-->

Sri Raghavendra Swamy sthothra slokas with summary meaning

ಶ್ರೀ ರಾಘವೇಂದ್ರ ಸ್ತೋತ್ರಂ

ಶ್ರೀ ಪೂರ್ಣಬೋಧ ಗುರುತೀರ್ಥ ಪಯೋಬ್ಧಿಪಾರಾ
ಕಾಮಾರಿಮಾಕ್ಷ ವಿಷಮಾಕ್ಷ ಶಿರಸ್ಪೃಶಂತೀ |
ಪೂರ್ವೋತ್ತರಾಽಮಿತ ತರಂಗ ಚರತ್ಸುಹಂಸಾ
ದೇವಾಲಿ ಸೇವಿತ ಪರಾಂಘ್ರಿಪಯೋಜಲಗ್ನಾ || ೧ ||


ಶ್ಲೋಕ 1

ಆನಂದ ಲೋಕಗಳನ್ನು ಕರುಣಿಸುವ ಆನಂದತೀರ್ಥರ ಶಾಸ್ತ್ರವೆಂಬ ಕ್ಷೀರಸಾಗರವೇ ಪರಿಧಿಯಾಗಿ ಉಳ್ಳ, ಕಾಮಕ್ರೋಧಾದಿಗಳಿಗೆ ಶತ್ರುವೆನಿಸಿರುವ ನಿಜವಾದ ತಿಳುವಳಿಕೆಎಂಬ ಒಳಗಣ್ಣುಳ್ಳ ಜ್ಞಾನಿಗಳಿಂದ ತಲೆಯಲ್ಲಿ ಧರಿಸಲ್ಪಡುವ, ಪೂರ್ವಪಕ್ಷ ಮತ್ತು ಸಿದ್ಧಾಂತಗಳನ್ನು ಅರಿತ ಪರಮಹಂಸರಿಂದಲೂ ಸೇವಿಸಲ್ಪಡುವ, ಚತುರ್ಮುಖನೇ ಮೊದಲಾದ ದೇವತಾವೃಂದದಿಂದ ಸೇವಿತನಾದ ಶ್ರೀಹರಿಯ ಪದಕಮಲಗಳಲ್ಲಿ ಅನುರಕ್ತವಾದ, ಕುರ್ವಾದಿಗಳ ಗರ್ವವನ್ನಡಿರಿಸುವ.

ಜೀವೇಶ ಭೇದ ಗುಣಪೂರ್ತಿ ಜಗತ್ಸುಸತ್ವ
ನೀಚೋಚ್ಚಭಾವ ಮುಖನಕ್ರ ಗಣೈಸ್ಸಮೇತಾ |
ದುರ್ವಾದ್ಯಜಾಪತಿಗಿಲೈರ್ಗುರು ರಾಘವೇಂದ್ರ
ವಾಗ್ದೇವತಾಸರಿದಮುಂ ವಿಮಲೀಕರೋತು || ೨ ||

ಶ್ಲೋಕ 2

 ಜೀವ ಜೀವರ ಭೇದ ಭಗವಂತನ ಗುಣಪೂರ್ಣತೆ, ಜಗತ್ತಿನ ಪಾರಮಾರ್ಥಿಕ  ಸತ್ಯತೆ, ಜೀವ, ಈಶ, ಹಾಗೂ ಜಡಗಳಲ್ಲಿರುವ ಭೇದಪಂಚಕ, ಮತ್ತು ಅವರಲ್ಲಿರುವ ತಾರತಮ್ಯಭಾವವೇ ಮೊದಲಾದ ತತ್ವಗಳೆಂಬ ಮೊಸಳೆಗಳಿಂದ ಕೂಡಿದ, ದೇವಗಂಗೆಯಂತೆ ಪರಮಪವಿತ್ರವಾದ, ಗುರುರಾಘವೇಂದ್ರರ ವಾಗ್ಗಂಗಾ ರೂಪದಲ್ಲಿರುವ ಅವರ ಗ್ರಂಥಗಳು ಆದರಿಸುವ ಭಕ್ತವರ್ಗವನ್ನು ಪರಿಶುದ್ಧರನ್ನಾಗಿಸಲಿ.

ಶ್ರೀರಾಘವೇಂದ್ರಸ್ಸಕಲಪ್ರದಾತಾ ಸ್ವಪಾದಕಂಜದ್ವಯ ಭಕ್ತಿಮದ್ಭ್ಯಃ |
ಅಘಾದ್ರಿಸಂಭೇದನ ದೃಷ್ಟಿವಜ್ರಃ ಕ್ಷಮಾಸುರೇಂದ್ರೋಽವತು ಮಾಂ ಸದಾಯಂ || ೩ ||


ಶ್ಲೋಕ 3 

 ತಾತ್ಪರ್ಯ-- ತಮ್ಮ ಪದಕಮಲಗಳಲ್ಲಿ ಭಕ್ತಿಮಾಡುವ ಸುಜನರಿಗೆ ಅವರವರ ಯೋಗ್ಯತೆಗನುಸಾರವಾಗಿ ಅವರ ಸಾಧನೆಗೆ ಪೂರಕವಾಗುವಂತೆ ಸಕಲ ಮನೋರಥಗಳನ್ನು ಕೊಡುವವರು, ತಿಳಿಯದೇ ಭಕ್ತರು ಮಾಡಿದ ಪರ್ವತಪ್ರಾಯವಾದ ಪಾಪಗಳನ್ನೂ ಅಂತೆಯೇ ಆಯಾ ಪಾಪಗಳಿಗೆ ಫಲರೂಪವಾಗಿ ಪ್ರಾಪ್ತವಾದ ಸಹಿಸಲಸಾಧ್ಯವಾದ ದುಃಖಗಳನ್ನೂ ಪರಿಹರಿಸುವ ವಜ್ರಾಯುಧಕ್ಕೆ ಸಮನಾದ ಕೃಪಾದೃಷ್ಠಿಯನ್ನು ಹೊಂದಿದವವರಾಗಿ ಎಲ್ಲಾ ಸುಜನರಿಗೂ ಗುರುಗಳೆನಿಸಿರುವ  ಶ್ರೀ ರಾಘವೇಂದ್ರರು ನಮ್ಮನ್ನು ಸದಾಕಾಲವೂ ಎಡಬಿಡದೇ ರಕ್ಷಿಸಲಿ.

ಶ್ರೀ ರಾಘವೇಂದ್ರೋ ಹರಿಪಾದಕಂಜ ನೀಷೇವಣಾಲ್ಲಬ್ಧ ಸಮಸ್ತ ಸಂಪತ್ |
ದೇವಸ್ವಭಾವೋ ದಿವಿಜದ್ರುಮೋಽಯ ಮಿಷ್ಟಪ್ರದೋಮೇ ಸತತಂ ಸ ಭೂಯಾತ್ || ೪ ||

ಶ್ಲೋಕ 4 

 ತಾತ್ಪರ್ಯ:-- ನಿರಂತರವಾಗಿ ತಾವು ನಡೆಸಿದ ಭಗವಂತನ  ಉಪಾಸನೆಯ ಫಲವಾಗಿ ಪರಿಶುದ್ಧವಾದ ಜ್ಞಾನವನ್ನು ಅಂತೆಯೇ ಸಕಲಸಂಪತ್ತುಗಳನ್ನೂ ಪಡೆದವರು ಶ್ರೀ ರಾಘವೇಂದ್ರರು ಭಗವಂತನಲ್ಲಿ ದೇವತೆಗಳಂತೆ ಭಕ್ತಿಮಾಡುವ ಸ್ವಭಾವವುಳ್ಳವರು ಹಾಗೂ ಶಾಂತಿ, ಪ್ರಸನ್ನತೆ ಮೊದಲಾದ ದೇವತಾ ಸ್ವಭಾವದಿಂದ ಕಂಗೊಳಿಸುವವರು, ದೇವತರುವಾದ ಕಲ್ಪವೃಕ್ಷದಂತೆ ಸೇವಿಸುವವರಿಗೆ ಸೇವೆಗೆ ಅನುರೂಪವಾದ ಫಲಗಳನ್ನು ಕೊಡುವ ಗುರುರಾಜರು ಎಲ್ಲರ ಬಯಕೆಗಳನ್ನು ಈಡೇರಿಸಲಿ.

ಭವ್ಯ-ಸ್ವರೂಪೋ ಭವ-ದುಃಖ-ತೂಲ-
ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |
ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ
ದುರತ್ಯಯೋಪಪ್ಲವ-ಸಿಂಧು-ಸೇತುಃ || ೫ ||

ಶ್ಲೋಕ --5
ತಾತ್ಪರ್ಯ-- ನಯನಗಳಿಗೆ ಆಹ್ಲಾದವನ್ನುಂಟುಮಾಡುವ ಮನೋಹರವಾದ ಆಕೃತಿಯುಳ್ಳವರು ರಾಯರು. ಸಂಸಾರದಲ್ಲಿ ಜೀವರು ಅನುಭವಿಸುವ ಮಹಾದುಃಖಗಳೆಂಬ ಹತ್ತಿಗೆ ಅಗ್ನಿಪ್ರಾಯರು.ಸರ್ವದಾ ಭಗವಂತನ ಧ್ಯಾನದಿಂದ ಉಂಟಾದ ಸುಖ ಹಾಗೂ ಧೈರ್ಯಗಳಿಂದ ಕೂಡಿದವರಾಗಿ ಭಕ್ತರಿಗೆ ಒದಗುವ ಭೂತ ಪಿಶಾಚಿಗಳೇ ಮೊದಲಾದ ದುಷ್ಟಗ್ರಹಗಳ ಪೀಡೆಯನ್ನು ಪರಿಹರಿಸುವಲ್ಲಿ ಸಮರ್ಥರು .ದಾಟಲು ಆಸಾಧ್ಯವೆನಿಸಿರುವ ಸಂಸಾರಸಾಗರವನ್ನು ದಾಟುವಲ್ಲಿ ಸೇತುವೆಯಂತೆ ಇರುವ ಇಂತಹ ಗುರುಗಳು ನಮ್ಮನ್ನು ಕಾಪಾಡಲಿ.

ನಿರಸ್ತದೋಷೋ ನಿರವದ್ಯವೇಷಃ
ಪ್ರತ್ಯರ್ಥಿಮೂಕತ್ತ್ವನಿದಾನಭಾಷಃ
ವಿದ್ವತ್ಪರಿಜ್ಞೇಯ ಮಹಾವಿಶೇಷೋ
ವಾಗ್ವೈಖರೀನಿರ್ಜಿತಭವ್ಯಶೇಷಃ || ೬ ||

ಶ್ಲೋಕ --6
ತಾತ್ಪರ್ಯ-- ಕಾಮ ಕ್ರೋಧಾದಿಗಳೇ ಮೊದಲಾದ ದೋಷಗಳಿಂದ ದೂರಾದವರು ,ಯಾವುದೇ ವಿಧವಾದ ದುರ್ಲಕ್ಷಣಗಳಿಂದ ಕೂಡಿದವರಾಗದೇ ಲಕ್ಷಣೋಪೇತವಾದ ರೂಪಿನವರು ರಾಯರು.ಪರವಾದಿಗಳನ್ನೂ ಮೂಕರನ್ನಾಗಿಸುವಂತ ಮಾತುಗಾರರು , ಕೇವಲ ವಿದ್ವಜನರಿಂದಲೇ ತಿಳಿಯಲು ಯೋಗ್ಯವಾದ ಗುಣವಿಶೇಷವುಳ್ಳವರು. ತಮ್ಮ ವಾಕ್ಚಾತುರ್ಯದಿಂದ ಶೇಷ ಎಂಬ ವಾದಮಲ್ಲನನ್ನು ಗೆಲ್ಲಿದ ಗುರುರಾಜರು ನಮಗೆ ಜಯವಿತ್ತು ಸಲಹಲಿ.

ಸಂತಾನ ಸಂಪತ್ಪರಿಶುದ್ಧ ಭಕ್ತಿ ವಿಜ್ಞಾನವಾಗ್ದೇ ಹಸುಪಾಟವಾದೀನ್ |
ದತ್ವಾಶರೀರೋಽತ್ಥ ಸಮಸ್ತದೋಷಾನ್ ಹತ್ವಾ ಸ ನೋಽವ್ಯಾದ್ಗುರು ರಾಘವೇಂದ್ರಃ || ೭ ||

ಶ್ಲೋಕ 7
ತಾತ್ಪರ್ಯ--ಭಜಕರಿಗೆ, ಒಳ್ಳೆಯ ಸಂತಾನ, ಮದವೇರಿಸದ ಸಂಪತ್ತು, ಭಗವಂತನಲ್ಲಿ ದೃಢವಾದ ಮತ್ತು ನಿರ್ಮಲವಾದ ಭಕ್ತಿ, ಮೋಕ್ಷಪಯೋಗಿಯಾದ ತಿಳುವಳಿಕೆ , ಮಾತಿನಲ್ಲಿ ಚಾತುರ್ಯ ,ದೇಹದಲ್ಲಿ ನಿರೋಗಿತ್ವ   ಮುಂತಾದುವನ್ನು ಅನುಗ್ರಹಿಸುವ ಗುರುರಾಜರು ದೇಹ ಹಾಗೂ ಇಂದ್ರೀಯಗಳಲ್ಲಿ ಇರುವ ಸಮಸ್ತ ದೋಷಗಳನ್ನು  ಪರಿಹರಿಸಿ ನಿರಂತರವಾಗಿ ನಮ್ಮನ್ನು ರಕ್ಷಿಸಲಿ.

ಯತ್ಪಾದೋದಕಸಂಚಯಃ ಸುರನದೀ ಮುಖ್ಯಾಪಗಾಸಾಧಿತಾಽ
ಸಂಖ್ಯಾನುತ್ತಮ ಪುಣ್ಯಸಂಘ ವಿಲಸತ್ಪ್ರಖ್ಯಾತ ಪುಣ್ಯಾವಹಃ |
ದುಸ್ತಾಪತ್ರಯ ನಾಶನೋಭುವಿ ಮಹಾವಂದ್ಯಾ ಸುಪುತ್ರಪ್ರದೋ
ವ್ಯಂಗಸ್ವಂಗ ಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂಶ್ರಯೇ || ೮ ||

ಶ್ಲೋಕ -8
ತಾತ್ಪರ್ಯ--ಯಾವ ಪಾದೋದಕ ಸೇವನೆಯು, ದೇವನದಿಯಾದ ಗಂಗೆಯಲ್ಲಿ ಶಾಸ್ತ್ರೋಕ್ತವಾಗಿ ಮಿಂದ ಮಾತ್ರದಿ ಲಭಿಸುವ ಅಗಣಿತವಾದ ಪುಣ್ಯರಾಶಿಯಂತೆ ಪುಣ್ಯವನ್ನು ಕೊಡುವ ಸಾಮರ್ಥ್ಯವುಳ್ಳದಾಗಿದೆಯೋ, ಯಾವ ಪಾದೋದಕವು ಭಜಕರ ತಾಪತ್ರಯವನ್ನು  ದೂರ ಗೊಳಿಸುವುದೋ, ಲೋಕದಲ್ಲಿ ಬಂಜೆ ಎನಿಸಿರುವ ಸ್ತ್ರೀಗೂ ಸಂತಾನವನ್ನು ಕೊಡುವಲ್ಲಿ, ವಿಕಲಾಂಗರಿಗೆ ಉತ್ತಮವಾದ ಅಂಗಸಂಪತ್ತನೀಯುವಲ್ಲಿ, ದುಷ್ಟಗ್ರಹಗಳನ್ನು, ರೋಗಾದಿಗಳನ್ನು ಹಾಗೂ ಮಹಾಪಾಪಗಳನ್ನು ಪರಿಹರಿಸುವಲ್ಲಿ ಯಾವ ಪಾದೋದಕವು ಸಮರ್ಥವಾಗಿದೆಯೋ ಅಂತಹ ಪಾದೋದಕ ಮಹಿಮೆಯುಳ್ಳ ಗುರುರಾಜರ ಪದಕಮಲಗಳನ್ನು ಸರ್ವದಾ ಸೇವಿಸುತ್ತೇನೆ.

ಯತ್ಪಾದಕಂಜರಜಸಾ ಪರಿಭೂಷಿತಾಂಗಾ
ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ |
ಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚಃ
ತದ್ದರ್ಶನಂ ದುರಿತಕಾನನ ದಾವಭೂತಂ || ೯ ||

ಶ್ಲೋಕ --9
ತಾತ್ಪರ್ಯ-- ಯಾರು ಗುರುರಾಯರ ಪದಕಮಲಗಳ ಧೂಳಿಯಿಂದ ತಮ್ಮೆಲ್ಲಾ ಅಂಗಾಂಗಗಳನ್ನು ಅಲಂಕರಿಸಿಕೊಂಡಿರುವರೋ, ಯಾರು ಗುರುಗಳ ಪದಕಂಜದಲ್ಲಿಯೇ ದುಂಬಿಯಂತೆ ಸರ್ವದಾ ಆಸಕ್ತರಾಗಿರುವರೋ, ಹರಿಪ್ರಸಾದದಿಂದ ಲಭಿಸಿದ ಗುರುರಾಜರ ಉತ್ತಮವಾದ ಮಹತ್ಯದ ಕೀರ್ತನೆಯಿಂದ ತಮ್ಮ ಮಾತುಗಳನ್ನು ಯಾರು ಪಕ್ವಗೊಳಿಸಿಕೊಂಡಿರುವರೋ ಅಂತಹ ಭಕ್ತರ ಸಂದರ್ಶನವೇ ಅರಣ್ಯಕ್ಕೆ ಕಾಳ್ಗಿಚ್ಚಿನಂತೆ, ಪಾಪಗಳೆಂಬ ಮರಗಳನ್ನು ಭಸ್ಮೀಕರಿಸಬಲ್ಲದು. ಅಂದಮೇಲೆ ಗುರುಗಳ ದರ್ಶನ, ಸೇವನ ಮುಂತಾದವುಗಳಿಂದ ಉಂಟಾಗುವ ಫಲಗಳ ಕುರಿತು ಹೇಳುವುದೇನಿದೆ.?

ಸರ್ವತಂತ್ರ ಸ್ವತಂತ್ರೋಸೌ ಶ್ರೀಮಧ್ವಮತವರ್ಧನಃ |
ವಿಜಯೀಂದ್ರ ಕರಾಬ್ಜೋತ್ಥ ಸುಧೀಂದ್ರ ವರಪುತ್ರಕಃ || ೧೦ ||

ಶ್ಲೋಕ  -- 10
ತಾತ್ಪರ್ಯ-- ಸಕಲ ಶಾಸ್ತ್ರಗಳಲ್ಲಿಯೂ ತಲಸ್ಪರ್ಶಿಯಾದ ಪಾಂಡಿತ್ಯವನ್ನು ಹೊಂದಿದವರಾದ ಗುರುಗಳು, ಆಚಾರ್ಯಮಧ್ವರ ತತ್ವವಾದವನ್ನು ಅಭಿವೃದ್ಧಿಪಡಿಸಿದಂಥವರು. ಶ್ರೀ ವಿಜಯೀoದ್ರತೀರ್ಥರ ಕರಕಮಲ ಸಂಜಾತರಾದ ಶ್ರೀಸುಧೀಂದ್ರತೀರ್ಥರ ವರಕುಮಾರರಾಗಿ ಶ್ರೀರಾಘವೇಂದ್ರತೀರ್ಥ ರೆಂದು ಪ್ರಸಿದ್ಧರಾಗಿರುವರು.

ಶ್ರೀ ರಾಘವೇಂದ್ರೋ ಯತಿರಾಟ್ ಗುರುರ್ಮೇ ಸ್ಯಾದ್ಭಯಾಪಃ |
ಜ್ಞಾನಭಕ್ತಿ ಸುಪುತ್ರಾಯುರ್ಯಶಃ ಶ್ರೀ ಪುಣ್ಯವರ್ಧನಃ || ೧೧ ||

ಶ್ಲೋಕ--11
ತಾತ್ಪರ್ಯ-- ಅಂತಹ ಯತಿರಾಜರಾದ ಗುರುಗಳು ನಮಗೆ ಭಗವಂತನ ಅರಿವು ಹರಿಗುರುಗಳಲ್ಲಿ ಭಕುತಿ, ಒಳ್ಳೆಯಸಂತಾನ, ಆಯುಷ್ಯ, ಆಯಸ್ಸು,ಕಾಂತಿ ಮುಂತಾದವುಗಳನ್ನು ಕರುಣಿಸಿ, ಜೀವನದಲ್ಲಿ ಬರುವ ಎಲ್ಲ ವಿಧವಾದ ಭಯಗಳನ್ನು ಪರಿಹರಿಸಿ ನಮ್ಮನ್ನು ರಕ್ಷಿಸಲಿ.

ಪ್ರತಿವಾದಿ ಜಯಸ್ವಾಂತ ಭೇದಚಿಹ್ನಾದರೋ ಗುರುಃ |
ಸರ್ವವಿದ್ಯಾ ಪ್ರವೀಣಾನ್ಯೋ ರಾಘವೇಂದ್ರಾನ್ನವಿದ್ಯತೇ || ೧೨ ||

ಶ್ಲೋಕ --12
ತಾತ್ಪರ್ಯ--ತತ್ವವಾದಕ್ಕೆ ವಿರುದ್ಧವಾಗಿ ವಾದಿಸುವ ವಾದಮಲ್ಲರನ್ನು ಪರಾಜಿತರನ್ನಾಗಿ ಮಾಡಿ,ಅವರ ಮನವನ್ನು ಭೇದಿಸುವಲ್ಲಿ ಆದರವುಳ್ಳವರು,ಶಿಷ್ಯರ ಮನದ ಅಂದಕಾರವನ್ನು  ನೀಗಿಸುವರಾಗಿ ನಿಜವಾದ ಗುರುಗಳೆನಿಸಿ, ಸಕಲ ಶಾಸ್ತ್ರಗಳಲ್ಲೂ ಅನುಪಮವಾದ ಪ್ರಾವೀಣ್ಯವನ್ನು ಹೊಂದಿರುವರು ಇವರು. ಇಂತಹ ಗುರುರಾಜರನ್ನುಳಿದು ಜ್ಞಾನಿಗಳಾದ ಬೇರಾವ ಗುರುಗಳೂ[ಉತ್ತಮರನ್ನು ಬಿಟ್ಟು] ಜಗತ್ತಿನಲ್ಲಿ ಇಲ್ಲ.

ಅಪರೋಕ್ಷೀಕೃತ ಶ್ರೀಶಃ ಸಮುಪೇಕ್ಷಿತಭಾವಜಃ |
ಅಪೇಕ್ಷಿತ ಪ್ರದಾತಾನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೩ ||

ಶ್ಲೋಕ --13
ತಾತ್ಪರ್ಯ--ತಮ್ಮ ಅಸದೃಶವಾದ ಉಪಾಸನೆಯಿಂದ ಸಿರಿಯರಸನನ್ನು  ಪ್ರತ್ಯಕ್ಷೀಕರಿಸಿಕೊಂಡವರು, ಮನದ ಭಾವನೆಗಳೆನಿಸಿರುವ ಕಾಮ, ಕ್ರೋಧಾದಿಗಳನ್ನು ಉಪೇಕ್ಷಿಸಿದವರು, ಅಂತೆಯೇ ಭಕ್ತರ ಮನಸ್ಸಿನ ಕಾಮನೆಗಳನ್ನು ಪೂರೈಸುವವರೂ ಆದ ಶ್ರೀರಾಘವೇಂದ್ರರನ್ನು ಉಳಿದು ಬಯಸಿದ್ದನ್ನು ಕೊಡುವವರು[ಉತ್ತಮರನ್ನು ಬಿಟ್ಟು] ಲೋಕದಲ್ಲಿ ಅನ್ಯರಾರು ಇಲ್ಲ.

ದಯಾದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿತಃ |
ಶಾಪಾನುಗ್ರಹಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೪ ||

ಶ್ಲೋಕ --14
ತಾತ್ಪರ್ಯ-- ಆರ್ತರಾಗಿ ಬಂದ ಭಕ್ತರ ದುಃಖಗಳನ್ನು ಪರಿಹರಿಸುವ ದಯೆಯುಳ್ಳ, ಸುಜನರ ಮನದಿಂಗಿತವನ್ನು ಅರಿತು ಅದರಂತೆ ನಡೆಯಿಸುವ, ವಿಷಯಗಳಲ್ಲಿ ವಿರಕ್ತರಾದ, ಅತ್ಯುತ್ತಮವಾದ ಮಾತುಗಾರಿಕೆಯೇ ಮೊದಲಾದ ಸುಗುಣಗಳಿಂದ ಕೊಡಿದವರಾಗಿ, ದುಷ್ಟಜನರನ್ನು ಶಿಕ್ಷಿಸುವಲ್ಲಿ ಹಾಗೂ ಸುಜನರನ್ನು ರಕ್ಷಿಸುವಲ್ಲಿ ಸಮರ್ಥರಾದವರು ಶ್ರೀ ರಾಘವೇಂದ್ರರನ್ನು ಹೊರತು【ಉತ್ತಮರನ್ನು ಬಿಟ್ಟು】 ಮತ್ತಾರು ಇಲ್ಲ.

ಅಜ್ಞಾನ ವಿಸ್ಮೃತಿ ಭ್ರಾಂತಿ ಸಂಶಯಾಪಸ್ಮೃತಿಕ್ಷಯಾಃ |
ತಂದ್ರಾಕಂಪವಚಃ ಕೌಂಠ್ಯಮುಖಾಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ || ೧೫ ||

ಶ್ಲೋಕ --15
ತಾತ್ಪರ್ಯ--ಉತ್ತಮ ಜೀವನಿಗೆ ಕರ್ಮಾನುಸಾರ ಒದಗಬಹುದಾದ ಜ್ಞಾನದ ಅಭಾವರೂಪವಾದ ಅಜ್ಞಾನ ಮರೆವು,ತಪ್ಪಾದ ತಿಳುವಳಿಕೆ, ಡೋಲಾಯಮಾನ ಜ್ಞಾನವಾದ ಸಂಶಯ, ಅಪಸ್ಮಾರ,ಭಯಂಕರವಾದ ಕ್ಷಯರೋಗ,ಆಕಳಿಕೆ ಮತ್ತು ತೂಕಡಿಕೆ, ದೇಹದ ನಡುಗುವಿಕೆ, ತೊದಲುಮಾತು ಇವೇ ಮೊದಲಾದ ಇಂದ್ರಿಯಗಳಿಂದ ಉಂಟಾಗುವ ಆ ಎಲ್ಲಾ ದೋಷಗಳೂ ಗುರುರಾಘವೇಂದ್ರರ ಪ್ರಸಾದದಿಂದಾಗಿ ಸಮೂಲ ನಾಶಹೊಂದುವವು.

ಓಂ ಶ್ರೀರಾಘವೇಂದ್ರಾಯ ನಮಃ
ಇತ್ಯಷ್ಟಾಕ್ಷರಮಂತ್ರತಃ |
ಜಪಿತಾದ್ಭಾವಿತಾನ್ನಿತ್ಯಂ ಇಷ್ಟಾರ್ಥಾಃ
ಸ್ಯುರ್ನಸಂಶಯಃ || ೧೬ ||

ಶ್ಲೋಕ--16
ತಾತ್ಪರ್ಯ--ಶ್ರೀ ರಾಘವೇಂದ್ರ ನಮಃ ಎಂಬ ಅಷ್ಟಾಕ್ಷರ ಮಂತ್ರವನ್ನು ಸರ್ವದಾ ಜಪಿಸುವುದರಿಂದ ಮತ್ತು ಈ ಮಂತ್ರದ ಮೂಲಕ ಗುರುಗಳ ಅಂತರ್ಯಾಮಿಯಾದ ಶ್ರೀಹರಿಯನ್ನು ಧ್ಯಾನಿಸುವುದರಿಂದ ಸದುದ್ದೇಶದಿಂದ ಕೂಡಿದ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುದರಲ್ಲಿ ಯಾವ ಸಂಶಯವೂ ಇಲ್ಲ.

Sri Raghavendra sthothra with summary meaning


ಹಂತು ನಃ ಕಾಯಜಾನ್ ದೋಷಾನಾತ್ಮಾತ್ಮೀಯ ಸಮುದ್ಭವಾನ್ |
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ || ೧೭ ||

ಶ್ಲೋಕ--17
ತಾತ್ಪರ್ಯ-- ನಮ್ಮ ದೇಹದಿಂದ ಉಂಟಾಗುವ ದೂಷಗಳನ್ನೂ , ಮಾನಸಿಕವಾಗಿ ನಾವು ಮಾಡುವ ಅಪಚಾರವನ್ನೂ ಎಣಿಸದೆ ಆ ಎಲ್ಲ ಪಾಪಗಳನ್ನೂ ಗುರುರಾಜರು ಕಳೆಯಲಿ ಮತ್ತು ಭಗವಂತನನ್ನು ಸರ್ವದಾ ಕಾಣುವ ಅವರು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನಿತ್ತು ನಮ್ಮನ್ನು ಸಲಹಲಿ.

ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |
ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ || ೧೮ ||

ಶ್ಲೋಕ--18
ತಾತ್ಪರ್ಯ-- ಈ ರೀತಿ ಹಿಂದೆ ತಿಳಿಸಿದಂತೆ, ಯಾರು ಪ್ರತಿದಿನವೂ ಮೂರುಹೊತ್ತು ಗುರುಗಳನ್ನು ಈ ಸ್ತೋತ್ರಪರಾಯಣದ ಮೂಲಕ ಪ್ರಾರ್ಥಿಸುವರೋ ಅಂತಹವರು ಇಹಪರಗಳಲ್ಲಿ ಸಕಲ ಇಷ್ಟಗಳನ್ನು ಹೊಂದಿ ಆನಂದದಿಂದ ಇರುವರು. ಇದರಲ್ಲಿ ಯಾವ ಸಂಶಯವೂ ಇಲ್ಲ.

ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ |
ಶ್ರೀ-ಮಧ್ವ-ಮತ-ದುಗ್ಧಾಬ್ಧಿ-ಚಂದ್ರೋಽವತು ಸದಾಽನಘಃ || ೧೯ ||

ಶ್ಲೋಕ--19
ತಾತ್ಪರ್ಯ--ಈ ಜಗತ್ತಿನಲ್ಲಿ ಯಾರಿಂದಲೂ ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲದ ಮಹಿಮೆಯುಳ್ಳವರು, ಅಸದೃಶವಾದ ಕೀರ್ತಿಸಂಪನ್ನರು, ಇವೆಲ್ಲಕ್ಕೂ ಕಲಶಪ್ರಾಯವಾಗಿ ಶ್ರೀಮದಾನಂದತೀರ್ಥರ ಸಿದ್ಧಾಂತವೆಂಬ ಪಾಲ್ಗಡಲಿಗೆ ಹುಣ್ಣಿಮೆಯ ಚಂದ್ರನಂತೆ ಪೊಳೆವ , ದೂಷವಿದೂರರಾದ ಶ್ರೀ ರಾಘವೇಂದ್ರರರು ಸರ್ವದಾ ನಮ್ಮನ್ನು ರಕ್ಷಿಸಲಿ.

ಸರ್ವ-ಯಾತ್ರಾ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |
ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ || ೨೦ ||

ಶ್ಲೋಕ --20
ತಾತ್ಪರ್ಯ--ಭರತಭೂಮಿಯ ದೇವನಿರ್ಮಿತಗಳಾದ ಸಮಸ್ತ ಪುಣ್ಯಕ್ಷೇತ್ರಗಳ ಸಂಚಾರದಿಂದ ಒದಗುವ ಪುಣ್ಯದ ಪ್ರಾಪ್ತಿಗಾಗಿ ನಿಮ್ಮ ಪ್ರದಕ್ಷಿಣೆಯನ್ನು ಶಕ್ತಿಗನುಸಾರವಾಗಿ ಮಾಡುತ್ತೇನೆ ಮತ್ತು ಎಲ್ಲಾ ಪಾವನ ತೀರ್ಥಗಳ ದರ್ಶನ,ಸ್ಪರ್ಶನ, ಸ್ನಾನ, ಪಾನಾದಿಗಳಿಂದ ಉಂಟಾಗುವ ಅತಿಶಯ ಪುಣ್ಯಫಲವನ್ನು ಬಯಸಿ ನಿಮ್ಮಯ ವೃಂದಾವನಕ್ಕೆ ಅಭಿಷೇಕ ಮಾಡಿದ ಜಲವನ್ನು ಭಕ್ತಿ ಶ್ರದ್ಧೆಗಳಿಂದ ತಲೆಯಲ್ಲಿ ಧರಿಸುತ್ತೇನೆ.

ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ || ೨೧ ||

ಶ್ಲೋಕ--21
ತಾತ್ಪರ್ಯ--ಬೇಡಿದವರ ಬಗೆಬಗೆಯ ಕಾಮನೆಗಳನ್ನು ಪೂರೈಸುವ ನಿಮಗೆ, ನನ್ನ ಎಲ್ಲ ತೆರನಾದ ಬಯಕೆಗಳನ್ನು ಹೊಂದುವುದಕ್ಕಾಗಿ ಭಕ್ತಿಯಿಂದ ನಮಿಸುತ್ತೇನೆ ಮತ್ತು ವೇದ, ಇತಿಹಾಸ, ಪುರಾಣಗಳೇ ಮೊದಲಾದ ಸಚ್ಚಾಸ್ತ್ರಗಳ ಯಥಾರ್ಥವಾದ ತಿಳುವಳಿಕೆಗಾಗಿ ಉತ್ತಮವಾದ ನಿಮ್ಮ ಚರಿತೆಯನ್ನು ಸರ್ವದಾ ಪಾಡುತ್ತಿರುತ್ತೇನೆ.

ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ
ಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ-ಭಂಗಾಕುಲೇ |
ನಾನಾ-ವಿಭ್ರಮ-ದುರ್ಭ್ರಮೇಽಮಿತ-ಭಯ-ಸ್ತೋಮಾದಿ-ಫೇನೋತ್ಕಟೇ
ದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ || ೨೨ ||

ಶ್ಲೋಕ-22 

ಸ್ವಾಭಾವಿಕವಾಗಿ ತಿಳಿಯಲು ಆಗದ ಆಳ, ಅಗಲಗಳಿಂದ ಕೂಡಿದ ಸಮುದ್ರದಂತೆ, ಸಂಸಾರವೆಂಬ ಸಮುದ್ರವು ಜನನ-ಮರಣಗಳೆಂಬ ಆಳ-ಅಗಲಗಳಿಂದ ಕೂಡಿದೆ. ಈ ಸಾಗರದಲ್ಲಿ ಸರ್ವರೀತಿಯ ಪಾಪಗಳೆಂಬ ಕ್ರೂರ ಜಲಚರ ಪ್ರಾಣಿಗಳು, ಕಾಮ, ಕ್ರೋಧಾದಿಗಳೆಂಬ ಅತ್ಯಂತ ರಭಸವಾದ ಅಲೆಗಳು, ನಾನಾ ವಿಧವಾದ ಸಂಸಾರಿಕವಾದ ವಿಲಾಸ ಹಾಗೂ ಭ್ರಾಂತಿಗಳೆಂಬ ಭಯಂಕರವಾದ ಸುಳಿಗಳು ಮತ್ತು ಎಣಿಸಲು ಆಗದ ನೊರೆಗಳು ಇದ್ದು ಮಹಾದುಃಖಗಳೆಂಬ ವಿಷದ ನೀರಿರುವುದು. ಇಂತಹ ಸಂಸಾರಸಾಗರದಲ್ಲಿ ಸರ್ವದಾ ಮುಳುಗಿಯೇ ಇರುವ ನನ್ನನ್ನು ಕರುಣಾಮೂರ್ತಿಗಳಾದ ಹೇ ರಾಘವೇಂದ್ರಗುರುಗಳೇ ಉದ್ಧರಿಸಿ.|

ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |
ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ || ೨೩ ||

ಶ್ಲೋಕ--23
ತಾತ್ಪರ್ಯ--ಯಾರು ಗುರುರಾಘವೇಂದ್ರರ ಉತ್ತಮವಾದ ಮಹಾತ್ಮ್ಯವನ್ನು ವರ್ಣಿಸುವ ಈ ಸ್ತೋತ್ರವನ್ನು ಭಕ್ತಿಪೂರ್ವಕವಾಗಿ ಪಾರಾಯಣವೇ ಮೊದಲಾದವುಗಳನ್ನು ನಡೆಸುವರೋ, ಅಂತವರ ಕುಷ್ಠವೇ ಅತೀ ಶೀಘ್ರದಲ್ಲಿ ಪರಿಹೃತವಾಗುವುದು.

ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |
ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ || ೨೪ ||

ಶ್ಲೋಕ--24
ತಾತ್ಪರ್ಯ--ಅದ್ಭುತವಾದ ಈ ಸ್ತೋತ್ರವನ್ನು ಜಪಿಸುವುದರಿಂದ ಜನ್ಮತಃ ಕುರುಡನಾದವನು ಉತ್ತಮದೃಷ್ಠಿಯನ್ನು ಪಡೆಯುವನು,ಹುಟ್ಟಿದಂದಿನಿಂದ ಕಿವುಡನೂ ಮೂಕನೂ ಆಗಿರುವ ವ್ಯಕ್ತಿಯು ಇದರ ಮಹಿಮೆಯಿಂದ ಚತುರ ಮಾತುಗಾರನಾಗುವನು, ಆರೋಗ್ಯದಿಂದ ಕೂಡಿದ ಪೂರ್ಣಾಯುಷ್ಯವೂ ಸಕಲವ ಸಂಪತ್ತು ಸಮೃದ್ಧಿಯೂ ಈ ಸ್ತೋತ್ರದ ಪಾರಾಯಣಗಳಿಂದ ಆಗುವುದು.

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |
ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ || ೨೫ ||

ಶ್ಲೋಕ--25
ತಾತ್ಪರ್ಯ-- ಯಾರು , ಉತ್ತಮವಾದ ಈ ಗುರು ಸ್ತೋತ್ರದಿಂದಅಭಿಮಂತ್ರಿತವಾದ ಜಲವನ್ನು ಭಕ್ತಿಯಿಂದ ಕುಡಿಯುವರೋ ಅಂತವರ ಉದರದಲ್ಲಿರುವ ಸರ್ವದೋಷಗಳೂ ತತ್ಕ್ಷಣದಲ್ಲಿಯೇ ನಾಶವನ್ನು ಹೊಂದುವುವು.

ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |
ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ || ೨೬ ||

ಶ್ಲೋಕ --26
ತಾತ್ಪರ್ಯ--ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಹೇಳದವ ಎನಿಸಿರುವ ಮತ್ತು ಕಾಲಿಲ್ಲದ ಕುಂಟನೂ ಆದ ವ್ಯಕ್ತಿಯು ಯಾವ ರಾಯರ ಈ ದಿವ್ಯಸ್ತೋತ್ರವನ್ನು ಪಠಿಸುತ್ತ ಗುರುಗಳ ವೃಂದಾವನದ ಸಮೀಪ ಬಂದವರಾಗಿ ಪ್ರದಕ್ಷಿಣೆ ನಮಸ್ಕಾರಾದಿಗಳನ್ನು ಮಾಡುವರೋ ಅಂತವರು ಗುರುರಾಜರ ಪ್ರಸಾದದಿಂದ ಬಹುಬೇಗನೆ ನಡೆದಾಡುವ ಸಾಮರ್ಥ್ಯವನ್ನು ಪಡೆಯುವರು.

ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ || ೨೭ ||

ಶ್ಲೋಕ --27
ತಾತ್ಪರ್ಯ--ಯಾರು ಚಂದ್ರ ಸೂರ್ಯರ ಗ್ರಹಣಕಾಲಗಳಲ್ಲಿ, ಪುಷ್ಯನಕ್ಷತ್ರದೊಡನೆ ರವಿವಾರ ಸೇರಿದಾಗ, ವ್ಯತೀಪಾತ, ವೈಧೃತಿ , ಪದ್ಯಕ, ಅರ್ಧೋದಯ, ಮಹೋದಯ ಯೋಗಗಳಲ್ಲಿ ,ಪೂರ್ಣಿಮಾ, ಅಮಾವಾಸ್ಯೆ ಮೊದಲಾದ ಪರ್ವಕಾಲಗಳಲ್ಲಿ , ಜನ್ಮನಕ್ಷತ್ರವೇ ಮೊದಲಾದ ದಿನಗಳಲ್ಲಿ ಈ ಗುರುಸ್ತೋತ್ರವನ್ನು ನೂರಾಎಂಟುಬಾರಿ ಪಠಿಸುವರೋ ಅಂತವರಿಗೆ ಎಂದಿಗೂ ಭೂತ, ಪ್ರೇತ ಪಿಶಾಚಿಗಳೇ ಮುಂತಾದ ಯಾವ ದುಷ್ಟಪೀಡೆಗಳೂ ಇರುವುದಿಲ್ಲ.

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |
ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ || ೨೮ ||

ಶ್ಲೋಕ--28
ತಾತ್ಪರ್ಯ--ಶ್ರೀ ರಾಘವೇಂದ್ರ ಸ್ತೋತ್ರವನ್ನು ಪಠಿಸುತ್ತಾ ಗುರುರಾಜರ ಬೃಂದಾವನ ಸನ್ನಿಧಿಯಲ್ಲಿ ದೀಪವನ್ನು ಹಚ್ಚಿಟ್ಟವರಿಗೆ ,ಶಾಸ್ತ್ರದ ಯತಾರ್ಥಜ್ಞಾನವು ಲಭಿಸುವುದು, ಪುತ್ರ ಸಂತಾನವಾಗುವುದು,ಈ ಬಗ್ಗೆ ಸಂಶಯಬೇಡ!ತಪ್ಪದೇ ಫಲವು ದೊರೆಯುವುದು.

ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |
ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ || ೨೯ ||

ಶ್ಲೋಕ--29
ತಾತ್ಪರ್ಯ--ಶ್ರೀ ಗುರುಸ್ತೋತ್ರವನ್ನು ಸದಾಪಾರಾಯಣ ಮಾಡುವುದರಿಂದ ವಾದದಲ್ಲಿ ಜಯವು ಲಭಿಸುವುದು, ಜ್ಞಾನಾವೃದ್ಧಿಯಾಗುವುದು, ಪರಮಾತ್ಮನಲ್ಲಿ ಭಕ್ತಿ ಹೆಚ್ಚುವುದು, ಸಕಲ ಅಭೀಷ್ಟಗಳು ಪೂರ್ಣವಾಗುವುವು. ಈ ವಿಷಯದಲ್ಲಿ ಸಂದೇಹವಿಲ್ಲ.

ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || ೩೦ ||

ಶ್ಲೋಕ--30
ತಾತ್ಪರ್ಯ-- ಶ್ರೀ ಗುರುಸ್ತೋತ್ರವನ್ನು ಭಕ್ತಿ ಪೂರ್ವಕವಾಗಿ ಪಠನೆ ಮಾಡುವುದರಿಂದ ರಾಜದಂಡನೆ ತಪ್ಪುವುದು, ಚೋರಭಯ ನಿವಾರಣೆಯಾಗುವುದು, ಸರ್ಪನಕ್ರಾದಿ ಕ್ರೂರಪ್ರಾಣಿಗಳ ಬಾಧೆಗಳು ತೊಲಗುವುವು. ಈ ವಿಷಯದಲ್ಲಿ ಸಂಶಯವೇ ಬೇಡ!

ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” || ೩೧ ||

ಶ್ಲೋಕ--31
ತಾತ್ಪರ್ಯ--ಯಾರು ಶ್ರೀ ರಾಘವೇಂದ್ರ ಗುರುಸಾರ್ವಬೌಮನ ಚರಣ ದ್ವಯೆವನ್ನು ಭಕಿಪೂರ್ವಕ ಸ್ಮರಿಸಿ  , ಶ್ರೀ ಗುರುಸ್ತೋತ್ರವನ್ನು ಭಕ್ತಿಯಿಂದ ಸದಾ ಪಠಣ ಮಾಡುವರೋ ಅವರಿಗೆ, ದುಃಖಗಳು ದೂರಾಗುವುವು, ಶ್ರೀ ಗುರುರಾಜರು ಸಂತುಷ್ಟರಾಗುವರು, ಶ್ರೀ ಗುರುರಾಜoತರ್ಗತ ಶ್ರೀ ಲಕ್ಶ್ಮೀಪತಿಯ ಪ್ರೀತನಾಗುವನು ಅದರಿಂದಾಗಿ ಅವರ ಕೀರ್ತಿಯ ದಶದಿಶೆಗಳ್ಳಲ್ಲಿ ಹಬ್ಬುವುದು, ಅವರಿಗೆ ಅತುಲೈಶ್ವರ್ಯವು ಪ್ರಾಪ್ತಿಯಾಗುವುದು.

ಶ್ರೀ ಗುರುಸ್ತುತಿಯನ್ನು ಶ್ರೀಮದಪ್ಪಣಾಚಾರ್ಯರು ರಚಿಸಿದರು, ಗುರುಸ್ತುತಿಯಲ್ಲಿ ಹೇಳಿದುದೆಲ್ಲವೂ ಸತ್ಯವೆಂಬುದಾಗಿ ಶ್ರೀ ಗುರುರಾಜರ ಬೃಂದಾವನದಿಂದ "ಸಾಕ್ಷೀ ಹಯಾಸ್ತೋತ್ರಹಿ" ಎಂಬ ಅನುಗ್ರಹ ವಚನವು ಬಂದಿತು! ಅಂದರೆ ಸ್ತೋತ್ರದಲ್ಲಿ ಹೇಳಿರುವುದೆಲ್ಲವೂ ಸತ್ಯವೆಂತಲೂ ಅದಕ್ಕೆ ನಮ್ಮ ಉಪಾಸ್ಯಮೂರ್ತಿಯಾದ ಶ್ರೀ ಹಯಗ್ರೀವ ದೇವರೇ ಸಾಕ್ಷಿ ಎಂಬುದಾಗಿ ಪ್ರಾಜ್ಞ ಜನರ ಅಭಿಪ್ರಾಯವಾಗಿದೆ!.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 

ಶ್ಲೋಕ--32

ಪರಮಪೂಜ್ಯ ಗುರುಗಳಾದ ಶ್ರೀ ರಾಘವೇಂದ್ರರು ಸತ್ಯ, ಧರ್ಮಗಳಲ್ಲಿ ರತರು.
ಭಜಿಪ ಜನರ ಪಾಲಿಗೆ ಕಲ್ಪವೃಕ್ಷವಾಗಿಯೂ, ನಮಿಪ ಭಕ್ತರಿಗೆ ಕಾಮಧೇನುವಾಗಿಯು, ಅಭೀಷ್ಟಗಳನ್ನು ಪೂರ್ಣಮಾಡುವರು.


ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ

ಶ್ಲೋಕ--33

ಕರುಣಾಸಮುದ್ರರಾದ ಶ್ರೀ ರಾಘವೇಂದ್ರ ಗುರುಗಳು , ಅಜ್ಞಾನಾಂದಕಾರವನ್ನು ಕಳೆಯಲು ಪ್ರಕಾಶಮಾನವಾದ ಸೂರ್ಯರಾಗಿರುವರು ವಿಷ್ಣುಭಕ್ತರೆಂಬ ಕಮಲಗಳ ಪಾಲಿಗೆ ಚಂದ್ರಮರಾಗಿರುವರು.

–>