-->

ಶಿಕ್ಷಕರು - ನಿನ್ನೆಗೂ ಇಂದಿಗೂ ಎಂದೆಂದಿಗೂ...

ತಾಯಿ ಜನ್ಮ ನೀಡಿದರೆ, ಗುರು ಬದುಕನ್ನು ರೂಪಿಸುತ್ತಾನೆ. ತಂದೆ ಬೆರಳಿಡಿದು ನಡೆಯಲು ಕಲಿಸಿದರೆ, ಗುರು ಕೈಹಿಡಿದು ಬದುಕಲು ಕಲಿಸುತ್ತಾನೆ. ಈ ನುಡಿಗಳು ಮಾನವ ಜೀವನದ ಅತ್ಯುನ್ನತ ಮತ್ತು ಪವಿತ್ರವಾದ ಎರಡು ಶಕ್ತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಬಿಂಬಿಸುತ್ತವೆ.

ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೊದಲ ಪ್ರೇರಣೆ. ಅವಳು ತನ್ನ ರಕ್ತ-ಮಾಂಸಗಳನ್ನು ಹಂಚಿ ನಮಗೆ ಈ ಸುಂದರ ಸೃಷ್ಟಿಯನ್ನು ನೋಡುವ ಭಾಗ್ಯ ಕರುಣಿಸುತ್ತಾಳೆ. ಕೇವಲ ಜನ್ಮ ನೀಡುವುದಷ್ಟೇ ಅಲ್ಲದೆ, ತನ್ನ ಮಮತೆಯ ಬೆರಳಿಡಿದು ನಮಗೆ ನೆಲದ ಮೇಲೆ ಮೊದಲ ಹೆಜ್ಜೆಯನ್ನಿಡಲು ಕಲಿಸುತ್ತಾಳೆ. ತಾಯಿಯ ಮಡಿಲು ನಮ್ಮ ಮೊದಲ ಪಾಠಶಾಲೆ, ಅವಳ ಪ್ರೀತಿಯ ನುಡಿಗಳೇ ನಮ್ಮ ಮೊದಲ ಸಂಸ್ಕಾರ. ಆದರೆ ಕೇವಲ ಹೆಜ್ಜೆಯನ್ನಿಡುವುದರಿಂದ ಜೀವನ ಪೂರ್ಣವಾಗುವುದಿಲ್ಲ. ಆ ಹೆಜ್ಜೆಗಳು ಸಾಗಬೇಕಾದ ಸನ್ಮಾರ್ಗ ಯಾವುದು ಎಂಬುದನ್ನು ತೋರಿಸುವವನೇ ಗುರು.

ಜನ್ಮ ಪಡೆದ ಜೀವಕ್ಕೆ ಅರಿವಿನ ಜ್ಞಾನದೀಪವನ್ನು ಹಚ್ಚಿ, ಅಜ್ಞಾನದ ಕತ್ತಲನ್ನು ದೂರ ಮಾಡುವವನು ಗುರು. ಬದುಕಿನ ಏರಿಳಿತಗಳಲ್ಲಿ, ಕಷ್ಟ-ಸುಖಗಳ ಬಿರುಗಾಳಿಯಲ್ಲಿ ಧೃತಿಗೆಡದೆ ಹೇಗೆ ಬದುಕಬೇಕೆಂದು ಗುರು ಕೈಹಿಡಿದು ಮುನ್ನಡೆಸುತ್ತಾನೆ. ತಾಯಿ ನಮಗೆ ಭೌತಿಕವಾದ ಶರೀರವನ್ನು ನೀಡಿದರೆ, ಗುರು ಆ ಶರೀರಕ್ಕೊಂದು ದಿವ್ಯವಾದ ವ್ಯಕ್ತಿತ್ವವನ್ನು ಹಾಗೂ ಬದುಕಿಗೊಂದು ಉದಾತ್ತ ಧ್ಯೇಯವನ್ನು ರೂಪಿಸಿಕೊಡುತ್ತಾನೆ.

"ಗುರುವಿಲ್ಲದ ವಿದ್ಯೆಯು ಶಿರವಿಲ್ಲದ ಕಬಂಧದಂತೆ" ಎಂಬುದು ಮಹಾನ್ ಸಂತ, ದಾರ್ಶನಿಕ ಕನಕದಾಸರ ಅಮೂಲ್ಯ ಸಂದೇಶ. ಕೇವಲ ಪುಸ್ತಕದ ಬದನೆಕಾಯಿಯಾಗುವ ಜ್ಞಾನಕ್ಕೆ ಆತ್ಮವಿಶ್ವಾಸ ಮತ್ತು ಸರಿಯಾದ ಮಾರ್ಗದರ್ಶನ ಸಿಗದೇ ಹೋದರೆ ಆ ವಿದ್ಯೆ ದಾರಿಯಿಲ್ಲದ ದೋಣಿಯಂತಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಎಷ್ಟೇ ಪದವಿಗಳನ್ನು ಪಡೆದರೂ, ನೈತಿಕತೆ ಮತ್ತು ವಿವೇಕವನ್ನು ಕಲಿಸಲು ನಮಗೊಬ್ಬ ಮಾರ್ಗದರ್ಶಕನ ಅಗತ್ಯವಿದೆ. ಗುರುವಿನ ಚರಣಗಳಿಗೆ ಶರಣಾದಾಗ ಮಾತ್ರ ವಿದ್ಯೆಗೆ ಪೂರ್ಣತೆ ಸಿಗುತ್ತದೆ, ಬದುಕು ಸಾರ್ಥಕವಾಗುತ್ತದೆ. ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಗುರುವನ್ನು ಗೌರವಿಸೋಣ, ನಮ್ಮ ಜ್ಞಾನವನ್ನು ಸಮಾಜದ ಹಿತಕ್ಕೆ ಬಳಸೋಣ.

ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳಿದಂತೆ "ಉತ್ತಮ ಪುಸ್ತಕಗಳು ನೂರು ಶಿಕ್ಷಕರಿಗೆ ಸಮಾನವಾಗಿರಬಹುದು, ಆದರೆ ಒಬ್ಬ ಉತ್ತಮ ಶಿಕ್ಷಕ ಸಾವಿರ ಪುಸ್ತಕಗಳಿಗೆ ಸಮಾನ." ಈ ನುಡಿಮುತ್ತು ಕೇವಲ ವಾಕ್ಯವಲ್ಲ, ಅದು ಗುರುವಿನ ಸರ್ವೋಚ್ಚ ಸ್ಥಾನಕ್ಕೆ ಹಿಡಿದ ಕೈಗನ್ನಡಿ, ಜ್ಞಾನದ ವಿಸ್ತಾರವನ್ನು ಅಳೆಯುವ ಮಾನದಂಡ. ಪುಸ್ತಕಗಳು ಮಾಹಿತಿಯನ್ನು ನೀಡಿದರೆ, ಶಿಕ್ಷಕನು ಆ ಮಾಹಿತಿಯನ್ನು ಜ್ಞಾನವನ್ನಾಗಿ, ಜ್ಞಾನವನ್ನು ಬದುಕಿನ ಮೌಲ್ಯವನ್ನಾಗಿ ಪರಿವರ್ತಿಸುತ್ತಾನೆ. ಸೋತು ಕುಳಿತಾಗ ಧೃತಿಗೆಡದಂತೆ ಹೆಗಲ ಮೇಲೆ ಕೈಯಿಟ್ಟು, ನಡುಗುವ ಕೈಗಳಿಗೆ ಭರವಸೆ ತುಂಬುವವನೇ ನಿಜವಾದ ಗುರು. ಕಲ್ಲು ಬಂಡೆಯಂತಿರುವ ಮಗುವಿನ ಮನಸ್ಸನ್ನು ಕೆತ್ತಿ ಅದಕ್ಕೊಂದು ಸುಂದರ ಮೂರ್ತಿಯ ರೂಪ ಕೊಡುವ ಶಿಲ್ಪಿಯೇ ಶಿಕ್ಷಕ.

ಅಕ್ಷರ ಲೋಕದ ಸಾವಿರಾರು ಗ್ರಂಥಗಳ ಸಾರವೆಲ್ಲವೂ ಒಬ್ಬ ಆದರ್ಶ ಶಿಕ್ಷಕನ ಪ್ರೇರಣಾದಾಯಕ ಮಾತುಗಳಲ್ಲಿ ಅಡಗಿರುತ್ತದೆ. ಅದಕ್ಕಾಗಿಯೇ ನಮ್ಮ ಸಂಸ್ಕೃತಿಯಲ್ಲಿ "ಆಚಾರ್ಯ ದೇವೋ ಭವ" ಎಂದು ಗುರುವಿಗೆ ದೈವತ್ವದ ಸ್ಥಾನ ನೀಡಲಾಗಿದೆ.

ಶಿಕ್ಷಕರು - ನಿನ್ನೆಗೂ ಇಂದಿಗೂ ಎಂದೆಂದಿಗೂ...


ಈ ದಿನ ಶಿಕ್ಷಕರ ದಿನಾಚರಣೆ, ಇದು ಕೇವಲ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿದಿನವೂ ಶಿಕ್ಷಕರಿಗೆ ನಮಿಸೋಣ, ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗೋಣ. ಇವತ್ತು ನಾವು ಯಾವುದೇ ಒಂದು ಉನ್ನತ ಮಟ್ಟದ ಸ್ಥಾನದಲ್ಲಿ ಇದ್ದೇವೆ ಎಂದರೆ ಅದಕ್ಕೆ ಎರಡನೇ ತಾಯಿಯಾಗಿರುವ ಗುರುವೇ ಮೂಲ. ಇಂದು ನಮಗೆ ಸ್ವಲ್ಪ ಬಿಡುವು ಇದ್ದರೆ, ನಮಗೆ ಅಕ್ಷರ ಜ್ಞಾನ ನೀಡಿದ ಪ್ರತಿಯೊಬ್ಬ ಗುರುವನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ.

ಕಾಲ ಬದಲಾಗಬಹುದು, ಪಠ್ಯ ಬದಲಾಗಬಹುದು, ಕಪ್ಪು ಹಲಗೆಯು ಸ್ಮಾರ್ಟ್ ಬೋರ್ಡ್ ಆಗಬಹುದು, ಶಾಲೆಯ ಕೊಠಡಿಗಳು ಬದಲಾಗಬಹುದು, ಶಾಲಾ ಶಿಕ್ಷಕರು ಬದಲಾಗಬಹುದು, ಆದರೆ ಗುರು-ಶಿಷ್ಯರ ಈ ಪವಿತ್ರ ಸಂಬಂಧ ನಿನ್ನೆಗೂ ಇಂದಿಗೂ ಎಂದೆಂದಿಗೂ - ಅಮರ.

ಬದುಕಿನ ಕತ್ತಲೆಯನ್ನು ಓಡಿಸಿ ಸುಜ್ಞಾನದ ಜ್ಯೋತಿಯನ್ನು ಬೆಳಗುವ ಪ್ರತಿಯೊಬ್ಬ ಶಿಕ್ಷಕನಿಗೂ ಕೋಟಿ ಕೋಟಿ ನಮನಗಳು.

ಲೇಖಕರು  - ಶ್ರೀ ಮುತ್ತು ಯ. ವಡ್ಡರ , ಶಿಕ್ಷಕರು, HPS ಹಿರೇಮಳಗವಿ , ಬಾಗಲಕೋಟೆ - 9845568484

ಎರಡನೇ ತಾಯಿ - ಗುರುದೇವ

ಅಕ್ಷರ ಕಲಿಸಿ ಬದುಕು ತೋರಿಸಿದವರು
ಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರು
ಪರ ಊರಿನಿಂದ ಬಂದು ಬೋಧಿಸಿದವರು
ಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು

ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆ
ಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆ
ಪೂಜಿಸಿ ಬಳಪ ಹಿಡಿದ ಭಗವಂತನಿಗೆ
ಪ್ರೀತಿ-ಮಮತೆಯ ಎರಡನೇ ತಾಯಿಗೆ

ತಮ್ಮ ಮಕ್ಕಳಂತೆ ಪ್ರೀತಿಸಿ ಮುದ್ದಿಸಿದರು
ಏನೂ ಇಲ್ಲದ ಮೆದುಳಿಗೆ ಜ್ಞಾನ ತುಂಬಿದರು
ನನಗಿಂತ ಚೂರು ಹೆಚ್ಚು ಬೆಳೆಯಬೇಕು ಎಂದವರು
ಮಕ್ಕಳ ಪಾಲಿಗೆ ಬೆಲೆ ಕಟ್ಟಲಾಗದ ಭಗವಂತನಾದರು



ಸೋತಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು
ಗೆದ್ದಾಗ ಶಿಷ್ಯರಿಗಿಂತ ಮುಂಚೆ ಖುಷಿ ಪಟ್ಟವರು
ಆರಕ್ಕೇಳದೆ ಮೂರಕ್ಕಿಳಿಯದೆ ಬದುಕು ಸಾಗಿಸಿದವರು
ಜೀವನಪೂರ್ತಿ ಸರಳ ಜೀವನ ನಡೆಸಿದವರು

ಗುರುದೇವ ನೀವು ಜೊತೆಗಿದ್ದರೆ ಜೀವನ ಸಾರ್ಥಕವಯ್ಯ 
ಕಣ್ಣಿಗೆ ಕಾಣುವ ನಿಜ ದೇವರು ನೀವಯ್ಯ
ಅಕ್ಷರ ಕ್ರಾಂತಿಗೆ ರೂವಾರಿ ನೀವಯ್ಯ
ನೀವಿಲ್ಲದೆ ಮನೆ ಮನವು ಶೂನ್ಯವಯ್ಯ

 
ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484   

ರಕ್ತ ಸಂಬಂಧ ಮೀರಿದ ರಕ್ಷಾಬಂಧನ

ಸುಮಾರು 6,000 ವರ್ಷಗಳ ಇತಿಹಾಸವಿರುವ ಅತಿ ಪ್ರಮುಖವಾದ ಹಬ್ಬ ರಕ್ಷಾಬಂಧನ. ರಾಖಿ ಎಂದರೆ ಕೇವಲ ಸಹೋದರ ಸಹೋದರಿಯರಿಗೆ ಮಾತ್ರ ಸೀಮಿತವಾದದ್ದು ಅಲ್ಲ.ಮೊದಲಿಗೆ ಈ ಹಬ್ಬದಲ್ಲಿ ಗುರುಗಳು ತಮ್ಮ ಶಿಷ್ಯರಿಗೆ  ರಾಖಿ ಕಟ್ಟಿ ದೀರ್ಘಕಾಲದ ಆಯುಷ್ಯ ತಮ್ಮ ಕೈಯಲ್ಲಿ ಕಲಿತಿರುವ ಶಿಷ್ಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದರು. 1905 ರಲ್ಲಿ ಬ್ರಿಟಿಷರು  ಬಂಗಾಳವನ್ನು ವಿಭಜಿಸಿದಾಗ ಹಿಂದೂ ಮುಸ್ಲಿಮರಲ್ಲಿ ಏಕತೆ ತರಲು ಶ್ರೀ ರವೀಂದ್ರನಾಥ ಟ್ಯಾಗೋರ್ ಅವರು ಪರಸ್ಪರ ಪ್ರತಿಯೊಬ್ಬರು ರಾಖಿ ಕಟ್ಟಿಕೊಳ್ಳೋಣ ಎಂಬ ಕರೆ ನೀಡಿದರು. ಅಂದಿನಿಂದ ಇದು ಏಕತೆಯ ಹಬ್ಬ ಕೂಡ ಆಯಿತು.
       
ರಾಖಿ ಯಾವುದ್ದಾದರೇನು, ಅದನ್ನು ಕಟ್ಟುವ ಮನಸ್ಸು ಬಹಳ ನಿಷ್ಕಲ್ಮಶವಾಗಿರಬೇಕು. ರಾಖಿ ಚಿನ್ನದ್ದಾಗಲಿ ಅಥವಾ ನೂಲಿನ ದಾರದ್ದಾಗಲಿ ಅದನ್ನು ಕಟ್ಟುವ ಮತ್ತು ಕಟ್ಟಿಸಿಕೊಳ್ಳುವ ಮನಸ್ಸು ಬಂಗಾರವಾಗಿರಬೇಕು ಅಷ್ಟೇ. 2023 ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 23 ಅಡಿ ಉದ್ದದ ಬೃಹತ್ ರಾಖಿಯನ್ನು ತಯಾರಿಸಿದ್ದು, ಅದು ವಿಶ್ವದ ಅತಿ ದೊಡ್ಡ ರಾಖಿಯಾಗಿ ಪ್ರಸಿದ್ಧಿಯಾಯಿತು. ಪುರಾಣದ ಪ್ರಕಾರ ದ್ರೌಪದಿ ಕೃಷ್ಣನಿಗೆ ಸೀರೆಯ ತುಂಡನ್ನು ಕಟ್ಟಿದಾಗ ಕೃಷ್ಣನು ಅವಳಿಗೆ ಅಕ್ಷಯ ವಸ್ತ್ರ ನೀಡಿ ವಸ್ತ್ರಪಹರಣದ ಸಮಯದಲ್ಲಿ ರಕ್ಷಿಸಿದನು, ಇದು ಶ್ರೀಕೃಷ್ಣನು ದ್ರೌಪದಿಗೆ ನೀಡಿದ ಮೊದಲ ಉಡುಗೊರೆಯಾಗಿದೆ. ಅಂದಿನಿಂದ ಇಂದಿನವರೆಗೂ ರಾಖಿ ಕಟ್ಟಿದ ಸಹೋದರಿಗೆ ಸಹೋದರನು ತನ್ನ ಕೈಲಾದ ಏನಾದರೂ ಒಂದು ಉಡುಗೊರೆ ನೀಡಿ, ಉಸಿರಿನ ಕೊನೆಯ ಕ್ಷಣದವರೆಗೂ ನಿನಗೆ ನಾನು ರಕ್ಷಕನಾಗಿ ಸದಾ ಇರುತ್ತೇನೆ ಎಂಬ ಧೈರ್ಯ ನೀಡುವುದೇ ರಾಖಿ ಹಬ್ಬದ ಪ್ರಮುಖ ಅಂಶವಾಗಿದೆ. ಹಳದಿ ಬಣ್ಣದ ರಾಖಿಯು ಸಮೃದ್ಧಿ ಮತ್ತು ಜ್ಞಾನದ ಸಂಕೇತವಾದರೆ, ಕೆಂಪು ಬಣ್ಣದ ರಾಖಿಯು ಶಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಬಿಳಿ ಬಣ್ಣದ ರಾಖಿಯು ಶಾಂತಿ ಮತ್ತು ಪವಿತ್ರತೆಯ ಸಂಕೇತವಾದರೆ, ನೀಲಿ ಬಣ್ಣದ ರಾಖಿಯು ತಾಳ್ಮೆಯ ಸಂಕೇತವಾಗಿದೆ.
    
ಇತ್ತೀಚಿನ ದಿನಮಾನಗಳಲ್ಲಿ ಬೀಜ ಇರುವ ರಾಖಿ ಬಹಳ ಹೆಚ್ಚಾಗಿದೆ ಕಾರಣ ರಾಖಿ ಹಬ್ಬದ ನಂತರ ಆ ರಾಖಿಯನ್ನು ಮಣ್ಣಿನಲ್ಲಿ ಹಾಕಿದರೆ ಅದು ಗಿಡವಾಗಿ ಬೆಳೆಯುತ್ತದೆ. ಆ ಗಿಡ ಅಣ್ಣ ತಂಗಿಯರ ಬಾಂಧವ್ಯವನ್ನು ಸದಾ ಕಾಲ ನೆನಪು ಉಳಿಯುವಂತೆ ಮಾಡುತ್ತದೆ. ರಾಖಿ ಕಟ್ಟುವುದು ಒಂದು ನಿಮಿಷದ ಕೆಲಸ ಆದರೆ ಆ ದಾರದಲ್ಲಿ ನಂಬಿಕೆ ಇರುವುದು ಜೀವನಪೂರ್ತಿ. ಸಹೋದರಿಯರಿಗೆ ಸಹೋದರ ಒಬ್ಬ ಇದ್ದರೆ ಸಾಕು ಅದು ನೂರು ಆನೆಯ ಬಲಕ್ಕೆ ಸಮ ಎಂದು ಸಹೋದರಿಯರು ನಂಬಿರುತ್ತಾರೆ. ರಾಖಿ ಕಟ್ಟುವಾಗ ಮೂರು ಗಂಟನ್ನು ಹಾಕಲಾಗುತ್ತದೆ ಅದರ ಅರ್ಥ ಬ್ರಹ್ಮ ವಿಷ್ಣು ಮಹೇಶ್ವರ ಅಥವಾ ಮನಸಾ ವಾಚಾ ಕರ್ಮಣಾ ಶುದ್ದಿಯಿಂದ ರಕ್ಷಿಸುತ್ತೇನೆ ಎಂಬುದರ ಸಂಕೇತವಾಗಿದೆ.
    
ರಾಖಿ ಕಟ್ಟುವುದರ ಹಿಂದೆ ಸ್ವಲ್ಪ ವಿಜ್ಞಾನವು ಅಡಗಿದೆ. ಕೈಯಲ್ಲಿಯ ಮಣಿಕಟ್ಟಿನ ಮೇಲೆ ರಾಖಿ ಕಟ್ಟುವುದರಿಂದ ಆಕ್ಯುಪ್ರೆಶರ್ ಪಾಯಿಂಟ್ ಒತ್ತಡಕ್ಕೂಳಗಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಒಂದು ಅರ್ಥದಲ್ಲಿ ಆರೋಗ್ಯಕ್ಕೂ ಕೂಡ ರಾಖಿ ಬಹಳ ಉಪಯೋಗವಾಗುತ್ತದೆ ಎಂಬುದು ಮೇಲಿನ ಅಂಶದಿಂದ ತಿಳಿದು ಬರುತ್ತದೆ.
    

Rakhi , festival beyond blood relations

ನಾವು ಆಚರಣೆ ಮಾಡುವ ಹಲವಾರು ಹಬ್ಬಗಳಲ್ಲಿ ಈ ಹಬ್ಬವು ಒಂದು ವಿಶೇಷವಾದ ಮಮತೆ ಪ್ರೀತಿ ಕರುಣೆ ಎಲ್ಲವನ್ನ ತೋರ್ಪಡಿಸುವ ಹಬ್ಬವಾಗಿದೆ. ಈ ರಾಖಿ ಹಬ್ಬಕ್ಕಾಗಿ ಎಷ್ಟೋ ಜನ ಸಹೋದರಿಯರು  ತುದಿಗಾಲಿನಲ್ಲಿ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಸಹೋದರರು ಕೂಡ ಹಾಗೆಯೇ ರಕ್ಷಾಬಂಧನಕ್ಕೆ ಸಹೋದರಿ ನಮ್ಮ ತವರು ಮನೆಗೆ ಬರುತ್ತಾಳೆ,ರಾಖಿಯನ್ನು ಕಟ್ಟುತ್ತಾಳೆ ಅವಳಿಗೆ ಏನಾದರೂ ಒಂದು ಉಡುಗೊರೆ ಕೊಡಲೇಬೇಕು ಎಂಬ ಕಾತುರದಿಂದ ಸಹೋದರಿಯ ದಾರಿಗಾಗಿ ಕಾಯುತ್ತಿರುತ್ತಾರೆ. ಆ ಕಾಯುವ ಕ್ಷಣದಲ್ಲಿ ಪ್ರೀತಿ ಮಮತೆ ಬೆಟ್ಟದಷ್ಟು ಹೆಚ್ಚಾಗಿರುತ್ತದೆ.ರಾಖಿ ಕಟ್ಟಲು ರಕ್ತ ಸಂಬಂಧಿಕರೇ ಬೇಕಾಗಿಲ್ಲ, ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳುವ ಯಾವುದೇ ವ್ಯಕ್ತಿ ಆದರೂ ಕೂಡ ರಾಖಿ ಕಟ್ಟಬಹುದು, ಕಟ್ಟಿಸಿಕೊಳ್ಳಬಹುದು. ಈ ಪವಿತ್ರ ರಾಖಿ ಹಬ್ಬದ  ಸಂತಸದ ಕ್ಷಣವನ್ನು ನಮ್ಮ ನಮ್ಮ ಸಹೋದರ ಸಹೋದರಿಯರೊಂದಿಗೆ ಕಳೆಯೋಣ. ಯಾವುದೋ ಚಿಕ್ಕ ವಿಷಯಕ್ಕೆ ಒಂದು ವೇಳೆ ಮಾತು ಬಿಟ್ಟಿದ್ದರೆ ಈ ದಿನ ಸ್ವಾಭಿಮಾನವನ್ನು ಬಿಟ್ಟು ಸಂಬಂಧಕ್ಕೆ ಬೆಲೆಕೊಟ್ಟು  ಅಣ್ಣ- ತಂಗಿಯರ ಹಾಗೂ ಅಕ್ಕ -ತಮ್ಮರ  ಸಂಬಂಧಕ್ಕೆ ಬೆಲೆ ಕೊಡೋಣ.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484   

ಸಾಧಿಸುವ ಕನಸಿಗೆ ತಾಯಿಯೇ ಸ್ಫೂರ್ತಿ

ಕನಸುಗಳು ಕಣ್ಣುಗಳಿಗೆ ಮಾತ್ರ ಸೀಮಿತವಲ್ಲ. ಅವು ನಮ್ಮ ಬದುಕಿನ ದಾರಿದೀಪಗಳು. ಆ ದಾರಿದೀಪಕ್ಕೆ ಪ್ರೀತಿಯ ತೈಲವೆರೆದು ಭರವಸೆಯ ಜ್ಯೋತಿ ಬೆಳಗುವ ಪ್ರಥಮ ಗುರು ಪ್ರತ್ಯಕ್ಷ ದೈವ ತಾಯಿ. ಪ್ರತಿಯೊಬ್ಬ ಸಾಧಕನ ಯಶೋಗಾಥೆಯ ಹಿಂದೆಯೂ ತಾಯಿಯ ನಿರಂತರ ತ್ಯಾಗ ಮತ್ತು ಮೌನ ಪ್ರಾರ್ಥನೆಯ ಶಕ್ತಿಯಿರುತ್ತದೆ. ನಮ್ಮ ಸಾಧನೆಯ ಶಿಖರ ಎಷ್ಟೇ ಎತ್ತರದ್ದೇ ಇರಲಿ ಅದರ ಭದ್ರವಾದ ಬುನಾದಿ ತಾಯಿಯ ಪ್ರೀತಿ ಮತ್ತು ಸ್ಫೂರ್ತಿ. ನಮ್ಮ ಕನಸುಗಳು ನನಸಾದಾಗ ಸಿಗುವ ಕೀರ್ತಿಗಿಂತ ಅದನ್ನು ಕಂಡು ತಾಯಿಯ ಕಣ್ಣುಗಳಲ್ಲಿ ಮೂಡುವ ಆನಂದಬಾಷ್ಪವೇ ನಮ್ಮ ಬದುಕಿನ ಅತ್ಯಂತ ಶ್ರೇಷ್ಠ ಪ್ರಶಸ್ತಿ. ತಾಯಿಯೇ ನಮ್ಮ ಬದುಕಿನ ಶಾಶ್ವತ ಪ್ರೇರಣೆ, ಸಾಧನೆಯ ತೇರಿಗೆ ಚಾಲಕಶಕ್ತಿ.

ತಾಯಿಯಿಂದ ಪ್ರೇರಣೆ ಪಡೆದು ಸಾಧಕರಾದ ವ್ಯಕ್ತಿಗಳ ಪರಿಚಯ ಹೇಳುವುದಾದರೆ, ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕಾದರೆ ತಾಯಿಯ ಪ್ರೋತ್ಸಾಹವೇ ಮುಖ್ಯ ಅಡಿಪಾಯ. ತಾಯಿಯ ನಿಸ್ವಾರ್ಥ ಪ್ರೇರಣೆಯು ಸಾಮಾನ್ಯ ಬಾಲಕರನ್ನು ಜಗತ್ತು ನೆನೆಯುವಂತಹ ಅಸಾಧಾರಣ ಸಾಧಕರನ್ನಾಗಿ ಮಾಡುತ್ತದೆ. ಅಂತಹ ಸಾಧಕರ ಬಗ್ಗೆ ಕೆಲವು ಉದಾಹರಣೆಗಳು ನೋಡುವುದಾದರೆ ತಾಯಿಯ ಮಡಿಲಲ್ಲೇ ಬೆಳೆದ ವಿಶ್ವಗುರು ಸ್ವಾಮಿ ವಿವೇಕಾನಂದರು. ಜಗತ್ತನ್ನು ಬೆಳಗುವ ದೀಪಕ್ಕೆ ಮೊದಲು ತಾಯಿಯ ಮಡಿಲೇ ಎಣ್ಣೆ. ಸ್ವಾಮಿ ವಿವೇಕಾನಂದರು ಎಂದರೆ ಕೇವಲ ಒಬ್ಬ ಸನ್ಯಾಸಿಯಲ್ಲ, ಅವರು ಭಾರತದ ಆತ್ಮದ ಘೋಷಣೆ, ಯುವಕರ ಪ್ರೇರಣೆಯ ಜ್ವಾಲೆ, ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ ಶ್ರೀ ವಿವೇಕಾನಂದರು. ಆ ಮಹಾನ್ ವ್ಯಕ್ತಿತ್ವದ ಅಡಿಪಾಯಕ್ಕೆ ಮೊದಲ ಇಟ್ಟಿಗೆ ಇಟ್ಟವರು ಯಾರು ಅಂದರೆ ತಾಯಿ ಭುವನೇಶ್ವರಿದೇವಿ. ಚಿಕ್ಕಂದಿನಿಂದಲೂ ನರೇಂದ್ರನ ಕಿವಿಗೆ ರಾಮಾಯಣದ ಧೈರ್ಯ, ಮಹಾಭಾರತದ ನೀತಿ, ಪುರಾಣಗಳ ಕಥೆಗಳನ್ನು ಹೇಳಿ ಹೇಳಿ ಆಧ್ಯಾತ್ಮದ ಬೀಜವನ್ನು ತಾಯಿ ಬಿತ್ತಿದರು. ಮಗನ ಕಣ್ಣಲ್ಲಿ ಜಗತ್ತನ್ನು ಬದಲಿಸುವ ಕನಸು ಕಂಡಾಗ, "ನನ್ನ ಮಗ ನರೇಂದ್ರ ಜಗತ್ತನ್ನೇ ಬೆಳಗುತ್ತಾನೆ" ಎಂದು ಹೃದಯ ತುಂಬಿ ನಂಬಿದರು. ತಾಯಿಯ ಆಶೀರ್ವಾದ ಎಂದರೆ ಅದು ಬರೀ ಆಶೀರ್ವಾದವಲ್ಲ, ಅದು ಮಂತ್ರ. ಆ ಮಂತ್ರವೇ ನರೇಂದ್ರನನ್ನು ವಿವೇಕಾನಂದರನ್ನಾಗಿ ಮಾಡಿತು. ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ "ಸಹೋದರ ಸಹೋದರಿಯರೇ" ಎಂದು ಅವರು ಕೂಗಿದಾಗ ಅದರಲ್ಲಿ ಭುವನೇಶ್ವರಿದೇವಿಯ ಲಾಲನೆಯ ಸಿಹಿ ಇತ್ತು. ತಾಯಿ ಕೊಟ್ಟ ಕಥೆಗಳು ಅವರಿಗೆ ಶಕ್ತಿಯಾದವು. ತಾಯಿ ತುಂಬಿದ ನಂಬಿಕೆ ಅವರಿಗೆ ಧೈರ್ಯವಾಯಿತು. ತಾಯಿ ಹಚ್ಚಿದ ಆ ದೀಪವೇ ಇಂದು ಇಡೀ ಜಗತ್ತನ್ನು ಬೆಳಗುತ್ತಿದೆ.

Mother is the inspiration to acheivements


ರಾಮೇಶ್ವರದ ಸಮುದ್ರದ ಅಲೆಗಳ ನಡುವೆ ಬಡತನದ ಅಲೆಯನ್ನು ದಾಟಿ ಬೆಳೆದ ಹೆಸರೇ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ. ಅವರನ್ನು "ಮಿಸೈಲ್ ಮ್ಯಾನ್", "ಜನರ ರಾಷ್ಟ್ರಪತಿ" ಎಂದು ಇಡೀ ಜಗತ್ತು ಕೊಂಡಾಡಿದರೆ ಆ ಕೀರ್ತಿಯ ಬುನಾದಿಯಲ್ಲಿ ಇದ್ದದ್ದು ಒಬ್ಬ ತಾಯಿಯ ಕೈಯ ಊಟ ಮತ್ತು ಆಶೀರ್ವಾದ. ಅವರ ತಾಯಿ ಆಶಿಯಮ್ಮ ಅವರಿಗೆ ಶ್ರೀಮಂತಿಕೆ ಇರಲಿಲ್ಲ, ಆದರೆ ಕನಸಿಗೆ ಬೆಲೆ ಕೊಡುವ ಶ್ರೀಮಂತ ಮನಸ್ಸಿತ್ತು. ಮಗ ತಡರಾತ್ರಿ ಓದಿ ಮನೆಗೆ ಬಂದರೂ, "ಹಸಿವಾಗಿದೆಯಾ ನನ್ನ ಕಂದ" ಎಂದು ಪ್ರೀತಿಯಿಂದ ಊಟ ಬಡಿಸುತ್ತಿದ್ದರು. "ಮಗನೇ ಪ್ರಾಮಾಣಿಕವಾಗಿ ದುಡಿ, ದೊಡ್ಡ ಕನಸು ಕಾಣು" ಎಂಬ ಈ ಎರಡು ಮಾತುಗಳೇ ಕಲಾಂರಿಗೆ ಗೀತೋಪದೇಶವಾದವು. ಮಗ ವಿಜ್ಞಾನಿಯಾಗುವ ಕನಸು ಹೇಳಿದಾಗ "ನೀನು ದೊಡ್ಡ ವಿಜ್ಞಾನಿ ಆಗುವೆ" ಎಂದು ತಾಯಿ ಎದೆತಟ್ಟಿ ಹೇಳಿದ ಮಾತು ಅವರಿಗೆ ಬ್ರಹ್ಮಾಸ್ತ್ರವಾಯಿತು. ತಾಯಿ ಆಶಿಯಮ್ಮ ಬಡಿಸಿದ ಅನ್ನದಲ್ಲಿ ತ್ಯಾಗವಿತ್ತು. ಅವರು ಹೇಳಿದ ಮಾತಿನಲ್ಲಿ ನಂಬಿಕೆಯಿತ್ತು. ಆ ಎರಡೂ ಸೇರಿದ್ದರಿಂದಲೇ ರಾಮೇಶ್ವರದ ಒಂದು ಪುಟ್ಟ ಹುಡುಗ, ಭಾರತದ ಕ್ಷಿಪಣಿಗೆ ರೆಕ್ಕೆ ಕೊಟ್ಟರು. ದೇಶದ ರಾಷ್ಟ್ರಪತಿ ಭವನದವರೆಗೆ ಏರಿದರು. ತಾಯಿ ತಟ್ಟೆಯಲ್ಲಿ ಬಡಿಸಿದ್ದು ಅನ್ನವಲ್ಲ, ಅದು ಆತ್ಮವಿಶ್ವಾಸ. ಅದನ್ನು ಮಮತೆಯಿಂದ ಉಂಡು ಬೆಳೆದವರೇ ಜನರ ಪ್ರೀತಿಯ ಕಲಾಂ.

ಮಹಾರಾಷ್ಟ್ರದ ಮಣ್ಣಿನಲ್ಲಿ ಹಿಂದವಿ ಸ್ವರಾಜ್ಯದ ಬೀಜ ಬಿತ್ತಿದ ಹೆಸರೇ ಛತ್ರಪತಿ ಶಿವಾಜಿ ಮಹಾರಾಜರು. ಶೌರ್ಯದ ಕತ್ತಿಯಿಂದ ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಆದರೆ ಆ ಕತ್ತಿಗೆ ಮೊದಲು ಮೆರುಗು ಕೊಟ್ಟ ಕೈ ಯಾರದ್ದು? ಅದು ಜೀಜಾಮಾತೆ ಜೀಜಾಬಾಯಿಯವರದು. "ಮಗನೇ ಅನ್ಯಾಯದ ವಿರುದ್ಧ ಹೋರಾಡು. ಸ್ವಾಭಿಮಾನದಿಂದ ಬದುಕು" - ಆ ಒಂದು ಮಾತು ಬೀಜವಾಗಿ ಮಗನ ಎದೆಯಲ್ಲಿ ಸದಾ ಉಳಿಯಿತು. ಅದು ಬೆಳೆದು ಸ್ವರಾಜ್ಯದ ಮಹಾವೃಕ್ಷವಾಯಿತು. ತಾಯಿ ಹೇಳಿದ ಶೌರ್ಯದ ಪಾಠವೇ ಶಿವಾಜಿಯನ್ನು ಮೊಘಲರ ವಿರುದ್ಧ ನಿಲ್ಲುವಂತೆ ಮಾಡಿತು. ತಾಯಿ ತುಂಬಿದ ಸ್ವಾಭಿಮಾನವೇ ಅವರನ್ನು ರಾಜ್ಯ ಸ್ಥಾಪನೆಗೆ ಪ್ರೇರೇಪಿಸಿತು. ಜೀಜಾಮಾತೆ ಕೊಟ್ಟದ್ದು ಕೇವಲ ಕಥೆಗಳಲ್ಲ. ಅವರು ಕೊಟ್ಟಿದ್ದು ಧೈರ್ಯ ಮತ್ತು ಧ್ಯೇಯ. ಅದಕ್ಕಾಗಿಯೇ ಛತ್ರಪತಿ ಶಿವಾಜಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜೀಜಾಮಾತೆಯ ಬಳಿ ಹೋಗಿ ಆಶೀರ್ವಾದ ಪಡೆಯುತ್ತಿದ್ದರು. ಜೀಜಾಮಾತೆಯ ಮಡಿಲೇ ಮೊದಲ ದರ್ಬಾರ್. ಅಲ್ಲಿಂದ ಹೊರಟ ಕಂದನೇ ಛತ್ರಪತಿ. ತಾಯಿ ಕಲಿಸಿದ ಸ್ವಾಭಿಮಾನವೇ ಇಂದು ಕೋಟಿ ಕೋಟಿ ಹೃದಯದಲ್ಲಿ ಮಿನುಗುತ್ತಿರುವವರು ಶ್ರೀ ಶಿವಾಜಿ ಮಹಾರಾಜರು.

ಹಿರೇಮಗಳೂರಿನ ಹಸಿರು ಹೊಲಗಳ ನಡುವೆ ಸಾಹಿತ್ಯದ ಮೊದಲ ಪಾಠಶಾಲೆ ತೆರೆದದ್ದು ಒಂದು ತಾಯಿಯ ಮಡಿಲಲ್ಲಿ. ಆ ತಾಯಿಯೇ ವೆಂಕಟಲಕ್ಷಮ್ಮ. ಚಿಕ್ಕಂದಿನ ಕುವೆಂಪು ಅವರಿಗೆ ತಾಯಿಯು ರಾತ್ರಿಯ ಹೊತ್ತು ಲಾವಣಿ ಹಾಡಿ, ಜನಪದ ಕಥೆ ಹೇಳಿ ಕನ್ನಡದ ಮಮತೆಯನ್ನು ಕಲಿಸಿದರು. ಪ್ರತಿ ಕಥೆಯ ಕೊನೆಯಲ್ಲಿ ಒಂದೇ ಹಂಬಲ ಇಡುತ್ತಿದ್ದರು - "ನನ್ನ ಮಗ ಕನ್ನಡಕ್ಕೆ ಕೀರ್ತಿ ತರಬೇಕು" ಎಂದು. ಆ ತಾಯಿಯ ಹಂಬಲವೇ ಬೀಜವಾಯಿತು. ಅದು ಬೆಳೆದು ಕಾವ್ಯದ ಮಹಾವೃಕ್ಷವಾಯಿತು. ತಾಯಿ ಕಿವಿಯಲ್ಲಿ ಹಾಡಿದ ಲಾವಣಿಯೇ ಮುಂದೆ "ಜಯ ಭಾರತ ಜನನಿಯ ತನುಜಾತೆ" ಎಂಬ ನಾಡಗೀತೆಯಾಗಿ ಕೋಟಿ ಕಂಠಗಳಲ್ಲಿ ಮೊಳಗಿತು. ವೆಂಕಟಲಕ್ಷಮ್ಮ ಕೊಟ್ಟಿದ್ದು ಕೇವಲ ಕಥೆಗಳಲ್ಲ. ಅವರು ಕೊಟ್ಟಿದ್ದು ಭಾಷಾಭಿಮಾನ, ಮಾನವೀಯತೆ ಮತ್ತು ವಿಶ್ವಪ್ರೀತಿ. ಅದೇ ಆಸ್ತಿಯನ್ನು ತೆಗೆದುಕೊಂಡು ಹೋದ ಕುವೆಂಪು ಅವರು ರಾಷ್ಟ್ರಕವಿ ಎಂಬ ಬಿರುದು ಪಡೆದು ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವದ ಎತ್ತರಕ್ಕೆ ಹಾರಿಸಿದರು.

ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲೂ ತಾಯಿಯ ಭಾವನೆಗಳು ಬೆನ್ನೆಲುಬಾಗಿ ನಿಲ್ಲುತ್ತವೆ. ಆಕೆಯ ಮುನಿಸಿನಲ್ಲಿ ಪ್ರೀತಿಯಿರುತ್ತದೆ, ಹರಕೆಯಲ್ಲಿ ಭವಿಷ್ಯವಿರುತ್ತದೆ, ಕಣ್ಣೀರಿನಲ್ಲಿ ಮಮತೆಯಿರುತ್ತದೆ. ತಾಯಿಯ ಅಂತರಾಳದ ಈ ಮೂರು ಶಕ್ತಿಗಳನ್ನು ಗೌರವಿಸಿ ಆಕೆಯ ಮಾರ್ಗದರ್ಶನದಲ್ಲಿ ನಡೆಯುವ ಮಗುವಿನ ಜೀವನ ಎಂದಿಗೂ ಅಪೂರ್ಣವಾಗುವುದಿಲ್ಲ. ತಾಯಿಯೇ ಪ್ರತ್ಯಕ್ಷ ದೈವ, ಆಕೆಯ ಪ್ರೀತಿಯೇ ಜೀವನ್ಮುಖಿ.  
ಪ್ರತಿಯೊಬ್ಬ ಸಾಧಕನ ಕನಸಿಗೆ ತಾಯಿಯೇ ಮೊದಲ ಸ್ಫೂರ್ತಿ.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484   

ಆ ಒಂದು ಕ್ಷಣ , importance of a moment

ನಮ್ಮ ಇಡೀ ಜೀವನದ ದಿಕ್ಕನ್ನೇ ಬದಲಾಯಿಸಲು ವರ್ಷಗಳು ಬೇಕಾಗುವುದಿಲ್ಲ ಕೇವಲ ಆ ಒಂದು ಕ್ಷಣ ಸಾಕು. ಮಾನವನ ಇತಿಹಾಸ ಸಾಧನೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಗಮನಿಸಿದರೆ ಜಗತ್ತನ್ನು ಬದಲಾಯಿಸಿದ ದೊಡ್ಡ ನಿರ್ಧಾರಗಳು ಮತ್ತು ಆವಿಷ್ಕಾರಗಳು ಹುಟ್ಟಿಕೊಂಡಿದ್ದು ಯಾವುದೋ ಒಂದು ವಿಶಿಷ್ಟ ಕ್ಷಣದಲ್ಲಿಯೇ ಆಗಿರುತ್ತದೆ. ಆ ಒಂದು ಕ್ಷಣವೇ ಜೀವನದ ಅತ್ಯಂತ ಶಕ್ತಿಶಾಲಿ ತಿರುವು. ಇಂದೇ ಈಗಲೇ ಈ ಕ್ಷಣದಲ್ಲೇ ನಿಮ್ಮ ಗುರಿಯತ್ತ ಮೊದಲ ಹೆಜ್ಜೆಯನ್ನು ಇಡಿ. ಏಕೆಂದರೆ ನಿಮ್ಮ ಜೀವನವನ್ನು ಬದಲಾಯಿಸುವ ಆ ಒಂದು ಅಪೂರ್ವ ಕ್ಷಣ ಬೇರೇನೂ ಅಲ್ಲ, ಅದು ನೀವು ಈಗ ಬದುಕುತ್ತಿರುವ ಈ ಕ್ಷಣವೇ ಆಗಿರಬಹುದು. 

ಜಗತ್ತಿನ ಮಹಾನ್ ಸಾಧಕರ ಜೀವನವನ್ನು ನೋಡಿದರೆ ಆ ಒಂದು ಕ್ಷಣದ ಮಹತ್ವ ತಿಳಿಯುತ್ತದೆ. ಸೇಬಿನ ಹಣ್ಣು ಕೆಳಗೆ ಬಿದ್ದ ಆ ಒಂದು ಕ್ಷಣ ಸರ್ ಐಸಾಕ್ ನ್ಯೂಟನ್ ಅವರಿಗೆ ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿಯಲು ಪ್ರೇರಣೆ ನೀಡಿತು. ರೈಲಿನಿಂದ ಹೊರ ಹಾಕಲ್ಪಟ್ಟ ಆ ಒಂದು ಕಹಿ ಕ್ಷಣ, ಮೋಹನದಾಸ್ ಕರಮಚಂದ್ ಗಾಂಧೀಜಿಯವರನ್ನು ಮಹಾತ್ಮನನ್ನಾಗಿ ಪರಿವರ್ತಿಸಲು ನಾಂದಿ ಹಾಡಿತು. ಗೌತಮ ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದದ್ದು ಒಂದು ನಿರ್ದಿಷ್ಟ ಕ್ಷಣದಲ್ಲಿ. ಇವೆಲ್ಲವೂ ಕೇವಲ ಕಾಲದ ತುಣುಕುಗಳಲ್ಲ, ಬದಲಿಗೆ ಇತಿಹಾಸದ ಹಾದಿಯನ್ನೇ ಬದಲಿಸಿದ ಮಹಾನ್ ಕ್ಷಣಗಳು.



ಕಾಲ ಯಾರಿಗಾಗಿಯೂ ಕಾಯುವುದಿಲ್ಲ ಆದರೆ ಕಾಲದ ಓಟದಲ್ಲಿ ಬರುವ ಆ ಒಂದು ಕ್ಷಣ ನಮಗಾಗಿ ಕಾಯುತ್ತಿರುತ್ತದೆ. ಆ ಕ್ಷಣವನ್ನು ಸದುಪಯೋಗ ಪಡಿಸಿಕೊಂಡವರು ಇತಿಹಾಸ ಸೃಷ್ಟಿಸುತ್ತಾರೆ, ನಿರ್ಲಕ್ಷಿಸಿದವರು ಕೇವಲ ವೀಕ್ಷಕರಾಗಿ ಉಳಿಯುತ್ತಾರೆ. ಹಾಗಾಗಿ ಪ್ರತಿಯೊಂದು ಕ್ಷಣವನ್ನೂ ಪ್ರೀತಿಯಿಂದ ಜಾಗರೂಕತೆಯಿಂದ ಬದುಕಿ. ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟುವ ಆ ಒಂದು ಸುಂದರ ಕ್ಷಣ ಇದೇ ಆಗಿರಬಹುದು.

ತಾಯಿಯ ಗರ್ಭದಿಂದ ಮಗು ಈ ಭೂಮಿಗೆ ಬರುವ ಆ ಒಂದು ಕ್ಷಣ ಮಾನವ ಜೀವನದ ಅತ್ಯಂತ ಅದ್ಭುತ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಒಂಬತ್ತು ತಿಂಗಳುಗಳ ಕಾಲ ತಾಯಿಯ ಉಸಿರನ್ನೇ ತನ್ನ ಉಸಿರಾಗಿಸಿಕೊಂಡಿದ್ದ ಜೀವವೊಂದು ಪ್ರಕೃತಿಯ ಮಡಿಲಿಗೆ ಹೆಜ್ಜೆ ಇಡುವ ಸಮಯವದು. ಆ ಕ್ಷಣದಲ್ಲಿ ಇಡೀ ಜಗತ್ತೇ ಒಂದು ಅಪೂರ್ವ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ. ಮಗು ಮೊದಲ ಬಾರಿ ಉಸಿರಾಡಿದಾಗ ಜೋರಾಗಿ ಅಳುತ್ತದೆ. ಆ ಅಳು ಮಗುವಿನ ಆರೋಗ್ಯದ ಸಂಕೇತ. ಕತ್ತಲ ಕೋಣೆಯಿಂದ ಹೊರಬಂದ ಮಗುವಿಗೆ ಈ ಹೊಸ ಪ್ರಪಂಚದ ಗಾಳಿ, ಬೆಳಕು ಅಪರಿಚಿತವಾಗಿ ಕಾಡಬಹುದು. ಆದರೆ ಮಗುವಿನ ಆ ಅಳುವಿನ ಧ್ವನಿ ಕೇಳುತ್ತಿದ್ದಂತೆ, ಅಲ್ಲಿಯವರೆಗೆ ಹೆರಿಗೆಯ ತೀವ್ರ ಹೆರಿಗೆ ನೋವನ್ನು ಅನುಭವಿಸುತ್ತಿದ್ದ ತಾಯಿಯ ಮುಖದಲ್ಲಿ ಕೋಟಿ ದೀಪ ಬೆಳಗಿದಂತಹ ಸಂತೋಷ ಮೂಡುತ್ತದೆ. ಅವಳ ಕಣ್ಣೀರು ಆನಂದ ಭಾಷ್ಪವಾಗಿ ಬದಲಾಗುತ್ತದೆ. 

1947 ರ ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ಭಾರತವು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಿ ಪಡೆದು ಸ್ವತಂತ್ರ ದೇಶವಾಗಿ ಉದಯಿಸಿತು. ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಆ ಐತಿಹಾಸಿಕ ಕ್ಷಣವು ಭಾರತೀಯರ ಪಾಲಿಗೆ ಹೊಸ ಯುಗದ ಆರಂಭವಾಗಿತ್ತು. ನೂರಾರು ವರ್ಷಗಳ ಗುಲಾಮಗಿರಿ ಅಸಂಖ್ಯಾತ ದೇಶಭಕ್ತರ ತ್ಯಾಗ ಮತ್ತು ಬಲಿದಾನಗಳ ಪ್ರತಿಫಲ ಆ ಒಂದು ಕ್ಷಣದಲ್ಲಿ ಸಾಕಾರಗೊಂಡಿತು. ಕತ್ತಲೆಯ ಕಾರ್ಮೋಡ ಸರಿದು, ಮುಂಜಾನೆಯ ಹೊಸ ಬೆಳಕು ಮೂಡಿದ ಆ ಅಮೂಲ್ಯ ಕ್ಷಣ ಇಂದಿಗೂ ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಪುಟವಾಗಿದೆ.

ಭಾರತದಲ್ಲಿ ಮೊದಲ ಕರೋನ ವೈರಸ್ ಪ್ರಕರಣ ಪತ್ತೆಯಾದ ಆ ಒಂದು ಕ್ಷಣ ದೇಶದ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಮತ್ತು ಮರೆಯಲಾಗದ ಕ್ಷಣವಾಗಿದೆ. ಆ ಒಂದು ಕ್ಷಣದ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಡೀ ದೇಶವೇ ಒಂದು ನಿಮಿಷ ಸ್ತಬ್ದವಾಯಿತು. ಟಿವಿ ಸುದ್ದಿಗಳಲ್ಲಿ ಚೀನಾ ಅಥವಾ ಇತರ ದೇಶಗಳಲ್ಲಿ ಹರಡುತ್ತಿದೆ ಎಂದು ಕೇಳುತ್ತಿದ್ದ ಮಹಾಮಾರಿ ನಮ್ಮ ಹೊಸ್ತಿಲಿಗೆ ಬಂದು ನಿಂತಿದೆ ಎಂಬ ಸತ್ಯ ಜೀರ್ಣಿಸಿಕೊಳ್ಳಲು ಅಸಾಧ್ಯವಾಗಿತ್ತು. ಆ ಕ್ಷಣ ದೇಶದ ಜನರ ಮನಸ್ಸಿನಲ್ಲಿ ಅಪರಿಚಿತ ಭಯ, ಆತಂಕ ಮತ್ತು ಆಶ್ವರ್ಯವನ್ನು ಒಟ್ಟಿಗೆ ಮೂಡಿಸಿತು. ಭವಿಷ್ಯದಲ್ಲಿ ಏನಾಗಬಹುದು ಎಂಬ ಕಲ್ಪನೆಯೂ ಯಾರಿಗೂ ಇರಲಿಲ್ಲ. ಕೋಟ್ಯಂತರ ಜನರ ಬದುಕು ಆರ್ಥಿಕತೆ ಮತ್ತು ದೈನಂದಿನ ದಿನಚರಿಯನ್ನು ಸಂಪೂರ್ಣವಾಗಿ ಬದಲಾಯಿಸಿದ ಆ ಕ್ಷಣ ಭಾರತೀಯರ ನೆನಪಿನಲ್ಲಿ ಎಂದಿಗೂ ಮಾಸದ ಕಹಿ ನೆನಪಾಗಿ ಉಳಿದಿದೆ. ಅದು ಕೇವಲ ಒಂದು ವೈರಸ್ ಬಂದ ಕ್ಷಣವಾಗಿರಲಿಲ್ಲ, ಬದಲಿಗೆ ಇಡೀ ದೇಶದ ದಿಕ್ಕನ್ನೇ ಬದಲಿಸಿದ ಮಹಾವಿಪತ್ತಿನ ಆರಂಭದ ಕ್ಷಣವಾಗಿತ್ತು.

ಮುಂದೆ ಸಾಯುವ ಆ ಒಂದು ಕ್ಷಣ ನಮಗೆ ಜೀವನದ ನಿಜವಾದ ಮೌಲ್ಯವನ್ನು ನೆನಪಿಸುತ್ತದೆ. ನಾವು ಕೊನೆಗೆ ಕೊಂಡೊಯ್ಯುವುದು ಕೇವಲ ನೆನಪುಗಳು ಮತ್ತು ನಾವು ಹಂಚಿದ ಪ್ರೀತಿಯನ್ನು ಮಾತ್ರ. ಆ ಕೊನೆಯ ಕ್ಷಣದಲ್ಲಿ ಪಶ್ಚಾತ್ತಾಪ ಪಡುವುದಕ್ಕಿಂತ ಬದುಕಿರುವಾಗಲೇ ಎಲ್ಲರೊಂದಿಗೆ ಪ್ರೀತಿಯಿಂದ ಬಾಳುವುದು ಸಾರ್ಥಕತೆಯ ದಾರಿಯಾಗಿದೆ.

ಕನ್ನಡ ಚಿತ್ರರಂಗದ ಧ್ರುವತಾರೆ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಡಾ.ಪುನೀತ್ ರಾಜ್‌ಕುಮಾರ್ ಅವರು ಮರಣ ಹೊಂದಿದ ಆ ಒಂದು ಕ್ಷಣ ಇಡೀ ಕರ್ನಾಟಕವನ್ನೇ ಕತ್ತಲಿಗೆ ತಳ್ಳಿತು. 2021 ರ ಅಕ್ಟೋಬರ್ 29 ರ ಆ ದಿನ ಇಂದಿಗೂ ಯಾರೂ ಮರೆಯಲಾಗದ ಕರಾಳ ದಿನ. ಯಾವಾಗಲೂ ನಗುತ್ತಾ ಪ್ರೀತಿ ಹಂಚುತ್ತಿದ್ದ ಸದೃಢ ಕಾಯದ ನಟನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಯಿತು ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಡೀ ರಾಜ್ಯವೇ ಸ್ತಬ್ಧವಾಯಿತು. ಆಸ್ಪತ್ರೆಯ ಮುಂದೆ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳ ಕಣ್ಣುಗಳಲ್ಲಿ ಆತಂಕ ಮನೆಮಾಡಿತ್ತು. ಅಪ್ಪುಗೆ ಏನೂ ಆಗುವುದಿಲ್ಲ ಅವರು ಮತ್ತೆ ಎದ್ದು ಬರುತ್ತಾರೆ ಎಂಬ ಆಶಾಭಾವನೆ ಎಲ್ಲರಲ್ಲೂ ಇತ್ತು. ಆದರೆ, ವೈದ್ಯರು ಪುನೀತ್ ಇನ್ನಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ ಆ ಒಂದು ಕ್ಷಣ, ಕೋಟ್ಯಂತರ ಜನರ ಹೃದಯ ಒಡೆದು ಚೂರಾಯಿತು. ಆ ಸುದ್ದಿ ಕೇಳಿ ಇಡೀ ಕರ್ನಾಟಕವೇ ಅನಾಥಪ್ರಜ್ಞೆಯಿಂದ ತತ್ತರಿಸಿತು. ಅಪ್ಪು ದೈಹಿಕವಾಗಿ ನಮ್ಮನ್ನು ಅಗಲಿದ ಆ ಕ್ಷಣ ಇತಿಹಾಸದಲ್ಲಿ ಅತ್ಯಂತ ದುಃಖದ ಕ್ಷಣವಾಗಿ ದಾಖಲಾಯಿತು. ಆದರೆ ಅವರು ಬಿಟ್ಟುಹೋದ ಪ್ರೀತಿ, ಆದರ್ಶಗಳು ಇಂದಿಗೂ ಜನರ ಹೃದಯದಲ್ಲಿ ಅವರನ್ನು ಅಮರವಾಗಿಸಿವೆ.

ಆ ಒಂದು ಕ್ಷಣ ಇಡೀ ಕ್ರೀಡಾಂಗಣದಲ್ಲಿ ಭಾರತದ ಜಯಘೋಷ ಮೊಳಗಿತು. ಅಭಿನವ್ ಬಿಂದ್ರಾ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ ಮೊದಲ ಬಾರಿಗೆ ಬಂಗಾರದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದರು. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಜನ ಗಣ ಮನ ಮೊಳಗಿದಾಗ ಪ್ರತಿಯೊಬ್ಬ ಭಾರತೀಯನ ಕಣ್ಣಲ್ಲೂ ಹೆಮ್ಮೆಯ ಆನಂದಭಾಷ್ಪ ಹರಿಯಿತು. ಆ ಒಂದು ಐತಿಹಾಸಿಕ ಕ್ಷಣ ಭಾರತೀಯ ಕ್ರೀಡಾ ಜಗತ್ತಿನ ದಿಕ್ಕನ್ನೇ ಬದಲಾಯಿಸಿತು ಮತ್ತು ಕೋಟ್ಯಂತರ ಯುವಕರಿಗೆ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಲು ಇಂದಿಗೂ ದಾರಿದೀಪವಾಗಿದೆ.

ಕೊನೆಯದಾಗಿ ಹೇಳಬೇಕೆಂದರೆ ಕಳೆದುಹೋದ ಸಮಯ ಮತ್ತೆ ಮರಳಿ ಬಾರದು. ಆದ್ದರಿಂದ ನಮ್ಮ ಕೈಯಲ್ಲಿರುವ ಪ್ರತಿಯೊಂದು ಕ್ಷಣವನ್ನೂ ಪ್ರೀತಿಸಬೇಕು. ಆ ಒಂದು ಧನಾತ್ಮಕ ಕ್ಷಣಕ್ಕಾಗಿ ಕಾಯುತ್ತಾ, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದೇ ನಿಜವಾದ ಜೀವನ. ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯ ಕ್ಷಣ ಹಾಗೂ ಕೆಟ್ಟ ಕ್ಷಣಗಳು ಬಂದೇ ಬರುತ್ತವೆ. ಕೆಟ್ಟ ಕ್ಷಣಗಳನ್ನು ಮರೆತು, ಒಳ್ಳೆಯ ಕ್ಷಣಗಳನ್ನು ಸದಾ ಸ್ಮರಿಸೋಣ



ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

Terms | Privacy | 2024 🇮🇳
–>