-->

ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು?

1) ಹಂಡೆತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ.

2) ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ

3) ತಂಡುಲಾಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ ಇತ್ಯಾದಿ  ಸಿದ್ಧಪಡಿಸಿ.

4) ಮಂತ್ರಾಕ್ಷತೆ , ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಅವಾಹಿಸಿ.
ಮಮ ಗುರ್ವಂತರ್ಗತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕಂ ರಮಾಸಹಿತ ತ್ರಿವಿಕ್ರಮಂ ಆವಾಹಯಾಮಿ. ಪ್ರಸೀದ ಪ್ರಸೀದ ಭಗವನ್ ಆಗಚ್ಛ ಆಗಚ್ಛ
ಎಂದು ಕಲಶದಲ್ಲಿ ಹೂವು ಅಕ್ಷತೆ ಹಾಕಿ.
ನಂತರ ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ, ಯಜ್ನೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ಮಂಗಲಾರತಿ, ಮಂತ್ರಪುಷ್ಪ, ನಮಸ್ಕಾರ ಅರ್ಪಿಸಿ.

ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು?


5) ನಂತರ ಅಕ್ಷತೆ ಹೂವು ಕೈಯಲ್ಲಿ ಹಿಡಿದುಕೊಂಡು ಕಲಶದಲ್ಲಿ ಗಂಗಾದೇವಿಯನ್ನು ಅವಾಹಿಸಿ. .
ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ|
ನರ್ಮದೇ ಸಿಂಧು ಕಾವೇರೀ ಜಲೇ$ಸ್ಮಿನ್ ಸನ್ನಿಧಿಮ್ ಕುರು||
ಕಲಶಮಧ್ಯೆ ತ್ರಿವಿಕ್ರಮ ರೂಪಿಣಃ ಪುತ್ರಿಮ್ ಗಂಗಾಂ ಆವಾಹಯಾಮಿ
ಎಂದು ಅಕ್ಷತೆ ಹೂವು ಹಾಕಿ ಮುಂದಿನ ಮಂತ್ರಗಳಿಂದಲೂ  ಕಲಶದಲ್ಲಿ ಅಕ್ಷತೆ ಹಾಕಿ
ಭೂ: ಗಂಗಾಂ ಆವಾಹಯಾಮಿ, ಭುವಃ ಗಂಗಾಂ ಆವಾಹಯಾಮಿ, ಸ್ವ: ಗಂಗಾಂ ಆವಾಹಯಾಮಿ, ಭೂರ್ಭುವಸ್ವ: ಗಂಗಾಂ ಆವಾಹಯಾಮಿ.
 
ಆ ನಂತರ ಮೇಲೆ ಹೇಳಿದಂತೆ ಅಸನದಿಂದ ವಸ್ತ್ರವನ್ನು ಅರ್ಪಿಸಿ ಹರಿದ್ರಾ, ಕುಂಕುಮ, ಗಂಧ , ಪುಷ್ಪ ಅರ್ಪಿಸಿ

6) ಈ ಕೆಳಗಿನ ನಾಮಗಳಿಂದ ಅಕ್ಷತೆ ಹಾಕಿ
ನಂದಿನ್ಯೈ ನಮಃ, ನಲಿನ್ಯೆ ನಮಃ, ಸೀತಾಯೈ ನಮಃ , ಮಾಲತ್ಯೈ ನಮಃ , ಮಲಾಪಹಾಯೈ ನಮಃ, ವಿಷ್ಣುಪಾದಾಬ್ಜ ಸಂಭೂತಾಯೈ ನಮಃ, ಗಂಗಾಯೈ ನಮಃ, ತ್ರಿಪಥಗಾಮಿನ್ಯೈ ನಮಃ , ಭಾಗೀರಥ್ಯೈ ನಮಃ, ಭೋಗವತ್ಯೈ ನಮಃ, ಜಾಹ್ನವ್ಯೈ ನಮಃ, ತ್ರಿದಶೇಶ್ವರ್ಯೈ ನಮಃ, ಗಂಗಾಭಾಗೀರಥ್ಯೆ ನಮಃ

7) ಧೂಪವನ್ನು ತೋರಿಸಿ
ವನಸ್ಪತ್ಯುದ್ಭವೋ ದಿವ್ಯೋ ಗಂಧಾಢ್ಯೋ ಗಂಧ ಉತ್ತಮಃ |
ಆಘ್ರೇಯಃ ಸರ್ವದೇವಾನಾ೦ ಧೂಪೋ$ಯಂ ಪ್ರತಿಗೃಹ್ಯತಾಮ್ ||

 8) ಸಾಜ್ಯ೦ ತ್ರಿವರ್ತಿಸಂಯುಕ್ತ೦ ವಹ್ನಿನಾ ದ್ಯೋತಿತಂ ಮಯಾ|
ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ||
ಎನ್ನುತ್ತಾ ಮೂರು ಬತ್ತಿಯ ಆರತಿ ತೋರಿಸಿ ನಂದಿಸಿ

9) ಹಣ್ಣು ಕಾಯಿ ಮತ್ತು ಅನುಕೂಲ ಇದ್ದಲ್ಲಿ ಇತರ ನೈವೇದ್ಯಗಳನ್ನು ಮೊದಲು ತ್ರಿವಿಕ್ರಮ ದೇವರಿಗೆ ಅರ್ಪಿಸಿ ಅನಂತರ ರಮಾದೇವಿ , ಮುಖ್ಯಪ್ರಾಣ ದೇವರಿಗೆ ಅರ್ಪಿಸಿ. ಇದರೊಳಗಿಂದ ಸ್ವಲ್ಪ ಬೇರೊಂದು ತಟ್ಟೆಯಲ್ಲಿ ಬಡಿಸಿ ಭಾಗೀರಥಿ ದೇವಿಗೆ ಅದನ್ನು ನಿವೇದಿಸಿ.

10) ತದನಂತರ ಕರ್ಪೂರ ಹಾಕಿ ಮಹಾಮಂಗಳಾರತಿ ಮೊದಲು ತ್ರಿವಿಕ್ರಮ ದೇವರು ನಂತರ ರಮಾದೇವಿ ಪ್ರಾಣದೇವರಿಗೆ ತೋರಿಸಿ ಭಾಗೀರಥಿಗೆ ತೋರಿಸಿ.

11) ನಾರಾಯಣಾಯ ವಿದ್ಮಹೇ ವಾಸುದೇವಾಯ ದೀಮಹಿ ತನ್ನೋ ವಿಷ್ಣು: ಪ್ರಚೋದಯಾತ್
ಎನ್ನುತ್ತಾ ತ್ರಿವಿಕ್ರಮ ದೇವರಿಗೆ ಮಂತ್ರಪುಷ್ಪಾ೦ಜಲಿ ಅರ್ಪಿಸಿ.

12) ಭಾಗೀರಥೀ ದೇವಿಯನ್ನು ಪ್ರಾರ್ಥಿಸಿ.
ಹೇ ಗಂಗೇ! ತವ ಕೋಮಲಾಂಘ್ರಿ ನಲಿನಂ ರಂಭೋರು ನೀವಿಲಸತ್
ಕಾಂಚೀದಾಮ ತನೂದರಂ ಘನಕುಚ ವ್ಯಾಕೀರ್ಣಹಾರಂ ವಪು: |
ಸನ್ಮುದ್ರಾ೦ಗದ ಕಂಕಣಾವೃತಕರ೦ ಸ್ಮೇರಂ ಸ್ಫುರತ್ಕುಂಡಲಂ
ಸಾರಂಗಾಕ್ಷಿ ಜಲಾನ್ಯದಿಂದುರುಚಯೇ ಜಾನಂತಿ ತೇ$ನ್ಯೇ ಜಲಾತ್ |
ಪ್ರಾರ್ಥನಾಂ ಸಮರ್ಪಯಾಮಿ ಎನ್ನುತ್ತ ಅಕ್ಷತೆ ಹಾಕಿ ನಮಸ್ಕರಿಸಿ.

  13) ತದನಂತರ
ಯಸ್ಯ ಸ್ಮೃತ್ಯಾ ಶ್ಲೋಕ ಹೇಳಿ
ಅನೇನ ಅಸ್ಮದ್ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಗಂಗಾಜನಕ ಶ್ರೀರಮಾತ್ರಿವಿಕ್ರಮ ರೂಪಿ ಶ್ರೀಲಕ್ಷ್ಮೀನಾರಾಯಣ: ಪ್ರೀಯತಾಂ ಪ್ರೀತೋ ಭಾವತು ತತ್ ಸರ್ವಂ ಶ್ರೀಕೃಷ್ಣಾರ್ಪಣಾಮಸ್ತು ಎಂದು ಅರ್ಪಿಸಿ.

14) ಈಗ ಆ ಕಲಶದ ನೀರನ್ನು ಗಂಟೆ, ಜಾಗಟೆ, ಶಂಖಾದಿ ವಾದ್ಯ ಪುರಸ್ಸರ ತುಂಬಿಟ್ಟ ಹಂಡೆಯಲ್ಲಿ ಹಾಕಿ

 15) ಸೂರ್ಯಾಸ್ತದ ನಂತರ ಇಂದಿನಿಂದ ಆಕಾಶದೀಪವನ್ನು ಹಚ್ಚಬೇಕು.
ಒಬ್ಬ ಮನುಷ್ಯನ ಎತ್ತರದಷ್ಟು ಒಂದು ಕೋಲನ್ನು ಅಂಗಳದಲ್ಲಿ ನೆಟ್ಟು (ಬಿದಿರಿನ ಕೋಲು ಉಪಯೋಗಿಸಬಾರದು) ಆ ಕೋಲಿನ ತುದಿಯಲ್ಲಿ ಅಷ್ಟದಲ ಕಮಲಾಕಾರದಲ್ಲಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನೂ ಮಧ್ಯೆ ಒಂದು ದೊಡ್ಡ ದೀಪವನ್ನೂ ಹಚ್ಚಬೇಕು. ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆ ಉಪಯೋಗಿಸಬಾರದು.
ಇದನ್ನು ಒಂದು ತಿಂಗಳು ಹಚ್ಚಬೇಕು.

16) ಹಾಗೆಯೇ ಮನೆಯ ಹೊರಗೆ ಎತ್ತರದಲ್ಲಿ ಯಮದೇವರಿಗೆ ಕೂಡಾ ಇಂದು ಒಂದು ದೀಪ ಹಚ್ಚಬೇಕು

–>