-->

Solving conflict between Mother in Law and Daughter in Law - a short story

ತಮಗಿದ್ದ  ಒಬ್ಬನೇ ಮುದ್ದಿನ ಮಗನಿಗೆ ಒಳ್ಳೆಯ  ಮನೆತನದ  ಹುಡುಗಿಯೊಂದಿಗೆ ಮದುವೆ ಮಾಡಿ ಸೊಸೆಯನ್ನು  ಮನೆಗೆ ಕರೆ ತಂದರು  ಒಬ್ಬ ತಂದೆ ತಾಯಿಗಳು. ಮದುವೆಯಾಗಿ ಸ್ವಲ್ಪ ದಿನಗಳ ವರೆಗೂ  ಅತ್ತೆ ಸೊಸೆ ,ಚೆನ್ನಾಗಿ ಹೊಂದಿಕೊಂಡಿದ್ದರು.ನಂತರ ಸಣ್ಣ ಪುಟ್ಟ ಜಗಳದಿಂದ ,ದೊಡ್ಡ ದಾಗುತ್ತಾ ಹೋಯಿತು. ಕೂತರೆ ನಿಂತರೆ ಜಗಳವಾಡತೊಡಗಿದರು. ಮನೆಯಲ್ಲಿರುವವರಿಗೆಲ್ಲಾ ದೊಡ್ಡ ರಗಳೆ ಎನಿಸತೊಡಗಿತು.ಮಗನಿಗಂತೂ ಹುಚ್ಚು ಹಿಡಿಯುವಷ್ಟು ಕಿರಿ ಕಿರಿಯಾಗುತ್ತಿತ್ತು.ಆತ ಪಾಪ ,ಹೆಂಡತಿಗೆ ಬುದ್ಧಿ ಹೇಳಲಾರ,ಇತ್ತ ತಾಯಿಯನ್ನೂ  ಸಮಾಧಾನ ಪಡಿಸಲಾರದೆ,ಒದ್ದಾಡುತ್ತಿದ್ದ.ಇದೇ ಚಿಂತೆಯಲ್ಲಿ  ಮಾನಸಿಕವಾಗಿ,
 ಸೊರಗತೊಡಗಿದ.

       ಒಮ್ಮೆ  ತನ್ನ ಸ್ನೇಹಿತನಲ್ಲಿ   ತನ್ನ ದುಃಖವನ್ನು ಹೇಳಿಕೊಂಡ.ಸ್ನೇಹಿತನ ಸಮಸ್ಯೆ ಯನ್ನು ಕೇಳಿಸಿಕೊಂಡ ಗೆಳಯ ಅವನಿಗೊಂದು ಸಲಹೆ ನೀಡಿದ,ಪಕ್ಕದ ಊರಿನಲ್ಲಿ ,ಒಳ್ಳೆಯ ಸಾಧನೆ ಮಾಡಿದ ಒಬ್ಬರು ಯೋಗಿಗಳಿದ್ದಾರೆ,ಅವರು ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತಾರೆ ಎಂದು. ಇದೊಂದು ಪ್ರಯೋಗ ಮಾಡಿಯೆ ಬಿಡೋಣವೆಂದು ,ತನ್ನ ಹೆಂಡತಿಯನ್ನು ಹೇಗೊ ಒಪ್ಪಿಸಿ ಆ ಯೋಗಿಗಳ ಬಳಿಗೆ ಕರೆದೊಯ್ದ. ಅವರು  ಮೊದಲು ಗಂಡನಿಂದ ಎಲ್ಲಾ ವಿಷಯಗಳನ್ನೂ  ಕೇಳಿ ತಿಳಿದುಕೊಂಡರು.ನಂತರ ಅವನನ್ನು ಹೊರಗೆ ಕಳಿಸಿ ,ಅವನ ಹೆಂಡತಿಯನ್ನು ಒಳಗೆ ಕರೆದರು. ಆಕೆಯೊಡನೆ ,ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ,ಹೀಗೆ ಹಿರಿಯರೊಡನೆ ಜಗಳ ಮಾಡುವುದು ಸರಿಯಲ್ಲ,ಅವರಿಗೆ ತೊಂದರೆ ಕೊಟ್ಟರೆ, ನಮಗೆ ಒಳ್ಳೆಯ ದಾಗುವುದಿಲ್ಲ ವೆಂದು ಹೇಳಿದರು. ಇದನ್ನು ಕೇಳಿದ ಆಕೆ ಕೋಪದಿಂದ ಈ ರೀತಿಯ  ಬೋಧನೆ ಮಾಡಲು ನನ್ನನ್ನು ಕರೆಸಿದ್ದೀರಾ?ನನಗೆ ಗೊತ್ತು ನೀವೆಲ್ಲಾ ಸೇರಿ ನನ್ನ ಮೇಲೆ ಸಂಚು ನೆಡೆಸುತ್ತಿದ್ದೀರ.ನನಗೆ ನಿಮ್ಮಗಳ  ಬೋಧನೆಯ  ಅವಶ್ಯಕತೆ ಇಲ್ಲಾ,ಎಂದು ಅಲ್ಲಿಂದ  ಹೊರಡ ತೊಡಗಿದಳು. ಆಗ ಯೋಗಿಗಳು  ಅಮ್ಮಾ ಸ್ವಲ್ಪ ಕುಳಿತುಕೊ,ನಿನಗೆ ನನ್ನದೊಂದು ಸಲಹೆ ಇದೆ.ಬೇಕಾದರೆ ಒಪ್ಪಿಕೊ,ಇಲ್ಲದಿದ್ದರೆ, ಖಂಡಿತವಾಗಿಯೂ ಇಲ್ಲಿಂದ ಹೊರಡಬಹುದು,ಎಂದರು.

Solving conflict between Mother in Law and Daughter in Law - a short story


   ಆಕೆ ಏನದು ಎನ್ನುತ್ತ ಅಲ್ಲೇ ಕುಳಿತಳು.ನೋಡಮ್ಮಾ,ನಿನಗೆ ನಿನ್ನ ಅತ್ತೆಯೇ ತೊಂದರೆ ತಾನೇ? ಆಕೆಯನ್ನೇ ಇಲ್ಲದ ಹಾಗೆ ಮಾಡಬಹುದು, ಆಮೇಲೆ ನಿನಗೆ ಯಾವ ಚಿಂತೆಯೂ ಇರುವುದಿಲ್ಲ, ಎಂದು ಅವಳ ಕಿವಿಯಲ್ಲಿ ಗುಟ್ಟು ಹೇಳುವಂತೆ ಹೇಳಿದರು.ಅದು ಸರಿ,ಆದರೆ ಅವಳು  ಇನ್ನೂ ಗಟ್ಟಿಯಾಗೇ ಇದ್ದಾಳಲ್ಲ? ಹೇಗೆ ಅವಳನ್ನು ಇಲ್ಲವಾಗಿಸುವುದು,ಎಂದಳು ಸೊಸೆ.

    ನೋಡು ನನ್ನ ಹತ್ತಿರ ಒಂದು ವಿಷ ಇದೆ,ಅದನ್ನು ಪ್ರತಿದಿನ ಬೆಳಿಗ್ಗೆ, ಅರ್ಧ ಚಮಚ ಹಾಲಿನಲ್ಲಿ ಬೆರಸಿ ಅವಳಿಗೆ ಕೊಡು,ಅದೊಂದು ವಿಶೇಷ ರೀತಿಯ ವಿಷ.ಆಕೆ ತಕ್ಷಣ ಸತ್ತರೆ, ನಿನ್ನ ಮೇಲೇ ಅಪವಾದ ಬರುತ್ತದೆ,ಅದಕ್ಕೆ ನಿಧಾನವಾಗಿ ಸ್ವಲ್ಪ ಸ್ವಲ್ಪವೇ,ವಿಷ ಬೆರೆತು ಒಂದು ವರ್ಷದ ಒಳಗಾಗಿ ಅವಳು ಸಾಯುತ್ತಾಳೆ.ಅದೂ ಅಲ್ಲದೇ, ಯಾವ ವೈದ್ಯರಿಗೂ ಈ ವಿಷವನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ. ಆಗ ನಿನ್ನ ಮೇಲೆ ಯಾರಿಗೂ ಸಂಶಯವೂ ಬರುವುದಿಲ್ಲ ಎಂದರು. ಸೊಸೆಗೆ ತಡೆಯಲಾರದಷ್ಟು ಸಂತೋಷವಾಯಿತು. ಹಾಗಾದರೆ  ಆ ಪುಡಿಯನ್ನು ಈಗಲೇ  ಕೊಡಿ ನಾಳೆಯಿಂದಲೇ,ಅದರ ಪ್ರಯೋಗ  ಮಾಡುತ್ತೇನೆ, ಎಂದಳು.ಆಗ ಯೋಗಿಗಳು ,ಇನ್ನೊಂದು ವಿಷಯ,ಈ ವಿಷದ ಪುಡಿ ಮುಗಿಯುವವರೆಗೂ ನೀನು ನಿನ್ನ ಅತ್ತೆ ಯೊಂದಿಗೆ ಜಗಳವಾಡಬಾರದು,ಹಾಗೆಯೇ ಅವಳಿಗೆ ಯಾವುದು ಇಷ್ಟವೋ ಅದನ್ನೇ ಮಾಡಬೇಕು, ಪಾಪ ,ಇನ್ನೆಷ್ಟು ದಿನ ಬದುಕಿದ್ದಾಳು, ಎಂದರು.

   ಮನೆಗೆ ಬಂದು ಯೋಗಿಗಳು ಹೇಳಿದ ಹಾಗೆ, ಅತ್ತೆಯ ಮೇಲೆ ಹುಸಿ ಪ್ರೀತಿಯನ್ನು ತೋರಿಸುತ್ತಾ,ಅತ್ತೆ ಹೇಳಿದಂತೆ ,ಅವಳಿಗಿಷ್ಟವಾದಂಥ ಕೆಲಸ ಮಾಡ ತೊಡಗಿದಳು,  ಬೆಳಗಿನ ಸಮಯದಲ್ಲಿ ,ಯೋಗಿಗಳು ಕೊಟ್ಟ ಪುಡಿಯನ್ನು  ಹಾಲಿಗೆ ಹಾಕಿ ಕೊಡುತ್ತಿದ್ದಳು. ಅತ್ತೆಗೆ  ಇವಳ  ಬದಲಾವಣೆ ಕಂಡು ಆಶ್ಚರ್ಯವಾದರೂ ಒಳಗೊಳಗೇ, ಖುಷಿಯಿಂದ ಇರುತ್ತಿದ್ದಳು .ಕ್ರಮೇಣ ಅವಳಿಗೂ ಇವಳ ಮೇಲೆ ಪ್ರೀತಿ ಬರತೊಡಗಿತು.ಎಲ್ಲೊ ತಾನೇ ಸರಿ ಇರಲ್ಲಿಲ್ಲ, ಇವಳೊಂದಿಗೆ ಎಷ್ಟು ಒರಟಾಗಿ ನೆಡೆದುಕೊಂಡೆ ಎಂದು ಕೊಂಡು,ಅವಳನ್ನು  ತುಂಬಾ ಪ್ರೀತಿಸತೊಡಗಿದಳು.

   ಆರು ತಿಂಗಳು ಕಳೆಯುವುದರಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಹತ್ತಿರವಾದರು.ಒಬ್ಬರಬಗ್ಗೆ ಒಬ್ಬ ರಿಗೆ,ಗೌರವ ,ಆದರ  ಉಂಟಾಯಿತು.

   ಒಂದು ದಿನ ಸೊಸೆ ಯೋಗಿಗಳಿದ್ದಲ್ಲಿ  ಹೋಗಿ, ಅವರ ಕಾಲಿಗೆ ಬಿದ್ದು, ಸ್ವಾಮಿ, ನನ್ನ ಅತ್ತೆ ನಿಜವಾಗಿಯೂ ದೇವರಂತವರು,ಅವರಿಗೆ ನಾನು ಇಷ್ಟು ದಿನ ವಿಷ ಹಾಕಿದ್ದೇನೆ,ಅವರು ಬಹುಕಾಲ ಬದುಕಬೇಕು, ಅವರು ಸಾಯಬಾರದು,ದಯವಿಟ್ಟು ಅವರು ಬದುಕುವಂತೆ,ಏನಾದರೂ ಔಷಧಿ ನೀಡಿ,ಎಂದು ಅತ್ತಳು.

    ಯೋಗಿಗಳು ನಗುತ್ತಾ ಹೇಳಿದರು ಚಿಂತಿಸಬೇಡಾ, ನಾನು ಕೊಟ್ಟಿದ್ದು ಸಕ್ಕರೆ ಪುಡಿಯಷ್ಟೆ,ಅದು ವಿಷವಲ್ಲ.ನಿನ್ನ ಹೃದಯದಲ್ಲಿದ್ದ ವಿಷವನ್ನು ತೆಗೆದ ಔಷಧಿ ಅದು ,ಎಂದರು. ಸೊಸೆ  ತನ್ನನ್ನು ಕ್ಷಮಿಸಿ ಎಂದು  ಯೋಗಿಗಳ ಪಾದಕ್ಕೆರಗಿ  ಮನೆಗೆ ಹೊರಟಳು.

   ಅಂದಿನಿಂದ ಅವರಿಬ್ಬರೂ ತಾಯಿ ಮಗಳಂತೆ ಬದುಕಿದರು.

    ಬೇರೆಯವರ ತಪ್ಪುಗಳನ್ನೇ ಎಣಿಸುತ್ತಾ ಹೋದರೆ, ನಮ್ಮ ಮನಸ್ಸು   ಇನ್ನಷ್ಟು ಕೆಡುತ್ತದೆ, ಬದಲಾಗಿ, ಅವರ ಒಳ್ಳೆಯ ಗುಣಗಳನ್ನು ನೋಡಿದರೆ,ಬದುಕು ಸುಂದರವಾಗುವುದರಲ್ಲಿ ,ಸಂದೇಹವಿಲ್ಲ

Why it is sometimes important to go through hard times - a short story

ಒಬ್ಬ ವ್ಯಕ್ತಿಗೆ ಚಿಟ್ಟೆಯ ಮೊಟ್ಟೆ ಕಾಣಿಸಿತು. ಒಂದು ದಿನ ಅದರಲ್ಲಿ ಸಣ್ಣ ರಂಧ್ರ ಕಾಣಿಸಿತು. ಆ ರಂಧ್ರದ ಮೂಲಕ ಹೊರಬರಲು ಚಿಟ್ಟೆ ಮರಿ ಪ್ರಯತ್ನಿಸುತ್ತಿತ್ತು. ಆ ವ್ಯಕ್ತಿ ಚಿಟ್ಟೆಯ ಕಾರ್ಯವನ್ನೇ ನೋಡುತ್ತಾ ಕುಳಿತ. ಹಲವು ಗಂಟೆಗಳ ಕಾಲ ಒದ್ದಾಡಿದರೂ ಚಿಟ್ಟೆಗೆ ಹೊರಬರುವುದಕ್ಕೆ ಸಾಧ್ಯವಾಗಲಿಲ್ಲ. ಸುಸ್ತಾಗಿ ಅದು ಸುಮ್ಮನಾಯಿತು. ಚಿಟ್ಟೆ ಹೊರಬರಲು ಕಷ್ಟಪಡುತ್ತಿದೆ. ಅದಕ್ಕೆ ತಾನು ಸಹಾಯ ಮಾಡಬೇಕು ಎಂದು ಭಾವಿಸಿದ ವ್ಯಕ್ತಿ ಕತ್ತರಿ ತೆಗೆದುಕೊಂಡು ಮೊಟ್ಟೆಯ ರಂಧ್ರವನ್ನು ಸ್ವಲ್ಪ ದೊಡ್ಡದು ಮಾಡಿದ. ಚಿಟ್ಟೆ ಸುಲಭವಾಗಿ ಹೊರಬಂತು.

ಆದರೆ ಚಿಟ್ಟೆಯ ದೇಹ ಊದಿಕೊಂಡಿತ್ತು. ರೆಕ್ಕೆಗಳು ಬಲಿತಿರಲಿಲ್ಲ. ಆ ವ್ಯಕ್ತಿ ಮತ್ತೆ ಚಿಟ್ಟೆಯನ್ನೇ ನೋಡುತ್ತಾ ಕುಳಿತ. ಚಿಟ್ಟೆ ಹಾರುವುದಕ್ಕೆ ಪ್ರಯತ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ದೇಹವನ್ನು ಎಳೆದುಕೊಂಡು ಅತ್ತಿಂದಿತ್ತ ಓಡಾಡುತ್ತಿತ್ತು. ಚಿಟ್ಟೆ ಈಗ ರೆಕ್ಕೆ ಬಿಚ್ಚಿ ಹಾರಬಹುದು ಎಂದು ವ್ಯಕ್ತಿ ಕಾದ. ಎಷ್ಟು ಸಮಯವಾದರೂ ಚಿಟ್ಟೆಗೆ ಹಾರುವುದಕ್ಕಾಗಲಿಲ್ಲ. ಆ ಚಿಟ್ಟೆ ತನ್ನ ಜೀವನವೆಲ್ಲ ಹೀಗೆ ತೆವಳುತ್ತಲೇ ಕಳೆಯಬೇಕಾಯಿತು.




ತಾನು ಚಿಟ್ಟೆಗೆ ನೆರವಾಗಬೇಕು ಎಂದ ತುಡಿತದಲ್ಲಿ ಆ ವ್ಯಕ್ತಿ ಚಿಟ್ಟೆಯ ಸೃಷ್ಟಿಯ ಹಿಂದಿರುವ ವಿಚಾರವನ್ನು ಮರೆತಿದ್ದ ಮೊಟ್ಟೆಯಿಂದ ಹೊರಬರಲು ಚಿಟ್ಟೆ ಒದ್ದಾಡುವಾಗ ಅದರ ದೇಹದಿಂದ ಒಂದು ದ್ರವ ಸ್ರವಿಸುತ್ತದೆ. ಇದು ರೆಕ್ಕೆಗಳನ್ನು ಬಲಪಡಿಸುತ್ತದೆ. ಮುಂದೆ ಹಾರುವುದಕ್ಕೆ ರೆಕ್ಕೆಗಳು ಅನುಕೂಲವಾಗಬೇಕು ಎಂದಾದರೆ ಚಿಟ್ಟೆ ಕಷ್ಟ ಪಡಲೇಬೇಕು. ಹೀಗೆ ಕಷ್ಟಪಟ್ಟು ಹೊರಬಂದ ಚಿಟ್ಟೆ ಹಾರುವುದಕ್ಕೆ ಸಿದ್ಧವಾಗಿರುತ್ತದೆ.

ನೀತಿ :-- ಜೀವನದಲ್ಲಿ ಕಷ್ಟಗಳು ಬರಲೇಬೇಕು. ಆಗ ಮಾತ್ರ ನಾವು ಬಲಿಷ್ಠಗೊಳ್ಳುವುದಕ್ಕೆ, ಸಮರ್ಥವಾಗಿ ಜೀವನವನ್ನು ಎದುರಿಸುವುದಕ್ಕೆ ಸಾಧ್ಯ.

- ಡಾ.ಈಶ್ವರಾನಂದ ಸ್ವಾಮೀಜಿ ( 9341137882 )

Cow and Tiger , a short story on belief

ಒಮ್ಮೆ, ಮೇಯಲು ಹೋಗಿದ್ದ ಹಸುವೊಂದು, ಹಸಿದ ಹುಲಿಯ ಕಣ್ಣಿಗೆ ಬಿತ್ತು.‌

ಹುಲಿ ಹಸುವನ್ನು ಕೊಂದು ತಿನ್ನಲೆಂದು ಮುಂದಡಿ ಇಟ್ಟಾಗ, ತನ್ನ‌ ಪ್ರಾಣ ರಕ್ಷಣೆಗಾಗಿ ಹಸು ಓಡ ತೊಡಗಿತು. ಹುಲಿ ಅದರ ಬೆನ್ನಟ್ಟಿತು.

ಹಸು ಓಡುತ್ತಾ ಓಡುತ್ತಾ ಒಂದು ಖಾಲಿಯಾದ ಕೆರೆಯ ಬಳಿಗೆ ಬಂದಿತು. ಬೇರೆ ದಾರಿ ಕಾಣದೇ ಆ ಕೆರೆಗೆ ಧುಮುಕಿತು. ಅದರ ಹಿಂದೆ ಬಂದಿದ್ದ ಹುಲಿಯೂ ಆ ಕೆರೆಗೆ ಧುಮುಕಿತು.

ನೀರಿಲ್ಲದ ಆ ಕೆರೆ ಖಾಲಿಯಾಗಿದ್ದಿದ್ದರೂ, ದಪ್ಪವಾದ ಕೆಸರು ಮಣ್ಣಿನಿಂದ ತುಂಬಿತ್ತು.

ಹಸು ಮತ್ತು ಹುಲಿ ಎರಡೂ ಅಲುಗಾಡಲಾಗದ ರೀತಿ ಆ ಕೆಸರಿನಲ್ಲಿ‌ ಅಲ್ಲಲ್ಲೇ ಸಿಲುಕಿಕೊಂಡವು. ಎಷ್ಟು ‌ಒದ್ದಾಡಿ ಯತ್ನಿಸಿದರೂ ಕೊಂಚವೂ ಮುಂದೆ ಸರಿಯಲು ಸಾಧ್ಯವಾಗುತ್ತಿರಲಿಲ್ಲ.

ಎರಡೂ ಪ್ರಾಣಿಗಳು, ತಮ್ಮ ತಲೆಗಳಷ್ಟೇ ಹೊರಗೆ ಕಾಣಿಸುವಷ್ಟು ಆ ಕೆಸರಿನಲ್ಲಿ ಹೂತುಹೋಗಿದ್ದವು.‌

ಹುಲಿ‌ ಹಸುವಿನತ್ತ ಕ್ರೂರ ದೃಷ್ಟಿ ಬೀರುತ್ತಾ, "ನಿನ್ನನ್ನು ತಿಂದು‌ ಮುಗಿಸುವೆ ನಾನು, ಇನ್ನು ಹೇಗೆ ಬಚಾವಾಗುವೆ?"  ಎಂದು‌ ಸವಾಲೊಡ್ಡಿತು.

ಹಸು ಹುಲಿಯತ್ತ ನೋಡಿ ನಗುತ್ತಾ  "ನಿನಗೆ‌ ಯಜಮಾನ ಇದ್ದಾನಾ?"  ಎಂದು‌ ಕೇಳಿತು.

"ನಾನೇ ಈ ಕಾಡಿನ ರಾಜ.‌ ನನಗೆ ಬೇರೆ ಯಜಮಾನ ಯಾರು?"

"ನೀನು ಕಾಡಿನ ರಾಜನೇ ಆದರೂ, ನಿನ್ನನ್ನು ಇನ್ನು ಯಾರೂ ಬದುಕುಳಿಸಲು ಸಾಧ್ಯವಿಲ್ಲ. ನಿನ್ನ ಕತೆ ಮುಗಿಯಿತು" ಎಂದು ಹಸು ತಮಾಷೆ ಮಾಡಿತು.

"ಅರೆ, ನಿನ್ನ‌ ಕತೆಯೂ ಅಷ್ಟೇ. ನಿನ್ನನ್ನು ಯಾರು ಬದುಕಿಸುತ್ತಾರೆ ಇನ್ನು? ಸಾಮಾನ್ಯ ಪಶು ನೀನು"  ಎಂದು ಹುಲಿ ವ್ಯಂಗ್ಯದಿಂದ ಕೇಳಿತು.

"ನಾನು ಬದುಕುಳಿಯುತ್ತೇನೆ.‌ ನೋಡ್ತಾ ಇರು.‌ ನನಗೆ ಯಜಮಾನ ಇದ್ದಾನೆ. ಸೂರ್ಯಾಸ್ತಮಾನದ ನಂತರ ನಾನು ಹಟ್ಟಿಗೆ ಹಿಂದಿರುಗದೇ ಇರುವುದನ್ನು ಕಂಡು, ಆತ ನನಗಾಗಿ ಹುಡುಕಾಡಿಕೊಂಡು ಇಲ್ಲಿಗೆ ಬಂದೇ ಬರುತ್ತಾನೆ." ಎಂದಿತು ಹಸು.

ಕತ್ತಲಾದಾಗ ಹಸು ನುಡಿದಂತೆಯೇ ಆಯ್ತು.

Cow and Tiger , a short story on belief


ಹಟ್ಟಿಗೆ ಹಿಂದಿರುಗದ ಹಸುವಿಗಾಗಿ, ಅದರ ಯಜಮಾನ ಊರಿನ ಜನರನ್ನೆಲ್ಲಾ ಒಟ್ಟುಗೂಡಿಸಿಕೊಂಡು, ಕೊಳ್ಳಿಗಳನ್ನು ಹಿಡಿದುಕೊಂಡು, ಹಸುವಿಗಾಗಿ ಹುಡುಕಾಡುತ್ತಾ, ಅದೇ ಕೆರೆಯ ಬಳಿಗೆ ಬಂದನು.

ಎಲ್ಲರೂ ಸೇರಿ ಹಸುವನ್ನು ಬಚಾವು ಮಾಡಿ ಊರಿನತ್ತ ಸಾಗಿದರು.

"ನಾನೇ ಈ ‌ಕಾಡಿನ ರಾಜ, ನನಗ್ಯಾರೂ ಯಜಮಾನರೇ ಇಲ್ಲ" ಅನ್ನುವ ಅಹಂಕಾರದಿಂದ ಮೆರೆದ ಆ ಹುಲಿ‌ ಮಾತ್ರ, ಕೆಸರಿನಲ್ಲಿಯೇ ಪ್ರಾಣ ಬಿಡಬೇಕಾಯ್ತು.

"ನನ್ನ ಯಜಮಾನ ಇದ್ದಾನೆ, ಆತ ನನ್ನನ್ನು ಹೇಗಾದರೂ ರಕ್ಷಿಸುತ್ತಾನೆ" ಅನ್ನುವ ಸಂಪೂರ್ಣ ನಂಬಿಕೆಯಲ್ಲಿ‌ ಇದ್ದ ಹಸು ಬಚಾವಾಯಿತು.

 ಹೀಗೆಯೇ, ನಾವು ಕೂಡ, ಪರಮಾತ್ಮನೆಂಬ ನಮ್ಮೆಲ್ಲರ ಯಜಮಾನನ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿರಬೇಕು.

 ನಮ್ಮ ಬಾಳಿನ ಒಳಿತು ಕೆಡುಕುಗಳ ಜವಾಬ್ದಾರಿಗಳನ್ನೆಲ್ಲ ಆತನಿಗೆ ಬಿಟ್ಟುಬಿಡಬೇಕು

ಕಾಳಿದಾಸ - ವಿದ್ಯಾ ದಧಾತಿ ವಿನಯಂ , a short story

ಮಹಾಕವಿ ಕಾಳಿದಾಸನಿಗೆ ತಾನು ಮಹಾಜ್ಞಾನಿಯೆಂಬ ಗರ್ವ ಸ್ವಲ್ಪ ಹೆಚ್ಚೇ ಇತ್ತು.

ಒಂದು ಬಾರಿ ಪರ್ಯಟನೆ ಮಾಡುತ್ತ   ಕಾಳಿದಾಸನು  ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದನು. ದಾರಿ ಸುದೀರ್ಘವಾದ ಕಾರಣ   ಆತನ ಪಯಣ  ದಿನವಿಡೀ ಹಿಡಿಯಿತು. ಸೂರ್ಯನು ಅತ್ಯಂತ ಪ್ರಜ್ವಲಿತನಾಗಿ  ತನ್ನ ಶಕ್ತಿಯ ಕಿರಣಗಳನ್ನು ಬೀರುತ್ತಿದ್ದನು. ಬಿಸಿಲಿನ  ಪಯಣದಿಂದ  ನೀರಿನ ಕೊರತೆ ಕಾಳಿದಾಸನನ್ನು  ಕಾಡತೊಡಗಿತು. ಅವನಿಗೆ ಬಾಯಾರಿಕೆಯಾಗ ತೊಡಗಿತು.  ಅದೇ ಸಮಯಕ್ಕೆ  ಒಬ್ಬ ವೃದ್ಧ ಸ್ತ್ರೀ ನೀರಿನ ಪಾತ್ರೆಯೊಂದಿಗೆ ಹಾದು ಹೋಗುವುದನ್ನು ಕಂಡನು. ಆತ ಆನಂದದಿಂದ,  ಆತುರದಿಂದ ಅವಳ ಬಳಿಗೆ ಹೋಗಿ ಕರೆದನು:

ಕಾಳಿದಾಸ - "ಓ ತಾಯಿ! ಸೂರ್ಯನು ನನ್ನ ಮೇಲೆ ವಿಶೇಷವಾಗಿ ಕಠೋರವಾಗಿದ್ದಾನೆ. ಈ ಅಸಹನೀಯ ಬಾಯಾರಿಕೆಯು ನನ್ನ ಗಂಟಲನ್ನು ಮುಳ್ಳಿನಂತೆ ಚುಚ್ಚುತ್ತಿದೆ. ದಯವಿಟ್ಟು ನನಗೆ ಕುಡಿಯಲು ನೀರುಕೊಡುವ  ದಯೆ ತೋರಿ" ಎಂದು ವಿನಂತಿಸಿದನು.

ಸ್ತ್ರೀ - "ಮಗೂ,  ನಿನ್ನ ಬಾಯಾರಿಕೆಯನ್ನು ನಿವಾರಿಸುವೆ. ಆದರೆ ನನಗೆ ನಿನ್ನ ಪರಿಚಯವಿಲ್ಲವಲ್ಲಾ. ಮೊದಲು ನೀನು ನಿನ್ನ  ಪರಿಚಯ ಹೇಳು, ನಾನು ನೀರನ್ನು ನೀಡುವೆ"

ಕಾಳಿದಾಸ ಮಾತುಕತೆಯಲ್ಲಿ ಒಂದು ನಿಮಿಷ ವ್ಯರ್ಥ ಮಾಡಲು ಬಯಸಲಿಲ್ಲ. ಅವನ ಬಾಯಿಂದ ಹೊರಡುವ ಪ್ರತಿಯೊಂದು ಪದವೂ ಅವನ ಒಣಗಿದ ಗಂಟಲನ್ನು ಹಿಂಸಿಸುವಂತೆ ತೋರುತ್ತಿತ್ತು. ವೃದ್ಧ ಮಹಿಳೆಗೆ  ಬೇಗನೆ ಉತ್ತರಿಸಿದನು: "ನಾನೊಬ್ಬ ಪ್ರವಾಸಿ"

ಸ್ತ್ರೀ - "ಲೋಕದಲ್ಲಿ ಪ್ರವಾಸಿಗರು ಇಬ್ಬರೇ.  ಒಬ್ಬ ಸೂರ್ಯ, ಮತ್ತೊಬ್ಬ ಚಂದ್ರ. ಇಬ್ಬರೂ ಹಗಲು ರಾತ್ರಿಗಳನ್ನು ನಡೆಸುತ್ತಿದ್ದಾರೆ"

ವೃದ್ಧನಾರಿಯ ಮಾತುಗಳಿಗೆ ತಬ್ಬಾಬ್ಬಾದ ಕಾಳಿದಾಸನು - "ನಾನೊಬ್ಬ ಅತಿಥಿ, ಈಗ ನೀರು ಸಿಗುವುದೇ?" ಎಂದು ಕೇಳಿದನು.

ಆಗ ಆ ಸ್ತ್ರೀಯು - "ಲೋಕದಲ್ಲಿ ಅತಿಥಿಗಳೂ ಇಬ್ಬರೇ. ಒಂದು ಧನ, ಮತ್ತೊಂದು ಯೌವ್ವನ. ಇಬ್ಬರೂ ಬಂದು ಹೊರಟು ಹೋಗುತ್ತಾರೆ, ನಿಲ್ಲುವುದಿಲ್ಲ. ನಿಜ ಹೇಳು, ನೀನು ಯಾರು?"

ವೃದ್ಧನಾರಿಯ ಪ್ರಬುದ್ಧ ಮಾತುಗಳಿಗೆ ಉತ್ತರಿಸಲು ಕಾಳಿದಾಸನಿಗೆ ಪದಗಳಿಗೆ ತಡಕಾಡುವಂತಾದರೂ ಆತ ಹೇಳಿದ,  "ನಾನು ಸಹನಶೀಲ. ಈಗಲಾದರೂ ನೀರು ದೊರೆಯುತ್ತದೆಯೇ?"

ಕಾಳಿದಾಸ - ವಿದ್ಯಾ ದಧಾತಿ ವಿನಯಂ , a short story


ಸ್ತ್ರೀ - "ಲೋಕದಲ್ಲಿ ಸಹನಶೀಲರೂ ಇಬ್ಬರೇ!! ಒಂದು ಭೂಮಿ, ಮತ್ತೊಂದು ವೃಕ್ಷ.  ಭೂಮಿ ಪುಣ್ಯವಂತರೊಡನೆ ಪಾಪಿಷ್ಠರನ್ನೂ ಸಹಿಸುತ್ತಾಳೆ. ಹಾಗೆಯೇ ಮರವು ಕಲ್ಲೆಸೆದರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ"

ಈಗ ಕಾಳಿದಾಸ ಹತಾಶನಾಗತೊಡಗಿದ. ಅಸಹನೀಯ ಬಾಯಾರಿಕೆಯು ಆತನನ್ನು ವಿಚಲಿತಗೊಳಿಸಿತು. ಆದರೂ ಪಟ್ಟು ಬಿಡದಂತೆ ನುಡಿದ, "ನಾನೊಬ್ಬ ಹಠಮಾರಿ"

ಸ್ತ್ರೀ - "ಇಲ್ಲ, ನೀನು ಹಠಮಾರಿ ಆಗಲು ಹೇಗೆ ಸಾಧ್ಯ? ಲೋಕದಲ್ಲಿ ಹಠಮಾರಿಗಳೂ ಇಬ್ಬರೇ...ಒಂದು ಉಗುರು, ಇನ್ನೊಂದು ಕೂದಲು.  ಎಷ್ಟು ಬಾರಿ, ಕತ್ತರಿಸಿದರೂ ಮತ್ತೆ ಬೆಳೆಯುತ್ತವೆ"

ಕಾಳಿದಾಸನಿಗೀಗ ಬೇಸರವಾಗತೊಡಗಿತು. ಆತ ತಾಳ್ಮೆ ಕಳೆದುಕೊಂಡ. ಕೆಲವು ಗುಟುಕು ನೀರಿಗಾಗಿ ಇಷ್ಟೊಂದು ಪ್ರಹಸನವೇ ಎಂದುಕೊಳ್ಳುತ್ತಾ, "ನಾನೊಬ್ಬ ಮೂರ್ಖ!!" ಎಂದನು.

ಸ್ತ್ರೀ - "ಅದು ಹೇಗೆ ಸಾಧ್ಯ? ಲೋಕದಲ್ಲಿ ಮೂರ್ಖರೂ ಸಹ ಇಬ್ಬರೇ!!
ಒಬ್ಬ ರಾಜ- ಯೋಗ್ಯತೆ ಇಲ್ಲದಿದ್ದರೂ ಎಲ್ಲರ ಮೇಲೂ ಆಳ್ವಿಕೆ ಮಾಡುತ್ತ ದರ್ಬಾರು ಮಾಡುತ್ತಾನೆ.  ಇನ್ನೊಬ್ಬ ಆ ರಾಜನ ಆಸ್ಥಾನ ಪಂಡಿತ. ರಾಜನನ್ನು ಓಲೈಸುವುದಕ್ಕಾಗಿ, ಸುಳ್ಳು ಕಥೆಗಳನ್ನು ನಿಜವೆಂದು ಬಿಂಬಿಸುತ್ತಾನೆ..!"

ಈಗ ಕಾಳಿದಾಸ ಏನೂ ಹೇಳುವ ಮನಸ್ಥಿತಿಯಲ್ಲಿ ಉಳಿದಿರಲಿಲ್ಲ.  ಆ ವೃದ್ಧ ನಾರಿಯ  ಬುದ್ಧಿಶಕ್ತಿಗೆ ಆತ ಬೆರಗಾದ. ಜಗತ್ತು ಕಂಡ ಶ್ರೇಷ್ಠ ಸಂಸ್ಕೃತ ಕವಿ ಎಂದು ಪರಿಗಣಿಸಲ್ಪಟ್ಟ ಆತನಿಗೆ, ಪ್ರಾಯಶಃ ಓದಲು ಸಹ ತಿಳಿದಿಲ್ಲದ ವಯಸ್ಸಾದ ಅನಕ್ಷರಸ್ಥ ಮಹಿಳೆಯ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ  ನಿಲ್ಲಲು ಸಾಧ್ಯವಾಗಲಿಲ್ಲ. ಅವನು ತನ್ನ ಸೋಲನ್ನು ಒಪ್ಪಿಕೊಂಡನು ಮತ್ತು ಮಹಿಳೆಯ ಕಾಲಿಗೆ ಬಿದ್ದನು.

"ಓ ತಾಯಿ! ನಾನು ಮಹಾಜ್ಞಾನಿ ಎಂಬ ಗರ್ವದಿಂದ   ಮೂರ್ಖನಾಗಿದ್ದೆ. ನೀವು ನನ್ನ ಕಣ್ಣು ತೆರೆಸಿದಿರಿ.  ನನ್ನ ಅಜ್ಞಾನವನ್ನು ಕ್ಷಮಿಸಿ ಮತ್ತು  ಕರುಣೆಯನ್ನು ತೋರಿಸಿ. ನನಗೆ ಸ್ವಲ್ಪ ನೀರು ಕೊಡಿ, ನಾನು ಬೇಡಿಕೊಳ್ಳುತ್ತೇನೆ" ಎಂದು ನುಡಿದನು.

ಆಗ "ಏಳು ಮಗೂ" ಎಂಬ ಧ್ವನಿ ಕೇಳಿ ತಲೆ ಎತ್ತಿ ನೋಡಿದನು. ಅಲ್ಲಿ ವೃದ್ಧಸ್ತ್ರೀಯ ಜಾಗದಲ್ಲಿ ಸಾಕ್ಷಾತ್ ಸರಸ್ವತಿ ದೇವಿ ನಿಂತಿದ್ದಳು. ಆಕೆಗೆ ಕೈಮುಗಿದಾಗ ಸರಸ್ವತಿ ದೇವಿ ಹೇಳಿದಳು.

"ಯಾವುದೇ ಜ್ಞಾನಿಯಲ್ಲಿ ಉಂಟಾಗುವ ಅಹಂಕಾರವು ಆತನ ಸಾಧನೆಗಳನ್ನು ಕಡಿಮೆಯಾಗಿಸುತ್ತವೆ. ನೀನು ಖಂಡಿತವಾಗಿಯೂ ವಿದ್ಯಾವಂತ. ಆದರೆ ನಿನ್ನ ಶಿಕ್ಷಣದೊಂದಿಗೆ, ನಿನ್ನ ಹೃದಯವನ್ನು ತುಂಬಲು  ದುರಹಂಕಾರಕ್ಕೂ ನೀನು ಜಾಗವನ್ನು ನೀಡಿದೆ. ಆದ್ದರಿಂದ, ನಿನಗೆ ಮಾರ್ಗದರ್ಶನ ನೀಡಲು ನಾನೇ ಬರಬೇಕಾಯಿತು. ನಿಜವಾದ ವಿದ್ವಾಂಸರ ಗುರುತು ಅವರ ಜ್ಞಾನವಲ್ಲ,  ಅವರ ನಮ್ರತೆ!.  ವಿದ್ಯೆಯಿಂದ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು, ಗರ್ವ ಅಹಂಕಾರವಲ್ಲ..! ನಿನ್ನ ವಿದ್ಯೆಗೆ ದೊರೆತ ಮಾನ ಸನ್ಮಾನಗಳನ್ನೇ ನೀನು ಸರ್ವಸ್ವವೆಂದು ಭಾವಿಸಿದೆ. ನಿನ್ನ ಕಣ್ಣು ತೆರೆಸುವುದು ಅವಶ್ಯಕವಾಗಿತ್ತು"

ಕಾಳಿದಾಸನಿಗೆ ತನ್ನ ತಪ್ಪಿನ ಅರಿವಾಯಿತು. ಕೈಮುಗಿದು ಕ್ಷಮೆಯಾಚಿಸಿದನು.
ತಾಯಿ ಸರಸ್ವತಿ, ಮುಗುಳ್ನಕ್ಕು ಕೊನೆಗೆ ಬಾಯಾರಿಕೆಯಿಂದ ತಣಿದಿದ್ದ ಕಾಳಿದಾಸನಿಗೆ ನೀರಿನ ಮಡಕೆಯನ್ನು ಅರ್ಪಿಸಿದಳು. ಅವನು ಕೃತಜ್ಞತೆಯಿಂದ ಹೊಳೆಯುವ ಕಣ್ಣುಗಳಿಂದ ಮಡಕೆಯನ್ನು ಸ್ವೀಕರಿಸಿದನು ಮತ್ತು ಅಮೃತಕ್ಕಿಂತ ಸಿಹಿಯಾದ ನೀರನ್ನು ಕುಡಿದನು!

ಅದು ಅವನ ನೀರಿನ ಬಾಯಾರಿಕೆ ಮಾತ್ರವಲ್ಲ, ಜ್ಞಾನದ ದಾಹವನ್ನೂ ತಣಿಸಿತು.

ನೀತಿ:  ವಿದ್ಯಾ ದಧಾತಿ ವಿನಯಂ ,  ವಿದ್ಯೆಗೆ ವಿನಯವೇ ಭೂಷಣ

ಪಕ್ವತೆ ಉನ್ನತಿಯ ಲಕ್ಷಣ , Maturity is sign of Progress

ಒಮ್ಮೆ ಒಬ್ಬ ರಾಜ ಬೇಟೆಯಾಡಲು ಹೊರಟ. ಕಾಡಿನಲ್ಲಿ ನುಗ್ಗಿದ. ಉತ್ಸಾಹದಲ್ಲಿ ತುಂಬ ದೂರ ಹೋದದ್ದೇ ತಿಳಿಯಲಿಲ್ಲ. ಸಾಯಂಕಾಲವಾಗುತ್ತ ಬಂದಿತು. ಹಸಿವೆ, ನೀರಡಿಕೆಗಳು ಬಾಧಿಸುತ್ತಿವೆ. ಮರಳಿ ಪಟ್ಟಣಕ್ಕೆ ಹೋಗಬೇಕಾದರೆ ದಾರಿ ತಿಳಿಯುತ್ತಿಲ್ಲ.

ಅಷ್ಟರಲ್ಲಿ ರಾಜನನ್ನು ಹುಡುಕಿಕೊಂಡು ಸೈನಿಕನೊಬ್ಬ ಬಂದ. ಇಬ್ಬರೂ ಮುಂದೆ ಬರುವಾಗ ಮಂತ್ರಿಯೂ ಸೇರಿಕೊಂಡ. ಮೂವರೂ ಸೇರಿ ತಮ್ಮ ಪಟ್ಟಣದ ಮಾರ್ಗ ಅರಸುತ್ತಿದ್ದರು. ಕೊನೆಗೆ ಕಾಡಿನ ಕೊನೆಗೆ ಬಂದು ಒಂದು ಪುಟ್ಟ ಹಳ್ಳಿ ಪ್ರವೇಶಿಸಿದರು. ದಾರಿಯನ್ನು ಕೇಳಲು ಮೂವರೂ ಮೂರು ದಿಕ್ಕಿಗೆ ನಡೆದರು.

ರಾಜನಿಗೆ ಒಂದು ದಾರಿ ಸಿಕ್ಕಿತು, ಆದರೆ ದಾರಿಯಲ್ಲಿ ಯಾರೂ ಇರಲಿಲ್ಲ. ಮುಂದೆ ರಸ್ತೆ ಎರಡು ಭಾಗವಾಗುತ್ತಿತ್ತು. ಆ ಸ್ಥಳದಲ್ಲೇ ಮರದ ಕೆಳಗೆ ಒಬ್ಬ ಸನ್ಯಾಸಿ ಕುಳಿತಿದ್ದ. ಅವನನ್ನು ನೋಡಿದರೆ ಪೂರ್ಣ ಅಂಧನಂತೆ ತೋರುತ್ತಿತ್ತು. ರಾಜ ಹೋಗಿ, `ಪೂಜ್ಯ ಸನ್ಯಾಸಿಗಳೇ ವಂದನೆಗಳು. ನಾನು ದಾರಿ ತಪ್ಪಿಸಿಕೊಂಡಿದ್ದೇನೆ.

ನನಗೆ ಪಟ್ಟಣ ಸೇರಬೇಕಾಗಿದೆ. ಮುಂದಿರುವ ಎರಡು ದಾರಿಗಳಲ್ಲಿ ಯಾವುದು ಸರಿ ಎಂದು ಮಾರ್ಗದರ್ಶನ ನೀಡಬಲ್ಲಿರಾ` ಎಂದು ಕೇಳಿದ. ಆಗ ಅಂಧ ಸನ್ಯಾಸಿ, `ದಯವಿಟ್ಟು ಎಡಗಡೆಯ ರಸ್ತೆಯಲ್ಲೇ ಹೋಗಿ ಅದು ನಿಮ್ಮನ್ನು ಪಟ್ಟಣಕ್ಕೇ ತಲುಪಿಸುತ್ತದೆ` ಎಂದ. ಮಂತ್ರಿಯೂ ಅಲ್ಲಲ್ಲಿ ತಿರುಗಾಡಿ ಮತ್ತೆ ಅಲ್ಲಿಗೇ ಬಂದ. ಅವನೂ ಸನ್ಯಾಸಿಯನ್ನು ಅದೇ ಪ್ರಶ್ನೆ ಕೇಳಿ ಅದೇ ಉತ್ತರ ಪಡೆದುಕೊಂಡ.

ಆದರೆ ಸನ್ಯಾಸಿ ದಾರಿ ತೋರುವಾಗ, `ಇದೇ ತಾನೇ ತಮ್ಮ ರಾಜರು ಹೀಗೆಯೇ ಹೋದರು` ಎಂದ. ಕೆಲ ಸಮಯದ ನಂತರ ಸೈನಿಕ ಅಲ್ಲಿಗೇ ಬಂದ. ಸನ್ಯಾಸಿಯನ್ನು ದಾರಿ ಕೇಳಿದ. ಆಗ ಸನ್ಯಾಸಿ `ಹೌದಪ್ಪ, ಎಡಗಡೆಯ ದಾರಿಯನ್ನೇ ಹಿಡಿದು ಹೋಗು. ಅದೇ ಮಾರ್ಗವಾಗಿ ಇದೀಗ ನಿಮ್ಮ ರಾಜರು ಮತ್ತು ಮಂತ್ರಿಗಳು ಹೋಗಿದ್ದಾರೆ` ಎಂದ.

ನಂತರ ಮೂವರೂ ದಾರಿಯಲ್ಲಿ ಸೇರಿಕೊಂಡಾಗ ಸನ್ಯಾಸಿ ಮಾರ್ಗದರ್ಶನ ಮಾಡಿದ ವಿಷಯ ಚರ್ಚೆಗೆ ಬಂತು. ರಾಜನಿಗೆ ಒಂದು ಸಂದೇಹ ಬಂತು. ತಾನು ಸನ್ಯಾಸಿಯನ್ನು ಕೇವಲ ದಾರಿ ಕೇಳಿದೆನೇ ಹೊರತು ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ಆದರೂ ತಾನು ರಾಜ ಎಂದು ಅವನಿಗೆ ಹೇಗೆ ಗೊತ್ತಾಯಿತು. ಹಾಗಾದರೆ ಆತ ಅಂಧತ್ವದ ನಾಟಕ ಮಾಡುತ್ತಿದ್ದಾನೆಯೇ. ಮಂತ್ರಿಗೂ, ಸೈನಿಕನಿಗೂ ಇದೇ ಪ್ರಶ್ನೆ ಬಂದಿತು. 

ಪಕ್ವತೆ ಉನ್ನತಿಯ ಲಕ್ಷಣ , Maturity is sign of Progress


ಮೂವರೂ ಮರಳಿ ಸನ್ಯಾಸಿಯ ಕಡೆಗೆ ನಡೆದರು. ಆತ ನಿಜವಾಗಿಯೂ ಅಂಧನೇ. ನಮ್ಮ ಪರಿಚಯ ತಮಗೆ ಹೇಗೆ ಆಯಿತು ಎಂದು ಕೇಳಿದಾಗ ಆತ ಹೇಳಿದ, `ತಾವು ದಾರಿ ಕೇಳುವಾಗ ಪೂಜ್ಯ ಸನ್ಯಾಸಿಗಳೇ ಎಂದು ಕರೆದಿರಿ. ತಮ್ಮ ಧ್ವನಿಯಲ್ಲಿದ್ದ ವಿನಯ, ಗಾಂಭೀರ್ಯ ತಾವು ರಾಜರೇ ಇರಬೇಕೆಂದು ತಿಳಿಸಿತು.

ನಂತರ ಬಂದ ಮಂತ್ರಿಗಳು ಸಾಧುಗಳೇ ಎಂದು ಕರೆದರು. ಆಮೇಲೆ ಬಂದ ಸೈನಿಕ ಏ ಕುರುಡ ಬಾಬಾ ಎಂದು ಕೂಗಿದ. ನೀವು ಮೂವರೂ ಬಳಸಿದ ಭಾಷೆ ಮತ್ತು ಧ್ವನಿಯಿಂದ ನಿಮ್ಮ ಸ್ಥಾನಗಳನ್ನು ಊಹಿಸಿದೆ`. ಯಾವಾಗಲೂ ನಮ್ಮ ನಾಲಿಗೆ ನಮ್ಮ ಮಟ್ಟ ಸಾರುತ್ತದೆ. ಅಂತೆಯೇ ಉನ್ನತಸ್ಥಾನಕ್ಕೇರಿದವರು ತಮ್ಮ ಭಾಷೆಯನ್ನೂ, ಧ್ವನಿಯನ್ನು ಮೃದುಗೊಳಿಸಿಕೊಳ್ಳಬೇಕು. ಮೃದುತ್ವ ಪರಿಪಕ್ವವಾದದ್ದರ ಲಕ್ಷಣ.

ಮರ ಎತ್ತರವಾದಷ್ಟೂ ಬಾಗುತ್ತದೆ, ಹಣ್ಣು ತುಂಬಿದ ಮರವೂ ಬಾಗುತ್ತದೆ. ಒಗರು, ಹುಳಿಯಾಗಿದ್ದ ಬಿರುಸು ಕಾಯಿ ಮಾಗಿದ ಹಾಗೆ ಮೃದುವಾಗಿ, ಸಿಹಿಯಾಗುತ್ತದೆ. ಈ ಪಕ್ವತೆಯೇ ಉನ್ನತಿಯ ಲಕ್ಷಣ.


Terms | Privacy | 2024 🇮🇳
–>