-->

ಹೂವಿನ ಜೊತೆ ನಾರೂ ಸ್ವರ್ಗ ಸೇರಿತು - a short story

 ಹೂವಿನ ಹಾರ ಮಾಡಲು ನಾರು ಬೇಕೇ ಬೇಕು. ಆ ಹಾರವನ್ನು ದೇವರಿಗೆ ಮುಡಿಸಿದಾಗ ಹೂವಿನ ಸಂಗಡ ಹಾರ ತಯಾರಿಸಲು ಉಪಯೋಗಿಸಿದ ನಾರು ದೇವರ ತಲೆಗೆ ಏರುತ್ತದೆ. ದೇವರ ತಲೆಯೇರುವ ಭಾಗ್ಯ ನಾರಿಗೆ ಹೂವಿನ ಸಂಗಡ ಇದ್ದುದರಿಂದ ಬಂತು. ಹಾಗೆಯೇ ಕೇವಲ ನಾರನ್ನು ಯಾರೂ ದೇವರ ತಲೆಗೆ ಏರಿಸುವುದಿಲ್ಲ. ಇಂತಹ ನಾರಿನ ಭಾಗ್ಯವನ್ನೇ " ಹೂವಿನಿಂದ ನಾರು ಸ್ವರ್ಗಕ್ಕೆ " ಎಂದು ಹೇಳಲಾಗುತ್ತದೆ.



ನಮ್ಮ ಜೀವನದಲ್ಲಿಯೂ ಇಂತಹ ಅನೇಕ ಘಟನೆಗಳು ನಡೆಯುತ್ತವೆ.  ಒಂದು ಉದಾಹರಣೆ ನೋಡೋಣ.
ನಾವು ಎಂದಾದರೂ ದೊಡ್ಡ ವ್ಯಕ್ತಿಯ ಸಂಗಡ ಹೋಗುತ್ತಿದ್ದೇವೆ ಎಂದು ತಿಳಿಯೋಣ.  ದಾರಿಯಲ್ಲಿ ಹೋಗುವಾಗ ಪರಿಚಿತ ಜನರು ಆ ವ್ಯಕ್ತಿಗೆ ಕೈ ಮುಗಿದು ನಮಸ್ಕರಿಸಿ ಗೌರವ ಸೂಚಿಸುತ್ತಾರೆ.  ಅವರ ಸಂಗಡ ಇದ್ದುದರಿಂದ ನಮ್ಮನ್ನೂ ಗುರುತಿಸಿ ನಮಗೂ ಗೌರವ ಕೊಡುತ್ತಾರೆ.  ಮುಂದೆ ಎಂದಾದರೂ ಆ ಜನರಿಗೆ ನಾವು ಒಬ್ಬರೇ ಇದ್ದಾಗ ಕಂಡರೂ ಪುನಃ ಅವರು ನಮಗೆ ಗುರುತಿಸಿ ಮಾತಾಡಿಸಿ ಗೌರವ ಕೊಡಬಹುದು.  
ಹೀಗೆ ನಾವು ಆ ದೊಡ್ಡ ವ್ಯಕ್ತಿಯ ಸಂಗಡ ಇದ್ದ ಕಾರಣ ಜನರು ನಮಗೂ ಗೌರವ ಕೊಡುವಂತಾಯಿತು.  ಇದೇ 
"  ಹೂವಿನಿಂದ ನಾರು ಸ್ವರ್ಗಕ್ಕೆ " ಎಂಬ ಮಾತಿನ ಭಾವಾರ್ಥ.

ಈ ವಿಷಯವಾಗಿ ಸುಬಾಷಿತವೊಂದು ಸುಂದರವಾಗಿ ವರ್ಣಿಸಿದೆ.  ನೋಡಿ.

ಗುಣವಜ್ಜನ ಸಂಸರ್ಗಾತ್
ಯಾತಿ ಸ್ವಲ್ಪೋSಪಿ ಗೌರವಮ್ |
ಪುಷ್ಪಮಾಲಾನುಷಂಗೇಣ
ಸೂತ್ರಂ ಶಿರಸಿ ಧಾರ್ಯತೇ ||

ಇದರ ಅರ್ಥ ಹೀಗಿದೆ.---
ಗುಣಶಾಲಿ ಜನರ ( ಸಜ್ಜನರ ) ಸಹವಾಸದಿಂದ ಸಣ್ಣವನೂ  ಗೌರವವನ್ನು ಪಡೆಯುತ್ತಾನೆ.  ಹೂವಿನ ಹಾರದ ಸಂಬಂಧದಿಂದ ನಾರನ್ನು ತಲೆಯಲ್ಲಿ ಮುಡಿಯುತ್ತಾರೆ.  
*ಕೇವಲ ನಾರನ್ನಾಗಲಿ,  ದಾರವನ್ನಾಗಲಿ ಜನರು ತಲೆಯಲ್ಲಿ ಧರಿಸುವದಿಲ್ಲ. ಹೂವಿನ ಹಾರ ಮಾಡಲು ನಾರನ್ನಾಗಲಿ, ದಾರವನ್ನಾಗಲಿ ಉಪಯೋಗಿಸಲೇ ಬೇಕು*. ಹೀಗೆ ಹೂವಿನ ಹಾರದಲ್ಲಿ *ಹೂವಿನ ಸಂಗಡ ನಾರು ಇರುವುದರಿಂದ ಆ ನಾರು ಅನಾಯಾಸವಾಗಿ, ಸಹಜವಾಗಿ ನಮ್ಮ ಮುಡಿಯನ್ನು ಏರುತ್ತದೆ.  ಆ ಹಾರ ದೇವರಿಗೆ ಏರಿಸಿದರೆ ಆ ನಾರೂ ಸಹ ದೇವರ ಮುಡಿಯನ್ನು ಏರುತ್ತದೆ* 
ಇದೇ ರೀತಿ *ನಾವು ಸಜ್ಜನರ* *ಜೊತೆಯಲ್ಲಿ ಅವರ ಸಹವಾಸದಲ್ಲಿ ಇದ್ದಾಗ ಅವರಿಗೆ ಸಿಗುವ ಗೌರವ - ಮರ್ಯಾದೆಗಳ ಜೊತೆಗೇ ನಮಗೂ ಸ್ವಲ್ಪ ಮಟ್ಟಿಗಾದರೂ ಗೌರವ - ಮರ್ಯಾದೆಗಳು ಸಿಗುತ್ತವೆ.  ಆದ್ದರಿಂದ ನಾವು ಸದಾ ಸಜ್ಜನರ ಸಹವಾಸದಲ್ಲಿಯೇ ಇರುವುದು ಒಳಿತು.  ಅದರಿಂದ ನಮಗೆ ಇಬ್ಬಗೆಯ ಪ್ರಯೋಜನವಿದೆ. *ಒಂದು,  ಅವರಿಗೆ ಸಿಗುವ ಮನ್ನಣೆ ಗೌರವ ಗಳ ಜೊತೆಗೆ ನಮಗೂ ತಕ್ಕ ಮಟ್ಟಿಗೆ ಗೌರವ ಸಿಗುತ್ತದೆ*  
*ಎರಡು,ಅವರಲ್ಲಿರುವ ಒಳ್ಳೆಯ ಗುಣಗಳ ಪ್ರಭಾವ ನಮ್ಮ ಮೇಲೂ ಆಗಿ ನಮಲ್ಲಿಯೂ ಆ ಒಳ್ಳೆಯ ಗುಣಗಳು ಬಂದು*
ನೆಲೆಸಬಹುದು*
ಹಾಗಾದಾಗ ನಾವೂ ಸಹ ಅವರಂತೆ ಒಳ್ಳೆಯವರಾಗಬಹುದು.  ಇದು ಆಗಲೇಬೇಕು. ಆಗ ಮಾತ್ರ 
*ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ*" ಎಂಬ ಮಾತು ಸಾರ್ಥಕವಾಗುತ್ತದೆ.  ಇದೇ ನಮ್ಮ ಗುರಿಯಾಗಬೇಕು. ಇದಕ್ಕಾಗಿಯೇ ನಾವು ದೊಡ್ಡವರ ಸಹವಾಸ ಮಾಡಬೇಕು.  ಅವರ ಸಹವಾಸದಿಂದ ನಮ್ಮ ಅಂತರಂಗ ಹಾಗೂ ಬಹಿರಂಗ ಶುದ್ಧಿಯಾಗುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡುವ ಗುಣಗಳು ಗುಣಶಾಲಿಗಳ,  ಸಜ್ಜನರ ಒಡನಾಟದಲ್ಲಿರುತ್ತವೆ
ಇಂತಹ ಸಜ್ಜನರ ಸಹವಾಸ ಹೆಚ್ಚೆಚ್ಚು ಮಾಡೋಣ. ಅವರ ಒಳ್ಳೆಯ ಗುಣಗಳನ್ನು ಸಂಪಾದಿಸೋಣ.

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
Terms | Privacy | 2024 🇮🇳
–>