-->

ಶ್ರೀರಾಮಚಂದ್ರನ ಗುಣವಾಚನ ನಾರದರಿಂದ ಮತ್ತು ವಾಲ್ಮೀಕಿ ಋಷಿಗಳಿಂದ ರಾಮಾಯಣಕ್ಕೆ ಪೀಠಿಕೆ

ವಾಲ್ಮೀಕಿ ಋಷಿಗಳು ನಾರದರನ್ನು ಕೇಳಿದರು. :
ಈ ಲೋಕದಲ್ಲಿ ಯಾವ ಪುರುಷನು ಗುಣವಂತನೂ, ವೀರನೂ, ಕೃತಜ್ಞನೂ, ಧರ್ಮಜ್ಞನೂ, ಸತ್ಯವಾದಿಯೂ, ಧೃಡಸಂಕಲ್ಪನೂ, ಪ್ರಾಣಿದಯ ವುಳ್ಳವನೂ, ಕ್ರೋಧರಹಿತನೂ, ಅಸೂಯೆರಹಿತನೂ ಆಗಿದ್ದಾನೆ. ಇವೆಲ್ಲವೂ ಉಳ್ಳ ಪುರುಷನು ಯಾರಿದ್ದಾನೆ ?

ಆಗ ನಾರದರು ಉತ್ತರಿಸುತ್ತಾರೆ - ನೀವು ಹೇಳಿದ ಅಷ್ಟೂ ಗುಣ ಒಬ್ಬನಲ್ಲೇ ಇರುವುದು ದುರ್ಲಭ.  ಆದರೂ ಇಷ್ಟೆಲ್ಲಾ ಗುಣಗಳು ಹೊಂದಿರುವನೊಬ್ಬ ಇದ್ದಾನೆ, ಅವನೇ ಇಕ್ಷ್ವಾಕು ವಂಶದ ದಶರಥ ಪುತ್ರ ಶ್ರೀರಾಮಚಂದ್ರ.

ಅವನು ಮನೋಜಯವುಳ್ಳವನೂ, ಮಹಾ ಪರಾಕ್ರಮಿಯೂ, ಬುದ್ಧಿವಂತ, ಜಿತೇಂದ್ರಿಯನೂ, ನೀತಿವಂತ, ಶತ್ರುವಿನಾಶಕ, ಐಶ್ವರ್ಯಶಾಲಿ. ವಿಶಾಲ ಬಾಹು, ಶಂಖದಂತೆ ರೇಖಾತ್ರಯವಿರುವ ಕಂಠ, ಪುಷ್ಟವಾದ ಗಂಡಸ್ದಲಗಳು, ವಿಶಾಲವಾದ ಎದೆ, ಆಜಾನುಬಾಹು, ಸುಂದರವಾದ ಹಣೆ, ಗಂಭೀರ ನಡಿಗೆ, ಅಗಲವಾದ ವಕ್ಷಸ್ದಳ, ಶರಣಾಗತ ರಕ್ಷಕ, ಗಾಂಭೀರ್ಯದಲ್ಲಿ ಸಮುದ್ರದಂತೆ, ಧೈರ್ಯದಲ್ಲಿ ಹಿಮವಂತನಂತೆ, ಚಂದ್ರನಂತೆ ಆನಂದಕಾರಕ, ಕೋಪಪ್ರಕಟಿಸಿದರೆ ಕಾಲಾಗ್ನಿ, ತಾಳ್ಮೆಯಲ್ಲಿ ಭೂದೇವಿ, ದಾನದಲ್ಲಿ ಕುಬೇರ.  ಹೀಗೆಂದು ಹೇಳಿ ಇಡೀ ರಾಮಾಯಣವನ್ನು ಸಂಕ್ಷಿಪ್ತವಾಗಿ ನಾರದರು ವಾಲ್ಮೀಕಿಗಳಿಗೆ ಹೇಳಿದರು.

ನಂತರ ವಾಯು ಮಾರ್ಗದಲ್ಲಿ ನಾರದರು ತೆರಳಲು, ವಾಲ್ಮೀಕಿಗಳು ತಮಸಾ ನದಿಯಲ್ಲಿ ಸ್ನಾನ ಮಾಡಲು ಹೊರಟರು. ಅಲ್ಲಿ ಪರಸ್ಪರ ಒಂದನ್ನೊಂದು ಹೊಂದಿಕೊಂಡು ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಯ ನೋಡಿದರು. ಆ ಸಮಯದಲ್ಲಿ ಒಬ್ಬ ಬೇಡನು ಗಂಡು ಪಕ್ಷಿಗೆ ಬಾಣ ಪ್ರಯೋಗಿಸಿ ಕೊಂದನು. ಆಗ ಹೆಣ್ಣು ಪಕ್ಷಿಯು ದೀನಸ್ವರದಿಂದ ಗೋಳಿಡುತ್ತಿತ್ತು. ವಾಲ್ಮೀಕಿ ಋಷಿಗಳಿಗೆ ಮರುಕವಾಯಿತು. ವ್ಯಾಧನು ಮೃಗಪಕ್ಷಿಗಳ ಕೊಲ್ಲುವುದು ಧರ್ಮವಾದರೂ ಕಾಮ ಭೋಗದಲ್ಲಿದ್ದಾಗ ಕೊಲ್ಲುವುದು ಅಧರ್ಮ. ಎಲೈ ವ್ಯಾಧನೇ ನೀನು ಜಾಸ್ತಿ ಕಾಲ ಬದುಕಬಾರದು. 
 
ಶ್ರೀರಾಮಚಂದ್ರನ ಗುಣವಾಚನ ನಾರದರಿಂದ ಮತ್ತು ವಾಲ್ಮೀಕಿ ಋಷಿಗಳಿಂದ ರಾಮಾಯಣಕ್ಕೆ ಪೀಠಿಕೆ

 ಆಗ ಅವರ ವದನದಿಂದ ಬಂದ‌ ಶ್ಲೋಕವೇ : *ಮಾ ನಿಷಾದ, ಪ್ರತಿಷ್ಠಾಂ ತ್ವಮಗಮ: ಶಾಶ್ವತೀಸ್ಸಮಾಃ* ! *ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮಂ* ! ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು!” ಆಗ ವಾಲ್ಮೀಕಿಗಳ ಅನುಗ್ರಹಕ್ಕಾಗೇ ಬಂದಂತಹ ಬ್ರಹ್ಮ ದೇವರು ಅವರನ್ನು ಆಶೀರ್ವದಿಸಿ, "ನೀನು ಹೇಳಿದ ಈ ವಾಕ್ಯ ಛಂದೋ ಬದ್ಧವಾಗಿದೆ. ನಿನ್ನ ಬಾಯಿಯಿಂದ ಈ ಮಾತು ಬರಲು ನನ್ನ ಇಚ್ಛೆಯೇ ಕಾರಣ. ನೀನು ನಾರದರಿಂದ ಕೇಳಿದ ರಾಮಾಯಣವನ್ನು ವಿಸ್ತರಿಸು. ರಾಮ ಲಕ್ಷ್ಮಣ ಸೀತೆಯರ ಸಂಪೂರ್ಣ ಚರಿತ್ರೆ ಅವರ ಏಕಾಂತದಲ್ಲಾಗಲಿ, ಬಹಿರಂಗದಲ್ಲಾಗಲೀ ನಡೆದ ಬಗೆಯಂತೇ ನಿನಗೆ ಗೋಚರಿಸಲಿ. ನೀನು ರಚಿಸುವ ಯಾವ ಮಾತೂ ಸುಳ್ಳಾಗದಿರಲಿ. ‌ ಈ ಪ್ರಪಂಚದಲ್ಲಿ ಎಲ್ಲಿಯವರೆಗೆ ಪರ್ವತಗಳಿರುವುದೋ ನದಿಗಳಿರುವುದೋ ಅಲ್ಲಿಯವರೆಗೂ ಪ್ರಚಾದಲ್ಲಿರುವುದು". ‌ಹೀಗೆಂದು ಹೇಳಿದ ಬ್ರಹ್ಮ ದೇವರು ಅಂತರ್ಧಾನರಾದರು - ನರಹರಿ ಸುಮಧ್ವ
–>