-->

ಸೋಲು ಮಾನವೀಯತೆಗಿಂತ ದೊಡ್ಡದಲ್ಲ , ನೀತಿ ಕಥೆ

 ಒಂದೂರಿನಲ್ಲಿ ಒಬ್ಬ ಸನ್ಯಾಸಿ ವಾಸ ಮಾಡುತ್ತಿದ್ದ. ಯಾರೊಡನೆಯೂ ಹೆಚ್ಚು ಮಾತನ್ನಾಡದೆ ಸರಳವಾಗಿ ಜೀವಿಸುತ್ತಿದ್ದ. ಆತ ತನ್ನ ಬಳಿಗೆ ಬಂದವರ ಸಮಸ್ಯೆಗಳನ್ನು ಆಲಿಸಿ ಪರಿಹಾರಗಳನ್ನು ಸೂಚಿಸುತ್ತಿದ್ದ. ಹಾಗಾಗಿ ಆತನನ್ನು ಊರಿನ ಜನ ಬಹಳ ಗೌರವದಿಂದ ಕಾಣುತ್ತಿದ್ದರು.
ಆಗಾಗ ಭವಿಷ್ಯದ ವಿಚಾರಗಳನ್ನು ಹೇಳುವುದರಲ್ಲಿ ಆತ ಪ್ರಸಿದ್ಧಿ ಪಡೆದಿದ್ದ. ಅವು ನಿಜವಾಗುತ್ತಿದ್ದವು. ಅದರಿಂದ ಜನರಿಗೆ ಆತನ ಭವಿಷ್ಯವಾಣಿಯ ಮೇಲೆ ಬಹಳ ವಿಶ್ವಾಸವಿದ್ದಿತ್ತು. ಆ ಊರಿನಲ್ಲಿದ್ದ ಒಬ್ಬ ಯುವಕ ಈ ಸನ್ಯಾಸಿ ಭವಿಷ್ಯ ನುಡಿಯುವುದೆಲ್ಲಾ ಬೂಟಾಟಿಕೆ, ಆತನಿಗೆ ವರ್ತಮಾನವನ್ನೇ ಗ್ರಹಿಸಲಾಗದು ಭವಿಷ್ಯವೇನು ನುಡಿಯಬಲ್ಲ ಎಂದು ಅಪಹಾಸ್ಯ ಮಾಡಿ ತಿರುಗಾಡುತ್ತಿದ್ದ. ಆತನ ಈ ವಿಚಾರವನ್ನು ಸನ್ಯಾಸಿಗೆ ತಿಳಿಸಿದಾಗ ನಕ್ಕು ಸುಮ್ಮನಾದ.
ಆದರೆ ಯುವಕನಿಗೆ ದಿನದಿಂದ ದಿನಕ್ಕೆ ಸನ್ಯಾಸಿಯ ಜನಪ್ರಿಯತೆಯ ಮೇಲೆ ಮತ್ಸರ ಹೆಚ್ಚಾಯಿತು.

ಸೋಲು ಮಾನವೀಯತೆಗಿಂತ ದೊಡ್ಡದಲ್ಲ , ನೀತಿ ಕಥೆ


ಸನ್ಯಾಸಿ ಹೇಳುವುದನ್ನು ಹೇಗಾದರೂ ಮಾಡಿ ಒಮ್ಮೆಯಾದರೂ ಸುಳ್ಳೆಂದು ಸಾಧಿಸಿ ತೋರಿಸಿದರೆ ಆಗ ಆತನ ಜನಪ್ರಿಯತೆಗೆ ಧಕ್ಕೆ ಬರುತ್ತದೆ ಎಂದು ಸನ್ಯಾಸಿಯನ್ನು ಸೋಲಿಸಲು ಮಾರ್ಗೋಪಾಯ ಹುಡುಕತೊಡಗಿದ. ಅದೊಂದು ದಿನ ಯುವಕ ತನ್ನ ಎರಡು ಕೈಗಳ ನಡುವೆ ಜೀವಂತ ಹಕ್ಕಿಮರಿಯೊಂದನ್ನು ಅಡಗಿಸಿಟ್ಟು, ಬೆನ್ನ ಹಿಂದೆ ಕೈಗಳನ್ನು ಇಟ್ಟುಕೊಂಡು ಸನ್ಯಾಸಿಯ ಬಳಿ ಬಂದು, 'ನೀವು ಭವಿಷ್ಯ ನುಡಿಯುತ್ತೀರಿ ಎನ್ನುತ್ತಾರಲ್ಲಾ? ನನ್ನ ಕೈ ಒಳಗೊಂದು ಹಕ್ಕಿ ಮರಿ ಇದೆ. ಅದು ಬದುಕಿದೆಯೇ, ಸತ್ತಿದೆಯೇ ಎಂಬುದನ್ನು ಸಾಧ್ಯವಿದ್ದರೆ ತಿಳಿಸಿ' ಎಂದ.
ಒಂದು ವೇಳೆ ಸನ್ಯಾಸಿ ಹಕ್ಕಿಮರಿ ಬದುಕಿದೆ ಎಂದರೆ ಹಕ್ಕಿಯನ್ನು ಮುಷ್ಟಿಯಲ್ಲೇ ಸಾಯಿಸಿ ಅದು ಸತ್ತಿದೆ ಎನ್ನುವುದು, ಹಕ್ಕಿ ಸತ್ತಿದೆ ಎಂದು ಸನ್ಯಾಸಿ ಹೇಳಿದರೆ ಜೀವಂತ ಹಕ್ಕಿಯನ್ನು ತೋರಿಸುವುದು, ಆ ಮೂಲಕ ಸನ್ಯಾಸಿಯನ್ನು ಸೋಲಿಸುವುದು ಎಂದು ಆಲೋಚಿಸಿದ್ದ.

ಸನ್ಯಾಸಿ ಯುವಕನ ಮಾತುಗಳನ್ನು ಕೇಳಿ, ತಡಮಾಡದೆ 'ನಿನ್ನ ಕೈಯೊಳಗಿನ ಹಕ್ಕಿ ಸತ್ತಿದೆ ಎಂದರು. ಯುವಕ ಅಟ್ಟಹಾಸದಿಂದ ನಗುತ್ತಾ 'ಕಪಟಿ ಸನ್ಯಾಸಿ, ನೋಡಿ ಹಕ್ಕಿ ಬದುಕಿದೆ' ಎಂದು ಮುಷ್ಟಿಯನ್ನು ತೆರೆದ. ಅದುವರೆಗೂ ಮುಷ್ಠಿಯೊಳಗೆ ಉಸಿರಾಡಲಾಗದೆ ಒದ್ದಾಡುತ್ತಿದ್ದ ಹಕ್ಕಿ ಮುಷ್ಟಿ ತೆರೆದದ್ದೇ ತಡ ಪುರ್ರನೇ ಹಾರಿ ಹೋಯಿತು. ಸನ್ಯಾಸಿ ನಕ್ಕು ಯುವಕನಿಗೆ ಹೇಳಿದರು. 'ಮಗು, ಕಪಟಿ ನಾನಲ್ಲ. ಕಪಟತನ ನಿನ್ನಲ್ಲೇ ಇತ್ತು. ಆ ಹಕ್ಕಿಯ ಬದುಕು ಮತ್ತು ಸಾವು ಎರಡೂ ನಿನ್ನ ಕೈಯೊಳಗೆ ಇದೆ ಎನ್ನುವುದು ನನಗೆ ಗೊತ್ತಿತ್ತು. ಆದರೂ ನಾನೇಕೆ ಅದು ಸತ್ತಿದೆ ಎಂದೆ ಎನ್ನುವುದು ಗೊತ್ತೇ? ಹಾಗೆ ಹೇಳಿದರೆ ನೀನು ಹಕ್ಕಿಯನ್ನು ಜೀವಂತ ಉಳಿಸುತ್ತೀ ಎಂಬುದು ನನಗೆ ತಿಳಿದಿತ್ತು. ಹಕ್ಕಿ ಉಳಿಯುವುದು ನನಗೆ ಬೇಕಿತ್ತು. ನನ್ನ ಗೆಲುವು ಅಥವಾ ಸೋಲಿಗಾಗಿ ನಿಷ್ಪಾಪಿ ಹಕ್ಕಿ ಬಲಿಯಾಗುವುದು ನನಗೆ ಬೇಕಿಲ್ಲ. ಮಾನವೀಯತೆಯ ಗೆಲುವಿಗೆ ಕಾರಣವಾಗುವ ಇಂತಹ ಸಾವಿರ ಸೋಲುಗಳನ್ನು ನಾನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ' ಎಂದರು ಸನ್ಯಾಸಿ. ಯುವಕ ಸನ್ಯಾಸಿಯ ಮಾತು ಕೇಳಿ ತಲೆಬಾಗಿ ವಂದಿಸಿ ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳಿದ.

ನಿಜ. ಬದುಕಿನಲ್ಲಿ ಮಾನವೀಯತೆಗಿಂತ ಮಿಗಿಲಾದುದು ಯಾವುದೂ ಇಲ್ಲ. ಸೋಲು ಮಾನವೀಯತೆಗಿಂತ ದೊಡ್ಡದಲ್ಲ. ಬೇರೆಯವರ ಸೋಲುಗಳಲ್ಲಿ ನಮ್ಮ ಗೆಲುವನ್ನು ನಾವು ಯಾವತ್ತೂ ನೋಡಬಾರದು. ಬೇರೆಯವರನ್ನು ಸೋಲಿಸಲು ಕಪಟತನಕ್ಕೆ ಇಳಿಯಲೂ ಬಾರದು. ಆತ್ಮತೃಪ್ತಿಯ ಗೆಲುವು ಮಾತ್ರ ನಿಜವಾದದ್ದು

–>