ಒಬ್ಬ ಗೃಹಸ್ಥನಾದವ ಮೂರು ರೀತಿಯಲ್ಲಿ ಇರಬೇಕಂತೆ...
- ನೀರಿನಲ್ಲಿ ಇರುವ ದೋಣಿಯಂತೆ...
- ನೀರಿನಲ್ಲಿರುವ ಮೀನಿನಂತೆ ...
- ನೀರಿನಲ್ಲಿರುವ ಕಮಲದ ಪತ್ರದಂತೆ...
ದೋಣಿ ನೀರಲ್ಲಿ ತೇಲುತ್ತಾ ಸಾಗುತ್ತದೆ... ತನ್ನ ಆಶ್ರಯಕ್ಕೆ ಬರುವವರನ್ನು ನೀರಿನಲ್ಲಿ ತೇಲಿಸುತ್ತದೆ... ಮತ್ತು ದಾಟಲು ಬಾರದ ಅವರೆಲ್ಲರನ್ನೂ ಆಚೆಯ ಬದಿ ತಲುಪಿಸುತ್ತದೆ. ಅಂದರೆ ಗೃಹಸ್ಥ ತನ್ನೊಡನೆ
ತನ್ನ ಆಶ್ರಯವನ್ನ ಬಯಸಿ ಬಂದವರಿಗೆ ಆಶ್ರಯ ಕೊಟ್ಟು ಸಂಸಾರ ಸಾಗರ ದಾಟಲು ಸಹಾಯ ಮಾಡಬೇಕು.ಸಂಸಾರದಲ್ಲಿ ಮುಳುಗದಂತೆ ನೋಡಿಕೊಳ್ಳಲೂಬೇಕು.
ಇನ್ನೊಂದು ನೀರಿನೊಳಗಿನ ಮೀನಿನಂತೆ... ಮೀನು ನೀರೊಳಗೆ ಇದ್ದು ನೀರನ್ನು ಸ್ವಚ್ಛ ಮಾಡುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ... ಹಾಗೆಯೇ ಗೃಹಸ್ಥ ಸಮಾಜದಲ್ಲಿ ಇದ್ದು ಸಮಾಜದ ಕಶ್ಮಲವನ್ನು ತೊಳೆಯುತ್ತಾ ಸಮಾಜವನ್ನು ಶುದ್ಧವಾಗಿಸಬೇಕು.ತಾನೂ ಬದುಕಬೇಕು.
ಕೊನೆಯದಾಗಿ ಗೃಹಸ್ಥನು ಕಮಲದ ಪತ್ರದಂತಿರಬೇಕು... ಅಂದರೆ ನೀರಲ್ಲಿ ಇದ್ದೂ ನೀರನ್ನು ಅಂಟಿಸಿಕೊಳ್ಳದಂತಿರಬೇಕು. ಗೃಹಸ್ಥ ಸಂಬಂಧಗಳನ್ನು ನಿಭಾಯಿಸುತ್ತಾ ಇದ್ದರೂ ಸಂಬಂಧಗಳಿಗೆ ಅತಿಯಾಗಿ ಅಂಟಿಕೊಳ್ಳದಂತೆ ಬಾಳಿ ಬದುಕಬೇಕಂತೆ.
ಈ ರೀತಿಯಾಗಿ ಬಾಳಿ ಬದುಕಲು ಕಲಿಯೋಣ. ಧನ್ಯೋ ಗೃಹಸ್ಥಾಶ್ರಮಃ ಅಲ್ಲವೇ?!?.
ಮೂರು ಸಂದರ್ಭಗಳಲ್ಲಿ ನಾವು ಮಾತನಾಡಬಾರದಂತೆ...
೧. ಸ್ನಾನ ಮಾಡುವಾಗ
೨. ಊಟ ಮಾಡುವಾಗ
೩. ಯಜ್ಞ ಯಾಗ ಮಾಡುವಾಗ
ಸ್ನಾನ ಮಾಡುವಾಗ ಮಾತನಾಡಿದರೆ ವರುಣದೇವ ನಮ್ಮ ಕಾಂತಿಯನ್ನು ಅಪಹರಿಸುತ್ತಾನಂತೆ...
ಊಟ ಮಾಡುವಾಗ ಮಾತನಾಡಿದರೆ ಯಮದೇವ ನಮ್ಮ ಆಯುಸ್ಸು ಅಪಹರಿಸುತ್ತಾನಂತೆ....
ಯಾಗ ಯಜ್ಞ ಮಾಡುವಾಗ ಮಾತನಾಡಿದರೆ ಅಗ್ನಿದೇವ ನಮ್ಮ ಸಂಪತ್ತನ್ನು ಅಪಹರಿಸುತ್ತಾನಂತೆ..
ಇಲ್ಲಿ ಯಾಕೆ ಇಂತಹಾ ನಿಯಮ ಹಾಕಿದ್ದಾರೆ.. ಈ ಮೂರು ಕ್ರಿಯೆಗಳೂ ಕೇವಲ ಕ್ರಿಯೆ ಮಾತ್ರವಲ್ಲ...
ಸ್ನಾನ ಅನ್ನೋದು ನಮ್ಮೊಳಗಿನ ದೇವನ ಅಭಿಷೇಕ.. ಹಾಗಾಗಿ ಅಲ್ಲಿ ತಾದಾತ್ಮ್ಯತೆ ಬೇಕು...
ಊಟ ಅನ್ನೋದು ಒಂದು ಯಾಗ
ಹಾಗಾಗಿ ಅಲ್ಲಿಯೂ ತಾದಾತ್ಮ್ಯತೆ ಬೇಕು .
ಇನ್ನು ಯಾಗ ಅನ್ನೋದರಲ್ಲಿ ಹಲವಾರು ಅನುಷ್ಠಾನಗಳಿವೆ.. ಅಲ್ಲೂ ತಾದಾತ್ಮ್ಯತೆ ಬೇಕು. ಮಾತುಗಳು ನಮ್ಮ ಈ ಏಕಾಗ್ರತೆಯನ್ನ ಭಂಗ ಗೊಳಿಸುವ ಕಾರಣ ಇಲ್ಲಿ ಮಾತಿಗೆ ನಿರ್ಬಂಧ ಹಾಕಲಾಗಿರಬೇಕು.
Subscribe , Follow on
Facebook Instagram YouTube Twitter WhatsApp