-->

ಪರಿಶುದ್ಧ ಭಕ್ತಿ - ನಾರದ , ನಂದಿ , ಹನುಮಂತ - ನೀತಿ ಕಥೆ

ತ್ರಿಲೋಕ ಸಂಚಾರಿಯಾದ ನಾರದರು  ಕೈಲಾಸಕ್ಕೆ ಬಂದರು. ಇವರನ್ನು ನೋಡಿದ  ಶಿವನ ಅತ್ಯಂತ ಪ್ರೀತಿಯ ಗಣ ನಂದಿಯು, ಕಲಹಪ್ರಿಯರಾದ  ನಾರದರು ಇಲ್ಲಿಗೆ ಏಕೆ ಬಂದರು ಮತ್ತೆ ಇನ್ನೇನು ಜಗಳ ತಂದು  ಹಾಕುತ್ತಾರೋ ಎಂದು ಮನಸ್ಸಿನಲ್ಲಿ  ಅಂದುಕೊಂಡ. ಇದು ನಾರದರಿಗೆ  ತಿಳಿಯಿತು. ಅವರು ಸ್ವಲ್ಪ ಜಂಬದಿಂದ ನಂದಿ ನಾವಿಬ್ಬರೂ  ಹಾಡು ಹೇಳುವ  ಪಂದ್ಯ ಕಟ್ಟೋಣ. ನಮ್ಮಿಬ್ಬರಲ್ಲಿ  ಯಾರಿಗೆ  ಜಯಗಳಿಸುತ್ತಾರೆ  ತಿಳಿಯುತ್ತದೆ.  ನಿನಗೆ ಒಪ್ಪಿಗೆ ಇದೆಯಾ?  ಎಂದರು. ನಂದಿಯು, ಓಹೋ, ಆಗಲಿ ಎಂದ ಅವನಷ್ಟಕ್ಕೆ ಅವನೇ, ನಾನು ಶಿವನ ಪರಮ ಭಕ್ತ  ಶಿವನಾಮಸ್ಮರಣೆಯನ್ನು ಭಕ್ತಿಯಿಂದ ಹೇಳಿದರೆ ನಾನು ಗೆದ್ದೇ ಗೆಲ್ಲುತ್ತೇನೆ ಎಂದುಕೊಂಡ. ನಾರದರು, ಈ ಬಸವನ
ಮೂತಿಯ  ನಂದಿ  ಹಾಡಿನ ಸ್ಪರ್ಧೆಯಲ್ಲಿ  ಗೆಲ್ಲುತ್ತೇನೆಂಬ ವಿಶ್ವಾಸವನ್ನು ಹೇಗೆ ಹೊಂದಿದ್ದಾನೋ ಎಂದು ಮನಸ್ಸಿನಲ್ಲಿ ವ್ಯಂಗ್ಯವಾಗಿ ನಕ್ಕರು. ಆ  ನಂತರ ಇಬ್ಬರು  ನಡುವೆ ಹಾಡಿನ ಸ್ಪರ್ಧೆ ಏರ್ಪಟ್ಟಿತು. ನಾರದರು ತೀರ್ಪುಗಾರನನ್ನಾಗಿ ಶಿವಪಾರ್ವತಿಯರನ್ನು  ಮಾಡಿದರು.

ಹಾಡಿನ ಸ್ಪರ್ಧೆಯಲ್ಲಿ ನಂದಿ  ಶಿವ ನಾಮಸ್ಮರಣೆಯ ಹಾಡುಗಳನ್ನು  ಬಹಳ ಸೊಗಸಾಗಿ  ಹತ್ತು ಹಲವು ರಾಗಗಳಲ್ಲಿ  ಹಾಡಿದನು. ನಾನು ಬಹುದೊಡ್ಡ ಸಂಗೀತಗಾರ  ನಂದಿ ಗಿಂತಲೂ ಅದ್ಭುತವಾಗಿ ಹಾಡುವೆ  ಎಂದುಕೊಂಡ  ನಾರದರು  ನಾರಾಯಣನ ನಾಮ ಸ್ಮರಣೆಯ  ಹಾಡುಗಳನ್ನು  ಅತ್ಯದ್ಭುತವಾಗಿ  ಹಲವಾರು ರಾಗಗಳಲ್ಲಿ  ಹಾಡಿದರು. ಇಬ್ಬರೂ ಬಹಳ ಚೆನ್ನಾಗಿ ಹಾಡಿದ್ದರಿಂದ ಶಿವಪಾರ್ವತಿಯರಿಗೆ ತೀರ್ಪು ಹೇಳುವುದು  ಕಷ್ಟವಾಯಿತು. ಆದ್ದರಿಂದ ಶಿವನು, ನಾರದ ಮತ್ತು ನಂದಿ  ನೀವಿಬ್ಬರೂ ಬಹಳ ಚೆನ್ನಾಗಿ ಹಾಡಿದ್ದೀರಿ ಯಾರು ಚೆನ್ನಾಗಿ ಹೇಳಿದ್ದಾರೆಂದು ತೀರ್ಮಾನ ಮಾಡುವುದು ನನಗೆ ಕಷ್ಟವಾಗುತ್ತದೆ.  ನಿಮ್ಮ ಅದ್ಭುತವಾದ ಪ್ರತಿಭೆಯನ್ನು  ನಾರಾಯಣನ  ವಿನಹಾ ಬೇರಾರೂ ಗುರುತಿಸಲು ಆಗುವುದಿಲ್ಲ. ಆದ್ದರಿಂದ ಇಬ್ಬರೂ ನಾರಾಯಣನ ಹತ್ತಿರ ಹೋಗಿರಿ  ಎಂದನು.

ಪರಿಶುದ್ಧ ಭಕ್ತಿ - ನಾರದ , ನಂದಿ , ಹನುಮಂತ - ನೀತಿ ಕಥೆ


ಇದನ್ನು ಕೇಳಿದ ನಾರದರು  ಮನಸ್ಸಿನಲ್ಲಿ ಸಂಗೀತದ ಪಿತಾಮಹ ನಾನು, ನನ್ನ ಬಿಟ್ಟು ನಂದಿ  ಗೆಲ್ಲಲು ಸಾಧ್ಯವೇ? ತ್ರಿಲೋಕ ಸಂಚಾರಿಯಾಗಿ ಎಲ್ಲಾ ತಿಳಿದ ನಾನು ಪ್ರತಿಭಾವಂತನಾಗಿದ್ದೇನೆ.  ಈಶ್ವರನ ಪರಮಭಕ್ತ ನಂದಿ  ಸೋತಿದ್ದಾನೆ. ಅದನ್ನು ನನ್ನ ಎದುರಿಗೆ ಹೇಳಿದರೆ ನಂದಿಗೆ ಬೇಜಾರಾಗುತ್ತದೆ ಎಂದು ಪರಮೇಶ್ವರನು ವಿಷ್ಣುವಿನಲ್ಲಿ ಕಳಿಸುತ್ತಿದ್ದಾರೆ ಎಂದುಕೊಂಡರೆ,   ನಂದಿಯು ನಾನು ಪರಮೇಶ್ವರನ  ಪರಮಶಿಷ್ಯ, ಕೈಲಾಸವೇ ನನ್ನ  ಕೈಯಲ್ಲಿದೆ. ನಾನು ಗೆದ್ದಿದ್ದೇನೆ ಎಂದು  ಹೇಳಿದರೆ ಕೈಲಾಸಕ್ಕೆ ಬಂದಂತಹ  ನಾರದರಿಗೆ ಅವಮಾನವಾಗುತ್ತದೆ. ಅಲ್ಲದೆ ಶಿವನು ಬೇಕೆಂದೇ  ಶಿಷ್ಯನನ್ನು ಗೆಲ್ಲಿಸಿದ್ದಾನೆ ಎಂದುಕೊಳ್ಳುತ್ತಾನೆ. ಅದಕ್ಕಾಗಿ ವಿಷ್ಣುವಿನ ಬಳಿ ನಮ್ಮನ್ನು ಕಳುಹಿಸುತ್ತಿದ್ದಾರೆ. ಒಳ್ಳೆಯದಾಯಿತು ಅಲ್ಲಿಗೆ ಕಳಿಸಲಿ, ಹೇಗಿದ್ದರೂ ನಾನೇ ಗೆಲ್ಲುವುದು ಎಂದು ನಂದಿ ಮನದಲ್ಲೇ ಬೀಗಿದ. ನಂದಿನಿ ಮತ್ತು ನಾರದರು ವೈಕುಂಟಕ್ಕೆ ವಿಷ್ಣುವಿನ ಹತ್ತಿರ ಬಂದರು.

ವಿಷ್ಣು ಎಲ್ಲವನ್ನು  ತಿಳಿದುಕೊಂಡು  ಶಿವನು ನನ್ನ ಬಳಿ ಇವರಿಬ್ಬರನ್ನು ಏಕೆ ಕಳುಹಿಸಿದ್ದಾರೆ ಎಂದು ವಿಷ್ಣುವಿಗೆ ಅರ್ಥವಾಯಿತು. ವೈಕುಂಠದಲ್ಲಿಯೂ  ನಾರದ ಮತ್ತು ನಂದಿಯ ಹಾಡಿನ ಸ್ಪರ್ಧೆ ನಡೆಯಿತು. ಇಬ್ಬರೂ ಒಬ್ಬರಿಗಿಂತ ಒಬ್ಬರು ಎನ್ನುವಂತೆ ಅತ್ಯದ್ಭುತವಾಗಿ ಹಾಡಿದರು.  ಇವರಿಬ್ಬರಲ್ಲಿ  ಯಾರು ಚೆನ್ನಾಗಿ ಹಾಡಿದ್ದಾರೆ  ಎಂದು ಹೇಳುವುದು  ಕಷ್ಟವಾಗುತ್ತದೆ, ಅಲ್ಲದೆ ಇವರಿಬ್ಬರ ಅಹಂಕಾರವನ್ನು  ಇಳಿಸಬೇಕಾಗಿತ್ತು. ಹೀಗೆ ಯೋಚಿಸಿದ ವಿಷ್ಣು ನೋಡಿ ನಿಮ್ಮಿಬ್ಬರಲ್ಲಿ ಯಾರು ಗೆದ್ದರು ಎಂದು ಹೇಳುವುದು ಬಹಳ ಕಷ್ಟವಾಗುತ್ತದೆ. ಆದ್ದರಿಂದ ನಾವು ಭೂಲೋಕಕ್ಕೆ ಹೋಗೋಣ ಅಲ್ಲಿ  ಒಬ್ಬ ವಾನರನಿದ್ದಾನೆ. ಅವನು ಅತ್ಯದ್ಭುತ ಸಂಗೀತಗಾರನು. ಅವನಷ್ಟು  ಚೆನ್ನಾಗಿ ಯಾರೂ ಹೇಳುವುದಿಲ್ಲ ಅವನು ನಿಮ್ಮಿಬ್ಬರಲ್ಲಿ ಯಾರು ಗೆದ್ದರು ಎಂದು ಹೇಳುತ್ತಾನೆ ಬನ್ನಿ ಅಲ್ಲಿಗೆ ಹೋಗೋಣ ಎಂದನು.

ಇದನ್ನು ಕೇಳಿದ ನಾರದ ಮತ್ತು ನಂದಿ ಇಬ್ಬರೂ ಭೂಲೋಕದಲ್ಲಿರುವ ವಾನರನು  ನಮ್ಮಿಬ್ಬರ ಹಾಡನ್ನು ಕೇಳಿ ಯಾರು ಚೆನ್ನಾಗಿ ಹೇಳುವರು ಎಂದು ತೀರ್ಮಾನಿಸಲು ಸಾಧ್ಯವಿದೆಯೇ ? ಅಂತಹ  ಮಹಾದೇವ- ಮಹಾವಿಷ್ಣುವಿಗೆ  ತೀರ್ಮಾನಿಸಲಾಗಲಿಲ್ಲ,  ಇನ್ನು ಈ  ವಾನರ ಹೇಳಲು ಸಾಧ್ಯವೇ  ಎಂದು ಮನಸ್ಸಿನಲ್ಲಿ  ಅಂದುಕೊಂಡು ವಿಷ್ಣುವಿನ ಜೊತೆ ಭೂಲೋಕಕ್ಕೆ ಬಂದರು. ಕಾಲಿಡುತ್ತಿದ್ದಂತೆ ಎಲ್ಲಿಂದಲೋ ಸುಶ್ರಾವ್ಯವಾಗಿ ಯಾರೊ  ಹಾಡುತ್ತಿರುವ ಹಾಡು ಕೇಳಿಸಿತು. ಹೋಗಿ ನೋಡಿದರೆ  ಜಗದ ಪರಿವೆ ಇಲ್ಲದಂತೆ ಮೈಮರೆತು ಭಕ್ತಿಯಿಂದ ಸುಶ್ರಾವ್ಯವಾಗಿ ರಾಮನಾಮ ಹಾಡನ್ನು ಹಾಡುತ್ತಿದ್ದವನು ರಾಮನ ಪರಮಭಕ್ತ ಹನುಮಂತನಾಗಿದ್ದನು. ವಿಷ್ಣು ತಾನು ಭೂಲೋಕಕ್ಕೆ ಬಂದ ವಿಷಯವನ್ನು ಹನುಮಂತನಿಗೆ ತಿಳಿಸಿದನು. ನಾರದ ಮತ್ತು ನಂದಿ ಯಾರಿಗೂ ಕಮ್ಮಿ ಇಲ್ಲದಂತೆ ಆಂಜನೇಯನ ಎದುರು ನಾನಾ ಬಗೆಯ ರಾಗದ ಹಲವಾರು ಹಾಡುಗಳನ್ನು ಹಾಡಿದರು. ಆ ನಂತರ ವಿಷ್ಣುವು ಹನುಮಂತನಿಗೆ ಹನುಮ ನಿನ್ನ ಕಂಠದಿಂದಲೂ ಒಂದು ಹಾಡು ಹೊರಹೊಮ್ಮಲಿ ಎಂದನು.ಹನುಮಂತನು  ಆಯಿತು ಪ್ರಭು, ಎಂದವನೇ ಕಣ್ಣುಮುಚ್ಚಿ ಚಕ್ಕಳ ಮಟ್ಟೆ ಹಾಕಿಕೊಂಡು ನೇರವಾಗಿ  ಕುಳಿತು ಶ್ರೀರಾಮಚಂದ್ರನನ್ನು  ಧ್ಯಾನಿಸುತ್ತಾ, ಕಣ್ಣುಮುಚ್ಚಿಕೊಂಡು ಭಕ್ತಿಯಿಂದ ಶ್ರೀರಾಮನ  ಕುರಿತ ಹಾಡುಗಳನ್ನು ಹೇಳಲು ಶುರು ಮಾಡಿದನು. ಅವನ ಹಾಡು ಶುರು ಮಾಡುತ್ತಿದ್ದಂತೆ ಲೋಕದ ಚಟುವಟಿಕೆಯೇ ನಿಂತಂತಾಗಿ, ಪ್ರಾಣಿ, ಪಶು, ಪಕ್ಷಿ, ಪ್ರಕೃತಿ ಎಲ್ಲರೂ ಮೈಮರೆತು ಹಾಡನ್ನು ಆಸ್ವಾದಿಸುತ್ತಿದ್ದರು. ಹನುಮಂತನ ಹಾಡಿದ ಮಾಧುರಿ ಎಲ್ಲೆಡೆಯೂ ಪಸರಿಸುತ್ತ ಭೂಲೋಕದಲ್ಲಿರುವ ನದಿ -ಹಳ್ಳ-ಕೊಳ್ಳ- ಬಾವಿ ಗಳಲ್ಲಿನ ನೀರೆಲ್ಲ ಹೆಪ್ಪುಗಟ್ಟಿತು. ಇದೇ ಸಮಯವೆಂದರಿತ  ವಿಷ್ಣು,  ನಾರದ ಮತ್ತು ನಂದಿ ಕುರಿತು ನಿಮ್ಮಲ್ಲಿ ಯಾರಾದರೂ ಹಾಡನ್ನು ಹೇಳಿ ನದಿ,ಕೆರೆ, ಕೊಳ್ಳ ,ಹಳ್ಳಗಳಲ್ಲಿ  ಹೆಪ್ಪುಗಟ್ಟಿದ ನೀರನ್ನು ತಿಳಿಯಾಗಿಸಿದರೆ ಅವರು ಸ್ಪರ್ಧೆಯಲ್ಲಿ ಗೆದ್ದಂತೆ ಎಂದನು.  ನಂದಿ ಮತ್ತು ನಾರದರು ಬಹಳ ಸೊಗಸಾಗಿ ಮೈಮರೆತು  ಹಾಡಿದರು. ಆದರೆ ಹೆಪ್ಪುಗಟ್ಟಿದ ನೀರು  ತಿಳಿಯಾಗಲಿಲ್ಲ. ಆಮೇಲೆ ಹನುಮಂತನು ಹಾಡನ್ನು ಹಾಡಿದ ಆಗ ಹಳ್ಳ-ಕೊಳ್ಳ- ನದಿಗಳಲ್ಲಿನ ಹೆಪ್ಪುಗಟ್ಟಿದ ನೀರು ತಿಳಿಯಾಯಿತು. ಇದನ್ನು ಕಂಡ ನಂದಿ ಮತ್ತು ನಾರದರು  ನಾಚಿಕೆಯಿಂದ ತಲೆತಗ್ಗಿಸಿದರು. ವಿಷ್ಣು ಹಸನ್ಮುಖನಾಗಿ ನಕ್ಕನು. ಕೈಲಾಸದಲ್ಲಿ ಪಾರ್ವತಿ ಪರಮೇಶ್ವರೂ ಮನಸಾರೆ ನಕ್ಕರು. ಇಲ್ಲಿ ಯಾರೂ ಗೆಲ್ಲಲಿಲ್ಲ ಅಥವಾ ಯಾರೂ ಸೋಲಲಿಲ್ಲ, ನಾರದರು ನಾರಾಯಣ ನಾಮಸ್ಮರಣೆಯ ಮೂಲಕ ಹಾಡಿದರು ನಂದಿಯು ಶಿವ ನಾಮಸ್ಮರಣೆಯನ್ನು  ಭಕ್ತಿಯಿಂದ ಹಾಡಿದನು.  ಮೂವರು ಬಹಳ ಚೆನ್ನಾಗಿ ಯಾರೂ  ಕಡಿಮೆಯಿಲ್ಲದಂತೆ ಸರಿಸಮನಾಗಿ  ಹಾಡಿದರು. ಆದರೆ ಅಹಂಕಾರ ಸೋತಿತು. ಹನುಮಂತನ ಪ್ರೇಮ ಭರಿತ 'ಪರಿಶುದ್ಧ ಭಕ್ತಿಗೆ'  ವಿಜಯಲಕ್ಷ್ಮಿ ಒಲಿದಳು.

–>