-->

A story from husband diary after losing his wife

ಪತ್ನಿ ತೀರಿಕೊಂಡು ಇಂದಿಗೆ ನಾಲ್ಕು ದಿನಗಳಾಯಿತು.... 

ಆಕೆಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಸಂಬಂಧಿಕರು ಒಬ್ಬೊಬ್ಬರಾಗಿ ಹೊರಟು ಹೋದರು...

ಕೊನೆಗೆ ಸಾವಿನ ಗಂಧವಿರುವ ಆ ಮನೆಯಲ್ಲಿ ನಾನು ಮತ್ತು ನನ್ನ  ಮಕ್ಕಳು ಮಾತ್ರವಾಗಿ ಬಾಕಿಯಾದೆವು...

*ಆಕೆ ಜೊತೆಯಲ್ಲಿಲ್ಲ ಎಂಬುದನ್ನು ನಂಬುವುದಕ್ಕೂ ನನಗೆ ಕಷ್ಟವಾಗುತ್ತಿದೆ....*

*ರೀ... ಇಲ್ಲಿ ನೋಡಿ...*  ಅಂತ ಹೇಳುತ್ತಾ ನನ್ನ ಬಳಿ ಓಡಿ ಬರುವುದನ್ನು ನಿನ್ನೆ ಎಂಬಂತೆ ನಾನು ನೆನಪಿಸಿಕೊಂಡೆ...

*ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಸೋತು ಹೋದ ನತದೃಷ್ಟೆಯಾಗಿದ್ದಳು ಆಕೆ.....*

ನಮ್ಮ ಮೇಲಿನ ಅತಿಯಾದ ಪ್ರೀತಿಯಿಂದಲೇ ಇರಬೇಕು ಆಕೆ ಯಾವತ್ತೂ ನಮ್ಮಿಂದ ದೂರ ಹೋಗಿರಲಿಲ್ಲ....

ತವರು ಮನೆಗೆ ಹೋದರೂ ಕೂಡಾ ಮನೆಯಲ್ಲಿ ಅವರು ಮತ್ತು ಮಕ್ಕಳು ಮಾತ್ರ ಇರೋದು ಅಂತ ಕಾರಣ ಹೇಳಿ ಸಂಜೆಯಾಗುತ್ತಲೇ ಓಡೋಡಿ ಮನೆ ತಲುಪುತ್ತಿದ್ದಳು...
ನಿಜವಾಗಿಯೂ ಆಕೆ ಆಕೆಯ ಮನೆಗೆ ಹೋಗುವುದು ನನಗೆ ಇಷ್ಟವಿರಲಿಲ್ಲ....   ಅದು ಆಕೆಯ ಮೇಲಿನ ಪ್ರೀತಿಯಿಂದಾಗಿರಲಿಲ್ಲ. ಬದಲಾಗಿ, ಆಕೆ ಹೋದರೆ, ನಮಗೆ ಅಡುಗೆ ಮಾಡಿ ಬಡಿಸುವವರು ಯಾರೂ ಇಲ್ಲ ಎಂಬ  *ಸ್ವಾರ್ಥ* ಕಾರಣವಾಗಿತ್ತು...

ನಾನು ಮತ್ತು ಮಕ್ಕಳು ರಜಾದಿನಗಳಲ್ಲಿ ಟಿ ವಿಯ ಮುಂದೆ ಒಂದೊಂದು ಕಾರ್ಯಕ್ರಮವನ್ನು ನೋಡಿ ಖುಷಿಪಡುವಾಗ, ಅಡುಗೆ ಮನೆಯಲ್ಲಿ ಅಡುಗೆ ಮಾಡುವುದರಲ್ಲಿ  ನಿರತಳಾಗಿರುತ್ತಿದ್ದಳು ಆಕೆ...

ಯಾವಾಗಲಾದರೂ ಸ್ವಲ್ಪ ಟಿ ವಿ ನೋಡೋದಕ್ಕೆ ನಮ್ಮ ಜೊತೆ ಬಂದು ಕುಳಿತರೆ, - *ಅಮ್ಮಾ ನೀರು...*
*ಲೇ.. ಸ್ವಲ್ಪ ಟೀ ಮಾಡು...* *ಫ್ಯಾನ್  ಹಾಕು...*
ಅಂತ ಎಲ್ಲಾ ಹೇಳಿ ಆಕೆಯನ್ನು ನಾವು ಆ ಅಡುಗೆ ಕೋಣೆಗೇ ವಾಪಾಸ್  ಕಳುಹಿಸುತ್ತಿದ್ದೆವು...

ನಾನು ಹೇಳದೆಯೇ ಎಲ್ಲವನ್ನೂ ಅರ್ಥ ಮಾಡಿಕೊಂಡು ನನ್ನ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದಳು...  

*ಇಂದು ಈಗ ಒಂದು ಕಪ್ ಟೀ ಮಾಡಿಕೊಡಲಿಕ್ಕೋ...,*
*ಒಂದು ಲೋಟ ನೀರು ಕೊಡಲಿಕ್ಕೋ, ಆಕೆ ಜೊತೆಯಲ್ಲಿಲ್ಲ ಎಂಬ ಕಟು ಸತ್ಯವನ್ನು ನಾನು ನೋವಿನಿಂದಲೇ ಅರಿತೆ.....*

ಯಾವುದಕ್ಕೂ ಆಕೆ ದೂರುಗಳನ್ನು ಹೇಳಿದವಳಲ್ಲಾ... ಒಂದು ಒಳ್ಳೆಯ ಸೀರೆ ಕೂಡಾ ನಾನು ಖರೀದಿಸಿಕೊಟ್ಟಿರಲಿಲ್ಲ‌......
ಒಂದು ಸಿನೆಮಾ ನೋಡಲು ಕೂಡಾ ಆಕೆಯನ್ನು ಜೊತೆಯಲ್ಲಿ ಕರಕ್ಕೊಂಡೋಗಿರಲಿಲ್ಲ...
ಕ್ಲಬ್, ಪಾರ್ಟಿ ಅಂತ ನಾನು ತಡವಾಗಿ ಮನೆಗೆ ಬರುವಾಗ ಆಕೆ ಗಾಬರಿಯಿಂದ  "ಯಾಕೆ ತಡವಾಯಿತು...?"  ಅಂತ ಕೇಳುವಾಗ ನಾನು ಆಕೆಯ ಪ್ರಶ್ನೆಯನ್ನು ಲೆಕ್ಕಿಸದೆ ನಿರ್ಲಕ್ಷಿಸುತ್ತಿದ್ದೆ.....

*ರೀ... ನೋಡಿ.. ಕರೆಂಟ್ ಬಿಲ್ ಪಾವತಿಸಬೇಕಾದ ಕೊನೆಯ ದಿನ ನಾಳೆ...*

ನೋಡಿ ಹಾಲಿನವನಿಗೆ ದುಡ್ಡು ಕೊಡಬೇಕಾದ ಸಮಯ ಹತ್ತಿರ ಬಂತು...

*ಪೇಪರ್ ನವ ನಿನ್ನೆ ದುಡ್ಡು ಕೇಳಿ ಹೋದ...*

ಮಕ್ಕಳ ಶಾಲೆಯ ಫೀಸ್ ನಾಳೆನೇ ಕೊಡಬೇಕು ರೀ.....

*ನೋಡಿ ನಿಮ್ಮ ಬಿ ಪಿ ಯ ಮಾತ್ರೆ ಖಾಲಿಯಾಗಿದೆ...*

ಹಾಗೆ ಆಕೆಯ ಬಯಕೆ ಮತ್ತು ಬೇಡಿಕೆಗಳನ್ನು ಬಿಟ್ಟು, ಉಳಿದ  ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಆಕೆ ನೆನಪಿಸುವಳು.....

*ಇನ್ನು ಹಾಗೆ ನೆನಪಿಸುವವರು ಯಾರೂ ಇಲ್ಲ..* 😔

ರಾತ್ರಿ ಕೆಲಸವೆಲ್ಲಾ ಮುಗಿಸಿ, ನನ್ನ ಪಕ್ಕದಲ್ಲಿ ಬಂದು ಮಲಗುವಾಗ, ಎದೆ ನೋಯುತ್ತಿದೆ, ಕಾಲು ನೋಯುತ್ತಿದೆ ಅಂತ ಆಕೆ ಹೇಳುವಾಗ, -  *ಅದು ನಿನಗೆ ಮನೆಯಲ್ಲಿ ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುತ್ತಿಯಲ್ಲಾ..*
   *ಬೆಳಿಗ್ಗೆ ಐದು ಗಂಟೆಗೆ ಎದ್ದು ಸ್ವಲ್ಪ ವಾಕಿಂಗ್ ಮಾಡಿದರೆ ಎಲ್ಲಾ ಸರಿಹೋಗುತ್ತೆ.."'*  ಅಂತ ನಾನು ಹೇಳುವಾಗ, ಆಕೆಯ ಕಣ್ಣುಗಳು ತುಂಬುವುದನ್ನು ನಾನು ನೋಡದ ಹಾಗೆ ನಟಿಸುತ್ತಾ ತಿರುಗಿ ಮಲಗುತ್ತಿದ್ದೆ...!!

*ಕೊನೆಗೆ ಆ ಎದೆ ನೋವು ಹಾರ್ಟ್ ಅ್ಯಟೇಕ್ ನ ರೂಪದಲ್ಲಿ ಬಂದು ಆಕೆಯನ್ನು ಕರಕೊಂಡು ಹೋಗುವಷ್ಟರಲ್ಲಿ ಆಕೆಯ ನೋವನ್ನು ಅರ್ಥಮಾಡಿಕೊಳ್ಳಲು ತುಂಬಾ ತಡಮಾಡಿಬಿಟ್ಟೆ...*

ಮನೆಗೆಲಸಗಳನ್ನು ಮಾಡುತ್ತಾ , ಆಕೆಯ ನೆನಪುಗಳೊಂದಿಗೆ ಇಂದಿಗೆ ನಾಲ್ಕು ದಿನಗಳನ್ನು ದೂಡಿ ಮುಗಿಸಿದೆ... "ಮನೆಗೆಲಸ ಅಷ್ಟು ಸುಲಭವಲ್ಲ" ಎಂಬ ಕಟುಸತ್ಯವನ್ನು ಬಹುಬೇಗನೆ ಅರಿತುಕೊಂಡೆ.....

ಆಕೆಯನ್ನು ದೂರಿದ ದಿನಗಳನ್ನು, ಚುಚ್ಚು ಮಾತುಗಳಿಂದ ಆಕೆಯನ್ನು ನೋಯಿಸಿದ ದಿನಗಳನ್ನು ನಾನು ಶಪಿಸುತ್ತಾ ಸ್ವತಃ ಮರುಗತೊಡಗಿದೆ....

ನಾನು ಕೆಲಸಕ್ಕೆ ಹೋಗಲು ಹೊರಡುವಾಗ, ಐರನ್ ಮಾಡಿಟ್ಟ ಬಟ್ಟೆಗಾಗಿ ಹುಡುಕಾಡಿದೆ.....

A story from husbands diary after losing his wife



*ರೀ... ನೀವು ಈ ನೀಲಿ ಬಣ್ಣದ ಶರ್ಟ್,  ಕ್ರೀಮ್ ಕಲರ್  ಪ್ಯಾಂಟ್ ಧರಿಸಿ... ಇದು ನಿಮಗೆ ಚೆನ್ನಾಗಿ ಕಾಣಿಸುತ್ತಿದೆ"*... ಅಂತ ಆಕೆ ಹೇಳುವ  ಹಾಗೆ   ನನಗೆ ಅನಿಸಿತು......

ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ  ನನಗಾಗಿ ಯಾರೂ ನಗುಮುಖ'ದಿಂದ  ಬಾಗಿಲು ತೆರೆಯಲಿಲ್ಲ.....!!
ನನ್ನ ಬರುವಿಕೆಗಾಗಿ ಯಾರೂ ಹಸಿವು ತಡೆದು  ಕಾದು ಕೂರಲಿಲ್ಲ....
*ಯಾಕೆ ಇಷ್ಟು ತಡಮಾಡಿ ಬಂದಿದ್ದೀರಿ* ಅಂತ ಯಾರೂ ನನ್ನತ್ರ ಗಾಬರಿಯಿಂದ ಕೇಳಲಿಲ್ಲ....

ಕೊನೆಗೆ ನಾನು ಬಾಗಿಲನ್ನು ದೂಡಿ ಒಳಗೆ ಹೋದಾಗ, ಹಾಲ್ ನಲ್ಲಿ ನಾನು ಬಂದದ್ದು ಕೂಡಾ ಅರಿಯದೆ, ಮಕ್ಕಳು ಮೊಬೈಲ್ ನಲ್ಲಿ ಮಗ್ನರಾಗಿದ್ದರು...  ಅವರ ಪಕ್ಕದಲ್ಲಿ ತಿಂದ ಪಾತ್ರೆಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನಾನು ದುಃಖದಿಂದ ನೋಡಿದೆ....

ಆಕೆ'ಯಿದ್ದಾಗ ಸ್ವಚ್ಛವಾಗಿದ್ದ ಮನೆಯು ಇಂದು ಆಕೆಯಿಲ್ಲದಾಗ ಹೀನವಾಗಿ ಇರುವ ಮನೆಯ ಅವ್ಯವಸ್ಥೆಯನ್ನು ನೋಡಿ, ನನ್ನ ಹೃದಯವು ಮರುಗಿತು...

ಸ್ನಾನ ಮುಗಿಸಿ, ಒಂದು ಕಪ್ ಟೀ ಗಾಗಿ ನಾನು ಅಡುಗೆ ಮನೆಗೆ ಹೋದೆ...
ವಾಷ್ ಬೆಯ್ಸನ್ ನಲ್ಲಿ
ಊಟ ಮಾಡಿದ ತಟ್ಟೆಗಳು ಮತ್ತು ನೂಡಲ್ಸ್ ನ ಖಾಲಿ ಪ್ಯಾಕೆಟ್ ಗಳು ಮಾತ್ರ ನನಗೆ ಕಾಣಿಸಿತು....

ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ, ಫ್ರಿಡ್ಜ್ ನಿಂದ ಒಂದು ಆ್ಯಪಲ್ ತೆಗೆದು ಕಟ್ ಮಾಡಿ ತಿಂದು ಬೆಡ್ ರೂಮಿಗೆ ಬಂದು ಮಲಗಿದೆ....

ಲೈಟ್ ಆಫ್ ಮಾಡುವುದಕ್ಕೆ ಮುಂಚೆ ಗೋಡೆಯ ಮೇಲೆ ತೂಗುಹಾಕಿದ ಆಕೆಯ ಮುಗುಳ್ನಗುವ ಭಾವಚಿತ್ರವನ್ನೊಮ್ಮೆ ತುಂಬಾ ದುಃಖದಿಂದಲೇ ನಾನು ನೋಡಿದೆ.....,.

ಆಕೆಯನ್ನು ನಿರ್ಲಕ್ಷಿಸದೇ ಇದ್ದಿದ್ದರೆ, ಇಂದು ನಾನು ಸಂತೋಷದಿಂದ ಇರುತ್ತಿದ್ದೆ ಅಂತ ನೆನೆದು ಎರಡು ಹನಿ ಕಣ್ಣೀರು ನನ್ನ ಕಣ್ಣಿಂದ ಸುರಿಯಿತು.  😥

ಈ ಕಥೆಯನ್ನು ಓದಿದವರಲ್ಲಿ ಈ ಕಥೆಯ "ಕಥಾ ನಾಯಕ ನಾನೇ" ಅಂತ ಯೋಚಿಸುವವರು  ಅನೇಕರು ಇರಬಹುದಲ್ಲವೇ...? ಅಂತಹವರಿಗೆ ನಾನು ಹೇಳಬಯಸುವುದೇನೆಂದರೆ..

ಕಣ್ಣು'ಗಳಿರುವಾಗಲೇ ಅದರ ಬೆಲೆ ಗೊತ್ತಾಗುವುದು...ಕಣ್ಣಿನ ದೃಷ್ಟಿ ನಷ್ಟವಾದ ನಂತರ ಕಣ್ಣಿನ ಮಹತ್ವವನ್ನು ತಿಳಿದು ಏನೂ ಪ್ರಯೋಜನವಿಲ್ಲ.

–>