-->

ಶಿಕ್ಷಕರು - ನಿನ್ನೆಗೂ ಇಂದಿಗೂ ಎಂದೆಂದಿಗೂ...

ತಾಯಿ ಜನ್ಮ ನೀಡಿದರೆ, ಗುರು ಬದುಕನ್ನು ರೂಪಿಸುತ್ತಾನೆ. ತಂದೆ ಬೆರಳಿಡಿದು ನಡೆಯಲು ಕಲಿಸಿದರೆ, ಗುರು ಕೈಹಿಡಿದು ಬದುಕಲು ಕಲಿಸುತ್ತಾನೆ. ಈ ನುಡಿಗಳು ಮಾನವ ಜೀವನದ ಅತ್ಯುನ್ನತ ಮತ್ತು ಪವಿತ್ರವಾದ ಎರಡು ಶಕ್ತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಬಿಂಬಿಸುತ್ತವೆ.

ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೊದಲ ಪ್ರೇರಣೆ. ಅವಳು ತನ್ನ ರಕ್ತ-ಮಾಂಸಗಳನ್ನು ಹಂಚಿ ನಮಗೆ ಈ ಸುಂದರ ಸೃಷ್ಟಿಯನ್ನು ನೋಡುವ ಭಾಗ್ಯ ಕರುಣಿಸುತ್ತಾಳೆ. ಕೇವಲ ಜನ್ಮ ನೀಡುವುದಷ್ಟೇ ಅಲ್ಲದೆ, ತನ್ನ ಮಮತೆಯ ಬೆರಳಿಡಿದು ನಮಗೆ ನೆಲದ ಮೇಲೆ ಮೊದಲ ಹೆಜ್ಜೆಯನ್ನಿಡಲು ಕಲಿಸುತ್ತಾಳೆ. ತಾಯಿಯ ಮಡಿಲು ನಮ್ಮ ಮೊದಲ ಪಾಠಶಾಲೆ, ಅವಳ ಪ್ರೀತಿಯ ನುಡಿಗಳೇ ನಮ್ಮ ಮೊದಲ ಸಂಸ್ಕಾರ. ಆದರೆ ಕೇವಲ ಹೆಜ್ಜೆಯನ್ನಿಡುವುದರಿಂದ ಜೀವನ ಪೂರ್ಣವಾಗುವುದಿಲ್ಲ. ಆ ಹೆಜ್ಜೆಗಳು ಸಾಗಬೇಕಾದ ಸನ್ಮಾರ್ಗ ಯಾವುದು ಎಂಬುದನ್ನು ತೋರಿಸುವವನೇ ಗುರು.

ಜನ್ಮ ಪಡೆದ ಜೀವಕ್ಕೆ ಅರಿವಿನ ಜ್ಞಾನದೀಪವನ್ನು ಹಚ್ಚಿ, ಅಜ್ಞಾನದ ಕತ್ತಲನ್ನು ದೂರ ಮಾಡುವವನು ಗುರು. ಬದುಕಿನ ಏರಿಳಿತಗಳಲ್ಲಿ, ಕಷ್ಟ-ಸುಖಗಳ ಬಿರುಗಾಳಿಯಲ್ಲಿ ಧೃತಿಗೆಡದೆ ಹೇಗೆ ಬದುಕಬೇಕೆಂದು ಗುರು ಕೈಹಿಡಿದು ಮುನ್ನಡೆಸುತ್ತಾನೆ. ತಾಯಿ ನಮಗೆ ಭೌತಿಕವಾದ ಶರೀರವನ್ನು ನೀಡಿದರೆ, ಗುರು ಆ ಶರೀರಕ್ಕೊಂದು ದಿವ್ಯವಾದ ವ್ಯಕ್ತಿತ್ವವನ್ನು ಹಾಗೂ ಬದುಕಿಗೊಂದು ಉದಾತ್ತ ಧ್ಯೇಯವನ್ನು ರೂಪಿಸಿಕೊಡುತ್ತಾನೆ.

"ಗುರುವಿಲ್ಲದ ವಿದ್ಯೆಯು ಶಿರವಿಲ್ಲದ ಕಬಂಧದಂತೆ" ಎಂಬುದು ಮಹಾನ್ ಸಂತ, ದಾರ್ಶನಿಕ ಕನಕದಾಸರ ಅಮೂಲ್ಯ ಸಂದೇಶ. ಕೇವಲ ಪುಸ್ತಕದ ಬದನೆಕಾಯಿಯಾಗುವ ಜ್ಞಾನಕ್ಕೆ ಆತ್ಮವಿಶ್ವಾಸ ಮತ್ತು ಸರಿಯಾದ ಮಾರ್ಗದರ್ಶನ ಸಿಗದೇ ಹೋದರೆ ಆ ವಿದ್ಯೆ ದಾರಿಯಿಲ್ಲದ ದೋಣಿಯಂತಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಎಷ್ಟೇ ಪದವಿಗಳನ್ನು ಪಡೆದರೂ, ನೈತಿಕತೆ ಮತ್ತು ವಿವೇಕವನ್ನು ಕಲಿಸಲು ನಮಗೊಬ್ಬ ಮಾರ್ಗದರ್ಶಕನ ಅಗತ್ಯವಿದೆ. ಗುರುವಿನ ಚರಣಗಳಿಗೆ ಶರಣಾದಾಗ ಮಾತ್ರ ವಿದ್ಯೆಗೆ ಪೂರ್ಣತೆ ಸಿಗುತ್ತದೆ, ಬದುಕು ಸಾರ್ಥಕವಾಗುತ್ತದೆ. ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಗುರುವನ್ನು ಗೌರವಿಸೋಣ, ನಮ್ಮ ಜ್ಞಾನವನ್ನು ಸಮಾಜದ ಹಿತಕ್ಕೆ ಬಳಸೋಣ.

ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳಿದಂತೆ "ಉತ್ತಮ ಪುಸ್ತಕಗಳು ನೂರು ಶಿಕ್ಷಕರಿಗೆ ಸಮಾನವಾಗಿರಬಹುದು, ಆದರೆ ಒಬ್ಬ ಉತ್ತಮ ಶಿಕ್ಷಕ ಸಾವಿರ ಪುಸ್ತಕಗಳಿಗೆ ಸಮಾನ." ಈ ನುಡಿಮುತ್ತು ಕೇವಲ ವಾಕ್ಯವಲ್ಲ, ಅದು ಗುರುವಿನ ಸರ್ವೋಚ್ಚ ಸ್ಥಾನಕ್ಕೆ ಹಿಡಿದ ಕೈಗನ್ನಡಿ, ಜ್ಞಾನದ ವಿಸ್ತಾರವನ್ನು ಅಳೆಯುವ ಮಾನದಂಡ. ಪುಸ್ತಕಗಳು ಮಾಹಿತಿಯನ್ನು ನೀಡಿದರೆ, ಶಿಕ್ಷಕನು ಆ ಮಾಹಿತಿಯನ್ನು ಜ್ಞಾನವನ್ನಾಗಿ, ಜ್ಞಾನವನ್ನು ಬದುಕಿನ ಮೌಲ್ಯವನ್ನಾಗಿ ಪರಿವರ್ತಿಸುತ್ತಾನೆ. ಸೋತು ಕುಳಿತಾಗ ಧೃತಿಗೆಡದಂತೆ ಹೆಗಲ ಮೇಲೆ ಕೈಯಿಟ್ಟು, ನಡುಗುವ ಕೈಗಳಿಗೆ ಭರವಸೆ ತುಂಬುವವನೇ ನಿಜವಾದ ಗುರು. ಕಲ್ಲು ಬಂಡೆಯಂತಿರುವ ಮಗುವಿನ ಮನಸ್ಸನ್ನು ಕೆತ್ತಿ ಅದಕ್ಕೊಂದು ಸುಂದರ ಮೂರ್ತಿಯ ರೂಪ ಕೊಡುವ ಶಿಲ್ಪಿಯೇ ಶಿಕ್ಷಕ.

ಅಕ್ಷರ ಲೋಕದ ಸಾವಿರಾರು ಗ್ರಂಥಗಳ ಸಾರವೆಲ್ಲವೂ ಒಬ್ಬ ಆದರ್ಶ ಶಿಕ್ಷಕನ ಪ್ರೇರಣಾದಾಯಕ ಮಾತುಗಳಲ್ಲಿ ಅಡಗಿರುತ್ತದೆ. ಅದಕ್ಕಾಗಿಯೇ ನಮ್ಮ ಸಂಸ್ಕೃತಿಯಲ್ಲಿ "ಆಚಾರ್ಯ ದೇವೋ ಭವ" ಎಂದು ಗುರುವಿಗೆ ದೈವತ್ವದ ಸ್ಥಾನ ನೀಡಲಾಗಿದೆ.

ಶಿಕ್ಷಕರು - ನಿನ್ನೆಗೂ ಇಂದಿಗೂ ಎಂದೆಂದಿಗೂ...


ಈ ದಿನ ಶಿಕ್ಷಕರ ದಿನಾಚರಣೆ, ಇದು ಕೇವಲ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿದಿನವೂ ಶಿಕ್ಷಕರಿಗೆ ನಮಿಸೋಣ, ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗೋಣ. ಇವತ್ತು ನಾವು ಯಾವುದೇ ಒಂದು ಉನ್ನತ ಮಟ್ಟದ ಸ್ಥಾನದಲ್ಲಿ ಇದ್ದೇವೆ ಎಂದರೆ ಅದಕ್ಕೆ ಎರಡನೇ ತಾಯಿಯಾಗಿರುವ ಗುರುವೇ ಮೂಲ. ಇಂದು ನಮಗೆ ಸ್ವಲ್ಪ ಬಿಡುವು ಇದ್ದರೆ, ನಮಗೆ ಅಕ್ಷರ ಜ್ಞಾನ ನೀಡಿದ ಪ್ರತಿಯೊಬ್ಬ ಗುರುವನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ.

ಕಾಲ ಬದಲಾಗಬಹುದು, ಪಠ್ಯ ಬದಲಾಗಬಹುದು, ಕಪ್ಪು ಹಲಗೆಯು ಸ್ಮಾರ್ಟ್ ಬೋರ್ಡ್ ಆಗಬಹುದು, ಶಾಲೆಯ ಕೊಠಡಿಗಳು ಬದಲಾಗಬಹುದು, ಶಾಲಾ ಶಿಕ್ಷಕರು ಬದಲಾಗಬಹುದು, ಆದರೆ ಗುರು-ಶಿಷ್ಯರ ಈ ಪವಿತ್ರ ಸಂಬಂಧ ನಿನ್ನೆಗೂ ಇಂದಿಗೂ ಎಂದೆಂದಿಗೂ - ಅಮರ.

ಬದುಕಿನ ಕತ್ತಲೆಯನ್ನು ಓಡಿಸಿ ಸುಜ್ಞಾನದ ಜ್ಯೋತಿಯನ್ನು ಬೆಳಗುವ ಪ್ರತಿಯೊಬ್ಬ ಶಿಕ್ಷಕನಿಗೂ ಕೋಟಿ ಕೋಟಿ ನಮನಗಳು.

ಲೇಖಕರು  - ಶ್ರೀ ಮುತ್ತು ಯ. ವಡ್ಡರ , ಶಿಕ್ಷಕರು, HPS ಹಿರೇಮಳಗವಿ , ಬಾಗಲಕೋಟೆ - 9845568484

ಎರಡನೇ ತಾಯಿ - ಗುರುದೇವ

ಅಕ್ಷರ ಕಲಿಸಿ ಬದುಕು ತೋರಿಸಿದವರು
ಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರು
ಪರ ಊರಿನಿಂದ ಬಂದು ಬೋಧಿಸಿದವರು
ಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು

ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆ
ಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆ
ಪೂಜಿಸಿ ಬಳಪ ಹಿಡಿದ ಭಗವಂತನಿಗೆ
ಪ್ರೀತಿ-ಮಮತೆಯ ಎರಡನೇ ತಾಯಿಗೆ

ತಮ್ಮ ಮಕ್ಕಳಂತೆ ಪ್ರೀತಿಸಿ ಮುದ್ದಿಸಿದರು
ಏನೂ ಇಲ್ಲದ ಮೆದುಳಿಗೆ ಜ್ಞಾನ ತುಂಬಿದರು
ನನಗಿಂತ ಚೂರು ಹೆಚ್ಚು ಬೆಳೆಯಬೇಕು ಎಂದವರು
ಮಕ್ಕಳ ಪಾಲಿಗೆ ಬೆಲೆ ಕಟ್ಟಲಾಗದ ಭಗವಂತನಾದರು



ಸೋತಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು
ಗೆದ್ದಾಗ ಶಿಷ್ಯರಿಗಿಂತ ಮುಂಚೆ ಖುಷಿ ಪಟ್ಟವರು
ಆರಕ್ಕೇಳದೆ ಮೂರಕ್ಕಿಳಿಯದೆ ಬದುಕು ಸಾಗಿಸಿದವರು
ಜೀವನಪೂರ್ತಿ ಸರಳ ಜೀವನ ನಡೆಸಿದವರು

ಗುರುದೇವ ನೀವು ಜೊತೆಗಿದ್ದರೆ ಜೀವನ ಸಾರ್ಥಕವಯ್ಯ 
ಕಣ್ಣಿಗೆ ಕಾಣುವ ನಿಜ ದೇವರು ನೀವಯ್ಯ
ಅಕ್ಷರ ಕ್ರಾಂತಿಗೆ ರೂವಾರಿ ನೀವಯ್ಯ
ನೀವಿಲ್ಲದೆ ಮನೆ ಮನವು ಶೂನ್ಯವಯ್ಯ

 
ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484   

ರಕ್ತ ಸಂಬಂಧ ಮೀರಿದ ರಕ್ಷಾಬಂಧನ

ಸುಮಾರು 6,000 ವರ್ಷಗಳ ಇತಿಹಾಸವಿರುವ ಅತಿ ಪ್ರಮುಖವಾದ ಹಬ್ಬ ರಕ್ಷಾಬಂಧನ. ರಾಖಿ ಎಂದರೆ ಕೇವಲ ಸಹೋದರ ಸಹೋದರಿಯರಿಗೆ ಮಾತ್ರ ಸೀಮಿತವಾದದ್ದು ಅಲ್ಲ.ಮೊದಲಿಗೆ ಈ ಹಬ್ಬದಲ್ಲಿ ಗುರುಗಳು ತಮ್ಮ ಶಿಷ್ಯರಿಗೆ  ರಾಖಿ ಕಟ್ಟಿ ದೀರ್ಘಕಾಲದ ಆಯುಷ್ಯ ತಮ್ಮ ಕೈಯಲ್ಲಿ ಕಲಿತಿರುವ ಶಿಷ್ಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದರು. 1905 ರಲ್ಲಿ ಬ್ರಿಟಿಷರು  ಬಂಗಾಳವನ್ನು ವಿಭಜಿಸಿದಾಗ ಹಿಂದೂ ಮುಸ್ಲಿಮರಲ್ಲಿ ಏಕತೆ ತರಲು ಶ್ರೀ ರವೀಂದ್ರನಾಥ ಟ್ಯಾಗೋರ್ ಅವರು ಪರಸ್ಪರ ಪ್ರತಿಯೊಬ್ಬರು ರಾಖಿ ಕಟ್ಟಿಕೊಳ್ಳೋಣ ಎಂಬ ಕರೆ ನೀಡಿದರು. ಅಂದಿನಿಂದ ಇದು ಏಕತೆಯ ಹಬ್ಬ ಕೂಡ ಆಯಿತು.
       
ರಾಖಿ ಯಾವುದ್ದಾದರೇನು, ಅದನ್ನು ಕಟ್ಟುವ ಮನಸ್ಸು ಬಹಳ ನಿಷ್ಕಲ್ಮಶವಾಗಿರಬೇಕು. ರಾಖಿ ಚಿನ್ನದ್ದಾಗಲಿ ಅಥವಾ ನೂಲಿನ ದಾರದ್ದಾಗಲಿ ಅದನ್ನು ಕಟ್ಟುವ ಮತ್ತು ಕಟ್ಟಿಸಿಕೊಳ್ಳುವ ಮನಸ್ಸು ಬಂಗಾರವಾಗಿರಬೇಕು ಅಷ್ಟೇ. 2023 ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 23 ಅಡಿ ಉದ್ದದ ಬೃಹತ್ ರಾಖಿಯನ್ನು ತಯಾರಿಸಿದ್ದು, ಅದು ವಿಶ್ವದ ಅತಿ ದೊಡ್ಡ ರಾಖಿಯಾಗಿ ಪ್ರಸಿದ್ಧಿಯಾಯಿತು. ಪುರಾಣದ ಪ್ರಕಾರ ದ್ರೌಪದಿ ಕೃಷ್ಣನಿಗೆ ಸೀರೆಯ ತುಂಡನ್ನು ಕಟ್ಟಿದಾಗ ಕೃಷ್ಣನು ಅವಳಿಗೆ ಅಕ್ಷಯ ವಸ್ತ್ರ ನೀಡಿ ವಸ್ತ್ರಪಹರಣದ ಸಮಯದಲ್ಲಿ ರಕ್ಷಿಸಿದನು, ಇದು ಶ್ರೀಕೃಷ್ಣನು ದ್ರೌಪದಿಗೆ ನೀಡಿದ ಮೊದಲ ಉಡುಗೊರೆಯಾಗಿದೆ. ಅಂದಿನಿಂದ ಇಂದಿನವರೆಗೂ ರಾಖಿ ಕಟ್ಟಿದ ಸಹೋದರಿಗೆ ಸಹೋದರನು ತನ್ನ ಕೈಲಾದ ಏನಾದರೂ ಒಂದು ಉಡುಗೊರೆ ನೀಡಿ, ಉಸಿರಿನ ಕೊನೆಯ ಕ್ಷಣದವರೆಗೂ ನಿನಗೆ ನಾನು ರಕ್ಷಕನಾಗಿ ಸದಾ ಇರುತ್ತೇನೆ ಎಂಬ ಧೈರ್ಯ ನೀಡುವುದೇ ರಾಖಿ ಹಬ್ಬದ ಪ್ರಮುಖ ಅಂಶವಾಗಿದೆ. ಹಳದಿ ಬಣ್ಣದ ರಾಖಿಯು ಸಮೃದ್ಧಿ ಮತ್ತು ಜ್ಞಾನದ ಸಂಕೇತವಾದರೆ, ಕೆಂಪು ಬಣ್ಣದ ರಾಖಿಯು ಶಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಬಿಳಿ ಬಣ್ಣದ ರಾಖಿಯು ಶಾಂತಿ ಮತ್ತು ಪವಿತ್ರತೆಯ ಸಂಕೇತವಾದರೆ, ನೀಲಿ ಬಣ್ಣದ ರಾಖಿಯು ತಾಳ್ಮೆಯ ಸಂಕೇತವಾಗಿದೆ.
    
ಇತ್ತೀಚಿನ ದಿನಮಾನಗಳಲ್ಲಿ ಬೀಜ ಇರುವ ರಾಖಿ ಬಹಳ ಹೆಚ್ಚಾಗಿದೆ ಕಾರಣ ರಾಖಿ ಹಬ್ಬದ ನಂತರ ಆ ರಾಖಿಯನ್ನು ಮಣ್ಣಿನಲ್ಲಿ ಹಾಕಿದರೆ ಅದು ಗಿಡವಾಗಿ ಬೆಳೆಯುತ್ತದೆ. ಆ ಗಿಡ ಅಣ್ಣ ತಂಗಿಯರ ಬಾಂಧವ್ಯವನ್ನು ಸದಾ ಕಾಲ ನೆನಪು ಉಳಿಯುವಂತೆ ಮಾಡುತ್ತದೆ. ರಾಖಿ ಕಟ್ಟುವುದು ಒಂದು ನಿಮಿಷದ ಕೆಲಸ ಆದರೆ ಆ ದಾರದಲ್ಲಿ ನಂಬಿಕೆ ಇರುವುದು ಜೀವನಪೂರ್ತಿ. ಸಹೋದರಿಯರಿಗೆ ಸಹೋದರ ಒಬ್ಬ ಇದ್ದರೆ ಸಾಕು ಅದು ನೂರು ಆನೆಯ ಬಲಕ್ಕೆ ಸಮ ಎಂದು ಸಹೋದರಿಯರು ನಂಬಿರುತ್ತಾರೆ. ರಾಖಿ ಕಟ್ಟುವಾಗ ಮೂರು ಗಂಟನ್ನು ಹಾಕಲಾಗುತ್ತದೆ ಅದರ ಅರ್ಥ ಬ್ರಹ್ಮ ವಿಷ್ಣು ಮಹೇಶ್ವರ ಅಥವಾ ಮನಸಾ ವಾಚಾ ಕರ್ಮಣಾ ಶುದ್ದಿಯಿಂದ ರಕ್ಷಿಸುತ್ತೇನೆ ಎಂಬುದರ ಸಂಕೇತವಾಗಿದೆ.
    
ರಾಖಿ ಕಟ್ಟುವುದರ ಹಿಂದೆ ಸ್ವಲ್ಪ ವಿಜ್ಞಾನವು ಅಡಗಿದೆ. ಕೈಯಲ್ಲಿಯ ಮಣಿಕಟ್ಟಿನ ಮೇಲೆ ರಾಖಿ ಕಟ್ಟುವುದರಿಂದ ಆಕ್ಯುಪ್ರೆಶರ್ ಪಾಯಿಂಟ್ ಒತ್ತಡಕ್ಕೂಳಗಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಒಂದು ಅರ್ಥದಲ್ಲಿ ಆರೋಗ್ಯಕ್ಕೂ ಕೂಡ ರಾಖಿ ಬಹಳ ಉಪಯೋಗವಾಗುತ್ತದೆ ಎಂಬುದು ಮೇಲಿನ ಅಂಶದಿಂದ ತಿಳಿದು ಬರುತ್ತದೆ.
    

Rakhi , festival beyond blood relations

ನಾವು ಆಚರಣೆ ಮಾಡುವ ಹಲವಾರು ಹಬ್ಬಗಳಲ್ಲಿ ಈ ಹಬ್ಬವು ಒಂದು ವಿಶೇಷವಾದ ಮಮತೆ ಪ್ರೀತಿ ಕರುಣೆ ಎಲ್ಲವನ್ನ ತೋರ್ಪಡಿಸುವ ಹಬ್ಬವಾಗಿದೆ. ಈ ರಾಖಿ ಹಬ್ಬಕ್ಕಾಗಿ ಎಷ್ಟೋ ಜನ ಸಹೋದರಿಯರು  ತುದಿಗಾಲಿನಲ್ಲಿ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಸಹೋದರರು ಕೂಡ ಹಾಗೆಯೇ ರಕ್ಷಾಬಂಧನಕ್ಕೆ ಸಹೋದರಿ ನಮ್ಮ ತವರು ಮನೆಗೆ ಬರುತ್ತಾಳೆ,ರಾಖಿಯನ್ನು ಕಟ್ಟುತ್ತಾಳೆ ಅವಳಿಗೆ ಏನಾದರೂ ಒಂದು ಉಡುಗೊರೆ ಕೊಡಲೇಬೇಕು ಎಂಬ ಕಾತುರದಿಂದ ಸಹೋದರಿಯ ದಾರಿಗಾಗಿ ಕಾಯುತ್ತಿರುತ್ತಾರೆ. ಆ ಕಾಯುವ ಕ್ಷಣದಲ್ಲಿ ಪ್ರೀತಿ ಮಮತೆ ಬೆಟ್ಟದಷ್ಟು ಹೆಚ್ಚಾಗಿರುತ್ತದೆ.ರಾಖಿ ಕಟ್ಟಲು ರಕ್ತ ಸಂಬಂಧಿಕರೇ ಬೇಕಾಗಿಲ್ಲ, ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳುವ ಯಾವುದೇ ವ್ಯಕ್ತಿ ಆದರೂ ಕೂಡ ರಾಖಿ ಕಟ್ಟಬಹುದು, ಕಟ್ಟಿಸಿಕೊಳ್ಳಬಹುದು. ಈ ಪವಿತ್ರ ರಾಖಿ ಹಬ್ಬದ  ಸಂತಸದ ಕ್ಷಣವನ್ನು ನಮ್ಮ ನಮ್ಮ ಸಹೋದರ ಸಹೋದರಿಯರೊಂದಿಗೆ ಕಳೆಯೋಣ. ಯಾವುದೋ ಚಿಕ್ಕ ವಿಷಯಕ್ಕೆ ಒಂದು ವೇಳೆ ಮಾತು ಬಿಟ್ಟಿದ್ದರೆ ಈ ದಿನ ಸ್ವಾಭಿಮಾನವನ್ನು ಬಿಟ್ಟು ಸಂಬಂಧಕ್ಕೆ ಬೆಲೆಕೊಟ್ಟು  ಅಣ್ಣ- ತಂಗಿಯರ ಹಾಗೂ ಅಕ್ಕ -ತಮ್ಮರ  ಸಂಬಂಧಕ್ಕೆ ಬೆಲೆ ಕೊಡೋಣ.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484   

ಸಾಧಿಸುವ ಕನಸಿಗೆ ತಾಯಿಯೇ ಸ್ಫೂರ್ತಿ

ಕನಸುಗಳು ಕಣ್ಣುಗಳಿಗೆ ಮಾತ್ರ ಸೀಮಿತವಲ್ಲ. ಅವು ನಮ್ಮ ಬದುಕಿನ ದಾರಿದೀಪಗಳು. ಆ ದಾರಿದೀಪಕ್ಕೆ ಪ್ರೀತಿಯ ತೈಲವೆರೆದು ಭರವಸೆಯ ಜ್ಯೋತಿ ಬೆಳಗುವ ಪ್ರಥಮ ಗುರು ಪ್ರತ್ಯಕ್ಷ ದೈವ ತಾಯಿ. ಪ್ರತಿಯೊಬ್ಬ ಸಾಧಕನ ಯಶೋಗಾಥೆಯ ಹಿಂದೆಯೂ ತಾಯಿಯ ನಿರಂತರ ತ್ಯಾಗ ಮತ್ತು ಮೌನ ಪ್ರಾರ್ಥನೆಯ ಶಕ್ತಿಯಿರುತ್ತದೆ. ನಮ್ಮ ಸಾಧನೆಯ ಶಿಖರ ಎಷ್ಟೇ ಎತ್ತರದ್ದೇ ಇರಲಿ ಅದರ ಭದ್ರವಾದ ಬುನಾದಿ ತಾಯಿಯ ಪ್ರೀತಿ ಮತ್ತು ಸ್ಫೂರ್ತಿ. ನಮ್ಮ ಕನಸುಗಳು ನನಸಾದಾಗ ಸಿಗುವ ಕೀರ್ತಿಗಿಂತ ಅದನ್ನು ಕಂಡು ತಾಯಿಯ ಕಣ್ಣುಗಳಲ್ಲಿ ಮೂಡುವ ಆನಂದಬಾಷ್ಪವೇ ನಮ್ಮ ಬದುಕಿನ ಅತ್ಯಂತ ಶ್ರೇಷ್ಠ ಪ್ರಶಸ್ತಿ. ತಾಯಿಯೇ ನಮ್ಮ ಬದುಕಿನ ಶಾಶ್ವತ ಪ್ರೇರಣೆ, ಸಾಧನೆಯ ತೇರಿಗೆ ಚಾಲಕಶಕ್ತಿ.

ತಾಯಿಯಿಂದ ಪ್ರೇರಣೆ ಪಡೆದು ಸಾಧಕರಾದ ವ್ಯಕ್ತಿಗಳ ಪರಿಚಯ ಹೇಳುವುದಾದರೆ, ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕಾದರೆ ತಾಯಿಯ ಪ್ರೋತ್ಸಾಹವೇ ಮುಖ್ಯ ಅಡಿಪಾಯ. ತಾಯಿಯ ನಿಸ್ವಾರ್ಥ ಪ್ರೇರಣೆಯು ಸಾಮಾನ್ಯ ಬಾಲಕರನ್ನು ಜಗತ್ತು ನೆನೆಯುವಂತಹ ಅಸಾಧಾರಣ ಸಾಧಕರನ್ನಾಗಿ ಮಾಡುತ್ತದೆ. ಅಂತಹ ಸಾಧಕರ ಬಗ್ಗೆ ಕೆಲವು ಉದಾಹರಣೆಗಳು ನೋಡುವುದಾದರೆ ತಾಯಿಯ ಮಡಿಲಲ್ಲೇ ಬೆಳೆದ ವಿಶ್ವಗುರು ಸ್ವಾಮಿ ವಿವೇಕಾನಂದರು. ಜಗತ್ತನ್ನು ಬೆಳಗುವ ದೀಪಕ್ಕೆ ಮೊದಲು ತಾಯಿಯ ಮಡಿಲೇ ಎಣ್ಣೆ. ಸ್ವಾಮಿ ವಿವೇಕಾನಂದರು ಎಂದರೆ ಕೇವಲ ಒಬ್ಬ ಸನ್ಯಾಸಿಯಲ್ಲ, ಅವರು ಭಾರತದ ಆತ್ಮದ ಘೋಷಣೆ, ಯುವಕರ ಪ್ರೇರಣೆಯ ಜ್ವಾಲೆ, ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ ಶ್ರೀ ವಿವೇಕಾನಂದರು. ಆ ಮಹಾನ್ ವ್ಯಕ್ತಿತ್ವದ ಅಡಿಪಾಯಕ್ಕೆ ಮೊದಲ ಇಟ್ಟಿಗೆ ಇಟ್ಟವರು ಯಾರು ಅಂದರೆ ತಾಯಿ ಭುವನೇಶ್ವರಿದೇವಿ. ಚಿಕ್ಕಂದಿನಿಂದಲೂ ನರೇಂದ್ರನ ಕಿವಿಗೆ ರಾಮಾಯಣದ ಧೈರ್ಯ, ಮಹಾಭಾರತದ ನೀತಿ, ಪುರಾಣಗಳ ಕಥೆಗಳನ್ನು ಹೇಳಿ ಹೇಳಿ ಆಧ್ಯಾತ್ಮದ ಬೀಜವನ್ನು ತಾಯಿ ಬಿತ್ತಿದರು. ಮಗನ ಕಣ್ಣಲ್ಲಿ ಜಗತ್ತನ್ನು ಬದಲಿಸುವ ಕನಸು ಕಂಡಾಗ, "ನನ್ನ ಮಗ ನರೇಂದ್ರ ಜಗತ್ತನ್ನೇ ಬೆಳಗುತ್ತಾನೆ" ಎಂದು ಹೃದಯ ತುಂಬಿ ನಂಬಿದರು. ತಾಯಿಯ ಆಶೀರ್ವಾದ ಎಂದರೆ ಅದು ಬರೀ ಆಶೀರ್ವಾದವಲ್ಲ, ಅದು ಮಂತ್ರ. ಆ ಮಂತ್ರವೇ ನರೇಂದ್ರನನ್ನು ವಿವೇಕಾನಂದರನ್ನಾಗಿ ಮಾಡಿತು. ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ "ಸಹೋದರ ಸಹೋದರಿಯರೇ" ಎಂದು ಅವರು ಕೂಗಿದಾಗ ಅದರಲ್ಲಿ ಭುವನೇಶ್ವರಿದೇವಿಯ ಲಾಲನೆಯ ಸಿಹಿ ಇತ್ತು. ತಾಯಿ ಕೊಟ್ಟ ಕಥೆಗಳು ಅವರಿಗೆ ಶಕ್ತಿಯಾದವು. ತಾಯಿ ತುಂಬಿದ ನಂಬಿಕೆ ಅವರಿಗೆ ಧೈರ್ಯವಾಯಿತು. ತಾಯಿ ಹಚ್ಚಿದ ಆ ದೀಪವೇ ಇಂದು ಇಡೀ ಜಗತ್ತನ್ನು ಬೆಳಗುತ್ತಿದೆ.

Mother is the inspiration to acheivements


ರಾಮೇಶ್ವರದ ಸಮುದ್ರದ ಅಲೆಗಳ ನಡುವೆ ಬಡತನದ ಅಲೆಯನ್ನು ದಾಟಿ ಬೆಳೆದ ಹೆಸರೇ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ. ಅವರನ್ನು "ಮಿಸೈಲ್ ಮ್ಯಾನ್", "ಜನರ ರಾಷ್ಟ್ರಪತಿ" ಎಂದು ಇಡೀ ಜಗತ್ತು ಕೊಂಡಾಡಿದರೆ ಆ ಕೀರ್ತಿಯ ಬುನಾದಿಯಲ್ಲಿ ಇದ್ದದ್ದು ಒಬ್ಬ ತಾಯಿಯ ಕೈಯ ಊಟ ಮತ್ತು ಆಶೀರ್ವಾದ. ಅವರ ತಾಯಿ ಆಶಿಯಮ್ಮ ಅವರಿಗೆ ಶ್ರೀಮಂತಿಕೆ ಇರಲಿಲ್ಲ, ಆದರೆ ಕನಸಿಗೆ ಬೆಲೆ ಕೊಡುವ ಶ್ರೀಮಂತ ಮನಸ್ಸಿತ್ತು. ಮಗ ತಡರಾತ್ರಿ ಓದಿ ಮನೆಗೆ ಬಂದರೂ, "ಹಸಿವಾಗಿದೆಯಾ ನನ್ನ ಕಂದ" ಎಂದು ಪ್ರೀತಿಯಿಂದ ಊಟ ಬಡಿಸುತ್ತಿದ್ದರು. "ಮಗನೇ ಪ್ರಾಮಾಣಿಕವಾಗಿ ದುಡಿ, ದೊಡ್ಡ ಕನಸು ಕಾಣು" ಎಂಬ ಈ ಎರಡು ಮಾತುಗಳೇ ಕಲಾಂರಿಗೆ ಗೀತೋಪದೇಶವಾದವು. ಮಗ ವಿಜ್ಞಾನಿಯಾಗುವ ಕನಸು ಹೇಳಿದಾಗ "ನೀನು ದೊಡ್ಡ ವಿಜ್ಞಾನಿ ಆಗುವೆ" ಎಂದು ತಾಯಿ ಎದೆತಟ್ಟಿ ಹೇಳಿದ ಮಾತು ಅವರಿಗೆ ಬ್ರಹ್ಮಾಸ್ತ್ರವಾಯಿತು. ತಾಯಿ ಆಶಿಯಮ್ಮ ಬಡಿಸಿದ ಅನ್ನದಲ್ಲಿ ತ್ಯಾಗವಿತ್ತು. ಅವರು ಹೇಳಿದ ಮಾತಿನಲ್ಲಿ ನಂಬಿಕೆಯಿತ್ತು. ಆ ಎರಡೂ ಸೇರಿದ್ದರಿಂದಲೇ ರಾಮೇಶ್ವರದ ಒಂದು ಪುಟ್ಟ ಹುಡುಗ, ಭಾರತದ ಕ್ಷಿಪಣಿಗೆ ರೆಕ್ಕೆ ಕೊಟ್ಟರು. ದೇಶದ ರಾಷ್ಟ್ರಪತಿ ಭವನದವರೆಗೆ ಏರಿದರು. ತಾಯಿ ತಟ್ಟೆಯಲ್ಲಿ ಬಡಿಸಿದ್ದು ಅನ್ನವಲ್ಲ, ಅದು ಆತ್ಮವಿಶ್ವಾಸ. ಅದನ್ನು ಮಮತೆಯಿಂದ ಉಂಡು ಬೆಳೆದವರೇ ಜನರ ಪ್ರೀತಿಯ ಕಲಾಂ.

ಮಹಾರಾಷ್ಟ್ರದ ಮಣ್ಣಿನಲ್ಲಿ ಹಿಂದವಿ ಸ್ವರಾಜ್ಯದ ಬೀಜ ಬಿತ್ತಿದ ಹೆಸರೇ ಛತ್ರಪತಿ ಶಿವಾಜಿ ಮಹಾರಾಜರು. ಶೌರ್ಯದ ಕತ್ತಿಯಿಂದ ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಆದರೆ ಆ ಕತ್ತಿಗೆ ಮೊದಲು ಮೆರುಗು ಕೊಟ್ಟ ಕೈ ಯಾರದ್ದು? ಅದು ಜೀಜಾಮಾತೆ ಜೀಜಾಬಾಯಿಯವರದು. "ಮಗನೇ ಅನ್ಯಾಯದ ವಿರುದ್ಧ ಹೋರಾಡು. ಸ್ವಾಭಿಮಾನದಿಂದ ಬದುಕು" - ಆ ಒಂದು ಮಾತು ಬೀಜವಾಗಿ ಮಗನ ಎದೆಯಲ್ಲಿ ಸದಾ ಉಳಿಯಿತು. ಅದು ಬೆಳೆದು ಸ್ವರಾಜ್ಯದ ಮಹಾವೃಕ್ಷವಾಯಿತು. ತಾಯಿ ಹೇಳಿದ ಶೌರ್ಯದ ಪಾಠವೇ ಶಿವಾಜಿಯನ್ನು ಮೊಘಲರ ವಿರುದ್ಧ ನಿಲ್ಲುವಂತೆ ಮಾಡಿತು. ತಾಯಿ ತುಂಬಿದ ಸ್ವಾಭಿಮಾನವೇ ಅವರನ್ನು ರಾಜ್ಯ ಸ್ಥಾಪನೆಗೆ ಪ್ರೇರೇಪಿಸಿತು. ಜೀಜಾಮಾತೆ ಕೊಟ್ಟದ್ದು ಕೇವಲ ಕಥೆಗಳಲ್ಲ. ಅವರು ಕೊಟ್ಟಿದ್ದು ಧೈರ್ಯ ಮತ್ತು ಧ್ಯೇಯ. ಅದಕ್ಕಾಗಿಯೇ ಛತ್ರಪತಿ ಶಿವಾಜಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜೀಜಾಮಾತೆಯ ಬಳಿ ಹೋಗಿ ಆಶೀರ್ವಾದ ಪಡೆಯುತ್ತಿದ್ದರು. ಜೀಜಾಮಾತೆಯ ಮಡಿಲೇ ಮೊದಲ ದರ್ಬಾರ್. ಅಲ್ಲಿಂದ ಹೊರಟ ಕಂದನೇ ಛತ್ರಪತಿ. ತಾಯಿ ಕಲಿಸಿದ ಸ್ವಾಭಿಮಾನವೇ ಇಂದು ಕೋಟಿ ಕೋಟಿ ಹೃದಯದಲ್ಲಿ ಮಿನುಗುತ್ತಿರುವವರು ಶ್ರೀ ಶಿವಾಜಿ ಮಹಾರಾಜರು.

ಹಿರೇಮಗಳೂರಿನ ಹಸಿರು ಹೊಲಗಳ ನಡುವೆ ಸಾಹಿತ್ಯದ ಮೊದಲ ಪಾಠಶಾಲೆ ತೆರೆದದ್ದು ಒಂದು ತಾಯಿಯ ಮಡಿಲಲ್ಲಿ. ಆ ತಾಯಿಯೇ ವೆಂಕಟಲಕ್ಷಮ್ಮ. ಚಿಕ್ಕಂದಿನ ಕುವೆಂಪು ಅವರಿಗೆ ತಾಯಿಯು ರಾತ್ರಿಯ ಹೊತ್ತು ಲಾವಣಿ ಹಾಡಿ, ಜನಪದ ಕಥೆ ಹೇಳಿ ಕನ್ನಡದ ಮಮತೆಯನ್ನು ಕಲಿಸಿದರು. ಪ್ರತಿ ಕಥೆಯ ಕೊನೆಯಲ್ಲಿ ಒಂದೇ ಹಂಬಲ ಇಡುತ್ತಿದ್ದರು - "ನನ್ನ ಮಗ ಕನ್ನಡಕ್ಕೆ ಕೀರ್ತಿ ತರಬೇಕು" ಎಂದು. ಆ ತಾಯಿಯ ಹಂಬಲವೇ ಬೀಜವಾಯಿತು. ಅದು ಬೆಳೆದು ಕಾವ್ಯದ ಮಹಾವೃಕ್ಷವಾಯಿತು. ತಾಯಿ ಕಿವಿಯಲ್ಲಿ ಹಾಡಿದ ಲಾವಣಿಯೇ ಮುಂದೆ "ಜಯ ಭಾರತ ಜನನಿಯ ತನುಜಾತೆ" ಎಂಬ ನಾಡಗೀತೆಯಾಗಿ ಕೋಟಿ ಕಂಠಗಳಲ್ಲಿ ಮೊಳಗಿತು. ವೆಂಕಟಲಕ್ಷಮ್ಮ ಕೊಟ್ಟಿದ್ದು ಕೇವಲ ಕಥೆಗಳಲ್ಲ. ಅವರು ಕೊಟ್ಟಿದ್ದು ಭಾಷಾಭಿಮಾನ, ಮಾನವೀಯತೆ ಮತ್ತು ವಿಶ್ವಪ್ರೀತಿ. ಅದೇ ಆಸ್ತಿಯನ್ನು ತೆಗೆದುಕೊಂಡು ಹೋದ ಕುವೆಂಪು ಅವರು ರಾಷ್ಟ್ರಕವಿ ಎಂಬ ಬಿರುದು ಪಡೆದು ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವದ ಎತ್ತರಕ್ಕೆ ಹಾರಿಸಿದರು.

ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲೂ ತಾಯಿಯ ಭಾವನೆಗಳು ಬೆನ್ನೆಲುಬಾಗಿ ನಿಲ್ಲುತ್ತವೆ. ಆಕೆಯ ಮುನಿಸಿನಲ್ಲಿ ಪ್ರೀತಿಯಿರುತ್ತದೆ, ಹರಕೆಯಲ್ಲಿ ಭವಿಷ್ಯವಿರುತ್ತದೆ, ಕಣ್ಣೀರಿನಲ್ಲಿ ಮಮತೆಯಿರುತ್ತದೆ. ತಾಯಿಯ ಅಂತರಾಳದ ಈ ಮೂರು ಶಕ್ತಿಗಳನ್ನು ಗೌರವಿಸಿ ಆಕೆಯ ಮಾರ್ಗದರ್ಶನದಲ್ಲಿ ನಡೆಯುವ ಮಗುವಿನ ಜೀವನ ಎಂದಿಗೂ ಅಪೂರ್ಣವಾಗುವುದಿಲ್ಲ. ತಾಯಿಯೇ ಪ್ರತ್ಯಕ್ಷ ದೈವ, ಆಕೆಯ ಪ್ರೀತಿಯೇ ಜೀವನ್ಮುಖಿ.  
ಪ್ರತಿಯೊಬ್ಬ ಸಾಧಕನ ಕನಸಿಗೆ ತಾಯಿಯೇ ಮೊದಲ ಸ್ಫೂರ್ತಿ.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484   

ಆ ಒಂದು ಕ್ಷಣ , importance of a moment

ನಮ್ಮ ಇಡೀ ಜೀವನದ ದಿಕ್ಕನ್ನೇ ಬದಲಾಯಿಸಲು ವರ್ಷಗಳು ಬೇಕಾಗುವುದಿಲ್ಲ ಕೇವಲ ಆ ಒಂದು ಕ್ಷಣ ಸಾಕು. ಮಾನವನ ಇತಿಹಾಸ ಸಾಧನೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಗಮನಿಸಿದರೆ ಜಗತ್ತನ್ನು ಬದಲಾಯಿಸಿದ ದೊಡ್ಡ ನಿರ್ಧಾರಗಳು ಮತ್ತು ಆವಿಷ್ಕಾರಗಳು ಹುಟ್ಟಿಕೊಂಡಿದ್ದು ಯಾವುದೋ ಒಂದು ವಿಶಿಷ್ಟ ಕ್ಷಣದಲ್ಲಿಯೇ ಆಗಿರುತ್ತದೆ. ಆ ಒಂದು ಕ್ಷಣವೇ ಜೀವನದ ಅತ್ಯಂತ ಶಕ್ತಿಶಾಲಿ ತಿರುವು. ಇಂದೇ ಈಗಲೇ ಈ ಕ್ಷಣದಲ್ಲೇ ನಿಮ್ಮ ಗುರಿಯತ್ತ ಮೊದಲ ಹೆಜ್ಜೆಯನ್ನು ಇಡಿ. ಏಕೆಂದರೆ ನಿಮ್ಮ ಜೀವನವನ್ನು ಬದಲಾಯಿಸುವ ಆ ಒಂದು ಅಪೂರ್ವ ಕ್ಷಣ ಬೇರೇನೂ ಅಲ್ಲ, ಅದು ನೀವು ಈಗ ಬದುಕುತ್ತಿರುವ ಈ ಕ್ಷಣವೇ ಆಗಿರಬಹುದು. 

ಜಗತ್ತಿನ ಮಹಾನ್ ಸಾಧಕರ ಜೀವನವನ್ನು ನೋಡಿದರೆ ಆ ಒಂದು ಕ್ಷಣದ ಮಹತ್ವ ತಿಳಿಯುತ್ತದೆ. ಸೇಬಿನ ಹಣ್ಣು ಕೆಳಗೆ ಬಿದ್ದ ಆ ಒಂದು ಕ್ಷಣ ಸರ್ ಐಸಾಕ್ ನ್ಯೂಟನ್ ಅವರಿಗೆ ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿಯಲು ಪ್ರೇರಣೆ ನೀಡಿತು. ರೈಲಿನಿಂದ ಹೊರ ಹಾಕಲ್ಪಟ್ಟ ಆ ಒಂದು ಕಹಿ ಕ್ಷಣ, ಮೋಹನದಾಸ್ ಕರಮಚಂದ್ ಗಾಂಧೀಜಿಯವರನ್ನು ಮಹಾತ್ಮನನ್ನಾಗಿ ಪರಿವರ್ತಿಸಲು ನಾಂದಿ ಹಾಡಿತು. ಗೌತಮ ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದದ್ದು ಒಂದು ನಿರ್ದಿಷ್ಟ ಕ್ಷಣದಲ್ಲಿ. ಇವೆಲ್ಲವೂ ಕೇವಲ ಕಾಲದ ತುಣುಕುಗಳಲ್ಲ, ಬದಲಿಗೆ ಇತಿಹಾಸದ ಹಾದಿಯನ್ನೇ ಬದಲಿಸಿದ ಮಹಾನ್ ಕ್ಷಣಗಳು.



ಕಾಲ ಯಾರಿಗಾಗಿಯೂ ಕಾಯುವುದಿಲ್ಲ ಆದರೆ ಕಾಲದ ಓಟದಲ್ಲಿ ಬರುವ ಆ ಒಂದು ಕ್ಷಣ ನಮಗಾಗಿ ಕಾಯುತ್ತಿರುತ್ತದೆ. ಆ ಕ್ಷಣವನ್ನು ಸದುಪಯೋಗ ಪಡಿಸಿಕೊಂಡವರು ಇತಿಹಾಸ ಸೃಷ್ಟಿಸುತ್ತಾರೆ, ನಿರ್ಲಕ್ಷಿಸಿದವರು ಕೇವಲ ವೀಕ್ಷಕರಾಗಿ ಉಳಿಯುತ್ತಾರೆ. ಹಾಗಾಗಿ ಪ್ರತಿಯೊಂದು ಕ್ಷಣವನ್ನೂ ಪ್ರೀತಿಯಿಂದ ಜಾಗರೂಕತೆಯಿಂದ ಬದುಕಿ. ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟುವ ಆ ಒಂದು ಸುಂದರ ಕ್ಷಣ ಇದೇ ಆಗಿರಬಹುದು.

ತಾಯಿಯ ಗರ್ಭದಿಂದ ಮಗು ಈ ಭೂಮಿಗೆ ಬರುವ ಆ ಒಂದು ಕ್ಷಣ ಮಾನವ ಜೀವನದ ಅತ್ಯಂತ ಅದ್ಭುತ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಒಂಬತ್ತು ತಿಂಗಳುಗಳ ಕಾಲ ತಾಯಿಯ ಉಸಿರನ್ನೇ ತನ್ನ ಉಸಿರಾಗಿಸಿಕೊಂಡಿದ್ದ ಜೀವವೊಂದು ಪ್ರಕೃತಿಯ ಮಡಿಲಿಗೆ ಹೆಜ್ಜೆ ಇಡುವ ಸಮಯವದು. ಆ ಕ್ಷಣದಲ್ಲಿ ಇಡೀ ಜಗತ್ತೇ ಒಂದು ಅಪೂರ್ವ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ. ಮಗು ಮೊದಲ ಬಾರಿ ಉಸಿರಾಡಿದಾಗ ಜೋರಾಗಿ ಅಳುತ್ತದೆ. ಆ ಅಳು ಮಗುವಿನ ಆರೋಗ್ಯದ ಸಂಕೇತ. ಕತ್ತಲ ಕೋಣೆಯಿಂದ ಹೊರಬಂದ ಮಗುವಿಗೆ ಈ ಹೊಸ ಪ್ರಪಂಚದ ಗಾಳಿ, ಬೆಳಕು ಅಪರಿಚಿತವಾಗಿ ಕಾಡಬಹುದು. ಆದರೆ ಮಗುವಿನ ಆ ಅಳುವಿನ ಧ್ವನಿ ಕೇಳುತ್ತಿದ್ದಂತೆ, ಅಲ್ಲಿಯವರೆಗೆ ಹೆರಿಗೆಯ ತೀವ್ರ ಹೆರಿಗೆ ನೋವನ್ನು ಅನುಭವಿಸುತ್ತಿದ್ದ ತಾಯಿಯ ಮುಖದಲ್ಲಿ ಕೋಟಿ ದೀಪ ಬೆಳಗಿದಂತಹ ಸಂತೋಷ ಮೂಡುತ್ತದೆ. ಅವಳ ಕಣ್ಣೀರು ಆನಂದ ಭಾಷ್ಪವಾಗಿ ಬದಲಾಗುತ್ತದೆ. 

1947 ರ ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ಭಾರತವು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಿ ಪಡೆದು ಸ್ವತಂತ್ರ ದೇಶವಾಗಿ ಉದಯಿಸಿತು. ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಆ ಐತಿಹಾಸಿಕ ಕ್ಷಣವು ಭಾರತೀಯರ ಪಾಲಿಗೆ ಹೊಸ ಯುಗದ ಆರಂಭವಾಗಿತ್ತು. ನೂರಾರು ವರ್ಷಗಳ ಗುಲಾಮಗಿರಿ ಅಸಂಖ್ಯಾತ ದೇಶಭಕ್ತರ ತ್ಯಾಗ ಮತ್ತು ಬಲಿದಾನಗಳ ಪ್ರತಿಫಲ ಆ ಒಂದು ಕ್ಷಣದಲ್ಲಿ ಸಾಕಾರಗೊಂಡಿತು. ಕತ್ತಲೆಯ ಕಾರ್ಮೋಡ ಸರಿದು, ಮುಂಜಾನೆಯ ಹೊಸ ಬೆಳಕು ಮೂಡಿದ ಆ ಅಮೂಲ್ಯ ಕ್ಷಣ ಇಂದಿಗೂ ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಪುಟವಾಗಿದೆ.

ಭಾರತದಲ್ಲಿ ಮೊದಲ ಕರೋನ ವೈರಸ್ ಪ್ರಕರಣ ಪತ್ತೆಯಾದ ಆ ಒಂದು ಕ್ಷಣ ದೇಶದ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಮತ್ತು ಮರೆಯಲಾಗದ ಕ್ಷಣವಾಗಿದೆ. ಆ ಒಂದು ಕ್ಷಣದ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಡೀ ದೇಶವೇ ಒಂದು ನಿಮಿಷ ಸ್ತಬ್ದವಾಯಿತು. ಟಿವಿ ಸುದ್ದಿಗಳಲ್ಲಿ ಚೀನಾ ಅಥವಾ ಇತರ ದೇಶಗಳಲ್ಲಿ ಹರಡುತ್ತಿದೆ ಎಂದು ಕೇಳುತ್ತಿದ್ದ ಮಹಾಮಾರಿ ನಮ್ಮ ಹೊಸ್ತಿಲಿಗೆ ಬಂದು ನಿಂತಿದೆ ಎಂಬ ಸತ್ಯ ಜೀರ್ಣಿಸಿಕೊಳ್ಳಲು ಅಸಾಧ್ಯವಾಗಿತ್ತು. ಆ ಕ್ಷಣ ದೇಶದ ಜನರ ಮನಸ್ಸಿನಲ್ಲಿ ಅಪರಿಚಿತ ಭಯ, ಆತಂಕ ಮತ್ತು ಆಶ್ವರ್ಯವನ್ನು ಒಟ್ಟಿಗೆ ಮೂಡಿಸಿತು. ಭವಿಷ್ಯದಲ್ಲಿ ಏನಾಗಬಹುದು ಎಂಬ ಕಲ್ಪನೆಯೂ ಯಾರಿಗೂ ಇರಲಿಲ್ಲ. ಕೋಟ್ಯಂತರ ಜನರ ಬದುಕು ಆರ್ಥಿಕತೆ ಮತ್ತು ದೈನಂದಿನ ದಿನಚರಿಯನ್ನು ಸಂಪೂರ್ಣವಾಗಿ ಬದಲಾಯಿಸಿದ ಆ ಕ್ಷಣ ಭಾರತೀಯರ ನೆನಪಿನಲ್ಲಿ ಎಂದಿಗೂ ಮಾಸದ ಕಹಿ ನೆನಪಾಗಿ ಉಳಿದಿದೆ. ಅದು ಕೇವಲ ಒಂದು ವೈರಸ್ ಬಂದ ಕ್ಷಣವಾಗಿರಲಿಲ್ಲ, ಬದಲಿಗೆ ಇಡೀ ದೇಶದ ದಿಕ್ಕನ್ನೇ ಬದಲಿಸಿದ ಮಹಾವಿಪತ್ತಿನ ಆರಂಭದ ಕ್ಷಣವಾಗಿತ್ತು.

ಮುಂದೆ ಸಾಯುವ ಆ ಒಂದು ಕ್ಷಣ ನಮಗೆ ಜೀವನದ ನಿಜವಾದ ಮೌಲ್ಯವನ್ನು ನೆನಪಿಸುತ್ತದೆ. ನಾವು ಕೊನೆಗೆ ಕೊಂಡೊಯ್ಯುವುದು ಕೇವಲ ನೆನಪುಗಳು ಮತ್ತು ನಾವು ಹಂಚಿದ ಪ್ರೀತಿಯನ್ನು ಮಾತ್ರ. ಆ ಕೊನೆಯ ಕ್ಷಣದಲ್ಲಿ ಪಶ್ಚಾತ್ತಾಪ ಪಡುವುದಕ್ಕಿಂತ ಬದುಕಿರುವಾಗಲೇ ಎಲ್ಲರೊಂದಿಗೆ ಪ್ರೀತಿಯಿಂದ ಬಾಳುವುದು ಸಾರ್ಥಕತೆಯ ದಾರಿಯಾಗಿದೆ.

ಕನ್ನಡ ಚಿತ್ರರಂಗದ ಧ್ರುವತಾರೆ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಡಾ.ಪುನೀತ್ ರಾಜ್‌ಕುಮಾರ್ ಅವರು ಮರಣ ಹೊಂದಿದ ಆ ಒಂದು ಕ್ಷಣ ಇಡೀ ಕರ್ನಾಟಕವನ್ನೇ ಕತ್ತಲಿಗೆ ತಳ್ಳಿತು. 2021 ರ ಅಕ್ಟೋಬರ್ 29 ರ ಆ ದಿನ ಇಂದಿಗೂ ಯಾರೂ ಮರೆಯಲಾಗದ ಕರಾಳ ದಿನ. ಯಾವಾಗಲೂ ನಗುತ್ತಾ ಪ್ರೀತಿ ಹಂಚುತ್ತಿದ್ದ ಸದೃಢ ಕಾಯದ ನಟನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಯಿತು ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಡೀ ರಾಜ್ಯವೇ ಸ್ತಬ್ಧವಾಯಿತು. ಆಸ್ಪತ್ರೆಯ ಮುಂದೆ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳ ಕಣ್ಣುಗಳಲ್ಲಿ ಆತಂಕ ಮನೆಮಾಡಿತ್ತು. ಅಪ್ಪುಗೆ ಏನೂ ಆಗುವುದಿಲ್ಲ ಅವರು ಮತ್ತೆ ಎದ್ದು ಬರುತ್ತಾರೆ ಎಂಬ ಆಶಾಭಾವನೆ ಎಲ್ಲರಲ್ಲೂ ಇತ್ತು. ಆದರೆ, ವೈದ್ಯರು ಪುನೀತ್ ಇನ್ನಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ ಆ ಒಂದು ಕ್ಷಣ, ಕೋಟ್ಯಂತರ ಜನರ ಹೃದಯ ಒಡೆದು ಚೂರಾಯಿತು. ಆ ಸುದ್ದಿ ಕೇಳಿ ಇಡೀ ಕರ್ನಾಟಕವೇ ಅನಾಥಪ್ರಜ್ಞೆಯಿಂದ ತತ್ತರಿಸಿತು. ಅಪ್ಪು ದೈಹಿಕವಾಗಿ ನಮ್ಮನ್ನು ಅಗಲಿದ ಆ ಕ್ಷಣ ಇತಿಹಾಸದಲ್ಲಿ ಅತ್ಯಂತ ದುಃಖದ ಕ್ಷಣವಾಗಿ ದಾಖಲಾಯಿತು. ಆದರೆ ಅವರು ಬಿಟ್ಟುಹೋದ ಪ್ರೀತಿ, ಆದರ್ಶಗಳು ಇಂದಿಗೂ ಜನರ ಹೃದಯದಲ್ಲಿ ಅವರನ್ನು ಅಮರವಾಗಿಸಿವೆ.

ಆ ಒಂದು ಕ್ಷಣ ಇಡೀ ಕ್ರೀಡಾಂಗಣದಲ್ಲಿ ಭಾರತದ ಜಯಘೋಷ ಮೊಳಗಿತು. ಅಭಿನವ್ ಬಿಂದ್ರಾ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ ಮೊದಲ ಬಾರಿಗೆ ಬಂಗಾರದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದರು. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಜನ ಗಣ ಮನ ಮೊಳಗಿದಾಗ ಪ್ರತಿಯೊಬ್ಬ ಭಾರತೀಯನ ಕಣ್ಣಲ್ಲೂ ಹೆಮ್ಮೆಯ ಆನಂದಭಾಷ್ಪ ಹರಿಯಿತು. ಆ ಒಂದು ಐತಿಹಾಸಿಕ ಕ್ಷಣ ಭಾರತೀಯ ಕ್ರೀಡಾ ಜಗತ್ತಿನ ದಿಕ್ಕನ್ನೇ ಬದಲಾಯಿಸಿತು ಮತ್ತು ಕೋಟ್ಯಂತರ ಯುವಕರಿಗೆ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಲು ಇಂದಿಗೂ ದಾರಿದೀಪವಾಗಿದೆ.

ಕೊನೆಯದಾಗಿ ಹೇಳಬೇಕೆಂದರೆ ಕಳೆದುಹೋದ ಸಮಯ ಮತ್ತೆ ಮರಳಿ ಬಾರದು. ಆದ್ದರಿಂದ ನಮ್ಮ ಕೈಯಲ್ಲಿರುವ ಪ್ರತಿಯೊಂದು ಕ್ಷಣವನ್ನೂ ಪ್ರೀತಿಸಬೇಕು. ಆ ಒಂದು ಧನಾತ್ಮಕ ಕ್ಷಣಕ್ಕಾಗಿ ಕಾಯುತ್ತಾ, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದೇ ನಿಜವಾದ ಜೀವನ. ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯ ಕ್ಷಣ ಹಾಗೂ ಕೆಟ್ಟ ಕ್ಷಣಗಳು ಬಂದೇ ಬರುತ್ತವೆ. ಕೆಟ್ಟ ಕ್ಷಣಗಳನ್ನು ಮರೆತು, ಒಳ್ಳೆಯ ಕ್ಷಣಗಳನ್ನು ಸದಾ ಸ್ಮರಿಸೋಣ



ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

ಹೆತ್ತ ತಾಯಿ ಅಜರಾಮರ

ಜಗತ್ತಿನಲ್ಲಿ ಎಷ್ಟೋ ಸಂಬಂಧಗಳಿರಬಹುದು, ಆದರೆ ತಾಯಿ ಮತ್ತು ಮಗುವಿನ ನಡುವಿನ ಬಂಧಕ್ಕೆ ಸಾಟಿಯೇ ಇಲ್ಲ. ಇದು ಕೇವಲ ರಕ್ತದ ಸಂಬಂಧವಲ್ಲ, ಬದಲಿಗೆ ಎರಡು ಆತ್ಮಗಳ ನಡುವಿನ ಅವಿನಾಭಾವ ಬೆಸುಗೆ.

ಕೆಲವು ಉದಾಹರಣೆಗಳನ್ನು ನೋಡುವುದಾದರೆ, ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ಅರಸ ಶ್ರೀ ಕೃಷ್ಣದೇವರಾಯ ಕೇವಲ ಒಬ್ಬ ಶೂರ ಯೋಧ ಅಥವಾ ದಕ್ಷ ಆಡಳಿತಗಾರ ಮಾತ್ರವಲ್ಲ, ಆತ ಒಬ್ಬ ಪರಮ ಮಾತೃಭಕ್ತ ಕೂಡ ಹೌದು. ಇತಿಹಾಸದ ಪುಟಗಳಲ್ಲಿ ರಾಜರು ತಮ್ಮ ವೈಭವಕ್ಕಾಗಿ ಅರಮನೆಗಳನ್ನು ಅಥವಾ ಪ್ರೇಯಸಿಯರಿಗಾಗಿ ಸ್ಮಾರಕಗಳನ್ನು ಕಟ್ಟಿದ್ದು ಉಂಟು. ಆದರೆ, ಹೆತ್ತ ತಾಯಿಯ ನೆನಪು ಸದಾ ಹಸಿರಾಗಿರಲಿ ಎಂದು ಇಡೀ ಒಂದು ನಗರವನ್ನೇ ನಿರ್ಮಿಸಿದ ಕೀರ್ತಿ ಶ್ರೀ ಕೃಷ್ಣದೇವರಾಯನಿಗೆ ಸಲ್ಲುತ್ತದೆ. ಕೃಷ್ಣದೇವರಾಯನ ತಾಯಿ ನಾಗಲಾಂಬಿಕೆ ಆಕೆಯ ಮೇಲೆ ಕೃಷ್ಣ ದೇವರಾಯನಿಗೆ ಅಪಾರ ಗೌರವವಿತ್ತು. ತನ್ನ ತಾಯಿ ತೀರಿಕೊಂಡ ನಂತರ, ಅವರ ನೆನಪು ಅಜರಾಮರವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಹೊಸಪೇಟೆಯ ಸಮೀಪ ಒಂದು ಸುಂದರ ನಗರವನ್ನು ನಿರ್ಮಿಸಿದನು. ಆ ನಗರಕ್ಕೆ ತನ್ನ ತಾಯಿಯ ಹೆಸರು ನಾಗಲಾಂಬಿಕೆ  ಅದರಲ್ಲಿ ಕೆಲವು ಅಕ್ಷರಗಳನ್ನು ತೆಗೆದು ಆ ಊರಿಗೆ 'ನಾಗಲಾಪುರ' ಎಂದು ಹೆಸರಿಟ್ಟನು ಆ ಊರಿನ ಮಣ್ಣಿನ ಮೇಲೆ ನಡೆಯುವಾಗ, ಅಲ್ಲಿ ಒಬ್ಬ ಶ್ರೇಷ್ಠ ದೊರೆಯು ತನ್ನ ತಾಯಿಗಾಗಿ ಮಿಡಿದ ಹೃದಯದ ಮಿಡಿತವನ್ನು ಕೇಳಬಹುದು. ತಾಯಿಗಾಗಿ ಇಡೀ ಊರನ್ನೇ ಉಡುಗೊರೆಯಾಗಿ ನೀಡಿದ ಕೃಷ್ಣದೇವರಾಯ, ಇಂದಿನ ತಲೆಮಾರಿಗೂ ಮಾತೃಭಕ್ತಿಯ ಶ್ರೇಷ್ಠ ಮಾದರಿಯಾಗಿದ್ದಾರೆ.

Mother is Eternal

             ಮೊಘಲ್ ಸಾಮ್ರಾಜ್ಯದ ಸ್ಥಾಪಕ ಬಾಬರ್ ಕೂಡಾ ಎಲ್ಲರಿಗೂ ಚಿರಪರಿಚಿತ ಹಾಗೆಯೇ ತನ್ನ ತಾಯಿಯನ್ನು ಇವರೂ ಕೂಡಾ ಅಷ್ಟೇ ಪ್ರೀತಿ ಮಾಡುತ್ತಿದ್ದ ತನ್ನ ತಾಯಿಯ ನೆನಪು ಸದಾ ಇರಬೇಕು ಎಂದು ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುತ್ತಾನೆ. ಆ ಸಾಮ್ರಾಜ್ಯಕ್ಕೆ ಏನು ಹೆಸರು ಇಡಬೇಕೆಂದು ಯೋಚನೆ ಮಾಡಿದನು. ಅವರ ತಾಯಿಯ ಹೆಸರು ಮೊಘಲ್ ಬೇಗಂ ಅದರಲ್ಲಿ ಬೇಗಂ ಎಂಬ ಪದ ತೆಗೆದು ಆ ಸಾಮ್ರಾಜ್ಯಕ್ಕೆ ಮೊಘಲ್ ಎಂದು ತಾಯಿಗಾಗಿ ಆ ಸಾಮ್ರಾಜ್ಯಕ್ಕೆ ಮೊಘಲ್  ಎಂಬ ಹೆಸರು ಇಡುತ್ತಾನೆ. ಇತಿಹಾಸದ ಪುಟದಲ್ಲಿ ತನ್ನ ತಾಯಿಗಾಗಿ ಒಂದು ಸಾಮ್ರಾಜ್ಯ ಕಟ್ಟಿದ ಕೀರ್ತಿ ಬಾಬರ ಅವರಿಗೆ ಹೋಗುತ್ತೆ. ಇಂದು ನಾವು ಮೊಘಲ್ ಇತಿಹಾಸವನ್ನು ಓದುವಾಗ ಬಾಬರನ ಶೌರ್ಯವನ್ನು ಹೊಗಳುತ್ತೇವೆ. ಆದರೆ ಆ ಶೌರ್ಯಕ್ಕೆ ಸಾಣೆ ಹಿಡಿದವರು ಅವರ ತಾಯಿ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ತಾಯಿ ಇರುತ್ತಾಳೆ ಎಂಬ ಮಾತಿಗೆ ಬಾಬರ್ ಮತ್ತು ಆತನ ತಾಯಿಯ ಬಾಂಧವ್ಯವೇ ಸಾಕ್ಷಿ. ತಾಯಿಯ ನೆನಪು ಬಾಬರನನ್ನು ಸೋಲಿನ ಹತಾಶೆಯಿಂದ ಮೇಲೆಬ್ಬಿಸಿ, ಸಾಮ್ರಾಟನನ್ನಾಗಿ ರೂಪಿಸಿತು.

ಪುರಾಣಗಳ ಪುಟಗಳಲ್ಲಿ ಪರಶುರಾಮ ಎಂದರೆ ನಮಗೆ ಮೊದಲು ನೆನಪಿಗೆ ಬರುವುದು ಅವನ ಕೈಯಲ್ಲಿರಬೇಕಾಫ 
ಮತ್ತು ಅವನ ಉಗ್ರ ಕೋಪ. ಆದರೆ, ಆ ಕಠೋರ ವ್ಯಕ್ತಿತ್ವದ ಹಿಂದೆ ಒಬ್ಬ ಅಪ್ರತಿಮ ಮಾತೃಭಕ್ತನಿದ್ದಾನೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ತಾಯಿಯ ಮುತ್ತೈದೆ ಭಾಗ್ಯವನ್ನು (ಸೌಭಾಗ್ಯವನ್ನು) ತನ್ನ ದೃಢ ಸಂಕಲ್ಪ ಮತ್ತು ತಂದೆಯ ಮೇಲಿನ ಭಕ್ತಿಯ ಮೂಲಕ ಮರಳಿ ಪಡೆದ ಪರಶುರಾಮನ ಕಥೆ ಇಂದಿಗೂ ನಮಗೆ ಸ್ಫೂರ್ತಿದಾಯಕ. ಅಂದರೆ ಪರಶುರಾಮನು ಕೂಡ ತನ್ನ ತಾಯಿಯನ್ನು ಅತಿ ಪ್ರೀತಿ ಮಾಡುತ್ತಿದ್ದ ಹೀಗೆ ಒಂದು ದಿನ ತಂದೆ ಅಕಾಲಿಕ ಮರಣದಿಂದ ತೀರಿಕೊಂಡಾಗ, ತಾಯಿಯ ಹಣೆ ಮೇಲೆ ಕುಂಕುಮ ಬಳೆ ಹೂವು ಇವೆಲ್ಲವನ್ನು ತೆಗೆದಾಗ, ಆ ಸಮಯದಲ್ಲಿ ಪರಶುರಾಮ ತನ್ನ ತಾಯಿಯನ್ನು ನೋಡಿ ನಂತರ ತಾಯಿಗೆ ಅಮ್ಮ ಬೆಳಿಗ್ಗೆ ನಿನ್ನ ಹಣೆಯಲ್ಲಿ ಕುಂಕುಮ, ಕೈಯಲ್ಲಿ ಬಳೆ, ತಲೆಯಲ್ಲಿ ಹೂವು ಎಲ್ಲವೂ ಇತ್ತು ಮುತ್ತೈದೆಯಾಗಿ ಕಾಣುತ್ತಿದ್ದಿ ಆದರೆ ಇವಾಗ ಈ ರೀತಿ ಕಾಣುತ್ತಿದ್ದೀಯಮ್ಮ ಎಂದು ತಾಯಿಗೆ ಕೇಳುತ್ತಾನೆ. ಆಗ ತಾಯಿ ಇಲ್ಲ ನಿನ್ನ ತಂದೆ ತೀರಿಕೊಂಡ ಕಾರಣ ಅದೆಲ್ಲವನ್ನು ನಾನು ತೆಗೆದೆ ಎಂದು ಹೇಳುತ್ತಾಳೆ. ಆಗ ಪರಶುರಾಮ ತನ್ನ ತಾಯಿಗೆ ನೀನು ಮೊದಲು ಮುತ್ತೈದೆಯಾಗಿ ಯಾವ ರೀತಿ ಇದ್ದಿ? ಆ ರೀತಿ ನಿನ್ನನ್ನು ನಾನು ನೋಡಬೇಕು ಎಂದು ತಾಯಿಗೆ ಕೇಳುತ್ತಾನೆ. ಆಗ ತಾಯಿ ಒಂದು ಗಿಡ ಮೂಲಿಕೆ ಸಿಗುತ್ತೆ ಅದನ್ನು ತಂದು ಕೊಟ್ಟರೆ ನಿನ್ನ ತಂದೆಯ ಜೀವ ಉಳಿಸಬಹುದೆಂದು ಹೇಳಿದಾಗ, ಆ ಕಾಲದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ, ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಗಿಡಮೂಲಿಕೆಯನ್ನು ಹುಡುಕಿ ತರುವುದು ಅಸಾಮಾನ್ಯ ಸಾಹಸ. ಪರಶುರಾಮ ಆ ದಿವ್ಯ ಮೂಲಿಕೆಯನ್ನು ತಂದು ಜಮದಗ್ನಿಗೆ ಮರುಜೀವ ನೀಡಿದರು. ಇದರ ಮೂಲಕ ರೇಣುಕಾದೇವಿಯ ಮುತ್ತೈದೆ ಭಾಗ್ಯವು ಪುನಃ ಸ್ಥಾಪಿತವಾಯಿತು. ಇದು ಕೇವಲ ಒಂದು ಪವಾಡವಲ್ಲ, ಬದಲಿಗೆ ಒಬ್ಬ ಮಗ ತನ್ನ ಹೆತ್ತವರಿಗಾಗಿ ತೋರಿದ ಅತ್ಯುನ್ನತ ಸೇವೆ.

ಅಮ್ಮ ಇಲ್ಲದ ಮನೆ ಬರಿದು, ಅಮ್ಮ ಇಲ್ಲದ ಬದುಕು ಶೂನ್ಯ. ತಂದೆ ಇಲ್ಲದಿದ್ದರೆ ಮಕ್ಕಳು ಅನಾಥರು ಆಗುವುದಿಲ್ಲ ತಾಯಿ ಇಲ್ಲದಿದ್ದರೆ ಮಾತ್ರ ಮಕ್ಕಳು ಅನಾಥರಾಗುತ್ತಾರೆ ಎಂಬ ಹಿರಿಯರ ಮಾತಿನಂತೆ.ಅಮ್ಮ ಇಲ್ಲದಿದ್ದರು ಅವಳನ್ನು ಅಜರಾಮರ ಮಾಡಿದ್ದಾನೆ ಒಬ್ಬ ಮಗ - ನಟ ವಿನೋದ್ ರಾಜ್. ಕನ್ನಡ ಚಿತ್ರರಂಗದ ವರನಟಿ ಡಾ. ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಕಟ್ಟಿದ ದೇಗುಲ ಇವತ್ತು ತಾಯಿ-ಮಗನ ಬಾಂಧವ್ಯಕ್ಕೆ ಜಗತ್ತೇ ನಮಿಸುವ ಸಾಕ್ಷಿ. 2023ರ ಡಿಸೆಂಬರ್ 8ರಂದು ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದರು. ಅಂತ್ಯಕ್ರಿಯೆ ನಡೆದಿದ್ದು ಬೆಂಗಳೂರಿನ ಸೋಲದೇವನಹಳ್ಳಿಯ ಅವರ ತೋಟದಲ್ಲಿ. ಅದೇ ಜಾಗದಲ್ಲಿ ಮಗ ವಿನೋದ್ ರಾಜ್ ಒಂದು ಸಂಕಲ್ಪ ಮಾಡಿದರು. ಅಮ್ಮನಿಗೆ ದೇಗುಲ ಕಟ್ಟಬೇಕು. ಅಮ್ಮ ಸದಾ ಅಜರಾಮರವಾಗಿ ಇರಬೇಕು. ಇದು ಗರ್ಭಗುಡಿಯಲ್ಲಿ ವಿಗ್ರಹ ಇರುವ ದೇಗುಲ ಮಾತ್ರ ಅಲ್ಲ. ಇದು ಲೀಲಾವತಿ ಎಂಬ ತಾಯಿಯ 85 ವರ್ಷದ ಬದುಕಿನ ದರ್ಶನ. ಲೀಲಾವತಿ ಅವರು ಸಿನಿಮಾದಲ್ಲಿ ಮಾತ್ರ ತಾಯಿಯಲ್ಲ. ನಿಜ ಬದುಕಿನಲ್ಲೂ ನೂರಾರು ಜನರಿಗೆ ಅಮ್ಮ. ತಮ್ಮ ತೋಟದಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ ಮನೆ ಕಟ್ಟಿಸಿಕೊಟ್ಟರು, ಮಕ್ಕಳನ್ನು ಓದಿಸಿದರು. ಆ ಗುಣವನ್ನೇ ಮಗ ಮುಂದುವರೆಸಿದ್ದಾನೆ. ತಾಯಿ ಸ್ಥಾನ ದೇವರಿಗಿಂತ ದೊಡ್ಡದು ವಿನೋದ್ ರಾಜ್ "ತಾಯಿಯೇ ದೇವರು ಎಂಬ ಸಂದೇಶ ಸಾರಿದ್ದಾರೆ". ದೇಗುಲಕ್ಕೆ ಹೋಗಿ ಕೈಮುಗಿಯುವ ಮೊದಲು ಮನೆಯಲ್ಲಿ ಅಮ್ಮನ ಕಾಲಿಗೆ ನಮಸ್ಕರಿಸಿ. 2024ರಲ್ಲಿ ಕರ್ನಾಟಕದ ಒಬ್ಬ ಮಗ ತಾಯಿಗಾಗಿ ದೇಗುಲ ಕಟ್ಟಿ "ಅಮ್ಮ ಅಜರಾಮರ" ಎಂದು ತೋರಿಸಿಕೊಟ್ಟಿದ್ದಾನೆ. ಹೆತ್ತ ತಾಯಿಗೆ ದೇಗುಲ ಕಟ್ಟಿದ ಮಗ ಇದ್ದರೆ, ಆ ತಾಯಿ ಸತ್ತ ಮೇಲೂ ದೇವರಾಗಿ ಬದುಕುತ್ತಾಳೆ. ಶ್ರವಣ ಕುಮಾರನು ಬಿದಿರಿನ ಬುಟ್ಟಿಯಲ್ಲಿ ತಂದೆ ತಾಯಿಗಳನ್ನ ಹೊತ್ತುಕೊಂಡು ಇಡೀ ವಿಶ್ವವನ್ನು ತೋರಿಸಿರುವುದು ನಿಜಕ್ಕೂ ಅಮೋಘವಾದದ್ದು. ಜಿಜಾಬಾಯಿಯೂ ಛತ್ರಪತಿ ಶಿವಾಜಿ ಮಹಾರಾಜರಿಗೆ ಕೊಂಡಾನುದುರ್ಗ ಪ್ರದೇಶವನ್ನು ನನಗೆ ಗೆದ್ದು ಕೊಡಬೇಕು ಎಂದು ಶಿವಾಜಿಯು ಚಿಕ್ಕವಯಸ್ಸಿನಲ್ಲಿ ಇರುವಾಗಲೇ ತನ್ನ ಆಸೆಯನ್ನ ವ್ಯಕ್ತಪಡಿಸುತ್ತಾರೆ. ತಾಯಿಯ ಆಸೆಯಂತೆ ಆ ಪ್ರದೇಶವನ್ನು ಗೆದ್ದು ತಂದು ತಾಯಿಯ ಪಾದಗಳಿಗೆ ಅರ್ಪಿಸಿದವರು ಛತ್ರಪತಿ ಶಿವಾಜಿ ಮಹಾರಾಜರು. ತಾಯಿ ಎಂಬ ಪದವೇ ಅತ್ಯಮೂಲ್ಯವಾದದ್ದು. ತಬ್ಬಲಿಯಾಗುವ ಮುಂಚೆ ತಬ್ಬಿಕೊಳ್ಳಿ ಹೆತ್ತ ತಾಯಿಯನ್ನು.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

ಮೊಬೈಲ್ ಇದ್ದರೆ ಟೈಮ್ ಪಾಸ್, ಪುಸ್ತಕವಿದ್ದರೆ ಗುರಿ ಪಾಸ್

ಮೊಬೈಲ್ ಇದ್ದರೆ ಟೈಮ್ ಪಾಸ್, ಪುಸ್ತಕವಿದ್ದರೆ ಗುರಿ ಪಾಸ್ ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಒಂದು ಮಾಯಾಲೋಕ. ಬೆರಳ ತುದಿಯಲ್ಲಿ ಇಡೀ ಜಗತ್ತೇ ತೆರೆದುಕೊಳ್ಳುತ್ತದೆ. ಆದರೆ ಈ ಸೌಲಭ್ಯದ ಹಿಂದೆ ಒಂದು ದೊಡ್ಡ ಅಪಾಯವೂ ಅಡಗಿದೆ. ಅದೇ ಸಮಯದ ವ್ಯರ್ಥ. ಮೊಬೈಲ್ ನೀಡುವ ಮನರಂಜನೆ ತಾತ್ಕಾಲಿಕ. ಅದು ನಮಗೆ ಮಜಾ ನೀಡಬಹುದು, ಆದರೆ ಜ್ಞಾನವನ್ನಲ್ಲ. ಮೊಬೈಲ್ ಬೇಡ ಅನ್ನುತ್ತಿಲ್ಲ ಆದರೆ ಅದು ನಮ್ಮನ್ನು ಆಳಬಾರದು, ಅಷ್ಟರ ಮಟ್ಟಕ್ಕೆ ಬೇಡ . ತಂತ್ರಜ್ಞಾನವನ್ನು ಮಾಹಿತಿಗಾಗಿ ಬಳಸಿ, ಜ್ಞಾನಕ್ಕಾಗಿ ಪುಸ್ತಕಗಳನ್ನು ಅವಲಂಬಿಸಿ. ಮೊಬೈಲ್‌ನಲ್ಲಿ ಸ್ಕ್ರಾಲ್ ಮಾಡುವುದನ್ನು ಬಿಟ್ಟು, ಪುಸ್ತಕದ ಪುಟಗಳನ್ನು ತಿರುವಿ ನೋಡಿ. ನೀವು ಕೈಯಲ್ಲಿ ಮೊಬೈಲ್ ಹಿಡಿದರೆ ಕೇವಲ ಸಮಯ ಕಳೆಯಬಹುದು (Timepass), ಆದರೆ ಪುಸ್ತಕ ಹಿಡಿದರೆ ಖಂಡಿತವಾಗಿಯೂ ಜೀವನದ ಪರೀಕ್ಷೆಯಲ್ಲಿ ಅಥವಾ ನಿಮ್ಮ ಗುರಿಯಲ್ಲಿ ಯಶಸ್ವಿಯಾಗಬಹುದು (Goal Pass). ಆಯ್ಕೆ ನಿಮ್ಮದು.

ಮೊಬೈಲ್ ಇದ್ದರೆ ಟೈಮ್ ಪಾಸ್, ಪುಸ್ತಕವಿದ್ದರೆ ಗುರಿ ಪಾಸ್


ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಮೊಬೈಲ್ ಫೋನ್ ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಸಾವಿರಾರು ಫ್ರೆಂಡ್ಸ್ ಮತ್ತು ಫಾಲೋವರ್ಸ್ ಇರುವ ಈ ಮೊಬೈಲ್ ಜಗತ್ತಿನಲ್ಲಿ ಮನುಷ್ಯ ಇಂದು ಹೆಚ್ಚು ಒಂಟಿಯಾಗುತ್ತಿದ್ದಾನೆ. ನಾವು ಗಂಟೆಗಟ್ಟಲೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೋಲ್ ಮಾಡುತ್ತೇವೆ. ಬೇರೆಯವರ ಹೊಳೆಯುವ ಬದುಕಿನ ಕ್ಷಣಗಳನ್ನು ನೋಡಿ ನಮ್ಮ ಜೀವನವನ್ನು ತುಲನೆ ಮಾಡಿಕೊಳುತ್ತಿದ್ದೇವೆ ಪಕ್ಕದಲ್ಲೇ ಕುಳಿತಿರುವವರ ಜೊತೆ ಮಾತನಾಡದೆ, ದೂರವಿರುವ ಯಾರೋ ಅಪರಿಚಿತರ ಲೈಕ್ಸ್‌ಗಾಗಿ ಕಾಯುವ ಈ ಹವ್ಯಾಸ ನಮ್ಮನ್ನು ನಿಜವಾದ ಸಂಬಂಧಗಳಿಂದ ದೂರವಿಟ್ಟು ಡಿಜಿಟಲ್ ಒಂಟಿತನಕ್ಕೆ ದೂಡುತ್ತಿದೆ. ಒಂಟಿತನದಿಂದ ಜಾಣತನದ ಕಡೆಗೆ ಸಾಗಲು ಪ್ರಯತ್ನಿಸಬೇಕಾದರೆ ಅದಕ್ಕೆ ಪುಸ್ತಕದ ಅವಶ್ಯಕತೆ ಬೇಕೇ ಬೇಕು.ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರಿಗೆ ಒಂಟಿತನ ಕಾಡುವುದಿಲ್ಲ. ಏಕೆಂದರೆ ಪುಸ್ತಕವು ಅತ್ಯುತ್ತಮ ಗೆಳೆಯ. ನೆನಪಿಡಿ ಮೊಬೈಲ್ ನಮಗೆ ಮಾಹಿತಿಯನ್ನು ನೀಡಬಹುದು ಅಷ್ಟೇ ಆದರೆ ಪುಸ್ತಕ ಮಾತ್ರ ನಮಗೆ ಸಂಸ್ಕಾರ ಮತ್ತು ಜಾಣತನವನ್ನು ನೀಡಬಲ್ಲದು.ನಿಮ್ಮ ಒಂಟಿತನವನ್ನು ಜ್ಞಾನವನ್ನಾಗಿ ಪರಿವರ್ತಿಸಿ.

ಹಿಂದೆ ಜ್ಞಾನ ಪಡೆಯಲು ಮೈಲುಗಟ್ಟಲೆ ನಡೆದು ಗ್ರಂಥಾಲಯಕ್ಕೆ ಹೋಗಬೇಕಿತ್ತು. ಆದರೆ ಇಂದು ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್  ರೂಪದಲ್ಲಿ ಜಗತ್ತಿನ ಶ್ರೇಷ್ಠ ಸಾಹಿತ್ಯಗಳು ನಮ್ಮ ಮೊಬೈಲ್‌ನಲ್ಲಿವೆ. ವಿವೇಕಾನಂದರ ಚೈತನ್ಯದ ನುಡಿಗಳಿರಲಿ ಅಥವಾ ಅಬ್ದುಲ್ ಕಲಾಂರ ಕನಸಿನ ಮಾತುಗಳಿರಲಿ, ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಲಭ್ಯ. ನಮ್ಮ ಕೈಯಲ್ಲಿರುವ ಆ ಪುಟ್ಟ ಮೊಬೈಲ್ ಫೋನ್ ಇಡೀ ಜಗತ್ತನ್ನೇ ನಮ್ಮ ಮುಂದೆ ತೆರೆದಿಡುತ್ತದೆ. ಆದರೆ, ಅದನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವ ಬದಲು, ಅದನ್ನು ಶ್ರೇಷ್ಠ ಪುಸ್ತಕಗಳನ್ನು ಓದಲು ಬಳಸಿದರೆ ಸಾಮಾನ್ಯ ವ್ಯಕ್ತಿಯೂ ಒಬ್ಬ ಅಪ್ರತಿಮ ಸಾಧಕನಾಗಬಲ್ಲ.

ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ನಮ್ಮ ಬದುಕಿಗೆ ಅರ್ಥ ಸಿಗುವುದು ನಾವು ಗಳಿಸುವ ಜ್ಞಾನದಿಂದಲೇ ಹೊರತು ಮೊಬೈಲ್ ಡೇಟಾದಿಂದಲ್ಲ. ಮಕ್ಕಳಿಗೆ ಮೊಬೈಲ್ ನೀಡುವ ಬದಲು ಉತ್ತಮವಾದ ಕಥೆ ಪುಸ್ತಕಗಳನ್ನು ನೀಡಿ, ಅವರಲ್ಲಿ ಸೃಜನಶೀಲತೆ ಬೆಳೆಸಿ. ಮೊಬೈಲ್ ಪರದೆಯ ಮೇಲೆ ಬೆರಳು ಆಡಿಸುವುದರಿಂದ ಬದುಕು ವ್ಯರ್ಥವಾದರೆ, ಪುಸ್ತಕದ ಪುಟಗಳನ್ನು ತಿರುಗಿಸುವುದರಿಂದ ಜೀವನಕ್ಕೆ ಹೊಸ ಅರ್ಥ ಸಿಗುತ್ತದೆ. ಜ್ಞಾನವೇ ಶಕ್ತಿ, ಆ ಜ್ಞಾನದ ಅರಮನೆಗೆ ಪುಸ್ತಕಗಳೇ ದಾರಿ. ಪುಸ್ತಕಗಳನ್ನು ಪ್ರೀತಿಸೋಣ, ಸುಂದರ ಬದುಕನ್ನು ರೂಪಿಸಿಕೊಳ್ಳೋಣ.

ಮೊಬೈಲ್‌ನ ವ್ಯಸನ ಸೋಲಿಗೆ ದಾರಿಯಾದರೆ, ಪುಸ್ತಕದ ಹವ್ಯಾಸವು ನಮ್ಮ ವ್ಯಕ್ತಿತ್ವವನ್ನು ರೂಪಿಸಿ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಮೊಬೈಲ್‌ನಲ್ಲಿ ಸಿಗುವುದು ಮಾಹಿತಿ ಮಾತ್ರ, ಆದರೆ ಪುಸ್ತಕಗಳಲ್ಲಿ ಸಿಗುವುದು ಜ್ಞಾನ. ಆ ಜ್ಞಾನವೇ ನಮ್ಮನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ. ಮೊಬೈಲ್ ಎಂಬುದು ಕೇವಲ ಸಂಪರ್ಕ ಸಾಧನವಾಗಲಿ, ಅದು ನಮ್ಮ ಬದುಕಿನ ಸರ್ವಸ್ವ ಆಗದಿರಲಿ. ಪುಸ್ತಕಗಳೊಂದಿಗೆ ಸ್ನೇಹ ಬೆಳೆಸೋಣ, ಜ್ಞಾನದ ದೀಪ ಹಚ್ಚೋಣ ಮತ್ತು ಸಾಧನೆಯ ಶಿಖರವನ್ನು ಅಚ್ಚುಮೆಚ್ಚಿನಿಂದ ಏರೋಣ.

ಯಾವಾಗ ಒಬ್ಬ ವ್ಯಕ್ತಿ ಜ್ಞಾನದಿಂದ ಸಮೃದ್ಧನಾಗುತ್ತಾನೋ ಆಗ ಜಗತ್ತು ಆತನನ್ನು ಗುರುತಿಸಲು ಪ್ರಾರಂಭಿಸುತ್ತದೆ. ಮೊಬೈಲ್‌ನಲ್ಲಿ ಜಗತ್ತನ್ನು ನೋಡುವುದರಿಂದ ನಾವು ಯಾರಿಗೂ ತಿಳಿಯುವುದಿಲ್ಲ. ಆದರೆ, ಪುಸ್ತಕಗಳನ್ನು ಓದಿ ಬೆಳೆಸಿಕೊಂಡ ಜ್ಞಾನ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜದಲ್ಲಿ ಒಂದು ವಿಶೇಷ ಸ್ಥಾನ ಪಡೆಯುತ್ತೇವೆ. ಆಗ ಈ ಜಗತ್ತು ನಮ್ಮನ್ನು ಗುರುತಿಸುತ್ತದೆ.

ಮೊಬೈಲ್ ಬಳಕೆಯನ್ನು ಗಡಿಯಾರಕ್ಕೆ ಸೀಮಿತಗೊಳಿಸಿ, ಪುಸ್ತಕದ ಪ್ರೀತಿಯನ್ನು ಹೃದಯಕ್ಕೆ ಸೀಮಿತಗೊಳಿಸಿ. ಜ್ಞಾನದ ದೀವಿಗೆಯನ್ನು ಬೆಳಗಲು ಪುಸ್ತಕಕ್ಕಿಂತ ಮಿಗಿಲಾದ ಸ್ನೇಹಿತ ಮತ್ಯಾರೂ ಇಲ್ಲ. ಯಾರು ಮೊಬೈಲ್ ಎಂಬ ಸಣ್ಣ ಪರದೆಯನ್ನು ಮೀರಿ ಬೆಳೆಯುತ್ತಾರೋ ಅವರಿಗೆ ವಿಶಾಲವಾದ ಪ್ರಪಂಚ ಕಾಣಿಸುತ್ತದೆ. ಮೊಬೈಲ್ ಅನ್ನು ಒಂದು ಸಾಧನವಾಗಿ ಬಳಸಿ, ಅದಕ್ಕೆ ಗುಲಾಮರಾಗಬೇಡಿ. ನಿಮ್ಮ ಗುರಿ, ಕನಸು ಮತ್ತು ಕುಟುಂಬದ ಕಡೆಗೆ ನೀವು ತೋರುವ ಜವಾಬ್ದಾರಿಯೇ ನಿಮ್ಮನ್ನು ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಮೊಬೈಲ್ ನಿಮ್ಮ ಜೀವನದ ಭಾಗವಾಗಿರಲಿ, ಜೀವನವೇ ಮೊಬೈಲ್ ಆಗದಿರಲಿ. ಇಂದೇ ನಿರ್ಧರಿಸಿ, ಬೇಜವಾಬ್ದಾರಿತನದ ಪರದೆಯನ್ನು ಸರಿಸಿ, ಜವಾಬ್ದಾರಿಯುತ ಬದುಕಿನತ್ತ ಹೆಜ್ಜೆ ಹಾಕಿ. ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿದೆ. 

ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಕೈಯಿಂದ ಕೆಳಗೆ ಇಳಿಯದ ಒಂದು ವಸ್ತುವೆಂದರೆ ಅದು ಮೊಬೈಲ್. ಆದರೆ ಈ ಮೊಬೈಲ್ ಮತ್ತು ಪುಸ್ತಕಗಳ ನಡುವೆ ಒಂದು ಅದೃಶ್ಯವಾದ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನೇ ಈ ಮಾತು ಬಹಳ ಅರ್ಥಪೂರ್ಣವಾಗಿ ಹೇಳುತ್ತದೆ, "ಮೊಬೈಲ್ ನಮ್ಮನ್ನು ತಲೆ ತಗ್ಗಿಸಿ ಬದುಕುವಂತೆ ಮಾಡಿದರೆ, ಪುಸ್ತಕ ನಮ್ಮನ್ನು ತಲೆ ಎತ್ತಿ ಬದುಕುವಂತೆ ಮಾಡುತ್ತದೆ." ನೆನಪಿಡಿ, ಬಾಗಿ ನೋಡುವ ಮೊಬೈಲ್‌ಗಿಂತ ಜಗತ್ತನ್ನೇ ಎತ್ತರದಿಂದ ನೋಡುವಂತೆ ಮಾಡುವ ಪುಸ್ತಕಗಳೇ ನಮ್ಮ ನಿಜವಾದ ಗೆಳೆಯರು. ಮೊಬೈಲ್ ಕೇವಲ ಮಾಹಿತಿ ಪಡೆಯುವ ಒಂದು ಸಾಧನವಷ್ಟೇ, ಆದರೆ ಪುಸ್ತಕವು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಶಾಶ್ವತ ಸಂಪತ್ತು. ಪುಸ್ತಕಗಳು ನಮಗೆ ತಾಳ್ಮೆಯನ್ನು ಕಲಿಸುತ್ತವೆ. ಕಠಿಣ ಪರಿಸ್ಥಿತಿಯಲ್ಲಿ ಹೇಗೆ ಬದುಕಬೇಕೆಂದು ತಿಳಿಸಿಕೊಡುತ್ತವೆ. ದೊಡ್ಡ ಸಾಧಕರ ಜೀವನ ಚರಿತ್ರೆಗಳನ್ನು ಓದಿದಾಗ ನಮ್ಮಲ್ಲಿ ನಾವು ಯಾಕೆ ಸಾಧಿಸಬಾರದು? ಎಂಬ ಹಸಿವು ಅಥವಾ ದಾಹ ಹುಟ್ಟುತ್ತದೆ. ಈ ದಾಹವೇ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸುತ್ತದೆ. 

ಓದುವ ಹವ್ಯಾಸವು ನಮ್ಮನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಆದ್ದರಿಂದ ಇಂದೇ ಸಂಕಲ್ಪ ಮಾಡಿ ಮೊಬೈಲ್ ಬದಿಗಿರಿಸೋಣ, ಜ್ಞಾನದ ದೀವಿಗೆಯಾದ ಪುಸ್ತಕವನ್ನು ಜೊತೆಗಿರಿಸೋಣ. ಮೊಬೈಲ್ ಒಂದು ಸಾಧನವಾಗಬೇಕೇ ಹೊರತು ಅದು ನಮ್ಮ ಬದುಕಿನ ಯಜಮಾನನಾಗಬಾರದು. ಬೆರಳ ತುದಿಯ ಲೈಕ್ ಗಳಿಗಾಗಿ ಹಪಹಪಿಸುವ ಬದಲು, ಪುಸ್ತಕದ ಪುಟಗಳನ್ನು ತಿರುವಿ ಜ್ಞಾನದ ಬೆಳಕನ್ನು ಪಡೆಯೋಣ. ನೆನಪಿಡಿ, ಯಾರ ಕೈಯಲ್ಲಿ ಪುಸ್ತಕವಿರುತ್ತದೆಯೋ, ಅವರ ಭವಿಷ್ಯ ಉಜ್ವಲವಾಗಿರುತ್ತದೆ.  ಮೊಬೈಲ್ ನಿಮ್ಮನ್ನು ಬಳಸುವಂತೆ ಮಾಡಬೇಡಿ, ನೀವು ಮೊಬೈಲ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ. ಪುಸ್ತಕದ ಪುಟಗಳಲ್ಲಿ ಅಡಗಿರುವ ಜ್ಞಾನದ ಬೆಳಕನ್ನು ಅರಸುತ್ತಾ, ಸುಂದರ ಭವಿಷ್ಯವನ್ನು ನಿರ್ಮಿಸಿಕೊಳ್ಳೋಣ.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

ಒಂಟಿಯಾಗಿದ್ದರೇನು ಭಗವಂತವಿಲ್ಲವೇನು ನಮ್ಮೊಂದಿಗೆ

ನಮ್ಮ ಬದುಕಿನ ಮೊದಲ ಉಸಿರು ಶುರುವಾಗಿದ್ದೇ ಏಕಾಂತದಲ್ಲಿ. ಒಂಬತ್ತು ತಿಂಗಳು ತಾಯಿಯ ಗರ್ಭದ ಕತ್ತಲೆಯಲ್ಲಿ ಇದ್ದಾಗಲೂ ನಮ್ಮ ಪ್ರಾಣದ ಮಿಡಿತ ನಮಗಷ್ಟೇ ಕೇಳಿಸುತ್ತಿತ್ತು. ಆ ಸುಂದರ ಬಂಧನದಿಂದ ಕಳಚಿಕೊಂಡು ಹೊರಬಂದಾಗ ನಮ್ಮ ಜೊತೆಗೆ ಯಾವ ಆಸ್ತಿ ಇರಲಿಲ್ಲ ಯಾವ ಆಭರಣವಿರಲಿಲ್ಲ, ಕಡೆಗೆ ನಾವು ತೊಡಲು ಒಂದು ಬಟ್ಟೆಯೂ ಇರಲಿಲ್ಲ. ನಾವು ಈ ಭೂಮಿಗೆ ಬಂದಾಗ ನಮ್ಮ ಕೈಗಳು ಮುಚ್ಚಿದ್ದವು ಅಂದರೆ ನಾವು ಏನನ್ನೂ ತರಲಿಲ್ಲ ಎಂಬ ಸಂಕೇತವದು.


ನಮ್ಮ ಜೊತೆಗೆ ಬಂದವರು ಯಾರೂ ಇಲ್ಲ. ತಂದೆ, ತಾಯಿ, ಅಣ್ಣ-ತಮ್ಮಂದಿರು ಎಲ್ಲರೂ ನಾವು ಬಂದ ಮೇಲೆ ಸಿಕ್ಕ ಸಂಬಂಧಗಳು. ಈ ಲೋಕಕ್ಕೆ ಪರಿಚಯವಾದ ಮೇಲೆ ನಾವು ನಮ್ಮವರು ಎಂದು ಬೆಳೆಸಿಕೊಂಡ ಮಾಯೆಯ ಪ್ರಪಂಚವಿದು. ಆದರೆ ವಾಸ್ತವವೇನೆಂದರೆ, ಹುಟ್ಟುವಾಗ ನಾವು ಹೇಗೆ ಒಬ್ಬರೇ ಬಂದೆವೋ, ಹೋಗುವಾಗಲೂ ನಮ್ಮ ನೆರಳನ್ನೂ ಕೂಡಾ ಜೊತೆಗೆ ಕೊಂಡೊಯ್ಯಲು ಸಾಧ್ಯವಿಲ್ಲ.
ನಾವಿಲ್ಲಿ ಕಲೆಹಾಕುವ ಅಂತಸ್ತು, ಹಣ, ಕೀರ್ತಿ ಎಲ್ಲವೂ ಬಾಡಿಗೆ ಮನೆಯ ವಸ್ತುಗಳಿದ್ದಂತೆ. ಕೊನೆಯಲ್ಲಿ ನಮ್ಮ ಜೊತೆ ಬರುವುದು ನಾವು ಮಾಡಿದ ಪುಣ್ಯ ಮತ್ತು ಇತರರ ಮನಸ್ಸಿನಲ್ಲಿ ನಾವು ಉಳಿಸಿ ಹೋಗುವ ಪ್ರೀತಿ ಮಾತ್ರ. ಬರುವಾಗ ಏನನ್ನೂ ತರಲಿಲ್ಲ, ಹೋಗುವಾಗ ಏನನ್ನೂ ಕೊಂಡೊಯ್ಯಲಾರೆವು ಎಂಬ ಅರಿವು ನಮಗಿದ್ದರೆ, ಈ ನಡುವಿನ ಜೀವನದಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಒಂಟಿಯಾಗಿ ಬಂದ ನಾವು, ಈ ಪಯಣದಲ್ಲಿ ಅನೇಕರನ್ನು ಭೇಟಿಯಾಗುತ್ತೇವೆ. ಆದರೆ ಅಂತಿಮವಾಗಿ ನಮ್ಮ ಆತ್ಮದ ಪಯಣ ನಮಗಷ್ಟೇ ಸೀಮಿತ. ಈ ಒಂಟಿತನವೇ ನಮಗೆ ಬದುಕಿನ ಅತಿದೊಡ್ಡ ಪಾಠ ಪ್ರೀತಿಯಿಂದ ಬಾಳಬೇಕು, ಆದರೆ ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳಬಾರದು.

ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ನಾವು ಯಾರಿಗೆ ಒಳ್ಳೆಯದನ್ನು ಬಯಸುತ್ತೇವೆಯೋ ಅವರೇ ನಮ್ಮನ್ನು ದ್ವೇಷಿಸಬಹುದು ಅಥವಾ ನಾವು ಪ್ರೀತಿಸುವವರು ನಮ್ಮನ್ನು ಹತ್ತಿರಕ್ಕೆ ಸೇರಿಸದೆ ದೂರ ತಳ್ಳಬಹುದು. ಇಂತಹ ಸಂದರ್ಭದಲ್ಲಿ ಮನಸ್ಸಿಗೆ ಜಿಗುಪ್ಸೆ ಅಥವಾ ಬೇಸರವಾಗುವುದು ಸಹಜ. ಆದರೆ ನೆನಪಿರಲಿ ಇತರರ ದ್ವೇಷ ಅಥವಾ ಕಡೆಗಣನೆ ನಮ್ಮ ವ್ಯಕ್ತಿತ್ವದ ಅಳತೆಗೋಲಲ್ಲ. ಜಗತ್ತು ನಮ್ಮನ್ನು ಗುರುತಿಸದಿದ್ದಾಗ ಅಥವಾ ದ್ವೇಷಿಸಿದಾಗ ನಾವು ಕುಗ್ಗಬಾರದು. ಸೂರ್ಯನನ್ನು ಮೋಡಗಳು ಮುಚ್ಚಿದ ತಕ್ಷಣ ಸೂರ್ಯನ ಅಸ್ತಿತ್ವ ಅಳಿಸಿ ಹೋಗುವುದಿಲ್ಲ, ಹಾಗೆಯೇ ಯಾರೋ ನಿಮ್ಮನ್ನು ಕಡೆಗಣಿಸಿದ ತಕ್ಷಣ ನಿಮ್ಮ ಬೆಲೆ ಕಡಿಮೆಯಾಗುವುದಿಲ್ಲ. ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ. ಯಾರೋ ನಿಮ್ಮನ್ನು ಹತ್ತಿರ ಕರೆಯಲಿಲ್ಲ ಎಂಬ ಕಾರಣಕ್ಕೆ ಮನ ನೊಂದಕೊಳ್ಳಬೇಡಿ. ಯಾರು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅವರಿಗೆ ನಿಮ್ಮ ವಿವರಣೆಯ ಅಗತ್ಯವೂ ಇರುವುದಿಲ್ಲ. ನಿಮ್ಮನ್ನು ದ್ವೇಷಿಸುವವರ ಮಧ್ಯೆಯೇ ನೀವು ನಗುನಗುತ್ತಾ ಬಾಳಿ ತೋರಿಸುವುದೇ ನೀವು ಅವರಿಗೆ ನೀಡುವ ಅತಿದೊಡ್ಡ ಉತ್ತರ. ಒಂಟಿತನವನ್ನು ಶಾಪವೆಂದು ಭಾವಿಸಬೇಡಿ ಅದು ನಿಮ್ಮನ್ನು ನೀವು ತಿದ್ದಿಕೊಳ್ಳಲು ಸಿಕ್ಕ ಅವಕಾಶವೆಂದು ಭಾವಿಸಿ. ನದಿಯು ಹರಿಯುವಾಗ ಎದುರಾಗುವ ಕಲ್ಲುಬಂಡೆಗಳನ್ನು ದ್ವೇಷಿಸುವುದಿಲ್ಲ, ಬದಲಿಗೆ ತನ್ನ ಹಾದಿಯನ್ನು ಬದಲಿಸಿಕೊಂಡು ಸಾಗರದತ್ತ ಸಾಗುತ್ತದೆ. ನೀವೂ ಅಷ್ಟೇ, ದ್ವೇಷದ ಹಾದಿಯನ್ನು ಬಿಟ್ಟು ಪ್ರೀತಿ ಮತ್ತು ಸಾಧನೆಯ ಹಾದಿಯಲ್ಲಿ ಸಾಗಿ.

 

ಕಷ್ಟಗಳು ಬಂದಾಗ ಕನ್ನಡಿಯೂ ಕೂಡ ಕತ್ತಲಲ್ಲಿ ಸಾಥ್ ನೀಡಲ್ಲ ಎನ್ನುವುದು ನಮಗೆ ತಿಳಿದಿರುವ ವಿಷಯ ಆದರೆ ನನ್ನ ಜೊತೆ ಯಾರೂ ಇಲ್ಲ ಎಂಬ ಕೊರಗಿಗಿಂತ, ನನ್ನನ್ನು ಎದುರಿಸಲು ನಾನೊಬ್ಬನೇ ಸಾಕು ಎಂಬ ಛಲ ನಮ್ಮನ್ನು ಗೆಲುವಿನ ದಡಕ್ಕೆ ಮುಟ್ಟಿಸುತ್ತದೆ. ಜೀವನವೆಂಬ ಹಾದಿಯಲ್ಲಿ ಸುಖವಿದ್ದಾಗ ನೂರಾರು ಜನ ಕೈ ಜೋಡಿಸುತ್ತಾರೆ. ಆದರೆ ಕಷ್ಟದ ಕಾರ್ಮೋಡ ಕವಿದಾಗ ನೆರಳು ಸಹ ನಮ್ಮನ್ನು ಬಿಟ್ಟು ದೂರ ಸರಿಯುತ್ತದೆ. ಇದು ಪ್ರಕೃತಿಯ ನಿಯಮ. ನಾವು ಯಾರ ಮೇಲೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುತ್ತೇವೆಯೋ, ಅವರೇ ನಮ್ಮನ್ನು ಅರ್ಧ ದಾರಿಯಲ್ಲಿ ಕೈಬಿಟ್ಟಾಗ ಆಗುವ ನೋವು ಅಸಹನೀಯ. ಆದರೆ ನೆನಪಿಡಿ, ಸಮುದ್ರದಲ್ಲಿ ಈಜುವವನಿಗೆ ತನ್ನ ಕೈಕಾಲುಗಳೇ ಆಸರೆ ಹೊರತು ದಡದಲ್ಲಿ ನಿಂತು ನೋಡುವವರ ಚಪ್ಪಾಳೆಯಲ್ಲ. ನಮ್ಮ ನೋವಿನ ಆಳ ನಮಗೇ ಗೊತ್ತು, ಅದನ್ನು ಸರಿಪಡಿಸುವ ಶಕ್ತಿಯೂ ನಮ್ಮಲ್ಲೇ ಇದೆ. ನನ್ನ ಜೊತೆ ಯಾರೂ ಇಲ್ಲ ಎನ್ನುವುದು ನೋವಲ್ಲ ಅದು ನಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸುವ ಒಂದು ಸಂದರ್ಭ. ಒಬ್ಬರೇ ಹೋರಾಡಿ ಗೆದ್ದಾಗ ಸಿಗುವ ಮರ್ಯಾದೆ ಮತ್ತು ಆತ್ಮವಿಶ್ವಾಸ ಕೋಟಿ ಜನರ ನಡುವೆ ಇದ್ದರೆ ಸಿಗುವುದಿಲ್ಲ. ನಮ್ಮ ಕಷ್ಟಕ್ಕೆ ಯಾರಾದರೂ ಹೆಗಲು ಕೊಡುತ್ತಾರೆ ಎಂದು ಕಾಯುವುದು ದುರ್ಬಲತೆಯ ಲಕ್ಷಣ. ಕಣ್ಣೀರು ಹಾಕುವುದಾದರೆ ದೇವರ ಮುಂದೆ ಅಥವಾ ನಿಮ್ಮಷ್ಟಕ್ಕೆ ನೀವು ಹಾಕಿಬಿಡಿ. ಹೊರಗೆ ಮಾತ್ರ ಆ ಕಣ್ಣೀರನ್ನು ಒರೆಸಿಕೊಂಡು ನಾನು ಗೆದ್ದೇ ತೀರುತ್ತೇನೆ ಎಂಬ ಕಿಚ್ಚಿನಿಂದ ಮುನ್ನುಗ್ಗಿ. ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ. ನಾವು ಬಂದಿರುವುದು ಒಬ್ಬರೇ ಹೋಗುವುದು ಒಬ್ಬರೇ. ಹಾಗಿದ್ದ ಮೇಲೆ ಮಧ್ಯದ ಈ ಹೋರಾಟಕ್ಕೆ ಮತ್ತೊಬ್ಬರ ಹಂಗೇಕೆ? ನಿಮ್ಮ ನೋವನ್ನು ನಿಮ್ಮ ಏಳಿಗೆಗೆ ಮೆಟ್ಟಿಲು ಮಾಡಿಕೊಳ್ಳಿ. ಮೌನವಾಗಿ ಬೆಳೆಯಿರಿ, ನಿಮ್ಮ ಯಶಸ್ಸು ಜಗತ್ತಿಗೆ ಉತ್ತರ ನೀಡಲಿ. ಯಾರೂ ಇಲ್ಲದಿದ್ದರೂ ಪರವಾಗಿಲ್ಲ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ನಮ್ಮ ಜೊತೆ ನಮ್ಮ ಆತ್ಮವಿಶ್ವಾಸ ಸದಾ ಇರಲಿ. ನೀವೇ ನಿಮ್ಮ ಜೀವನದ ಸಾರಥಿ. ಒಂಟಿತನವೇ ನಮ್ಮ ಶಕ್ತಿಯಾಗಲಿ.

ಬದುಕಿನ ಹಾದಿಯಲ್ಲಿ ಕೆಲವೊಮ್ಮೆ ಇಡೀ ಜಗತ್ತೇ ನಮ್ಮನ್ನು ಮರೆತಿದೆ ಎಂಬ ಭಾವನೆ ಕಾಡುವುದು ಸಹಜ. ಈ ಒಬ್ಬಂಟಿತನ ಎನ್ನುವುದು ಕೇವಲ ಮೌನವಲ್ಲ, ಅದು ಮನಸ್ಸಿನ ಒಳಗಿನ ಒಂದು ಭಾರವಾದ ಚೀರಾಟ. ಒಬ್ಬಂಟಿಯಾಗಿರುವುದು ಎಂದರೆ ಸೋತಂತೆ ಅಲ್ಲ. ಯಾರೂ ನಮ್ಮನ್ನು ಕೇರ್ ಮಾಡುತ್ತಿಲ್ಲ ಎಂಬ ನೋವು ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡುತ್ತದೆ. ಜಗತ್ತು ನಿಮ್ಮನ್ನು ಗುರುತಿಸದಿದ್ದಾಗ, ನೀವು ನಿಮ್ಮನ್ನು ಗುರುತಿಸಿಕೊಳ್ಳಲು ಇದು ಸರಿಯಾದ ಸಮಯ. ನಿಮ್ಮ ಪ್ರೀತಿ, ನಿಮ್ಮ ಕಾಳಜಿ ಮೊದಲು ನಿಮಗೇ ಮೀಸಲಿರಲಿ. ಬೇರೆಯವರು ನೀಡುವ ಬೆಲೆಗಿಂತ, ನಾವು ನಮಗೆ ಕೊಟ್ಟುಕೊಳ್ಳುವ ಗೌರವ ದೊಡ್ಡದು. ಇಂದು ಯಾರೂ ಇಲ್ಲ ಎಂದು ಅನಿಸಬಹುದು, ಆದರೆ ಕಾಲ ಉರುಳಿದಂತೆ ನಿಮ್ಮ ಮೌಲ್ಯ ತಿಳಿಯುವ ಜೀವಗಳು ನಿಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತವೆ. ಅಲ್ಲಿಯವರೆಗೆ, ನಿಮ್ಮ ಒಂಟಿತನವನ್ನು ಏಕಾಂತವನ್ನಾಗಿ ಬದಲಾಯಿಸಿಕೊಳ್ಳಿ. ನಿಮ್ಮ ಕನಸುಗಳ ಜೊತೆ ಮಾತನಾಡಿ ನಿಮ್ಮ ಮೌನದಲ್ಲಿ ನಿಮ್ಮನ್ನೇ ಹುಡುಕಿಕೊಳ್ಳಿ. ಆಕಾಶದಲ್ಲಿ ಚಂದಿರನು ಒಬ್ಬನೇ, ಆದರೂ ಅವನು ಕತ್ತಲೆಯನ್ನು ಬೆಳಗುತ್ತಾನೆ. ನೀವು ಕೂಡ ಅಷ್ಟೇ, ಯಾರೂ ಇಲ್ಲದಿದ್ದರೂ ನಿಮ್ಮ ಜೀವನವನ್ನು ನೀವು ಬೆಳಗಬಲ್ಲಿರಿ.

ಉದಾಹರಣೆಗೆ ಹೇಳುವುದಾದರೆ ಯಾವ ಜಾಗವನ್ನು ಕಂಡರೆ ಮನುಷ್ಯರು ಭಯಪಡುತ್ತಾರೋ, ಎಲ್ಲಿಗೆ ಹೋಗಲು ಹಿಂಜರಿಯುತ್ತಾರೋ, ಅಂತಹ ಸ್ಮಶಾನವೇ ಕೈಲಾಸನಾಥನಾದ ಶಿವನಿಗೆ ಪರಮ ಪ್ರಿಯವಾದ ತಾಣ. ಜಗತ್ತು ಯಾವುದನ್ನು ಅಶುಭ ಎಂದು ದೂರ ತಳ್ಳುತ್ತದೆಯೋ, ಶಿವನು ಅದನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾನೆ. ಸ್ಮಶಾನವು ಜೀವನದ ಪರಮ ಸತ್ಯವನ್ನು ಸಾರುವ ಜಾಗ. ಇಲ್ಲಿ ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಬೂದಿಯಾಗಲೇಬೇಕು. ಶಿವನು ಸ್ಮಶಾನದಲ್ಲಿ ನೆಲೆಸುವ ಮೂಲಕ, ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಅರಿವನ್ನು ನಮಗೆ ಮೂಡಿಸುತ್ತಾನೆ. ಯಾರು ಇಷ್ಟಪಡದ ಬಿಲ್ವಪತ್ರೆ ದೇವರಿಗೆ ಶ್ರೇಷ್ಠವಾದಂತೆ, ಯಾರಿಗೂ ಬೇಡವಾದ ಒಂಟಿತನವು ಸಾಧಕನಿಗೆ ವರವಾಗಬಲ್ಲದು. ಹೊರಜಗತ್ತಿನ ಗದ್ದಲದಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವ ಬದಲು, ಒಂಟಿತನದ ಬಿಲ್ವಪತ್ರೆಯನ್ನು ಹಿಡಿದು ಅಂತರಂಗದ ಶಿವನಿಗೆ ಅರ್ಪಿಸಿದರೆ ಶಾಂತಿ ಸಿಗುವುದು ನಿಶ್ಚಿತ. ಎಕ್ಕೆ ಗಿಡಕ್ಕೆ ಅರಮನೆಯ ಉದ್ಯಾನವನದಲ್ಲಿ ಜಾಗವಿಲ್ಲ, ಅದರ ಹಾಲಿನ ಭಯಕ್ಕೆ ಜನರು ಹತ್ತಿರ ಸುಳಿಯುವುದಿಲ್ಲ. ಆದರೆ, ಪ್ರಪಂಚವೇ ಯಾವುದನ್ನು ಬೇಡವೆಂದು ದೂರ ತಳ್ಳುತ್ತದೆಯೋ, ಅದನ್ನು ಕೈಲಾಸನಾಥ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಸುಗಂಧಭರಿತ ಹೂವುಗಳಿಗಿಂತ ಶಿವನಿಗೆ ಈ ಬಿಳಿ ಎಕ್ಕೆಯ ಹೂವುಗಳೆಂದರೆ ಅಚ್ಚುಮೆಚ್ಚು. ಒಬ್ಬಂಟಿತನ ಅಂದರೆ ಬರಿ ಶೂನ್ಯವಲ್ಲ, ಅದು ತನ್ನನ್ನು ತಾನು ಕಂಡುಕೊಳ್ಳುವ ಹಾದಿ. ಎಕ್ಕೆ ಗಿಡವು ಬಿಸಿಲ ಧಗೆಯಲ್ಲಿ, ಯಾರೂ ನೀರು ಹಾಕದಿದ್ದರೂ ಹಸಿರಾಗಿ ನಗುತಲಿರುತ್ತದೆ. ಒಂಟಿಯಾಗಿ ಬೆಳೆಯುವುದು ದೌರ್ಬಲ್ಯವಲ್ಲ, ಅದು ಆತ್ಮವಿಶ್ವಾಸದ ಸಂಕೇತ. ನೂರಾರು ಹೂವುಗಳ ನಡುವೆ ಗುರುತಿಸಿಕೊಳ್ಳುವುದು ಸುಲಭ, ಆದರೆ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಶ್ರೇಷ್ಠತೆ. ಕಣ್ಣು ಮುಚ್ಚಿ ಒಮ್ಮೆ ನಿಮ್ಮ ಹೃದಯ ಬಡಿತವನ್ನು ಕೇಳಿಸಿಕೊಳ್ಳಿ. ಅದು ನಿಮಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ನಿಮ್ಮ ಜೀವವೇ ನಿಮ್ಮ ಮೇಲೆ ಇಷ್ಟೊಂದು ಪ್ರೀತಿ ಇಟ್ಟಿರುವಾಗ, ಯಾರೂ ಇಲ್ಲ ಎಂದು ಕೊರಗುವುದು ಸರಿಯೇ? ನೀವು ಒಂಟಿಯಲ್ಲ, ನೀವು ಒಂದು ಅದ್ಭುತ ಶಕ್ತಿ. ನೀವು ಒಂಟಿಯಲ್ಲ, ನಿಮ್ಮೊಳಗೇ ಒಂದು ಜಗತ್ತಿದೆ.

ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಭರಣ ಆಗುವಾಗ ಅಪ್ರತಿಮ ವೀರರಾದ ಐವರು ಪತಿಯರು ಮೌನಕ್ಕೆ ಶರಣಾಗಿದ್ದರು. ದ್ರೌಪದಿಯ ಸಹಾಯಕ್ಕೆ ಯಾರು ಬರಲಿಲ್ಲ ಆಗ ದ್ರೌಪದಿಯ ಆ ಒಂಟಿತನ ಕೇವಲ ವ್ಯಕ್ತಿಯೊಬ್ಬಳ ಅಸಹಾಯಕತೆಯಲ್ಲ, ಬದಲಿಗೆ ಇಡೀ ಜಗತ್ತೇ ಕೈಬಿಟ್ಟಾಗ ಅನುಭವಿಸುವ ಅತಿದೊಡ್ಡ ಶೂನ್ಯ. ಯಾರು ಸಹಾಯಕ್ಕೆ ಬರಲಿಲ್ಲ ಎಂಬ ನೋವು ಅವಳನ್ನು ಅಗ್ನಿಪುತ್ರಿಯನ್ನಾಗಿ ಮಾಡಿತು. ಅವತ್ತು ಅವಳು ಒಂಟಿಯಾಗಿ ಗೆದ್ದಿದ್ದಕ್ಕೇ ಕುರುಕ್ಷೇತ್ರದ ಕಿಡಿ ಹತ್ತಿತು. ದ್ರೌಪದಿಯ ಆ ಕಥೆ ನಮಗೆ ಹೇಳುವುದು ಒಂದೇ ಜಗತ್ತು ನಿಮ್ಮ ಬೆನ್ನಿಗೆ ನಿಲ್ಲದಿದ್ದಾಗ, ನಿಮ್ಮ ಆತ್ಮಗೌರವಕ್ಕಾಗಿ ನೀವೊಬ್ಬರೇ ನಿಲ್ಲಬೇಕಾಗುತ್ತದೆ. ಆ ಒಂಟಿ ಹೋರಾಟವೇ ಮನುಷ್ಯನಿಗೆ ನಿಜವಾದ ಮಹಾಜಯವನ್ನು ತಂದುಕೊಡುತ್ತದೆ. ಮತ್ತು ದಶರಥ ಮಹಾರಾಜನಿಗೆ ನಾಲ್ಕು ಜನ ಮಕ್ಕಳಿದ್ದರು ಆದರೆ ದಶರಥ ಮಹಾರಾಜ ಕೊನೆ ಉಸಿರೆಳೆಯುವಾಗ ನಾಲ್ಕು ಜನ ಮಕ್ಕಳು ಕೂಡ ಇರಲಿಲ್ಲ ಈ ಮೂಲಕ ತಿಳಿಯುವುದೇನೆಂದರೆ ಎಲ್ಲರಿದ್ದರು ಕೊನೆಗೆ ಒಬ್ಬಂಟಿ ಎಂಬ ಭಾವನೆ. ಹಾಗೂ ರಾಮ ಲಕ್ಷ್ಮಣ ಇವರಿಬ್ಬರೂ ಬಹಳ ಶ್ರೇಷ್ಠವಂತರು ಮತ್ತು ಪ್ರಭುದ್ಧರು. ಹೀಗೆ ಒಂದು ಸಂದರ್ಭದಲ್ಲಿ ರಾವಣ ಬಂದು ಸೀತಾಮಾತೆಯನ್ನು ಅಪಹರಿಸಿಕೊಂಡು ಹೋಗುವಾಗ ಆ ಸಂದರ್ಭದಲ್ಲಿ ಲಕ್ಷ್ಮಣನ ರೇಖೆಯು ಕೂಡ ಏನು ಮಾಡಲಿಕ್ಕೆ ಸಾಧ್ಯವಾಗಲಿಲ್ಲ ಜೊತೆಗೆ ರಾಮನ ದಿವ್ಯಶಕ್ತಿಯು ಕೂಡ ಏನು ಸಹಾಯ ಮಾಡಲಿಕ್ಕೆ ಆಗಲಿಲ್ಲ ಹಾಗಾಗಿ ಬದುಕಿನಲ್ಲಿ ನಮಗೆ ಕಷ್ಟ ಬಂದಾಗ ನಮ್ಮನ್ನು ನಾವೇ ಎದುರಿಸುವಂತಹ ಕ್ಷಣ ಬರಬೇಕು. ಅವಾಗಿನ ದಿನಗಳಲ್ಲಿ ಯಾರೋ ಒಬ್ಬರು ಬಂದು ಕಾಡುಗಲ್ಲಾದ ನಮ್ಮನ್ನು ಶಿಲೆಯನ್ನಾಗಿ ಕೆತ್ತನೆ ಮಾಡುತ್ತಿದ್ದರು ಎಂಬ ಮಾತುಗಳು ಆ ದಿನಗಳಲ್ಲಿ ಕೇಳಿ ಬರುತ್ತಿದ್ದವು ಆದರೆ ಪ್ರಸ್ತುತ ದಿನಮಾನಗಳಲ್ಲಿ ಶಿಲೆಯು ನಾವೇ ಶಿಲ್ಪಿಯು ನಾವೇ ನಮ್ಮನ್ನು ನಾವೇ ಹೇಗೆ ಬೇಕು ಹಾಗೆ ಕೆತ್ತನೆ ಮಾಡಿಕೊಳ್ಳಬಹುದು ಇಂತಹ ಸಂದರ್ಭದಲ್ಲಿ  ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳುವ ಪರಿಸ್ಥಿತಿ ಇರುತ್ತದೆ. ನಾವು ಜೀವನದಲ್ಲಿ ಏನಾಗಬೇಕು ಎಂದು ಅಂದುಕೊಂಡಿರುತ್ತವೆಯೋ ಅದು ನಾವಾಗುತ್ತೇವೆ ಹಾಗಾಗಿ ಅವರಿದ್ದಾರೆ, ಇವರಿದ್ದಾರೆ, ಅವರು ಬರಲಿಲ್ಲ ಇವರು ಬರಲಿಲ್ಲ ಈ ರೀತಿಯ ಅನಾವಶ್ಯಕ ಚಿಂತನೆಗಳನ್ನು ಮಾಡುವ ಬದಲಿಗೆ ನಾವು ಒಬ್ಬರು ಇದ್ದೀವಲ್ಲ ಅಷ್ಟೇ ಸಾಕು. ಧೈರ್ಯದಿಂದ ನಾವಿರಬೇಕು.  ಆ ಕುರಿಯ ಗುಂಪಲ್ಲಿ ಒಬ್ಬರು ನಾವಾಗುವುದಕ್ಕಿಂತ, ಹುಲಿ,ಸಿಂಹ ಚಿರತೆಯಂತೆ ಒಂಟಿಯಾಗಿ ನಾವಿರೋಣ. ಒಂಟಿಯಾಗಿದ್ದರೂ ಕೂಡ ಧೈರ್ಯದಿಂದ ಬದುಕುವ ಶಕ್ತಿ ನಮ್ಮಲ್ಲಿರಲಿ. ನಾವು ಯಾವತ್ತೂ ಒಂಟಿಯಲ್ಲ ನಮ್ಮೊಂದಿಗೆ ನಮ್ಮ ಮನಸ್ಸು ಪರಿಶುದ್ಧ ಇದ್ದರೆ ನಮ್ಮ ಜೊತೆಗೆ ದೇವನು  ಇದ್ದೇ ಇರುತ್ತಾನೆ. 

ಸೋಲು ಮತ್ತು ತಿರಸ್ಕಾರಗಳನ್ನೇ ಸೋಪಾನವಾಗಿಸಿಕೊಂಡು ಸಾಧನೆಯ ಶಿಖರಕ್ಕೇರಿದ ಎಷ್ಟೋ ಮಹನೀಯರ ಬದುಕು ನಮಗೆ ದೊಡ್ಡ ಪಾಠ. ಜಗತ್ತು ಗೆದ್ದವರನ್ನು ಮಾತ್ರ ಗುರುತಿಸುತ್ತದೆ, ಆದರೆ ಆ ಗೆಲುವಿನ ಹಿಂದೆ ಬಿದ್ದ ಕಣ್ಣೀರು ಮತ್ತು ಅನುಭವಿಸಿದ ಅವಮಾನದ ಕಥೆ ಯಾರಿಗೂ ತಿಳಿಯುವುದಿಲ್ಲ. ಅನೇಕ ಸಾಧಕರ ಬದುಕನ್ನು ಗಮನಿಸಿದರೆ, ಅವರಿಗೆ ಆರಂಭದಲ್ಲಿ ಸಿಕ್ಕಿದ್ದು ಪ್ರೋತ್ಸಾಹವಲ್ಲ, ಬದಲಾಗಿ ಕಟು ಟೀಕೆ ಮತ್ತು ತಿರಸ್ಕಾರ. ಎಷ್ಟೋ ಜನರನ್ನು ನಿನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಮನೆಯಿಂದ ಹೊರಹಾಕಲಾಗಿದೆ, ಸಮಾಜ ಅವರನ್ನು ಹುಚ್ಚರೆಂದು ಕರೆದು ದೂರ ತಳ್ಳಿದೆ. ಆದರೆ, ಈ ಒಂಟಿತನವೇ ಅವರಿಗೆ ಶಕ್ತಿಯಾಯಿತು. ಸುತ್ತಲೂ ಯಾರೂ ಇಲ್ಲದಿದ್ದಾಗ, ಅವರಿಗೆ ತಮ್ಮ ಒಳಗಿನ ಧ್ವನಿ ಕೇಳಿಸತೊಡಗಿತು. ಮನೆಯಿಂದ ಹೊರಬಂದಾಗ ದಾರಿ ಕಾಣದಿದ್ದರೂ, ತಮ್ಮ ಗುರಿಯ ಮೇಲೆ ಅವರಿಗೆ ಅಚಲ ನಂಬಿಕೆಯಿತ್ತು. ಹಸಿವು, ನಿದ್ರೆಯಿಲ್ಲದ ರಾತ್ರಿಗಳು ಮತ್ತು ಪ್ರೀತಿಪಾತ್ರರ ಅಗಲಿಕೆಯ ನೋವು ಅವರನ್ನು ಎದೆಗುಂದಿಸುವ ಬದಲು, ಮತ್ತಷ್ಟು ಗಟ್ಟಿಯಾಗಿಸಿತು. ಸಾಧಕರು ಒಂಟಿಯಾಗಿ ಬದುಕಲು ಬಯಸುವುದಿಲ್ಲ, ಆದರೆ ಅವರ ಸತ್ಯ ಮತ್ತು ಕನಸುಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವರು ಕಾಡಿನ ಮಧ್ಯೆ ಬೆಳಗುವ ದೀಪದಂತೆ ಆರಂಭದಲ್ಲಿ ಕತ್ತಲೆಯಲ್ಲಿ ಏಕಾಂಗಿಯಾಗಿ ಹೋರಾಡುತ್ತಾರೆ. ಒಮ್ಮೆ ಅವರ ಸಾಧನೆಯ ಬೆಳಕು ಜಗತ್ತಿಗೆ ಕಂಡಾಗ, ಅಂದು ಅವರನ್ನು ದೂರ ತಳ್ಳಿದವರೇ ಇಂದು ಅವರ ನೆರಳಿಗಾಗಿ ಕಾಯುತ್ತಾರೆ.
ಒಂಟಿತನವು ಶಾಪವಲ್ಲ, ಅದು ತನ್ನನ್ನು ತಾನು ಕಂಡುಕೊಳ್ಳುವ ಒಂದು ತಪಸ್ಸು. ಯಾರೂ ಇಲ್ಲದಿದ್ದರೂ ಪರವಾಗಿಲ್ಲ, ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದರೆ ಇಡೀ ಜಗತ್ತೇ ನಿಮ್ಮ ಹಿಂದೆ ಬರುವ ಕಾಲ ಬಂದೇ ಬರುತ್ತದೆ. 

ಇನ್ನೊಂದು ಉದಾಹರಣೆ ಹೇಳುವುದಾದರೆ ಶಾಲೆಯಿಂದ ಹೊರಹಾಕಲ್ಪಟ್ಟ ಆ ನೋವು ಥಾಮಸ್ ಎಡಿಸನ್ ಅವರನ್ನು ಕುಗ್ಗಿಸಲಿಲ್ಲ. ಬದಲಾಗಿ, ಜಗತ್ತಿನಲ್ಲಿ ಕತ್ತಲೆ ಎನ್ನುವುದಿಲ್ಲ, ಬೆಳಕನ್ನು ಸೃಷ್ಟಿಸಲು ನಮಗೆ ಇನ್ನೂ ಸರಿಯಾಗಿ ತಿಳಿದಿಲ್ಲವಷ್ಟೇ ಎಂದು ನಂಬಿ ಸಾವಿರ ಬಾರಿ ಸೋತರೂ ಛಲ ಬಿಡದೆ ಬಲ್ಬ್ ಕಂಡುಹಿಡಿದರು. ಇಂದು ಜಗತ್ತು ಬೆಳಗುತ್ತಿದೆ ಎಂದರೆ ಅದಕ್ಕೆ ಕಾರಣ ಅಂದು ಎಡಿಸನ್ ಅನುಭವಿಸಿದ ಅವಮಾನ ಮತ್ತು ಅದನ್ನು ಸನ್ಮಾನವನ್ನಾಗಿ ಬದಲಿಸಿದ ಅವರ ಅಚಲ ಪರಿಶ್ರಮ. ಇದು ಅವಮಾನವನ್ನು ಅವಕಾಶವನ್ನಾಗಿ ಬದಲಿಸಿದ ಅತೀ ದೊಡ್ಡ ಜೀವನ ಪಾಠ.

ಜೀವನದ ಹಾದಿಯಲ್ಲಿ ನಮಗೆ ಅತಿ ಹತ್ತಿರದವರು ಎನ್ನಿಸುವ ಅಣ್ಣ-ತಮ್ಮಂದಿರಾಗಲಿ, ಹೆಂಡತಿ-ಮಕ್ಕಳಾಗಲಿ ನಮ್ಮಿಂದ ದೂರಾದಾಗ ಅಥವಾ ನಮ್ಮನ್ನು ಅರ್ಥಮಾಡಿಕೊಳ್ಳದಿದ್ದಾಗ ಮನಸ್ಸು ಭಾರವಾಗುವುದು ಸಹಜ. ನನ್ನವರು ಯಾರು ಇಲ್ಲ ಎಂಬ ಒಂಟಿತನ ನಮ್ಮನ್ನು ಕಾಡತೊಡಗುತ್ತದೆ. ಆದರೆ ಈ ಪ್ರಪಂಚದಲ್ಲಿ ಯಾರೂ ನಿಜವಾಗಿ ಒಬ್ಬಂಟಿಯಲ್ಲ. ಜನರು ಕೈಬಿಟ್ಟರೂ ದೇವರು ಎಂದಿಗೂ ಕೈಬಿಡುವುದಿಲ್ಲ. ನಾವು ಹುಟ್ಟುವಾಗಲೂ ಒಬ್ಬರೇ ಬಂದೆವು, ಹೋಗುವಾಗಲೂ ಒಬ್ಬರೇ ಹೋಗುತ್ತೇವೆ. ಹಾಗಾಗಿ, ಈ ನಡುವೆ ಸಿಗುವ ಸಂಬಂಧಗಳು ಬದುಕಿನ ಪಾಠಗಳಷ್ಟೇ. ಮನಸ್ಸನ್ನು ದೃಢವಾಗಿಟ್ಟುಕೊಂಡು, ಆ ದೇವರ ಮೇಲಿನ ಭಕ್ತಿಯಲ್ಲಿ ಶಾಂತಿಯನ್ನು ಕಂಡುಕೊಳ್ಳಿ. ನೆನಪಿರಲಿ ನೀವು ಒಬ್ಬಂಟಿಯಲ್ಲ ದೇವರ ಕೃಪೆ ಸದಾ ನಿಮ್ಮನ್ನು ಕಾಯುತ್ತಿದೆ. ನಾವೆಂದು ಒಬ್ಬಂಟಿಯಲ್ಲ ದೇವರಿದ್ದಾನೆ ನಮ್ಮ ಜೊತೆಯಲ್ಲಿ ಎಂಬ ಭಾವನೆ ನಮ್ಮಲ್ಲಿರಬೇಕು. 

ಕಣ್ಣಿನ ರೆಪ್ಪೆಯಂತೆ ಕಾಪಾಡಿ ತುತ್ತು ಅನ್ನವನ್ನು ಮಕ್ಕಳಿಗಾಗಿ ಮೀಸಲಿಟ್ಟು ಬೆಳೆಸಿದ ಪೋಷಕರಿಗೆ, ಇಂದು ಅದೇ ಮಕ್ಕಳು ಒಬ್ಬಂಟಿ ಎಂಬ ಹಣೆಪಟ್ಟಿ ಕಟ್ಟುವುದು ಅತಿದೊಡ್ಡ ವಿಧಿಯ ವೈಪರೀತ್ಯ. ಯಾವ ಮಗುವಿನ ಮೊದಲ ಹೆಜ್ಜೆಗಾಗಿ ನಾವು ಕೈಹಿಡಿದು ನಡೆಸಿದ್ದೆವೋ, ಇಂದು ಅದೇ ಮಗು ನಮ್ಮನ್ನು ಬಿಟ್ಟು ಮಾರುದೂರ ಹೋಗಿ ನಿಂತಾಗ ಎದೆ ಸೀಳುವಂತಹ ನೋವಾಗುತ್ತದೆ. ಮನೆಯನ್ನು ಬೆಳಗಲು ಬಂದ ಸೊಸೆ, ಮನೆಯ ದೀಪವನ್ನೇ ಆರಿಸುವ ಹಂತಕ್ಕೆ ಹೋದಾಗಲೂ ಮಗ ಮೌನವಾಗಿರುವುದು ಹೆತ್ತವರಿಗೆ ಸತ್ತ ಸಮಾನ. ಹೆಂಡತಿಯ ಮೇಲಿನ ಪ್ರೀತಿ ಇರಲಿ ಆದರೆ ಅದು ಹೆತ್ತವರ ಮೇಲಿನ ಋಣವನ್ನು ಮರೆಯುವಂತೆ ಮಾಡಬಾರದು. ನೆನಪಿರಲಿ, ಇಂದು ನಿಮ್ಮ ತಂದೆ-ತಾಯಿಗೆ ನೀವು ಏನು ಮಾಡುತ್ತೀರೋ, ನಾಳೆ ನಿಮ್ಮ ಮಕ್ಕಳಿಂದ ನಿಮಗೂ ಅದೇ ಕಾದಿರುತ್ತದೆ. ಕಾಲದ ಚಕ್ರ ಯಾರಿಗೂ ಯಾವುದನ್ನೂ ಬಾಕಿ ಉಳಿಸಿಕೊಳ್ಳುವುದಿಲ್ಲ. ಕೊನೆಯದಾಗಿ ಹೇಳುವುದಾದರೆ ಹೆತ್ತವರು ಎಂದಿಗೂ ಮಕ್ಕಳ ಕೆಟ್ಟದ್ದನ್ನು ಬಯಸುವುದಿಲ್ಲ. ನೀವು ದೂರ ಹೋದರೂ ಅವರು ಬಯಸುವುದು ನಿಮ್ಮ ಸುಖವನ್ನೇ. ಆದರೆ ಆ ಸುಖದ ನಡುವೆ ಒಮ್ಮೆಯಾದರೂ ನಿಮ್ಮನ್ನು ಬೆಳೆಸಿದ ಆ ಕೈಗಳ ನೆನಪಾಗಲಿ.

ಯಾರು ನಮ್ಮನ್ನು ಬಿಟ್ಟು ಹೋಗಿದ್ದಾರೋ ಅವರು ನಮ್ಮ ಜೀವನದ ಸುಂದರ ಭವಿಷ್ಯದಲ್ಲಿ ಇರಲು ಅರ್ಹರಲ್ಲ ಎಂದೇ ಅರ್ಥ. ಹಳೆಯ ಎಲೆಗಳು ಉದುರಿದಾಗಲೇ ಮರಕ್ಕೆ ಹೊಸ ಚಿಗುರು ಬರಲು ಸಾಧ್ಯ. ಹಾಗೆಯೇ, ಅರ್ಹತೆಯಿಲ್ಲದವರು ಹೋದಾಗಲೇ ನಮಗೆ ಅರ್ಹರಾದವರು ಸಿಗಲು ದಾರಿಯಾಗುತ್ತದೆ. ನಿಮ್ಮ ಯಶಸ್ಸು ಮತ್ತು ಸಂತೋಷವೇ ನಿಮ್ಮನ್ನು ಬಿಟ್ಟು ಹೋದವರಿಗೆ ನೀವು ನೀಡುವ ದೊಡ್ಡ ಉತ್ತರವಾಗಲಿ.

ಯಾರು ನಿಮ್ಮ ಕಣ್ಣೀರಿಗೆ ನಿಜವಾಗಿಯೂ ಅರ್ಹರೋ ಅವರು ಎಂದಿಗೂ ನೀವು ಕಣ್ಣೀರು ಹಾಕುವಂತೆ ಮಾಡುವುದಿಲ್ಲ. ಆದರೆ ನಿಮ್ಮ ಕಣ್ಣೀರಿಗೆ ಯಾರು ಯೋಗ್ಯರಲ್ಲ ಅವರಿಗಾಗಿ ನೀವು ಕಣ್ಣೀರು ಹಾಕುವುದು ವ್ಯರ್ಥ,ಸ್ವಾಮಿ ವಿವೇಕಾನಂದರ ಈ ಮಾತುಗಳು ಮಾನವ ಸಂಬಂಧಗಳ ಆಳವಾದ ಸತ್ಯವನ್ನು ಬಿಂಬಿಸುತ್ತವೆ. ಬದುಕಿನಲ್ಲಿ ಎಲ್ಲರಿಗೂ ಸ್ಥಾನ ಕೊಡಬೇಡಿ. ನಿಮ್ಮ ಕಣ್ಣೀರಿಗೆ ಬೆಲೆ ನೀಡುವವರಿಗೆ ಮಾತ್ರ ನಿಮ್ಮ ಹೃದಯದಲ್ಲಿ ಜಾಗ ನೀಡಿ. ಏಕೆಂದರೆ ನಿಮ್ಮ ಕಣ್ಣೀರನ್ನು ಹರಿಯದಂತೆ ಕಾಪಾಡುವವನೇ ನಿಮ್ಮ ಪಾಲಿನ ನಿಜವಾದ ಆಪ್ತ. ಒಂಟಿತನ ಎಂಬುದು ಒಂದು ಶಿಕ್ಷೆಯಲ್ಲ, ಅದು ಒಂದು ತಪಸ್ಸು. ಯಾರೂ ಇಲ್ಲದಾಗಲೂ ನಗುನಗುತ ಬದುಕು ಸಾಗಿಸುವುದೇ ನಿಜವಾದ ಗೆಲುವು. ನಮ್ಮ ಬದುಕಿಗೆ ನಾವೇ ಶಿಲ್ಪಿಗಳು, ನಾವೇ ದಾರಿಗಳು.

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      


ಹೊಸ ವರ್ಷಕ್ಕೆ ನಮ್ಮ ಬದಲಾವಣೆ

ಹಳೆ ವರ್ಷ ಕಳೆದು ಹೊಸ ವರ್ಷ ಬರುವುದು ನಮ್ಮ ಜೀವನದಲ್ಲಿ ಒಂದು ಮಹತ್ವದ ಘಟ್ಟ. ಇದು ಹಿಂದಿನ ವರ್ಷದ ಸಾಧನೆಗಳು ಮತ್ತು ತಪ್ಪುಗಳಿಂದ ಕಲಿತು ಹೊಸ ಗುರಿಗಳನ್ನು ಹಾಕಿಕೊಳ್ಳುವ ಸಮಯ. ಈ ದಿನವು ಹೊಸ ಆರಂಭಗಳು ಹೊಸ ಅವಕಾಶಗಳು ಮತ್ತು ಹೊಸ ಸಂಕಲ್ಪಗಳ ಸಮಯವಾಗಿದೆ. ಹೊಸ ವರ್ಷವು ಹಿಂದಿನ ವರ್ಷದ ಸಾಧನೆಗಳು ಮತ್ತು ತಪ್ಪುಗಳನ್ನು ಪ್ರತಿಬಿಂಬಿಸುವ ಸಮಯವೂ ಆಗಿದೆ. ಇದು ನಾವುಗಳು ನಮ್ಮ ಜೀವನದಲ್ಲಿ ಏನು ಕೆಲಸ ಮಾಡಿದ್ದೇವೆ ಮತ್ತು ಏನು ಕೆಲಸ ಮಾಡಿಲ್ಲ ಎಂಬುದನ್ನು ಪರಿಗಣಿಸಲು ಮತ್ತು ಹೊಸ ವರ್ಷಕ್ಕೆ ಹೊಸ ಗುರಿಗಳನ್ನು ಹಾಕಿಕೊಳ್ಳಲು ಒಂದು ಅವಕಾಶವಾಗಿದೆ.

ಕಳೆದ ವರ್ಷವು ನಮಗೆ ಅನೇಕ ಕಹಿ ನೆನಪುಗಳನ್ನು ನೀಡಿರಬಹುದು. ನೋವು, ನಷ್ಟ, ಮತ್ತು ಸವಾಲುಗಳು ನಮ್ಮನ್ನು ಕಾಡಿರಬಹುದು. ಆದರೆ, ಹೊಸ ವರ್ಷವು ನಮಗೆ ಹೊಸ ಕನಸುಗಳನ್ನು ಕಾಣಲು, ಹೊಸ ಗುರಿಗಳನ್ನು ಹಾಕಿಕೊಳ್ಳಲು ಮತ್ತು ಹೊಸ ಆರಂಭಗಳನ್ನು ಮಾಡಲು ಅವಕಾಶ ನೀಡುತ್ತದೆ. ಇದು ನಮ್ಮ ಹಿಂದಿನ ತಪ್ಪುಗಳಿಂದ ಅನುಭವಗಳನ್ನು ಕಲಿತು, ಹೊಸ ದಾರಿಯಲ್ಲಿ ಸಾಗಲು ಮತ್ತು ಹೊಸ ಸಾಧನೆಗಳನ್ನು ಮಾಡಲು ಒಂದು ಅವಕಾಶವಾಗಿದೆ. ಹೊಸ ವರ್ಷವು ನಮಗೆ ಹೊಸ ಕನಸುಗಳನ್ನು ಕಾಣಲು ಮತ್ತು ಹೊಸ ಗುರಿಗಳನ್ನು ಹಾಕಿಕೊಳ್ಳಲು ಒಂದು ಅವಕಾಶವಾಗಿದೆ. ನಾವು ನಮ್ಮ ಕನಸುಗಳನ್ನು ನನಸಾಗಿಸಲು ಶ್ರಮಪಟ್ಟರೆ, ನಾವು ಯಶಸ್ಸನ್ನು ಸಾಧಿಸಬಹುದು.

ಹೊಸ ವರ್ಷಕ್ಕೆ ನಮ್ಮ ಬದಲಾವಣೆ


ಹೊಸ ವರ್ಷದಲ್ಲಿ ನಾವು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳೋಣ ನಾವು ನಮ್ಮ ಗುರಿಗಳನ್ನು ಮರುಪರಿಶೀಲಿಸಿಕೊಳ್ಳೋಣ ನಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳೋಣ ಮತ್ತು ನಮ್ಮ ಸಂಬಂಧಗಳನ್ನು ಬಲಪಡಿಸಿಕೊಳ್ಳೋಣ. ಈ ದಿನದಂದು ಹೊಸ ಸಂಕಲ್ಪಗಳನ್ನು ಮಾಡೋಣ.  ಆರೋಗ್ಯಕರ ಜೀವನ, ಉತ್ತಮ ಅಭ್ಯಾಸಗಳು, ಮತ್ತು ವೈಯಕ್ತಿಕ ಬೆಳವಣಿಗೆಯ ಕಡೆ ಗಮನ ಹರಿಸೋಣ. ಇದು ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಒಂದು ಉತ್ತಮ ಸಮಯವಾಗಿದೆ. 

ಪ್ರತಿಯೊಂದು ವರ್ಷದ ಕೊನೆ ಮತ್ತು ಇನ್ನೊಂದು ವರ್ಷದ ಆರಂಭವು ನಮಗೆಲ್ಲರಿಗೂ ಒಂದು ವಿಶೇಷ ಭಾವನೆ ತರುತ್ತದೆ. ಇದು ಕೇವಲ ಕ್ಯಾಲೆಂಡರ್ ಬದಲಾವಣೆಯಲ್ಲ, ಇದು ನಮ್ಮ ಜೀವನದ ಪುಟಗಳನ್ನು ತಿರುಗಿಸಿ, ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಅವಕಾಶ. ಹೋದ ವರ್ಷದ ಕಹಿ ನೆನಪುಗಳನ್ನು ಬಿಟ್ಟು, ಹೊಸ ವರ್ಷದ ಸಂತೋಷ ಮತ್ತು ಭರವಸೆಯನ್ನು ಸ್ವಾಗತಿಸುವುದೇ ಇದರ ಮುಖ್ಯ ಉದ್ದೇಶ. ಕಳೆದ ವರ್ಷದ ತಪ್ಪುಗಳಿಂದ ಪಾಠ ಕಲಿಯಬೇಕು. ನಾವು ಎಲ್ಲಿ ತಪ್ಪು ಮಾಡಿದೆವು ಯಾವುದನ್ನು ಸುಧಾರಿಸಿಕೊಳ್ಳಬೇಕು ಎಂದು ಯೋಚಿಸಬೇಕು. ಹೋದ ವರ್ಷದ ನಿರಾಸೆ, ನೋವು, ಮತ್ತು ವೈಫಲ್ಯಗಳು ಕೇವಲ ಅನುಭವಗಳಾಗಿವೆ, ಅವುಗಳನ್ನು ಹೊತ್ತುಕೊಂಡು ಹೋಗುವ ಬದಲು, ಅವುಗಳಿಂದ ಹೊರಬರಬೇಕು. ಹೊಸ ವರ್ಷದ ಸಂಭ್ರಮ ಕೇವಲ ಒಂದು ದಿನದ ಆಚರಣೆಯಲ್ಲ. ಅದು ನಮ್ಮನ್ನು ನಾವು ಪುನರ್ನಿರ್ಮಿಸಿಕೊಳ್ಳುವ ಉತ್ತಮ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವ ಒಂದು ಸುವರ್ಣಾವಕಾಶ. ಹೋದ ವರ್ಷದ ಯಾತನೆಗಳನ್ನು ಮರೆತು, ಹೊಸ ವರ್ಷದ ಆಶಾದೀಪದೊಂದಿಗೆ, ಸಂತೋಷ, ನೆಮ್ಮದಿ, ಮತ್ತು ಯಶಸ್ಸಿನ ಕಡೆಗೆ ಸಾಗೋಣ.

ವರ್ಷದ ಕೊನೆ ಬಂತು ಎಂದರೆ ನಾವು ನಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತೇವೆ. ಇನ್ನೊಂದು ವಾರ ಕಳೆದರೆ ಹೊಸ ವರ್ಷ. ಎಲ್ಲರಿಗೂ ಹೊಸ ಹರ್ಷ ತರಲಿ ಎನ್ನುವುದು ನಮ್ಮ ಆಶಯ. ಜೀವನದ ಪಯಣದಲ್ಲಿ ಹೊಸ ವರ್ಷ ಹರುಷ ತರಲಿ ನವ ಬಾಳು ಬೆಳಗಲಿ ನವಚೈತನ್ಯ ಚಿಮ್ಮಲಿ ಕಹಿ ನೋವುಗಳು ತೊಲಗಲಿ ಸಿಹಿ ನಲಿವುಗಳು ಬರಲಿ ಹೊಸವರ್ಷದಂದು ಹೊಸ ಆಲೋಚನೆಯ ಹೊಳೆಯಲ್ಲಿ ಬಾಳಿನ ಸುಖ ಸಾಗಲಿ. ಅದೇ ರೀತಿ ಈಗ ಹಳೆಯ ನೋವು, ನೆನಪುಗಳನ್ನೆಲ್ಲಾ ಬದಿಗೆ ಸರಿಸಿ ಹೊಸ ನಿರೀಕ್ಷೆ ಹಾಗೂ ಕನಸುಗಳೊಂದಿಗೆ ಮತ್ತೊಂದು ಹೊಸ ವರ್ಷವನ್ನು ನಾವು ಬರಮಾಡಿಕೊಳ್ಳುತ್ತಿದೇವೆ. ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ಹಲವು ಹೊಸತನಗಳೊಂದಿಗೆ ಹೊಸ ಹರ್ಷ ತರಲಿ ಹರ್ಷ ಎಂದು ಹಾರೈಸುವೆವು.

ಕ್ಯಾಲೆಂಡರ್ ಬದಲಾಯಿಸುವುದರ ಜೊತೆಗೆ ಕೆಟ್ಟ ಕ್ಯಾರೆಕ್ಟರ್ ಗಳನ್ನು ಬದಲಾಯಿಸಿ.ಸಾವಿರ ದುಃಖಗಳು ದೂರವಾಗಲಿ ಸಾವಿರ ಸುಖಗಳು ಸುಳಿಯಲಿ ನೀವು ಅಂದುಕೊಂಡ ಕಾರ್ಯಗಳು ಯಶಸ್ವಿಯಾಗಲಿ ಆ ಭಗವಂತ ಅಂತಸ್ತು,ಆರೋಗ್ಯ,ಆಯುಷ್ಯ ಕೊಟ್ಟು ಕಾಪಾಡಲಿ. ಬದಲಾಗುತ್ತಿರುವುದು ಕ್ಯಾಲೆಂಡರ್ ಮಾತ್ರ ಆದರೆ ನೆನಪುಗಳು ಎಂದೆಂದಿಗೂ ಶಾಶ್ವತ.ಕಷ್ಟ ಕಾರ್ಪಣ್ಯಗಳು ತೊಲಗಲಿ ಸುಖ ನೆಮ್ಮದಿ ಬರಲಿ ಈ ಹೊಸವರ್ಷ ಎಲ್ಲರ ಬಾಳಲ್ಲಿ ಹೊಸತನದಿಂದ ಕೂಡಿರಲಿ. ಇಷ್ಟು ವರ್ಷಗಳಲ್ಲಿ ಆಗದೇ ಇರುವ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಈ ವರ್ಷ ಭಗವಂತನ ಆಶೀರ್ವಾದದಿಂದ ಯಶಸ್ವಿಯಾಗಲಿ. 365 ದಿನಗಳ ಪುಸ್ತಕದಲ್ಲಿ ಇವತ್ತಿನ ದಿನ ಮೊದಲ ಪುಟ ಸಂತೋಷದಿಂದ ಕೂಡಿರಲಿ. ನೀವು ನಿಮ್ಮ ಕುಟುಂಬ ಸದಾ ಸುಖ ಶಾಂತಿಯಿಂದ ನೆಮ್ಮದಿಯಿಂದ ಬಾಳಿರಿ.

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಪ್ರೀತಿಯ ಶುಭಾಶಯಗಳು


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      


ಹುಟ್ಟಿ ಬರಲಿ ಕನಕದಾಸರು ಮನೆ ಮನೆಯಲ್ಲಿಯು

 

ಕನ್ನಡ ಭಾಷೆಯ ವಿಶಿಷ್ಟವಾದ ದಾಸಶ್ರೇಷ್ಠರು
ಭಕ್ತಿ ಭಾವಕೆ ಅಜರಾಮರದ ಹೆಸರು                       
ಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು
ಕಾಗಿನೆಲೆಯ ನಿವಾಸಿ ಶ್ರೀ ಭಕ್ತ ಕನಕದಾಸರು

ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕ 
ಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕ 
ವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕ 
ತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ

ಶ್ರೀವ್ಯಾಸರಾಯರ ಪ್ರೀತಿಯ ಮೆಚ್ಚಿನ ಶಿಷ್ಯರಾಗಿ 
ಉಡುಪಿ ದೇಗುಲದಿ ಕನಕನ ಕಿಂಡಿಗೆ ಹೆಸರಾಗಿ
ಲೋಕ ಕಲ್ಯಾಣದಿ ಕೃಷ್ಣನ ಪ್ರೀತಿಯ ಭಕ್ತರಾಗಿ 
ಜಾತಿ ವ್ಯವಸ್ಥೆಯ ತಿರಸ್ಕರಿಸಿದರು ಮನುಕುಲಕ್ಕಾಗಿ

ಕಾಗಿನೆಲೆ ಆದಿಕೇಶವರಾಯರ ಅಂಕಿತದಲಿ 
ಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ ಸ್ಮರಣೆಯಲಿ 
ಮೋಹನ ತರಂಗಿಣಿ ನಳಚರಿತ್ರೆ ಕೃತಿಗಳಲಿ 
ಹಲವು ವೈಶಿಷ್ಟತೆಗಳು ತಲೆಯೆತ್ತಿವೆ ಪುಟಗಳಲಿ

ಅನುದಿನ ಸತತವಾಗಿ ಶ್ರೀಕೃಷ್ಣನ ಕೀರ್ತನೆಯು
ನಾಡಿನೆಲ್ಲೆಡೆ ಹಬ್ಬಿದೆ ಕನಕದಾಸರ ಕೀರ್ತಿಯು 
ಎತ್ತ ನೋಡಿದರೆತ್ತ ಸ್ಥಾಪಿಸಲಾಗಿದೆ ಅವರ ಮೂರ್ತಿಯು 
ಹುಟ್ಟಿ ಬರಲಿ ಕನಕದಾಸರು ಮನೆ ಮನೆಯಲ್ಲಿಯು

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

ಬೆಳಕಿನ ಹಬ್ಬ ದೀಪಾವಳಿ

 


ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ
ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ
ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ
ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿ

ಸ್ವಾರ್ಥ ಹೃದಯದಿ ನಿಸ್ವಾರ್ಥದ ಜ್ಯೋತಿಯ ಮೂಡಿಸಿ
ನೋವಿನ ನಡುವೆ ನೆಮ್ಮದಿಯ ದೀಪ ಹಚ್ಚಿಸಿ
ನಮ್ಮವರು ತಮ್ಮವರೆಂಬ ಸೌಜನ್ಯದ ಜ್ಯೋತಿ ಸ್ಮರಿಸಿ
ದೀಪದಿಂದ ದೀಪವ ಹಚ್ಚಿ ದೀಪಾವಳಿಯ ಸಂಭ್ರಮಿಸಿ 

ಕತ್ತಲೆಯ ಮಧ್ಯದಲಿ ಭವಿಷ್ಯದ ದೀಪವ ಕಾಣಿಸಿ
ಸೋಲುಗಳ ನಡುವೆ ಗೆಲುವಿನ ದೀಪವ ಸ್ವೀಕರಿಸಿ
ದ್ವೇಷ ವೈಷಮ್ಯಗಳ ಆಕ್ರೋಶಗಳಲಿ
ಸ್ನೇಹದ ಜ್ಯೋತಿ ತೋರಿಸಿ
ಪಟಾಕಿಗಳ ಹಬ್ಬ ದೀಪಾವಳಿಯ ಪ್ರೀತಿಯಿಂದ ಸ್ವಾಗತಿಸಿ

ಅನ್ಯಾಯ ಅಕ್ರಮಗಳಲಿ ನ್ಯಾಯ ನೀತಿಯ ದೀಪ ಬೆಳಗಿಸಿ
ಅಧರ್ಮದ ಹಾದಿ ಬಿಟ್ಟು ಧರ್ಮದ ದೀಪ ಪೂಜಿಸಿ
ನಾನು ಎಂಬ ಅಹಂಕಾರದ ಮಧ್ಯೆ ನಾವು ಎಂಬ ಭಾವ ಇರಿಸಿ 
ಈ ದಿನ ಈ ಕ್ಷಣ ನಲಿವಿನ ದೀಪಾವಳಿಯ ಆಚರಿಸಿ

ನಿಸ್ವಾರ್ಥದ ಹಣತೆಯಲಿ, ನಂಬಿಕೆ ಎಂಬ ಬತ್ತಿಗೆ, ಮಾನವೀಯತೆಯ ಎಣ್ಣೆ ಹಾಕಿ, ಕಲ್ಮಶವಿಲ್ಲದ ಬೆಂಕಿಯೊಂದಿಗೆ ಆತ್ಮವಿಶ್ವಾಸದ ಜ್ಯೋತಿಯ ಬೆಳಗಿಸೋಣ, ದೀಪಾವಳಿಯ ಸಂಭ್ರಮಿಸೋಣ

ಸರ್ವರಿಗೂ ದೀಪಾವಳಿ ಹಬ್ಬದ ಪ್ರೀತಿಯ ಶುಭಾಶಯಗಳು

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

Happy Teachers Day , ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ

 

Happy Teachers Day , ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ

ನಾವು ಈ ಲೇಖನ ಬರೆಯುವುದಕ್ಕೆ ಕಾರಣ ನಮ್ಮ ಜೀವ, ಅದು ನಮ್ಮ ತಾಯಿಯ ಭಿಕ್ಷೆ. ನಾವು ಇಲ್ಲಿಯವರೆಗೆ ಬದುಕಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಜೀವನ, ಅದು ನಮ್ಮ ತಂದೆಯ ಭಿಕ್ಷೆ. ಈ ಜನ್ಮ ಜೀವನದಲ್ಲಿ ನಾವೆಲ್ಲ ಅಕ್ಷರಸ್ಥರು ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ಶಿಕ್ಷಣ, ಅದು ನಮ್ಮ ಗುರುಗಳ ಭಿಕ್ಷೆ. ಪ್ರತಿ ವ್ಯಕ್ತಿಯ ಹೃದಯದಲ್ಲಿ ಅಕ್ಷರದ ಬೀಜ ಬಿತ್ತಿ, ಆ ವ್ಯಕ್ತಿಯ ಬದುಕಿಗೆ ದಾರಿದೀಪವಾಗಿರುವ ಸಮಸ್ತ ಗುರು ಬಳಗಕ್ಕೆ ಈ ಲೇಖನವನ್ನ ಸಮರ್ಪಿಸುತ್ತಿದ್ದೇವೆ.
          ತುಮಕೂರಿನ ಸಿದ್ದಗಂಗಾ ಶ್ರೀಗಳು ಕಾಯಕಯೋಗಿಗಳಾದಂತೆ, ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳು ಗಾನಯೋಗಿಗಳಾದಂತೆ, ವಿಜಯಪುರದ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಜ್ಞಾನಯೋಗಿಗಳಾದಂತೆ, ಪ್ರತಿ ಶಾಲೆಯ ಸರ್ವ ಮಕ್ಕಳ ಮೆದುಳಿಗೆ ಅಕ್ಷರಗಳ ಜ್ಞಾನ ನೀಡುವ ಗುರುಗಳು ಅಕ್ಷರ ಯೋಗಿಗಳು ಎಂದರೆ ತಪ್ಪಾಗಲಾರದು. ರಾಜನು ಗೆಲ್ಲಲಾರದ ಕಳ್ಳನು ಕದಿಯಲಾಗದ ಅಣ್ಣ ತಮ್ಮಂದಿರಲ್ಲಿ ಭಾಗವಾಗದ ಎಷ್ಟು ಗಳಿಸಿದರು ಗಳಿಸಬೇಕೆನ್ನುವ ಎಷ್ಟು ಹಂಚಿದರು ಹಂಚ ಬೇಕೆನ್ನುವ ಬಚ್ಚಿಟ್ಟರೆ ಕೊಳೆಯುವ ಬಿಚ್ಚಿಟ್ಟರೆ ಬೆಳೆಯುವ ಸಂಪತ್ತು ಅದುವೇ ವಿದ್ಯಾ ಸಂಪತ್ತು. ಅಂತಹ ಸಂಪತ್ತನ್ನು ನಿಷ್ಕಲ್ಮಶವಾದ ಹೃದಯದಿಂದ ನಿಸ್ವಾರ್ಥದ ಮನೋಭಾವನೆಯಿಂದ ತಮ್ಮ ತಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಎಲ್ಲಾ ಗುರು ಗುರು ಮಾತೆಯರಿಗೆ ನಮ್ಮ ಪ್ರೀತಿ ತುಂಬಿದ ಹೃದಯದಿಂದ ಗೌರವದ ನಮನಗಳು.
           ಇತಿಹಾಸವನ್ನು ಒಮ್ಮೆ ಭಕ್ತಿಯಿಂದ ಕಂಡಾಗ ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮನಾಗಿದ್ದು ಅವರ ಗುರುಗಳಾದ ವಶಿಷ್ಟ ಮುನಿಯಿಂದ. ಅರ್ಜುನ ಮತ್ತು ಏಕಲವ್ಯ ಉತ್ತಮ ಬಿಲ್ವಿದ್ಯಾ ಪ್ರವೀಣರಾಗಿದ್ದು ದ್ರೋಣಾಚಾರ್ಯರಂತಹ ಗುರುಗಳಿಂದ. ಹಕ್ಕ ಬುಕ್ಕರು ಶತ್ರುಗಳ ದಾಳಿಯಿಂದ ಕೈ ತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆದದ್ದು ವಿದ್ಯಾರಣ್ಯರಂತಹ ಗುರುಗಳಿಂದ. ಶಿವಾಜಿ ಮಹಾರಾಜರು ಸೋತು ಬಸವಳಿದು  ಕಂಗೆಟ್ಟು ಕುಳಿತು ಮತ್ತೆ ತಮ್ಮ ಸಾಮ್ರಾಜ್ಯವನ್ನು ಪಡೆಯಲು ಮಾರ್ಗದರ್ಶನ ಮಾಡಿದ್ದು ಗುರುಗಳಾದ ಶ್ರೀರಾಮದರ್ಶರು.ಶ್ರೀ ಭೀಮರಾವ್ ಬರೆದ ಸಂವಿಧಾನ ಇಂದು ದೇಶದ ಹಣೆಬರಹವನ್ನು ನಿರ್ಧರಿಸುವ ಒಂದು ಸಂಹಿತೆಯಾಗಿದೆ ಅಂದರೆ ಅದು ಅವರ ಗುರುಗಳಾದ ಅಂಬೇಡ್ಕರ್ ಅವರಿಂದ. ಅಲೆಗ್ಸಾಂಡರ್ ಪ್ರಪಂಚವನ್ನೇ ಗೆಲ್ಲಲು ಹೊರಟಿದ್ದು ಹಿಂದೆ ಅರಿಸ್ಟಾಟಲ್ ಗುರು ಇದ್ದರು ಎಂಬ ಧೈರ್ಯದಿಂದ. ಅರಿಸ್ಟಾಟಲ್  ರವರ ಗುರು ಪ್ಲೇಟೋ, ಪ್ಲೇಟೋರವರ ಗುರು ಸಾಕ್ರೆಟಸ್. ಹೀಗೆ ಅನೇಕರ ಭವ್ಯ ಭವಿಷ್ಯತ್ತಿಗೆ ಮೇಣದ ಹಾಗೆ ತಮ್ಮನ್ನೇ ತಾವು ಸುಟ್ಟು ಪ್ರತಿ ವಿದ್ಯಾರ್ಥಿಯ ಬದುಕಿನಲ್ಲಿ ಜ್ಞಾನದ ಬೆಳಕನ್ನು ನೀಡುವ ಗುರು ಪರಂಪರೆಯನ್ನು ನೆನಪಿಸಿಕೊಂಡರೆ ಗುರು ಎಂದರೆ ಒಂದು ವ್ಯಕ್ತಿಯಲ್ಲ  ಒಂದು ಶಕ್ತಿ ಎಂಬ ಮಾತು ಸತ್ಯವಾದದ್ದು.
             ನೆನಪಿರಲಿ ಶಿಕ್ಷಕ ರಾಷ್ಟ್ರದ ನಿರ್ಮಾತೃ, ದೇಶದ ಬೆನ್ನೆಲುಬು ರೈತನಾದರೆ ವಿದ್ಯಾರ್ಥಿಯ ಬೆನ್ನೆಲುಬು ಶಿಕ್ಷಕ. ತಾಯಿಯೇ ಮೊದಲ ಗುರು ಗುರುವೇ ಎರಡನೆಯ ತಾಯಿ. ನಮ್ಮ ನಮ್ಮ ಶಾಲೆಯ ಮಕ್ಕಳಿಗೆ ತಾಯಿ ಪ್ರೀತಿ ನಿಡೋಣ. ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಹೇಳಿದಂತೆ ಶಿಕ್ಷಕ ತಾಯಿಯಂತಿರಬೇಕೇ ವಿನಹ ನಾಯಿಯಂತಿರಬಾರದು ಎಂಬ ಮಾತು ಪ್ರತಿಕ್ಷಣ ಮನದಲ್ಲಿರಲಿ. ನಾಳೆ ನಮ್ಮ ಸ್ವಂತ ಮಕ್ಕಳು ನಮಗೆ ಅನ್ನ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಮ್ಮ ಶಾಲಾ ಮಕ್ಕಳು ನಮಗೆ ಈವಾಗ್ಲೇ ಅನ್ನ ಕೊಡುತ್ತಿದ್ದಾರೆ. ನಮ್ಮಿಂದ ಅವರಲ್ಲ ಅವರಿಂದ ನಾವು. ಮಕ್ಕಳಿದ್ದರೆ ಶಾಲೆ ಶಾಲೆ ಇದ್ದರೆ ನಮಗೆ ಸಂಬಳ. ಬಿಲ್ ಮತ್ತು ಬೆಲ್ ಶಿಕ್ಷಕರಾಗದೆ ಪ್ರತಿ ವಿದ್ಯಾರ್ಥಿಯ ದಿಲ್ ಗೆಲ್ಲುವ ಶಿಕ್ಷಕರು ನಾವಾಗೋಣ.
                    ನಾಳೆ ನಮಗೆ ವಯಸ್ಸಾಗಿ ನಿವೃತ್ತಿಯಾದ ಮೇಲೆ ಯಾವುದೋ ಒಂದು ಕೆಲಸಕ್ಕಾಗಿ ಪೊಲೀಸ್ ಸ್ಟೇಷನ್ ಗೆ ಹೋದಾಗ ಅಲ್ಲಿ ಪಿಎಸ್ಐ ನಮ್ಮ ವಿದ್ಯಾರ್ಥಿಯೇ ಆಗಿರಬೇಕು. ಜಿಲ್ಲಾ ಆಡಳಿತ ಕಚೇರಿಗೆ ಹೋದಾಗ ಅಲ್ಲಿಯ ಜಿಲ್ಲಾಧಿಕಾರಿ ನಮ್ಮ ವಿದ್ಯಾರ್ಥಿಯೇ ಆಗಿರಬೇಕು. ಯಾವತ್ತೋ ಒಂದು ದಿನ ವಿಧಾನಸೌಧಕ್ಕೆ ಕಾಲಿಟ್ಟಾಗ ಅಲ್ಲಿ ಎಂಎಲ್ಎ ಹಾಗೂ ಮುಖ್ಯಮಂತ್ರಿ ಕೂಡಾ ನಮ್ಮ ವಿದ್ಯಾರ್ಥಿಯೇ ಆಗಿದ್ದರೆ ಎಷ್ಟು ಗೌರವ ಇದು ವಿಚಾರಿಸಬೇಕಾದ ವಿಷಯ. ಯಾವತ್ತಾದರೂ ಒಂದು ದಿನ ನಾವು ಶಾಲೆಗೆ ರಜೆ ಹಾಕಿ ಮಾರನೇ ದಿನ ಶಾಲೆಗೆ ಹೋದಾಗ ಎಲ್ಲಾ ವಿದ್ಯಾರ್ಥಿಗಳು ನಮ್ಮನ್ನು ಟೀಚರ್, ನಿನ್ನ ಯಾಕೆ ಸಾಲಿ ಬಿಟ್ಟಿದ್ರಿ ಅಂತ ಕೇಳ್ತಾರಲ್ಲ ಅದು ನಮಗೆ ಒಂದು ದೊಡ್ಡ ರಾಷ್ಟ್ರ ಗೌರವ ಕೊಟ್ಟ ಹಾಗೆ. ಪ್ರಾರ್ಥನೆಯಾದ ನಂತರ ಯಾವುದೋ ಒಂದು ತರಗತಿಗೆ ಹೋದ ನಂತರ ಗುಡ್ ಮಾರ್ನಿಂಗ್ ಟೀಚರ್ ಎಂದು ನಗುಮುಖದಿಂದ ಎದ್ದು ನಮ್ಮನ್ನು ಸ್ವಾಗತಿಸುತ್ತಾರಲ್ಲವ ಅದು ನಮಗೆ ಕರ್ನಾಟಕ ರತ್ನ ಕೊಟ್ಟ ಹಾಗೆ. ಕೆಲವು ವರ್ಷಗಳ ನಂತರ ನಮ್ಮ ಹಳೆಯ ವಿದ್ಯಾರ್ಥಿಯು ಎಲ್ಲೋ ಒಂದು ಕಡೆ ಸಿಕ್ಕಾಗ ನಾವು ಅವರನ್ನು ಗುರುತಿಸದಿದ್ದರೂ ಅವರು ನಮ್ಮನ್ನು ಗುರುತು ಹಿಡಿದು ಬಂದು ಸರ್ ಆರಾಮ್ ಇದ್ದೀರಾ ಅಂತ ಕೇಳ್ತಾರಲ್ಲ ಅದು ನಮಗೆ ಭಾರತರತ್ನ ಕೊಟ್ಟ ಹಾಗೆ.
                        ಗುರುವಿನ ಮಹತ್ವವನ್ನು ಸಂತ ಕಬೀರದಾಸರು ತುಂಬಾ ಸೊಗಸಾಗಿ ಹೇಳಿದ್ದಾರೆ. ಅದೇನೆಂದರೆ ಈ ಭೂಮಿಯ ಮೇಲಿನ ಎಲ್ಲಾ ಮರಗಳನ್ನು ಕಡಿದು ಲೇಖನಿಗಳನ್ನಾಗಿ ಮಾಡಿ, ಎಲ್ಲಾ ಸಮುದ್ರಗಳ ನೀರನ್ನು ಮಸಿಯನ್ನಾಗಿ ಪರಿವರ್ತಿಸಿ, ಆಕಾಶವನ್ನೇ ಕಾಗದವನ್ನಾಗಿ ಮಾಡಿ ಎಲ್ಲಾ ಭಾಷೆಗಳನ್ನು ಉಪಯೋಗಿಸಿ ಬರೆದರು ಕೂಡ ಗುರುವಿನ ಗುಣಗಾನ ಇನ್ನು ಉಳಿಯುತ್ತದೆ ಎಂಬ ಮಾತು ಬಹಳ ಸತ್ಯವಾದದ್ದು. ವಿದ್ಯಾರ್ಥಿಗಳ ಮೊದಲ ಪುಟ ಜನನ ತಾಯಿ ಬರೆದರೆ, ಕೊನೆಯ ಪುಟ ಮರಣ ದೇವರು ಬರೆದರೆ ಮಧ್ಯದ ಜೀವನ ಅನ್ನೋ ಹಲವಾರು ಪುಟಗಳನ್ನ ತಿದ್ದಿ ತೀಡಿ ಬರೆಯಬೇಕಾದದ್ದು ಗುರುಗಳು. ಇದು ಪ್ರತಿ ಗುರುವಿನ ಮಹತ್ತರವಾದ ಕಾರ್ಯವಾಗಿದೆ. ನಿಮಗೆ ತಿಳಿದಿರಲಿ ಸ್ವಾತಿ ಮಳೆಯ ನಕ್ಷತ್ರದಲ್ಲಿ ಮಾತ್ರ ಕಪ್ಪೆ ಚಿಪ್ಪು  ಸಮುದ್ರದ ಮೇಲೆ ಬಂದು ಬಾಯಿ ತೆರೆದು ಆ ಕ್ಷಣದಲ್ಲಿ ಬೀಳುವ ಮಳೆ ಹನಿಯನ್ನು ಬಾಯಿ ತೆಗೆದು ಆ ಮಳೆಹನಿಯನ್ನು ಬಾಯಲ್ಲಿ ತಗೊಂಡು ಸಮುದ್ರದ ಆಳಕ್ಕೆ ಬಹುದೂರ ತೆಗೆದುಕೊಂಡು ಹೋಗಿ ಕೆಲವು ದಿನಗಳ ನಂತರ ಅದನ್ನು ಅತ್ಯಂತ ಬೆಲೆ ಬಾಳುವ ಮುತ್ತು ಆಗಿ ಪರಿವರ್ತಿಸುವುದು. ಹಾಗೆಯೇ ನಮ್ಮ ನಮ್ಮ ಶಾಲೆಗಳಲ್ಲಿ ಪ್ರತಿನಿತ್ಯ ಸ್ವಾತಿ ನಕ್ಷತ್ರದ ಜ್ಞಾನದ ಮಳೆ ಹನಿಗಳನ್ನು ವಿದ್ಯಾರ್ಥಿಗಳ ಮೆದುಳಿಗೆ ನೀಡಿ ಅವರನ್ನು ಕೂಡ ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮುತ್ತಿನಂತ ಮನುಷ್ಯನನ್ನಾಗಿ ಪರಿವರ್ತಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಆಗ ನಾವು ನಿಜವಾದ ಬಂಗಾರದ ಮನುಷ್ಯರಾಗುತ್ತೇವೆ. 
                        ಯಾವುದೋ ಒಂದು ಕಾರ್ಯಕ್ರಮಕ್ಕೆ ಪ್ರಧಾನಿಗಳೋ ಅಥವಾ ಮುಖ್ಯಮಂತ್ರಿಗಳೋ ಬಂದು ಸಾವಿರಾರು ಜನರ ಗುಂಪಲ್ಲಿ ಇದ್ದ ನಮ್ಮನ್ನು ಗುರುತಿಸಿ ನಮ್ಮ ಹೆಸರು ಕೂಗಿ ಕರೆದಾಗ ನಮಗೆ ಎಷ್ಟು ಖುಷಿ ಆಗುತ್ತೆ ಅಲ್ವಾ. ಹಾಗೆಯೇ ನಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಯನ್ನು ಹೆಸರಿಟ್ಟೇ ಕರೆಯುವ ರೂಡಿ ನಮ್ಮದಾಗಲಿ. ಕೇವಲ ಸಂಬಳದ ಶಿಕ್ಷಕರಾಗದೆ ನಮ್ಮ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಗಟ್ಟಿಗೊಳಿಸುವ ಹಾಗೂ ಅವರನ್ನು ಸಾಧಕರನ್ನಾಗಿ ಮಾಡುವ ಶಿಕ್ಷಕರು ನಾವಾಗೋಣ. ತಂದೆ ತಾಯಿಗಳು ನಮ್ಮ ಕೈಯಲ್ಲಿ ವಿದ್ಯಾರ್ಥಿ ಎಂಬ ಒಂದು ಸುಂದರವಾದ ಹೂವನ್ನು ಕೊಟ್ಟಿದ್ದಾರೆ. ಅದನ್ನು ಕಸದ ಬುಟ್ಟಿಗೆ ಎಸೆಯುತ್ತೀರೋ ಅಥವಾ ದೇವರ ಮುಡಿಗೆ ಅರ್ಪಿಸುತ್ತಿರೋ ಯೋಚಿಸಬೇಕಾದ ವಿಷಯ. ಪ್ರತಿ ಮಗು ನಮ್ಮ ಸ್ವಂತ ಮಗು ಎಂಬ ಯೋಚನೆ ಸದಾ ಇರಲಿ. ಎಲ್ಲಾ ವಿದ್ಯಾರ್ಥಿಗಳನ್ನು ಬರಿ ಕಲ್ಲುಗಳು ಅಂತ ದಯವಿಟ್ಟು ತಿಳಿಯಬೇಡಿರಿ, ಅವರನ್ನು ನಾವು ಕೆತ್ತಿ ಕೆತ್ತಿ ಶಿಲೆ ಮಾಡುತ್ತಿದ್ದೇವೆ ಅನ್ನೋ ಭ್ರಮೆಯಿಂದ ಆಚೆ ಬರೋಣ. ನೆನಪಿರಲಿ ಕೆಲವು ವಿದ್ಯಾರ್ಥಿಗಳು ಶಿಲೆಗಳಾಗಿಯೇ ನಮ್ಮ ಶಾಲೆಗೆ ಬಂದಿರುತ್ತವೆ ಅವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಜ್ಞಾನ ಭಂಡಾರದ ದೇವರನ್ನಾಗಿಸಬೇಕು ಅಷ್ಟೇ.

            ಗುರು ಎಂಬುದು ಬೌತಿಕ ವಸ್ತುವಲ್ಲ. ಜ್ಞಾನ ಎಂಬುದನ್ನು ಶಿಷ್ಯನಲ್ಲಿಗೆ ಪ್ರವಹಿಸುವಂತೆ ಮಾಡುವ ಶಕ್ತಿ. ಶಿಷ್ಯನನ್ನು ಒಂದು ಹಿಮಗಲ್ಲು ಎಂದು ಭಾವಿಸಿದರೆ ಜ್ಞಾನ ಎಂಬುದು ಕುದಿಯುವ ನೀರಿನಂತೆ. ಗುರು ಈ ಕುದಿಯುವ ನೀರನ್ನು ಶಿಷ್ಯ ಎಂಬ ಹಿಮಗಲ್ಲಿನ ಮೇಲೆ ನಿಧಾನವಾಗಿ ಹನಿ ಸುರಿಯುತ್ತಾ ಬರುತ್ತಾನೆ. ಇಲ್ಲದಿದ್ದರೆ ಹಿಮಗಲ್ಲು ಬಿರುಕು ಬಿಡುತ್ತದೆ. ಗುರು ಶಿಷ್ಯನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ. ವಿಕಸನದ ಪ್ರಯಾಣದಲ್ಲಿ ಗುರು ಅಕ್ಷರಶಃ ಶಿಷ್ಯನನ್ನು ಹೊತ್ತೊಯ್ಯುತ್ತಾನೆ. "ವಿದ್ಯಾರ್ಥಿಗಳ ಬಾಳ ಹೊಂಬೆಳಕು ಶಿಕ್ಷಕರು " ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದಾಗಿದೆ. " ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ " ಎಂಬ ಮಾತು ಅಕ್ಷರಶಃ ಸತ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ನದಿ ದಾಟಿಸುವ ನಾಯಕರು ಹೌದು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಗುರಿ ಕಟ್ಟಿ ಕೊಡುವವರು ಗುರುಗಳು.

            ನಾವು ಅಕ್ಷರ ವಾದರೆ ನಮ್ಮ ವಿದ್ಯಾರ್ಥಿಗಳು ಪದವಾಗಬೇಕು. ನಾವು ಪದವಾದರೆ ಅವರು ವಾಕ್ಯವಾಗಬೇಕು. ನಾವು ವಾಕ್ಯವಾದರೆ ಅವರು ಪ್ಯಾರಾ ಆಗಬೇಕು. ನಾವು ಪ್ಯಾರಾ ಆದರೆ ಅವರು ಪುಟವಾಗಬೇಕು ಹಾಗೆಯೇ ಮುಂದುವರೆಯುತ್ತಾ.. ನಾವು ಪುಟವಾದರೆ ಅವರು ಪುಸ್ತಕ. ನಾವು ಪುಸ್ತಕವಾದರೆ ಅವರು ಗ್ರಂಥ. ನಾವು ಗ್ರಂಥವಾದರೆ ಅವರು ಗ್ರಂಥಾಲಯ ಆಗಬೇಕು ಅಂದಾಗ ಮಾತ್ರ ಶಿಕ್ಷಕ ವೃತ್ತಿಗೆ ಒಂದು ಅತ್ಯುತ್ತಮವಾದ ಬೆಲೆ ಬರುವುದು.
                  ನಾವು ಪ್ರತಿನಿತ್ಯ ಅವರ ಮೆದುಳಿಗೆ ಪಾಠ ಮಾಡುತ್ತೇವೆ. ಅವಾಗವಾಗ ಅವರ ಹೃದಯಕ್ಕೂ ಕೂಡ ಪಾಠ ಮಾಡಿರಿ, ಆಗ ಅವರ ಹೃದಯದಲ್ಲಿ ನೀವು ಸದಾ ಹೃದಯವಂತರು. ನಾವು ಶಿಕ್ಷಕ ವೃತ್ತಿಗೆ ಒಪ್ಪಿ ಬಂದಿಯೋ ಅಥವಾ ತಪ್ಪಿ ಬಂದಿವೋ ಗೊತ್ತಿಲ್ಲ ಆದರೆ ಈ ವೃತ್ತಿಯನ್ನು ಈಗ ಅಪ್ಪಿಕೊಳ್ಳಲೇಬೇಕು. ಅಂದಾಗ ಇಡೀ ಸಮಾಜವೇ ನಮ್ಮನ್ನು ತಬ್ಬಿಕೊಳ್ಳುತ್ತೆ. ಒಂದು ಶಾಲೆಗೆ ನಾವು ಶಿಕ್ಷಕರಾಗಿ ಆಯ್ಕೆಯಾಗಿ ಹೋಗುವಾಗ ನಮಗೆ ಯಾವುದೇ ಕಪ್ಪು ಚುಕ್ಕೆ ಇರುವುದಿಲ್ಲ. ಹಾಗೆಯೇ ಅಲ್ಲಿಂದ ಹೊರ ಬರುವಾಗಲೂ ಕೂಡ ಯಾವುದೇ ಕಪ್ಪು ಚುಕ್ಕೆ ಇರಬಾರದು. ನಿವೃತ್ತಿ ಆಗುವವರೆಗೂ ಒಂದು ಚಿಕ್ಕ ಕಪ್ಪು ಚುಕ್ಕೆ ಇಲ್ಲದಂತ ಪ್ರಾಮಾಣಿಕ ಸೇವೆ ನಮ್ಮದಾಗಲಿ. ನಮ್ಮ ಬೀಳ್ಕೊಡುವ ಸಮಾರಂಭ ನಮ್ಮ ಶಾಲೆ ಇರುವ ಊರಿನಲ್ಲಿ ಒಂದು ಜಾತ್ರೆಯಂತೆ ಇಡೀ ಊರಿನ ಜನ ಹಳೆಯ ವಿದ್ಯಾರ್ಥಿಗಳು ಎಲ್ಲರೂ ಸೇರಿ ಆಚರಿಸುವಂತಾಗಬೇಕು. ಕಲಿಕೆಯಲ್ಲಿ ಹಿಂದುಳಿದವರನ್ನು ಮೆಟ್ಟಿಲು ಎಂದು ಜಾಣರನ್ನು ಮೂರ್ತಿ ಎಂದು ದಯವಿಟ್ಟು ಬೇದಭಾವ ಮಾಡಬೇಡಿ. ನಿಮಗೊಂದು ಸತ್ಯ ನೆನಪಿರಲಿ ಪ್ರತಿ ದೇವಸ್ಥಾನಕ್ಕೆ ಹೋದಾಗ ನಾವು ಯಾರು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಗೆ ನಮಸ್ಕರಿಸುವುದಿಲ್ಲ. ಮೊದಲಿಗೆ ಮೆಟ್ಟಿಲು ಮುಟ್ಟಿ ನಮಸ್ಕರಿಸುತ್ತೇವೆ. ಹಾಗಾಗಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ನೋಡುವ ದೃಷ್ಟಿ ಬದಲಾಗಬೇಕು ಅಷ್ಟೇ. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಯಾರೋ ಒಬ್ಬರ ಕೆಳಗೆ ನೌಕರಿ ಮಾಡುವವರು ಆಗಬಾರದು. ಸಾವಿರಾರು ಜನರಿಗೆ ನೌಕರಿ ಕೊಡುವವರು ಆಗಬೇಕು. ನಮ್ಮ ಶಾಲೆ ಇರುವ ಊರಿನ ಹಿರಿಯರಿಗೆ ಕಿರಿಯವನಾಗಿ, ಕಿರಿಯರಿಗೆ ಹಿರಿಯವನಾಗಿ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ಬದುಕಿದಾಗ ಮಾತ್ರ ನಮ್ಮ ಸೇವೆ ಪರಶಿವನಿಗೂ ಇಷ್ಟವಾಗುತ್ತದೆ. ಒಬ್ಬ ಹಾಡುಗಾರನಿಗೆ ಒನ್ಸ ಮೋರ್  ಎಂದರೆ ಮತ್ತೊಮ್ಮೆ ಹಾಡುವನು. ಒಬ್ಬ ನೃತ್ಯಗಾರನಿಗೆ ಒನ್ಸ್ ಮೋರ್ ಎಂದರೆ ಮತ್ತೊಮ್ಮೆ ನೃತ್ಯ ಮಾಡುವನು. ಆದರೆ ಒಬ್ಬ ವಿದ್ಯಾರ್ಥಿಯ ಗೋಲ್ಡನ್ ಲೈಫ್ ಗೆ ಒನ್ಸ ಮೋರ್ ಎಂದರೆ ಮತ್ತೆ ಅವನಿಗೆ ಆ ಕಲಿಕಾ ಅವಧಿಯನ್ನು ನಮ್ಮಿಂದ ಕೊಡಲು ಸಾಧ್ಯವಿಲ್ಲ. ಕಲಿಸುವಾಗ ಸರಿಯಾಗಿಯೇ ಕಲಿಸೋಣ.ಅವನ ಸಾಧನೆಯ ದೀಪವನ್ನು ಅವನ   ಬದುಕಲ್ಲಿ ಬೆಳಗೋಣ. ಪ್ರತಿ ವಿದ್ಯಾರ್ಥಿಯ ಭವಿಷ್ಯದ ಬದುಕಿನ ಬುತ್ತಿಯಲ್ಲಿ ಸದಾ ಕಾಲ ಎಂದೆಂದಿಗೂ ಮರೆಯದ ಒಂದು ಸಿಹಿ ತುತ್ತು ನಾವು ಆಗೋಣ.

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      



ಗಣೇಶ ಚೌತಿ ಮತ್ತೆ ಬಂದಿದೆ ಸಡಗರ


 

ಭಾದ್ರಪದ ಮಾಸದ ಗಣೇಶ ಚೌತಿಯು 
ಸಿದ್ಧಿ ವಿನಾಯಕನಿಗೆ ವಾಹನ ಚಿಕ್ಕ ಇಲಿಯು 
ಬಹಳ ಪ್ರಸಿದ್ಧಿ ಕ್ಷಿಪ್ರ ಪ್ರಸಾದನ  ಬುದ್ಧಿವಂತಿಕೆಯು 
ದೇವರಿಂದ ಜನ್ಮ ಪಡೆದ ನಮ್ಮ ವಿಶ್ವಮುಖನು

ಶಿವ ಪಾರ್ವತಿಯರ ಪ್ರೀತಿಯ ಸ್ಕಂದಪೂರ್ವಜನು
ವಿದ್ಯೆಗಿವನೇ ಭೂಷಣ ನಮ್ಮ ಗಜಮುಖನು 
ನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನು 
ಸದಾ ಕಾಪಾಡುವ ದೇವಲೋಕದ ದೈವ ನೀನು 

ಮತ್ತೆ ಬಂದಿದೆ ಸಡಗರದ ಯಜ್ಞಕಾಯನ ಉತ್ಸವವು 
ತುಂಬಿದೆ ಹರ್ಷ ಭೂಮಿಯ ತುಂಬೆಲ್ಲವು 
ನಿತ್ಯ ಕಡಬು ಹೋಳಿಗೆಯ ನೈವೇದ್ಯವು 
ಸ್ಥಾಪಿಸಿ ಮಣ್ಣಿನ ಗಣಪತಿಯ ಪೂಜಿಸೋಣ ನಾವು ನೀವು 

ಸಿಡಿಸದಿರಿ ಜೋರಾಗಿ ಎಲ್ಲೆಡೆ ಪಟಾಕಿಗಳನ್ನು 
ಗೊತ್ತಿದ್ದರೂ ನಾಶಮಾಡಬೇಡಿ  ಪ್ರಕೃತಿಯ ಸೊಬಗನ್ನು 
ಮಹಾ ಗಣಪತಿಯ  ವಿಸರ್ಜನೆಯಲಿ ಮರೆಯದಿರಿ ಪ್ರತಿಜ್ಞೆಯನ್ನು 
ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ದೇವಾ ನಿಮಗಿನ್ನು

ಸಕಲ ಕಾರ್ಯಗಳಿಗೂ ಮುಂದಿರುವ ಸಿದ್ಧಿವಿನಾಯಕನೇ 
ನಂಬಿದ ಪಾಲಿನ ಭಕ್ತರ ಕೈ ಬಿಡದ ಮೂಷಿಕವಾಹನನೇ 
ಭೂಮಿಯ ಮೇಲಿನ ಎಲ್ಲರ ಕಷ್ಟ ನಿವಾರಿಸುವ ವಕ್ರತುಂಡನೇ 
ಭೂಲೋಕದ ಉದ್ಧಾರಕ್ಕಾಗಿ ಜನಿಸಿದ ಲಂಬೋದರನೇ

ಏಕದಂತ  ಬಂದು ನಮಗೆಲ್ಲ ಹರ್ಷವ ತಂದನು 
ನಲಿಯುತ ಕುಣಿಯುತ ನಾನಾವೇಷದಿ ಬಂದನು 
ಗರಿಕೆಯ ಹುಲ್ಲಿನಲಿ ಸಕಲರ ಪ್ರೀತಿಯ ಕಂಡನು 
ಬೇಡಿದ ವರವನು ಭಕ್ತರಿಗೆ ದಯಪಾಲಿಸಿಹನು 

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

ಹೃದಯದಿ ಮೊಳಗಲಿ ವಂದೇ ಮಾತರಂ

 


ಮತ್ತೆ ಬಂದಿದೆ ಸಂಭ್ರಮದ ಸ್ವಾತಂತ್ರ್ಯ ದಿನವು 
ಹಾರಲಿ ಕೆಂಪು ಕೋಟೆಯ ಮೇಲೆ ತಿರಂಗವು 
ಅರ್ಪಿಸೋಣ ಭಾರತ ಮಾತೆಗೆ ಸ್ವಾತಂತ್ರ್ಯದ ಹೋರಾಟವು 
ಹೇಳಲಿ ವಂದೇ ಮಾತರಂ ಪ್ರತಿ ಹೃದಯವು

ಸಿಗಲಿ ಸ್ವಾತಂತ್ರ್ಯ ರೈತ ಬೆಳೆದ ಬೆಳೆಗಳಿಗೆ 
ಸಿಗಲಿ ಸ್ವಾತಂತ್ರ್ಯ ವರದಕ್ಷಿಣೆ ಕೊಡುವ ಹೆತ್ತವರಿಗೆ 
ಸಿಗಲಿ ಸ್ವಾತಂತ್ರ್ಯ ಭ್ರಷ್ಟಾಚಾರಕ್ಕೆ ಒಳಗಾಗುವ ಅಮಾಯಕರಿಗೆ 
ಸಿಗಲಿ ಸ್ವಾತಂತ್ರ್ಯ ಒಂಟಿಯಾಗಿ ತಿರುಗುವ ಹೆಣ್ಣು ಮಕ್ಕಳಿಗೆ 

ಭಾರತದ ವೈಭವ ಕೇಸರಿ ಬಿಳಿ ಹಸಿರು ಧ್ವಜದಲಿ 
ನಿತ್ಯ ವಂದೇ ಮಾತರಂ ಹೃದಯದಿಂದ ಮೊಳಗಲಿ 
ನಮ್ಮ ಬಾವುಟ ಸೂರ್ಯನ ಹೊಂಗಿರಣದಂತೆ ಹೊಳೆಯುತ್ತಿರಲಿ
ಇಡೀ ವಿಶ್ವದಲ್ಲಿಯೇ ಭಾರತ ಶ್ರೇಷ್ಠ ಗುರುವಾಗಲಿ

ಸ್ವಾತಂತ್ರ್ಯ ದಿನ ಮೀಸಲಿರದಿರಲಿ ಕೇವಲ ಒಂದು ದಿನಕ್ಕೆ 
ಸ್ಮರಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತಿ ಕ್ಷಣಕ್ಕೆ 
ಅವರ ನೆನಪು ಆಗದಿರಲಿ ಕೇವಲ ಪೊಳ್ಳು ಭಾಷಣಕ್ಕೆ 
ಬೆಳೆಸಿ ಉಳಿಸಿ ಸಂಸ್ಕೃತಿ ಪರಂಪರೆ ಪ್ರತಿ ಜನ್ಮಕ್ಕೆ

ದೇಶ ಸೇವೆಯೇ ಈಶ ಸೇವೆ ಎನ್ನುವ  
ಹುತಾತ್ಮರಾದ ರಾಷ್ಟ್ರ ನಾಯಕರನ್ನು ನಿತ್ಯ ಸ್ಮರಿಸುವ
ಉಳಿಸಿ ಬೆಳೆಸಿರಿ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನವ 
ಮುಡಿಪಾಗಿರಲಿ ದೇಶದ ಅಭಿವೃದ್ಧಿಗೆ ನಮ್ಮ ಜನ್ಮವ

ಸ್ಮರಿಸೋಣ  ಮಾಡು ಇಲ್ಲವೇ ಮಡಿ ಎಂದ ಗಾಂಧೀಜಿಯನು 
ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದ ತಿಲಕರನು
ಇಂಕ್ವಿಲಾಬ್  ಜಿಂದಾಬಾದ್ ಎಂದ ಭಗತ್ ಸಿಂಗ್ ರನು 
ಜೈ ಹಿಂದ್ ಎಂದಿರುವ ಸುಭಾಷ್ ಚಂದ್ರ ಬೋಸ್ ರನು

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

ಸಾಧಕನಾಗಬೇಕು

ಬಿದ್ದಲ್ಲಿಯೇ ಎದ್ದು ನಿಂತು ಗೆಲ್ಲಬೇಕು 
ತುಳಿದವರ ಮುಂದೆ ಮೆರೆಯುವ ಸಾಧಕನಾಗಬೇಕು 
ಗೊತ್ತೇ ಇಲ್ಲ ಎಂದವರೇ ಗೊತ್ತು ಮಾಡಿಕೊಳ್ಳುವಂತಾಗಬೇಕು 
ನಮಗರಿವಿಲ್ಲದಂತೆ ನಾವು ಬೆಳೆದು ಬಾಳಬೇಕು 

ಚುಚ್ಚು ಮಾತುಗಳಿಗೆ ಕಿವಿ ಕೊಡದೆ ಮೆಚ್ಚಿ ಬದುಕು 
ಬೇಜಾರು ಆಲಸ್ಯತನ ದೂರಕ್ಕೆ ನೂಕು 
ಸಾಧಕರ ಸಾಧನೆಗಳ ಮೆಲುಕು ಹಾಕು 
ಕರುನಾಡೆ ಒಂದು ದಿನ ನಮ್ಮನ್ನು ಓದಬೇಕು 



ಕುಂಟು ನೆಪಗಳೊಂದಿಗೆ ಕಾಲ ಕಳೆಯಬೇಡಿ 
ಸುಮ್ಮನೆ ಅನಾಗತ್ಯವಾಗಿ ಸಮಯ ವ್ಯರ್ಥ ಮಾಡಿ 
ಕಳೆದು ಹೋದ ದಿನಗಳ ಕುರಿತು ಚಿಂತಿಸಬೇಡಿ 
ಪ್ರಯತ್ನಗಳಲ್ಲಿ ಸೋತಿದ್ದೀರಿ ಆದರೆ ಸತ್ತಿಲ್ಲ ನೆನಪಿಡಿ 

ಇರುವುದೊಂದೇ ಜನ್ಮ ಪರಿಶ್ರಮ ಹೆಚ್ಚಾಗಲಿ 
ನೀವ್ಯಾರು ಎಂಬುದು ಜಗತ್ತಿಗೆ ತಿಳಿಯಲಿ 
ಮಾಡುವ ಕೆಲಸ ಕಾರ್ಯಗಳು ಪ್ರಾಮಾಣಿಕವಾಗಿರಲಿ 
ಸತ್ತ ಮೇಲೆ ಸ್ಮಶಾನ ಕಣ್ಣೀರಿಡುವಂತಾಗಲಿ 

ಮಾಡಿದ ಸಾಧನೆ ಚರಿತ್ರೆಯಲ್ಲಿ ಉಳಿಯಬೇಕಾಗಿದೆ 
ಆ ಮಹಾನ್ ಕಾರ್ಯಕ್ಕೆ ತಪಸ್ಸು ಬೇಕಾಗಿದೆ 
ಹೆತ್ತವರ ಒಡಲು ಸಂತಸದಿ ಇರಿಸಬೇಕಾಗಿದೆ 
ಸಾಧಕರಾಗಿ ಸನ್ಮಾನ ಸಮಾರಂಭಕ್ಕೆ ವೇದಿಕೆ ಸಜ್ಜಾಗಿದೆ

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

ವಯಸ್ಸಿಗೆ ಸಾಧನೆ ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ

ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಒಂದು ಕ್ಷಣವಾದರೂ ವಿಚಾರ ಮಾಡಿಯೇ ಬಿಟ್ಟಿರುತ್ತಾನೆ. ಆ ಸಾಧನೆ ಒಂದೇ ರಂಗದಲ್ಲಿ ಇಲ್ಲ, ಹಲವಾರು ರಂಗಗಳಲ್ಲಿ ಸಾಧನೆ ಮಾಡಿದವರನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಸಾಮಾನ್ಯ ವ್ಯಕ್ತಿಯಾಗಿ ಸತ್ತರೆ ಆ ಬದುಕಿಗೆ ಅರ್ಥವೇ ಇಲ್ಲ. ಜೀವನ ಎಂಬ ಪುಸ್ತಕದಲ್ಲಿ ಜನನ ಮತ್ತು ಮರಣ ಎಂಬ ಮೊದಲ ಹಾಗೂ ಕೊನೆಯ ಪುಟಗಳು ಮಾತ್ರ ನಮ್ಮದಲ್ಲ,ಉಳಿದೆಲ್ಲಾ ಪುಟಗಳು ನಮಗೆ ಸಂಬಂಧಿಸಿವೆ. ಆ ಪುಟಗಳನ್ನು ನಾವು ಹೇಗೆ ಬರೆಯುತ್ತೇವೆ ಎಂಬುದು ನಮಗೆ ಬಿಟ್ಟ ವಿಚಾರ. ನಮ್ಮ ಬದುಕು ಚರಿತ್ರೆಯಾಗಬೇಕು ಮತ್ತೊಬ್ಬರಿಗೆ ಸ್ಪೂರ್ತಿಯಾಗಬೇಕು, ಮಾದರಿಯಾಗಬೇಕು. ಆ ರೀತಿಯ ಬದುಕಿಗೆ ಸಮಯ ಪಾಲನೆ, ಶಿಸ್ತು ಹಾಗೂ ಪ್ರಾಮಾಣಿಕ ಪ್ರಯತ್ನ ಬಹಳ ಮುಖ್ಯವಾಗಿದೆ. ಸಾಧನೆ ಸಾಧಕನ ಸೊತ್ತು ವಿನಹ ಸೋಮಾರಿಯ ಸ್ವತ್ತಲ್ಲ.

                

          ನಾವು ಒಬ್ಬರೇ ಸಾಧಕರಾಗುವುದಕ್ಕೂ ನಮ್ಮವರನ್ನು ಸಾಧಕರನ್ನಾಗಿ ಮಾಡಿ ನಾವು ಸಾಧಕರಾಗುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ನಿತ್ಯ ಸಾಧನೆಯ ಕನಸು ಕಾಣುವ ನಿದ್ರೆ ನಮ್ಮದಾಗಬೇಕು ವಿನಃ ರಾತ್ರಿ ಆಯಿತು ಎಂಬ ವಿಚಾರಕ್ಕೆ ಬರುವ ನಿದ್ದೆ ನಮ್ಮದಾಗಬಾರದು. ಯಾವ ಕಾರಣಕ್ಕೂ ಸಾಧನೆಯ ದಿನವನ್ನು ಮುಂದೂಡಬಾರದು ಕಾರಣ ಆ ದಿನ ನಾವೇ ಇರದಿದ್ದರೆ ?. ಇರುವ ಅಲ್ಪ ದಿನಗಳಲ್ಲಿಯೇ ನಾವು ಸಾಧಕರಾಗೋಣ. ಸಾಧಕರಾಗಲು ಯಾವುದೇ ವಯಸ್ಸಿನ ಮಿತಿ ಇಲ್ಲ. ದಿನಗಳು ಬರಲಿ ಮುಂದೆ ನೋಡೋಣ ಎಂದು ಕಾಲಹರಣ ಮಾಡುತ್ತಾ ಹೋದರೆ ಆ ದಿನ ಬೇರೆಯವರ ಪಾಲಾಗುವುದು. ಯಾವ ಕ್ಷೇತ್ರದಲ್ಲಿಯೇ ಆಗಲಿ ಸಾಧನೆ ಮಾಡಬೇಕೆಂದರೆ ಪರಿಶ್ರಮದ ಪ್ರಯತ್ನಗಳು ಬೇಕೇ ಬೇಕು. ರಾತ್ರೋರಾತ್ರಿ ಸಾಧಕರಾದ ಇತಿಹಾಸ ಎಲ್ಲೂ ಇಲ್ಲ ಆ ಸಾಧನೆಯ ಹಿಂದೆ ಎಷ್ಟೋ ದಿನಗಳ, ಗಂಟೆಗಳ ತಮ್ಮದೇ ಆದ ಶ್ರಮವಿದೆ.
                 ದೇಶದ ಸ್ವಾತಂತ್ರ್ಯಕ್ಕಾಗಿ 23 ವರ್ಷ ಬದುಕಿ ತನ್ನ ಪ್ರಾಣವನ್ನೇ ಪಣಕಿಟ್ಟ ಭಗತ್ ಸಿಂಗ್. 24 ವರ್ಷ ಬದುಕಿದರು ಸ್ವಾತಂತ್ರ್ಯಕ್ಕಾಗಿಯೇ ಹೋರಾಡಿ ಹುತಾತ್ಮರಾದ ಚಂದ್ರಶೇಖರ ಅಜಾದ್. 23 ವರ್ಷಕ್ಕೆ ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಸುಖದೇವ್. 22 ವರ್ಷದಲ್ಲಿ ಸ್ವಾತಂತ್ರ್ಯಕ್ಕಾಗಿ ನೇಣು ಗಂಬಕ್ಕೆ ಮುತ್ತು ಕೊಟ್ಟ ರಾಜ್ ಗುರು. ಏಳನೇ ತರಗತಿಯಲ್ಲಿ ಓದುತ್ತಿರುವಾಗಲೇ ಸಿನಿಮಾ ನಿರ್ದೇಶಕನಾದ ಮಾಸ್ಟರ್ ಕಿಶನ್. 39 ವರ್ಷ ಬದುಕಿದರೂ ಕೂಡ ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸ್ವಾಮಿ ವಿವೇಕಾನಂದರು. 29 ವರ್ಷದ ಕೆಚ್ಚೆದೆಯ ಹುಡುಗ ಬ್ರಿಟಿಷರ ಗುಂಡಿಗೆ ಬಲಿಯಾದ ಮಂಗಲ್ ಪಾಂಡೆ . ಇಂತಹ ಹಲವಾರು ಸಾಧಕರ ಕುರಿತು ಓದಿದ್ದೇವೆ,ಓದುತ್ತಲೂ ಇದ್ದೇವೆ ಇವರ ಈ ಸಾಧನೆಗೆ ಮುಖ್ಯವಾದದ್ದು ಪ್ರಾಮಾಣಿಕ ಪ್ರಯತ್ನ.
             ಮೇಲಿನ ಸಾಧಕರನ್ನು ನೋಡಿದರೆ ಸಾಧನೆಗೆ ಯಾವುದೇ ರೀತಿಯ ವಯಸ್ಸು ಮುಖ್ಯವಲ್ಲ. ನಾವು ಸಾಧಕರು ಆಗಬೇಕೆಂಬ ಹಠ ಇರಬೇಕು. ಆ ಹಠಕ್ಕೆ ತಕ್ಕ ಹಾಗೆ ಪರಿಶ್ರಮವಂತು ಮೊದಲೇ ಬೇಕು. ನಿಮ್ಮವರಿಗೆ ನೀವು ಯಾರೆಂಬುದು ಗೊತ್ತಾಗಬೇಕಾದರೆ ನಿಮ್ಮಲ್ಲಿರುವ ಸಾಧನೆ ಇಡೀ ಜಗತ್ತಿಗೆ ಗೊತ್ತಾಗಬೇಕು. ಇವರು ಯಾರು ನಮಗೆ ಗೊತ್ತಿಲ್ಲ ಅಂದವರು ಇವನು ನಮ್ಮವನು ಅನ್ನುವ ಮಟ್ಟಕ್ಕೆ ನಾವು ಬೆಳೆಯಲೇಬೇಕು. ಸಾಧಿಸುವ ಹಂಬಲ ಈ ಕ್ಷಣದಿಂದಲೇ ಪ್ರಾರಂಭವಾಗಲಿ ಸಾಧಕರ ಪಟ್ಟಿಗೆ ನಮ್ಮ ಹೆಸರು ಸೇರುವಂತಾಗಲಿ. ಮತ್ತೊಮ್ಮೆ ಮಗದೊಮ್ಮೆ ಹೇಳುವೆ ನಾವು ಸಾಧಕರಾಗೋಣ ಏಕೆಂದರೆ ಶಾಶ್ವತವಾಗಿರದ ಜೀವನದಲ್ಲಿ ಶಾಶ್ವತವಾಗಿರುವಂತಹ ಸಾಧನೆ ಮಾಡು.

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

ನವಮಾಸ ಹೊತ್ತು ನವಶಕ್ತಿ ತುಂಬಿದಳು ನನ್ನವ್ವ

 

ನವಮಾಸ ಹೊತ್ತು ನವಶಕ್ತಿ ತುಂಬಿದಳು ನನ್ನವ್ವ

ಕರುಳಕುಡಿ ಒಡಮೂಡಿದ್ದನ್ನು ವೈದ್ಯರಿಂದ ಕೇಳಿ ಖುಷಿಯಾದಳು ಮೊದಲ ತಿಂಗಳಲ್ಲಿ ನನ್ನವ್ವ

ಗಂಡನ ಪ್ರೀತಿ ವಾತ್ಸಲ್ಯದ ಮಾತು
ಕೇಳಿ ಖುಷಿಯಾದಳು ಎರಡನೇ ತಿಂಗಳಲ್ಲಿ

ತವರು ಮನೆಯ ಬರುವಿಕೆಯ ಸುದ್ದಿ ತಿಳಿದು
ಖುಷಿಯಾದಳು ಮೂರನೇ ತಿಂಗಳಲ್ಲಿ

ಅತ್ತೆ ಮಾವರ ಆರೈಕೆಗೆ ಮನಸೋತು
ಖುಷಿಯಾದಳು ನಾಲ್ಕನೇ ತಿಂಗಳಲ್ಲಿ

ತವರು ಮನೆಯ ಸೀಮಂತದಲ್ಲಿ ಹಸಿರು ಬಳೆ ಹಸಿರು
ಸೀರೆಯ ಉಟ್ಟು ಖುಷಿಯಾದಳು ಐದನೇ ತಿಂಗಳಲ್ಲಿ

ಅಕ್ಕ ತಂಗಿಯರ ಕಚಗುಳಿಯ ಮಾತುಗಳಿಂದ
ಖುಷಿಯಾದಳು ಆರನೇ ತಿಂಗಳಲ್ಲಿ

ಮೈದುನ ನಾದಿನಿಯರು ನೀಡಿದ
 ಹುಳಿ ಹಣ್ಣುಗಳನ್ನು
ಮನಸಾರೆ ಸವಿದು ಖುಷಿಯಾದಳು ಏಳನೇ ತಿಂಗಳಲ್ಲಿ

ಗರ್ಭದಲ್ಲಿರುವ ತನ್ನ ಕಂದನ ಮೆದುಗಾಲು ಒದೆವಾಗ
ಖುಷಿಯಾದಳು ಎಂಟನೇ ತಿಂಗಳಲ್ಲಿ

ಅಳುತ್ತಾ ಭೂಮಿಗೆ ಬಂದ ಕಂದನ ಮೊಗವ ನೋಡಿ
ಖುಷಿಯಾದಳು ಒಂಭತ್ತನೇ ತಿಂಗಳಲ್ಲಿ

ಭಾರವೆನ್ನದೇ  ನವಮಾಸ ಹೊತ್ತು ಕನಸು ಕಟ್ಟಿದಳು ನನ್ನವ್ವ
ಬಸುರಿಯ ಬಯಕೆ ತೀರಿಸಿ ಕಸುವಾಗಿ ಬೆಳೆಸಿ ಖುಷಿಗೆ ಕಾದಳು ನನ್ನವ್ವ
ದಿನ ತುಂಬಿರಲು ಕಂದನ ಆಗಮನಕೆ ಕ್ಷಣವೆಣಿಸಿದಳು ನನ್ನವ್ವ
ಬೇನೆಯ ಬವಣೆಯಲಿ ಬೆಂದು ನೋವಲಿ ಮಿಂದೆದ್ದು ಜನ್ಮನೀಡಿದಳು ನನ್ನವ್ವ
ಮಗುವಿನ ಮೊಗ ಕಂಡು ನೋವನ್ನೇ ಮರೆತಳು ನನ್ನವ್ವ
ಹೆತ್ತಾಗ ಮಗು ಅತ್ತಿದ್ದು ಕೇಳಿ ಸಂತಸ ಪಟ್ಟ ನನ್ನವ್ವ
ಮುಂದೆಂದೂ ಕಂದ ಅಳದಂತೆ ಆಸರೆಯಾದಳು ನನ್ನವ್ವ

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

ಸಮಯ , ಬೆಲೆ ಬಾಳುವ ಸಂಪತ್ತು , ಶ್ರೀ ಮುತ್ತು ಯ.ವಡ್ಡರ

ಸಮಯ , ಬೆಲೆ ಬಾಳುವ ಸಂಪತ್ತು , ಶ್ರೀ ಮುತ್ತು ಯ.ವಡ್ಡರ

 

ಈ ಭೂಮಿಯ ಮೇಲೆ ಅತಿ ಹೆಚ್ಚು ಬೆಲೆ ಬಾಳುವ ಸಂಪತ್ತು ಯಾವುದಾದರೂ ಇದ್ದರೆ ಅದು ಸಮಯ. ಕೆಲವರು ಹೇಳುವ ಹಾಗೆ ಸಮಯದಲ್ಲಿ ಕೆಟ್ಟ ಸಮಯ ಮತ್ತು ಒಳ್ಳೆಯ ಸಮಯ ಎಂಬ ಭಿನ್ನವಿಲ್ಲ. ನಾವು ಸಮಯವನ್ನು ಆ ರೀತಿ ತಿಳಿದುಕೊಂಡಿದ್ದೇವೆ ಅಷ್ಟೇ. ಸಮಯವು ಯಾರ ಮನೆಯ ಸ್ವತ್ತಲ್ಲ, ಅದು ಯಾರಿಗಾಗಿಯೂ ಕಾಯುವುದಿಲ್ಲ. ಸಮಯವು ಸಾಧಕನ ಸ್ವತ್ತು ವಿನಹ ಸೋಮಾರಿಯ ಸ್ವತ್ತಲ್ಲ. ಸಮಯವನ್ನು ಯಾರು ಪ್ರಾಮಾಣಿಕವಾಗಿ ಗೌರವಿಸುತ್ತಾರೋ ಅವರನ್ನು ಇಡೀ ಸಮಾಜವೇ ಗೌರವಿಸುತ್ತದೆ. ಕೆಲವೊಮ್ಮೆ ಒಂದೊಂದು ದಿನ ನಮಗೆ ಸಮಯ ಹೆಚ್ಚು ಇರುತ್ತದೆ ಇನ್ನೂ ಕೆಲವೊಮ್ಮೆ ಸಮಯವೇ ಇರುವುದಿಲ್ಲ. ಸಮಯದ ಅಭಾವ ಆ ಕ್ಷಣಕ್ಕೆ ಬಹಳ ಕಾಡುತ್ತದೆ. ಸಮಯ ಎಂಬುದು ಬಿಟ್ಟ ಬಾಣ ಅದು ಎಂದಿಗೂ ಮರಳಿಬಾರದು. ನಮಗಾಗಿ ಇರುವ ಸಮಯದಲ್ಲಿಯೇ ನಾವು ನಮ್ಮ ಕೆಲಸ ಕಾರ್ಯಗಳನ್ನು ಪೂರೈಸಿಕೊಂಡು ನಮ್ಮ ಗುರಿ ತಲುಪಬೇಕು. ಸಮಯಕ್ಕೆ ಬೆಲೆ ಕೊಡದ ವ್ಯಕ್ತಿಗೆ ಬದುಕಿನಲ್ಲಿ ಬೆಲೆ ಕೂಡ ಕಡಿಮೆ ಆಗುವುದು. ಸಮಯದ ಮಹತ್ವವನ್ನು ತಿಳಿದುಕೊಂಡು ನಡೆದಾಗ ಮಾತ್ರ ಅದು ಬದುಕಿನ ಪಾಠವನ್ನು ನಮಗೆ ತಿಳಿಸುವುದು.
        ಈ ಭೂಮಿಯ ಮೇಲೆ ಯಾರು ಎಷ್ಟೇ ಶ್ರೀಮಂತರಿದ್ದರು ಕಳೆದುಹೋದ ಸಮಯವನ್ನು ಮರಳಿ ಪಡೆಯುವಷ್ಟು ಶ್ರೀಮಂತರು ಈ ಭೂಮಿಯ ಮೇಲೆ ಯಾರು ಇಲ್ಲ. ಹಾಗಾಗಿ ಅತ್ಯಂತ ಶ್ರೀಮಂತಿಕೆಯಿಂದ ತುಂಬಿದ ಸಮಯವನ್ನ ನಾವೆಲ್ಲರೂ ಪ್ರೀತಿಸೋಣ. ಬದುಕಿನ ಪಯಣದಲ್ಲಿ ಸಮಯ ಸಾಧಕರನ್ನು ನಂಬದೆ, ಸರಿಯಾದ ಸಮಯಕ್ಕೆ ಸಹಾಯ ಮಾಡುವ ಆತ್ಮೀಯರನ್ನು ನಂಬಿ ಬದುಕು ಸಾಗಿಸಬೇಕಾಗಿದೆ.ನಿನ್ನೆಯ ಸಮಯ ಮುಗಿದುಹೋಗಿದೆ, ನಾಳೆಯ ಸಮಯ ನಮ್ಮದಲ್ಲ, ಇವತ್ತಿನ ಸಮಯ ಮಾತ್ರ ನಮ್ಮದು ಅದರಲ್ಲಿಯೇ ಇವತ್ತಿನ ದಿನದ ಈ ಕ್ಷಣ ಮಾತ್ರ ನಮ್ಮದು. ಹಾಗಾಗಿ ಸಮಯ ಬಹಳ ಅತ್ಯಮೂಲ್ಯವಾದುದು. ಮಿಂಚಿ ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ ನಮಗಿರುವ ಈ ದಿನದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು.
      ಸಮಯ ಮೀರಿದ ಮೇಲೆ ಅದರ ಬಗ್ಗೆ ಚಿಂತಿಸಿದರೆ ಅದು ನಮ್ಮ ಮೂರ್ಖತನ. ಒಂದು ವರ್ಷದ ದೀರ್ಘ ಸಮಯಕ್ಕೂ ಕೂಡ ತನ್ನದೇ ಆದ ಮಹತ್ವವಿದೆ. ಅದೇ ರೀತಿ ಒಂದು ಸೆಕೆಂಡಿನ ಲಘು ಸಮಯಕ್ಕೂ ಕೂಡ ತನ್ನದೇ ಆದ ಮಹತ್ವವಿದೆ. ಸಮಯವನ್ನ ಆರಾಧಿಸೋಣ ಸಮಯವನ್ನ ಗೌರವಿಸೋಣ. ಭಗವಂತ ನಮಗಾಗಿ ನೀಡಿದ ಅಮೂಲ್ಯವಾದ ಸಂಪತ್ತಿನಲ್ಲಿ ಸಮಯ ಕೂಡ ಒಂದಾಗಿದೆ. ಸಮಯವನ್ನು ಅನಾವಶ್ಯಕ ಹಾಳು ಮಾಡದೆ ಸರಿಯಾಗಿ ಬಳಸಿಕೊಂಡು ಸಾಧಕರಾಗಿ ಉತ್ತಮ ಸಮಾಜದಲ್ಲಿ ಅತ್ಯುತ್ತಮ ನಾಗರಿಕರಾಗಿ ಬದುಕುವ ಒಂದು ಪ್ರಯತ್ನ ಮಾಡೋಣ. ಸಮಯದ ಬಗ್ಗೆ ಅರಿವು ಇಟ್ಟುಕೊಂಡು ಸಮಯ ಪಾಲಕರಾಗಿ ಬದುಕೋಣ.

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

ಅಕ್ಷರ ಕಲಿಸಿದ ಗುರುವಿಗೆ ಗೌರವವಿರಲಿ , ಶ್ರೀ ಮುತ್ತು ಯ.ವಡ್ಡರ

ಅಕ್ಷರ ಕಲಿಸಿದ ಗುರುವಿಗೆ ಗೌರವವಿರಲಿ , ಶ್ರೀ ಮುತ್ತು ಯ.ವಡ್ಡರ

 

ಯಾವುದೋ ಊರಿನಿಂದ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು, ಶಾಲೆಯ ಪ್ರತಿ ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳೆಂದು ಭಾವಿಸಿ ಅವರ ಬದುಕಿನ ಬುತ್ತಿಗೆ ನಿತ್ಯ ಜ್ಞಾನದ ಸಿಹಿ ತುತ್ತು ನೀಡಿ  ಅವರ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗುವರು. ಗುರು ಎಂದರೆ ಅದು ಕೇವಲ ಪದವಲ್ಲ ಹಲವಾರು ಜನ ಸಾಧಕರನ್ನು ಸೃಷ್ಟಿಸುವ ಒಂದು ಅದ್ಭುತವಾದ ಸಂಪತ್ತು ಭರಿತ ಜ್ಞಾನ ಭಂಡಾರದ ಗಣಿ. ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಇವತ್ತು ಅವರ ಕಾಲ ಮೇಲೆ ಅವರು ನಿಂತು ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿದ್ದಾರೆ ಎಂದರೆ ಅದಕ್ಕೆ ಜ್ಞಾನ ನೀಡಿದ ಗುರುಗಳೇ ಕಾರಣ. ಜನ್ಮ ನೀಡಿದ ಹೆತ್ತವರು ಒಂದು ಕಣ್ಣು ಆದರೆ ಅಕ್ಷರ ಕಲಿಸಿದ ಗುರುಗಳು ಎರಡನೇ ಕಣ್ಣು. ಇಡೀ ಜನ್ಮ ಪೂರ್ತಿ ಇವರಿಬ್ಬರನ್ನು ಮರೆಯದೆ ಬದುಕು ಸಾಗಿಸುವ ಕೆಲಸ ನಮ್ಮದಾಗಬೇಕು. ತಾಯಿ ತನಗೆ ಏನು ಕಾಣುತ್ತದೆಯೋ ಅದನ್ನು ಮಕ್ಕಳಿಗೆ ಪರಿಚಯಿಸುವಳು. ತಂದೆ ತನಗೆ ಏನು ಕಾಣುವುದಿಲ್ಲವೋ ಅದನ್ನು ಮಕ್ಕಳಿಗೆ ಪರಿಚಯಿಸುವನು. ಆದರೆ ಗುರುವು ಒಂದು ಹೆಜ್ಜೆ ಮುಂದೆ ಹೋಗಿ ತನಗೆ ಕಾಣುವುದನ್ನು ಮತ್ತು ತನಗೆ ಕಾಣದೆ ಇರುವುದನ್ನು ಹಾಗೂ ಕಾಣಬಹುದಾಗಿರುವುದನ್ನು ಕೂಡ ಪರಿಚಯಿಸುವ ವ್ಯಕ್ತಿ ಭೂಮಿಯ ಮೇಲೆ ಯಾರಾದರೂ ಇದ್ದರೆ ಅದು ಗುರು ಮಾತ್ರ.
     ನಮಗೆ ಯಾವ ವಿಷಯ ಅರ್ಥವಾಗುವುದಿಲ್ಲವೋ ಆ ವಿಷಯ ಬೋಧಿಸುವ  ಗುರುಗಳನ್ನು ಆತ್ಮೀಯತೆಯಿಂದ ಕಂಡು ಗೌರವಿಸಿ, ಅವರಲ್ಲಿ ಮಾತೃ ವಾತ್ಸಲ್ಯವನ್ನು ಕಂಡಾಗ ಮಾತ್ರ ಆ ವಿಷಯ ನಮಗೆ ಅರ್ಥವಾಗುತ್ತದೆ. ಆ ಕಲಿಕೆಯು ಕೂಡ ಶಾಶ್ವತವಾಗಿ ನಮ್ಮ ಮೆದುಳಲ್ಲಿ ಇರುತ್ತದೆ. ಒಮ್ಮೊಮ್ಮೆ ಜೀವ ನೀಡಿದ ಭಗವಂತ ಕೂಡ ನಮ್ಮ ಕೈ ಬಿಡಬಹುದು ಆದರೆ ಜೀವನಕ್ಕೆ ಅರ್ಥ ಕಲ್ಪಿಸಿದ ಗುರು ಯಾವತ್ತೂ ಕೈ ಬಿಡಲಾರನು. ಒಬ್ಬ ವ್ಯಕ್ತಿ ಯಾವುದೇ ಉನ್ನತ ಪದವಿಗೆ ಹೋಗಿದ್ದಾನೆಂದರೆ  ಅದರ ಹಿಂದೆ ಹಲವಾರು ಜನ ಗುರುಗಳ ಶ್ರಮವಿರುತ್ತೆ ಮತ್ತು ಮಾರ್ಗದರ್ಶನವಿರುತ್ತದೆ. ಗುರುಕುಲ ಪದ್ದತಿಯಲ್ಲಿ ಶಿಷ್ಯರು  ಗುರುಗಳನ್ನು ಹುಡುಕಿಕೊಂಡು ಹೋಗಿ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಆ ರೀತಿ ಇಲ್ಲ. ಪ್ರತಿ ವಿದ್ಯಾರ್ಥಿಗಳ ಜೀವನ ಸುಗಮವಾಗಿ ಸಾಗಲು ಹೆತ್ತವರಂತೆ ಶಿಕ್ಷಕರು ಕೂಡ ಶ್ರಮ ವಹಿಸುವವರು. ಅಂತಹ ನಿಸ್ವಾರ್ಥ ಮನೋಭಾವನೆಯ ಎಲ್ಲ ಗುರುಬಳಗಕ್ಕೆ ಪ್ರತಿಯೊಬ್ಬರೂ ಕೂಡ ಗೌರವ ನೀಡಬೇಕು. ಉಸಿರು ಇರೋವರೆಗೂ ವಿದ್ಯಾದಾನ  ಮಾಡಿದ ಗುರುಗಳಿಗೆ ವಿಧೇಯಕರಾಗಿರಬೇಕು. ಶಿಕ್ಷಕರು ಎಲ್ಲಿಯೇ ಭೇಟಿಯಾಗಲಿ ಅವರಿಗೆ ನಯ ವಿನಯದಿಂದ ಮಾತನಾಡಿಸಿ ಅವರ ಯೋಗಕ್ಷೇಮ ವಿಚಾರಿಸಿ, ಚೆನ್ನಾಗಿದ್ದೀರಾ ಸರ್ ಎಂದರೆ ಅವರಿಗೆ ಒಂದು ದೊಡ್ಡ ಪ್ರಶಸ್ತಿ ಸಿಕ್ಕಷ್ಟೇ ಸಂತೋಷವಾಗುವುದು. ಗುರುಗಳ ಸಂತೋಷಕ್ಕೆ ನಾವೆಲ್ಲರೂ ಕಾರಣೀಭೂತರಾಗೋಣ

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

ನಮ್ಮೂರ ಶಾಲೆ ನಮ್ಮ ಹೆಮ್ಮೆ ಶಾಲೆ , ಶ್ರೀ ಮುತ್ತು ಯ.ವಡ್ಡರ

ನಮ್ಮೂರ ಶಾಲೆ ನಮ್ಮ ಹೆಮ್ಮೆ ಶಾಲೆ , ಶ್ರೀ ಮುತ್ತು ಯ.ವಡ್ಡರ

 

ಶಾಲೆಗೆ ಬಂದ ಮೊದಲ ದಿನವೇ ಕಂಡೆ ಭೂಲೋಕದ ಸ್ವರ್ಗ
ಕಪ್ಪು ಹಲಗೆಯಲ್ಲಿ ಕಂಡೆ ಭವಿಷ್ಯದ   ಜ್ಞಾನದ ಸನ್ಮಾರ್ಗ.
ಮಾತಾಡಲಿಲ್ಲ ದೇವರು ಬಾರಿಸಿದರು ಗುಡಿಯ ಗಂಟೆ
ಗುರುವೇ ದೇವರಾದರೂ ಬಾರಿಸಿದಾಗ ಶಾಲೆಯ ಗಂಟೆ.
ಗುರುವಿನ ಆಯುಧ ಬಳಪ
ಕಂಡನು ವಿದ್ಯಾರ್ಥಿಯು ಕಲಿಕೆಯಲ್ಲಿ ಹೊಳಪ
ಗುರುತಾನೆ ಮಗುವಿನ ಕೈ ಹಿಡಿದು ನಡೆಸುವ ಗಣಪ.
ಬೆಳಗಿನ ಹಾಲು ಬಿಸಿ ಬಿಸಿ, ಗೆಳೆಯರೊಂದಿಗೆ ಕುಡಿದಾಗ ಖುಷಿಯೋ ಖುಷಿ
ಬೋರ್ಡನ್ನು ಸ್ವಚ್ಛಗೊಳಿಸಿ ತರಗತಿಗೆ ಸಿದ್ಧಗೊಳಿಸಿ ಪ್ರಾರ್ಥನೆಗೆ ನಿಂತೆವು ಗುರುಗಳಿಗೆ ವಂದಿಸಿ.
ನಾಡಗೀತೆಯ ಶ್ರೀಕಾರ ರಾಷ್ಟ್ರಗೀತೆಯ ಜೈಕಾರ
ಪಂಚಾಂಗ ಪಠಣದ ಓಂಕಾರ ಪತ್ರಿಕೆಯ ವಿಚಾರ ಸುದ್ದಿ ಸಮಾಚಾರ.
ಮಾತೃಭಾಷೆಯ ಕನ್ನಡ ಸಮಾಜ
ವಿಜ್ಞಾನದ ಸಂಗಡ ವಿಜ್ಞಾನಚಿತ್ರ- ಪ್ರಯೋಗಗಳ ಬತ್ತಡ.
ಆಂಗ್ಲಭಾಷೆ ಬಿಡಿಸಲಾಗದ ಗಂಟು ದೈನಂದಿನ ಜೀವನಕ್ಕೆ ಗಣಿತದ
 ನಂಟು.
ರಾಷ್ಟ್ರಭಾಷೆ ಹಿಂದಿ ಇವೆಲ್ಲವನ್ನು ಕಲಿಸಲು ಗುರುಗಳು ಆರು ಮಂದಿ. ಅನ್ನ ಸಾಲಿನ ಬಿಸಿಯೂಟ
ಇದ್ದರೆ ಚಂದ ಗೆಳೆಯರ ಒಡನಾಟ.
ಕಾತುರದಿ ಕಾಯುವ ಕೊನೆಯ ಅವಧಿ
ಖುಷಿಯ ಕ್ಷಣ ಈ ಸಮಯದಿ. ಶಾಲೆಯ ಮುಂದೆ ಮೈದಾನ
ಗೆಳೆಯರೊಂದಿಗೆ ಆಡಿದಾ  ಮನಸ್ಸಿಗೆ ಸಮಾಧಾನ.
ಕೊನೆಯ ಗಂಟೆ  ಕೇಳಿ
ಹೊರಟೆವು ಮನೆಗೆ ಗುರುಗಳಿಗೆ ಟಾಟಾ ಹೇಳಿ.
ಶಾಲೆಯ ಪರಿಸರ ಸ್ವಚ್ಛಂದ ದಿನಾಲೂ ಶಾಲೆಗೆ ಬರಲು ಆನಂದ.

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

Terms | Privacy | 2024 🇮🇳
–>