-->

Life till 60 and after 60

ಅರವತ್ತರವರೆಗೆ ನಮ್ಮ ಬದುಕು, ನಮ್ಮ ನಿರ್ಧಾರ!
ಅರವತ್ತರ ನಂತರ ದೇವರ ಬದುಕು, ದೇವರ ನಿರ್ಧಾರ!!

ಅರವತ್ತರವರೆಗೆ ನಮ್ಮಿಚ್ಛೆ; ಅರವತ್ತರ ನಂತರ ದೇವರಿಚ್ಛೆ.
ಅರವತ್ತರವರೆಗೆ ಸ್ವಾಧೀನ; ಅರವತ್ತರ ನಂತರ ಪರಾಧೀನ.

ಅರವತ್ತರವರೆಗೆ ಸ್ವಾವಲಂಬನದ ಪ್ರವಚನ;
ಅರವತ್ತರ ನಂತರ ಪರಾವಲಂಬನ ಪಾಠ.

ಅರವತ್ತರವರೆಗೆ ನಾವುಗಳು ನಮ್ಮ ಕೈಯಲ್ಲಿ!
ಅರವತ್ತರ ನಂತರ ನಾವುಗಳು ದೇವರ ಕೈಯಲ್ಲಿ!!

ಅರವತ್ತರವರೆಗೆ ಎಲ್ಲವೂ ನನ್ನದು, ನನ್ನದು!!
ಅರವತ್ತರ ನಂತರ ಯಾವುದೂ ನನ್ನದಲ್ಲ;
ನನ್ನದೂ ನನ್ನದಲ್ಲ; ನನ್ನ ದೇಹವೂ ನನ್ನದಲ್ಲ!!!

ಅರವತ್ತರವರೆಗೆ ಜೀವನ ಜೋಕಾಲಿ!
ಅರವತ್ತರ ನಂತರ ಜೀವನ ಖಾಲಿ, ಖಾಲಿ!!

ಅರವತ್ತರವರೆಗೆ ನಿವೃತ್ತಿ ಐಚ್ಛಿಕ.
ಅರವತ್ತರ ನಂತರ ನಿವೃತ್ತಿ ಕಡ್ಡಾಯ.

ಅರವತ್ತರ ನಂತರವೂ ಹೆಚ್ಚು ಹೆಚ್ಚು
ಉತ್ಸಾಹ, ಲವಲವಿಕೆಯಿಂದ ಬದುಕುತ್ತಿದ್ದೇವೆ ಎಂದರೆ
ಅದು ದೇವರ ಕೊಡುಗೆ.

Life till 60 and after 60


ಅರವತ್ತರ ನಂತರ ದೈಹಿಕವಾಗಿ, ಮಾನಸಿಕವಾಗಿ,
ಬೌದ್ಧಿಕವಾಗಿ ಕುಸಿಯುತ್ತಿದ್ದೇವೆ ಎಂದರೆ ಅದು ದೇವರ ಇಚ್ಛೆ.

ಅರವತ್ತರವರೆಗೆ ಕವಿ ಹೇಳಿದಂತೆ
“ಬದುಕು ಜಟಕಾಬಂಡಿ”!
ಅರವತ್ತರ ನಂತರ  ಅದೇ  ಕವಿ ಹೇಳಿದಂತೆ
“ವಿಧಿಯದರ ಸಾಹೇಬ”!!

ಅರವತ್ತರ ನಂತರವೂ ಆಸೆ,
ಆಮಿಷಗಳು ಹೆಚ್ಚುತ್ತಲಿವೆ ಎಂದರೆ
ಅದು “ವಿನಾಶ ಕಾಲೇ ವಿಪರೀತಬುದ್ಧಿಃ” ಎಂದರ್ಥ.

ಅರವತ್ತರ ನಂತರವೂ ಅಧಿಕಾರದ
ದಾಹ, ಮೋಹಗಳ ವಿಸ್ತಾರವದು
ಅಂಕೆ ಮೀರುತ್ತಲಿದೆ, ಲಂಕೆ ಜಿಗಿಯುತ್ತಲಿದೆ ಎಂದರೆ
ಅದು ಆರಲಿರುವ ದೀಪ ಢಾಳಾಗಿ ಉರಿಯುತ್ತಲಿದೆ ಎಂದರ್ಥ.

ಅರವತ್ತರವರೆಗೆ ದೇವರಲ್ಲಿ ನಾವುಗಳು
“ಅವರಿಗೆ ಒಳ್ಳೆಯ ಬುದ್ಧಿ ಕೊಡು”,
 “ಇವರಿಗೆ ಒಳ್ಳೆಯ ಬುದ್ಧಿ ಕೊಡು”
ಎಂದು ಕೇಳಿಕೊಂಡರೆ ದೇವರು
ಅದಕ್ಕೆ “ಭಲೇ, ಭೇಷ್” ಎನ್ನುತ್ತಾನೆ.

 ಅರವತ್ತರ ನಂತರ ದೇವರಲ್ಲಿ ನಾವುಗಳು,
“ನಮಗೆ ಒಳ್ಳೆಯ ಬುದ್ಧಿ ಕೊಡು”,
“ನಮಗೆ ಅಂತರಂಗಶುದ್ಧಿ ಕೊಡು” ಎಂದು
ಕೇಳಿಕೊಳ್ಳತೊಡಗಿದರೆ
ದೇವರು ಅದಕ್ಕೆ “ವಾಹವ್ವಾ, ಶಹಬ್ಬಾಶ್” ಹೇಳುತ್ತಾನೆ.

ಅರವತ್ತರ ನಂತರ ನಮಗೆ ನಾವೇ
ಸಾಕುದೀಕ್ಷೆಯನ್ನು ಕೊಟ್ಟುಕೊಂಡಿದ್ದರೆ
ದೇವರು “ಭಲೇ, ಭಲೇ” ಎನ್ನುತ್ತಾನೆ.

ಅರವತ್ತರ ನಂತರವೂ ನಮಗೆ ನಾವು
ಬೇಕುದೀಕ್ಷೆಯನ್ನು ಕೊಟ್ಟುಕೊಂಡು
“ಅದು ಬೇಕು, ಇದು ಬೇಕು” ಎನ್ನತೊಡಗಿದರೆ
ದೇವರು ನಮ್ಮ ಬದುಕಿಗೆ “ಬ್ರೆಕ್” ಹಾಕುವ ಕುರಿತು
ಯೋಚಿಸತೊಡಗುತ್ತಾನೆ.

ಅರವತ್ತರವರೆಗೆ ಜೀವರಥದ
ಹ್ಯಾಂಡಲ್ಲು, ಬ್ರೆಕ್ಕು ನಮ್ಮ ಕೈಯಲ್ಲಿ!!

ಅರವತ್ತರ ನಂತರ ಜೀವರಥದ
ಹ್ಯಾಂಡಲ್ಲು, ಬ್ರೆಕ್ಕು ದೇವರ ಕೈಯಲ್ಲಿ!!!

ಅರವತ್ತರವರೆಗೆ ``ಒನ್ಸ್ ಮೋರ್ '' Once More!!
ಅರವತ್ತರ ನಂತರ ``ಒನ್ಸ್ ಫಾರ್ ಆಲ್''' Once for all !!!

ಇದುವರೆಗೆ ನಾವು ಅರವತ್ತರವರೆಗೆ
ಮತ್ತು ಅರವತ್ತರ ನಂತರದ ಕುರಿತಾಗಿ ಹೇಳಿದ್ದು
ಸಾಮಾನ್ಯ ಮತ್ತು ಇದೆಲ್ಲ ಸರ್ವೇಸಾಮಾನ್ಯ.

ಇನ್ನು ಈ “ಅರವತ್ತರವರೆಗೆ” ಮತ್ತು “ಅರವತ್ತರ ನಂತರ”ದ
ಕುರಿತಾದ  ವಿಷಯದಲ್ಲಿ
ಎಲ್ಲರ ಅನುಭವಕ್ಕೆ ಬಂದಿರುವ ಹಾಗೆ

ಅಪವಾದಗಳೂ ಇರಬಹುದು;
ಆರೋಪಗಳೂ ಇರಬಹುದು.

ಏಕೆಂದರೆ ಜೀವನವೂ ಕೂಡ
ಅಕ್ಷರ, ಪದ, ವಾಕ್ಯಗಳ ಒಂದು ವ್ಯಾಕರಣ ತಾನೆ?

ಸ್ವೀಟ್ ಸಿಕ್ಸ್‌ಟೀನ್‌ಗೂ  (Sweet 16 )
ಸ್ವೀಟ್‌ಲೆಸ್ ಸಿಕ್ಸ್ಟಿಗೂ (Sweetless 60)
ಇರುವ ವ್ಯತ್ಯಾಸವನ್ನು
ಅರ್ಥಮಾಡಿಕೊಂಡು ಬದುಕಿದರೆ
ಜೀವನ ನಂದನವನವಾಗುತ್ತದೆ;

ಈ ವ್ಯತ್ಯಾಸವನ್ನು ಅರಿಯದೆ ಹೋದರೆ
ಜೀವನವದು ಹಾಲಾಹಲವಾಗುತ್ತದೆ;
ಅದು ಕೋಲಾಹಲವಾಗುತ್ತದೆ

–>