-->

Laddu Gopala , a short story of Shri Krishna Laddu

ಬೃಂದಾವನದ  ಸಮೀಪ  ಗ್ರಾಮದಲ್ಲಿ  ಕುಂದಣದಾಸನೆಂಬ ಕೃಷ್ಣ ಭಕ್ತನಿದ್ದ.  ಅವನ ಹತ್ತಿರ ಕೊಳಲು  ನುಡಿಸುತ್ತಿರುವ  ಶ್ವೇತ ವರ್ಣದ, ಶೋಭಿಸುವ ಆಭರಣಗಳಿಂದ ಅಲಂಕೃತನಾದ ಸುಂದರ ಹಾಗೂ ಮುದ್ದಾದ ಕೃಷ್ಣನ ವಿಗ್ರಹವಿತ್ತು. ಅವನಿಗೆ ಅದು ಬರೀ ಕೃಷ್ಣ ನ ವಿಗ್ರಹವಾಗಿರದೆ, ಕೃಷ್ಣನೇ ತನ್ನ ಮನೆಯಲ್ಲಿ ಇದ್ದಾನೆ ಎಂದು ತಿಳಿದಿದ್ದನು. ಅವನು ಪ್ರತಿನಿತ್ಯ ಮುಂಜಾನೆ ಕೃಷ್ಣನ ಅಲಂಕಾರಕ್ಕಾಗಿ ಹೂವು ಗಳನ್ನು ತಂದು ಸುಂದರವಾದ ಮಾಲೆ ಮಾಡಿ ಕೃಷ್ಣನಿಗೆ ಹಾಕುತ್ತಿದ್ದ. ಕೃಷ್ಣನಿಗೆ  ಹಾಲು, ಬೆಣ್ಣೆ ,ತುಪ್ಪ, ಸಿಹಿ  ಇಷ್ಟವೆಂದು , ಹಣ್ಣುಗಳನ್ನು ಹಾಗೂ ದಿನಕ್ಕೊಂದು ತರದ ತುಪ್ಪ, ಕೇಸರಿ, ಸಕ್ಕರೆ, ಹಾಕಿ
ಉಂಡೆಗಳನ್ನು  ಮಾಡಿ ಪ್ರೀತಿಯಿಂದ  ಕೃಷ್ಣನಿಗೆ ಅರ್ಪಣೆ ಮಾಡುತ್ತಿದ್ದ. ಒಂದು ದಿನವೂ ತಪ್ಪಿಸುತ್ತಿರಲಿಲ್ಲ ಮತ್ತು ಎಲ್ಲಿ  ಕೃಷ್ಣನಿಗೆ ನೈವೇದ್ಯ ತಪ್ಪಿದರೆ ಎಂಬ ಆತಂಕದಿಂದ  ಯಾವುದೇ ಊರಿಗೆ ಹೋಗುತ್ತಿರಲಿಲ್ಲ. ಅದೇ ಊರಿನ ಸುತ್ತಮುತ್ತ ಮಾತ್ರ ಭಾಗವತ ಪ್ರವಚನ, ಹರಿಕಥೆ, ಮಾಡುತ್ತಿದ್ದನು. ಒಂದು ರಾತ್ರಿಯೂ ಎಲ್ಲೂ  ತಂಗುತ್ತಿರಲಿಲ್ಲ.

ಹೀಗಿರುವಾಗ, ಕಾರ್ತಿಕ ಮಾಸ ಬಂದಿತು. ಒಮ್ಮೆ ಸ್ವಲ್ಪ ದೂರದ ಊರಿನಲ್ಲಿ
ಭಾಗವತ ಮಾಡಬೇಕೆಂದು ಊರಿನ ಪ್ರಮುಖರು  ಬಂದು ಕರೆದರು.‌ ಕುಂದಣನು ಆಗುವುದಿಲ್ಲ ಎಂದು ಹೇಳಲು ಮನಸ್ಸಾಗದೆ ಒಪ್ಪಿಕೊಂಡನು. ಅವನು ಹೋಗುವ ಮೊದಲು ಮನೆಯಲ್ಲಿ ಏಳು ದಿನಗಳ ಕಾಲ ಎಡೆಬಿಡದೆ ಭಾಗವತ ಪಾರಾಯಣವನ್ನು ಮಾಡಿದನು. ಹೊರಡುವ ಸಮಯಕ್ಕೆ ಕೃಷ್ಣನಿಗೆ ಎಂದು ಮಾಡಿದ ಲಾಡು ಉಂಡೆಗಳನ್ನು ಹಾಕಿದ ಬಟ್ಟಲು ತಂದು ಅವನ ಮಗ ಮುಕುಂದನಿಗೆ ಮಗು ನಾನು ಇಂದು ಪಕ್ಕದ ಊರಿಗೆ ಭಾಗವತ ಮಾಡಲು ಹೊರಟಿದ್ದೇನೆ.  ನಾನು ಬರುವುದು ತಡವಾಗುತ್ತದೆ.  ಆದುದರಿಂದ ಇಂದು ನೀನು ಕೃಷ್ಣನಿಗೆ ಈ ಲಾಡುವನ್ನು ಭೋಜನಕ್ಕೆ ಕೊಡು ಎಂದು ಬಟ್ಟಲನ್ನು ಕೊಟ್ಟು, ಭಾಗವತ ಮಾಡಲು ಪಕ್ಕದ ಊರಿಗೆ ಹೊರಟನು. ಮುಕುಂದನು, ಅಪ್ಪಾಜಿ ನೀವೇನು ಯೋಚನೆ ಮಾಡಬೇಡಿ ನಾನು  ಕೃಷ್ಣನನ್ನು ಉಪವಾಸ ಇಡುವುದಿಲ್ಲ  ಭೋಜನವನ್ನು ಕೊಡುತ್ತೇನೆ ಎಂದನು. ಕುಂದಣನು ಸಮಾಧಾನದಿಂದ ಭಾಗವತ ಸಪ್ತಾಹ ಮಾಡಲು ಊರಿಗೆ ಹೊರಟನು.

ಮುಕುಂದನು, ತಂದೆ ಕೊಟ್ಟ ಉಂಡೆಯ ತಟ್ಟೆಯನ್ನು ತೆಗೆದುಕೊಂಡು ಕೃಷ್ಣನ ವಿಗ್ರಹದ ಮುಂದೆ ಇಟ್ಟು,  ಕೃಷ್ಣ ಭೋಜನ ಮಾಡು ಎಂದನು. ಸ್ವಲ್ಪ ಸಮಯ ಬಿಟ್ಟು ನೋಡುತ್ತಾನೆ. ಅವನು ಕೊಟ್ಟ ಭೋಜನದ ತಟ್ಟೆ ಹಾಗೆ ಇರುವುದನ್ನು ನೋಡಿದನು. ಹೇ ಭಗವಾನ್ ಕೃಷ್ಣ, ನೀನು ಏಕೆ ಲಡ್ಡು ತಿನ್ನುತ್ತಿಲ್ಲ, ನೀನು ತಿನ್ನದೇ ಹೋದರೆ, ಅಪ್ಪ ನನಗೆ ಬೈಯುತ್ತಾನೆ, ನೀನು ಇದನ್ನು ತಿನ್ನಲೇಬೇಕು ನೀನು ತಿನ್ನುವ ತನಕ ನಾನು ಭೋಜನವನ್ನು ಮಾಡುವುದಿಲ್ಲ ಎಂದು ಅಲ್ಲೇ ಕುಳಿತನು. ಆದರೂ ಭೋಜನದ ತಟ್ಟೆ ಹಾಗೆ ಉಳಿದಿತ್ತು, ಈಗ ಮುಕುಂದನು, ಏ ಕೃಷ್ಣಾ, ನನಗೆ ತುಂಬಾ ಹಸಿವಾಗುತ್ತಿದೆ, ಆದರೂ ನೀನು ತಿನ್ನದೇ ನಾನು ಏನೂ ತಿನ್ನುವುದಿಲ್ಲ ಎಂದು ಅಳುತ್ತಾ ಕುಳಿತನು. ಬಾಲಕ ಅಳುವುದನ್ನು  ನೋಡಿದ ಕೃಷ್ಣನು ವಿಗ್ರಹದೊಳಗಿಂದ, ಪುಟ್ಟ ಬಾಲಕನಂತೆ ಹೊರಬಂದು ಆ ಹುಡುಗ ಇಟ್ಟಿದ್ದ ಲಾಡು ಉಂಡೆಗಳನ್ನೆಲ್ಲ ಸೇವಿಸಿದನು.
ಇದನ್ನು ನೋಡಿ ಮುಕುಂದನಿಗೆ ತುಂಬಾ ಖುಷಿಯಾಯಿತು. ನಂತರ ತಾನು ಊಟ ಮಾಡಿದನು.

Laddu Gopala , a short story of Shri Krishna Laddu


ಕುಂದಣದಾಸ ಭಾಗವತ ಮುಗಿಸಿ ಮನೆಗೆ ಬರುವ ಹೊತ್ತಿಗೆ ಕತ್ತಲೆಯಾಗಿತ್ತು
ಮನೆಗೆ ಬಂದು, ಮಗನ ಬಳಿ, ಕೃಷ್ಣನಿಗೆ  ಭೋಜನ ಕೊಟ್ಟಿದ್ದೀಯಾ ಎಂದು ಕೇಳಿದನು, ಹಾ ಅಪ್ಪ ಭೋಜನ ಕೊಟ್ಟೆ ಕೃಷ್ಣ ಸೇವಿಸಿದನು ಎಂದನು.
ತಂದೆಯು ಮಗನಿಗೆ ಲಾಡು ಪ್ರಸಾದ ತಂದು ಕೊಡು ಎಂದನು. ಆದರೆ ಮಗ ಹೇಳಿದ ಅಪ್ಪಾ ಎಲ್ಲಾ ಭೋಜನವನ್ನು ಕೃಷ್ಣನೇ ಸೇವಿಸಿದ್ದಾನೆ. ಅವನಿಗೆ ಇಂದು  ಬಹಳ ಹಸಿವೆಯಾಗಿತ್ತು ಎಂದು ಕಾಣುತ್ತದೆ. ಎಲ್ಲಾ ಲಾಡುವನ್ನು ಅವನೇ ತಿಂದನು ಎಂದನು. ಕುಂದಣದಾಸ ಮಗನ ಮಾತನ್ನು ಕೇಳಿ ಅಚ್ಚರಿ ಗೊಂಡನು. ಹಾಗೂ ತನ್ನ ಮಗನಿಗೆ ಹಸಿವು ಜಾಸ್ತಿಯಾಗಿತ್ತು ಎಂದು ಕಾಣುತ್ತೆ ಎಲ್ಲಾ ಅವನೇ ತಿಂದಿರಬೇಕು ಎಂದುಕೊಂಡನು. ಆದರೂ ಕುಂದಣದಾಸನಿಗೆ ಸಮಾಧಾನವಾಗಲಿಲ್ಲ. ಕೆಲವು ದಿನ ಮಗನೇ  ಕೃಷ್ಣನಿಗೆ ಭೋಜನ ಕೊಡುವಂತೆ ಹೇಳಿ ಅವನು ಹೊರಗಿನ ಕೆಲಸಕ್ಕೆ ಹೋಗುತ್ತಿದ್ದ. ಆನಂತರ ಪ್ರಸಾದ ಕೇಳಿದರೆ ಪ್ರತಿದಿನ ಅದೇ ಉತ್ತರ ಬರುತ್ತಿತ್ತು.

ಒಂದು ದಿನ ಪರೀಕ್ಷಿಸಬೇಕೆಂದು ಮಗನ ಕೈಯಲ್ಲಿ ಉಂಡೆಗಳನ್ನು ತುಂಬಿಸಿದ
ತಟ್ಟೆಯನ್ನು ಕೊಟ್ಟು ಕೃಷ್ಣನಿಗೆ ಭೋಜನ ಕೊಡುವಂತೆ ಹೇಳಿ. ಮರೆಯಲ್ಲಿ ನಿಂತು ನೋಡುತ್ತಿದ್ದನು.  ಬಾಲಕನು ಉಂಡೆ ತಟ್ಟೆಯನ್ನು ತೆಗೆದುಕೊಂಡು ಹೋಗಿ ಎಂದಿನಂತೆ ಕೃಷ್ಣನ ವಿಗ್ರಹದ ಮುಂದೆ ಇಟ್ಟು  ಭೋಜನ ಸ್ವೀಕರಿಸು ಎಂದು ಹೇಳಿದನು. ಸ್ವಲ್ಪ ಹೊತ್ತಿಗೆ ವಿಗ್ರಹದೊಳಗಿಂದ ಬಾಲರೂಪಿ ಕೃಷ್ಣನು ಹೊರಗೆ ಬಂದು ಅವನು ಇಟ್ಟ ಉಂಡೆಗಳಲ್ಲಿ ಒಂದು ಉಂಡೆಯನ್ನು ತಿನ್ನುತ್ತಾ ಇನ್ನೊಂದು ಉಂಡೆಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡನು.  ಆ ಸಮಯಕ್ಕೆ ಓಡಿ ಬಂದ ಕುಂದಣದಾಸನು,  ಬಾಲರೂಪಿ ಕೃಷ್ಣನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಅದೇ ಕ್ಷಣದಲ್ಲಿ, ಉಂಡೆ  ಹಿಡಿದುಕೊಂಡ  ಕೃಷ್ಣನು ಹಾಗೆಯೇ ಅದೇ ರೂಪದಲ್ಲಿ  ಪ್ರತಿಮೆಯಾಗಿ ಅಲ್ಲಿಯೇ ನೆಲೆಸಿದನು. ಕುಂದಣ ದಾಸನು, ಪ್ರಭು ಇಷ್ಟು ವರ್ಷಗಳಿಂದ ನಾನು ಪೂಜೆ ಮಾಡುತ್ತಾ ಬಂದರುವೆ,  ನನಗೆ ಒಮ್ಮೆಯೂ ದರ್ಶನ  ಕೊಟ್ಟಿರಲಿಲ್ಲ. ಆದರೆ ಭಕ್ತಿ, ಪೂಜೆ ಎಂದರೇನು ಎಂದು ಅರಿಯದ ನನ್ನ ಮಗನಿಗೆ ಪ್ರತಿನಿತ್ಯ ದರ್ಶನ ಕೊಟ್ಟೆಯಲ್ಲ ಪ್ರಭು ನಿನ್ನ ಲೀಲೆಯನ್ನು ಬಲ್ಲವರಾರು ? ಎಂದು ಹೇಳುತ್ತಾ ಮನದಣಿಯ ಕೃಷ್ಣನನ್ನು ಪ್ರಾರ್ಥಿಸಿದನು. ಭಗವಂತ ಲಡ್ಡು ಹಿಡಿದ ರೂಪದಲ್ಲಿ ನನ್ನ ಮನೆಯಲ್ಲಿಯೇ ನೆಲೆಸಿದೆಯಲ್ಲ ಅಷ್ಟೇ ಸಾಕು ಎಂದು ಸಮರ್ಪಣಾ ಭಾವದಿಂದ  ಸಂಪೂರ್ಣ ವಾಗಿ ಭಗವಂತನಿಗೆ ಶರಣಾದನು. ಕೈಯಲ್ಲಿ ಲಡ್ಡು ಹಿಡಿದುಕೊಂಡ  ಬಾಲಕೃಷ್ಣ ಪ್ರತಿಮೆಯಾದ್ದರಿಂದ 'ಲಡ್ಡುಗೋಪಾಲ' ಎಂದು ಪ್ರಸಿದ್ಧಿಯಾಯಿತು. ಲಡ್ಡು ಗೋಪಾಲನಿಗೆ ಎಲ್ಲರೂ ಲಡ್ಡುಗಳನ್ನೇ ಮಾಡಿ ತಂದು ಅರ್ಪಿಸುತ್ತಾರೆ.

–>