-->

ಎಲ್ಲರೂ ಅಳುತ್ತಿದ್ದರೆ,ದೇವರು ಮಾತ್ರ ನಗುತ್ತಿದ್ದ - a short story

 

ಅವನಿನ್ನೂ ಎರಡೂವರೆ ವರ್ಷದ ಪುಟ್ಟ ಮಗು. ಆಗಷ್ಟೇ ನಡೆಯಲು ಕಲಿತಿದ್ದ. ಮಾತು ತೊದಲು ತೊದಲು. ಪ್ರತಿದಿನವೂ ಬೆಳಗ್ಗೆ ಎದ್ದು ಅಜ್ಜನ ಜತೆ ಪೂಜೆಗೆ ಕುಳಿತುಕೊಳ್ಳುವುದು ಅಭ್ಯಾಸ. ಆಗಾಗ `ಅಜ್ಜ ನಾನು ಪೂಜೆ ಮಾಡ್ತೀನಜ್ಜ' ಅಂತ ಕೊರಳು ಕೊಂಕಿಸುತ್ತಿದ್ದ. ``ನೀನು ಇನ್ನೂ ಸಣ್ಣವನು ಮಗು. ನಾನು ಪೂಜೆ ಮಾಡೋದನ್ನು ನೋಡ್ತಾ ಇರು. ದೊಡ್ಡವನಾದ ಮೇಲೆ ಮಾಡುವಿಯಂತೆ' ಎಂದು ಹೇಳುತ್ತಿದ್ದರು ಅಜ್ಜ.*

*ಅದೊಂದು ದಿನ ಅಜ್ಜ ಏಳುವುದು ತಡವಾಗಿತ್ತು. ಅಮ್ಮನ ಕಣ್ಣು ತಪ್ಪಿಸಿ ಬಾಲಕ ದೇವರ ಮುಂದೆ ಬಂದು ಕುಳಿತು ಪೂಜೆ ಆರಂಭಿಸಿಯೇ ಬಿಟ್ಟಿದ್ದ! ಸ್ವಲ್ಪ ಹೊತ್ತಿಗೆ ಅಜ್ಜನೂ ಎದ್ದು ಸ್ನಾನ ಮಾಡಿ ದೇವರ ಕೋಣೆ ಬಳಿ ಬಂದರು. ಇಣುಕಿ ನೋಡಿದರೆ ಒಳಗೆ ಮೊಮ್ಮಗ ಪೂಜೆಯಲ್ಲಿ ತಲ್ಲೀನ! ಅವನನ್ನು ಡಿಸ್ಟರ್ಬ್ ಮಾಡುವುದು ಬೇಡ ಎಂದು ಭಾವಿಸಿದ ಅಜ್ಜ, ಬಾಗಿಲ ಎಡೆಯಿಂದ ಮೊಮ್ಮಗನ ತುಂಟಾಟಗಳನ್ನು ನೋಡುತ್ತಾ ಇದ್ದರು.*

*ಅವನು ಕೆಲವೊಂದು ಅಗರಬತ್ತಿಗಳನ್ನು ತೆಗೆದು ಅಮ್ಮ ಆಗಲೇ ಹಚ್ಚಿಟ್ಟಿದ್ದ ದೀಪದ ಮೂಲಕ ಹಚ್ಚಿಕೊಂಡು ಚೆಂದಕ್ಕೆ ಜೋಡಿಸಿದ. ಅಜ್ಜನಂತೆಯೇ  ನೀರು ಹಾಕಿಕೊಂಡ. ಹೂವನ್ನು ದೇವರಿಗೆ ಮುಡಿಸಿದ. ಎಲ್ಲ ಮುಗಿದ ಮೇಲೆ ದೇವರಲ್ಲಿ ಪ್ರಾರ್ಥನೆ ಮಾಡಲು ಶುರು ಮಾಡಿದ.*

*ಅಜ್ಜನಿಗೆ ಆಶ್ಚರ್ಯ, ಈ ಮಗು ದೇವರಲ್ಲಿ ಏನು ಕೇಳೀತು ಅಂತ. ಮಗು ತೊದಲು ನುಡಿಯಲ್ಲಿ ಪ್ರಾರ್ಥಿಸಲು ಆರಂಭ ಮಾಡಿತು.*

*``ಓ ದೇವರೇ, ನನ್ನ ಅಜ್ಜನ ಆರೋಗ್ಯವನ್ನು ಚೆನ್ನಾಗಿ ಇಟ್ಟಿರು. ಅಜ್ಜಿಯ ಕಾಲು ನೋವನ್ನು ಕಡಿಮೆ ಮಾಡು ಆಯ್ತಾ.. ಅವರಿಗೆ ಏನಾದರೂ ಆದರೆ ನಂಗೆ ಚಾಕೊಲೇಟ್ ತಂದು ಕೊಡುವವರು ಯಾರು?''* 
ಎಲ್ಲರೂ ಅಳುತ್ತಿದ್ದರೆ,ದೇವರು ಮಾತ್ರ ನಗುತ್ತಿದ್ದ

 *``ದೇವರೇ ನನ್ನ ಅಪ್ಪ ಮತ್ತು ಅಮ್ಮನನ್ನು ನೀನು ಚೆನ್ನಾಗಿ ನೋಡ್ಕೊಬೇಕು ಆಯ್ತಾ? ಇಲ್ಲಾಂದ್ರೆ ನನ್ನನ್ನು ಯಾರು ನೋಡ್ಕೊತಾರೆ? ನಂಗೆ ತಿನ್ನಲು ಕೊಡೋದು ಯಾರು? ಆಟ ಆಡಿಸೋದು ಯಾರು?'.* *``ನನ್ನ ಎಲ್ಲ ಫ್ರೆಂಡ್ಸ್ ಗೂ ಒಳ್ಳೆದು ಮಾಡ್ಬೇಕು ಆಯ್ತಾ… ಅವರಿಲ್ಲದಿದ್ದರೆ ನಾನು ಯಾರ ಜತೆ ಆಡೋದು? ಮತ್ತೊಂದು ವಿಷಯ, ನಮ್ಮ ಮನೆ ನಾಯಿ ಉಂಟಲ್ಲಾ.. ಟಾಮಿ. ಅದಕ್ಕೆ ತುಂಬ ತುಂಬ ಒಳ್ಳೆದಾಗಬೇಕು. ನಂಗೆ ಆಡ್ಲಿಕೆ ಅದು ಬೇಕು, ಕಳ್ಳರು ಬಂದರೆ ನಮಗೆ ಹೇಳಬೇಕು ಅಲ್ವಾ?''* *ಇದನ್ನೆಲ್ಲ ನೋಡ್ತಾ ಇದ್ದ ಅಜ್ಜನಿಗೆ ಪುಟ್ಟ ಮಗು ಎಷ್ಟೊಂದು ಯೋಚನೆ ಮಾಡ್ತಾ ಪ್ರಾರ್ಥನೆ ಮಾಡ್ತಾ ಇದೆಯಲ್ವಾ ಅಂತ ಅನಿಸಿತು. ನಾನ್ಯಾವತ್ತೂ ಪ್ರಾರ್ಥನೆಯಲ್ಲಿ ಇಂಥ ಮಾತುಗಳನ್ನು ಹೇಳಿರಲೇ ಇಲ್ಲ. ಈ ಮಗು ಬೇರೆಯವರಿಗಾಗಿ ಎಷ್ಟೊಂದು ಬೇಡಿಕೊಳ್ತಾ ಇದೆ ಎಂದು ಯೋಚಿಸುತ್ತಿರುವಾಗಲೇ ಕೊರಳುಬ್ಬಿತು.* *ಬಾಲಕನ ಪ್ರಾರ್ಥನೆ ಮುಂದುವರಿದಿತ್ತು: ಇನ್ನೊಂದೇ ಪ್ರಾರ್ಥನೆ ಉಂಟು ದೇವ್ರೆ. ಮೊದಲು ನೀನು ನಿನ್ನನ್ನು ಚೆನ್ನಾಗಿ ನೋಡ್ಕೊ ಆಯ್ತಾ.. ಒಂದು ವೇಳೆ ನಿನಗೆ ಏನಾದರೂ ಆಗಿ ಬಿಟ್ಟರೆ ನಮ್ಮನ್ನೆಲ್ಲಾ ಕಾಪಾಡೋದು ಯಾರು?* *-ಅಜ್ಜನಿಗೆ ಮಾತೇ ಹೊರಡಲಿಲ್ಲ. ಕಣ್ಣುಜ್ಜಿಕೊಂಡು ಅತ್ತಿತ್ತ ನೋಡಿದರೆ ಮಗುವಿನ ಅಪ್ಪ, ಅಮ್ಮ, ಇಡೀ ಮನೆಯವರು ಅಲ್ಲಿ ನಿಂತಿದ್ದರು. ಎಲ್ಲರೂ ಅಳುತ್ತಿದ್ದರು. ದೇವರು ನಗುತ್ತಿದ್ದ.
–>