-->

Story of birth of Kubera , the devata god of weath

ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೂಬ್ಬನು. ಉತ್ತರ ದಿಕ್ಕಿನ ಅಧಿಪತಿ. 'ಕುಬೇರ' ಹೆಸರು ನಮಗೆಲ್ಲಾ ನೆನಪಾಗುವುದು ಎಷ್ಟೋ ವರ್ಷಗಳ ನಂತರ ಆತ್ಮೀಯರು ಅಥವಾ ನೆಂಟರ ಮನೆಗೆ ಹೋದಾಗ ಅವರ ಮನೆಯಲ್ಲಿರುವ ಒಡವೆ, ಸೀರೆ, ಮನೆಯಲ್ಲಿ ದುಬಾರಿ ಗೃಹೋಪಯೋಗಿ ವಸ್ತುಗಳನ್ನು ನೋಡಿ, ಏನು ಕುಬೇರನ ಹಾಗೆ ಬಾರಿ ಶ್ರೀಮಂತರಾಗಿ ಬಿಟ್ಟಿದ್ದಿರಿ ಲಾಟರಿ ಹೊಡಿತಾ ಅಂತ ಕೇಳುವುದುಂಟು. ಕೃತಯುಗದಲ್ಲಿ ಬ್ರಹ್ಮನ ಮಾನಪುತ್ರರಾಗಿದ್ದು, ಎರಡನೇ ಬ್ರಹ್ಮ ಅಂತ ಕರೆಯಲ್ಪಡುವ 'ಪುಲಸ್ತ್ಯ'ರು ತಾವು ತಪಸ್ಸು ಮಾಡಬೇಕೆಂದು ಮೇರು ಪರ್ವತದ ಪ್ರಾಂತ್ಯದಲ್ಲಿನ ತೃಣ ಬಿಂದುವಿನ ಆಶ್ರಮದಲ್ಲಿದ್ದು, ತಪಸ್ಸು ಮಾಡಿಕೊಂಡಿರುವಾಗ, ಆ ಪ್ರದೇಶವು ಬಹಳ ಸುಂದರವಾಗಿ ರಮಣೀಯವಾಗಿದ್ದುದರಿಂದ ದೇವ, ನಾಗ, ಋಷಿ, ಹಾಗೂ ರಾಜರ್ಷಿ ಕನ್ಯೆಯರು ನಿತ್ಯವೂ ಬಂದು ಮನಸೋಇಚ್ಛೆ ಆಟ- ಪಾಠಗಳನ್ನು ಆಡುತ್ತಾ ಬಹಳ ಗಲಾಟೆ ಮಾಡುತ್ತಿದ್ದರು. ಇದರಿಂದ ಪುಲಸ್ತ್ಯರ ತಪಸ್ಸಿಗೆ ತೊಂದರೆಯಾಗುತ್ತಿತ್ತು. ತಾಳ್ಮೆಯಿಂದ ಒಂದೆರಡು ಸಲ ಹೀಗೆಲ್ಲಾ ಗಲಾಟೆ ಮಾಡಬಾರದೆಂದು ಬುದ್ಧಿ ಹೇಳಿದನು. ಆದರೆ ಅವರ್ಯಾರು ಅವನ ಮಾತನ್ನು ಕೇಳಲಿಲ್ಲ. ಆಗ ಕೋಪ ಬಂದು ಯಾವುದೇ ಸ್ತ್ರೀ ಇಲ್ಲಿಗೆ ಬಂದರೆ 'ಗರ್ಭವತಿಯಾಗುತ್ತೀರಿ' ಎಂದು ಶಾಪವನ್ನು ಕೊಡುತ್ತಾನೆ. ಈ ಶಾಪದ ವಿಷಯ ಎಲ್ಲರಿಗೂ ತಿಳಿದರೂ, ತೃಣಬಿಂದು ಮಗಳಿಗೆ ಮಾತ್ರ ಗೊತ್ತಿರಲಿಲ್ಲ. ಅವಳು ನಿತ್ಯದಂತೆ ಅಲ್ಲಿಗೆ ಬಂದು ಸ್ನೇಹಿತರನ್ನು ಕರೆಯುತ್ತಾಳೆ. ಆದರೆ

ಒಬ್ಬರೂ ಅಲ್ಲಿ ಇರಲಿಲ್ಲ .ಅವಳು ವೇದಾಧ್ಯಯನ ಮಾಡುತ್ತಿದ್ದ ಪುಲಸ್ತ್ಯ ರ ಆಶ್ರಮದ ಬಳಿ ಬಂದಳು. 

ಪುಲಸ್ತ್ಯ ರನ್ನು ನೋಡುತ್ತಿದ್ದ ಹಾಗೆಯೇ ಅವಳಲ್ಲಿ ಗರ್ಭ ಚಿನ್ಹೆಗಳು ಕಾಣಿಸಿಕೊಂಡಿತು. ಆಕೆ ಗಾಬರಿಯಾಗಿ ತಂದೆ ತೃಣ ಬಿಂದುವಿನ ಬಳಿ ಬಂದು ಅಪ್ಪ ನಾನು ಪುಲಸ್ತ್ಯ ರ ‌ ಆಶ್ರಮದ ಬಳಿ ಗೆಳತಿಯರಿಗಾಗಿ ಹೋಗಿದ್ದಾಗ ನನ್ನ ಶರೀರದಲ್ಲಿ ಏನೋ ಬದಲಾವಣೆ ಆಗಿದೆ. ಕಾರಣ ಗೊತ್ತಾಗಲಿಲ್ಲ ಎಂದಳು. ತೃಣಬಿಂದುವಿಗೆ ತಿಳಿಯಿತು ಪುಲಸ್ತ್ಯ ರ ಶಾಪ ತನ್ನ ಮಗಳಿಗೆ ಫಲಿಸಿ ಗರ್ಭವತಿಯಾಗಿದ್ದಾಳೆ ಎಂದು ತಿಳಿದಕೂಡಲೇ ಮಗಳನ್ನು ಪುಲಸ್ತ್ಯ ರಲ್ಲಿಗೆ ಕರೆ ತಂದು, ಮಹಾನುಭಾವ ಈಕೆ ನನ್ನ ಮಗಳು, ತುಂಬಾ ಒಳ್ಳೆಯವಳು ನಿಮಗೆ ಯಾವತ್ತೂ ಯಾವ ತರಹದ ತೊಂದರೆ ಕೊಟ್ಟಿಲ್ಲ, ನಿಮ್ಮ ಮೇಲೆ ತುಂಬಾ ಭಕ್ತಿ ,ಗೌರವ ಇದೆ. ಈಕೆ ಗೊತ್ತಿಲ್ಲದೆ ಗೆಳತಿಯರಿಗಾಗಿ ಇಲ್ಲಿಗೆ ಬಂದಿದ್ದಳು. ಈಗ ನೀವು ಇವಳನ್ನು ವಿವಾಹವಾಗಿ ಉದ್ದರಿಸಬೇಕು ಎಂದು ಪ್ರಾರ್ಥಿಸಿ ಕೊಂಡನು. ತೃಣ ಬಿಂದುವಿನ ಪ್ರಾರ್ಥನೆಯನ್ನು ಸ್ವೀಕರಿಸಿ ಪುಲಸ್ತ್ಯ ರು ಅವಳ ಮಗಳನ್ನು ವಿವಾಹವಾಗುತ್ತಾರೆ. ಕೆಲ ಸಮಯ ಕಳೆಯಿತು. ಪತ್ನಿಯಿಂದ ಪುಲಸ್ತ್ಯ ರು ಬಹಳ ಸಂತೋಷವಾಗಿದ್ದರು.‌ ಆಕೆ ಬಹಳ ಒಳ್ಳೆಯವಳು ಹಾಗೂ ಯೋಗ್ಯಳಾದಂತ ಪತ್ನಿಯಾಗಿದ್ದಳು, ಒಂದು ದಿನ ಆಕೆಗೆ, ನಾನು ವೇದಪಾರಾಯಣವನ್ನು ಮಾಡುವಂತಹ ಸಮಯದಲ್ಲಿ ನೀನು ಗರ್ಭ ಧರಿಸಿದ್ದರಿಂದಲೂ ನಿನ್ನ ಉತ್ತಮ, ನಡೆನುಡಿಗಳಿಂದಾಗಿ, ನಿನಗೆ ನನ್ನಂತಹ ಮಗನೇ ಜನಿಸುತ್ತಾನೆ. ಅವನು 'ವಿಶ್ರವಸು' ಎಂಬ ಹೆಸರಿನಿಂದ ಪ್ರಸಿದ್ಧಿ ಆಗುತ್ತಾನೆ. ಹಾಗೂ ನನ್ನ ಮಗನಾದ್ದರಿಂದ 'ಪೌಲಸ್ತ್ಯ' ಎಂಬ ಹೆಸರಿನಿಂದಲೂ ಪ್ರಖ್ಯಾತಿ ಹೊಂದುತ್ತಾನೆ. ನಿನಗೆ ಎಲ್ಲವೂ ಶುಭವಾಗುತ್ತದೆ ಎಂದು ಹರಸುತ್ತಾನೆ. 
Story of birth of Kubera , the devata god of weath

 ಸ್ವಲ್ಪ ದಿನಗಳಲ್ಲಿಯೇ 'ವಿಶ್ರವಸು' ಹುಟ್ಟುತ್ತಾನೆ. ಅವನು ಸಹ ಸದ್ಗುಣಗಳಿಂದ ತುಂಬಿದನಾಗಿರುತ್ತಾನೆ. ಇವನನ್ನು ದೇವತೆಗಳು ಹೊಗಳುತ್ತಾರೆ. ಇದನ್ನೆಲ್ಲ ತಿಳಿದಂತಹ 'ಭಾರದ್ವಾಜ' ಮುನಿಗಳು ತಮ್ಮ ಮಗಳಾದ 'ದೇವವರ್ಣಿ' ಎಂಬುವಳನ್ನು 'ವಿಶ್ರವಸು' ವಿಗೆ ಕೊಟ್ಟು ಮದುವೆ ಮಾಡುತ್ತಾರೆ. ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿದ್ದು ಇವರಿಗೆ ಹುಟ್ಟಿದ ಮಗುವೇ 'ಕುಬೇರ' ಕುಬೇರ ಹುಟ್ಟಿದ ತಕ್ಷಣ ಇಡೀ ಜಗತ್ತೇ ಬೆಳಕಾಗುತ್ತೆ. ಸೂರ್ಯನ ಪ್ರಜ್ವಲವಾದ ಕಿರಣಗಳ ಬೆಳಕಿನಂತೆ ಜಗತ್ತೆಲ್ಲ ಬೆಳಕು ಹರಡುತ್ತದೆ. ಈ ಮಗು ಹುಟ್ಟಿದಾಗ ಸ್ವತಹ ತಾತನಾದ ಬ್ರಹ್ಮನೇ ಬಂದು, ಮುಂದೆ ನೀನು 'ಧನಾಧಿಪತಿಯಾಗು' ಎಂದು ಆಶೀರ್ವದಿಸುತ್ತಾನೆ. ಹಾಗೆಯೇ ಬ್ರಹ್ಮನು ಇವನಿಗೆ 'ವೈಶ್ರವಣಾಯ' ಎಂಬ ಇನ್ನೊಂದು ಹೆಸರನ್ನು ಇಡುತ್ತಾನೆ. ಕುಬೇರನಿಗೆ ಚಿಕ್ಕಂದಿನಿಂದಲೂ ತಪಸ್ಸು ಮಾಡುವ ಹುಚ್ಚು. ಹೀಗಾಗಿ ಅವನು ಕಾಡಿಗೆ ಹೋಗಿ ಗಾಢವಾದ ತಪಸ್ಸನ್ನು ಮಾಡುತ್ತಾನೆ. ಆಹಾರವನ್ನು ಬಿಟ್ಟು ಬರಿ ಜಲಾಹಾರ, ವಾಯು ಸೇವನೆ, ಏನು ಇಲ್ಲದೆ ಉಪವಾಸ ಮಾಡಿ, 3000 ವರ್ಷಗಳಷ್ಟು ಅವನು ತಪಸ್ಸಿನಲ್ಲಿ ನಿರತನಾಗಿರುತ್ತಾನೆ. ಕುಬೇರನ ತಪಸ್ಸನ್ನು ಮೆಚ್ಚಿದ ಬ್ರಹ್ಮ ,ಇಂದ್ರಾದಿ ದೇವತೆಗಳು ಪ್ರತ್ಯಕ್ಷರಾದರು. ನಿನ್ನ ತಪಸ್ಸನ್ನು ಇಲ್ಲಿಗೆ ಮುಗಿಸು, ನಿನ್ನ ತಪಸ್ಸಿನಿಂದ ನಾವೆಲ್ಲರೂ ಪ್ರಸನ್ನ ರಾಗಿದ್ದೇವೆ ನಿನಗೆ ಯಾವ ವರ ಬೇಕು ಕೇಳು ಎಂದರು. ಆಗ 'ವೈಶ್ರವಣನು' ತನ್ನ ತಾತನಾದ ಬ್ರಹ್ಮನ ಹತ್ತಿರ ನನಗೆ ಲೋಕಾದಿಪತ್ಯ ಹಾಗೂ ಧನಾದಿಪತ್ಯವನ್ನು ಕೊಡಬೇಕು ಎಂದು ಪ್ರಾರ್ಥಿಸಿದನು, ಬ್ರಹ್ಮನು ಹಾಗೂ ದೇವತೆಗಳು ಕುಬೇರನ ಬೇಡಿಕೆಗೆ ಸಂತಸ ವ್ಯಕ್ತಪಡಿಸಿದರು. ಆಗ ಬ್ರಹ್ಮನು ಹೇಳಿದನು ನಾನು ಈಗಾಗಲೇ ಒಬ್ಬ ಲೋಕಾದಿಪತ್ಯನನ್ನು ಸೃಷ್ಟಿಸ ಬೇಕೆಂದಿದ್ದೆ. ಈಗ ನೀನೇ, ಇಂದ್ರ , ವರುಣ, ಯಮ, ಅವರ ಜೊತೆಗೆ ನಾಲ್ಕನೆಯ ಲೋಕಾದಿ ಪತಿಯಾಗಿ 'ಸಂಪತ್ತಿಗೆ'' ಅಧಿಪತಿಯಾಗು ಎಂದು ಆಶೀರ್ವದಿಸುತ್ತಾನೆ. ಹಾಗೂ ಅವನಿಗೆ ದೇವಾನುದೇವತೆಗಳ ಸಮನಾಗಿ ಓಡಾಡಲು 'ಪುಷ್ಪಕ ವಿಮಾನ' ವನ್ನು ಕೊಡುತ್ತಾನೆ. ಇದರಲ್ಲಿ ಲೋಕವನ್ನೆಲ್ಲಾ ಸಂಚರಿಸಬಹುದು. ಇದು ಇನ್ನು ಮುಂದೆ ನಿನ್ನ ಸ್ವಂತ ವಿಮಾನ ಎಂದು ಹೇಳಿ ಅದೃಶ್ಯನಾದನು. ಆನಂತರ 'ವೈಶ್ರವಣನ' ಹೆಸರು 'ಕುಬೇರ' ಎಂದು ಪ್ರಸಿದ್ಧಿ ಹೊಂದುತ್ತದೆ. ಈ ರೀತಿ ದೇವತೆಗಳಿಂದ ಆಶೀರ್ವಾದವನ್ನು ಪಡೆದ ಕುಬೇರನು ತಂದೆಯ ಹತ್ತಿರ ಬಂದನು. 'ವಿಶ್ರವಸು' ವಿಗೆ ನಮಸ್ಕರಿಸಿ, ಅಪ್ಪ ನಾನು ಬ್ರಹ್ಮನಿಂದ ವರವನ್ನು ಪಡೆದೆ. ಆದರೆ ನನಗೆ ವಾಸಮಾಡಲು ಯೋಗ್ಯ ಸ್ಥಳವನ್ನು ಬ್ರಹ್ಮನು ತಿಳಿಸಲಿಲ್ಲ ನಾನು ಕೇಳಲಿಲ್ಲ. ಆದ್ದರಿಂದ ನನಗೆ ವಾಸಮಾಡಲು,ಹಾಗೂ ಯಾರಿಗೂ ತೊಂದರೆ ಕೊಡದಂತೆ. ಒಂದು ಜಾಗ ಬೇಕು ನೀನೇ ತೋರಿಸು ಎಂದನು. ಮಿಶ್ರವಸು ಮಗನ ಸಾಧನೆಗೆ ಸಂತೋಷಪಟ್ಟನು. ನೀನು ಸರಿಯಾಗಿ ನೆಲೆನಿಲ್ಲಲು, ದಕ್ಷಿಣ ಸಮುದ್ರ ತೀರದಲ್ಲಿರುವ ತ್ರಿಕೂಟ ಪರ್ವತದ ಶಿಖರದ ಮೇಲೆ ದೇವೇಂದ್ರನ ಅಮರಾವತಿಗೆ ಸರಿಸಮನಾಗಿ ಇರುವಂತ ನಗರವನ್ನು ವಿಶ್ವಕರ್ಮನು ನಿರ್ಮಾಣ ಮಾಡಿದ್ದಾನೆ. ಇದನ್ನು 'ಲಂಕೆ' ಅಂತ ಕರೆಯುತ್ತಾರೆ. ಈ ಪಟ್ಟಣದ ಪ್ರಾಕಾರವೆಲ್ಲ ಸುವರ್ಣದಿಂದ ತುಂಬಿದೆ ದ್ವಾರಗಳೆಲ್ಲ ವಜ್ರಖಚಿತವಾದುದಾಗಿದೆ. ಮುತ್ತು ರತ್ನ ಹವಳ ಗಳಿಂದ ಪಟ್ಟಣ ವೆಲ್ಲ ಅಲಂಕರಿಸಲ್ಪಟ್ಟ ಸುಂದರವಾದ ಪಟ್ಟಣವಾಗಿದೆ 'ಲಂಕಾ ಪಟ್ಟಣ' ಈ ಲಂಕಾ ಪಟ್ಟಣವನ್ನು ಹಿಂದೆ ರಾಕ್ಷಸ ರಿಗಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ ರಾಕ್ಷಸರು ತಮ್ಮ ಕೆಟ್ಟ ಪ್ರವೃತ್ತಿಯಿಂದಾಗಿ ವಿಷ್ಣುವಿನ ಕೋಪಕ್ಕೆ ಗುರಿಯಾಗುತ್ತಾರೆ. ಹಾಗೂ ನಾರಾಯಣ ನೊಂದಿಗೆ ಯುದ್ದವನ್ನು ಮಾಡುತ್ತಾರೆ. ನಾರಾಯಣನಿಂದ ಸೋತು ಹೈರಾಣಾಗಿ ಪಾತಾಳಲೋಕಕ್ಕೆ ರಾಕ್ಷಸರೆಲ್ಲಾ ಓಡಿಹೋಗುತ್ತಾರೆ, ಈಗ ಅಂತಹ ಸುಂದರ ಪಟ್ಟಣವು ಖಾಲಿಯಾಗಿ ಉಳಿದಿದೆ. ಈಗ ನೀನು ಅಲ್ಲಿಗೆ ಹೋಗಿ ರಾಜನಾಗಿ ಲಂಕಾ ಪಟ್ಟಣವನ್ನು ಅಭಿವೃದ್ಧಿಪಡಿಸು ಎಂದು ಮಗನಾದ ವೈಶ್ರವಣನಿಗೆ ವಿಶ್ರವಸು ಹೇಳುತ್ತಾರೆ. ತಂದೆಯ ಸಲಹೆಯಂತೆ ಕುಬೇರನು ಸಾವಿರಾರು ಮಂದಿ ಮೇರುತರೊಂದಿಗೆ 'ಲಂಕಾ ಪಟ್ಟಣ'ಕ್ಕೆ ಹೋಗಿ ನೆಲೆಯೂರಿ ರಾಜನಾಗಿ, ಬಹಳ ಚೆನ್ನಾಗಿ ಆಡಳಿತವನ್ನು ನಡೆಸುತ್ತಾನೆ. ತನ್ನ ಪುಷ್ಪಕ ವಿಮಾನದಲ್ಲಿ ಆಗಾಗ್ಗೆ ಲೋಕವನ್ನು ಸಂಚರಿಸುತ್ತಾ ತಂದೆ-ತಾಯಿಯರನ್ನು ಬಂದು ನೋಡಿಕೊಂಡು ಹೋಗುತ್ತಿದ್ದನು. ಲಂಕಾ ನಗರದಲ್ಲಿ ರಾವಣ ರಾಜ್ಯಭಾರ ಮಾಡುವುದಕ್ಕೂ ಮುಂಚೆಯೇ ಕುಬೇರನು ರಾಜ್ಯಭಾರ ಮಾಡಿದ್ದನು
 
- ಆಶಾ ನಾಗಭೂಷಣ
–>