಮತ್ತು ಸಂಬಂಧಿಗಳಿಗೆ ಕಷ್ಟದಲ್ಲಿ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಕಲಿಸುತ್ತದೆ.

ಹಾಗೆಯೇ, ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ನಮಗೆ ಸಂಬಂಧಿಗಳು ಎಂದುಕೊಂಡರೆ, ಎಲ್ಲರಿಗೂ ಈ ಕಥೆ ಅನ್ವಯಿಸುತ್ತದೆ. ಎಲ್ಲರಿಗೂ ಶುಭವಾಗಲಿ. ಮಾನವತೆಗೆ ಜಯವಾಗಲಿ

–>