-->

ಈ 6M ಸದಾ ನಿಮ್ಮ ನಿಯಂತ್ರಣದಲ್ಲಿರಲಿ

MOUTH -ಬಾಯಿ...
ಮಾತು ಎನ್ನುವುದು ಕೇವಲ ಶಬ್ದಗಳ ಸರಣಿಯಲ್ಲ ಅದು ಆತ್ಮದ ಪ್ರತಿಫಲನ. ನಮ್ಮ ಋಷಿಮುನಿಗಳು ನುಡಿದರೆ ಮುತ್ತಿನ ಹಾರದಂತಿರಬೇಕು ಎಂದರು. ಅಂದರೆ ಆಡುವ ಮಾತು ಅಷ್ಟೊಂದು ಪರಿಶುದ್ಧ ಮೌಲ್ಯಯುತ ಮತ್ತು ಸುಂದರವಾಗಿರಬೇಕು. ಆದರೆ ಇಂದಿನ ಧಾವಂತದ ಬದುಕಿನಲ್ಲಿ ನಾವು ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದೇವೆ. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಕೇವಲ ಬರೆಯಲಿಕ್ಕಲ್ಲ ಬದುಕಲಿಕ್ಕೆ ಎಂಬುದನ್ನು ನಾವು ಮರೆಯುತ್ತಿದ್ದೇವೆ.

ನಮ್ಮ ನಾಲಿಗೆ ನಮ್ಮ ಅಧೀನದಲ್ಲಿರಬೇಕೇ ಹೊರತು ನಾವೇ ನಾಲಿಗೆಯ ಅಧೀನವಾಗಬಾರದು. ಮಾತಿನ ಸಂಯಮವನ್ನು ಕರಗತ ಮಾಡಿಕೊಂಡವನು ಜಗತ್ತನ್ನೇ ಗೆಲ್ಲಬಲ್ಲನು. ಏಕೆಂದರೆ ಮಿತವಾಗಿ ಮತ್ತು ಹಿತವಾಗಿ ಮಾತನಾಡುವ ವ್ಯಕ್ತಿ ಎಲ್ಲರ ಹೃದಯದಲ್ಲೂ ಶಾಶ್ವತ ಸ್ಥಾನ ಪಡೆಯುತ್ತಾನೆ. ಇಂದಿನಿಂದಲೇ ಸಂಯಮದ ಶಕ್ತಿಯನ್ನು ರೂಢಿಸಿಕೊಳ್ಳೋಣ ನಮ್ಮ ಮಾತುಗಳು ಸಮಾಜವನ್ನು ಬೆಳಗಲಿ. ನೆನಪಿರಲಿ ಮಾತು ಮುತ್ತಿನಂತಿರಲಿ.

MIND- ಮನಸ್ಸು...
ನಮ್ಮ ಮನಸ್ಸು ಒಂದು ಅದ್ಭುತವಾದ ಉದ್ಯಾನವನವಿದ್ದಂತೆ. ಅಲ್ಲಿ ಸಕಾರಾತ್ಮಕ ಆಲೋಚನೆಗಳೆಂಬ ಸುಂದರ ಪುಷ್ಪಗಳನ್ನು ಬೆಳೆಸುವದು ಅಥವಾ ನಕಾರಾತ್ಮಕತೆಯೆಂಬ ಕಳೆಗಿಡಗಳು ಬೆಳೆಯಲು ಬಿಡುವದು ಸಂಪೂರ್ಣವಾಗಿ ನಮ್ಮ ಕೈಯಲ್ಲೇ ಇದೆ. ಜಗತ್ತನ್ನು ಗೆಲ್ಲುವ ಮುನ್ನ ನಮ್ಮ ಸ್ವಂತ ಮನಸ್ಸನ್ನು ಗೆಲ್ಲುವುದು ಅತ್ಯಂತ ಅವಶ್ಯಕ. ಮನಸ್ಸು ನಿಮಗೆ ಉತ್ತಮ ಸೇವಕನಾಗಬಲ್ಲದು ಆದರೆ ಅತ್ಯಂತ ಅಪಾಯಕಾರಿ ಯಜಮಾನನೂ ಆಗಬಲ್ಲದು. ಮನಸ್ಸು ನಿಯಂತ್ರಿಸುವ ಅಧಿಕಾರ ನಿಮ್ಮ ಕೈಯಲ್ಲಿದೆ ಮನಸ್ಸಿನ ಕೈಗೊಂಬೆಯಾಗಬೇಡಿ ಮನಸ್ಸಿಗೆ ನೀವೇ ನಾಯಕರಾಗಿ. ನಾವು ಹೇಳಿದ ಹಾಗೆ ನಮ್ಮ ಮನಸ್ಸು ಕೇಳಬೇಕೆ ವಿನಹ ನಮ್ಮ ಮನಸ್ಸು ಹೇಳಿದ ಹಾಗೆ ನಾವು ಕೇಳಬಾರದು.

ಈ 6M ಸದಾ ನಿಮ್ಮ ನಿಯಂತ್ರಣದಲ್ಲಿರಲಿ


MOOD- ಮನಸ್ಥಿತಿ
ಭಾವನೆಗಳೆಂಬುದು ಸಮುದ್ರದ ಅಲೆಗಳಂತೆ. ಅವು ನಮ್ಮ ಮನಸ್ಸಿನ ತೀರಕ್ಕೆ ಬಂದು ಅಪ್ಪಳಿಸುವುದು ಸಹಜ. ಆದರೆ ಆ ಅಲೆಗಳ ಆರ್ಭಟಕ್ಕೆ ಸಿಲುಕಿ ನಮ್ಮ ಬದುಕಿನ ದೋಣಿ ಮುಳುಗಬೇಕೇ ಅಥವಾ ಆ ಅಲೆಗಳ ಮೇಲೆಯೇ ಯಶಸ್ಸಿನ ಸವಾರಿ ಮಾಡಬೇಕೇ ಎಂಬುದನ್ನು ನಿರ್ಧರಿಸುವುದು ನಮ್ಮ ಮನೋನಿಯಂತ್ರಣ. 

ನಮ್ಮ ಮನಸ್ಥಿತಿ ಎಂಬುದು ಕೇವಲ ಒಂದು ಕ್ಷಣದ ತರಂಗವಲ್ಲ ಅದು ನಮ್ಮ ಇಡೀ ದಿನದ ನಡವಳಿಕೆ ನಿರ್ಧಾರ ಹಾಗೂ ಭವಿಷ್ಯವನ್ನು ರೂಪಿಸುವ ಶಕ್ತಿ. ಸಿಟ್ಟು, ಬೇಸರ, ನಿರಾಶೆಗಳು ಮನಸ್ಸಿನ ಆಕಾಶವನ್ನು ಆವರಿಸಿದಾಗ ವಿವೇಕದ ಸೂರ್ಯ ಮರೆಯಾಗುತ್ತಾನೆ. ಅಂತಹ ಕತ್ತಲಲ್ಲಿ ತಪ್ಪು ಹೆಜ್ಜೆಗಳು ಇಡುವುದು ಸಹಜ. ಅದಕ್ಕಾಗಿಯೇ ಜ್ಞಾನಿಗಳು ಹೇಳಿರುವುದು ಜಗತ್ತನ್ನು ಗೆಲ್ಲುವ ಮುನ್ನ ನಿನ್ನ ಮನಸ್ಸನ್ನು ಗೆಲ್ಲು ಎಂದು. ಸರಿಯಾದ ಮನಸ್ಥಿತಿಯಲ್ಲಿ ಇರುವ ವ್ಯಕ್ತಿ ಸರಿಯಾದ ರೀತಿಯಲ್ಲಿಯೇ ಜೀವನ ಸಾಗಿಸುತ್ತಾನೆ 

MANNER-ನಡತೆ....
ಮಾತಿನಲ್ಲಿ ಮಾಧುರ್ಯ,ನಡವಳಿಕೆಯಲ್ಲಿ ವಿನಯ ಹಾಗೂ ಆಲೋಚನೆಯಲ್ಲಿ ದೃಢತೆ ಇದ್ದಾಗ ಬದುಕು ಸಾರ್ಥಕತೆಯತ್ತ ಸಾಗುತ್ತದೆ. ನಡವಳಿಕೆಯ ಮೇಲಿನ ನಿಯಂತ್ರಣ ಎಂದರೆ ಭಾವನೆಗಳನ್ನು ಹತ್ತಿಕ್ಕುವುದಲ್ಲ ಬದಲಿಗೆ ಅವುಗಳಿಗೆ ಸರಿಯಾದ ದಿಕ್ಕು ತೋರಿಸುವುದು. ಸಾಗರವು ತನ್ನ ಮಿತಿಯನ್ನು ಮೀರದಿದ್ದಾಗಲೇ ಅದಕ್ಕೊಂದು ಗಾಂಭೀರ್ಯ. ಹಾಗೆಯೇ ಮನುಷ್ಯನು ತನ್ನ ವರ್ತನೆಯ ಗೆರೆಯನ್ನು ದಾಟದಿದ್ದಾಗ ಮಾತ್ರ ಆತನಿಗೆ ಗೌರವ ದೊರಕುತ್ತದೆ.

ಜಗತ್ತು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ನಿಮ್ಮ ಕೈಯಲ್ಲಿಲ್ಲದಿರಬಹುದು ಆದರೆ ನೀವು ಜಗತ್ತಿಗೆ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ಸಂಪೂರ್ಣವಾಗಿ ನಿಮ್ಮ ಅಧೀನದಲ್ಲಿದೆ. ನಿಮ್ಮ ನಡವಳಿಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ನೀವು ಕೇವಲ ಪರಿಸ್ಥಿತಿಯನ್ನು ಗೆಲ್ಲುವುದಿಲ್ಲ ಬದಲಿಗೆ ನಿಮ್ಮನ್ನು ನೀವೇ ಗೆಲ್ಲುತ್ತೀರಿ. ನಿಮ್ಮ ವರ್ತನೆಯೇ ನಿಮ್ಮ ಹೆಗ್ಗುರುತಾಗಲಿ ನಿಮ್ಮ ಸಂಯಮವೇ ನಿಮ್ಮ ಯಶಸ್ಸಿನ ಕಿರೀಟವಾಗಲಿ. ನಮ್ಮ ನಮ್ಮ ನಡತೆಯಿಂದಲೇ ನಾವು ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕಬಹುದು.

MONEY-ಹಣ.....
ಹಣ ಎಂಬುದು ಕೇವಲ ಕೈಯಿಂದ ಕೈಗೆ ಚಲಿಸುವ ಕಾಗದದ ತುಣುಕಲ್ಲ ಅದು ನಮ್ಮ ಬೆವರಿನ ಹನಿಗಳಿಗೆ ಸಿಕ್ಕ ಪ್ರತಿಫಲ ನಮ್ಮ ಕನಸುಗಳಿಗೆ ರೆಕ್ಕೆ ನೀಡುವ ಶಕ್ತಿ. ಆದರೆ ಯಾವಾಗ ನಾವು ಹಣವನ್ನು ನಿಯಂತ್ರಿಸುವುದನ್ನು ಮರೆತುಬಿಡುತ್ತೇವೆಯೋ ಆವಾಗ ಹಣವೇ ನಮ್ಮನ್ನು ನಿಯಂತ್ರಿಸಲು ಶುರುಮಾಡುತ್ತದೆ. ಬದುಕಿನ ನೌಕೆ ಸುಗಮವಾಗಿ ಸಾಗಬೇಕಾದರೆ ಆರ್ಥಿಕತೆಯ ಚುಕ್ಕಾಣಿ ನಮ್ಮ ಕೈಯಲ್ಲೇ ಇರಬೇಕು. ಹಣವನ್ನು ಆಳುವವನು ಯಜಮಾನನಾಗುತ್ತಾನೆ ಹಣಕ್ಕೆ ಆಳಾಗುವವನು ಗುಲಾಮನಾಗುತ್ತಾನೆ. ನಿಮ್ಮ ಹಣದ ಮೇಲಿನ ಸಂಪೂರ್ಣ ನಿಯಂತ್ರಣವೇ ನಿಮ್ಮ ಯಶಸ್ಸಿನ ಮೂಲಮಂತ್ರ.

MEALS- ಊಟ....
 ಯಾರೋ ಒಬ್ಬರು ಹೇಳಿದ ಮಾತು ಊಟಕ್ಕಿಂತ ಹಸಿವು ಬಹಳ ರುಚಿಯಾಗಿರುತ್ತೆ ಎಂದು. ಹಸಿದವನಿಗೆ ಊಟದ ಮೌಲ್ಯ ಗೊತ್ತಿರುತ್ತೆ. ಹೊಟ್ಟೆ ತುಂಬಿದವನಿಗೆ ಊಟದ ಮೌಲ್ಯದ ಬಗ್ಗೆ ಪರಿವೆ ಇರುವುದಿಲ್ಲ. ಒಂದೊಂದು ತುತ್ತಿನ ಅನ್ನದ ಅಗಳಿನ ಹಿಂದೆ ಎಷ್ಟೋ ಜನ ರೈತರ ಪರಿಶ್ರಮದ ಬೆವರಿನ ಹನಿ ಇದೆ. ಹಾಗಾಗಿ ಊಟ ಮಾಡುವಾಗ ಪ್ರತೀ ತುತ್ತನ್ನು ವ್ಯರ್ಥ ಮಾಡದಂತೆ ಎಚ್ಚರ ವಹಿಸಿಕೊಂಡು ಊಟ ಮಾಡಬೇಕು. ಮತ್ತು ಮೇಲಾಗಿ ಊಟ ಆರೋಗ್ಯಕರವಾಗಿರಬೇಕು. ಒಮ್ಮೆ ಊಟ ಮಾಡಿದ ನಂತರ ಮತ್ತೊಮ್ಮೆ ಊಟ ಮಾಡುವಷ್ಟು ಹೊಟ್ಟೆ ಸ್ವಲ್ಪವಾದರೂ ಖಾಲಿ ಇರಬೇಕು. ಹಿರಿಯರು ಹೇಳಿದ ಮಾತು ನೆನಪಿರಲಿ ಬದುಕುವುದಕ್ಕಾಗಿ ತಿನ್ನಬೇಕೆ ವಿನಹ ತಿನ್ನುವುದಕ್ಕಾಗಿ ಬದುಕಬಾರದು. ಅಲ್ಪ ಆಹಾರ ಆಯುಷ್ಯ ದೀರ್ಘ ಎಂಬ ತತ್ವದ  ಅಡಿ ನಮ್ಮ ಊಟೋಪಚಾರ ಇರಲಿ.

 ಉತ್ತಮ ವ್ಯಕ್ತಿಯಾಗಿ ಬದುಕನ್ನ ಸಾಗಿಸಲು ಮೇಲಿನ ಆರು M ಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಬದುಕು ಸಾಗಿಸೋಣ. ಮತ್ತೊಬ್ಬರಿಗೆ ಮಾದರಿಯಾಗೋಣ, ಸಮಾಜದಲ್ಲಿ ನಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅತ್ಯುತ್ತಮವಾದ ಬದುಕು ನಮ್ಮದಾಗಲಿ 


ಲೇಖಕರು  -- ಶ್ರೀ ಮುತ್ತು ಯ. ವಡ್ಡರ , ಶಿಕ್ಷಕರು, ಹಿರೇಮಾಗಿ , ಬಾಗಲಕೋಟ -9845568484

Terms | Privacy | 2024 🇮🇳
–>